Homeಮುಖಪುಟಪ್ರವಾಸ ಪ್ರಬಂಧ; ಹಿಮಾಲಯದ ಧರ್ಮಗಳು

ಪ್ರವಾಸ ಪ್ರಬಂಧ; ಹಿಮಾಲಯದ ಧರ್ಮಗಳು

- Advertisement -
- Advertisement -

ಹಿಮಾಲಯವನ್ನು ದೇವಭೂಮಿ ಎಂದು ಕರೆಯುವರು. ಅಲ್ಲಿ ರಾಮಕೃಷ್ಣರಂತಹ ನಾಗರಿಕ ಶಿಷ್ಟ ದೇವತೆಗಳಿಗಿಂತ ಬುಡಕಟ್ಟುತನದ ಶಿವ ಮತ್ತು ಧ್ಯಾನಮಗ್ನ ಬುದ್ಧನಂತಹವರೇ ಹೆಚ್ಚು ಜನಪ್ರಿಯರು. ನಿಗೂಢ ಆಚರಣೆಗಳ ಶೈವ ನಾಥ ಕಾಪಾಲಿಕ ಮುಂತಾದ ಶಿವಸಂಬಂಧಿ ಪಂಥಗಳೂ ಇವೆ. ಹಿಮಾಲಯವು ಮೂಲತಃ ಶಿವಸಂಸ್ಕೃತಿಯ ನಾಡು. ಪರ್ವತವನ್ನೇ ಲಿಂಗವೆಂದು ಭಾವಿಸಿ ಪೂಜಿಸುವ ಆದಿಮಸಂಸ್ಕೃತಿ ಬಹುಶಃ ಇಲ್ಲಿಂದಲೇ ಬಂದಿರಬೇಕು. ಶಿವನಿದ್ದಾನೆ ಎನ್ನಲಾಗುವ ಕೈಲಾಸವೂ ಬೆಳ್ಳಿಬೆಟ್ಟ ತಾನೇ? ವಿಶೇಷವೆಂದರೆ, ಕೆಂಡಗಣ್ಣನಾದ ಶಿವನಿರುವುದು ತಣ್ಣಗೆ ಕೊರೆವ ಕೈಲಾಸ ಪರ್ವತದಲ್ಲಿ. ಮರುಭೂಮಿಯಲ್ಲಿ ಜಲದೇವತೆಗಳು ಜನಪ್ರಿಯರಾಗಿರುವಂತೆ, ಕಾಡು ಪ್ರದೇಶದಲ್ಲಿ ಹುಲಿವಾಹನ ದೇವತೆಗಳಿರುವಂತೆ, ಚಳಿಪ್ರದೇಶಗಳಲ್ಲಿ ಶಾಖದಾಯಕ ಬೆಂಕಿ ಮುಖ್ಯವಾಗುತ್ತದೆ. ಬದರಿ ಪಕ್ಕದ, ಭಾರತದ ಕೊನೆಯ ಹಳ್ಳಿಯಾದ ಮಾನಾದ ಜನರು, ಬದರಿನಾಥನಿಗೆ ಉಣ್ಣೆಯಿಂದ ನೇದ ಉಡುಪನ್ನು ಚಳಿಗಾಲದಲ್ಲಿ ಅರ್ಪಿಸುವ ಆಚರಣೆಯನ್ನು ಗಮನಿಸಬಹುದು. ಇಲ್ಲಿ ಅವರ ಪಶುಪಾಲನೆ, ನೇಕಾರಿಕೆ ಮತ್ತು ಚಳಿಯ ಆತಂಕಗಳು ಒಟ್ಟಿಗೆ ಸೇರಿವೆ. ಭೌಗೋಳಿಕ ಸನ್ನಿವೇಶಕ್ಕೂ ಜನರ ಕಷ್ಟಗಳಿಗೂ ಅವರ ದೇವತೆಗಳ ಸ್ವರೂಪಕ್ಕೂ ಅಲ್ಲಿರುವ ಆಚರಣೆಗಳಿಗೂ ಎಂಥದೊ ಒಳಸಂಬಂಧವಿದೆ.

ಹಿಮಾಲಯಕ್ಕೆ ವಿಶಿಷ್ಟವಾದ ಶಿವನ ಗುಡಿಗಳು ಸಾಂಕ್ರಿ, ಮಲಾನಾ, ಮನಾಲಿ, ರಶೋಲ್, ಪುಲಾನ್, ಕೇದಾರ ಮುಂತಾದ ಕಡೆ ಇವೆ. ಇವುಗಳಲ್ಲೆಲ್ಲಾ ಮೋಹಕವಾದುದು ಕುಲು ಕಣಿವೆಯಲ್ಲಿರುವ ಬಿಜಲಿ ಮಹಾದೇವನದು. ಗುಡಿಗೆ ಅಥವಾ ಲಿಂಗಕ್ಕೆ ಆಗಾಗ್ಗೆ ಸಿಡಿಲು ಹೊಡೆಯುತ್ತದೆಯಾಗಿ ಈ ಹೆಸರು. ಸಿಡಿಲು ಹೊಡೆದಾಗ ಶಿವಲಿಂಗ ಛಿದ್ರವಾಗುತ್ತದೆಯಂತೆ. ಆಗ ಚೂರುಗಳಿಗೆ ಬೆಣ್ಣೆಮೆತ್ತಿ ಮತ್ತೆ ಜೋಡಿಸುವರಂತೆ. ಹಣೆಯಲ್ಲಿ ಬೆಂಕಿಯಿಟ್ಟುಕೊಂಡು ಶತ್ರುಗಳನ್ನು ಸುಡುವ ಮಹಾದೇವನು, ಇಲ್ಲಿ ಸ್ವಯಂ ಸಿಡಿಲಿನಿಂದ ಹೊಡೆಸಿಕೊಳ್ಳುತ್ತಾನೆ. ಭಕ್ತರ ಪ್ರಕಾರ, ಜನರ ಮೇಲೆ ಬೀಳುವ ಸಿಡಿಲನ್ನು ಮಹಾದೇವ ತನಗೆ ಆವಾಹಿಸಿಕೊಂಡು ಲೋಕವನ್ನು ರಕ್ಷಿಸುತ್ತಿದ್ದಾನೆ. ಜಗತ್ತಿನ ಎಲ್ಲ ಆದಿಮ ಜನಾಂಗಗಳು ದೈವಗಳನ್ನು ಕಟ್ಟಿಕೊಂಡಿದ್ದೇ ಪ್ರಾಕೃತಿಕ ವಿಕೋಪಗಳಿಂದ ರಕ್ಷಿಸುವ ಶಕ್ತಿಯಾಗಿ. ಹೀಗಾಗಿಯೇ ಕಡಲತಡಿಯ ದೈವಗಳು ಮುಳುಗುವ ಹಡಗನ್ನು ರಕ್ಷಿಸುತ್ತವೆ. ಮರುಭೂಮಿಯ ದೈವಗಳು ಮಳೆಬರಿಸುತ್ತವೆ ಇಲ್ಲವೇ ಕಾಲನ್ನು ಮೆಟ್ಟಿ ನೀರಚಿಲುಮೆ ಉಕ್ಕಿಸುತ್ತವೆ.

ಬಿಜಲಿ ಮಹಾದೇವನದು ಕಟ್ಟಿಗೆಯಿಂದ ಗೇದ ಪ್ರಾಚೀನ ಗುಡಿ. ಎಂಟುಸಾವಿರ ಅಡಿ ಎತ್ತರದ ಪರ್ವತದಲ್ಲಿದೆ. ಅದರ ತುದಿಯಿಂದ ಕುಲುಕಣಿವೆಯ ಹಕ್ಕಿನೋಟವನ್ನೂ, ಬಿಯಾಸ್-ಪಾರ್ವತಿ ಹೊಳೆಗಳು ಕೂಡುವ ದೃಶ್ಯವನ್ನೂ ಕಾಣಬಹುದು. ಬಿಜಲಿ ಮಹಾದೇವನ ಗುಡಿಯ ವಾಸ್ತುಶಿಲ್ಪವುಳ್ಳ ಅನೇಕ ಶಿವನ ಗುಡಿಗಳು ಪಾರ್ವತಿ ನದಿ ಕಣಿವೆಯ ಹಳ್ಳಿಗಳಲ್ಲಿವೆ. ಗುಡಿಯ ಮುಂದೆ ದೇವದಾರು ಮರದ ಭಾರೀ ಧ್ವಜಕಂಬ ಇದೆ. ಚಚ್ಚೌಕದ ಕಲ್ಲು ಮತ್ತು ಮರದ ದಿಮ್ಮಿಗಳಿಂದ ಮಾಡಿದ ಎತ್ತರದ ಕಟ್ಟಡ. ಕಟ್ಟಡದ ಇಪ್ಪತ್ತಡಿ ಬಳಿಕ ಒಂದು ಉಪ್ಪರಿಗೆ. ಅದರಲ್ಲಿ ದೇವರು. ಕಾಷ್ಠಭಿತ್ತಿಯ ಮೇಲೆ ಇಡಿಕಿರಿದ ಯುದ್ಧದ ಚಿತ್ರಗಳು. ಗುಡಿಯ ಮೇಲೆ ಸಿಕ್ಕಿಸಿದ ಜಿಂಕೆ ಸಾರಂಗಗಳ ಕೊಂಬುಗಳು.

ಕರ್ನಾಟಕ ಮೂಲದ ಉಂಕಿಮಠವೂ ಕೇದಾರ ಕಣಿವೆಯಲ್ಲಿದೆ. ಮಠದ ಬೋರ್ಡಿನಲ್ಲಿ ಕರಿದ ಸಂಡಿಗೆಗಳಂತೆ ಸೊಟ್ಟಬಟ್ಟನೆಯ ಕನ್ನಡ ಅಕ್ಷರಗಳನ್ನು ನೋಡಿ ನನಗೆ ಖುಷಿಯಾಯಿತು. ಅವು ಮೊದಲು ದುಂಡಗಿದ್ದು ಬಳಿಕ ಚಳಿಗೆ ಮುದುಡಿಹೋದವೇನೋ ಅನಿಸಿತು. ಕೇದಾರಪೀಠದ ಮಠವು ಕಟ್ಟಿಗೆಯಿಂದ ಮಾಡಿದ ಹಳೆಯ ಬಹುಮಹಡಿ ಕಟ್ಟಡ. ಕೇದಾರೇಶ್ವರ ಗುಡಿಯ ಉಸ್ತುವಾರಿ ಹಕ್ಕನ್ನು ಹೊಂದಿರುವ ರಾವಳ್ ಸ್ವಾಮಿ ಕನ್ನಡಿಗರು, ನಾವು ಹೋದಾಗ ಅವರು ಪೂಜೆಗೆ ಕುಳಿತಿದ್ದರು. ಮಠದ ಸೇವಕರು ಪ್ರೀತಿಯಿಂದ ಉಪಚರಿಸಿದರು. ದಕ್ಷಿಣ ಭಾರತದ ಶಿವಸಂಸ್ಕೃತಿಗೆ ಸಾವಿರಾರು ಕಿಮೀ ದೂರದ ಗಂಗೆ, ಕಾಶಿ ಮತ್ತು ಹಿಮಾಲಯಗಳು ಉದ್ದಕ್ಕೂ ಕಾಡಿವೆ. ಅಲ್ಲಿಗೆ ಹೋಗಲಾರದ ಜನ ತಮ್ಮ ಗುಡಿಗಳನ್ನೇ ದಕ್ಷಿಣದ ಕಾಶಿ ಎಂದು ಕರೆದುಕೊಂಡಿರುವರು.

ಹಿಮಾಲಯದಲ್ಲಿ ಶೈವಧರ್ಮ ಜತೆಗೆ ಶಾಕ್ತ ಪಂಥವೂ ಇದೆ. ಕಾಶ್ಮೀರದಲ್ಲಿದ್ದ ಲಲ್ಲಾದೀದಿ ದೊಡ್ಡ ಯೋಗಿನಿಯಾಗಿದ್ದವಳು. ಶಿವನ ಹೆಂಡತಿ ಪಾರ್ವತಿ ಪರ್ವತಸೀಮೆಯಲ್ಲಿ ಹುಟ್ಟಿದವಳು. ಕುಲು ಕಣಿವೆಯಲ್ಲಿ ಆಕೆಯ ಹೆಸರಲ್ಲಿ ನದಿಯೂ ಇದೆ. ಪರ್ವತಗಳು ನೀಲಕಂಠ ಇತ್ಯಾದಿ ಶಿವನ ಹೆಸರಲ್ಲಿದ್ದರೆ, ಪರ್ವತದಲ್ಲಿ ಹುಟ್ಟಿ ಇಳುಕಲಿಗೆ ಹರಿವ ಹೊಳೆಗಳು ಹೆಣ್ಣ ಹೆಸರಲ್ಲಿವೆ- ಗಂಗಾ ಭಾಗೀರಥಿ ಅಲಕನಂದಾ ಯಮುನಾ. ಪರ್ವತವು ಪುರುಷವಾಗಿ ಹೆಣ್ಣು ಹೊಳೆಯಾಗುವ ಈ ಪರಿಕಲ್ಪನೆಯೇ ಚಂದ. ಹಿಮಾಲಯವು ಶಿವ ಪಾರ್ವತಿಯರ ಆಡೊಂಬೊಲ. ಯೋಗ ಇಲ್ಲವೇ ಶಾಕ್ತ ದರ್ಶನಗಳು, ಶಿವಪಾರ್ವತಿಯರು ಕೂಡುವುದನ್ನೇ ಸಾಧಕರ ಸಾಧನೆಯ ಪರಿಭಾಷೆಯನ್ನಾಗಿ ಮಾಡಿಕೊಂಡಿವೆ. ಹಿಮಾಲಯದಲ್ಲಿ ಶಿವಪಾರ್ವತಿಯರು ಭೇಟಿಯಾಗುವ ಸನ್ನಿವೇಶಗಳನ್ನು ಕಾಳಿದಾಸ ‘ಕುಮಾರಸಂಭವ’ದಲ್ಲಿ, ಹರಿಹರ ‘ಗಿರಿಜಾಕಲ್ಯಾಣ’ದಲ್ಲಿ ತರುತ್ತಾರೆ. ಕಾಡುಗುಡ್ಡಗಳಿರುವ ಕಡೆ ಶಕ್ತಿ ತಂತ್ರ ಯೋಗಕ್ಕೆ ಸಂಬಂಧಿಸಿದ ದೇವತೆಗಳಿಗೆ ಸಹಜವಾಗಿಯೇ ಹೆಚ್ಚು ಆಸ್ಪದ. ಕಾಂಗಡಾ ಜಿಲ್ಲೆಯಲ್ಲಿರುವ ಜ್ವಾಲಾಮುಖಿ ಇಂತಹದೊಂದು ತಾಣ. ಇಲ್ಲಿ ನೆಲದೊಳಗಿಂದ ಜ್ವಲನಶೀಲ ಅನಿಲ ಹೊಮ್ಮುತ್ತದೆ. ಅದನ್ನು ಶಕ್ತಿಯ ಅವತಾರ ಎಂದು ಭಾವಿಸಲಾಗಿದೆ.

ಕೆಲವು ಹೆಣ್‌ದೇವತೆಗಳಿಗೆ ಪ್ರಾಣಿಬಲಿಯೂ ಇದೆ. ಪ್ರಾಣಿಯ ಮಾಂಸ ಕೊಬ್ಬುಗಳು ಚಳಿಯ ಹೊಡೆತದಿಂದ ಜನರ ದೇಹರಕ್ಷಣೆಗೆ ಅಗತ್ಯವಾದ ಪ್ರೋಟಿನ್‌ದಾಯಕ ಆಹಾರ. ಇಲ್ಲಿನ ಟಿಬೆಟಿಯನ್ ಬೌದ್ಧರೂ ಮಾಂಸಾಹಾರಿಗಳು. ಆದರೆ ಯಾವುದೋ ಕಾಲಘಟ್ಟದಲ್ಲಿ ಕೆಲವು ಶಾಕ್ತದೇವತೆಗಳಿಗೆ ಬಲಿ ನಿಲ್ಲಿಸಲಾಗಿದೆ. ನಂದಾದೇವಿಗೆ ಬಿಟ್ಟ ಕುರಿಯ ಮೇಲೆ ಹರಕೆಯ ವಸ್ತುಗಳನ್ನು ಹೇರಿ ಹಿಮತುಂಬಿದ ಬಯಲಿಗೆ ಒಯ್ದು ತಾಯಿ ನಮ್ಮ ಹರಕೆಯನ್ನು ಒಪ್ಪಿಸಿಕೊ ಎಂದು ಭಕ್ತರು ಅದನ್ನು ಬಿಟ್ಟುಬಿಡುವರಂತೆ.

ಹಿಮಾಲಯದ ಸ್ತ್ರೀದೈವಗಳಲ್ಲಿ ಜನಪ್ರಿಯಳಾದವಳು ರೇಣುಕೆ. ಮನಾಲಿಯ ರೇಣುಕೆಯ ಗುಡಿಯಲ್ಲಿ ಮೂರ್ತಿಯಿಲ್ಲ. ಕಲ್ಲು ಪೊಟರೆಯನ್ನು ದೇವಿ ಎನ್ನುತ್ತಾರೆ. ಚಂದ್ರಗುತ್ತಿಯಲ್ಲೂ ಹುಟ್ಟುಬಂಡೆಯ ಆರಾಧನೆ ತಾನೇ? ಪೂಜಾರಿಗೆ ‘ಯಾಕೆ ಗುಡಿಯಲ್ಲಿ ಮೂರ್ತಿಯಿಲ್ಲ?’ ಎಂದು ಕೇಳಿದೆ. ಅವನು ‘ರೇಣುಕೆಯ ತಲೆಯನ್ನು ಪರಶುರಾಮ ಕಡಿದನಲ್ಲ. ತಲೆಯಿಲ್ಲದ ದೇವಿಗೆ ಮೂರ್ತಿ ಪ್ರತಿಷ್ಠಾಪಿಸುವುದುಂಟೆ?’ ಎಂದು ಮರುಪ್ರಶ್ನೆ ಹಾಕಿದನು. ಗಮನಾರ್ಹವೆಂದರೆ ಹಿಮಾಲಯದಲ್ಲಿ ಹೆಂಡತಿಯ ಶೀಲಶಂಕೆಯಿಂದ ತಂದೆ ಕೊಟ್ಟ ಆಜ್ಞೆಯಂತೆ ಮಾತೃಹತ್ಯೆ ಮಾಡಿದ ಪರಶುರಾಮನ ಗುಡಿಗಳಿಲ್ಲ. ಬದಲಿಗೆ ತಲೆಕಡಿಸಿಕೊಂಡು ಮರಣಿಸಿದ ತಾಯಂದಿರ ಗುಡಿಗಳಿವೆ. ಹೆಣ್ಣಿನ ಪ್ರೇಮದ ಮತ್ತು ಲೈಂಗಿಕ ಹಕ್ಕನ್ನು ಮನ್ನಿಸುವ ಹಿಡಿಂಬೆಯ ಗುಡಿಗಳಿವೆ. ದ್ರೌಪದಿ ಇಲ್ಲಿನ ಸಾಂಸ್ಕೃತಿಕ ನಾಯಕಿ ಆಗಿರುವಳು. ಮನಾಲಿಯ ಹಿಡಿಂಬೆಯಂತೂ ಭೀಮನ ಪತ್ನಿಗಿಂತಲೂ ಘಟೋತ್ಕಚನ ತಾಯಿಯಾಗಿಯೇ ಖ್ಯಾತಳು. ಹಿಮಾಲಯದಲ್ಲಿ ಒಂದು ಕಾಲಕ್ಕೆ ದಟ್ಟವಾಗಿದ್ದ ತಾಯ್‌ಆಳಿಕೆ ಸಮಾಜದ ಕುರುಹುಗಳೇ ಇವು?

ಬೌದ್ಧಧರ್ಮಕ್ಕೂ ಹಿಮಾಲಯಕ್ಕೂ ಆದಿಯಿಂದಲೂ ನಂಟು. ಹಿಮಾಲಯದ ಸೆರಗಿನಲ್ಲಿರುವ ಲಡಾಕ್ ನೇಪಾಳ ಸಿಕ್ಕಿಂ ಅರುಣಾಚಲ ಭೂತಾನ ಟಿಬೆಟ್ಟುಗಳು ಬೌದ್ಧರ ಸೀಮೆಗಳು. ಬುದ್ಧ ಹುಟ್ಟಿದ ಲುಂಬಿನಿ ಕೂಡ ಹಿಮಾಲಯದ ಊರು. ಲಡಾಕಿನ ಬೌದ್ಧರಂತೂ ಜೀವನವನ್ನೆಲ್ಲ ಹಿಮಗರ್ಭದಲ್ಲೆ ಕಳೆಯುವರು. ಟಿಬೆಟ್ಟಿನ ಬೌದ್ಧರಿರುವ ಧರ್ಮಶಾಲೆಯು, ಧವಳಾಧಾರ್ ಎಂಬ ಪರ್ವತದ ಬೆನ್ನ ಮೇಲಿದೆ. ಕುಲುವಿನಿಂದ ಜಮ್ಮುವಿಗೆ ಹೋಗುವ ರಸ್ತೆಯಲ್ಲಿ ಇದು ಸಿಗುತ್ತದೆ. ಬುದ್ಧನಿಗೆ ಸಂಬಂಧಿಸಿದ ಹೆಸರುಗಳಲ್ಲಿ ಧರ್ಮವೂ ಒಂದು. ನಮ್ಮಲ್ಲಿರುವ ಧರ್ಮಾಂಬುಧಿ ಧರ್ಮಸಾಗರ, ಧರ್ಮಾಪುರ ಧರ್ಮದಬೆಟ್ಟಗಳು ಬಹುಮಟ್ಟಿಗೆ ಬುದ್ಧಸಂಬಂಧೀ ಸ್ಥಳಗಳು. ಈ ಧರ್ಮ ಹೆಸರುಳ್ಳ ಊರುಗಳು ಅಶೋಕನ ಶಾಸನಗಳಿರುವ ಬಳ್ಳಾರಿ ಚಿತ್ರದುರ್ಗ ಜಿಲ್ಲೆಯಲ್ಲೇ ಹೆಚ್ಚಿವೆ. ಧವಳಾರ ಪರ್ವತವನ್ನು ಬಸ್ಸು ಏರುತ್ತಿದ್ದಂತೆ ರಸ್ತೆ ಬದಿಯಲ್ಲಿ ಜುಳುಜುಳು ಹರಿವ ಝರಿಗಳು ರಸ್ತೆಯ ಎರಡೂ ಬದಿಗೆ ಹರಿಯುತ್ತ ಮೈಯೆಲ್ಲ ತಣ್ಣಗಾಗುತ್ತದೆ. ರಸ್ತೆ ತುಂಬ ಕೆಂಪು ದಟ್ಟಿಯುಟ್ಟು ಹಳದಿ ವಸ್ತ್ರ ಸುತ್ತಿದ ಭಿಕ್ಷುಗಳು ಹಸುರಿನ ಹಿನ್ನೆಲೆಯಲ್ಲಿ ನಡೆಯುತ್ತ, ನಾವು ಬಂದಿರುವುದು ಟಿಬೆಟ್ಟಿಗೇನು ಎಂದು ಗೊಂದಲ ಹುಟ್ಟಿಸುವರು.

ಧರ್ಮಶಾಲಾ ಟಿಬೆಟ್ಟಿನ ಮಹಾಯಾನ ತಾಂತ್ರಿಕ ಬುದ್ಧಿಸಂನ ಕೇಂದ್ರಗಳಲ್ಲಿ ಒಂದು. ಬುದ್ಧನು ಪರಿನಿರ್ವಾಣವಾಗುವ ಮುನ್ನ ಬೋಧಿಸಿದನು ಎನ್ನಲಾದ ಕಾಲಚಕ್ರ ಮಂತ್ರ ಮತ್ತು ಮಂಡಲಗಳು ಇಲ್ಲಿ ಮುಖ್ಯ. ಟಿಬೆಟಿಯನ್ ಧಮ್ಮಕ್ಕೆ ಬುದ್ಧನ ಬಳಿಕ ಪೂಜ್ಯನಾಗಿರುವ ಗುರುಪದ್ಮಸಂಭವನು ಮೂಲತಃ ಭಾರತದ ಸಿದ್ಧನು. ತಾಂತ್ರಿಕ ವಿದ್ಯೆಯನ್ನು ಎಂಟನೇ ಶತಮಾನದಲ್ಲಿ ಟಿಬೆಟ್ಟಿಗೊಯ್ದು ಹರಡಿದವನು. ಧಮ್ಮ ರಕ್ಷಣೆಗಾಗಿ ಟಿಬೆಟ್ಟಿನ ದೊರೆ ಹೋರಾಡುವಾಗ ನೆರವಾದವನು. ಗುರುಪದ್ಮಸಂಭವನ ಕಂಚಿನ ಬೃಹದಾಕಾರದ ಮೂರ್ತಿ ಧರ್ಮಶಾಲೆಯಲ್ಲಿದೆ. ಅದರ ಕೈಯಲ್ಲಿರುವ ತ್ರಿಶೂಲ, ಮಾನವ ಶಿರಗಳನ್ನು ಮಣಿಗಳಂತೆ ಪೋಣಿಸಿದ ಹಾರ, ಕೆಕ್ಕರಿಸಿದ ಕಣ್ಣು, ವೀರಾಸನಗಳು ಕಾಲಭೈರವನನ್ನು ನೆನಪಿಗೆ ತರುತ್ತವೆ. ಇಂತಹ ಉಗ್ರಮೂರ್ತಿಗಳು ಕರುಣೆಯೇ ಮೌಲ್ಯವಾದ ಧಮ್ಮದಲ್ಲಿ ಸೇರಿದ್ದಾದರೂ ಹೇಗೆ? ಈ ಪ್ರತಿಮೆಗಳಿಗೂ ಟಿಬೆಟ್ಟಿಯನರು ಕಾಲಕಾಲಕ್ಕೆ ಎದುರಿಸಿದ ವಿಪತ್ತುಗಳಿಗೂ ಸಂಬಂಧವಿರಬಹುದು. ಲಿಂಗಾಯತವು ಕರ್ನಾಟಕದಲ್ಲಿ ವೈದಿಕರ ಜೈನರ ವಿರುದ್ಧ ಸೆಣಸಾಟ ಮಾಡಿದ್ದಕ್ಕೂ ವೀರಭದ್ರನ ಆರಾಧನೆಯ ಜನಪ್ರಿಯತೆಗೂ; ಶೈವರ ವಿರುದ್ಧ ವೈಷ್ಣವರ ಮತಕದನಗಳಿಗೂ ಉಗ್ರನರಸಿಂಹನ ಮೂರ್ತಿಗೂ ಸಂಬಂಧವಿದೆಯಷ್ಟೆ. ಮತಧರ್ಮಗಳು ತಾವು ಬದುಕುವ ಕಾಲಘಟ್ಟದ ಐತಿಹಾಸಿಕ ಒತ್ತಡಗಳಿಗೆ ತಕ್ಕಂತೆ ಹಳೆಯ ಚಹರೆ ಕಳೆಯುತ್ತ ಹೊಸ ಆಚರಣೆ ಒಳಗೊಳ್ಳುತ್ತ ನಿರಂತರ ರೂಪಾಂತರ ಪಡೆಯುತ್ತವೆ.

ಟಿಬೆಟ್ಟನ್ನು ಚೀನಾ ಆಕ್ರಮಿಸಿಕೊಂಡ ಬಳಿಕ ವಲಸೆ ಬಂದ ದಲಾಯಿಲಾಮಾ ಅವರ ‘ದೇಶಭ್ರಷ್ಟ ಸರಕಾರ’ ಧರ್ಮಶಾಲೆಯಲ್ಲಿದೆ. ಇಲ್ಲಿ ಧಮ್ಮವು ಕೇವಲ ನಂಬಿಕೆ ಶ್ರದ್ಧೆಯ ಸಂಗತಿಯಾಗಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ದೇಶಭ್ರಷ್ಟ ಸಮುದಾಯವೊಂದು ಮಾಡುತ್ತಿರುವ ಹೋರಾಟದ ಉಪಕರಣವೂ ಆಗಿದೆ. ಟಿಬೆಟ್ಟಿಯನರ ಭಾಷೆ ವಿದ್ಯೆ ಸಂಸ್ಕೃತಿಗಳನ್ನು ಭವಿಷ್ಯದ ಕಾಲಗರ್ಭದಲ್ಲಿ ಎಂದೋ ಬಿಡುಗಡೆಯಾಗಲಿರುವ ದೇಶಕ್ಕೆ ಮರಳಿ ಹೋಗುವತನಕ ರಕ್ಷಿಸುವ ಕಾಯಕವನ್ನು ಇಲ್ಲಿ ಧಮ್ಮವು ಮಾಡುತ್ತಿದ. ಬುದ್ಧನ ಬೋಧೆಗಳಿಗೆ ಭಾರತೀಯ ಭಿಕ್ಕುಗಳು ಸಂಸ್ಕೃತದಲ್ಲಿ ಬರೆದ ವ್ಯಾಖ್ಯಾನಗ್ರಂಥಗಳ ಟಿಬೆಟಿಯನ್ ಅನುವಾದ ಸಂಪುಟಗಳ ಸಂಗ್ರಹ ಧರ್ಮಶಾಲಾದಲ್ಲಿದೆ. ಇವು ತತ್ವಶಾಸ್ತ್ರ, ವ್ಯಾಕರಣ, ತರ್ಕ, ಕಾವ್ಯ, ಕಲೆ, ಜ್ಯೋತಿಷಶಾಸ್ತ್ರ, ವೈದ್ಯಕೀಯ ಜ್ಞಾನವಿರುವ ಗ್ರಂಥಗಳು. ಹಿಮಾಲಯದ ಬೌದ್ಧ ವಿಹಾರಗಳಲ್ಲಿ ಮನಾಲಿಯ ವಿಹಾರವು ಬಹಳ ಚೆಲುವಾಗಿದೆ. ಆದರೆ ಯಾವುದೇ ವಿಹಾರದಲ್ಲಿ ಧ್ಯಾನಕ್ಕೆ ಬೇಕಾದ ಶಾಂತತೆಯಿಲ್ಲ. ಬುದ್ಧನಿಗೆ ಉದ್ದಂಡ ನಮಸ್ಕರಿಸುವ, ತುಪ್ಪದದೀಪ ಉರಿಸುವ, ಧಮ್ಮಮಂತ್ರದ ಸಿಲಿಂಡರುಗಳನ್ನು ತಿರುಗಿಸುವ ಭಕ್ತರು; ಹಲಗೆಗಳ ಮೇಲಿನ ಮಂತ್ರಗಳನ್ನು ಪಠಿಸುವ ಭಿಕ್ಕುಗಳು ತುಂಬಿಕೊಂಡಿರುತ್ತಾರೆ. ನಾವು ಹೋದಾಗ, ಧರ್ಮಶಾಲೆಯಲ್ಲಿ ಬುದ್ಧಪೂರ್ಣಿಮೆಗೆ ಸಿದ್ಧತೆ ಮಾಡುವ ಗಡಿಬಿಡಿಯಲ್ಲಿ ಭಿಕ್ಕುಗಳು ಇರುವೆಗಳಂತೆ ದುಡಿಯುತ್ತಿದ್ದರು. ಒಬ್ಬ ಗೃಹಸ್ಥನು ಮಂತ್ರಗಳಿರುವ ಕೈಚಕ್ರವನ್ನು ಕಡೆಗೋಲಿನಂತೆ ಹಿಡಿದ ಗರಗರ ತಿರುಗಿಸುತ್ತಿದ್ದನು. ಇದೇನೆಂದು ವಿಚಾರಿಸಿದೆ: ನನ್ನ ಪ್ರಶ್ನೆಗೆ ಉತ್ತರಿಸಲು ಇಷ್ಟವಿಲ್ಲದೆ ಆತ ಉದಾಸೀನದಿಂದ ಪತಾ ನಹಿ (ಗೊತ್ತಿಲ್ಲ) ಎಂದನು.

ಹಿಮಾಲಯದಲ್ಲಿ ಸ್ಥಳೀಯ ಜನಪದ ದೈವಗಳು ಬೇರೆಬೇರೆ ರೂಪದಲ್ಲಿ ಉಳಿದಿವೆ. ಪ್ರತಿದಿನ ಬಲಿಬೇಡುವ ಪೋಕು ಮಹಾರಾಜನೂ ಇವರಲ್ಲಿ ಒಬ್ಬ. ಈತ ದೇವರೂ ಅಲ್ಲದ ಭೂತವೂ ಅಲ್ಲದ ನಡುವಣ ಅವಸ್ಥೆಯ ದೈವ. ಇದಕ್ಕೆ ಭಕ್ತರು ಬೆನ್ನುಕೊಟ್ಟು ಹಿಂಬದಿಯಿಂದ ಆರತಿ ಎತ್ತುವರು. ಭೂಕುಸಿತವಾದಾಗ ಪೋಕು ನದಿಗೆ ಮಕಾಡೆ ಬಿದ್ದಿದ್ದನಂತೆ. ಎಂತಲೇ ಹಿಂಬದಿಯಿಂದ ಪೂಜೆ. ಪೋಕು, ಶತ್ರುಗಳಿಗೆ ಮಾಟ ಮಾಡಿಸಿ ತೊಂದರೆ ಕೊಡುವುದಕ್ಕೆ ಖ್ಯಾತವಾಗಿರುವ ದೈವ. ಜಗಳ ಮಾಡಿಕೊಂಡ ಗುಂಪುಗಳು ಪರಸ್ಪರ ರಾಜಿಯಾಗುವ ಕಾಲಕ್ಕೆ ಪೋಕುವಿಗೆ ಬಲಿಕೊಡುವ ಸಂಪ್ರದಾಯವಿದೆ.

ಇದನ್ನೂ ಓದಿ: ಅರಿವಿನ ಉರಿಯಲ್ಲೇ ಮುಳುಗೇಳುವ ಕವಿತೆಗಳು; ರಾಮಪ್ಪ ಕೋಟಿಹಾಳರ ’ಜಿರಾಫೆ ಕತ್ತಿನ ಅವ್ವ’ ಕವನ ಸಂಕಲನದ ವಿಮರ್ಶೆ

ಹಿಮಾಲಯದಲ್ಲಿ ದೈವಗಳಿಗೆ ಸಂಬಂಧಿಸಿದ ವಿಪುಲವಾದ ಕಥೆಗಳಿವೆ. ಪುಲಾನಿನಲ್ಲಿ ಕೇಳಿದ ರಾಕ್ಷಸನ ಕತೆ ಇದರಲ್ಲಿ ಒಂದು. ಒಂದೂರಲ್ಲಿ ಒಬ್ಬ ಠಾಕೂರನಿದ್ದನಂತೆ. ಅವನಿಗೆ ಪ್ರತಿದಿನ ಒಂದೊಂದು ಮನೆಯಿಂದ ಹಾಲು ಬರಬೇಕು. ಒಮ್ಮೆ ಒಬ್ಬ ಹೆಂಗಸು ಹಾಲು ಒಯ್ಯುವಾಗ ನೆಲದ ಮೇಲೆ ಚೆಲ್ಲಿಬಿಟ್ಟಳು. ಭಯದಿಂದ ತನ್ನ ಎದೆ ಹಾಲನ್ನೆ ಹಿಂಡಿ ಠಾಕೂರನಿಗೆ ಇತ್ತಳು. ಅದನ್ನು ಕುಡಿದ ಠಾಕೂರನಿಗೆ ಇದು ವಿಶೇಷ ರುಚಿ ಅನಿಸಿತು. ಇದ್ಯಾವ ಹಸುವಿನ ಹಾಲು ಎಂದು ಕೇಳಲು ಆಕೆ ನಿಜ ಹೇಳಿಬಿಟ್ಟಳು. ಅಂದಿನಿಂದ ಆತ ತಾಯಂದಿರ ಹಾಲೇ ತನಗೆ ಬೇಕು ಎಂದು ಅಪ್ಪಣೆ ಮಾಡಿದ. ಇದಕ್ಕಾಗಿ ಹಸುಗೂಸುಗಳನ್ನು ಕೊಂದು ತಾಯಂದಿರ ಹಾಲು ಕುಡಿಯುತ್ತಿದ್ದ. ಅವನಿಗೆ ಊರವರೆಲ್ಲ ಸೇರಿ ಬುದ್ಧಿಕಲಿಸುವರು. ಇಂತಹುದೇ ಕತೆಯು ಕೊಡಗಿನ ಒಬ್ಬ ದೊರೆಯ ಬಗ್ಗೆಯೂ ಇದೆ.

ಭಾರತದ ಕೊನೆಯ ಹಳ್ಳಿ ಮಾನಾದ ಟಿಬೆಟ್ಟಿಯನ್ನರು ನಂಬುವ ಘಂಟಾಕರ್ಣನ ಆರಾಧನೆ ವಿಶೇಷವಾಗಿದೆ. ಈತ ಇಲ್ಲಿನ ಕ್ಷೇತ್ರಪಾಲಕ ದೈವ. ಬೌದ್ಧವು ಹಿಮಾಲಯವನ್ನು ತಲುಪಿದಾಗ ಅಲ್ಲಿನ ಸ್ಥಳೀಯ ಬುಡಕಟ್ಟು ಧರ್ಮಗಳೊಂದಿಗೆ ಸಂಘರ್ಷ ಮಾಡಿರಬಹುದು. ಇದರ ಪರಿಣಾಮವಾಗಿ ಸ್ಥಳೀಯ ದೈವಗಳು ಅನಿಷ್ಟವೆಂದೂ ಕೇಡಿನ ಸಂಕೇತಗಳೆಂದೂ ರಾಕ್ಷಸೀಕರಣಕ್ಕೆ ಒಳಗಾಗಿರಬಹುದು. ಕೆಲವು ದೈವಗಳು ತಮ್ಮ ಮೂಲ ಸ್ವರೂಪದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೊರಗಿನ ಧರ್ಮದ ಭಾಗವಾಗಿರಬಹುದು. ಕ್ರೈಸ್ತವು ಯೂರೋಪಿಗೆ ಮುಟ್ಟಿದಾಗಲೂ ಇಸ್ಲಾಂ ಅರಬಸ್ಥಾನ ಬಿಟ್ಟು ಬೇರೆ ನಾಡುಗಳಿಗೆ ಹೋದಾಗಲೂ ಸ್ಥಳೀಯ ಧರ್ಮಗಳು ಬೇರೆಬೇರೆಯ ರೂಪಾಂತರ ಪಡೆದವು. ಮಾತ್ರವಲ್ಲ ಹೊರಗಿನಿಂದ ಬಂದ ಧರ್ಮವನ್ನೂ ಬದಲಾಯಿಸಿದವು. ಭೂತಾನದಲ್ಲಿ ಕುನ್ಲೆ ಎಂಬ ಸಂತಾನ ನೀಡುವುದಕ್ಕೆ ಖ್ಯಾತನಾದ ಸಂತ ಮತ್ತು ಆತನ ಶಿಶ್ನಪೂಜೆಯು ಬೌದ್ಧದೊಳಗೆ ಅಳವಡಿಕೆಗೊಂಡಿರುವುದು ಇದಕ್ಕೆ ಸಾಕ್ಷಿ.

ಹಿಮಾಲಯದ ಶ್ರೇಣಿಯಲ್ಲಿ ಮಹಾಭಾರತಕ್ಕೆ ಸಂಬಂಧಿಸಿದ ಸ್ಥಳಗಳಿವೆ- ಭೀಮಪೂಲ್, ಸ್ವರ್ಗಾರೋಹಿಣಿ ಪರ್ವತ- ಹೀಗೆ. ಮಹಾಭಾರತದ ಪಾತ್ರದ ಹೆಸರುಳ್ಳ ಜನರನ್ನೂ ನೋಡಬಹುದು. ಕುಲು ಚಾರಣದಲ್ಲಿದ್ದ ನಮ್ಮ ಹಾದಿತೋರುಗನ ಹೆಸರು ದುರ್ಯೋಧನ್. ರಕ್ಕಸಿಯೆನಿಸಿಕೊಂಡ ಹಿಡಿಂಬೆ, ದುಷ್ಟನೆನಿಸಿಕೊಂಡ ದುರ್ಯೊಧನರು ಹಿಮಾಲಯದಲ್ಲಿ ಜನಪ್ರಿಯರಾಗಿರುವುದು ವಿಶೇಷ. ಮಾನಾದಲ್ಲಿ ನಿಂತು ನೋಡಿದರೆ ಸ್ವರ್ಗಾರೋಹಿಣಿ ಪರ್ವತಕ್ಕೆ ಹೋಗುವ ಹಾದಿ ಕಾಣುತ್ತದೆ. ಮೊದಲಿಗೆ ಸಿಗುವುದು ದ್ರೌಪದಿ ಸಾಯುವ ಜಾಗ. ಅದೊಂದು ಬೃಹದಾಕಾರವಾದ ಪರ್ವತಗಳ ನಡುವಣ ಕಣಿವೆ. ಅದರಲ್ಲಿ ಎಂಟು ಕಿಮೀ ನಡೆದು ನಾನು ಜಲಪಾತವೊಂದನ್ನು ನೋಡಲು ಹೋಗಿದ್ದೆ. ಹೊಳೆಯನ್ನು ದಾಟಲು ಸೋದರರಿಗೆ ಕಷ್ಟವಾಗಲು ಭೀಮನು ದೊಡ್ಡದೊಂದು ಬಂಡೆಯನ್ನಿಟ್ಟು ಭೀಮಪೂಲ್ ಮಾಡಿದನಂತೆ. ಸ್ವರ್ಗಾರೋಹಿಣಿ ಕಣಿವೆಯಲ್ಲಿ ಆರುತಿಂಗಳ ಕಾಲ ಹಿಮ ತುಂಬಿಕೊಳ್ಳುತ್ತದೆ. ಅದರೊಳಗೆ ಮಾನಾದ ಗಂಡಸರು ಕುರಿ ದನ ಅಟ್ಟಿಕೊಂಡು ಹೋಗುವರು. ಹಿಮಾಚಲದಲ್ಲಿ ಅಣ್ಣತಮ್ಮಂದಿರು ಅಥವಾ ಹಲವು ಗಂಡಸರು ಒಬ್ಬ ಸ್ತ್ರೀಯನ್ನು ಮದುವೆಯಾಗುವ ಪದ್ಧತಿಯಿನ್ನೂ ಉಳಿದಿದೆ. ಇಂತಹ ಒಂದು ಕುಟುಂಬದ ಸಂದರ್ಶನವನ್ನು ನಾನು ಟಿವಿಯಲ್ಲಿ ನೋಡಿದೆ. ಅದರಲ್ಲಿ ಒಬ್ಬ ಮಹಿಳೆ ಅಡುಗೆ ಮಾಡುತ್ತಿರುವಾಗ, ಅವಳ ಇಬ್ಬರೂ ಗಂಡಂದಿರು ಒಲೆಯ ಎರಡೂ ಬದಿ ಬಿಸಿಬಿಸಿ ರೊಟ್ಟಿ ತಿನ್ನುತ್ತಿದ್ದ ದೃಶ್ಯವಿತ್ತು.

ಹಿಮಾಲಯದಲ್ಲಿ ಇಸ್ಲಾಂ ಧರ್ಮವಿಲ್ಲ. ಬ್ರಿಟಿಷರಿದ್ದ ಕಾರಣದಿಂದ ಕ್ರೈಸ್ತಧರ್ಮ ಕೊಂಚಮಟ್ಟಿಗೆ ಇದೆ. ಧರ್ಮಶಾಲೆಯಲ್ಲಿ ದೇವದಾರು ಕಾಡಿನ ಒಳಗೆ ನೂರೈವತ್ತು ವರುಷದ ಹಿಂದಿನ ಕಪ್ಪುಕಲ್ಲಿನ ವಾಸ್ತುವಿನ ಸುಂದರ ಚರ್ಚೊಂದು ನಿಂತಿದೆ. ಇದನ್ನು ವೈಸರಾಯ್ ಆಗಿದ್ದ ತನ್ನ ಗಂಡನ ಮರಣದ ನೆನಪಿನಲ್ಲಿ ಅವನ ಹೆಂಡತಿ ಕಟ್ಟಿಸಿದಳು. ಶಿಮ್ಲಾ ಬ್ರಿಟಿಷರ ರಾಜಧಾನಿಯಾಗಿದ್ದರಿಂದ ಅಲ್ಲಿ ಚರ್ಚುಗಳಿವೆ. ಹಿಮಾಲಯದಲ್ಲಿರುವ ಇನ್ನೊಂದು ಧರ್ಮವೆಂದರೆ ಸಿಖ್. ಹೂವಿನ ಕಣಿವೆಯ ಬದಿ ಹೇಮಕುಂಡಸಾಹೇಬ ಗುರುದ್ವಾರವಿದೆ. ಅದನ್ನು ಜುಲೈನಲ್ಲಿ ಓಪನ್ ಮಾಡಿದಾಗ, ಪಂಜಾಬು ದೆಹಲಿಗಳಿಂದ ಸಾವಿರಾರು ಸಿಖ್ಖರು ಪ್ರವಾಹೋಪಾದಿಯಲ್ಲಿ ಹೋಗುವರು. ನಾವು ಹೇಮಕುಂಡ ಸಾಹೇಬ್ ಗುರುದ್ವಾರಕ್ಕೆ ಹೋಗುವಾಗ, ಬರಿಗಾಲಲ್ಲಿ ಸಿಖ್ ಮಹಿಳೆಯರು ಪುರುಷರು ಹರಕೆಹೊತ್ತು ಹಿಮದ ಹಾದಿಯಲ್ಲಿ ನಡೆಯುತ್ತಿದ್ದುದನ್ನು ಕಂಡೆವು. ಈ ನೆರವಿಯಲ್ಲಿ ಸಿಖ್ ಧರ್ಮ ಸ್ವೀಕರಿಸಿದ ಇಬ್ಬರು ರಶ್ಯನ್ ತರುಣ-ತರುಣಿಯರೂ ಇದ್ದರು.

ಹಿಮಾಲಯದ ಧರ್ಮಲೋಕದಲ್ಲಿ ಕೆಲವು ಪಲ್ಲಟಗಳು ನಡೆಯುತ್ತಿವೆ. ಸ್ಥಳೀಯ ಬುಡಕಟ್ಟು ಧರ್ಮಗಳು ಪ್ರಭಾವಶಾಲಿಯಾದ ಹಿಂದುತ್ವಕ್ಕೆ, ಪ್ರಭಾವಕ್ಕೆ ಒಳಗಾಗುತ್ತಿವೆ. ಕುರಿಗಾಹಿಗಳಾದ ಮಾನಾದ ಜನರು ತಮ್ಮ ದೈವ ಘಂಟಾಕರ್ಣನಿಗೆ ಬಲಿಯನ್ನು ನಿಲ್ಲಿಸಿದ್ದಾರೆ. ವೈಷ್ಣವ ಸಂಸ್ಕೃತಿಯು ಶಿವಸಂಸ್ಕೃತಿಯ ಒಳಗೆ ನುಗ್ಗುತ್ತಿದೆ. ನಾವು ಹೋದಾಗ ಕೇದಾರನಾಥದಲ್ಲಿ ರಾಮಕಥೆಯ ಪ್ರವಚನ ನಡೆಯುತ್ತಿತ್ತು. ಹಿಮಾಲಯದ ಮಡಿಲಿನಲ್ಲಿನ ಊರುಗಳಾದ ಹೃಷಿಕೇಶ ಹರಿದ್ವಾರಗಳ ತುಂಬ ಆಶ್ರಮಗಳು. ಅಲ್ಲಿ ಸೇರುವ ಭಕ್ತರು. ಪ್ರವಚನ ನೀಡುವ ಸಾಧುಗಳು. ಶಿವನ ಪರ್ವತಲೋಕವನ್ನು ವೈಷ್ಣವ ದೆವತೆಗಳಾದ ರಾಮ ಮತ್ತು ಕೃಷ್ಣರು ಮೆಲ್ಲಗೆ ಆವರಿಸುತ್ತಿದ್ದಾರೆ. ಕೇದಾರದ ಹಾದಿಯಲ್ಲಿ ಬಂಡೆಗಳ ಮೇಲೆ ಶ್ರೀರಾಂ ಎಂದು ಬರೆಯಲಾಗಿದೆ. ಈ ಶೈವ-ವೈಷ್ಣವ, ಬೌದ್ಧ-ಸಿಖ್ ಸಹಬಾಳುವೆ ಮತ್ತು ಸಂಘರ್ಷಗಳು ಹಿಮಾಲಯದ ಪರಿಸರವನ್ನು ಮುಂದೆ ಹೇಗೆ ಬದಲಿಸುತ್ತವೆಯೊ ತಿಳಿಯದು.

ಆದರೆ ಹಿಮಾಲಯದಲ್ಲಿರುವ ಈ ಮಾನವಕೇಂದ್ರಿತ ಧರ್ಮಗಳ ಜತೆಯಲ್ಲೇ ಇನ್ನೊಂದು ಧರ್ಮದ ಲೋಕವಿದೆ. ಅದು ನಿಸರ್ಗಧರ್ಮದ ಲೋಕ. ಪ್ರಕೃತಿಯನ್ನು ಪ್ರೀತಿಸುವ, ಅದನ್ನು ಅದರೊಳಗೆ ಸುತ್ತಾಡಿ ಸೌಂದರ್ಯ ಸವಿಯುವ ಮೂಲಕವೇ ಆರಾಧಿಸುವ ಜನ ದೇಶದ ಮೂಲೆಮೂಲೆಯಿಂದ ಇಲ್ಲಿಗೆ ಬರುವರು. ಬೆಂದ ಮನಸ್ಸಿಗೆ ನೆಮ್ಮದಿ ಪಡೆಯುವರು. ತಮ್ಮ ಚಾರಣದಿಂದ ಹೊಸಧರ್ಮವೊಂದನ್ನು ಹುಟ್ಟಿಸುವರು. ಹೂವಿನಕಣಿವೆಗೆ ಹೋದಾಗ ನನಗೆ ಕುವೆಂಪು ಅವರ ‘ಹೂವೇದೇವರು’ ಕವನ ನೆನಪಾಯಿತು. ಅಲ್ಲಿ ಗುಡಿಯಿಲ್ಲ. ಪೂಜಾರಿಯಿಲ್ಲ. ಅರ್ಚನೆಯಿಲ್ಲ. ಇದಕ್ಕೆ ತಕ್ಕಂತೆ ಶಿವನ ಆವಾಸವೇ ಘನೀಭೂತವಾದಂತೆ ಪರ್ವತಗಳಿವೆ. ಅವನ ತೊಡೆಯಲ್ಲಿ ಕುಳಿತ ಪಾರ್ವತಿಯ ಮಡಿಲಿನಂತೆ ಹೂವಿನ ಕಣಿವೆಗಳಿವೆ. ದೇವರು ರುಜುಮಾಡಿದಂತೆ, ಶಿವನ ಜಟೆಯಿಂದ ಚಿಮ್ಮಿದಂತೆ ಹರಿವ ಹೊಳೆಗಳಿವೆ. ಅನೇಕ ಯೋಗಿಗಳು ಆಧ್ಯಾತ್ಮಿಕ ಸಾಧಕರು ಈ ನಿಸರ್ಗ ನಿರ್ಮಿತ ಧರ್ಮವನ್ನೇ ಹಿಮಾಲಯದ ಹಿರಿಮೆ ಎಂದು ಭಾವಿಸಿದರು. ಇದಕ್ಕೆ ಅವರ ಆತ್ಮಕಥೆಗಳೇ ಸಾಕ್ಷಿ.

ಪ್ರೊ. ರಹಮತ್ ತರೀಕೆರೆ

ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು- ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ದೂರು ದಾಖಲು

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು,  ರಾಜಭವನದ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ 2019ರಿಂದ ರಾಜಭವನದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕೆಲಸ...