Homeಮುಖಪುಟನಾನಕ್ ಚಂದ್ ರತ್ತುರವರ ’ಬಾಬಾ ಸಾಹೇಬರ ಕೊನೆದಿನಗಳು’

ನಾನಕ್ ಚಂದ್ ರತ್ತುರವರ ’ಬಾಬಾ ಸಾಹೇಬರ ಕೊನೆದಿನಗಳು’

- Advertisement -
- Advertisement -

“ಮಹತ್ತರವಾದ ಕಷ್ಟಗಳೊಡನೆ, ನಾನು ಈ ’ವಿಮೋಚನಾ ರಥ’ವನ್ನು ಇಂದು ನೀವು ಕಾಣುತ್ತಿರುವಲ್ಲಿಗೆ ಎಳೆದು ತಂದಿದ್ದೇನೆ. ಇದರ ದಾರಿಯಲ್ಲಿ ಅಡೆತಡೆಗಳು, ಅಪಾಯದ ಜಾಗಗಳು ಹಾಗೂ ಸಂಕಷ್ಟಗಳು ಬರಬಹುದಾದರೂ ಸಹ ಈ ’ವಿಮೋಚನಾ ರಥ’ವು ಮುಂದೆ ಸಾಗಲಿ ಮತ್ತು ಇನ್ನೂ ಮುಂದೆ ಸಾಗಲಿ. ಒಂದು ವೇಳೆ ನನ್ನ ಜನರು, ನನ್ನ ಅನುಯಾಯಿ ನಾಯಕರು ಈ ’ವಿಮೋಚನಾ ರಥ’ವನ್ನು ಮುಂದೊಯ್ಯಲು ಶಕ್ತರಾಗದಿದ್ದರೆ ಅವರು ಅದನ್ನು ಈ ದಿನ ಎಲ್ಲಿ ಕಾಣುತ್ತಿದೆಯೋ ಅಲ್ಲಿಯೇ ಬಿಟ್ಟುಬಿಡಬೇಕು. ಆದರೆ ಯಾವುದೇ ಸಂದರ್ಭದಲ್ಲೂ, ಅವರು ’ವಿಮೋಚನಾರಥ’ವು ಹಿಂದೆ ಹೋಗಲು ಬಿಡಬಾರದು. ಇದು ನನ್ನ ಎಲ್ಲಾ ಗಂಭೀರತೆಯಿಂದ, ನನ್ನ ಜನರಿಗೆ ನೀಡುತ್ತಿರುವ ನನ್ನ ಸಂದೇಶವಾಗಿದೆ, ಬಹುಶಃ ಕೊನೆಯ ಸಂದೇಶವಾಗಿದೆ. ನನ್ನ ಈ ಮಾತುಗಳನ್ನು ನನ್ನ ಜನ ಖಂಡಿತವಾಗಿಯೂ ಕಡೆಗಣಿಸುವುದಿಲ್ಲ ಎಂದು ನನಗನ್ನಿಸಿದೆ. ಹೋಗು ಅವರಿಗೆ ಹೇಳು, ಹೋಗು ಅವರಿಗೆ ಹೇಳು, ಹೋಗು ಅವರಿಗೆ ಹೇಳು” ಎಂದು ಅವರು ಮೂರು ಬಾರಿ ಪುನರುಚ್ಚರಿಸಿದರು. ಹೀಗೆ ಹೇಳುತ್ತಾ ಕಣ್ಣೀರು ಸುರಿಸುತ್ತಾ ಬಿಕ್ಕಿ ಬಿಕ್ಕಳಿಸಿ ಅತ್ತರು. ಅವರು ಅಷ್ಟೊಂದು ಹತಾಶರಾಗಿದ್ದರು [ಜುಲೈ 31. 1956, ಬಾಬಾಸಾಹೇಬರ ಕೊನೆ ದಿನಗಳು. ಪುಟ. 6, ಮೂಲ: ನಾನಕ್ ಚಂದ್ ರತ್ತು. ಅನುವಾದ: ಡಾ. ವಿಜಯ ನರಸಿಂಹ.ಜೆ.]

ಇದು ಬಾಬಾ ಸಾಹೇಬ ಅಂಬೇಡ್ಕರ್ ತಮ್ಮ ಅವಸಾನಕಾಲ ಸಮೀಪಿಸುತ್ತಿರುವಾಗ ಅವರ ಆಪ್ತ ಸಹಾಯಕ ನಾನಕ್ ಚಂದ್ ರತ್ತು ಅವರ ಮೂಲಕ ತಮ್ಮ ಜನರಿಗೆ ಕೊಟ್ಟ ಕೊನೆಯ ಸಂದೇಶ. ನಾನಕ್ ಚಂದ್ ರತ್ತು ಅವರು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಹದಿನೇಳು ವರ್ಷಗಳ ಕಾಲ ನಿಷ್ಠಾವಂತ ಸಹಾಯಕರಾಗಿ ಮತ್ತು ಆರು ವರ್ಷಗಳ ಕಾಲ ಅವರ ಆಪ್ತ ಕಾರ್ಯದರ್ಶಿಯಾಗಿ ಹಾಗೂ ಆತ್ಮೀಯ ಒಡನಾಡಿಯೂ ಆಗಿ ಅವರ ಕಷ್ಟಸುಖಗಳನ್ನು, ನೋವುನಲಿವುಗಳನ್ನು ಹತ್ತಿರದಿಂದ ಕಂಡವರು. ಆದ್ದರಿಂದಲೇ ಆ ಮೇರು ವ್ಯಕ್ತಿತ್ವದ ಮನಃಸ್ಥಿತಿ, ನಡೆನುಡಿ, ನೋವುನಲಿವು, ಬೇಕುಬೇಡ ಎಲ್ಲವನ್ನೂ ನೇರ ಕಂಡವರಾಗಿ ವಸ್ತುನಿಷ್ಠವಾಗಿ ದಾಖಲಿಸಲು ಅವರಿಗೆ ಸಾಧ್ಯವಾಯಿತು. ಅವರು ಬರೆದ ‘The Last Few Days of Dr.B.R.Ambedkar’ ಎಂಬ ಕೃತಿ ಬಾಬಾ ಸಾಹೇಬರ ಬದುಕಿನ ಕೊನೆಯ ಹಲವು ದುರಂತಗಳನ್ನು ಅನಾವರಣಗೊಳಿಸಿದೆ. ರತ್ತು ಅವರ ಈ ಅಥೆಂಟಿಕ್ ದಾಖಲೆಗಳ ಮೂಲಕ ಅಂಬೇಡ್ಕರ್‌ರವರ ಕನಸು ಕನವರಿಕೆಗಳು, ಅವರ ಮಾನಸಿಕ ಹಂಬಲ ತುಮುಲಗಳು, ಅವರ ದೇಶಪ್ರೇಮ, ದೀನ ಜನರ ಮೇಲಿನ ಅವರ ಪ್ರೀತಿ, ತಮ್ಮನ್ನು ಕಾಣಲು ಬಂದವರಿಗೆ ಅವರು ಹೇಳುತ್ತಿದ್ದ ಮಾತುಗಳು, ಅವರು ಬರೆಯುತ್ತಿದ್ದ ಕಾಗದಪತ್ರಗಳು, ಧಾರ್ಮಿಕ ದೃಷ್ಟಿ, ಸಾಮಾಜಿಕ ನೀತಿ, ವೈಜ್ಞಾನಿಕ ಬುದ್ಧಿ, ಅವರ ಹವ್ಯಾಸಗಳು, ಅಭಿರುಚಿಗಳು, ಸಂತಸದ ಕ್ಷಣಗಳು, ಈ ಎಲ್ಲವನ್ನೂ ಹತ್ತಿರದಿಂದ ಕಂಡು, ಕಂಡದ್ದನ್ನು ಜತನದಿಂದ ದಾಖಲಿಸಿದ್ದಾರೆ. ಈ ದಾಖಲೆಗಳು ಇಲ್ಲವಾಗಿದ್ದರೆ ಬಾಬಾ ಸಾಹೇಬರ ಅಂತಃಕರಣಪೂರ್ಣ ಬದುಕು ಹೇಗಿತ್ತು ಎಂತಿತ್ತು ಎಂಬುದು ನಮಗೆ ತಿಳಿಯುತ್ತಲೇ ಇರಲಿಲ್ಲ.

ಬಾಬಾ ಸಾಹೇಬರು ತಮ್ಮ ಆರೋಗ್ಯವನ್ನು ಕಡೆಗಣಿಸಿ ಅನೇಕ ಒತ್ತಡಗಳಲ್ಲೂ ಶೋಷಿತವರ್ಗದ ಹಿತರಕ್ಷಣೆಗಾಗಿ ಹೋರಾಡಿದ್ದಾರೆ. ‘Buddha and his Dhamma’ ಎಂಬ ಕೃತಿಯನ್ನು ಬರೆದಿದ್ದಾರೆ. ಒಮ್ಮೊಮ್ಮೆ ಬುದ್ಧನಗೆ ನಕ್ಕಿದ್ದರೆ, ಒಮ್ಮೊಮ್ಮೆ ಶೋಷಿತರ ನೆನೆದು ಕಣ್ಣೀರು ಸುರಿಸಿದ್ದಾರೆ. ’ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?’ ಎಂಬಂತೆ ಅವರ ಮೇಲೆ ಪ್ರೀತಿ ಸುರಿಸಿದ್ದಾರೆ. ಮಾನಸಿಕ, ದೈಹಿಕ ಬಾಧೆಗಳಿಂದ ನರಳಿ ಕುಗ್ಗಿದ್ದಾರೆ. ಈ ಎಲ್ಲಾ ಸಂದರ್ಭಗಳಲ್ಲೂ ಅವರು ನಾನಕ್ ಚಂದ್ ರತ್ತು ಅಂಬೇಡ್ಕರ್‌ರನ್ನು ಕಂಡು ಕಣ್ಣೀರು ಸುರಿಸುತ್ತ ’ಇಂತಪ್ಪವರುಂ ಅಳುವುದೊಂದದ್ಭುತಂ’ ಎಂಬ ತೆರದಲ್ಲಿ ಅವರನ್ನು ನೆನೆಯುತ್ತಾ ‘The Last Few Days of Dr.B.R.Ambedkar’ ಎಂಬ ಈ ಕೃತಿಯನ್ನು ರಚನೆ ಮಾಡಿದ್ದಾರೆ. ರತ್ತು ಅವರ ಮೂಕಶೋಕ ಇಲ್ಲಿ ಮಡುಗಟ್ಟಿದೆ. ಇಂಥ ಕೃತಿಯನ್ನು ಕನ್ನಡಕ್ಕೆ ತರಬೇಕೆಂಬ ಅದಮ್ಯ ಆಸೆಯಿಂದ ಡಾ. ವಿಜಯ ನರಸಿಂಹ .ಜೆ ಅವರು ಅನುವಾದಿಸಿದ್ದಾರೆ.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊದಲ ಪತ್ನಿ ಶ್ರೀಮತಿ ರಮಾಬಾಯಿಯವರು ದೀರ್ಘಕಾಲದ ಕಾಯಿಲೆಯಿಂದ ನರಳಿ ಮೇ 27-1935ರಂದು ನಿಧನರಾದರು. ವೃದ್ಧಾಪ್ಯಕ್ಕೆ ಕಾಲಿಡುತ್ತಿದ್ದ ಡಾ.ಅಂಬೇಡ್ಕರ್ ಅವರಿಗೆ ರಮಾಬಾಯಿ ಅವರ ನಿಧನವು ಬಹುದೊಡ್ಡ ಆಘಾತ ಹಾಗೂ ಭರಿಸಲಾಗದ ನಷ್ಟವಾಗಿತ್ತು.
ಮಡದಿಯನ್ನು ಪದೇಪದೇ ನೆನಪಿಸಿಕೊಂಡು ಕಣ್ಣೀರಿಡುತ್ತಿದ್ದರು. ಆದ್ದರಿಂದಲೇ ಅವರು ಮರು ಮದುವೆ ಆಗದಿರಲು ನಿರ್ಣಯಿಸಿದ್ದರು. ಸುಮಾರು ಹದಿನೈದು ವರ್ಷಗಳ ಕಾಲ ಯಾರೊಬ್ಬರೂ ಇಲ್ಲದೆ ಒಂಟಿ ಜೀವನ ಸಾಗಿಸಿದರು. ’ಸಂತೋಷವಾಗಿರಲು ಕಲಿತಿದ್ದೇನೆ, ಹೆಂಡತಿ ಮಕ್ಕಳಿಗಿಂತಲೂ ಪುಸ್ತಕಗಳೇ ನನ್ನ ಸಂಗಾತಿಗಳು’ ಎಂದು ಹೇಳುತ್ತಿದ್ದರು. ಆದರೆ ಅವರ ಕ್ಷೇಮಾಕಾಂಕ್ಷಿ ಅನುಯಾಯಿಗಳು ಮರುಮದುವೆ ಮಾಡಿಕೊಳ್ಳಲು ಒತ್ತಾಯಿಸುತ್ತಲೇ ಇದ್ದರು.

ಹೀಗಿರುತ್ತ, 1947ರ ತರುವಾಯ ಅಂಬೇಡ್ಕರ್ ಅವರ ಆರೋಗ್ಯ ಹದಗೆಡುತ್ತಾ ಹೋಯಿತು. 1948ರಲ್ಲಿ ಕಾಲುನೋವಿನಿಂದ ನರಳುತ್ತಿದ್ದರು. ವರುಷಗಳು ಉರುಳಿದಂತೆ ಅವರ ಆರೋಗ್ಯದಲ್ಲಿ ಮತ್ತಷ್ಟು ಏರುಪೇರುಗಳಾದವು. ಅವರು ಕಾಲು ನೋವಿನಿಂದ ತೀವ್ರ ಪರಿತಪಿಸಿದರು. ಹಿಂದಿನ ತಮ್ಮ ಆರೋಗ್ಯದ, ಯೌವನದ ಆ ದಿನಗಳನ್ನು ನೆನೆದು ಹತಾಶಗೊಳ್ಳುತ್ತಿದ್ದರು. ಇಂಥ ವೃದ್ಧಾಪ್ಯದಲ್ಲಿ ತನ್ನನ್ನು ನೋಡಿಕೊಳ್ಳುವುದಕ್ಕೆ ಸಂಗಾತಿಯೊಬ್ಬಳ ಅವಶ್ಯಕತೆ ಇದೆ ಎಂದೆನಿಸತೊಡಗಿತು. ಇಂಥ ಮನಸ್ಥಿತಿಯಲ್ಲಿ ಅವರು ಬೊಂಬಾಯಿಗೆ ಬಂದು ಡಾ.ಜಿ. ಮಾಲ್ವಂಕರರ ಕ್ಲಿನಿಕ್‌ಗೆ ದಾಖಲಾದರು. ಆ ಕ್ಲಿನಿಕ್‌ನಲ್ಲಿ ಶ್ರೀಮತಿ ಡಾ. ಶಾರದಾ ಕಬೀರ್ ಎಂಬುವವರು ಅಂಬೇಡ್ಕರ್ ಅವರಿಗೆ ಶುಶ್ರೂಷೆ ಮಾಡುತ್ತಿದ್ದರು. ಆ ಮಹಾಪುರುಷನ ವ್ಯಕ್ತಿತ್ವಕ್ಕೆ ಮಾರುಹೋದ ಶಾರದಾ ಕಬೀರ್ ಇಂಥವರ ಶುಶ್ರೂಷೆ ಮಾಡುವುದೊಂದು ಸೌಭಾಗ್ಯವೆಂದು ಭಾವಿಸಿ ಸೇವೆ ಗೈಯ್ಯುತ್ತಿದ್ದರು. ಅಂಬೇಡ್ಕರ್ ಅವರಿಗೆ ಶುಶ್ರೂಷೆ ಮಾಡಲು ಅನುಕಂಪವುಳ್ಳ ಒಬ್ಬ ವೈದ್ಯರು ಬೇಕೆಂದು ತಾವು ಒಂದು ತಿಂಗಳ ಅವಧಿಗೆ ದೆಹಲಿಗೆ ಹೋಗಿರಲು ತಯಾರಿರುವುದಾಗಿಯೂ ಡಾ.ಮಾಲ್ವಂಕರರಿಗೆ
ತಾವೇ ಮನವರಿಕೆ ಮಾಡಿದರು. ಆಗ ಆ ಪ್ರಸ್ತಾಪವನ್ನು ಡಾ.ಮಾಲ್ವಂಕರರು ಡಾ ಅಂಬೇಡ್ಕರ್ ಅವರ ಮುಂದಿಟ್ಟರು.

ಮರುಮದುವೆ

ಏನೇ ಆದರೂ ಡಾ.ಅಂಬೇಡ್ಕರ್ ಇನ್ನೊಂದು ಮದುವೆಗೆ ಒಪ್ಪುವ ವ್ಯಕ್ತಿಯಾಗಿರಲಿಲ್ಲ. ಶ್ರೀಮತಿ ಶಾರದಾ ಕಬೀರ್ ದೆಹಲಿಗೆ ಬಂದು ಒಂದು ತಿಂಗಳು ನನ್ನ ಶುಶ್ರೂಷೆ ಮಾಡುತ್ತೇನೆಂದು ಹೇಳುವುದು ಮೂರ್ಖತನ. ಅವರ ಸೇವೆಯನ್ನು ತಿರಸ್ಕರಿಸುವುದು ನಿಮಗೆ ನಿರಾಸೆ ತರಬಹುದು. ಆದರೆ ಸಾರ್ವಜನಿಕ ಜೀವನದಲ್ಲಿ ನನ್ನ ವ್ಯಕ್ತಿತ್ವ ಒಬ್ಬ ಸನ್ನಡತೆಯ ನಿಷ್ಕಳಂತ ವ್ಯಕ್ತಿಯೆಂಬ ಗೌರವಕ್ಕೆ ಪಾತ್ರವಾಗಿದೆ. ಈ ಕಾರಣಕ್ಕಾಗಿ ನನ್ನ ಶತ್ರುಗಳೂ ನನ್ನನ್ನು ಗೌರವಿಸುತ್ತಾರೆ. ಅದಕ್ಕೆ ಧಕ್ಕೆಯುಂಟಾಗುವಂತೆ ಯಾವ ಕಾರಣಕ್ಕೂ ನಡೆಯಲಾರೆ. ಆಗ ದೇವರೆಂದು ನಂಬಿರುವ ನನ್ನ ಜನರ ನಂಬಿಕೆ ನುಚ್ಚುನೂರಾಗುತ್ತದೆ. ಬಹುಶಃ ನನ್ನ ನಿರ್ಣಯವನ್ನು ಬದಲಿಸಿ ಮದುವೆಯಾಗುವ ನಿರ್ಣಯಕ್ಕೆ ಬಂದಲ್ಲಿ, ಆಗ ಇನ್ನೊಂದು ಮದುವೆ ಆಗಬಹುದೇ ಹೊರತು ಅಲ್ಲೀವರೆಗೆ ಹೆಂಗಸರಿಲ್ಲದ
ಮನೆಯೊಳಗೆ ಒಬ್ಬ ದಾದಿಯನ್ನೋ ಅಥವಾ ಒಬ್ಬ ಪರಿಚಾರಿಕೆಯನ್ನೋ ಇರಿಸಿಕೊಳ್ಳಲು ನಾನು ಒಪ್ಪುವುದಿಲ್ಲ. ನನಗೆ ಒಪ್ಪುವ ಹೆಂಡತಿಯಾಗುವ ಹೆಂಗಸಿಗಾಗಿ ದೀರ್ಘವಾದ ಹುಡುಕಾಟ ಆದರೂ ಚಿಂತೆ ಇಲ್ಲ ಎಂದು ಅವರು ಅವಲೋಕಿಸಿಕೊಳ್ಳುತ್ತಿದ್ದರು.

ಆದರೆ, ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಹೊಯಿತು. ಆಗ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಳ್ಳಲು ಮನಸ್ಸು ಮಾಡಿದರು. ತಮ್ಮ ಆರೋಗ್ಯ ಸುಧಾರಣೆಗೆ ಹಾಗೂ ಸದಾ ಆರೈಕೆಗೆ ಒಬ್ಬ ಹೆಂಗಸಿನ ಅವಶ್ಯಕತೆ ಇದೆ ಎಂಬುವ ನಿರ್ಣಯಕ್ಕೆ ಬರುತ್ತಿದ್ದರು. ಅಲ್ಲದೆ ತಾವು ಹಿಡಿದ ಸಂವಿಧಾನದ ಕರಡು ಕೆಲಸ ಪೂರ್ಣಗೊಳಿಸಲು ತಮ್ಮ ಆರೋಗ್ಯ ಮುಖ್ಯ; ಇಲ್ಲವಾದರೆ ನನ್ನ ಸ್ವಂತ ಜನರೇ ನನ್ನ ಕ್ಷಮಿಸಲಾರರು ಎಂದು ಭಾವಿಸಿ ಮರುಮದುವೆಯ ನಿರ್ಧಾರಕ್ಕೆ ಬಂದರು. ಆದರೆ ವಿದ್ಯಾವಂತೆ, ವೃತ್ತಿಯಲ್ಲಿ ವೈದ್ಯೆ, ಅಡಿಗೆ ಮಾಡಲು ಬರುವಂತ ಹೆಂಗಸನ್ನು ತಮ್ಮ ಸ್ವಂತ ಜನರಲ್ಲಿ ಹುಡುಕಲು ಕಷ್ಟವಿತ್ತು. ಆದುದರಿಂದ ಡಾ.ಜಿ.ಮಾಲ್ವಂಕರರ ಕ್ಲಿನಿಕ್‌ನಲ್ಲಿ ಭೇಟಿ ಮಾಡಿದ್ದ ಸಾರಸ್ವತ ಬ್ರಾಹ್ಮಣ ಜಾತಿಗೆ ಸೇರಿದ ಡಾ. ಮಿಸ್. ಶಾರದಾ ಕಬೀರ್ ಅವರನ್ನೇ ’ತಪ್ಪೋಒಪ್ಪೋ’ ಮದುವೆಯಾಗುವ ಆಶಯವನ್ನು ತಮ್ಮ ಮುಖ್ಯ ಅನುಯಾಯಿಗಳಾದ ದಾದಾ ಸಾಹೇಬ್ ಬಿ.ಕೆ. ಗಾಯಕವಾಡ್ ಅವರಿಗೆ ತಿಳಿಸಿದರು. ಆ ಹದಗೆಟ್ಟ ಆರೋಗ್ಯ ಪರಿಸ್ಥಿತಿಯಲ್ಲೇ ಸ್ವತಂತ್ರ ಭಾರತದ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಅವರು ತಮ್ಮ ಶಕ್ತಿಯನ್ನೆಲ್ಲಾ ಒಗ್ಗೂಡಿಸಿಕೊಂಡು ಕೆಲಸ ಮಾಡಿ ಅಂತಿಮ ಕರಡನ್ನು 1948ರ ಫೆಬ್ರವರಿ ಕೊನೆಯ ವಾರದಲ್ಲಿ ರಾಷ್ಟ್ರಾಧ್ಯಕ್ಷರಿಗೆ ಸಲ್ಲಿಸಿದರು. ಆಗ ಅವರು ತುಂಬಾ ದಣಿದುಹೋಗಿದ್ದರು. ವಿಶ್ರಾಂತಿ ಪಡೆಯಬೇಕೆಂದು ಬಯಸಿದ್ದರು. ಮತ್ತು ಅದೇ ಸಮಯದಲ್ಲಿ ಕೆಲವೇಕೆಲವು ಅನುಯಾಯಿಗಳ ಸಮ್ಮುಖದಲ್ಲಿ, ದೆಹಲಿಯ ಜಿಲ್ಲಾಧಿಕಾರಿಗಳ
ನಿವಾಸದಲ್ಲಿ ಡಾ.ಅಂಬೇಡ್ಕರ್ ಏಪ್ರಿಲ್ 15, 1948ರಂದು ಡಾ.ಶಾರದಾ ಕಬೀರರನ್ನು ವಿವಾಹವಾದರು.

ಆಮೇಲೆ ಅವರು ಶ್ರೀಮತಿ ಸವಿತಾ ಅಂಬೇಡ್ಕರ್ ಎಂದಾದರು. ಮದುವೆಯಾದ ಕೂಡಲೇ ಅಂಬೇಡ್ಕರರ ದಿನನಿತ್ಯದ ಊಟದಲ್ಲಿ ಕೆಲವು ಮಿತಿಗಳನ್ನು ಹಾಕಲಾಯಿತು. ಅವರ ಕಾಯಿಲೆಗೆ ಇವುಗಳೇ ಮೂಲವೆಂದು ವೈದ್ಯರು ಅಭಿಪ್ರಾಯಪಟ್ಟಿದ್ದರು. ಅವರ ಇನ್ನೂ ಗಟ್ಟಿಯಾಗಿದ್ದ ಕೆಲವು ಹಲ್ಲುಗಳನ್ನೂ ಕೀಳಿಸಿ, ಕೃತಕ ಹಲ್ಲಿನ ಸೆಟ್ ಹಾಕಿಸಲಾಯಿತು.

ಆರೋಗ್ಯ ತೀವ್ರವಾಗಿ ಕುಸಿಯತೊಡಗಿತು

ಬಾಬಾಸಾಹೇಬರು ಸ್ವತಂತ್ರ ಭಾರತದ ಪ್ರಥಮ ಕಾನೂನು ಮಂತ್ರಿಯಾಗಿ ಮತ್ತು ಭಾರತ ಸಂವಿಧಾನದ ಕರಡು ರಚಿಸುವ ಬಿಡುವಿಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತಿದ್ದರು. ಅಲ್ಲದೆ All India Scheduled Castes Federation ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಔರಂಗಾಬಾದ್‌ನ ಮಿಲಿಂದ ವಿಶ್ವವಿದ್ಯಾಲಯದ ಅಭಿವೃದ್ಧಿ ಮತ್ತು ಪುಸ್ತಕಗಳ ರಚನೆಯಲ್ಲಿ ಸಹ ತೊಡಗಿಸಿಕೊಂಡಿದ್ದರು. ಸತತ ಅಧ್ಯಯನ ಹಾಗೂ ಬರವಣಿಗೆ ಮಾಡುತ್ತಿದ್ದ ಅವರಿಗೆ ಕಣ್ಣಿನ ದೃಷ್ಟಿಯೂ ಸಹ ಮಂದವಾಗತೊಡಗಿತು. ವೈದ್ಯರು ನಿರ್ಬಂಧಿಸಿದ್ದರೂ ಕೂಡ The Hindu Code Bill ರಚನೆಯಲ್ಲಿ ಮಗ್ನರಾಗಿದ್ದರು. ಈ ಓದು ಮತ್ತು ಬರಹ ಕಾರಣದಿಂದ ಅವರ ಕಣ್ಣಿನ ದೃಷ್ಟಿ ಮತ್ತೂ ಕ್ಷೀಣಿಸುತ್ತಿತ್ತು. ಅದರಿಂದ ಅಂಬೇಡ್ಕರ್ ತುಂಬ ದುಃಖಿತರೂ ಖಿನ್ನರೂ ಆಗಿರುತ್ತಿದ್ದರು. ’ನಾನು ದೃಷ್ಟಿ ಕಳೆದುಕೊಂಡು ಮುಂದೆ ಓದುವ-ಬರೆಯುವ ಮತ್ತು ನನ್ನ ಮಹತ್ವಾಕಾಂಕ್ಷೆಯ ಪುಸ್ತಕಗಳನ್ನು ರಚಿಸುವ ಶಕ್ತಿ ಕಳೆದುಕೊಂಡರೆ ನಾನು ಬದುಕಿಯೂ ವ್ಯರ್ಥ ಎಂದು ದುಃಖಿಸುತ್ತಿದ್ದರು.

1950ರ ತರುವಾಯ ತಮ್ಮ ಆರೋಗ್ಯ ತಪಾಸಣೆಗೆ ಹಾಗೂ ತಾವು ಅಲ್ಲಿ ಸ್ಥಾಪಿಸಿದ ಜನತಾ ಶಿಕ್ಷಣ ಸಂಸ್ಥೆ ಕಾರ್ಯಕಲಾಪ ವಿಚಾರಣೆಗಾಗಿಯೂ ಮುಂಬೈಗೆ ಆಗಾಗ ಭೇಟಿ ನೀಡುತ್ತಿದ್ದರು. ಕಣ್ಣಿನ ವೈದ್ಯರ ಚಿಕಿತ್ಸೆಯಿಂದ ದೃಷ್ಟಿ ಚೇತರಿಕೆ ಆಗದೆ ಹೋದಾಗ ಹಕೀಮರಿಂದ ಔಷಧೋಪಚಾರ ಪಡೆಯಲು ಅವರು ಹತಾಶ ಪ್ರಯತ್ನ ನಡೆಸುತ್ತಿದ್ದರು. ಆದರೆ ಅವರ ಹೆಂಡತಿ ಸವಿತಾ ದುಬಾರಿ ಖರ್ಚಾದರೂ ಪ್ರತಿಸಲಕ್ಕೂ ಡಾ.ಮಾಲ್ವಂಕರರನ್ನೇ ಬಾಂಬೆಯಿಂದ ಕರೆಸಿಕೊಳ್ಳುತ್ತಿದ್ದರು. ಅಂಬೇಡ್ಕರ್ ಅನ್ಯ ವೈದ್ಯರಿಂದ ಔಷಧೋಪಚಾರ ಮಾಡಿಸಿಕೊಳ್ಳಲು ಅನುಮತಿ ನೀಡಲಿಲ್ಲ. ಆದರೆ ಆ ಮುಂಬೈ ಡಾಕ್ಟರರ ಭಾರಿ ಭರವಸೆಯ ಔಷಧೋಪಚಾರಗಳಿಂದಲೂ ಅವರ ಆರೋಗ್ಯ ಸುಧಾರಿಸಲಿಲ್ಲ. ಬದಲಾಗಿ ಅದು ಇನ್ನೂ ಅಪಾಯಕಾರಿಯಾಗಿ ಪರಿಣಮಿಸಿತು. ತೂಕ ಕಳೆದುಕೊಂಡರು; ಖಿನ್ನರಾದರು; ಸೊರಗಿಹೋದರು. ಅವರ ಡ್ರೆಸ್‌ಗಳು ದೊಗಲೆಯಾಗತೊಡಗಿದವು. ಕೈಕಾಲು ಕೃಶವಾಗಿ ಅವರ ಭಾರೀತೂಕವನ್ನು ಹೊರಲು ಅಶಕ್ತವಾದವು. ಜನವರಿ 1955ರಿಂದ ಅವರ ಆರೋಗ್ಯವು ಆತಂಕ ಉಂಟಾಗುವಷ್ಟು ಹದಗೆಟ್ಟಿತು. ದೈನಂದಿನ ಶೌಚ ಕಾರ್ಯಗಳಿಗೂ ಅನ್ಯರ ಸಹಾಯ ಬೇಕಾಯಿತು. ಉಣ್ಣಲು ತಿನ್ನಲು ಮನಸ್ಸಿಲ್ಲದೆ ಸದಾ ಮಲಗಿರುತ್ತಿದ್ದರು.

ಬಾಬಾಸಾಹೇಬರಿಗೆ ಉಸಿರಾಟದ ತೊಂದರೆ ಬಾಧಿಸತೊಡಗಿತು. ಆಕ್ಸಿಜನ್ ಕೊಡಲಾಗುತ್ತಿತ್ತು. ಆಶಕ್ತ ಕಾಲುಗಳಿಗೆ ಚಳಿಗಾಲದಲ್ಲಿ ವಿದ್ಯುತ್ ಶಾಖ ಚಿಕಿತ್ಸೆ ನೀಡಲಾಯಿತು. ಒಂದು ಕೈಯ್ಯಲ್ಲಿ ಕೋಲೂರಿ ಆಪ್ತ ಸಹಾಯಕರಾದ ನಾನಕ್ ಚಂದ್ ರತ್ತು ಅವರ ಹೆಗಲಿಗೆ ಇನ್ನೊಂದು ಕೈಯಿಟ್ಟು ನಡೆದಾಡುತ್ತಿದ್ದರು. ಡಾ.ಅಂಬೇಡ್ಕರರ ಆರೋಗ್ಯ ತಪಾಸಣೆಗೆ ವೈದ್ಯಕೀಯ ಸಮಿತಿಯನ್ನು ಸ್ಥಾಪಿಸಬೇಕೆಂದು ಉತ್ತರ ರಾಜ್ಯಗಳ ಅವರ ನಿಕಟವರ್ತಿಗಳ ಆಸೆ ಫಲಕಾರಿಯಾಗದೆ ಉಳಿದುಬಿಟ್ಟಿತು. ಇದರಿಂದ ದಾದಾ ಸಾಹೇಬ್ ಬಿ.ಕೆ.ಗಾಯಕವಾಡ್ ಮುಂತಾದವರಿಗೆ ತೀವ್ರ ನಿರಾಶೆಯಾಯಿತು. ಅವರ ಆಲೋಚನೆಯನ್ನು ಅವರ ಮಡದಿಯೂ ಪುರಸ್ಕರಿಸಲಿಲ್ಲ. ಅವರಿಗೆ ಚಿಕಿತ್ಸೆ ನೀಡಲು ಅವರ ನಿಕಟವರ್ತಿ ಕೃಷ್ಣಮೂರ್ತಿ ಜೊತೆಯಲ್ಲಿ ವಿದೇಶದಿಂದ ಬಂದಿದ್ದ Madame F.Bastien ಎಂಬ ಫ್ರೆಂಚ್ ಮಹಿಳೆ ನಿರಾಶಳಾಗಿ ಹಿಂದಿರುಗಿ ಹೋಗಬೇಕಾಯ್ತು. ಹೀಗಾಗಿ ಅಂಬೇಡ್ಕರರು ಒಂದು ದೊಡ್ಡ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದರು. ಬರುಬರುತ್ತ ಊಟದ ರುಚಿಯೊಂದಿಗೆ ಬದುಕಿನ ರುಚಿಯನ್ನೂ ಕಳೆದುಕೊಂಡುಬಿಟ್ಟರು. ಅವರನ್ನು ನೋಡಲು ಯಾರು ಬಂದರೂ ’ಸಾವು ಅವರನ್ನು ಸಮೀಪಿಸುತ್ತಿದೆ’ ಎಂದು ಮರುಕಪಡುತ್ತಿದ್ದರು. ಅವರೊಂದು ನಂದಿ ಹೋಗುತ್ತಿರುವ ಪ್ರತಿಭಾಜ್ವಾಲೆ ಎಂದು ಮಾತಾಡಿಕೊಳ್ಳುತ್ತಿದ್ದರು. ಇಷ್ಟಾಗಿಯೂ ಸಕ್ಕರೆ ಕಾಯಿಲೆಯಿಂದ ನಿತ್ರಾಣರಾದರೂ ಅಂಬೇಡ್ಕರ್ ಅವರ ಇಚ್ಛಾಶಕ್ತಿ ಮಾತ್ರ ಅದಮ್ಯವಾಗಿತ್ತು. ಅದ ಕಂಡುಬಂದವರು ಬೆರಗಾಗುತ್ತಿದ್ದರು. ಮರುಮದುವೆಯಾದರೆ ತನ್ನ ಆರೋಗ್ಯ ಸರಿಹೋಗುತ್ತದೆ; ಅದರಿಂದ ತನ್ನ ಮಹತ್ವಾಕಾಂಕ್ಷೆಯ ಕೆಲವು ಪುಸ್ತಕಗಳನ್ನು ಬರೆದುಮುಗಿಸಬಹುದು; ತುಳಿಯಲ್ಪಟ್ಟ ತನ್ನ ಸೋದರರಿಗೆ ಭವಿಷ್ಯ ರೂಪಿಸಬಹುದು; ದೇಶ ವಿದೇಶಗಳಲ್ಲಿ ಬೌದ್ಧ ಧರ್ಮವನ್ನು ಹರಡಬಹುದು ಎಂಬೆಲ್ಲಾ ಅವರ ಮಹತ್ವಾಕಾಂಕ್ಷೆ ಕನಸಾಗೇ ಉಳಿಯಿತು. ಇದು ಅವರನ್ನು ಅಲ್ಲಾಡಿಸಿಬಿಟ್ಟಿತ್ತು. ಎಷ್ಟೋ ಬಾರಿ ಅದನ್ನು ನೆನೆದು ಕಣ್ಣೀರಿಡುತ್ತಿದ್ದರು.

ಇಂಥ ಸನ್ನಿವೇಶದಲ್ಲಿ ಬಾಬಾಸಾಹೇಬರ ಆಪ್ತರಲ್ಲಿ ಒಬ್ಬರಾದ ಕೃಷ್ಣಮೂರ್ತಿ ಎಂಬ ಬ್ರಾಹ್ಮಣ ವ್ಯಕ್ತಿ ಮೇಡಂ ಬ್ಯಾಸ್ಟಿನ್ ಅರವರನ್ನು ಕರೆತಂದು ಅಂಬೇಡ್ಕರ್ ಅವರನ್ನು ತೋರಿಸಲು ಪದೇಪದೇ ಪ್ರಯತ್ನಪಡುತ್ತಲೇ ಇದ್ದರು. ನಾನಕ್‌ಚಂದ್‌ರತ್ತು ಅಂಬೇಡ್ಕರ್ ಬಳಿ ಈ ವಿಚಾರವನ್ನು ಹೇಳಿದಾಗ ’ಅವರೂ ಸಹ ಬರಲಿ; ಪ್ರಯತ್ನಿಸಲಿ’ ಎಂದಿದ್ದರು. ಒಂದು ದಿನ ಕೃಷ್ಣಮೂರ್ತಿಯವರು ಡಾ.ಬ್ಯಾಸ್ಟಿನ್ ಜೊತೆಗೆ ಬಂದು ಅವರೊಂದಿಗೆ ದೀರ್ಘ ಚರ್ಚೆ ನಡೆಸಿದರು. ಆ ಚಿಕಿತ್ಸೆ ಬೆನ್ನುಹುರಿಗೆ ನೀಡುವ ’ಕಾಸ್ಮಿಕ್ ಶಕ್ತಿ’ Cosmic Radiationಗೆ
ಸಂಬಂಧಿಸಿತ್ತು. ಅದರಲ್ಲಿ ಭರವಸೆ ಇದ್ದ ಡಾ.ಅಂಬೇಡ್ಕರ್ ಆ ಮಾತುಕತೆಯಿಂದ ಕೊಂಚ ಗೆಲುವಾಗಿ ಕಂಡರು. ಮತ್ತು ಚಿಕಿತ್ಸೆ ಪ್ರಾರಂಭಿಸಲು ಮೇಡಂ ಬ್ಯಾಸ್ಟಿನ್ ಅವರಿಗೆ ಅನುಮತಿ ನೀಡಿದರು.

ತಡೆಯೊಡ್ಡಲಾಯಿತು

ಆದರೆ, ಮೇಡಂ ಬ್ಯಾಸ್ಟಿನ್‌ರವರು ಡಾ.ಅಂಬೇಡ್ಕರ್ ಅವರೊಡನೆ ಮಾತುಕತೆ ನಡೆಸುತ್ತಿರುವಾಗಲೇ ಮಾರುಕಟ್ಟೆಗೆ ಹೋಗಿದ್ದ ಶ್ರೀಮತಿ ಸವಿತಾ ಅಂಬೇಡ್ಕರ್‌ರವರು ವಾಪಸ್ಸು ಬಂದರು. ಅವರು ಆ ಫ್ರೆಂಚ್ ಮಹಿಳೆಗೆ ಭೇಟಿಮಾಡಲು ಅನುಮತಿ ನೀಡಿರಲಿಲ್ಲ. ಅವರು ಕೋಪಗೊಂಡರು. ಅನಗತ್ಯವಾಗಿ ಮೇಡಂ ಬ್ಯಾಸ್ಟಿನ್‌ರವರನ್ನು ನಿಂದಿಸಿ ಕಟು ನುಡಿಗಳನ್ನಾಡಿದರು. ಸವಿತಾರವರ ಈ ಅನಾದರಣೆಯನ್ನು ಗ್ರಹಿಸಿ ಬಂದಿದ್ದವರು ತಾವೇ ನಿರ್ಗಮಿಸಿದರು. ಮೇಡಂ ಬ್ಯಾಸ್ಟಿನ್ ಅವರಿಗೆ ಆದ ಅವಮಾನವನ್ನು ಬಾಬಾಸಾಹೇಬರಿಗೆ ಒಪ್ಪಿಸಲು ಕೃಷ್ಣಮೂರ್ತಿಯವರು ಉಜಗರ್‌ರಾಮ್ ಎಂಬುವರೊಂದಿಗೆ ಆನಂತರ ಬಂದರು. ಆದರೆ
ಅವರನ್ನು ಬಂಗಲೆಯ ಆವರಣದೊಳಗೂ ಬಿಡದಂತೆ ತಡೆಯಲಾಯಿತು.

ಆದರೂ ಡಾ.ಬ್ಯಾಸ್ಟಿನ್ ಅವರಿಂದ ಅಂಬೇಡ್ಕರರಿಗೆ ಚಿಕಿತ್ಸೆ ಮಾಡಿಸುವ ಪ್ರಯತ್ನ ಮಾಡಿದರು ಕೃಷ್ಣಮೂರ್ತಿ. ಆದರೆ ಅವರ ಯಾವ ಪ್ರಯತ್ನವೂ ಫಲಿಸದೆ ನಿರಾಶೆಯಿಂದ ಹೊರಟುಹೋದರು. ಇದರಿಂದ ಬಹಳ ನೊಂದ ಅವರು ಮಾರ್ಚ್ 22, 1956ರಂದು ಬಾಬಾ ಸಾಹೇಬರಿಗೆ ಒಂದು ದೀರ್ಘ ಪತ್ರವನ್ನು ಬರೆದು ’ನಿಮ್ಮ ಕಾಯಿಲೆಗಳಿಗೆ ಮತ್ತು ದುಃಸ್ಥಿತಿಗೆ ಪ್ರಾಯಶಃ ನಿಮ್ಮ ಮಡದಿಯೇ ಮೂಲ ಕಾರಣ’ವೆಂದು ದೂರಿದರು. ಅದರಲ್ಲಿ “ಡಾ. ಅಂಬೇಡ್ಕರ್‌ರನ್ನು ಬುಟ್ಟಿಗೆ ಹಾಕಿಕೊಂಡು ಅವರ ಆಸ್ತಿಯನ್ನು ಲಪಟಾಯಿಸಲು ಬಂದಿರುವ ಆ ಫ್ರೆಂಚ್ ಮಹಿಳೆಯ ಏಜೆಂಟರು ನೀವೆಂದು ನಮ್ಮನ್ನೂ ಜರಿದರು. ಆದರೆ ಶೋಷಿತರ ಸೇವೆಗೆ ಕಂಕಣಬದ್ಧರಾಗಿ ನಿಂತಿರುವ ನಿಮಗೆ ನನ್ನ ಕಾಲುಗಳನ್ನೇ ಕತ್ತರಿಸಿ ನಿಮಗೆ ಕೊಡಲು ಹರ್ಷಿಸುತ್ತೇನೆ. ಇದರಿಂದಲಾದರೂ ಭಾರತದ ಜನತೆಗೆ ಮಹತ್ವದ ಸೇವೆ ಸಲ್ಲಿಸಿರುವ ಒಬ್ಬ ಮಹಾವ್ಯಕ್ತಿಗೆ ಸೇವೆ ಮಾಡಿದ ತೃಪ್ತಿ ನನಗೆ ಸಿಗುತ್ತದೆ” ಎಂದು ನೊಂದುಕೊಂಡಿದ್ದರು. ಮತ್ತೊಮ್ಮೆ ಪತ್ರ ಬರೆದು “ಕಾಲುಗಳ ನೋವಿನಿಂದ ನೀವು ಒದ್ದಾಡುವುದನ್ನು ನೋಡಿದರೆ ನನ್ನ ಹೃದಯವೇ ಕಿತ್ತುಬರುತ್ತದೆ” ಎಂದು ದುಃಖಿಸಿದರು. ಅಷ್ಟೇ ಅಲ್ಲ ಇನ್ನೊಮ್ಮೆ ’ದುರದೃಷ್ಟವಶಾತ್ ನಿಮ್ಮ ಸಂಕಷ್ಟದ ಸ್ಥಿತಿಗೆ ನಿಮ್ಮ ಜನರೇ ಅದರಲ್ಲೂ ನಿಮ್ಮ ಹೆಂಡತಿಯೇ ಮೂಲಕಾರಣ’ ಎಂದು ಆಕ್ಷೇಪಿಸಿ ಬರೆದರು. ಇದರ ಜೊತೆಗೆ ಭೇಟಿಗೆ ಪ್ರಯತ್ನಿಸಿದವರಿಂದ ಇನ್ನೂ ಹಲವಾರು ದೂರವಾಣಿ ಕರೆಗಳು ಬರುತಿದ್ದವು. ಅಚ್ಚರಿಯೆಂದರೆ ಶ್ರೀಮತಿ ಸವಿತಾ ಈ ಯಾವುದನ್ನೂ ಅಂಬೇಡ್ಕರ್ ಅವರ ಗಮನಕ್ಕೆ ತಾರದೆ ತಡೆದುಬಿಟ್ಟದ್ದು. ಅಷ್ಟೇ ಅಲ್ಲ, ಆಮೇಲೆ ಅವರು ಒಂದು ಕ್ಷಣವೂ ಮನೆ ಬಿಟ್ಟು ಕದಲದಂತೆ ಉಳಿದರು.

ಯುಗಪುರುಷನ ಅವಸಾನ

ಈ ಎಲ್ಲ ಬೆಳವಣಿಗೆಯನ್ನು ಮನಗಂಡ ಮೇಡಂ ಬ್ಯಾಸ್ಟಿನ್ ನಿರಾಶರಾಗಿ ಫ್ರಾನ್ಸಿಗೆ ಹಿಂದಿರುಗಿದರು. ಆದರೆ ಈ ಯಾವುದನ್ನೂ ಅರಿಯದ ಡಾ.ಅಂಬೇಡ್ಕರ್ ಈ ಬಗ್ಗೆ ರತ್ತು ಬಳಿ ವಿಚಾರಿಸಿದರು. ಆದರೆ ಅವರಿಗೆ ಸತ್ಯವು ತಿಳಿಯಲಿಲ್ಲ. ಅಷ್ಟಾದರೂ ರತ್ತು ಅಂಬೇಡ್ಕರ್ ಅವರಿಗೆ ನೀಡಲ್ಪಟ್ಟ ಹಾರಿಕೆಯ ಉತ್ತರದಿಂದ ಏನೋ ತಪ್ಪಾಗಿರುವುದನ್ನು ಗ್ರಹಿಸುತ್ತಾ, ಅತೃಪ್ತಗೊಂಡರು, ಕೋಪಗೊಂಡರು. ಅಂಬೇಡ್ಕರರ ಆರೋಗ್ಯವು ಕ್ಷೀಣಿಸುತ್ತಿತ್ತು. ಸಾವು ಅವರನ್ನು ಸುತ್ತುವರಿದಿದೆಯೆಂದು ನೋಡಲು ಬಂದವರು ಮರುಗುತ್ತಿದ್ದರು. ಮತ್ತು ಅವರ ಅದ್ಭುತವಾದ ಇಚ್ಛಾಶಕ್ತಿ ಸಾಮರ್ಥ್ಯಗಳು ಅಖಂಡವಾಗಿದ್ದುದನ್ನು ಕಂಡು ಅಚ್ಚರಿಗೊಳ್ಳುತ್ತಿದ್ದರು. ಕೊನೆಗೂ ಕಾಯಿಲೆಯಿಂದ ನರಳುತ್ತಲೇ ಆ ಮಹಾಪುರುಷ ಡಿಸೆಂಬರ್ 6, 1956ರಂದು ಕೊನೆಯುಸಿರೆಳೆದರು.

ಅಂತಿಮ ಯಾತ್ರೆ

ಬಾಂಬೆಯಲ್ಲಿರುವ People Education societyಯ ಮುಖಾಂತರ ಡಾ. ಅಂಬೇಡ್ಕರರ ಒಬ್ಬನೇ ಮಗನಾದ ಯಶವಂತರವರಿಗೆ ಸ್ವತಃ ನಾನಕ್ ಚಂದ್ ರತ್ತು ವಿಷಯ ತಿಳಿಸಿದರು ಮತ್ತು ಅವರ ಸಮೀಪವರ್ತಿಗಳಿಗೂ ತಿಳಿಸಿದರು. ಡಾ. ಅಂಬೇಡ್ಕರರ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ರಾಜಧಾನಿಯಲ್ಲಿ ಹರಡಿತು. ಅವರ ಸಮೀಪವರ್ತಿಗಳಾದ ಸೋಹನ್ ಲಾಲ್ ಶಾಸ್ತ್ರಿ ಮತ್ತು ಎಂ.ಆರ್ ಭಾರದ್ವಾಜ್ ಅವರು ತಡಮಾಡದೇ ನಂ.26 ಆಲಿಪುರ ರಸ್ತೆ ತಲುಪಿದರು.

ಪತ್ರಿಕಾ ಬಾತ್ಮೀದಾರರಿಂದ ಸಾರ್ವಜನಿಕರಿಂದ ಟೆಲಿಫೋನ್‌ಕರೆಗಳ ಮಹಾಪೂರವೇ ಹರಿಯಿತು.
ಕರೆಗಂಟೆಗಳು ರಿಂಗಣಿಸುತ್ತವೇ ಹೋದವು. ದೆಹಲಿಯಲ್ಲಿ ಅಂಧಕಾರ ಕವಿಯಿತು. ಶೋಕತಪ್ತ ಜನಸಾಗರ ಬಂಗಲೆಯತ್ತ ಹರಿಯಿತು. ವಿಸ್ತಾರವಾದ ಹುಲ್ಲುಗಾವಲು ತುಂಬಿಹೋಯಿತು. ತನ್ನ ಸಚಿವ ಸಂಪುಟದ ಅಮೂಲ್ಯ ರತ್ನವೆಂದು ಪರಿಚಯಿಸಿಕೊಳ್ಳುತ್ತಿದ್ದ ಪ್ರಧಾನಿ ಪಂಡಿತ ಜವಾಹರ ಲಾಲ್ ನೆಹರು ಕೂಡಲೇ ಬಂದರು. ಪಾರ್ಥಿವ ಶರೀರದ ಮೇಲೆ ಹೂವಿನ ಹಾರವನ್ನಿಟ್ಟರು. ಮತ್ತು ಅಂತ್ಯ ಸಂಸ್ಕಾರದ ವ್ಯವಸ್ಥೆ ಬಗ್ಗೆ ವಿಚಾರಿಸಿದರು.

ಶೋಕಸಾಗರದಲ್ಲಿ ಬಾಂಬೆ

ಡಾ.ಅಂಬೇಡ್ಕರ್ ಪಾರ್ಥಿವ ಶರೀರವನ್ನು ಹೊತ್ತಿದ್ದ ಇಂಡಿಯನ್ ಏರ್‌ಲೈನ್ಸ್‌ನ ಡಕೋಟ ವಿಮಾನ ಡಿಸೆಂಬರ್ 7 ರಂದು ಮುಂಜಾನೆ 2 ಗಂಟೆಗೆ ಬಾಂಬೆಯ ಸಾಂತಕೃಜ್ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಅಲ್ಲಿ ನೆರೆದಿದ್ದ ದುಃಖಭರಿತ ಜನ ಬಿಕ್ಕಿಬಿಕ್ಕಿ ಅತ್ತರು. ಅಲ್ಲಿಂದ ಸುಮಾರು ಒಂದು ಲಕ್ಷ ಶೋಕತಪ್ತ ಜನರ ಮೆರವಣಿಗೆ ಡಾ. ಅಂಬೇಡ್ಕರರ ವಸತಿಗೃಹವಾದ ರಾಜಗೃಹಕ್ಕೆ ತಲುಪಿತು. ಆ ದಿನ ಬೆಳಿಗ್ಗೆ ದಾದರ್‌ನತ್ತ ಹೋಗುವ ಎಲ್ಲ ರಸ್ತೆಗಳೂ ಜನ ಸಾಗರದಿಂದ ತುಂಬಿತುಳುಕಿದವು. ರೈಲು, ಬಸ್ಸು, ಟ್ರಾಮ್ ಗಾಡಿಗಳು ಎಲ್ಲವೂ ದಾದರ್ ಕಡೆಗೇ. ಕಾಲುನಡಿಗೆಯಲ್ಲೂ ’ತುಳಿತಕ್ಕೊಳಗಾಗಿದ್ದ ಜನ ಸಾಗರದಂತೆ ಹರಿದುಬಂದರು’. ಇಂತಹ ಸಾರ್ವಜನಿಕ ಶೋಕದ ದೃಶ್ಯಗಳನ್ನು ಈ ನಗರವು ಮಹಾತ್ಮ ಗಾಂಧಿಯವರ ಮರಣದ ನಂತರ ಕಂಡಿರಲೇ ಇಲ್ಲ. ಆ ದೃಶ್ಯ ವರ್ಣಿಸಲು ಪದಗಳು ಸಾಲವು ಎಂದು ಸುದ್ದಿ ಮಾಧ್ಯಮಗಳು ಬರೆದವು.

ಅಂಬೇಡ್ಕರರ ಪಾರ್ಥಿವ ಶರೀರದ ಪಾದ ಸ್ಪರ್ಶಿಸಲೋ ಎಂಬಂತೆ ಜನರು ತಮ್ಮ ಕೈಗಳನ್ನು ಎತ್ತಿ ಹೊರ ಚಾಚುತ್ತಿದ್ದರು. ಬಾಂಬೆ ನಗರದ ಎಲ್ಲಾ ಮಿಲ್ಲು ಕಾರ್ಖಾನೆಗಳು ಮುಚ್ಚಿದ್ದವು. ನಗರ ಕಾರ್ಮಿಕರೆಲ್ಲಾ ಅಂತಿಮ ಯಾತ್ರೆಗೆ ಬಂದು ಸೇರಿಕೊಂಡರು. 7.12.1956ರಂದು ರಾಜಗೃಹದಿಂದ ಸಮುದ್ರ ದಡದ ಶವದಹನ ಸ್ಥಳಕ್ಕೆ ನಡೆದ ಶವಯಾತ್ರೆ ಹಾಗೂ ಶ್ರದ್ಧಾಂಜಲಿಯಲ್ಲಿ ಸುಮಾರು ಐದು ಲಕ್ಷಕ್ಕೂ ಮಿಗಿಲಾದ ಜನಸಂದಣಿ ನೆರೆದಿತ್ತು. ಆ ದಲಿತ ಸೂರ್ಯನ ಅವಸಾನದಿಂದ ದುಃಖಿಸುತ್ತಿರುವ ಜನರ ಸಂಕಟವನ್ನು ನೋಡಲಾರದೆ ಸೂರ್ಯನೂ ಅಸ್ತಮಿಸಿದ. ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಬೌದ್ಧ ಭಿಕ್ಷುಗಳು ಹಾಗೂ ಮಹಾಜನತೆ ’ಬುದ್ದಂ ಸರಣಂ ಗಚ್ಛಾಮಿ, ಧರ್ಮಂ ಸರಣಂ ಗಚ್ಛಾಮಿ. ಸಂಘಂ ಸರಣಂ ಗಚ್ಛಾಮಿ’ ಎಂಬ ಶ್ಲೋಕಗಳನ್ನು ಉಚ್ಚರಿಸುತ್ತಿದ್ದರು. ದೇಶವಿದೇಶಗಳಿಂದ ಬೌದ್ಧ ಭಿಕ್ಷುಗಳು ಆಗಮಿಸಿದ್ದರು. ಶೋಷಿತ ವರ್ಗಗಳ ಮಹಾನಾಯಕನಾದ ಡಾ. ಅಂಬೇಡ್ಕರರ ಅಂತಿಮ ದರ್ಶನ ಪಡೆದು ಧನ್ಯರಾದರು. ಶಿವಾಜಿ ಪಾರ್ಕ್‌ನ ಕ್ರೆಮಿಟೋರಿಯಂನಲ್ಲಿ ಅವರ ಪಾರ್ಥಿವ ಶರೀರವನ್ನು ದಹಿಸಲಾಯಿತು. ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದ, ಸಾಮಾಜಿಕ ಅನ್ಯಾಯಗಳನ್ನು ಬೇರುಸಮೇತ ಕಿತ್ತುಹಾಕಲು ಧೈರ್ಯದಿಂದ ಎದೆಕೊಟ್ಟು ಕಾದಾಡಿದ ಧೀರನ ಕೊನೆ ಪಯಣದ ಯಶೋಗಾಥೆ ಇಲ್ಲಿಗೆ ಮುಗಿಯಿತು. ಆದರೆ ದಲಿತರ ಸಾವುನೋವಿನ ಗಾಥೆ ಇನ್ನೂ ಮುಗಿಯಲಿಲ್ಲ!

ಮತ್ತಷ್ಟು ಮಂದಿ ಬೌದ್ಧ ಧರ್ಮಕ್ಕೆ

ಡಿಸೆಂಬರ್ 9ರಂದು ಡಾ.ಅಂಬೇಡ್ಕರರ ಚಿತಾಭಸ್ಮವನ್ನು ಅವರ ಮಗ ಯಶವಂತ್‌ರಾವ್ ಅಂಬೇಡ್ಕರ್ ಸಂಗ್ರಹಿಸಿದರು. ಆ ಸಂದರ್ಭದಲ್ಲಿ ಸಾವಿರಾರು ಮಂದಿ ಶೋಕತಪ್ತ ಹೆಂಗಸರು ಮಕ್ಕಳು ಎದೆ ಬಡಿದುಕೊಳ್ಳುತ್ತಾ ಚಿತಾಭಸ್ಮ ಸ್ಥಳದಲ್ಲಿ ಮಂಡಿಯೂರಿ ನಮಸ್ಕರಿಸಿ ಧೂಳನ್ನು ತಮ್ಮ ಹಣೆಗೆ ಬಳಿದುಕೊಂಡರು. ನಿಜವಾಗಿಯೂ ಇದು ಪ್ರಪಂಚದ ಇತಿಹಾಸದಲ್ಲಿ ಎಂದೂ ಕಂಡರಿಯದ ದೃಶ್ಯ. ಅಲ್ಲಿ ಸುಮಾರು 50 ಸಾವಿರ ಜನ ನೆರೆದಿದ್ದರು. ಆ ಜನಸ್ತೋಮವು ಬೌದ್ಧಧರ್ಮವನ್ನು ಅಪ್ಪಿಕೊಳ್ಳುವ ತೀವ್ರ ಆಸೆಯನ್ನು ವ್ಯಕ್ತಪಡಿಸಿತು. ಮಹಾಬಿಕ್ಕು ಆನಂದ್ ಕೌಶಲಾಯನ್‌ರವರು ಅವರಿಗೆಲ್ಲ ಬೌದ್ಧ ಧರ್ಮ ದೀಕ್ಷೆ ನೀಡಿದರು.

ಬಹು ದೊಡ್ಡ ಕಾಕತಾಳೀಯವೋ ಎಂಬಂತೆ ಸಾಂಚಿಯಲ್ಲಿ ಬುದ್ಧ ಜಯಂತಿಯ ಎಂಟನೆಯ ದಿನದ ಆಚರಣೆಗಳು ಮುಕ್ತಾಯವಾದ ದಿನದಂದೇ ಬಾಬಾಸಾಹೇಬರ ಭೌತಿಕ ಅವಶೇಷಗಳು ಡಿಸೆಂಬರ್ 7, 1956ರಂದು ಕಣ್ಮರೆಯಾದವು.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ದಲಿತ ಇತಿಹಾಸ ತಿಂಗಳು; ಅಂಬೇಡ್ಕರ್ ಮತ್ತು ದಲಿತರ ಬಗ್ಗೆ ಮಿತಿಮೀರಿದ ಅಸಹನೆ; ಸಂವಿಧಾನವೇ ಉತ್ತರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...