Homeಮುಖಪುಟಬಾಬಾಸಾಹೇಬರ ಪುಸ್ತಕಗಳ ಪ್ರಕಟನೆಗೂ ಅವರ ಜೀವನದಷ್ಟೇ ಕಲ್ಲು ಮುಳ್ಳಿನ ಹಾದಿ!

ಬಾಬಾಸಾಹೇಬರ ಪುಸ್ತಕಗಳ ಪ್ರಕಟನೆಗೂ ಅವರ ಜೀವನದಷ್ಟೇ ಕಲ್ಲು ಮುಳ್ಳಿನ ಹಾದಿ!

- Advertisement -
- Advertisement -

ತಮ್ಮ ಬದುಕಿನ ಕಟ್ಟಕಡೆಯ ಗಳಿಗೆಯವರೆಗೂ ಬರವಣಿಗೆಯಲ್ಲಿ ತೊಡಗಿದ್ದ ಡಾ.ಬಿ.ಆರ್ ಅಂಬೇಡ್ಕರ್ ತಾವು ಬರೆದಿದ್ದೆಲ್ಲವನ್ನೂ ತಮ್ಮ ಜೀವಿತಾವಧಿಯಲ್ಲೇ ಪ್ರಕಟಿಸಲು ಸಾಧ್ಯವಾಗಲಿಲ್ಲ. ಅಂಬೇಡ್ಕರ್ ಅವರು ತೀರಿಕೊಳ್ಳುವ ಕೆಲವು ಗಂಟೆಗಳ ಮುಂಚೆಯಷ್ಟೇ ತಮ್ಮ ಕೊನೆಯ ಕೃತಿ ’ಬುದ್ಧ ಮತ್ತು ಆತನ ಧಮ್ಮ’ದ ಹಸ್ತಪ್ರತಿಯನ್ನು ತಮ್ಮ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ನಾನಕ್ ಚಂದ್ ರತ್ತು ಅವರ ಕೈಗಿಟ್ಟು ಪ್ರಕಾಶಕರಿಗೆ ತಲುಪಿಸಲು ಹೇಳಿದ್ದರು. ಅಂಬೇಡ್ಕರ್ ಈ ಪುಸ್ತಕವನ್ನು ಆದಷ್ಟು ಬೇಗ ಪ್ರಕಟಿಸಬೇಕು ಎನ್ನುವ ಇಚ್ಛೆ ಹೊಂದಿದ್ದರು. ಬುದ್ಧನ ಕುರಿತು ಅಂಬೇಡ್ಕರ್ ಪ್ರಕಟಿಸಬೇಕೆಂದುಕೊಂಡಿದ್ದ ನಾಲ್ಕು ಪುಸ್ತಕಗಳಲ್ಲಿ ’ಬುದ್ಧ ಮತ್ತು ಆತನ ಧಮ್ಮ’ ಮೊದಲನೆಯದಾಗಿತ್ತು. ಉಳಿದ ಮೂರು ಪುಸ್ತಕಗಳು- ’ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ’ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಮತ್ತು ’ಹಿಂದೂಧರ್ಮದ ಒಗಟುಗಳು’ ಅವರ ನಿಧನದ ನಂತರ ಪ್ರಕಟವಾದವು.

PC : MJP Publishers

ಹಿಂದೂ ಕೋಡ್ ಬಿಲ್ ಜಾರಿಯ ಕುರಿತು ನೆಹರೂ ಸರ್ಕಾರದ ಜೊತೆಗೆ ಉಂಟಾಗಿದ್ದ ಭಿನ್ನಮತದಿಂದಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಅಂಬೇಡ್ಕರ್ ನಾಲ್ಕೈದು ವರ್ಷ ಶ್ರಮವಹಿಸಿ ಈ ಪುಸ್ತಕವನ್ನು ಬರೆದಿದ್ದರು. ಇದನ್ನು ತಾವೇ ಪ್ರಕಟಿಸಲು ಆರ್ಥಿಕ ಮುಗ್ಗಟ್ಟು ಎದುರಾದಾಗ ಟಾಟಾ ಟ್ರಸ್ಟ್ ಬಳಿ ಆರ್ಥಿಕ ಸಹಾಯ ಕೇಳಿದರು. ಪುಸ್ತಕ ಪ್ರಕಟಿಸುವುದಕ್ಕಾಗಲಿ, ಪುಸ್ತಕ ಪ್ರಕಟಣೆಗೆ ಬೇಕಾದ ಇಪ್ಪತ್ತು ಸಾವಿರ ರೂಪಾಯಿಗಳಷ್ಟು ಹಣವನ್ನಾಗಲಿ ಕೊಡುವುದು ಸಾಧ್ಯವಿಲ್ಲ ಎಂದ ಟಾಟಾ ಟ್ರಸ್ಟ್ ಮೂರು ಸಾವಿರ ರೂಪಾಯಿಗಳ ಸಹಾಯಧನದ ಚೆಕ್‌ಅನ್ನು ಅಂಬೇಡ್ಕರ್ ಅವರಿಗೆ ಕಳಿಸಿತು. ಆಗಿನ ಕೇಂದ್ರ ಸರ್ಕಾರ ಬುದ್ಧನ ಐದು ನೂರು ವರ್ಷಗಳ ಜಯಂತಿಯ ಆಚರಣೆಗೆ ಮುಂದಾಗಿತ್ತು. ನೆಹರೂ ಅವರಿಗೆ ಪತ್ರ ಬರೆದ ಅಂಬೇಡ್ಕರ್ ’ಬುದ್ಧ ಮತ್ತು ಆತನ ಧಮ್ಮ’ ಕೃತಿಯ ಐದು ನೂರು ಪ್ರತಿಗಳನ್ನು ಕೊಂಡು ಸಾರ್ವಜನಿಕ ಗ್ರಂಥಾಲಯಗಳಿಗೆ ನೀಡಿ ಎಂದು ಮನವಿ ಮಾಡಿಕೊಂಡರು. ಆದರೆ ಬುದ್ಧನ ಕುರಿತ ಪುಸ್ತಕಗಳ ಪ್ರಕಟಣೆಗೆ ಸರ್ಕಾರ ಪ್ರತ್ಯೇಕವಾಗಿ ಹಣ ಕೊಟ್ಟಿರುವುದರಿಂದ ಈಗ ಪುಸ್ತಕ ಕೊಳ್ಳುವುದಕ್ಕೆ ಸಾಧ್ಯವಿಲ್ಲವೆಂದು ನೆಹರೂ ಉತ್ತರಿಸಿದರು. ಮುಂದೆ ಅಂಬೇಡ್ಕರ್ ಸ್ಥಾಪಿಸಿದ್ದ ಪೀಪಲ್ಸ್ ಎಜುಕೇಶನ್ ಟ್ರಸ್ಟ್ ’ಬುದ್ಧ ಮತ್ತು ಆತನ ಧಮ್ಮ’ ಕೃತಿಯನ್ನು ಪ್ರಕಟಿಸಿತು.

ಅಂಬೇಡ್ಕರ್ ಅವರ ಆಗಿನ ಆರ್ಥಿಕ ಪರಿಸ್ಥಿತಿ ಅವರ ಬರಹಗಳನ್ನು ಪ್ರಕಟಿಸುವಷ್ಟು ಭದ್ರವಾಗಿರಲಿಲ್ಲ. ಅಂಬೇಡ್ಕರ್ ಅವರ ಆರೋಗ್ಯ ಕೂಡ ಆಗಾಗ ಕೈಕೊಡುತ್ತಿದ್ದರಿಂದ ದೈಹಿಕವಾಗಿ ಬಳಲಿದ್ದರು. ಆಗ ಆರೋಗ್ಯ ನೋಡಿಕೊಳ್ಳುತ್ತಿದ್ದವರು ಡಾ. ಮಳಗಾವಂಕರ್ ಮತ್ತು ಡಾ.ಶಾರದಾ ಕಬೀರ್. ಮುಂದೆ ಡಾ.ಶಾರದಾ ಕಬೀರ್ ಅವರನ್ನು ಅವರ ಅಪೇಕ್ಷೆಯ ಮೇರೆಗೆ ಏಪ್ರಿಲ್ 15 1948ರಂದು ಅಂಬೇಡ್ಕರ್ ವಿವಾಹವಾದರು. ಆ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಮರುವಿವಾಹವಾಗುವುದಕ್ಕೆ ಪ್ರಮುಖ ಕಾರಣ ಪದೇ ಪದೇ ಕೈಕೊಡುತ್ತಿದ್ದ ಆರೋಗ್ಯವನ್ನು ನೋಡಿಕೊಳ್ಳಲು ಯಾರಾದರೂ ಒಬ್ಬರು ಜೊತೆಗಿರಲಿ ಎನ್ನುವುದಾಗಿತ್ತು. ಅಂಬೇಡ್ಕರ್ ಅವರ ಪತ್ನಿ ರಮಾಬಾಯಿಯವರು 1935ರಲ್ಲೇ ತೀರಿಕೊಂಡಿದ್ದರು. ಹಾಗಾಗಿ ನರ್ಸ್ ಅಥವಾ ಹೊರಗಿನವರು ಇರುವುದಕ್ಕಿಂತ ತಮಗೆ ಹತ್ತಿರದವರೇ ಇರಲಿ ಎನ್ನುವ ಕಾರಣಕ್ಕೆ ಶಾರದಾ ಕಬೀರ್ ಅವರನ್ನು ಮದುವೆಯಾದರು. ಸಾರಸ್ವತ ಬ್ರಾಹ್ಮಣ ಸಮುದಾಯದ ಡಾ.ಶಾರದಾ ಕಬೀರ್ ಅಂಬೇಡ್ಕರ್ ಅವರನ್ನು ಮದುವೆಯಾದ ನಂತರ ಸವಿತಾ ಅಂಬೇಡ್ಕರ್ ಆದರು. ಕಾಂಗ್ರೆಸ್ ಸರ್ಕಾರದಿಂದ ಹೊರಬಂದನಂತರ ಚುನಾವಣೆಗೆ ಸ್ಫರ್ಧಿಸಿದ್ದ ಅಂಬೇಡ್ಕರ್ ಸೋಲನುಭವಿಸಿದರು. ತಮ್ಮ ರಾಜಕೀಯ ಬದುಕಿನ ಏಳುಬೀಳುಗಳು, ತಮ್ಮ ಸಮುದಾಯದ ಬಗ್ಗೆ ಅವರ ಆತಂಕಗಳು, ಪದೇಪದೇ ಕೈಕೊಡುತ್ತಿದ್ದ ಆರೋಗ್ಯ ಅಂಬೇಡ್ಕರ್ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಸಿದ್ದವು. ’ಬುದ್ಧ ಮತ್ತು ಆತನ ಧಮ್ಮ’ ಕೃತಿಯ ಪ್ರಕಟಣೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾಗಲೇ 1956ರ ಡಿಸೆಂಬರ್ 6 ರಂದು ತೀರಿಕೊಂಡರು.

1951ರಲ್ಲಿ ತಮ್ಮ ಸಚಿವ ಸ್ಥಾನಕ್ಕೆ ಅಂಬೇಡ್ಕರ್ ರಾಜೀನಾಮೆ ಕೊಟ್ಟಮೇಲೆ ಸರ್ಕಾರದ ಯಾವ ಸ್ಥಾನವನ್ನೂ ಅಂಬೇಡ್ಕರ್ ಅಲಂಕರಿಸಲಿಲ್ಲವಾದರೂ ದೆಹಲಿಯಲ್ಲೇ ವಾಸವಾಗಿದ್ದರು. ಅಲೀಪುರ ರಸ್ತೆಯಲ್ಲಿದ್ದ ಅಂಬೇಡ್ಕರ್ ನಿವಾಸದಿಂದ ಅಂಬೇಡ್ಕರ್ ಅವರ ಪಾರ್ಥೀವ ಶರೀರವನ್ನು ಬಾಂಬೆಗೆ ತಂದು ಅವರ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು. ಅಂಬೇಡ್ಕರ್ ನಿಧನದ ನಂತರ ಅಂಬೇಡ್ಕರ್ ಅವರ ಮಗ ಯಶವಂತ್ ಅಂಬೇಡ್ಕರ್ ತಮ್ಮ ತಂದೆಯ ವಾರಸುದಾರಿಕೆ ತಮಗೆ ಸಿಗಬೇಕೆಂದು ಕೋರ್ಟ್ ಮೆಟ್ಟಿಲೇರಿದರು. ಆಗ ಸವಿತಾ ಅಂಬೇಡ್ಕರ್ ಮತ್ತು ಯಶವಂತ್ ಅಂಬೇಡ್ಕರ್ ಮಧ್ಯೆ ಬಿರುಕು ಉಂಟಾಯಿತು.

ಸವಿತಾ ಅಂಬೇಡ್ಕರ್

ಇದಕ್ಕೆ ಕಾರಣಗಳು ಹಲವು. ಸವಿತಾ ಅವರ ಸಾರಸ್ವತ ಬ್ರಾಹ್ಮಣ ಹಿನ್ನೆಲೆ ಅಸ್ಪೃಶ್ಯ ಸಮುದಾಯಗಳಿಗೆ ಸೇರಿದ ಅಂಬೇಡ್ಕರ್ ಅನುಯಾಯಿಗಳನ್ನು ಅಂಬೇಡ್ಕರ್ ಅವರಿಂದ ದೂರಮಾಡಿತು ಎನ್ನುವ ಭಾವನೆ ಹರಡಿದ್ದು ಒಂದು. ಸವಿತಾ ಅವರು ಅಂಬೇಡ್ಕರ್ ಅವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸದೆ ಸರ್ವಾಧಿಕಾರಿಯಂತೆ ವರ್ತಿಸಿದರು ಎನ್ನುವುದರಿಂದ ಹಿಡಿದು ಅಂಬೇಡ್ಕರ್ ಅವರ ಸಾವಿಗೆ ಸವಿತಾ ಅವರೇ ನೇರ ಕಾರಣ ಎನ್ನುವವರೆಗೆ ಹೋಯಿತು. ಅಂಬೇಡ್ಕರ್ ನಿಧನ ಹೊಂದಿದಾಗ ಅವರ ಅಂತ್ಯಸಂಸ್ಕಾರ ಬಾಂಬೆಯಲ್ಲಿ ಆಗಬೇಕೆಂದು ಅಂಬೇಡ್ಕರ್ ಅವರ ಅನುಯಾಯಿಗಳು ಬಯಸಿದರೆ ಸವಿತಾ ಅಂಬೇಡ್ಕರ್ ಆತುರಾತುರವಾಗಿ ಸಾರನಾಥದಲ್ಲಿ ಮಾಡಿ ಮುಗಿಸಲು ಬಯಸಿದರು ಎನ್ನುವ ಸುದ್ದಿ, ಅಂಬೇಡ್ಕರ್ ಸಾವಿಗೆ ಸವಿತಾ ಅವರೆ ಕಾರಣ ಎನ್ನುವುದಕ್ಕೆ ಇಂಬುಕೊಡುವಂತಿತ್ತು. ಇವೆಲ್ಲವುಗಳ ಪರಿಣಾಮವಾಗಿ ಯಶವಂತ್ ಅಂಬೇಡ್ಕರ್ ಕೋರ್ಟ್ ಮೆಟ್ಟಿಲೇರಿದರು. ಅಂಬೇಡ್ಕರ್ ತಮ್ಮ ಆಸ್ತಿಯ ಬಗ್ಗೆ ವಿಲ್ ಮಾಡಿಸಿರಲಿಲ್ಲ.

ಅಂಬೇಡ್ಕರ್ ಅವರಿಗೆ ಸೇರಿದ ಆಸ್ತಿಪಾಸ್ತಿಗಳು, ವಸ್ತುಗಳು, ಪುಸ್ತಕಗಳನ್ನು ಕೋರ್ಟಿನಲ್ಲಿ ನಡೆಯುತ್ತಿರುವ ಕೇಸ್ ತೀರ್ಮಾನವಾಗುವವರೆಗೆ ಸರ್ಕಾರದ ಸುಪರ್ದಿಗೆ ಕೋರ್ಟ್ ವಹಿಸಿತು. ಆಗ ಅಂಬೇಡ್ಕರ್ ಅವರ ಎಲ್ಲ ಬರಹಗಳನ್ನು ಸರ್ಕಾರ ಸೀಲ್ ಮಾಡಿ ಅಂಬೇಡ್ಕರ್ ವಾಸ ಮಾಡುತ್ತಿದ್ದ ದೆಹಲಿಯ ಅಲಿಪುರ ರಸ್ತೆಯ ಬಂಗಲೆಯ ಎರಡು ಕೋಣೆಗಳಲ್ಲಿ ಇಡಲಾಯಿತು. ಆ ಬಂಗಲೆಯ ಮಾಲೀಕರು ಸವಿತಾ ಅವರಿಗೆ ಅಲ್ಲೆ ವಾಸಮಾಡಲು ಅವಕಾಶ ಕೊಟ್ಟರು. ಮುಂದೆ ಆ ಬಂಗಲೆಯ ಮಾಲೀಕತ್ವ ಬೇರೊಬ್ಬರಿಗೆ ಹೋಗಿ ಅವರು ಸವಿತಾ ಅವರನ್ನು ಅಲ್ಲಿಂದ ಹೊರನಡೆಯುವಂತೆ ನೋಟಿಸ್ ಕಳಿಸಿದರು. ಸವಿತಾ ಅಂಬೇಡ್ಕರ್ ಹೇಳುವ ಪ್ರಕಾರ ಅವರಿಲ್ಲದ ಸಮಯದಲ್ಲಿ ಅಂಬೇಡ್ಕರ್ ಅವರಿಗೆ ಸೇರಿದ್ದ ವಸ್ತುಗಳಿದ್ದ ಕೋಣೆಯನ್ನು ಖಾಲಿ ಮಾಡಿ ಅಲ್ಲಿದ್ದ ಎಲ್ಲವನ್ನು ಹೊರಗೆ ಬಿಸಾಕಿದ್ದರಂತೆ. ಅಂಬೇಡ್ಕರ್ ಅವರು ಬರೆದಿದ್ದ ಪುಸ್ತಕಗಳು, ಲೇಖನಗಳು, ಪತ್ರಗಳು ಎಲ್ಲವನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದಿದ್ದು ಆ ಘಟನೆಯಿಂದ ಅಸ್ತವ್ಯಸ್ತವಾಗಿದ್ದಲ್ಲದೆ ಕೆಲವು ಅಮೂಲ್ಯ ದಾಖಲೆಗಳು ಕಳೆದುಹೋಗುತ್ತವೆ. ಮುಂದೆ ಯಶವಂತ್ ಅಂಬೇಡ್ಕರ್ ತಮ್ಮ ಕೇಸನ್ನು ದೆಹಲಿಯಿಂದ ಮುಂಬೈಗೆ ವರ್ಗಾಯಿಸಿಕೊಳ್ಳುತ್ತಾರೆ. ಸವಿತಾ ಕೂಡ ಕೆಲಕಾಲ ದೆಹಲಿಯಲ್ಲಿದ್ದು ಬಾಂಬೆಯಲ್ಲಿದ್ದ ತಮ್ಮ ಸಹೋದರನ ಮನೆಗೆ ತಮ್ಮ ವಾಸ್ತವ್ಯ ಬದಲಾಯಿಸುತ್ತಾರೆ. ಅಂಬೇಡ್ಕರ್ ಅವರ ಬರಹಗಳು ಮಹಾರಾಷ್ಟ್ರ ಸರ್ಕಾರದ ಸುಪರ್ದಿಯಲ್ಲಿ ನೂರಾರು ಪೆಟ್ಟಿಗೆಗಳಲ್ಲಿ ಉಳಿಯುತ್ತವೆ.

ಅಂಬೇಡ್ಕರ್ ನಿಧನರಾದ ನಂತರ ಅಂಬೇಡ್ಕರ್ ಅವರ ಹಲವು ಅನುಯಾಯಿಗಳು ಅಂಬೇಡ್ಕರ್ ಅವರ ಬರಹಗಳನ್ನು ಪ್ರಕಟಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಾರೆ. ಆದರೆ ಸರ್ಕಾರ ವಾರಸುದಾರಿಕೆಯ ನೆಪವೊಡ್ಡಿ ಅದನ್ನು ಮುಂದೂಡುತ್ತಾ ಬರುತ್ತದೆ. 1972ರಲ್ಲಿ ’ದಲಿತ್ ಪ್ಯಾಂಥರ್ಸ್’ ಸ್ಥಾಪನೆಯಾಗುವುದರೊಂದಿಗೆ ಅಂಬೇಡ್ಕರ್ ಅವರ ಚಿಂತನೆಗಳು ಹೆಚ್ಚು ಜನಪ್ರಿಯವಾಗತೊಡಗುತ್ತವೆ. ’ದಲಿತ್ ಪ್ಯಾಂಥರ್ಸ್’ ಕೂಡ ಅಂಬೇಡ್ಕರ್ ಬರಹಗಳನ್ನು ಪ್ರಕಟಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲು ಪ್ರಾರಂಭಿಸುತ್ತದೆ. ಆಗಿನ ಮುಖ್ಯಮಂತ್ರಿ ವಸಂತರಾವ್ ಅವರನ್ನು ’ದಲಿತ್ ಪ್ಯಾಂಥರ್ಸ್’ನ ನಾಯಕ ರಾಜಾಧಾಳೆ ’ನೀವು ಗಾಂಧಿ ಬರಹಗಳನ್ನು ಪ್ರಕಟಿಸುತ್ತೀರಿ. ಬಾಬಾಸಾಹೇಬರ ಬರಹಗಳನ್ನು ಯಾಕೆ ಪ್ರಕಟಿಸುತ್ತಿಲ್ಲ’ ಅಂತ ನೇರವಾಗಿ ಪ್ರಶ್ನಿಸುತ್ತಾರೆ. ಈ ನಡುವೆ ಹಲವು ಜನ ಅಂಬೇಡ್ಕರ್ ಅವರ ಆವರೆಗೆ ಪ್ರಕಟವಾಗಿರುವ ಪುಸ್ತಕಗಳನ್ನು ಪ್ರಕಟಿಸಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಾರೆ.

ಯಶವಂತ್ ಅಂಬೇಡ್ಕರ್

ಅಂಬೇಡ್ಕರ್‌ವಾದಿಯಾಗಿದ್ದ ಭಗವಾನ್ ದಾಸ್ ಅವರು ’ದಸ್ ಸ್ಪೋಕ್ ಅಂಬೇಡ್ಕರ್’ ಎನ್ನುವ ಹೆಸರಿನಲ್ಲಿ ಅಂಬೇಡ್ಕರ್ ಬರಹಗಳ ಮತ್ತು ಭಾಷಣಗಳ ನಾಲ್ಕು ಸಂಪುಟಗಳನ್ನು ಪ್ರಕಟಿಸುತ್ತಾರೆ. ತುರ್ತುಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ’ದಲಿತ್ ಪ್ಯಾಂಥರ್ಸ್’ ಮತ್ತು ಅಂಬೇಡ್ಕರ್ ಅವರು ಸ್ಥಾಪಿಸಿದ್ದ ’ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ’ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ನಿರ್ಧಾರ ಮಾಡುತ್ತವೆ. ಆಗ ಅದನ್ನು ವಿರೋಧಿಸಿ ಯಶವಂತ್ ಅಂಬೇಡ್ಕರ್ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಾರೆ. ಅಂಬೇಡ್ಕರ್ ಅನುಯಾಯಿಗಳು ಎಂದು ಹೇಳಿಕೊಂಡ ಬಹುತೇಕರು ಯಶವಂತ್ ಅವರಿಂದ ದೂರವಾಗುತ್ತಾರೆ. ಕೆಲವೇ ಕೆಲವು ’ದಲಿತ್ ಪ್ಯಾಂಥರ್ಸ್’ ಮುಖಂಡರು ಯಶವಂತ್ ಅವರ ಜೊತೆ ನಿಲ್ಲುತ್ತಾರೆ ಅಂತವರಲ್ಲಿ ಜೆವಿ ಪವಾರ್ ಕೂಡ ಒಬ್ಬರು. ಈ ಚುನಾವಣೆಯ ನಂತರ ಪವಾರ್ ಯಶವಂತ್ ಅವರಿಗೆ ಹತ್ತಿರವಾಗುವುದರ ಮೂಲಕ ಅಂಬೇಡ್ಕರ್ ಅವರ ಬರಹಗಳನ್ನು ಪ್ರಕಟಿಸುವುದಕ್ಕೆ ಒಪ್ಪಿಗೆ ನೀಡಬೇಕೆಂದು ಯಶವಂತ್ ಅವರ ಮನವೊಲಿಸಲು ಪ್ರಯತ್ನಿಸುತ್ತಾರೆ.

ಜೆವಿ ಪವಾರ್ ಸರ್ಕಾರಿ ನೌಕರರು, ’ದಲಿತ್ ಪ್ಯಾಂಥರ್ಸ್’ನ ಹಿರಿಯ ನಾಯಕರೂ ಆಗಿದ್ದವರು. ತಾವು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿಯೇ ಅಂಬೇಡ್ಕರ್ ಅವರ ಬರಹಗಳನ್ನು ಸೀಲ್ ಮಾಡಿ ಇಡಲಾಗಿತ್ತು. ವರ್ಷಗಟ್ಟಲೆ ಇಟ್ಟಿದ್ದರಿಂದಾಗಿ ಅಂಬೇಡ್ಕರ್ ಅವರ ಬರಹಗಳು ಜಿರಲೆಗಳಿಗೆ ಆಹಾರವಾಗಿ ಬದಲಾಗಿದ್ದವು. ಅತ್ಯಮೂಲ್ಯವಾದ ಆಸ್ತಿಯನ್ನು ಕಣ್ಣೆದುರೆ ಕಳೆದುಕೊಳ್ಳುತ್ತಿರುವ ನೋವನ್ನು ಪವಾರ್ ಅನುಭವಿಸುತ್ತಿದ್ದರು. ಹೇಗಾದರೂ ಮಾಡಿ ಈ ಬರಹಗಳ ಪ್ರಕಟಣೆಯ ಕೆಲಸ ಶುರುಮಾಡಿಸಬೇಕೆಂದು ಅನೇಕ ರೀತಿಯಲ್ಲಿ ಪವಾರ್ ಪ್ರಯತ್ನಿಸುತ್ತಿದ್ದರು. ಯಶವಂತ್ ಅವರ ಜೊತೆ ಸಖ್ಯ ಬೆಳೆಸಿದ್ದರ ಹಿಂದೆ ಅಂಬೇಡ್ಕರ್ ಬರಹಗಳ ಗುಪ್ತಸೂಚಿಯೂ ಕೆಲಸ ಮಾಡುತ್ತಿತ್ತು. ಪವಾರ್ ಯಶವಂತ್ ಅವರ ಜೊತೆ ಮಾತ್ರವಲ್ಲದೆ ಸವಿತಾ ಅಂಬೇಡ್ಕರ್‌ರ ಜೊತೆಯಲ್ಲಿಯೂ ನಿರಂತರ ಸಂಪರ್ಕದಲ್ಲಿದ್ದರು. ಅಂಬೇಡ್ಕರ್ ಅವರ ನಿಧನರಾದ ಸಂದರ್ಭದಲ್ಲಿ ನಡೆದ ವಿದ್ಯಮಾನಗಳಿಂದಾಗಿ ಸವಿತಾ ಅವರನ್ನು ದೂರವಿಡಲಾಗಿತ್ತು. ಸವಿತಾ ಕೂಡ ಜನರಿಂದ ದೂರವಾಗಿ ಅಂತರ ಕಾಯ್ದುಕೊಂಡಿದ್ದರು. ಪವಾರ್ ಸವಿತಾರನ್ನು ನಿರಂತರವಾಗಿ ಭೇಟಿಯಾಗುತ್ತಿದ್ದರು.

ಇಂತದ್ದೆ ಭೇಟಿಯೊಂದರಲ್ಲಿ ಅಂಬೇಡ್ಕರ್ ಅವರ ಬರಹಗಳ ಪ್ರಕಟಣೆಗೆ ಯಶವಂತ್ ಮತ್ತು ಸವಿತಾ ಅವರ ನಡುವೆ ಸಹಮತವಿಲ್ಲದಿರುವುದು ಹೇಗೆ ತೊಡಕಾಗಿದೆ ಎನ್ನುವುದನ್ನು ವಿವರಿಸಿ ’ಅಂಬೇಡ್ಕರ್ ಅವರ ಬರಹಗಳು ಅವರ ಪತ್ನಿಯಾದ ನಿಮಗಾಗಲಿ, ಅವರ ಮಗನಾದ ಯಶವಂತ್ ಅವರಿಗಾಗಲಿ ಸ್ವಂತವಾದವಲ್ಲ. ಅವರು ಬರೆದಿದ್ದು ಸಮಾಜಕ್ಕಾಗಿ. ಹಾಗಾಗಿ ಅವರ ಬರಹಗಳು ಸಮಾಜದ ಸ್ವತ್ತು’ ಎಂದು ಹೇಳುವ ಧೈರ್ಯ ಮಾಡುತ್ತಾರೆ. ಅಲ್ಲಿಯವರೆಗೂ ಅಂಬೇಡ್ಕರ್ ಅವರ ಬರಹಗಳ ಪ್ರಕಟಣೆಗೆ ಉತ್ಸಾಹ ತೋರಿಸದ ಸವಿತಾ ಅಂಬೇಡ್ಕರ್ ಸರ್ಕಾರ ಜವಾಬ್ದಾರಿ ಹೊತ್ತು ಪ್ರಕಟಿಸುವುದಾದರೆ ನನ್ನ ಅಭ್ಯಂತರವೇನಿಲ್ಲ ಎಂದು ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿಕೊಡುತ್ತಾರೆ. ಪವಾರ್ ಈ ಪತ್ರವನ್ನು ಯಶವಂತ್ ಅವರಿಗೆ ತೋರಿಸಿದಾಗ ಅವರೂ ಒಪ್ಪಿಗೆ ನೀಡಿ ಸಹಿ ಮಾಡುತ್ತಾರೆ.

ಅಲ್ಲಿಗೆ ಅಂಬೇಡ್ಕರ್ ಬರಹಗಳ ಪ್ರಕಟಣೆಗೆ ಅಡ್ಡಿಯಾಗಿದ್ದ ಸವಿತಾ ಮತ್ತು ಯಶವಂತ್ ಅಂಬೇಡ್ಕರ್ ಅವರ ಮಧ್ಯದ ಬಿರುಕು ನಿವಾರಣೆಯಾಗುತ್ತದೆ. ಪವಾರ್ ಸವಿತಾ ಮತ್ತು ಯಶವಂತ್ ಅವರ ಒಪ್ಪಿಗೆ ಪತ್ರವನ್ನು ತೆಗೆದುಕೊಂಡು ಜನವರಿ 17, 1977ರಂದು ಮಹಾರಾಷ್ಟ್ರ ಸರ್ಕಾರದ ಬಳಿ ಒಂದು ನಿಯೋಗವನ್ನು ಕರೆದೊಯ್ಯುತ್ತಾರೆ. ಅಂಬೇಡ್ಕರ್ ಅವರ ಬರಹಗಳ ಪ್ರಕಟಣೆಗೆ ಅನುಮತಿ ಸಿಕ್ಕಿರುವುದನ್ನು ಪ್ರಸ್ತಾಪಿಸಿ ಅಂಬೇಡ್ಕರ್ ಅವರ ಎಲ್ಲ ಬರಹಗಳನ್ನು ಆರ್ಥಿಕ ಕಾರಣಗಳಿಗಾಗಿ ಸರ್ಕಾರವೇ ಪ್ರಕಟಿಸಬೇಕೆಂದು ಮನವಿ ಸಲ್ಲಿಸುತ್ತಾರೆ. ಅಲ್ಲಿಯವರೆಗೂ ಅನುಮತಿ ಸಿಕ್ಕಿಲ್ಲವೆನ್ನುವ ನೆಪ ನೀಡಿ ಪ್ರಕಟಣೆಯನ್ನು ಮುಂದೂಡಿಕೊಂಡು ಬಂದಿದ್ದ ಸರ್ಕಾರಕ್ಕೆ ಈಗ ಪ್ರಕಟಿಸುವ ಅನಿವಾರ್ಯತೆ ಎದುರಾಗುತ್ತದೆ. ಅಂಬೇಡ್ಕರ್ ಬರಹಗಳನ್ನು ಪ್ರಕಟಿಸುವುದಕ್ಕೆ ಸರ್ಕಾರಕ್ಕೆ ಕೇವಲ ಅನುಮತಿ ಸಿಕ್ಕಿಲ್ಲ ಎಂಬ ಕಾರಣವಷ್ಟೇ ಇರಲಿಲ್ಲ ಎನಿಸುತ್ತದೆ. ಅಂಬೇಡ್ಕರ್ ಅವರ ಬರಹಗಳು ಹಿಂದೂ ಧರ್ಮದ ತೀವ್ರ ವಿಮರ್ಶೆ ಒಳಗೊಂಡಿರುವುದು ಆ ಬರಹಗಳನ್ನು ಪ್ರಕಟಿಸದಿರುವುದಕ್ಕೆ ಇನ್ನೊಂದು ಪ್ರಮುಖ ಕಾರಣವಾಗಿತ್ತು. ಅಂಬೇಡ್ಕರ್ ಬರಹಗಳನ್ನು ಪ್ರಕಟಿಸಿದರೆ ಸಾಂಪ್ರದಾಯಿಕ ಹಿಂದೂ ಸಮಾಜ ಕುಪಿತಗೊಳ್ಳಬಹುದು ಎನ್ನುವ ಭಯ ಸರ್ಕಾರಗಳಿಗಿತ್ತು.

PC : Goodreads

ಮುಂದೆ ಮಹಾರಾಷ್ಟ್ರ ಸರ್ಕಾರ ಅಂಬೇಡ್ಕರ್ ಬರಹಗಳ ಪ್ರಕಟಣೆಗಾಗಿ ಒಂದು ಸಮಿತಿಯನ್ನು ರಚಿಸಿ, ಸರ್ಕಾರದ ಕಂದಾಯ ಇಲಾಖೆಯ ಅಧಿಕಾರಿಯಾಗಿದ್ದ ವಸಂತಮೂನ್ ಅವರನ್ನು ಪ್ರಕಟಣಾ ಯೋಜನೆಯ ಸರ್ಕಾರದ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿತು. 1978ರಲ್ಲಿ ವಸಂತಮೂನ್ ಅಧಿಕಾರ ಸ್ವೀಕರಿಸಿ ಅಂಬೇಡ್ಕರ್ ಬರಹಗಳ ಪ್ರಕಟಣೆಯ ಕೆಲಸವನ್ನು ಶುರುಮಾಡಿದರು. ಈ ಪ್ರಕಟಣೆಯ ಸಮಿತಿಯಲ್ಲಿ ಪ್ರಕಾಶ್ ಅಂಬೇಡ್ಕರ್, ಬಿ.ಸಿ.ಕಾಂಬ್ಳೆ, ಆರ್.ಎಸ್.ಗವಾಯಿ ಮುಂತಾದ ಆರ್‌ಪಿಐ ಪಕ್ಷದ ನಾಯಕರು ಸೇರಿದಂತೆ 24 ಜನ ಸದಸ್ಯರಿದ್ದರು. ಅಂಬೇಡ್ಕರ್ ಅವರ ಅಗಾಧವಾದ ಬರಹಗಳನ್ನು ಸಂಪಾದಿಸುವ ಮಹತ್ವದ ಕೆಲಸ ವಸಂತಮೂನ್ ಅವರ ಹೆಗಲಿಗೆ ಬಿತ್ತು. ಸರ್ಕಾರದ ಪ್ರತಿನಿಧಿಯಾಗಿ ನೇಮಕಗೊಂಡಿದ್ದರೂ ಅದರಾಚೆಗೆ ವಸಂತಮೂನ್ ಅಂಬೇಡ್ಕರ್ ಅವರ ಅಭಿಮಾನಿಯೂ ಅವರ ಹೋರಾಟ, ಬರಹಗಳನ್ನು ಅಧ್ಯಯನ ಮಾಡಿದ್ದ ಗಂಭೀರ ಅನುಯಾಯಿಯೂ ಆಗಿದ್ದರಿಂದ ಪ್ರಕಟಣೆಯ ಕೆಲಸಕ್ಕೆ ಗಂಭೀರತೆ ಬಂದಿತು.

ಮಹಾರಾಷ್ಟ್ರ ಸರ್ಕಾರ ಅಂಬೇಡ್ಕರ್ ಬರಹಗಳನ್ನು ಪ್ರಕಟಣೆಗಾಗಿ ಶಿಕ್ಷಣ ಇಲಾಖೆಗೆ ವರ್ಗಾಯಿಸುವುದರ ಮೂಲಕ ಮೂವತ್ತು ವರ್ಷಗಳ ನಂತರ ಅಂಬೇಡ್ಕರ್ ಬರಹಗಳು ಹೊರ ಜಗತ್ತಿಗೆ ಪ್ರವೇಶಿಸಲು ಸಂದರ್ಭ ಒದಗಿಬಂತು. ಮೂವತ್ತು ವರ್ಷಗಳ ಕಾಲ ಮುಟ್ಟದೆ, ಅವುಗಳನ್ನು ಸರಿಯಾಗಿ ಶೇಖರಿಸಿಟ್ಟಿರದ ಪರಿಣಾಮ ಹಸ್ತಪ್ರತಿಗಳೆಲ್ಲಾ ಶಿಥಿಲವಾಗಿದ್ದವು. ಅವುಗಳೆಲ್ಲವನ್ನು ಮತ್ತೆ ಕಾಲಾನುಕ್ರಮದಲ್ಲಿ ಜೋಡಿಸುವ ಕೆಲಸವನ್ನು ವಸಂತಮೂನ್ ಪ್ರಾರಂಭಿಸಿದರು. ಮಹಾರಾಷ್ಟ್ರ ಸರ್ಕಾರಕ್ಕೆ ಅಂಬೇಡ್ಕರ್ ಅವರ ’ಬುದ್ಧ ಮತ್ತು ಆತನ ಧಮ್ಮ’ ಕೃತಿಯನ್ನು ಮೊದಲ ಸಂಪುಟವಾಗಿ ತರಬೇಕು ಎನ್ನುವ ಇಚ್ಛೆ ಇತ್ತು. ಆದರೆ ಅಂಬೇಡ್ಕರ್ ಅವರ ಹೋರಾಟ ಮತ್ತು ಚಿಂತನೆಯ ಮೂಲವಾಗಿದ್ದ ಜಾತಿವಿನಾಶದ ಉದ್ದೇಶವನ್ನು ಬಲ್ಲವರಾಗಿದ್ದ ವಸಂತಮೂನ್ ಜಾತಿಯ ಬಗ್ಗೆ ಅಂಬೇಡ್ಕರ್ ಅವರ ಚಿಂತನೆಗಳನ್ನೆ ಮೊದಲ ಸಂಪುಟವಾಗಿ ಹೊರತರುವಲ್ಲಿ ಯಶಸ್ವಿಯಾದರು.

‘Castes in India: Their Mechanism’, ‘Genesis and Development’ ಮತ್ತು ಅಂಬೇಡ್ಕರ್ ಅವರು ತಯಾರಿಸಿ ಪ್ರಕಟಿಸಲಾಗದೇ ಹೋಗಿದ್ದ ಅವರ ಪ್ರಖ್ಯಾತ ಭಾಷಣ ‘Annihilation of Caste’ ಸೇರಿದಂತೆ ಹನ್ನೆರಡು ಪ್ರಬಂಧಗಳನ್ನೊಳಗೊಂಡ ಮೊದಲ ಸಂಪುಟ ’ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು ಸಂಪುಟ -1’ ಹೊರಬಂದಿತು. ವಸಂತಮೂನ್ ಪ್ರಕಟಣೆಯ ಜವಾಬ್ದಾರಿ ಹೊತ್ತ ಮೇಲೆ ಸರ್ಕಾರದ ಅಧಿಕಾರಿಯಂತೆ ಕೆಲಸ ನಿರ್ವಹಿಸದೆ ಅಂಬೇಡ್ಕರ್ ಅವರ ವಿದ್ಯಾರ್ಥಿಯಂತೆ ಪಟ್ಟುಹಿಡಿದು ಪ್ರಕಟಿಸುವ ಕೆಲಸಕ್ಕೆ ಕೈಹಾಕಿದ್ದಕ್ಕೆ ಸರ್ಕಾರ ಅವರನ್ನು ಸಮಿತಿಯಿಂದ ಕೈಬಿಟ್ಟಿತು. ಆದರೆ ದಲಿತ ಹೋರಾಟಗಾರರು, ಬರಹಗಾರರ ಬೆಂಬಲದಿಂದಾಗಿ ಮತ್ತೆ ಸಮಿತಿಗೆ ಸೇರಿದರು. ಈ ಮಧ್ಯೆ ಸವಿತಾ ಅಂಬೇಡ್ಕರ್ 1994ರಲ್ಲಿ ಮೂನ್ ಅವರ ಕಾರ್ಯವೈಖರಿ ಸರಿಯಿಲ್ಲವೆಂದು ಆಗಿನ ಮುಖ್ಯಮಂತ್ರಿ ಶರದ್ ಪವಾರ್ ಅವರಿಗೆ ಪತ್ರ ಬರೆದು ಮೂನ್ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡುವಂತೆ ಕೋರಿದರು. ಇವೆಲ್ಲವುಗಳ ಮಧ್ಯೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮೂನ್ ತಮ್ಮ ಕೆಲಸ ಮುಂದುವರೆಸಿದರು. ಅಂಬೇಡ್ಕರ್ ಸಂಪುಟಗಳು ಒಂದಾದಮೇಲೊಂದರಂತೆ ಬಿಡುಗಡೆಯಾಗಿ ಸಂಚಲನ ಉಂಟುಮಾಡತೊಡಗಿದವು.

1987ರಲ್ಲಿ ಬಿಡುಗಡೆಯಾದ ನಾಲ್ಕನೆ ಸಂಪುಟದಲ್ಲಿರುವ ’ಹಿಂದೂ ಧರ್ಮದ ಒಗಟುಗಳು’ ಭಾಗ ಮಹಾರಾಷ್ಟ್ರದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು. ಅಂಬೇಡ್ಕರ್ ಈ ಕೃತಿಯನ್ನು 1954ರಲ್ಲೆ ಬರೆದು ಪ್ರಕಟಿಸುವ ಪ್ರಯತ್ನ ಮಾಡಿದ್ದರು. ಯಾವ ಪ್ರಕಾಶಕರೂ ಈ ಪುಸ್ತಕವನ್ನು ಪ್ರಕಟಿಸುವುದಿಲ್ಲ ಎನ್ನುವುದನ್ನು ಮನಗಂಡಿದ್ದ ಅಂಬೇಡ್ಕರ್ ಈ ಕೃತಿಯ ಹಸ್ತಪ್ರತಿಯ ನಾಲ್ಕು ಪ್ರತಿಗಳನ್ನು ಇಟ್ಟುಕೊಂಡಿದ್ದರು. ಇದನ್ನು ಪ್ರಕಟಣೆಗೆ ಕೊಟ್ಟರೆ ಪ್ರಕಾಶಕರೋ, ಮುದ್ರಕರೋ ನಾಶಮಾಡಿಬಿಡಬಹುದೆಂಬ ಭಯ ಅಂಬೇಡ್ಕರ್ ಅವರಿಗಿತ್ತು ಎಂದು ರತ್ತು ತಮ್ಮ ಪುಸ್ತಕದಲ್ಲಿ ನೆನಪು ಮಾಡಿಕೊಂಡಿದ್ದಾರೆ. ಅಂಬೇಡ್ಕರ್ ಈ ಪುಸ್ತಕದಲ್ಲಿ ಎರಡು ಫೋಟೋಗಳನ್ನು ಪ್ರಕಟಿಸಲು ಇಚ್ಛಿಸಿದ್ದರು. ಒಂದು ಆಗಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಕಾಶಿಯಲ್ಲಿ ಬ್ರಾಹ್ಮಣರ ಪಾದ ತೊಳೆದ ನೀರನ್ನು ಸೇವಿಸಿದ್ದು, ಇನ್ನೊಂದು ಕಾಶಿಯಲ್ಲಿ ತಮ್ಮ ಸಮುದಾಯದವರು ದೇಶದ ಪ್ರಧಾನಿಯಾದರೆಂದು ಬ್ರಾಹ್ಮಣರು ನಡೆಸಿದ ಸಂಭ್ರಮದ ಯಾಗದಲ್ಲಿ ನೆಹರೂ ಭಾಗವಹಿಸಿದ್ದು. ತಮ್ಮದು ಜಾತ್ಯತೀತ ಪಕ್ಷವೆಂದು ಹೇಳಿಕೊಂಡು ರಾಜಕಾರಣ ಮಾಡುವ ಕಾಂಗ್ರೆಸ್‌ನ ಇಬ್ಬರು ನಾಯಕರು ಹೇಗೆ ಬ್ರಾಹ್ಮಣರ ಹಿತಾಸಕ್ತಿ ಕಾಯುವುದಕ್ಕೆ ಬದ್ಧರಾಗಿದ್ದರು ಎನ್ನುವುದನ್ನು ತೋರಿಸುವುದಕ್ಕೆ ಇವೆರಡನ್ನು ಅಂಬೇಡ್ಕರ್ ಪ್ರಕಟಿಸಬೇಕೆಂದಿದ್ದರೂ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.

ಮುಂದೆ ಮೂನ್ ಈ ಸಂಪುಟವನ್ನು ಪ್ರಕಟಿಸುವಾಗ ಹಲವು ಅಧ್ಯಾಯಗಳು ಅಪೂರ್ಣವಾಗಿರುವುದು ದೊಡ್ಡ ಸವಾಲಾಯಿತು. ಪ್ರಕಟವಾದ ಮೇಲೆ ರಾಮ ಮತ್ತು ಕೃಷ್ಣರ ಭಾಗಗಳಿರುವುದನ್ನು ಹಿಂದೂ ಸಂಘಟನೆಗಳು ಮತ್ತು ಶಿವಸೇನೆ ವಿರೋಧಿಸಿ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ದಲಿತರ ಮೇಲೆ ಹಿಂಸಾಚಾರ ಮಾಡಿದವು. ಶಿವಸೇನೆ ಮೂಲಭೂತವಾದಿ ಪಕ್ಷವಾಗಿದ್ದು ಮುಂಚಿನಿಂದಲೂ ದಲಿತರ ಮೇಲೆ ದೌರ್ಜನ್ಯಗಳನ್ನು ಎಸಗುತ್ತಲೆ ಬಂದಿತ್ತು. ಅದರಲ್ಲೂ ಮರಾಠವಾಡ ವಿಶ್ವವಿದ್ಯಾಲಯಕ್ಕೆ ಅಂಬೇಡ್ಕರ್ ಅವರ ಹೆಸರಿಡಬೇಕು ಎಂದು ’ದಲಿತ್ ಪ್ಯಾಂಥರ್ಸ್’ ನಡೆಸಿದ ಹೋರಾಟದ ಸಂದರ್ಭದಲ್ಲಿ ದೊಡ್ಡ ಹಿಂಸಾಚಾರವನ್ನೆ ನಡೆಸಿತ್ತು. ಶಿವಸೇನೆ ಮತ್ತು ’ದಲಿತ್ ಪ್ಯಾಂಥರ್ಸ್’ ಮಧ್ಯೆ ನಡೆದ ಗಲಭೆಗಳಲ್ಲಿ 19 ಜನ ದಲಿತರು ಸಾವನ್ನಪ್ಪಿದರು.

’ಹಿಂದೂ ಧರ್ಮದ ಒಗಟುಗಳು’ ಭಾಗವನ್ನು ತೆಗೆದುಹಾಕಬೇಕೆಂದು ಶಿವಸೇನೆ ಕರೆ ನೀಡಿದ ಹೋರಾಟಕ್ಕೆ ಪ್ರತಿಯಾಗಿ ಪ್ರಕಾಶ್ ಅಂಬೇಡ್ಕರ್ ಎರಡು ಲಕ್ಷ ಜನರನ್ನು ಸೇರಿಸಿ ದೊಡ್ಡ ರ್‍ಯಾಲಿ ನಡೆಸಿದರು. ಕೊನೆಗೆ ಸರ್ಕಾರ ಹಿಂದೂ ಮೂಲಭೂತವಾದಿಗಳು ಮತ್ತು ದಲಿತ ಸಂಘಟನೆಗಳ ಮನವೊಲಿಸಿ ’ಹಿಂದೂ ಧರ್ಮದ ಒಗಟುಗಳು’ ಇರುವ ಭಾಗದಲ್ಲಿ ’ಈ ಲೇಖನದ ಅಂಶಗಳಿಗೂ ಸರ್ಕಾರಕ್ಕೂ ಸಂಬಂಧವಿಲ್ಲ, ಎಲ್ಲ ಅಭಿಪ್ರಾಯಗಳು ಲೇಖಕರವು’ ಎನ್ನುವ ಅಡಿಟಿಪ್ಪಣಿಯೊಂದಿಗೆ ಪ್ರಕಟಿಸುವುದಾಗಿ ಘೋಷಿಸಿತು. ಸರ್ಕಾರದ ಈ ನಡೆ ಅಂಬೇಡ್ಕರ್ ಕುಟುಂಬ ಮತ್ತು ದಲಿತ ಸಮುದಾಯಗಳಿಂದ ವ್ಯಾಪಕ ಟೀಕೆಗೆ ಒಳಗಾಯಿತು. ವಸಂತಮೂನ್ ಈಗ ಪ್ರಕಟವಾಗಿರುವ ಇಪ್ಪತ್ತೆರಡು ಸಂಪುಟಗಳಲ್ಲಿ ಹದಿನಾರು ಸಂಪುಟಗಳನ್ನು ಪ್ರಕಟಿಸಿದರು. ತಾವು ಸಮಿತಿಗೆ ನೇಮಕಗೊಂಡ ನಂತರ ಸರ್ಕಾರಿ ಸೇವೆಯಿಂದ ನಿವೃತ್ತರಾದರೂ ಸಾಯುವವರೆಗೂ ಅಂಬೇಡ್ಕರ್ ಬರಹಗಳ ಪ್ರಕಟಣೆಯ ಅಧ್ಯಕ್ಷರಾಗಿ ಕೆಲಸ ಮಾಡಿದರು.

ಹಿಂದೂ ಸಂಘಟನೆಗಳು ಮತ್ತು ಶಿವಸೇನೆ ದಲಿತರ ಮೇಲೆ ನಡಸಿದ ಹಿಂಸಾಚಾರ ಖಂಡಿಸಿ ಕರ್ನಾಟಕದ ದಲಿತ ಸಂಘರ್ಷ ಸಮಿತಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿತ್ತು. ಈ ಕೃತಿಯ ’ರಾಮ ಕೃಷ್ಣ’ ಭಾಗವನ್ನು ಲೇಖಕ ಎನ್.ಎಸ್.ಶಂಕರ್ ಕನ್ನಡಕ್ಕೆ ಅನುವಾದಿಸಿದ್ದರು. ಸಂಗಾತಿ ಪ್ರಕಾಶನ ಪ್ರಕಟಿಸಿದ್ದ ಈ ಪುಸ್ತಕದ ಎರಡು ಸಾವಿರ ಪ್ರತಿಗಳು ಮಾರಾಟವಾಗಿದ್ದವು.

ವಸಂತಮೂನ್ ಅವರಿಗೆ ಸರ್ಕಾರ ಕೆಲಸ ಮಾಡಲು ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಿಕೊಡಲಿಲ್ಲ. ಸಮಯಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡದೆ, ಸರಿಯಾಗಿ ಸ್ಪಂದಿಸದೆ ಅವರ ಕೆಲಸ ಸ್ಥಗಿತಗೊಳ್ಳುವಂತೆ ಮಾಡಲಾಯಿತು. ಇವೆಲ್ಲವನ್ನು ಸಹಿಸಿಕೊಂಡು ಅಂಬೇಡ್ಕರವಾದಿ ಚಿಂತಕರು ಪ್ರವರ್ಧಮಾನಕ್ಕೆ ಬರುವುದಕ್ಕಿಂತ ಎಷ್ಟೊ ವರ್ಷಗಳ ಮುಂಚಿತವಾಗಿಯೇ ಅಕೆಡೆಮಿಕ್ ಶಿಸ್ತಿನಿಂದ ಅಂಬೇಡ್ಕರ್ ಸಂಪುಟಗಳನ್ನು ಹೊರತಂದರು. ಅಂಬೇಡ್ಕರ್ ಸಂಪುಟಗಳು ಪ್ರಕಟವಾಗುವಲ್ಲಿ ವಸಂತಮೂನ್ ಅವರ ವೈಯಕ್ತಿಕ ಬದ್ಧತೆ ಬಹಳ ಪ್ರಮುಖ ಪಾತ್ರ ವಹಿಸಿತು.

ಮುಂದೆ ಬಂದ ಸರ್ಕಾರಗಳು ಅದರಲ್ಲೂ ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರ ಅಂಬೇಡ್ಕರ್ ಸಂಪುಟಗಳನ್ನು ಸಿದ್ಧಪಡಿಸಿ ಸಂಪಾದಿಸಬಲ್ಲ ಸಾಮರ್ಥ್ಯ ಇರುವವರನ್ನು ಬಿಟ್ಟು ತಮ್ಮ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವವರನ್ನು ಸಮಿತಿಗೆ ನೇಮಕ ಮಾಡಲು ಪ್ರಾರಂಭಿಸಿದವು. ಅಂಬೇಡ್ಕರ್ ಅವರ ಬರಹಗಳ ಬಗ್ಗೆ ಕೆಲಸ ಮಾಡದೆ ಕೇವಲ ಸದಸ್ಯತ್ವಕ್ಕಾಗಿ ಸರ್ಕಾರದ ಮೇಲೆ ಒತ್ತಡ ತಂದು ಸದಸ್ಯರಾಗುವುದಕ್ಕೆ ಪ್ರಾರಂಭಿಸುವವರ ಸಂಖ್ಯೆ ಹೆಚ್ಚಾಯಿತು. ಅಧಿಕಾರಕ್ಕಾಗಿ ಬಿಜೆಪಿ ಮತ್ತು ಸಂಘಪರಿವಾರದ ಸಖ್ಯ ಬೆಳೆಸುವುದಕ್ಕೆ ಶುರು ಮಾಡಿದ ದಲಿತ ಚಳವಳಿಗಾರರು, ಲೇಖಕರು ಅಂಬೇಡ್ಕರ್ ಸಂಪುಟಗಳ ಪ್ರಕಟಣೆಯ ಮೂಲ ಉದ್ದೇಶವನ್ನೇ ದಾರಿ ತಪ್ಪಿಸಿದರು.

PC : Samyak prakashana

ಬಿಜೆಪಿ-ಶಿವಸೇನೆ ಸರ್ಕಾರ ಬಂದಾಗಲಂತೂ ಅಂಬೇಡ್ಕರ್ ಸಂಪುಟಗಳ ಪ್ರಕಟಣೆಯ ಕೆಲಸ ಮೂಲೆಗುಂಪಾಯಿತು. 2010ರಲ್ಲಿ ಪ್ರಕಟವಾದ ಹೊಸ ಸಂಪುಟವನ್ನು ಗಮನಿಸಿದರೆ ಸರ್ಕಾರಕ್ಕೆ ಮತ್ತು ಸಮಿತಿಯ ಸದಸ್ಯರಿಗೆ ಸಂಪುಟ ಪ್ರಕಟಣೆಯ ಬಗ್ಗೆ ಎಷ್ಟು ಬದ್ಧತೆಯಿದೆ ಎನ್ನುವುದು ಅರ್ಥವಾಗುತ್ತದೆ. ಅಂಬೇಡ್ಕರ್ ಅವರ ಸಚಿತ್ರ-ಜೀವನಚರಿತ್ರೆಯಾಗಿರುವ ಈ ಸಂಪುಟದಲ್ಲಿ ಫೋಟೋಗಳ ವಿವರಗಳು ತಪ್ಪಾಗಿ ಮುದ್ರಿತವಾಗಿರುವುದು, ಏಳುನೂರಕ್ಕೂ ಹೆಚ್ಚು ವ್ಯಾಕರಣ ದೋಷಗಳಿರುವುದು, ಪ್ರಮುಖವಾದ ಘಟನೆಗಳ ಪೋಟೋಗಳಿದ್ದಾಗ್ಯೂ ಅವುಗಳನ್ನು ಹೊರಗಿಟ್ಟಿರುವುದು, ಅಂಬೇಡ್ಕರ್ ಅವರ ಬದುಕಿನ ಕೆಲ ಅಂಶಗಳನ್ನು ತಪ್ಪಾಗಿ, ಕೆಲವು ಕಡೆ ತಿರುಚಿ ಮುದ್ರಿಸಿರುವುದು ಕೇವಲ ಕಣ್ತಪ್ಪಿನಿಂದಲೋ, ಬೇಜವಾಬ್ದಾರಿತನದಿಂದಲೊ ಆಗಿರುವ ಕೆಲಸವಲ್ಲ. ಅಂಬೇಡ್ಕರ್ ಅವರನ್ನು ಜನಕ್ಕೆ ತಲುಪಿಸಬಾರದು ಎನ್ನುವುದಕ್ಕಾಗಿಯೆ ಮಾಡಿರುವ ಉದ್ದೇಶಪೂರ್ವಕ ಕೆಲಸ.

ಇನ್ನು ಅಂಬೇಡ್ಕರ್ ಸಂಪುಟಗಳ ಪ್ರಕಟಣೆಗೆ ಈಗಲೂ ಸರಿಯಾದ ಅನುದಾನ ಬಿಡುಗಡೆ ಮಾಡುತ್ತಿಲ್ಲ, ಸಿಬ್ಬಂದಿಯ ನೇಮಕವಾಗುತ್ತಿಲ್ಲ ಎನ್ನುವ ಆರೋಪಗಳಿವೆ. ಅಂಬೇಡ್ಕರ್ ಅವರ ಕೆಲವು ಮಹತ್ವದ ಕೃತಿಗಳು ಖಾಲಿಯಾಗಿ ವರ್ಷಗಟ್ಟಲೆ ಕಳೆದರೂ ಮಹಾರಾಷ್ಟ್ರ ಸರ್ಕಾರ ಪುನರ್ ಮುದ್ರಣ ಮಾಡುತ್ತಿಲ್ಲ.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾದ ಕೆಲಸಗಳನ್ನು ಮಾಡುತ್ತಾ ಅವರ ಹೆಸರನ್ನು ಬಳಸಿಕೊಂಡು ದಲಿತರ ಓಟು ಪಡೆಯುವುದಕ್ಕೆ ಮಾಡುತ್ತಿರುವ ಪ್ರಯತ್ನಗಳು ದಲಿತರನ್ನು ದಿಕ್ಕು ತಪ್ಪಿಸುತ್ತಿವೆ. ಅಂಬೇಡ್ಕರ್ ಹೆಸರಿನ ಸ್ಮಾರಕ ನಿರ್ಮಾಣಕ್ಕೆ ನೂರಾರು ಕೋಟಿ ವ್ಯಯ ಮಾಡಿ ಅವರ ಆಶಯಗಳೇ ಅಲ್ಲಿ ಕಾಣದಂತೆ ಮಾಡಿರುವ ಉದಾಹರಣೆ ನಮ್ಮ ಕಣ್ಣ ಮುಂದಿದೆ. ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು, ರೋಹಿತ್ ವೇಮುಲನ ಸಾಂಸ್ಥಿಕ ಹತ್ಯೆ, ಊನಾ ಸೇರಿದಂತೆ ಮೊನ್ನೆಮೊನ್ನೆ ನಡೆದ ಹಥ್ರಾಸ್ ದುರ್ಘಟನೆಗಳು ಸಂಭವಿಸಿದಾಗ ಸುಮ್ಮನಿರುವ ನಡೆಗಳು ಈ ಸರ್ಕಾರ ಎಷ್ಟು ಅಂಬೇಡ್ಕರ್ ವಿರೋಧಿ ಎನ್ನವುದನ್ನು ತೋರಿಸುತ್ತದೆ.

ಅಂದ ಹಾಗೆ ಮಹಾರಾಷ್ಟ್ರದಲ್ಲಿ ಪ್ರಸಕ್ತ ಅಧಿಕಾರಕ್ಕೆ ಬಂದಿರುವ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ನೇತೃತ್ವದ ಸರ್ಕಾರ ಈ ಹಿಂದಿನ ಸರ್ಕಾರ ನೇಮಕ ಮಾಡಿದ್ದ ಅಂಬೇಡ್ಕರ್ ಕೃತಿಗಳ ಪ್ರಕಟಣಾ ಸಮಿತಿಯನ್ನು 27 ಜನವರಿ 2020ರಂದು ವಿಸರ್ಜಿಸಿದೆ. ಅಂದರೆ ಹದಿನಾಲ್ಕು ತಿಂಗಳಿನಿಂದ ಈ ಸಮಿತಿ ಅಸ್ತಿತ್ವದಲ್ಲೆ ಇಲ್ಲ! ಸರ್ಕಾರ ಕುಂಟುನೆಪ ಹೇಳದೆ ಸಮಿತಿಯನ್ನು ನೇಮಕ ಮಾಡಬೇಕಿದೆ.

ಅಂಬೇಡ್ಕರ್ ಅವರು ಬರೆದಿರುವ ಎಲ್ಲ ಬರಹಗಳನ್ನು ಸೇರಿಸಿದರೆ 75 ಸಂಪುಟಗಳಾಗಬಹುದು ಎಂಬ ಅಂದಾಜನ್ನು ವಿದ್ವಾಂಸರು ಮಾಡಿದ್ದಾರೆ. ಅಲ್ಲದೆ, ಮರಾಠಿಯಲ್ಲಿ ಅಂಬೇಡ್ಕರ್ ತರುತ್ತಿದ್ದ ಜನತಾ, ಮೂಕನಾಯಕ ಮತ್ತು ಬಹಿಷ್ಕೃತ ಭಾರತ ಪತ್ರಿಕೆಗಳ ಬರಹಗಳು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುವ ಬರಹಗಳು, ಪತ್ರಗಳು ಎಲ್ಲ ಸೇರಿದರೆ 100 ಸಂಪುಟಗಳಾಗಬಹುದು. ಇವೆಲ್ಲವನ್ನು ಸೇರಿಸಿ ಪ್ರಕಟ ಮಾಡಿದರೆ ಒಟ್ಟು 175 ಸಂಪುಟಗಳಾಗಬಹುದು. ಆದರೆ ಈಗ ಪ್ರಕಟವಾಗಿರುವುದು ಕೇವಲ 22 ಸಂಪುಟಗಳು. ಕೇವಲ 22 ಸಂಪುಟಗಳಲ್ಲಿ ಪ್ರಕಟವಾಗಿರುವ ಬರಹಗಳು ಭಾರತವನ್ನು ಅಲುಗಾಡಿಸಿರುವ ಪರಿ ನೋಡಿದರೆ ಸರ್ಕಾರಗಳು ಏಕೆ ಅಂಬೇಡ್ಕರ್ ಬರಹಗಳನ್ನು ಪ್ರಕಟಿಸಲು ಹಿಂದೇಟು ಹಾಕುತ್ತಿವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.

ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳ ಎಲ್ಲ ಸಂಪುಟಗಳು ಪ್ರಕಟವಾಗುವವರೆಗೂ ಈ ಕಾಮಗಾರಿ ಜಾರಿಯಲ್ಲಿರಬೇಕಾಗಿದೆ.

(ವಿಷಯ ನೆರವು: ಕಾರವಾನ್ ಪತ್ರಿಕೆ)

ವಿ.ಎಲ್. ನರಸಿಂಹಮೂರ್ತಿ

ವಿ ಎಲ್ ನರಸಿಂಹಮೂರ್ತಿ
ಬೆಂಗಳೂರಿನ ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಯುವ ಚಿಂತಕ.


ಇದನ್ನೂ ಓದಿ: ಇಸ್ಲಾಂ ಮತ್ತು ಅಂಬೇಡ್ಕರ್‌‌ ಬಗೆಗಿನ ಸುಳ್ಳುಗಳು; ಮಹಾ ಮಾನವತಾವಾದಿಗೆ ‘ಸೂಲಿಬೆಲೆ’ ಮಾಡಿದ ಅವಮಾನ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...