Homeಪುಸ್ತಕ ವಿಮರ್ಶೆಪ್ರಾದೇಶಿಕ ನಿಘಂಟು ಮತ್ತು ಬಹುತ್ವ

ಪ್ರಾದೇಶಿಕ ನಿಘಂಟು ಮತ್ತು ಬಹುತ್ವ

- Advertisement -
- Advertisement -

ವ್ಯಂಗ್ಯಚಿತ್ರ ಕಲಾವಿದರಾದ ಪಂಜು ಗಂಗೊಳ್ಳಿ ಅವರ ಮುಖ್ಯ ಸಂಪಾದಕತ್ವದಲ್ಲಿ, ಸಿ.ಎ. ಪೂಜಾರಿ ಹಾಗೂ ರಾಮಚಂದ್ರ ಉಪ್ಪುಂದ ಅವರು ಸಂಪಾದಿಸಿರುವ ನಿಘಂಟು ಇದು. ಹಿರಿಯ ಪತ್ರಕರ್ತರಾದ ರಾಜಾರಾಮ ತಲ್ಲೂರರ ಕುಟುಂಬ ಟ್ರಸ್ಟಿನ ನೆರವಿನಿಂದ ಪ್ರಕಟವಾಗಿದೆ. ಅಂತಾರಾಷ್ಟ್ರೀಯ ಕಲಾವಿದರಾದ ಟಿ.ಎನ್. ತಲ್ಲೂರರು ಇದರ ಮುಖಪುಟ ರಚಿಸಿದ್ದಾರೆ. ಈ ನಿಘಂಟು ಬಹಳ ಅಚ್ಚುಕಟ್ಟಾಗಿ ಪ್ರಕಟವಾಗಿದೆ. ಸುಮಾರು ಏಳುನೂರು ಪುಟಗಳ ಈ ನಿಘಂಟು, ಮೊದಲನೇ ಭಾಗದಲ್ಲಿ ಶಬ್ದಕೋಶವನ್ನು ಎರಡನೆಯ ಭಾಗದಲ್ಲಿ ನುಡಿಗಟ್ಟು-ಗಾದೆಗಳನ್ನು ಒಳಗೊಂಡಿದೆ. ಈ ನಿಘಂಟು ಶೈಕ್ಷಣಿಕ ಸಾಂಸ್ಕೃತಿಕ ಮತ್ತು ರಾಜಕೀಯ ಮಹತ್ವವನ್ನು ಹೊಂದಿದೆ.

ಈಚೆಗೆ ವಿಧಾನಸಭೆಯ ಸ್ಪೀಕರ್ ಆದ ಯು.ಟಿ. ಖಾದರ್ ಅವರ ಕನ್ನಡದ ಬಗ್ಗೆ ಚರ್ಚೆಯಾಯಿತು. ಅದರಲ್ಲಿ ಅವರು ತಮ್ಮ ಕನ್ನಡ ಸರಿಪಡಿಸಿಕೊಳ್ಳಬೇಕೆಂದೂ, ಅವರ ಕನ್ನಡ ತುಳುಗನ್ನಡವಾಗಿದ್ದು ಅವರು ಸರಿಪಡಿಸಿಕೊಳ್ಳಬೇಕಾದ್ದು ಕನ್ನಡದ ಉಚ್ಛಾರಣೆಯನ್ನು ಮಾತ್ರ ಎಂದೂ ಎರಡು ಅಭಿಪ್ರಾಯಗಳು ವ್ಯಕ್ತವಾದವು. ಇವುಗಳ ಜತೆ ನಿರ್ದಿಷ್ಟ ಕನ್ನಡವನ್ನು ಮಾತ್ರ ಶುದ್ಧ ಮತ್ತು ಪ್ರಮಾಣವೆಂದು ಭಾವಿಸಿ, ಕರ್ನಾಟಕದ ಬೇರೆಬೇರೆ ಕನ್ನಡಗಳನ್ನು ನಿರಾಕರಿಸುವ ಅಧಿಕಾರಸ್ಥ ಧೋರಣೆಯನ್ನು ಪ್ರಶ್ನಿಸುವ ಅಭಿಪ್ರಾಯವೂ ಪ್ರಕಟವಾಯಿತು. ಕನ್ನಡದ ವಿವಿಧ ರೂಪಗಳ (ಕವಿರಾಜಮಾರ್ಗಕಾರ ಇವನ್ನು ಕನ್ನಡಂಗಳ್ ಎಂದು ಕರೆಯುತ್ತಾನೆ) ಅಸ್ಮಿತೆಯನ್ನು, ಅವುಗಳ ಸ್ವಾತಂತ್ರ್ಯ ಮತ್ತು ಹಕ್ಕುದಾರಿಕೆಯನ್ನು ಇದು ಪ್ರತಿಪಾದಿಸಿತು.

ಪಂಜು ಗಂಗೊಳ್ಳಿ

ಈ ಹಿನ್ನೆಲೆಯಲ್ಲಿ ಕನ್ನಡದ ವಿವಿಧ ರೂಪಗಳ ಸಾಂಸ್ಕೃತಿಕ ವೈವಿಧ್ಯ, ವಿಶಿಷ್ಟತೆ ಮತ್ತು ಹಕ್ಕುದಾರಿಕೆಗಳ ಭಾಗವಾಗಿ ಪ್ರಕಟವಾಗಿರುವ ವಿವಿಧ ನಿಘಂಟುಗಳನ್ನು ಗಮನಿಸಬಹುದು. ಇವುಗಳಲ್ಲಿ ಮುದೇನೂರ ಸಂಗಣ್ಣನವರ ಚಿಗಟೇರಿ ಪದಕೋಶ, ದೇಶಾಂಶ ಹುಡಗಿಯವರು ಬೀದರ ಕನ್ನಡ ನಿಘಂಟು, ಅರೆಭಾಷೆಯ ನಿಘಂಟು, ಪ್ರೊ. ಸುಧಾಕರ ಅವರ ಜನಪದ ನುಡಿಗಟ್ಟುಕೋಶಗಳು ಸೇರುತ್ತವೆ. ಕರ್ನಾಟಕದ ಜನಭಾಷೆಗಳಾದ ತುಳು ಬ್ಯಾರಿ ಕೊಡವ ಹವ್ಯಕ ಭಾಷೆಯ ಕೋಶಗಳೂ ಸೇರುತ್ತವೆ. ಇವೆಲ್ಲವೂ ಕನ್ನಡ ಭಾಷೆ ಮತ್ತು ಕರ್ನಾಟಕದ ಭಾಷೆಗಳು ಬೇರೆಬೇರೆ ಕ್ಷೇತ್ರಗಳಲ್ಲಿ ತಮ್ಮ ಶಬ್ದಸಂಪತ್ತನ್ನು, ನುಡಿಗಟ್ಟುಗಳನ್ನು ಪಡೆದುಕೊಂಡ ನಿದರ್ಶನಗಳು.

ಈ ದೃಷ್ಟಿಯಿಂದ ಕುಂದಾಪ್ರ ನಿಘಂಟಿನ ಎರಡನೇ ಭಾಗವು ಬಹಳ ಮಹತ್ವದ್ದು ಎನಿಸುತ್ತದೆ. ಇದರಲ್ಲಿ ನುಡಿಗಟ್ಟುಗಳನ್ನು ಮಾತ್ರ ಕೊಟ್ಟಿಲ್ಲ. ಅವುಗಳ ಬಳಕೆಯನ್ನೂ ಕೊಡಲಾಗಿದೆ. ಇವು ಕುಂದಾಪ್ರ ಕನ್ನಡದ ಚೆಲುವನ್ನು ಮಾತ್ರವಲ್ಲ, ಈ ಭಾಗದ ಜನರ ಜೀವನವಿವೇಕವನ್ನೂ ಲೋಕದೃಷ್ಟಿಯನ್ನೂ ಬಿತ್ತರಿಸುತ್ತವೆ. ಭಾಷೆಯು ಸಂಸ್ಕೃತಿಯ ವಾಹಕವಾಗುವುದಕ್ಕೆ ಇವು ಸಮರ್ಥ ಸಾಕ್ಷ್ಯಗಳಾಗಿವೆ. ಉದಾಹರಣೆಗೆ ಹೇಲು ಎಂಬುದರಿಂದ ಶುರುವಾಗುವ ನುಡಿಗಟ್ಟುಗಳನ್ನೇ ಗಮನಿಸಬಹುದು. ಜಿಪುಣನಿಗೆ ಇಲ್ಲಿ ‘ಹೇಲಿಗ್ ಉಪ್ಪ್ ಹಾಯ್ಕ ತಿಂಬನ್’ ಎಂದು ವರ್ಣಿಸಲಾಗಿದೆ. ಇದೊಂದು ಮಹಾ ಉತ್ಪ್ರೇಕ್ಷೆಯಿಂದ ಕೂಡಿದ ಕಲ್ಪನಾವಿಲಾಸದ ನುಡಿಗಟ್ಟು. ತರೀಕೆರೆ ಸೀಮೆಯಲ್ಲಿ ಜಿಪುಣರಿಗೆ ‘ಉಚ್ಚೆಯಲ್ಲಿ ಮೀನು ಹಿಡಿಯೋನು’ ಎಂದು ಹೇಳುವರು. ಇವು ಮುಜುಗರವೆನಿಸುವ ಶಬ್ದಗಳನ್ನು ಬಳಸಿದರೂ, ಇವುಗಳ ಉದ್ದೇಶ ಕಟುವಾಗಿ ಜನರ ಸ್ವಭಾವಗಳನ್ನು ವಿಮರ್ಶಿಸುವುದು. ಹಾಗಲ್ಲ ಬದುಕುವುದು ಎಂದು ಸೂಚಿಸುವುದು. ಎಂತಲೇ ಈ ನುಡಿಗಟ್ಟು ಭಾಷಿಕ ಸಮೃದ್ಧಿಯನ್ನು ಮಾತ್ರವಲ್ಲದೆ, ಬದುಕಿನ ಅರ್ಥವನ್ನೂ ಒಳಗೊಂಡಿವೆ. ಯಾವುದೇ ಮುಜುಗರವಿಲ್ಲದೆ ಮಡಿವಂತಿಕೆಯಿಲ್ಲದೆ ಸಂಪಾದಕರು ಕುಂದಾಪ್ರ ಕನ್ನಡದ ಜಗತ್ತನ್ನು ಹಿಡಿದುಕೊಟ್ಟಿದ್ದಾರೆ. ಇದಕ್ಕೆ ಕಾರಣ, ಇವರು ಕಿಟ್ಟೆಲರ ಮಾದರಿಯನ್ನು ಅನುಸರಿಸಿರುವುದು.

ಇದನ್ನೂ ಓದಿ: ’ದ ಇಂಡಿಯನ್ಸ್- ಹಿಸ್ಟರೀಸ್ ಆಫ್ ಸಿವಿಲೈಸೇಶನ್’ ಪುಸ್ತಕದ ಪರಿಚಯ ಪ್ರಬಂಧದ ಆಯ್ದ ಭಾಗ

ಇದೇ ಹೊತ್ತಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಹತ್ತಾರು ಸಂಪುಟಗಳಲ್ಲಿರುವ ನಿಘಂಟು ನೆನಪಿಗೆ ಬರುತ್ತದೆ. ಈ ಸಂಪುಟಗಳ ಹಿಂದಿನ ಶ್ರಮಶ್ರದ್ಧೆಗಳನ್ನು ಗೌರವಿಸುತ್ತಲೇ ಅವುಗಳಲ್ಲಿರುವ ಮಡಿವಂತಿಕೆ ಮತ್ತು ಅಖಿಲ ಕರ್ನಾಟಕತ್ವವಿಲ್ಲದ ಸಂಕುಚಿತತೆಯನ್ನು ವಿಮರ್ಶೆ ಮಾಡಬೇಕಿದೆ. ಇದನ್ನು ಸಿದ್ಧಪಡಿಸಿದವರು ಹೆಚ್ಚಾಗಿ ಶಾಸನ ಹಸ್ತಪ್ರತಿ ಗ್ರಂಥಗಳನ್ನು ಓದಿದವರು. ಸಮಾಜದ ಮೇಲ್ಜಾತಿಯ ಸ್ತರಕ್ಕೆ ಸೇರಿದವರು. ಬೆಂಗಳೂರು ಮೈಸೂರು ಭಾಗದವರು. ಹೀಗಾಗಿ ಅದು ಕನ್ನಡದ ಬೇರೆಬೇರೆ ಪ್ರದೇಶದ, ವೃತ್ತಿಯ, ಸ್ತರದ ಸಮೃದ್ಧಿಯನ್ನು ಒಳಗೊಳ್ಳಲು ಮತ್ತು ಪ್ರತಿನಿಧಿಸಲು ಸಾಧ್ಯವಾಗಲಿಲ್ಲ. ಈ ಸಂಪುಟಗಳ ತುರ್ತಾಗಿ ಪರಿಷ್ಕರಣೆ ಆಗಬೇಕಿದೆ. ಅದಕ್ಕಾಗಿ ಇಂತಹ ಪ್ರಾದೇಶಿಕವಾದ ಭಾಷಾನಿಘಂಟುಗಳಿಂದ ಪ್ರೇರಣೆ ಪಡೆಯಬೇಕಿದೆ. ಯಾಕೆಂದರೆ, ಕುಂದಾಪ್ರ ಕನ್ನಡದ ನಿಘಂಟಿಗೆ ಬೇಕಾದ ಶಬ್ದ, ನುಡಿಗಟ್ಟು ಮತ್ತು ಗಾದೆಗಳನ್ನು ಕೇವಲ ವಿದ್ವಾಂಸರಿಂದ, ಗ್ರಂಥಗಳಿಂದ ಸಂಗ್ರಹಿಸಿಲ್ಲ. ಕೋಳಿ ತಜ್ಞರ, ಯಕ್ಷಗಾನ ಕಲಾವಿದರ, ಸ್ಥಳೀಯ ದೈವಗಳ ಪಾತ್ರಿಗಳ ನೆರವನ್ನು ಕೂಡ ಪಡೆಯಲಾಗಿದೆ. ಈ ಅರ್ಥದಲ್ಲಿ ಇದು ಪ್ರದೇಶದ ವಿವಿಧ ಸಮುದಾಯಗಳನ್ನು ಪ್ರತಿನಿಧಿಸುತ್ತದೆ. ಇದೊಂದು ಡೆಮಾಕ್ರಟಿಕ್ ಕ್ರಿಯೆ.

ಕುಂದಾಪ್ರ ನಿಘಂಟನ್ನು ನೋಡುವಾಗ, ಈ ಭಾಗದ ಲೇಖಕರಲ್ಲಿ ಇಲ್ಲಿನ ಭಾಷೆಯು ಯಾವ ಬಗೆಯಲ್ಲಿ ಪ್ರಾತಿನಿಧಿತ್ವ ಪಡೆದಿದೆ ಎಂಬ ಪ್ರಶ್ನೆ ಎದುರಾಗುತ್ತದೆ. ದೇವನೂರರ ‘ಒಡಲಾಳ’ ರಾವ ಬಹಾದ್ದೂರರ ‘ಗ್ರಾಮಾಯಣ’ ಗೀತಾ ನಾಗಭೂಷಣರ ‘ಬದುಕು’, ಅಮರೇಶ ನುಗಡೋಣಿ, ರಾಜಶೇಖರ ನೀರಮಾನ್ವಿ, ಗಣೇಶ ಮೊಗಳ್ಳಿ, ಬೆಸಗರಹಳ್ಳಿ ರಾಮಣ್ಣ ಮೊದಲಾದವರ ಕಥನಸಾಹಿತ್ಯವು, ತನ್ನ ಪ್ರದೇಶದ ಭಾಷೆಯನ್ನು ಸೃಜನಶೀಲವಾಗಿ ದುಡಿಸಿಕೊಂಡ ನಿದರ್ಶನಗಳು ನಮ್ಮ ಮುಂದಿವೆ. ಇವುಗಳ ಮುಂದೆ ಕುಂದಾಪುರ ಭಾಗದಿಂದ ಬಂದ ಶಿವರಾಮ ಕಾರಂತರ ಕಾದಂಬರಿಗಳನ್ನು ನೋಡುವಾಗ, ಅವು ಕುಂದಾಪ್ರ ಕನ್ನಡವನ್ನು ದುಡಿಸಿಕೊಂಡಿಲ್ಲ ಎಂದು ಅನಿಸುತ್ತದೆ. ಕಾರಂತರ ಕಾದಂಬರಿಯ ಪಾತ್ರಗಳು ಕುಂದಾಪ್ರ ಕನ್ನಡವನ್ನು ಆಡುವುದಿಲ್ಲ ಎಂದು ಜಿ.ರಾಜಶೇಖರ್ ಕೂಡ ತಮ್ಮ ಸಂದರ್ಶನದಲ್ಲಿ ತಿಳಿಸಿದ್ದುಂಟು. ಹಾಗೆ ಕಂಡರೆ ಕಾರಂತರು ‘ಚೋಮನದುಡಿ’ ‘ಕುಡಿಯರ ಕೂಸು’ ಕಾದಂಬರಿಗಳನ್ನು ಬರೆದವರು. ವೈದೇಹಿ ಅವರ ಕತೆಗಳಲ್ಲಿ ಕುಂದಾಪ್ರ ಕನ್ನಡದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ರೂಪವಿದೆ. ನಿಜವಾದ ಕುಂದಾಪ್ರ ಕನ್ನಡದ ವಿವಿಧ ಸ್ತರಗಳನ್ನು ದುಡಿಸಿಕೊಂಡ ಕಥನಸಾಹಿತ್ಯವು ಇನ್ನೂ ಬಂದಿಲ್ಲವೇನೊ ಅನಿಸುತ್ತದೆ. ಭಾಷೆಯನ್ನು ದುಡಿಸಿಕೊಳ್ಳುವುದು ಎಂದರೆ ಒಂದು ಪ್ರದೇಶದ ಬದುಕಿನ ವಿವಿಧ ಕ್ಷೇತ್ರ ಮತ್ತು ಸ್ತರಗಳ ಅನುಭವಲೋಕ ಮತ್ತು ಪಾತ್ರಗಳನ್ನು ಕೂಡ ಒಳಗೊಳ್ಳುವುದು. ಯಾಕೆಂದರೆ ಕುಂದಾಪ್ರ ಕನ್ನಡದಲ್ಲಿ ಜಾತಿವಾರು, ಪ್ರದೇಶವಾರು ವೃತ್ತಿವಾರು ಭೇದಗಳಿವೆ. ತಲೆಮಾರು ಭೇದವೂ ಇದೆ. ಅದೊಂದು ಸಂಕೀರ್ಣವಾದ ವಿಸ್ತಾರವಾದ ಜಗತ್ತು.

ಶಿವರಾಮ ಕಾರಂತ

ಕುಂದಾಪ್ರ ನಿಘಂಟು- ಸರ್ಕಾರದಿಂದ ಧನಸಹಾಯ ಪಡೆದ ವಿಶ್ವವಿದ್ಯಾಲಯ, ಸಂಶೋಧನ ಸಂಸ್ಥೆ, ಸಾಹಿತ್ಯ ಪರಿಷತ್ತುಗಳು ಮಾಡುವ ಕೆಲಸವಿದು- ಆದರೆ ಇದನ್ನು ಕೆಲವೇ ವ್ಯಕ್ತಿಗಳು ಸೇರಿ ಮಾಡಿದ್ದಾರೆ. ಇದರ ಹಿಂದೆ ಕೆಲಸ ಮಾಡಿರುವ ಮುಖ್ಯ ಸಂಗತಿಯೆಂದರೆ, ತಮ್ಮ ಭಾಷೆ ಮತ್ತು ಸಂಸ್ಕೃತಿಗಳ ಬಗ್ಗೆ ಇರುವ ಪ್ರೀತಿ. ಈ ವಿಶಿಷ್ಟ ಭಾಷೆಯು ಆಧುನಿಕ ಹೊಸತಲೆಮಾರಿನಲ್ಲಿ ಮುಂದುವರಿಯದೆ ಕಳೆದುಹೋಗುತ್ತಿದೆ ಎಂಬ ಆತಂಕ. ತಮ್ಮ ಭಾಷೆಯು ಹೀಗಿದೆ ಎಂದು ಲೋಕಕ್ಕೆ ತೋರುವ ಆ ಮೂಲಕ ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಕಾಣಿಸುವ ಅಭಿಮಾನ. ಜನರಲ್ಲಿರುವ ಈ ಭಾಷಿಕ ವಿನ್ಯಾಸಗಳನ್ನು ಗ್ರಂಥರೂಪಕ್ಕೆ ತರಲಾಗಿದೆ. ಇದು ಗ್ರಂಥರೂಪದಲ್ಲಿ ಹಾಗೆಯೇ ಉಳಿಯುತ್ತದೆಯೊ, ಮತ್ತೆ ಜನಬಳಕೆಗೆ ಇಳಿಯುತ್ತದೆಯೊ? ಇಳಿದರೆ ಹೇಗೆ ಎಂಬ ಪ್ರಶ್ನೆಗಳನ್ನು ಈ ನಿಘಂಟು ಮುಂದಿಟ್ಟಿದೆ.

ಈಚೆಗೆ ತುಳುವಿನಲ್ಲಿ ಬ್ಯಾರಿಯಲ್ಲಿ ಬರೆಯಲು ಹಲವರು ಆರಂಭಿಸಿದ್ದಾರೆ. ಅವುಗಳ ಹಾಡುಗಳು, ನಿಘಂಟು ಪ್ರಕಟವಾಗುತ್ತಿವೆ. ಇದರಂತೆ ಕುಂದಾಪ್ರ ಕನ್ನಡದ ಹಾಡುಗಳು ಮಾತುಕತೆಗಳು ನಾಟಕಗಳು ಜನಪ್ರಿಯವಾಗುತ್ತಿವೆ. ಇವೆಲ್ಲವೂ ಒಂದು ವಿಶಿಷ್ಟ ಕಾಲಘಟ್ಟದಲ್ಲಿ ಪ್ರಕಟವಾಗುತ್ತಿವೆ. ಆ ಕಾಲಘಟ್ಟ ಯಾವುದೆಂದರೆ, ಒಂದು ಭಾಷೆ, ಒಂದು ದೇಶ ಒಂದು ಸಂಸ್ಕೃತಿಯನ್ನು ಇಡೀ ದೇಶದ ಮೇಲೆ ಹೇರಲು ಯತ್ನಿಸುತ್ತಿರುವ ರಾಜಕಾರಣವು ಬಲಗೊಂಡಿರುವ ದಿನಗಳು. ಇಂತಹ ದಿನಗಳಲ್ಲಿ ಈ ಯತ್ನಗಳು, ಈ ಏಕರೂಪಿ ರಾಜಕಾರಣದ ಹುಸಿಯನ್ನು ತಮ್ಮದೇ ರೀತಿಯಲ್ಲಿ ಮುಖಾಮುಖಿ ಮಾಡುತ್ತಿರುವ ಮತ್ತು ಪ್ರತಿರೋಧಿಸುತ್ತಿರುವ ಮತ್ತು ಪರ್ಯಾಯ ಮಂಡಿಸುತ್ತಿರುವ ಹೇಳಿಕೆಗಳಾಗಿವೆ. ಆದ್ದರಿಂದ ಇವು ಶೈಕ್ಷಣಿಕ ಸಾಂಸ್ಕೃತಿಕ ಯತ್ನಗಳಾಗಿದ್ದರೂ ಇವುಗಳಲ್ಲಿ ಒಂದು ರಾಜಕೀಯ ಹೇಳಿಕೆಯಿದೆ. ಅದು ಭಾರತದ ಬಹುತ್ವವನ್ನು ಸಮರ್ಥಿಸುವ ಹೇಳಿಕೆ.

ಕುಂದಾಪ್ರ ಕನ್ನಡವನ್ನು ಸಂಪಾದಕರು ಕನ್ನಡದ ಉಪಭಾಷೆ ಎಂದು ಕರೆದಿದ್ದಾರೆ. ಈಚೆಗೆ ಈ ಶಬ್ದವು ಭಾಷೆಗಳ ಸ್ವಾಯತ್ತತಯನ್ನು ಮನ್ನಿಸುವುದಿಲ್ಲವಾಗಿ, ಭಾಷಾವಿಜ್ಞಾನಿಗಳು ಬಳಸುವುದಿಲ್ಲ. ಯಾವುದಕ್ಕೆ ಯಾವುದು ಉಪ ಅಥವಾ ಪ್ರಧಾನ? ಉಪಸಂಸ್ಕೃತಿ ನುಡಿಗಟ್ಟು ಕೂಡ ಹೀಗೇ ಸಮಸ್ಯಾತ್ಮಕವಾದುದು. ಅಧಿಕಾರವಲಯಕ್ಕೆ ಸಿಕ್ಕ ಭಾಷೆ ಸಂಸ್ಕೃತಿಗಳು ಪ್ರಧಾನ ಎನಿಸಿಬಿಡುತ್ತವೆ. ಕರ್ನಾಟಕದ ರಾಜಧಾನಿ ಕುಂದಾಪುರವಾಗಿದ್ದರೆ, ಬೆಂಗಳೂರು ಮೈಸೂರು ಕನ್ನಡಕ್ಕೂ ಇದೇ ಅವಸ್ಥೆ ಬರುತ್ತದೆ. ಆದ್ದರಿಂದ ಕುಂದಾಪ್ರ ಕನ್ನಡದ ರೂಪವೆಂದು ಹೇಳುವುದೇ ಸರಿಯಾದುದು.

ಕುಂದಾಪ್ರ ಕನ್ನಡದ ನಿಘಂಟಿಗಿರುವ ಭಾಷಿಕ ಮಹತ್ವ, ಸಾಂಸ್ಕೃತಿಕ ಮಹತ್ವಗಳ ಜತೆ, ಒಂದು ಸೃಜನಶೀಲ ಗುಣವೂ ಇದೆ. ಅದನ್ನು ಒಂದು ಕಾದಂಬರಿಯಂತೆ ಓದಬಹುದು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...