Homeಕರ್ನಾಟಕದೇವಿದಯಾಳ್ ಅವರ ’ಡಾ. ಬಾಬಾಸಾಹೇಬ್ ಅಂಬೇಡ್ಕರ್ ದಿನಚರಿ’ ಪುಸ್ತಕದ ಕನ್ನಡಾನುವಾದದಿಂದ ಆಯ್ದ ಅಧ್ಯಾಯ

ದೇವಿದಯಾಳ್ ಅವರ ’ಡಾ. ಬಾಬಾಸಾಹೇಬ್ ಅಂಬೇಡ್ಕರ್ ದಿನಚರಿ’ ಪುಸ್ತಕದ ಕನ್ನಡಾನುವಾದದಿಂದ ಆಯ್ದ ಅಧ್ಯಾಯ

- Advertisement -
- Advertisement -

ಭಾನುವಾರ ಇಲ್ಲವೆ ರಜಾದಿನಗಳಲ್ಲಿ ಬಾಬಾಸಾಹೇಬರ ಜೀವನದ ಕಾರ್ಯಕ್ರಮಗಳು ಬೇರೆ ರೀತಿಯ ಸ್ವರೂಪ ಪಡೆದುಕೊಳ್ಳುತ್ತಿದ್ದವು. ಬೆಳಿಗ್ಗೆ ಎಂಟು ಗಂಟೆಯೊಳಗೆ ನಿತ್ಯಕರ್ಮಗಳನ್ನು ಮುಗಿಸಿ, ತಿಂಡಿ ತಿಂದು, ಬರೆಯುವ ಟೇಬಲ್ಲಿನ ಮೇಲೆ ಕೂತು ಬರೆಯುತ್ತಾ ಆ ದಿನವೆಲ್ಲಾ ಕೆಲಸ ಮಾಡುತ್ತಿದ್ದರು.

ಸೆಪ್ಟೆಂಬರ್ 10, 1944 ಭಾನುವಾರ ಬಾಬಾಸಾಹೇಬರು 8 ಗಂಟೆಗೆ ತಿಂಡಿ ತಿಂದು ಬರೆಯುವ ಟೇಬಲ್ ಮೇಲೆ ಕೂತುಕೊಳ್ಳುತ್ತಾರೆ. ತಾವು ಬರೆಯುತ್ತಿದ್ದ ಪುಸ್ತಕದ ’ಕಾಂಗ್ರೆಸ್ ಯಾರಿಗೆ ಪ್ರಾತಿನಿಧ್ಯ ಕೊಡುತ್ತದೆ? ನಿಜಕ್ಕೂ ಅದು ಅಸ್ಪೃಶ್ಯರಿಗೆ ಪ್ರಾತಿನಿಧ್ಯ ಕೊಡುತ್ತದೆಯೇ?’ ಎಂಬ ಅಧ್ಯಾಯವನ್ನು ಪೂರ್ಣಗೊಳಿಸಬೇಕೆಂದುಕೊಂಡರು. ಆ ಪುಸ್ತಕ ’ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗೆ ಏನು ಮಾಡಿದ್ದಾರೆ’ ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಸ್ವಲ್ಪ ಜಾಗ ಮಾಡಿಕೊಂಡು ನಾನು ಬಾಬಾಸಾಹೇಬರ ಪಕ್ಕದಲ್ಲಿ ಕೂತುಕೊಂಡೆ. ಯಾಕೆಂದರೆ, ಅವರಿಗೆ ಏನಾದರೂ ಬೇಕಾದರೆ ತಕ್ಷಣ ತಂದುಕೊಡಲು ಸಂಸಿದ್ಧನಾಗಿರಬೇಕಿತ್ತು. ಬಾಬಾಸಾಹೇಬರು ಮೂರು ಗಂಟೆಯವರೆಗೂ ಬರೆಹದಲ್ಲೇ ಸಂಪೂರ್ಣ ತಲ್ಲೀನರಾಗಿಬಿಟ್ಟರು. ಮಧ್ಯದಲ್ಲಿ ಒಮ್ಮೆ ಕುಡಿಯಲು ನೀರು, ಬರೆಯಲು ಅಗತ್ಯವಾದ ಗೆರೆಯಿರದ ಬಿಳಿ ಹಾಳೆ, ಮತ್ತೆರಡು ಪುಸ್ತಕಗಳನ್ನು ಮಾತ್ರ ತರಿಸಿಕೊಂಡರು. ಮಧ್ಯದಲ್ಲಿ ಬರೆದ ಪುಟಗಳನ್ನು ಟೈಪಿಸಲು ಕೊಡುವುದಕ್ಕಾಗಿ ಚಗನ್‌ಲಾಲ್ ಹತ್ತಿರ ಹೋಗಿ ಬಂದರು.

ಈ ಮಧ್ಯದಲ್ಲಿ ಬಾಬಾಸಾಹೇಬರನ್ನು ನೋಡುವುದಕ್ಕೆ ಅಗತ್ಯ ಕೆಲಸದ ಮೇಲೆ ಕೆಲವರು ಬಂದಿದ್ದರು. ಈ ಹೊತ್ತು ಭಾನುವಾರ, ರಜಾದಿನ ಬಾಬಾಸಾಹೇಬರನ್ನು ಭೇಟಿಯಾಗಲು ಇದೇ ಸರಿಯಾದ ದಿನವೆಂದು ಅವರೆಲ್ಲಾ ಭಾವಿಸಿದಂತಿತ್ತು. ಅವರಿಗೆ ತಿಳಿಯದ ಸಂಗತಿಯೇನೆಂದರೆ, ಬಾಬಾಸಾಹೇಬರು ಈ ದಿನವೇ ಹೆಚ್ಚು ಕೆಲಸ ಮಾಡುತ್ತಾರೆಂಬುದು. ಕೆಲವರು ತಿರುಗಿ ಹೊರಟುಹೋದರೆ, ಸಾಯಂಕಾಲವಾದರೂ ಪರವಾಗಿಲ್ಲ. ಆಮೇಲಾದರೂ ಸರಿಯೇ ಭೇಟಿಯಾಗಲೇಬೇಕೆಂದು ಕೆಲವರು ಕಾದುಕೂತರು. ಬಾಬಾಸಾಹೇಬರು ತಮ್ಮ ಕೆಲಸದಲ್ಲಿ ತಲ್ಲೀನರಾಗಿರುವುದನ್ನು ನೋಡಿ ಮಾತಾಡಿಸುವ ಸಾಹಸವನ್ನು ಮಾತ್ರ ಯಾರೂ ಮಾಡಲು ಸಿದ್ಧರಿರಲಿಲ್ಲ. ಬಾಬಾಸಾಹೇಬರು ಕೆಲಸದಲ್ಲಿ ಎಷ್ಟು ಮಗ್ನರಾಗಿದ್ದರೆಂದರೆ, ಆ ಹೊತ್ತು ಮಿ. ಸೈನೈಡ್ ಅವರು ಎರಡು ಗಂಟೆಗೆ ಬಾಬಾಸಾಹೇಬರನ್ನು ಭೋಜನಕ್ಕೆ ಆಹ್ವಾನಿಸಿದ್ದರು. ಬಾಬಾಸಾಹೇಬರು ಈ ವಿಷಯವನ್ನೇ ಮರೆತುಬಿಟ್ಟಿದ್ದರು. ಸಮಯ ಆಗಲೇ ಎರಡು ಗಂಟೆಯನ್ನು ದಾಟಿ ಹೋಗಿತ್ತು. ಸ್ವಲ್ಪ ಸಮಯದ ನಂತರ ನಿಧಾನವಾಗಿ ’ಮಿ. ಸೈನೈಡ್ ನಿಮ್ಮನ್ನು ಈ ಹೊತ್ತು ಎರಡು ಗಂಟೆಗೆ ಊಟಕ್ಕೆ ಕರೆದಿದ್ದರು. ಈಗಾಗಲೇ ಸಮಯ ಮೂರುಗಂಟೆ ಆಗಿದೆ. ಅವರು ನಮಗಾಗಿ ಎದುರು ನೋಡುತ್ತಿರಬಹುದು’ ಎಂದೆ. ’ಅರೆ ನಾನು ಸಂಪೂರ್ಣ ಮರೆತೇಹೋದೆ. ಏನು? ಆಗ್ಲೆ ಮೂರುಗಂಟೆ ಆಗೋಯ್ತಾ?’ ಅನ್ನುತ್ತಾ ಎದ್ದು ಬಾಬಾಸಾಹೇಬರು ನೇರವಾಗಿ ಅಡುಗೆಮನೆಗೆ ಹೋದರು. ಶಾರೀರಿಕ ಶಕ್ತಿಗಳಷ್ಟನ್ನೂ ಕೇಂದ್ರಿಕರಿಸಿ ಕೆಲಸ ಮಾಡುವವರಿಗೆ ಸಮಯದ ಪರಿವೆಲ್ಲಿ? ಮತ್ತೊಂದು ದಿನ, ಕೆಲಸದಿಂದ ತಲೆ ಮೇಲೆತ್ತಿ ’ದಯಾಳ್ ಸಮಯ ಎಷ್ಟಾಗಿದೆ?’ ಎಂದು ಕೇಳಿ, ’ಆರೆ ಈ ದಿನ ತುಂಬಾ ಕಷ್ಟದಿಂದ ಹತ್ತುಗಂಟೆಗಳು ಕಳೆದವು’ ಎಂದಿದ್ದರು.

ಊಟ ಮಾಡುವಾಗ ಬಾಬಾಸಾಹೇಬರ ಮಾತುಗಳನ್ನು ಕೇಳುತ್ತಾ ನಾವು ಆನಂದ ಹೊಂದುತ್ತಿರುತ್ತೇವೆ. ಇದ್ದಕ್ಕಿದ್ದಂತೆ ಬಾಬಾಸಾಹೇಬರು ಹೀಗೆಂದರು: ’ಯಾವುದೇ ಕೆಲಸವನ್ನು ಮಾಡಬೇಕೆಂದರೆ ಮನುಷ್ಯನಿಗೆ ಸಂಕಲ್ಪ, ಸಂಯಮ ಮತ್ತೆ ಏಕಾಗ್ರತೆ ಅತ್ಯಗತ್ಯ. ಸಂಕಲ್ಪ, ಸಂಯಮ ಇಲ್ಲದವರು ನನಗೆ ಅಸಹ್ಯ ಹುಟ್ಟಿಸುತ್ತಾರೆ. ಅಂಥವರು ಒಂದೇ ಒಂದು ಗಂಟೆ ಬಲವಾಗಿ ಕೂತು ಕೆಲಸ ಮಾಡದ ಅಸಮರ್ಥರು. ಒಂದೇಕ್ಷಣದಲ್ಲಿ ಸಿಗರೇಟು ಸೇದಲು ಹೋಗುತ್ತಾರೆ. ಮತ್ತೊಂದೇ ಕ್ಷಣದಲ್ಲಿ ಟೀ ಕುಡಿಯಲೆಂದೋ, ಇಲ್ಲ ಉಚ್ಚೆ ಉಯ್ಯಲೆಂದೋ ಎದ್ದು ಹೋಗುತ್ತಾರೆ. ಇಂಥವರೆಂದರೆ ನನಗೆ ತೀರಲಾರದ ಅಸಹ್ಯ. ಈ ಹೊತ್ತು ಖಂಡಿತ ಒಂಭತ್ತು ಗಂಟೆ ನಿರಂತರ ಕುರ್ಚಿಯಲ್ಲಿ ಕೂತು, ಈಗ ಊಟಮಾಡಲು ನೀವಾಗಿ ನೆನಪಿಸಿ ಎಬ್ಬಿಸಿದ ಕಾರಣ ಎದ್ದುಬಂದೆ. ಎಷ್ಟೋ ಸಲ ಕುಳಿತವನು ಎದ್ದೇಳದಂತೆ ಒಂಭತ್ತು ಗಂಟೆಗೂ ಜಾಸ್ತಿ ಕೆಲಸ ಮಾಡಿದ್ದೇನೆ’.

’ಸಂಕಲ್ಪದಲ್ಲಿ ಅನಂತವಾದ ಅಮಿತ ಶಕ್ತಿ ಅಡಗಿಕೊಂಡಿರುತ್ತದೆ. ಯಾವ ವ್ಯಕ್ತಿ ದೊಡ್ಡ ಮಹತ್ವದ ಕೆಲಸದಲ್ಲಿ ಸಂಕಲ್ಪ ಮಾಡುತ್ತಾನೋ ಆತ ಆ ಕರ್ತವ್ಯದ ಸಾಧನೆಗಾಗಿ ಎಷ್ಟೇ ಎಡರು-ತೊಡರುಗಳು ಎದುರಾದರೂ ಅಡ್ಡಿ ಆತಂಕಗಳನ್ನೆಲ್ಲಾ ದಾಟಬಲ್ಲ. ಉನ್ನತವಾದ ಆ ಸಂಕಲ್ಪವೇ ಆ ವ್ಯಕ್ತಿಗೆ ಶಕ್ತಿಯನ್ನು ತುಂಬಿ ಕೊಡುತ್ತದೆ ಎಂದು ಬಾಬಾಸಾಹೇಬರು ತಮ್ಮ ಜೀವನ ಗುರಿಯನ್ನು ತಿಳಿಸಿದರು. ಕೆಲಸ ಮಾಡುವುದೊಂದೆ ಮನುಷ್ಯನ ಆದರ್ಶವಾಗಬೇಕು. ಕೆಲಸ ಮಾಡಲು ಸಿದ್ಧವಿರುವ ಮನುಷ್ಯರು ಸಿಕ್ಕಸಿಕ್ಕಲ್ಲೆಲ್ಲಾ ಸಿಗಬೇಕೆಂದು ನಾನು ಪ್ರಾರ್ಥಿಸಿಕೊಳ್ಳುತ್ತೇನೆ. ಒಂದು ಜಾಗ, ಸ್ಥಾನದಲ್ಲಿ ಒಂದು ಕ್ಷಣವಾದರೂ ನಿಲ್ಲದಿರುವ ಮನುಷ್ಯರೆಂದರೆ, ನನಗೆ ಒಂಚೂರೂ ಇಷ್ಟವಾಗುವುದಿಲ್ಲ. ಒಂದು ಕೆಲಸಕ್ಕೆಂದೇ ಒಬ್ಬ ವ್ಯಕ್ತಿಯನ್ನು ನೇಮಿಸಿದಾಗ ಆತ ತನ್ನೆಲ್ಲಾ ಸರ್ವಶಕ್ತಿಯನ್ನೂ, ಕರ್ತೃತ್ವಶಕ್ತಿಯನ್ನು ಕೇಂದ್ರೀಕರಿಸಿ ಆ ಕೆಲಸವನ್ನು ಮಾಡುವಂತಿರಬೇಕು. ಕಷ್ಟತರವಾದ ಮತ್ತು ದೀರ್ಘಕಾಲ ನಿಲ್ಲುವ ಕೆಲಸದ ಮೇಲೆ ಇರುವ ನಂಬಿಕೆಯನ್ನು ನಾನ್ಯಾವತ್ತೂ ಕಳೆದುಕೊಳ್ಳುವುದಿಲ್ಲ’ ಎಂದು ಸಮಯ ಸಿಕ್ಕಾಗೆಲ್ಲಾ ಹೇಳುತ್ತಿದ್ದರು.

ಖಚಿತವಾಗಿ ಮಾತ್ರವಲ್ಲ ದೃಢವಾಗಿ ನಾನು ಹೇಳಬಲ್ಲೆ, ’ನನ್ನ ಮನಸು, ಶರೀರ ಎರಡರ ಮೇಲೆಯೂ ನನಗೆ ಸಂಪೂರ್ಣ ನಿಯಂತ್ರಣವಿದೆ. ನಾನು ಯಾವಾಗ ಏನಾದರೂ ದೃಢಸಂಕಲ್ಪದಿಂದ ಕೆಲಸ ಮಾಡಬೇಕೆಂದು ಕುರ್ಚಿಯಲ್ಲಿ ಬಂದು ಕೂತರೆ, ಆಗ ಇಡೀ ಪ್ರಪಂಚವನ್ನೇ ಸಂಪೂರ್ಣ ಮರೆತು ಹೋಗುತ್ತೇನೆ. ಕೆಲಸಕ್ಕೆ ಸಂಬಂಧಿಸಿದ ದೊಡ್ಡ ವಿಷಯವೇನೆಂದರೆ, ಮನಸನ್ನು ಸಂಪೂರ್ಣ ಕೇಂದ್ರೀಕರಿಸಿ ಇರಬಲ್ಲ ಸ್ಥಿತಿ. ಅದಾಗದಿದ್ದರೆ ನೀನು ಯಾವ ಕೆಲಸವನ್ನು ಕುರಿತು ಆಲೋಚಿಸಲೂ ಸಾಧ್ಯವಿಲ್ಲ. ಯಾವಾಗ ಏನಾದರೂ ಒಂದು ಸಮಸ್ಯೆಯನ್ನು ಕುರಿತು ಆಲೋಚಿಸುತ್ತೇನೋ ಆಗ ನನ್ನಿಡೀ ಶರೀರದ ಅಂಗಗಳೆಲ್ಲಾ ಏಕಾಗ್ರತೆಯಲ್ಲಿ ಬಂದಿಯಾಗಿರುತ್ತವೆ. ಊಟ ಮಾಡುವಾಗ, ಮಾತಾಡುವಾಗ ಮತ್ತೆ ಎಲ್ಲಿಗಾದರೂ ಹೋದಾಗ ನನ್ನ ಮನಸು ಅದೇ ಕೆಲಸದಲ್ಲಿ ಪರಿಪೂರ್ಣವಾಗಿ ಲೀನವಾಗಿರುತ್ತದೆ. ಆ ಸಮಯದಲ್ಲಿ ಬೇರೆ ಕೆಲಸಗಳೆಲ್ಲಾ ಯಃಕಶ್ಚಿತ್ ಆಗಿಯೂ, ದೃಷ್ಟಿಗೆ ದೂರವಾಗಿಯೂ ಉಳಿದಿರುತ್ತವೆ. ಈ ಕಾರಣಕ್ಕೆ ಎಂಥಾ ಸಮಸ್ಯೆಗಾದರೂ ಸರಿಯಾದ ಉಪಾಯವನ್ನು ಸಕಾಲದಲ್ಲಿಯೇ ಕಂಡುಹಿಡಿದುಕೊಳ್ಳಬಲ್ಲೆ’ ಎಂದು ಬಾಬಾಸಾಹೇಬರು ನಮ್ಮತ್ರ ಹೇಳಿದ್ದರು.

ಬಾಬಾಸಾಹೇಬರು ಏನಾದರೂ ಆಲೋಚಿಸುತ್ತಿರುವಾಗ ತುಂಬಾ ನಿಶಬ್ದದಲ್ಲಿ, ನಿರ್ವಾತದಲ್ಲಿರಲು ಬಯಸುತ್ತಿದ್ದರು. ಅವರ ಮುಖಭಾವದಲ್ಲಿ ಈ ವಿಷಯ ಸ್ಪಷ್ಟವಾಗಿ ಕಾಣುತ್ತಿತ್ತು. ಆ ಸಮಯದಲ್ಲಿ ಅದು ಯಾರೇ ಆದರೂ ಅವರನ್ನು ಮಾತಾಡಿಸುವ ಸಾಹಸ ಮಾಡಲಾರರು. ತೀರಾ ಅಗತ್ಯವೆಂದು ಬೇರೆ ದಾರಿಯಿಲ್ಲದೆ ಮಾತಾಡಿಸಿದರೆ ’ಏನು?’ ಎಂದು ಕೇಳಿ ಮರುಕ್ಷಣವೇ ಮೌನ ವಹಿಸುತ್ತಿದ್ದರು. ರಾಜನೀತಿಶಾಸ್ತ್ರಜ್ಞ ಥಾಮಸ್ ಕಾರ್ಲಯಿಲ್ ಸಹ ಹೀಗೆ ಇರುತ್ತಿದ್ದರಂತೆ. ಒಮ್ಮೆ ಬಾಬಾಸಾಹೇಬರು ಕಾರ್ಲಯಿಲ್‌ರವರನ್ನು ಕುರಿತು ಹೇಳುತ್ತಾ ’ಕಾರ್ಲಯಿಲ್ ಮನುಷ್ಯರಿಂದ ದೂರ ಇರುತ್ತಿದ್ದರು. ಯಾಕೆಂದರೆ ತನ್ನ ಕೆಲಸದಿಂದಾಗಿ ಬೇರೆಯರಿಗೆ ನೋವಾಗುವುದು ಅವರಿಗೆ ಇಷ್ಟವಿರಲಿಲ್ಲ. ಆತ ತನ್ನ ಗ್ರಂಥಾಲಯವನ್ನು, ಓದುವ ಕೋಣೆಯನ್ನು ಕೆಳಗಿನ ಅಂತಸ್ತಿಗೆ ವರ್ಗಾಯಿಸಿಕೊಂಡರು. ಇಂಗ್ಲೆಂಡಿನಲ್ಲಿ ಅಡುಗೆಮನೆ ಯಾವಾಗಲೂ ಕೆಳಗೆ ಇರುತ್ತದೆ. ವಾಸ ಮಾಡುವ ಕೋಣೆ ಮೇಲಿನ ಅಂತಸ್ತಿನಲ್ಲಿರುತ್ತದೆ. ಅದಕ್ಕಾಗಿಯೇ ಆತನ ಆಲೋಚನೆ ಆ ರೀತಿಯಿದೆ. ಸಾಧಾರಣ ವ್ಯಕ್ತಿ ಸಮಯದ ಬೆಲೆ ತಿಳಿದುಕೊಳ್ಳದೆ ಸುಖಾಸುಮ್ಮನೆ ವ್ಯರ್ಥವಾಗಿ ಕಾಲ ಕಳೆಯುತ್ತಾರೆ’ ಎಂದರು.

ಮನಸಿಗೆ ಉಲ್ಲಾಸ ಬೇಕೆಂದು ಬಾಬಾಸಾಹೇಬರು ಯಾವತ್ತೂ ಎಲ್ಲಿಗೂ ಹೋದವರಲ್ಲ. ಅವರಿಗೆ ’ಜಿಂಖಾನ’ ಕ್ಲಬ್ಬಿನಲ್ಲಿ ಸದಸ್ಯತ್ವವೂ ಇತ್ತು. ಆದಾಗ್ಯೂ ಯಾವಾಗಲೋ ಒಮ್ಮೆ ಹೋದದ್ದು ಬಿಟ್ಟರೆ ಪ್ರತೀ ದಿನವೂ ಹೋಗುತ್ತಿರಲಿಲ್ಲ. ಮಂತ್ರಿಗಳ ಅತೀವ ಬಲವಂತದಿಂದ ಆಗಾಗ ಅಲ್ಲಿಯೇ ಊಟಮಾಡಿ ಬರುತ್ತಿದ್ದರು. ಜಂಜಾಟದ ಜೀವನದಿಂದ ಸ್ವಲ್ಪವಾದರೂ ವಿಶ್ರಾಂತಿ ಬೇಕೆಂದು ಶಿಕಾರಿಗೋ, ಸಿನಿಮಾಕ್ಕೋ ಹೋಗುತ್ತಿರಲಿಲ್ಲ. ಸುಮಾರು ನಾಲ್ಕು ಸಂವತ್ಸರದಲ್ಲಿ ತುಂಬಾ ಕಷ್ಟದಿಂದ ಎರಡು ಸಲ ಹೊರಸಂಚಾರ, ಆರು ಸಲ ಸಿನಿಮಾಕ್ಕೆ ಹೋಗಿರಬಹುದು. ಹೋದರೂ ಅಲ್ಲಿಯೂ ಏನಾದರೊಂದು ಆಲೋಚಿಸುತ್ತಿದ್ದರು. ಮನೆಗೆ ಬಂದತಕ್ಷಣ ಬರೆಯುವ ಕುರ್ಚಿಯ ಬಳಿ ಹೋಗಿ ಬರೆಯುತ್ತಾ ಕೂರುತ್ತಿದ್ದರು. ಅವರನ್ನು ಕಾಣಲೆಂದು ಹೊರಗಿನಿಂದ ಬಂದವರೂ ಎದುರುನೋಡುತ್ತಾ ಹಾಗೇ ಕೂತೇ ಇರುತ್ತಿದ್ದರು. ಒಮ್ಮೆ ‘Tale of two Cities’ ಎಂಬ ಸಿನಿಮಾ ನೋಡಲು ಹೋದರು. ಸಿನಿಮಾ ಮುಗಿಯುವ ಮುಂಚೆಯೇ ಎದ್ದು ಬಂದು ಬರೆಯಲು ಶುರುಮಾಡಿದರು. ನಿಜವಾಗಲೂ ಮಹಾಪುರುಷರಾದವರು ಪ್ರತೀ ನಿಮಿಷಗಳನ್ನೂ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಷ್ಟು ಧನ್ಯತಾಭಾವ ಹೊಂದುತ್ತಾರೆಂಬುದು ಈ ಮಹನೀಯರ ಮೂಲಕ ನನಗೆ ತಿಳಿಯಿತು.

ಹೊರಗಡೆ ಊಟ ಮಾಡುವುದನ್ನು ಬಾಬಾಸಾಹೇಬರು ಎಂದೂ ಇಷ್ಟಪಡುತ್ತಿರಲಿಲ್ಲ. ಯಾರಾದರೂ ಕರೆದರೆ ವಿನಮ್ರತೆಯಿಂದ ಹೀಗೆನ್ನುತ್ತಿದ್ದರು: ’ಸಹೋದರರೆ, ಒಂದುವೇಳೆ ನೀವು ನನಗೆ ಏನಾದರೂ ತಿನಿಸಬೇಕೆಂದುಕೊಂಡರೆ ದಯವಿಟ್ಟು ಇಲ್ಲೇ ತಿನ್ನಿಸಿರಿ. ನಾನು ಹೊರಗಡೆ ಬರಲಾರೆ. ನನಗಿರುವ ಸಮಯದಲ್ಲಿ ಬರಲು ಹೋಗಲೆಂದೇ ಒಂದು-ಎರಡುಗಂಟೆ ಮುಗಿದು ಹೋಗಿಬಿಡುತ್ತದೆ. ನನ್ನ ಸಮಯವೆಲ್ಲಾ ವ್ಯರ್ಥವಾಗಿ ಹೋಗುತ್ತದೆ’ ಎನ್ನುತ್ತಿದ್ದರು. ಅದರಿಂದಾಗಿ ಅವರ ಸ್ನೇಹಿತರು ಏನಾದರೂ ಕಾರ್ಯಕ್ರಮವಿದ್ದರೆ ಬಾಬಾಸಾಹೇಬರ ಮನೆಯಲ್ಲೇ ಏರ್ಪಾಡು ಮಾಡುತ್ತಿದ್ದರು.

’ಸಂಕಟಪಡುವ ವಿಷಯ’ ಎಂದು ಬಾಬಾಸಾಹೇಬರು ತಮ್ಮ ಸಂಭಾಷಣೆಯಲ್ಲಿ ಹೀಗೆಂದರು. ’ಈ ಜನರಿಗೆ ಸಮಯವನ್ನು ಸದ್ವಿನಿಯೋಗ ಮಾಡಿಕೊಳ್ಳುವುದೇ ಗೊತ್ತಿಲ್ಲ. ಕೆಲಸವಿಲ್ಲದ ಸಮಯವನ್ನು ಕೆಲಸಕ್ಕೆ ಬಾರದ ಸಮಯ ಅಂದುಕೊಳ್ತಾರೆ. ಅವರವರ ಗುಂಪು, ಕ್ಲಬ್ಬುಗಳಲ್ಲಿ ಕೆಲಸಕ್ಕೆ ಬಾರದ ವಿಷಯಗಳ ಮೇಲೆ ಹರಟೆ ಹೊಡೆಯುತ್ತಾ, ಸಿನಿಮಾಗಳನ್ನು ನೋಡುತ್ತಾ, ವೃಥಾ ಹೊರಗಡೆ ಅಡ್ಡಾಡುತ್ತಾ ಸಮಯವನ್ನು ದುರುಪಯೋಗ ಮಾಡುತ್ತಾರೆ. ಖಾಲಿ ಸಮಯವನ್ನು ನಿಜವಾಗಿಯೂ ಕೆಲವು ಉಪಯೋಗಕರವಾದ ಕೆಲಸಗಳಿಗೋಸ್ಕರ ಉಪಯೋಗಿಸಬೇಕು. ಸತ್ಪುರುಷರು ತಮ್ಮ ಸಮಯವನ್ನೆಲ್ಲಾ ಉನ್ನತವಾದ ಕೆಲಸಗಳಿಗೇ ಉಪಯೋಗಿಸುತ್ತಾರೆ. ಸೋಮಾರಿಗಳು ಆ ಅವಕಾಶವನ್ನು ಕಳೆದುಕೊಳ್ಳುತ್ತಾರೆ’ ಎನ್ನುತ್ತಿದ್ದರು.

ಇದನ್ನೂ ಓದಿ: ’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

ಬಾಬಾಸಾಹೇಬರು ಒಮ್ಮೆ ವೆಸ್ಟರ್ನ್ ಕೋರ್ಟ್ ಹಾಸ್ಟೆಲ್‌ನಲ್ಲಿ ಉಳಿಯುವ ಸಂದರ್ಭ ಬಂದಿತ್ತು. ಬಾಬಾಸಾಹೇಬರು ಬರೆದ ಅದ್ವಿತೀಯ ಕೃತಿ ’ಪಾಕಿಸ್ತಾನ ಮತ್ತು ಭಾರತದ ವಿಭಜನೆ’ಯನ್ನು ಓದಿದ ಮಿತ್ರರೊಬ್ಬರು ’ಡಾಕ್ಟರ್ ಇಂಥ ಮಹೋನ್ನತವಾದ ಕೃತಿಯನ್ನು ಬರೆಯಲಿಕ್ಕೆ ನಿಮಗೆ ಸಮಯ ಎಲ್ಲಿ ಸಿಕ್ತು’ ಎಂದರು. ಅದಕ್ಕೆ ಬಾಬಾಸಾಹೇಬರು ’ಮಿಸ್ಟರ್ ಥಾಮಸ್ ಅವರೆ, ನಾನು ಮಾಡಿದ್ದು ತುಂಬಾ ಸಣ್ಣದು. ಏನಾದರೂ ಕೆಲಸ ಮಾಡಬೇಕೆಂದುಕೊಂಡಾಗ ಆ ಕೆಲಸದ ಯೋಜನೆ ರೂಪಿಸಿಕೊಳ್ತೇನೆ. ನನ್ನ ಬದುಕು ತುಂಬಾ ಸಣ್ಣದು. ಆದರೆ ಮಾಡಬೇಕಾದ ಕೆಲಸ ತುಂಬಾ ಇವೆ’ ಎಂದು ಹೇಳುತ್ತಾ, ’ನನ್ನ ಈ ಬದುಕಿನಲ್ಲಿ ಕನಿಷ್ಟ ನನ್ನಂತ ಜನರು ಡಾಕ್ಟರ್ ಅಂಬೇಡ್ಕರವರ ಕೃತಿಗಳು ಅಪೂರ್ವವಾದವು, ಅದ್ವಿತೀಯವಾದವು, ಆದರೂ ಆತನಲ್ಲಿರುವ ಪ್ರತಿಭೆಯನ್ನು ಗುರುತಿಸಲು ಕಾಲಮಾನಗಳ ಮಿತಿಯಿಲ್ಲ; ಎಂದೆಲ್ಲ ಹೊಗಳುತ್ತಾರೆ. ಆದರೆ ಅವರಿಗೆ ತಿಳಿಯದ ವಿಷಯವೇನೆಂದರೆ, ಸಮಯ ಸಿಕ್ಕಾಗೆಲ್ಲಾ ಮಾತ್ರವಲ್ಲದೆ ವಿಶ್ರಾಂತಿಯ ಕ್ಷಣಗಳಲ್ಲೂ ಬಾಬಾಸಾಹೇಬರು ಎಷ್ಟೋ ಕಷ್ಟಪಡದೆ ಇಷ್ಟು ಮಹತ್ವದ ಕೃತಿಗಳನ್ನು ಬರೆಯಲು ಸಾಧ್ಯವಾಗಲಿಲ್ಲವೆಂಬುದು’. ಬಾಬಾಸಾಹೇಬರು ಬದುಕು ಸವೆಸಿದ ರೀತಿ ಅದ್ವಿತೀಯ ಮತ್ತು ಅಪೂರ್ವ. ಬಾಬಾಸಾಹೇಬರಂಥಾ ತಪೋಮಯವಾದ ಬದುಕನ್ನು ಯಾರೂ ಜೀವಿಸಲಾರರು. ಬಾಳ ಮಂದಿ ಖಾಲಿ ಸಮಯವನ್ನು ವಿಲಾಸಕ್ಕೆ ವಿಹಾರಕ್ಕೆ ಬಳಸಿಕೊಳ್ಳುತ್ತಿದ್ದರು. ಆದರೆ ಬಾಬಾಸಾಹೇಬರು ’ಪರಿಶ್ರಮ ಎಂಬ ಕುಲುಮೆಯಲ್ಲಿ ತನ್ನ ಬದುಕನ್ನು ಕಾಯಿಸಿ ಕಬ್ಬಿಣವನ್ನು ಬಂಗಾರವನ್ನಾಗಿ ಪರಿವರ್ತಿಸಿ ಪರಶುವೇದಿ’ಯನ್ನು ತಯಾರಿಸಿದರು. ಅವರ ರಚನೆಗಳಲ್ಲಿನ ಅದ್ವಿತೀಯತೆ ಮತ್ತು ಅಪೂರ್ವತೆ ಆ ತಪಸ್ಸಿನ ಫಲದಿಂದ ದೊರಕಿದವುಗಳೇ. ಬಾಬಾಸಾಹೇಬರ ಬದುಕನ್ನು ತೀರಾ ಹತ್ತಿರದಿಂದ ಕಂಡಮೇಲೆ ನನಗೆ ಹೀಗನ್ನಿಸಿತು: ’ಪ್ರಪಂಚಕ್ಕೆಲ್ಲಾ ರಾತ್ರಿ ಆವರಿಸಿದಾಗಲೇ ಮಹಾಪುರುಷರಿಗೆ ದಿನ ಮೊದಲಾಗುವುದೇನೋ’. ಹತ್ತುಗಂಟೆಗಳ ಕಾಲ ಕದಲದಂತೆ ಏಕಾಗ್ರತೆಯಿಂದ ಕೆಲಸ ಮಾಡಿದ ನಂತರ ಸುಸ್ತಾದಂತೆ ಕಾಣುತ್ತಿದ್ದ ಬಾಬಾಸಾಹೇಬರು ಹೀಗೆನ್ನುತ್ತಿದ್ದರು. ’ದೇವಿದಯಾಳ್ ದೇಹ ಆಯಾಸಗೊಂಡಿದೆ. ಮಲಗ್ತೇನೆ ಸ್ವಲ್ಪ ಹೊತ್ತಿನ ನಂತರ ಎಬ್ಬಿಸು’ ಎಂದು, ಆದರೆ ಅವರು ಮಲಗುತ್ತಲೇ ಇರಲಿಲ್ಲ. ಏನಾದರೊಂದು ಓದುತ್ತಿದ್ದರು. ಬಾಬಾಸಾಹೇಬ್ ಬರೆದ ಕೃತಿಗಳು ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ದಾರ್ಶನಿಕ ಕ್ಷೇತ್ರಗಳಲ್ಲಿ ಇಂದಿನ ಜನಾಂಗಕ್ಕೆ ಮಾತ್ರವಲ್ಲ ಮುಂಬರುತ್ತಲೇ ಇರುವ ಜನಸಮುದಾಯಗಳಿಗೂ ಕೂಡ ಮಾರ್ಗದರ್ಶಕಗಳು.

ಅಪೂರ್ವವಾದ ಜ್ಞಾನವೆಂಬುದು ಅನಂತವಾದ ಪರಿಶ್ರಮದಿಂದ ಮಾತ್ರ ಬರುತ್ತದೆಯೆಂಬ ವಿಷಯ ಬಾಬಾಸಾಹೇಬರಿಂದಲೇ ನನಗೆ ಅರ್ಥವಾದದ್ದು. ಯಾರೂ ಯಾವುದಾದರೊಂದು ವಿಶಿಷ್ಟವಾದ ಲಕ್ಷ್ಯಕ್ಕೋಸ್ಕರ ನಿರಂತರ ಶ್ರಮಿಸುವರೋ ಅವರಿಗೆ ಅಪೂರ್ವವಾದ ಜ್ಞಾನ ಸಿದ್ಧಿಸುತ್ತದೆ. ಊಟದ ಟೇಬಲಿನ ಮೇಲೆ ಕುಳಿತು ’ಬಾಬಾಸಾಹೇಬ್ ನಿಮ್ಮಲ್ಲಿ ಅಪೂರ್ವವಾದ ಜ್ಞಾನಶಕ್ತಿಯಿದೆ. ಅದು ಬೇರೆ ಯಾರಿಗೂ ಇಲ್ಲ’ ಎಂದೆ. ಅದಕ್ಕೆ ಬಾಬಾಸಾಹೇಬರು ’ನೀನು ಏನಾದರೂ ಹೇಳು, ನನ್ನ ಅಪೂರ್ವವಾದ ಜ್ಞಾನ ಯಾವುದೋ ಒಂದು ವಸ್ತುವಲ್ಲ. ಅದು ಶ್ರಮ ಮತ್ತು ಕೆಲಸದಿಂದಲ್ಲದೆ ಬೇರಾವ ವಿಧದಿಂದಲೂ ಬಂದಿದ್ದಲ್ಲ. ಯಾರು ಏಕಾಗ್ರತೆಯಿಂದ ಕೆಲಸ ಆರಂಭಿಸುತ್ತಾರೋ ಅದರಲ್ಲೇ ದೃಢಸಂಕಲ್ಪ ಹೊಂದಿರುತ್ತಾರೋ, ಅವರಿಗೆ ಸ್ವತಃ ಅಪೂರ್ವವಾದ ಜ್ಞಾನ ಲಭಿಸುತ್ತದೆ’ ಎಂದು ವಿವರಿಸಿದರು.

’ಅಪೂರ್ವವಾದ ಜ್ಞಾನ ಹೊಂದಿದವನೆಂದು ಜನ ನನ್ನನ್ನು ಗೌರವಿಸುತ್ತಾರೆ. ನನ್ನ ಈ ಜ್ಞಾನವೆಲ್ಲಾ ನಿನ್ನ ಕೈಯಿಂದ ತೆಗೆದುಕೊಳ್ಳುವ ವಿಷಯಗಳಿಂದಲೇ ಬರುತ್ತದೆ. ನೀನು ಕೊಡುವ ಪೇಪರ್ ಕಟ್ಟಿಂಗ್‌ಗಳಲ್ಲಿನ ವಾರ್ತೆಗಳನ್ನು ಏಕಾಗ್ರತೆಯಿಂದ ಅಣು-ಅಣುವು ಅಧ್ಯಯನ ಮಾಡುವೆ. ಹಾಗೆ ಪರಿಶೀಲಿಸುವ ಕಾಲದ ಅಗತ್ಯ ನನಗಿದೆ. ಪ್ರತೀ ವಿಷಯವನ್ನೂ ಭಿನ್ನವಾದೊಂದು ಕೋನದಿಂದ ಅನ್ವೇಷಿಸುತ್ತೇನೆ. ನನ್ನ ಪ್ರಯತ್ನ ಮತ್ತು ಪರಿಶ್ರಮವನ್ನು ಇದಕ್ಕೋಸ್ಕರ ದುಡಿಸಿಕೊಳ್ಳುತ್ತೇನೆ. ಜನರು ನನ್ನನ್ನು ಅಪೂರ್ವಜ್ಞಾನಿಯೆಂದು ಕರೆಯುತ್ತಾರಾದರೆ, ಅದು ಕೇವಲ ನನ್ನ ಪರಿಶ್ರಮ ಮತ್ತು ಆಲೋಚನಾಶಕ್ತಿಯ ಫಲಿತ ಮಾತ್ರ’ ಎಂದು ವಿನಮ್ರವಾಗಿಯೇ ಹೇಳುತ್ತಿದ್ದರು.

ಸಾಯಂಕಾಲ ಎಂಟು ಗಂಟೆಯಾದ, ನಂತರ ಬಾಬಾಸಾಹೇಬರು ಊಟ ಮಾಡಿದರು. ಹಾಗೇ ಕುರ್ಚಿಯ ಮೇಲೆ ಧ್ಯಾನಮುದ್ರೆಯಲ್ಲಿ ಕೂತಿದ್ದರು. ಅವರ ಎದುರಿಗೆ, ಅಕ್ಕಪಕ್ಕ ನಾಲೈದು ಜನ ಕುಳಿತಿದ್ದರು. ಅವರ ನಡುವೆ ಸಂಭಾಷಣೆ ನಡೆಯುತ್ತಿದೆ. ಬಾಬಾಸಾಹೇಬರು ನಡುನಡುವೆ ನಗುತ್ತಿದ್ದಾರೆ.

ರಮೇಶ್: ಬಾಬಾಸಾಹೇಬ್, ನೀವು ಸಮಾಜಕ್ಕೆ ಮಾಡಿ ತೋರಿಸಿರುವುದೂ, ಮತ್ತೆ ಇನ್ನೂ ಏನೇನು ಮಾಡ್ತಿದಿರೋ ಅದು ದೇವತೆಗಳು ಮಾತ್ರವೇ ಮಾಡಬಲ್ಲಂತಹವು. ಅವು ಮಾನವಶಕ್ತಿಯನ್ನು ಮೀರಿದವು.

ಅಂಬೇಡ್ಕರ್: ತಪ್ಪು ಅದೆಲ್ಲಾ ನಿಮ್ಮ ಭ್ರಮೆ. ನಾನು ಏನೆಲ್ಲಾ ಮಾಡಿದ್ದೀನೋ ಅದೆಲ್ಲಾ ನನ್ನ ಶ್ರಮದಿಂದ ಸಂಪಾದಿಸಿದ್ದು, ಅದಕ್ಕಿಂತ ಮತ್ತೇನಲ್ಲ. ನನಗೆ ಅಲೌಕಿಕ ವಿಷಯಗಳ (ಶಕ್ತಿ) ಮೇಲೆ ನಂಬಿಕೆಯಿಲ್ಲ. ಯಾರು ಹೆಚ್ಚು ಕಷ್ಟಪಡುತ್ತಾರೋ ಅವರು ಸಾಮಾನ್ಯ ಮನುಷ್ಯರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆಂಬುದು ನನ್ನ ನಂಬಿಕೆ. ಇದೇ ನನ್ನ ದೃಢ ವಿಶ್ವಾಸ. ನನ್ನ ಅನುಭವದಲ್ಲಿ ತಿಳಿದದ್ದೇನೆಂದರೆ, ನನಗೆ ವಿಶಿಷ್ಟತೆ ಲಭಿಸುವುದಕ್ಕೆ ಕಾರಣ ತಪಸ್ಸು. ನನ್ನ ದೃಷ್ಟಿಯಲ್ಲಿ ತಪಸ್ಸೆಂದರೆ, ಕಾಡಿಗೆ ಹೋಗಿ ಋಷಿಗಳು ಮಾಡುವ ತಪಸ್ಸಲ್ಲ. ನನ್ನ ದೃಷ್ಟಿಯಲ್ಲಿ ತಪಸ್ಸಿಗೆ ಎರಡರ್ಥಗಳಿವೆ. ಒಂದು: ಕಡುಕಷ್ಟಗಳನ್ನು ಸಹಿಸುವ ಅನಂತವಾದ ಶಕ್ತಿ. ಎರಡು: ಕೆಲಸ ಮಾಡಲು ಅಗತ್ಯವಾದ ಶಕ್ತಿಯನ್ನು ಧಾರಣೆ ಮಾಡಿಕೊಳ್ಳುವುದು. ಇದರಾಚೆ, ಅಲೌಕಿಕತೆ ಹೊಂದಲು ನೀವು ಹೇಳುವ ದೈವತ್ವವಾಗಲಿ ಅಥವಾ ಮತ್ತೊಂದು ಸಾಧನದ ಅಗತ್ಯವಿಲ್ಲ. ಮಹೋನ್ನತೆಯೆಂಬುದು ಸಂಘರ್ಷ ಮತ್ತು ತ್ಯಾಗಗಳಿಂದ ಮಾತ್ರ ಸಂಭವಿಸುತ್ತದೆ. ಅಗ್ನಿಪರೀಕ್ಷೆಗಳು ಎದುರಾಗದೆ ಮಹೋನ್ನತೆ ಮತ್ತು ಅಲೌಕಿಕತೆ ಹೊಂದಲೂ ಸಾಧ್ಯವಿಲ್ಲ. ಎಲ್ಲಿಯವರೆಗೆ ಮನುಷ್ಯ ಮಹೋನ್ನತ ದೆಸೆಗೆ ಸೇರಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಆತ ಹೋರಾಟಕ್ಕೆ ಮತ್ತು ಕಷ್ಟಗಳನ್ನು ಎದುರಿಸಲು ಕಂಕಣಬದ್ಧವಾಗಲಾರ. ಆತ ತನ್ನ ಸಕಲ ಸುಖಗಳನ್ನೆಲ್ಲಾ ತ್ಯಾಗ ಮಾಡಲು ಸಿದ್ಧನಿರಬೇಕು. ಭವಿಷ್ಯತ್ತನ್ನು ನಿರ್ಮಿಸುವುದಕ್ಕೋಸ್ಕರ ಬದುಕಿನ ಅಗತ್ಯತೆಗಳನ್ನು, ಆಶೆಗಳನ್ನು ಮತ್ತೆಲ್ಲವನ್ನೂ ತ್ಯಾಗ ಮಾಡಬಲ್ಲ ಮನಸ್ಸಿನವನಾಗಬೇಕು. ಬೈಬಲ್‌ನಲ್ಲಿ ಹೇಳಿರುವ ಸತ್ಯದಂತೆಯೇ ಬದುಕೇ ಓಟದ ಸ್ಪರ್ಧೆ. ಅಲ್ಲಿ ಎಲ್ಲವೂ ಕೈಬೀಸಿ ಕರೆಯುತ್ತಿರುತ್ತವೆ. ಆದರೆ ಅವುಗಳಲ್ಲಿ ಕೆಲವೊಂದರ ಬೆನ್ನು ಬೀಳಲೇಬೇಕಾಗುತ್ತದೆ. ಬದುಕಿನ ಓಟದ ಸ್ಪರ್ಧೆಯಲ್ಲಿ ತುಂಬಾ ಜನ ಸೋತು ಹೋಗುತ್ತಾರೆ. ಯಾಕೆಂದರೆ ಅವರು ಭವಿಷ್ಯತ್ತಿನ ಕನಸಿಗೋಸ್ಕರ ವರ್ತಮಾನದ ಸುಖಗಳನ್ನು ತ್ಯಾಗ ಮಾಡುವ ಸಾಹಸ ಮಾಡಲಾರರು.

’ಗ್ರೀಕ್ ಪುರಾಣದ ಕತೆಯೊಂದರ ಒಂದು ಕಡೆ ಹೇಳಲಾಗಿದೆ’ ಎಂದು ಬಾಬಾಸಾಹೇಬರು ನಗುತ್ತಾ ಹೀಗೆ ಹೇಳುತ್ತಾರೆ. ಅಮಿತ ಅಂದವಾದ ವ್ಯಾಖ್ಯಾನವದು. ಅದರಲ್ಲಿನ ನೈತಿಕತೆ ನನಗೆ ಯಾವಾಗಲೂ ನೆನಪಾಗುತ್ತಿರುತ್ತದೆ. ಅದು ಗ್ರೀಕ್ ದೇವತೆ ದಿಮಿಟರ್ ಮೂಲಕ ಹೇಳಲ್ಪಟ್ಟಿದೆ. ಆಕೆ ತನ್ನ ಕುಮಾರಿಯನ್ನು ಹುಡುಕಿಕೊಂಡು ’ತೊಲಿಊಸ್’ ದರ್ಬಾರಿಗೆ ಬರುತ್ತಾಳೆ. ಆದರೆ ಎಲ್ಲೂ ಯಾವುದೇ ಹೆಸರಿನ ಗುರುತು ದೊರೆಯಲಿಲ್ಲ. ರಾಣಿಯಾದ ಮಿತೋನಿಆರಾ ತನ್ನ ನವಜಾತಶಿಶು ದಿನೊಫುಲ್‌ನನ್ನು ಬೆಳೆಸಿ ಕಾಪಾಡುವ ಜವಾಬ್ದಾರಿ ದಿಮಿಟರ್‌ಗೆ ಒಪ್ಪಿಸುತ್ತಾಳೆ.

ಪ್ರತಿದಿನ ರಾತ್ರಿ ಕುಟುಂಬವೆಲ್ಲಾ ಗಾಢನಿದ್ರೆಯಲ್ಲಿರುವಾಗ ಸುಖಪ್ರದವಾದ ಜೋಕಾಲಿಯಲ್ಲಿರುವ ಶಿಶುವನ್ನು ದಿಮಿಟರ್ ಎಬ್ಬಿಸುತ್ತಿದ್ದಳು. ಆ ಶಿಶುವಿಗೆ ದೈವತ್ವವನ್ನು ಧಾರಣೆ ಮಾಡಲು ಅಗ್ನಿಶಿಖೆಯಲ್ಲಿ ಇಟ್ಟುಬಿಡುತ್ತಿದ್ದಳು. ಅದರಿಂದಾಗಿ ಆ ಮಗುವಿಗೆ ಸ್ವಲ್ಪ ಸ್ವಲ್ಪವೇ ದೈವತ್ವ ಪ್ರಾಪ್ತವಾಗುತ್ತಲಿತ್ತು. ಒಂದು ರಾತ್ರಿ ರಾಣಿ ಮಿತೋನಿಆರಾ ಬೆಂಕಿಯ ಮಧ್ಯೆ ಇರುವ ಶಿಶುವನ್ನು ನೋಡಿ ಆಶ್ಚರ್ಯಚಕಿತಳಾದಳು. ಆಕೆಯ ಮನಸ್ಸಿನ ತುಂಬಾ ಭಯಾತಂಕ ಆವರಿಸಿತು. ಶಿಶುವನ್ನು ಅಲೌಕಿಕ ಪುರುಷನನ್ನಾಗಿ ಮಾಡುವ ಪ್ರಯತ್ನದಲ್ಲಿರುವ ದಿಮಿಟರ್‌ಳನ್ನು ತೊಲಗಿಸಿ ಅಗ್ನಿಶಿಖೆಯಲ್ಲಿರುವ ಮಗುವನ್ನು ಹೊರಗೆ ತಂದಳು. ಇದರಿಂದಾಗಿ ಆ ಶಿಶು ಅಲೌಕಿಕತೆ ಮತ್ತು ದೈವಪುರುಷನಾಗುವ ಅವಕಾಶವನ್ನೇ ಕಳೆದುಕೊಂಡಿತು. ಈ ಕತೆಯಿಂದ ನನಗೆ ಅರ್ಥವಾದದ್ದೇನೆಂದರೆ, ’ಮಹೋನ್ನತೆಯನ್ನು ಹೊಂದಬೇಕಾದರೆ, ಕಷ್ಟಗಳನ್ನು ಭರಿಸಬಲ್ಲ ಶಕ್ತಿಯೂ ಇರಬೇಕು’. ನಾನು ನನ್ನ ಬದುಕಿನ ಸಂಘರ್ಷಗಳನ್ನು ದಾಟಿಕೊಂಡು ನಡೆದು ಬಂದವನು. ಅಂಥಾದ್ದರಲ್ಲಿ ಸಂಪೂರ್ಣವಾಗಿ, ಸುಖ- ಸಂತೋಷಗಳನ್ನು ಮಾತ್ರವಲ್ಲದೆ ಬೇಕಾದವುಗಳನ್ನೆಲ್ಲಾ ತ್ಯಾಗ ಮಾಡುತ್ತಾ, ಬದುಕಿನ ಹೋರಾಟವನ್ನು ಸಾಗಿಸುತ್ತಲೇ ಮುಂದಕ್ಕೆ ಸಾಗಿದವನು.

ಮಹೋನ್ನತವಾದುದ್ದನ್ನು ಸಾಧಿಸಬೇಕಾದರೆ ಮತ್ತೊಂದು ಬೇಕು; ಅದೇ ’ಕೇವಲ ಕೆಲಸ ಮಾಡುವುದು’. ಕೆಲಸ ಮಾಡದೆ ತ್ಯಾಗ ಮತ್ತು ಕಷ್ಟಗಳನ್ನು ಸಹಿಸುವ ಶಕ್ತಿ ಇದ್ದೂ ಕೂಡ ವ್ಯರ್ಥವಾಗುತ್ತದೆ. ಅಂದುಕೊಂಡಿರುವುದನ್ನು ಸಾಧಿಸುವವರೆಗೂ ಕಠೋರವಾಗಿ ಶ್ರಮಿಸುವುದಲ್ಲದೆ ಯಾವಾಗ ಕೆಲಸ ಮುಗಿಯುವರೆಗೆ ಆ ಕೆಲಸದಿಂದ ಹೊರಬರಲಾರೆವೋ ಆಗ ಮಾತ್ರ ಅದನ್ನು ಸಾಧಿಸಬಲ್ಲೆವು. ಬದುಕಿನಲ್ಲಿ ದಿಗ್ವಿಜಯವನ್ನು ಸಾಧಿಸಲು ಏಕೈಕ ಉಪಾಯವೆಂದರೆ, ಕಠೋರವಾಗಿ ಶ್ರಮಿಸುವುದಷ್ಟೇ. ಶ್ರೇಷ್ಠತೆಯನ್ನು ಹೊಂದಲು ಕಷ್ಟಪಡುವ ಮಾರ್ಗವನ್ನು ಬಿಟ್ಟು ಮತ್ತ್ಯಾವ ದಾರಿಯೂ ನನಗೆ ದೊರೆಯಲೇ ಇಲ್ಲ ಎನ್ನುತ್ತಾರೆ ಬಾಬಾಸಾಹೇಬರು.

ಸಿದ್ದಾರ್ಥ ಕಾಲೇಜಿನ ವಿದ್ಯಾರ್ಥಿಗಳಿಗೆ ಬಾಬಾಸಾಹೇಬರು ಹೀಗೆ ಸಂದೇಶ ಕೊಡುತ್ತಾರೆ. ’ಮುನ್ನುಗ್ಗುವ ಉತ್ಸಾಹವಿಲ್ಲದೆ, ಪ್ರಯತ್ನವಿಲ್ಲದೆ, ಕಷ್ಟಪಡದೆ, ಸುಖಮಯವಾದ ಬದುಕನ್ನು ಬದುಕಬೇಕೆಂದು ವಿದ್ಯಾರ್ಥಿಗಳು ಅಂದುಕೊಳ್ಳುತ್ತಿದ್ದೀರಿ. ಹೀಗಾದರೆ ವಿದ್ಯಾರ್ಥಿಗಳಿಗೆ ನಷ್ಟ. ಯಾವುದೇ ದೇಶವಾದರೂ, ವ್ಯಕ್ತಿಯಾದರೂ ಬದ್ಧತೆಯ ಸಂಕಲ್ಪವಿಲ್ಲದೆ ಏನೂ ಸಾಧಿಸಲಾರರು. ಪ್ರಾಚೀನ ಮುನಿಗಳು ಎಲ್ಲ ಕಡೆ ಯಾವಾಗಲೂ ನ್ಯಾಯತವಾಗಿದ್ದರೂ ತಪಸ್ಸು ಮಾಡದೆ ಅವರು ಏನೂ ಹೊಂದದಾದರು. ಯಾವುದೇ ಕೆಲಸಕ್ಕೆ ಧೈರ್ಯ ಮತ್ತು ನಿರಂತರ ಪರಿಶ್ರಮ ತುಂಬಾ ಅಗತ್ಯ ಮಹೋನ್ನತವಾದ ಕೆಲಸಗಳು ಕೇವಲ ಶಕ್ತಿಸಾಮರ್ಥ್ಯದಿಂದಲೇ ಪೂರ್ತಿಯಾಗಲಾರವು. ಧೈರ್ಯ ಮತ್ತು ಪರಿಶ್ರಮದಿಂದಲೇ ಅವು ಸಂಪೂರ್ಣವಾಗುತ್ತವೆ. ಧೈರ್ಯವೆಂಬ ದೊಡ್ಡಗುಣದಿಂದ ಬೇಧಿಸದೆ, ಅಡೆತಡೆಗಳನ್ನು ದಾಟುವುದಕ್ಕೆ ನಾನು ನಿರಂತರವಾಗಿ ಮಾಡಿದ ಪರಿಶ್ರಮ, ಅವುಗಳ ಚರಿತ್ರೆ ನಿಮಗೆ ಆದರ್ಶವಾಗಲಾರದು. ಈ ಕೆಲಸಗಳೆಲ್ಲವನ್ನು ಸಾಧಿಸಲು ನಾನು ಅದೆಷ್ಟು ಧೈರ್ಯದಿಂದ ಮುಂದಡಿಯಿಟ್ಟಿದ್ದೇನೆಂದು ನನಗೆ ಮಾತ್ರ ಚೆನ್ನಾಗಿ ಗೊತ್ತು’.

ದೇವಿದಯಾಳ್

ಕನ್ನಡಕ್ಕೆ: ಆರಡಿಮಲ್ಲಯ್ಯ ಕಟ್ಟೇರ

ಪ್ರಕಟಣೆ: ಅಹರ್ನಿಶಿ

ಬೆಲೆ: 180 ರೂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...