Homeಕರ್ನಾಟಕಪ್ರಜ್ವಲ್‌ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

ಪ್ರಜ್ವಲ್‌ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

- Advertisement -
- Advertisement -

ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ಹಾಸನದ ಪೆನ್‌ಡ್ರೈವ್‌ ವೈರಲ್‌, ಸಂಸದ ಪ್ರಜ್ವಲ್‌ ರೇವಣ್ಣನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಇದೀಗ ಪ್ರಜ್ವಲ್‌ ರೇವಣ್ಣ ವಿರುದ್ಧ ಎಸ್ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ.

ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ‌ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹಾಗೂ ಅವರ ಮಗ ಸಂಸದ ಪ್ರಜ್ವಲ್ ರೇವಣ್ಣ ಆರೋಪಿಗಳಾಗಿದ್ದಾರೆ. ಪ್ರಕರಣ ದಾಖಲಾಗುವ‌ ಮುನ್ನವೇ ಪ್ರಜ್ವಲ್‌ ದೇಶದಿಂದ‌ ಪರಾರಿಯಾಗಿದ್ದರು.

ಎಸ್‌ಐಟಿ ಅಧಿಕಾರಿಗಳು ಎಚ್.ಡಿ. ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣಗೆ ತನಿಖೆಗೆ ಹಾಜರಾಗುವಂತೆ ನೊಟೀಸ್‌ ಜಾರಿ ಮಾಡಿತ್ತು. 24 ಗಂಟೆಗಳ ಒಳಗೆ ಎಸ್‌ಐಟಿ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ‌ ಇಲ್ಲದ ಕಾರಣ, ಕಾಲಾವಕಾಶ ಕೋರಿ ನಾನು ನನ್ನ ವಕೀಲರ ಮೂಲಕ ಮನವಿ ಸಲ್ಲಿಸಿದ್ದೇನೆ ಎಂದು ಪ್ರಜ್ವಲ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಿನ್ನೆ ಪೋಸ್ಟ್ ಮಾಡಿದ್ದರು.

ಪ್ರಜ್ವಲ್ ವಿದೇಶದಲ್ಲಿರುವ ಬಗ್ಗೆ ಎಸ್ಐಟಿ ಅಧಿಕಾರಿಗಳು ಈಗ ಮಾಹಿತಿ ಕಲೆ‌ ಹಾಕಿದ್ದಾರೆ. ಪ್ರಜ್ವಲ್ ಪತ್ತೆಗಾಗಿ‌ ಲುಕ್ ಔಟ್ ನೋಟಿಸ್ ಜಾರಿ‌ ಮಾಡಿ, ವಿಮಾನ ನಿಲ್ದಾಣ ಅಧಿಕಾರಿಗಳು ಹಾಗೂ ಅಂತರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ರವಾನಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಲುಕ್‌ಔಟ್ ನೋಟಿಸ್ ಬಳಿಕವೂ ಪ್ರಜ್ವಲ್‌ ಪತ್ತೆಯಾಗದಿದ್ದರೆ, ಆತನ ಪತ್ತೆಗೆ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ ಎನ್ನಲಾದ ಸಾವಿರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದು ಪಕ್ಷ ಮತ್ತು ನಾಯಕತ್ವಕ್ಕೆ ಭಾರೀ ಮುಜುಗರ ಉಂಟು ಮಾಡಿತ್ತು. ಇದರ ಬೆನ್ನಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ಜೆಡಿಎಸ್‌ ಪಕ್ಷದಿಂದ ಅಮಾನತು ಮಾಡಲಾಗಿದೆ.

ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಸಂತ್ರಸ್ತೆಯೊಬ್ಬರು ಹೊಳೆನರಸೀಪುರ ಪೊಲೀಸ್‌ ಠಾಣೆಗೆ ಎಚ್‌ಡಿ ರೇವಣ್ಣ-ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಅಪ್ಪ-ಮಗನ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 354 (ಎ), 354 (ಡಿ) ಮತ್ತು 506, 509 ಅಡಿಯಲ್ಲಿ ದೂರು ದಾಖಲಿಸಲಾಗಿತ್ತು.

ಇದನ್ನು ಓದಿ: ಗಾಝಾ ಹತ್ಯಾಕಾಂಡ: ಇಸ್ರೇಲ್‌ ಜೊತೆ ರಾಜತಾಂತ್ರಿಕ ಸಂಬಂಧಗಳನ್ನು ಮುರಿದ ಕೊಲಂಬಿಯಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read