Homeಕರ್ನಾಟಕಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

- Advertisement -
- Advertisement -

ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್ ಜಾದೂಗಾರ್ ಹೇಳಿದ್ದಾರೆ.

ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರೇಶ್ ಮೇಸ್ತಾ ಪ್ರಕರಣದಲ್ಲಿ ಸುಮಾರು 95 ಯುವಕರ ಮೇಲೆ ಕೇಸ್ ಹಾಕಲಾಗಿತ್ತು. ಇನ್ನೂ ಕೋರ್ಟ್ ಕಚೇರಿ ಎಂದು ತಿರುಗಾಡುತ್ತಿದ್ದೇವೆ. ಯಾವ ಬಿಜೆಪಿ ಮುಖಂಡರೂ ನಮ್ಮ ಸಹಾಯಕ್ಕೆ ಬಂದಿಲ್ಲ. ಚುನಾವಣೆ ಬಂದಾಗ ಮಾತ್ರ ಪರೇಶ್ ಮೇಸ್ತಾ ಪ್ರಕರಣ ಇವರಿಗೆ ನೆನಪಿಗೆ ಬರುತ್ತದೆ. ಕಾಗೇರಿಯವರು ಆ ಸಂದರ್ಭದಲ್ಲಿ ನಮಗೆ ಏನು ಸಹಾಯ ಮಾಡಿದ್ದಾರೆ ಎಂದು ತಿಳಿಸಲಿ. ನಮ್ಮನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳಲು ಹೊರಟಿರುವುದು ಅತೀವ ಬೇಸರ ತರಿಸಿದೆ ಎಂದಿದ್ದಾರೆ.

ಪರೇಶ್ ಪ್ರಕರಣದ ಸಂದರ್ಭ ಐಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಕಾಗೇರಿಯವರು ಹೇಳುತ್ತಾರೆ. ಹಾಗಿದ್ದರೆ ಕಾಗೇರಿಯವರು ಅಂದು ಸರಿಯಾಗಿ ತನಿಖೆ ಮಾಡುವಂತೆ ಎಷ್ಟು ಪತ್ರ ಬರೆದಿದ್ದಾರೆ? ಯಾರೊಂದಿಗೆ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ? ಪರೇಶ್ ಮೇಸ್ತಾ ಪ್ರಕರಣದಲ್ಲಿ ಕೇಸು ಹಾಕಿಸಿಕೊಂಡ ನಂತರ ನಮ್ಮ ಸಹಾಯಕ್ಕೆ ಯಾವ ಬಿಜೆಪಿಗರು ಬರದೇ ಪರದಾಡಿದ್ದೇವೆ. ಚುನಾವಣೆಯ ಸಂದರ್ಭದಲ್ಲಿ ಕಂಡವರ ಮನೆಯ ಮಕ್ಕಳನ್ನು ಬಾವಿಗೆ ತಳ್ಳುವ ಕೆಲಸ ಕಾಗೇರಿಯವರು ಮಾಡಬಾರದು ಎಂದು ಶ್ರೀರಾಮ್ ಜಾದೂಗಾರ್ ಹೇಳಿದ್ದಾರೆ.

ಕಳೆದ ಬಾರಿ ಸ್ಪೀಕರ್ ಆಗಿದ್ದಾಗ ನಮ್ಮ ಪರ ಕಾಗೇರಿಯವರು ಏನು ಮಾಡಿದ್ದಾರೆ? ಏಳು ವರ್ಷದಿಂದ ನಾವು ಕೋರ್ಟ್‌ಗೆ ಓಡಾಡುತ್ತಿದ್ದೇವೆ. ಹಿಂದೂ ಕಾರ್ಯಕರ್ತರಾದ ನಾವು ಸದ್ಯ ನೆಮ್ಮದಿಯಾಗಿ ಇದ್ದೇವೆ. ಚುನಾವಣೆಗಾಗಿ ಮತ್ತೆ ನಮ್ಮನ್ನು ಎಳೆದು ತಂದು ಕಂಡವರ ಮನೆಯ ಬಾವಿಗೆ ದಬ್ಬಬೇಡಿ. ಪರೇಶ್ ಮೇಸ್ತಾ ಹತ್ಯೆಯಾದಾಗ ನಾವು ಗಲಭೆಯಲ್ಲಿ ಪಾಲ್ಗೊಂಡಿದ್ದೆವು ಎಂದು ಕೇಸು ಹಾಕಿದ್ದರು. ನಂತರ ಸಿಬಿಐಗೆ ವಹಿಸಿದಾಗ ಬಿಜೆಪಿ ನೇತೃತ್ವದ ಕೇಂದ್ರ ‌ಸರ್ಕಾರ ಇದ್ದರೂ ನ್ಯಾಯ ಕೊಡಿಸಲಾಗಿಲ್ಲ. ಈಗ ಚುನಾವಣೆಗಾಗಿ, ತಮ್ಮ ತೆವಲಿಗಾಗಿ ನಮ್ಮನ್ನು ಬಳಸಿಕೊಳ್ಳಲು ಹೊರಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದೊಡ್ಡ ನಾಯಕರು ಗಲಾಟೆ ಆದಾಗ ಕಾರಿನಲ್ಲಿ ಕುಳಿತು ನಾಪತ್ತೆಯಾದರು. ಲಾಠಿ ಚಾರ್ಜ್ ಎಂದಾಗ ಹೊಡೆತ ತಿಂದವರು ಹಿಂದುಳಿದ ವರ್ಗದ ನಾವುಗಳು. ಬಿಜೆಪಿ ಅಧಿಕಾರಕ್ಕೆ ಬಂದ ನಂತರವೂ 2020ರಲ್ಲಿ ಕಲಂ 107 ಅಡಿ ನಮ್ಮ‌ ಮೇಲೆ ದೂರು ದಾಖಲಿಸಲಾಗಿದೆ. ಶಾಸಕ ದಿನಕರ ಶೆಟ್ಟಿ ಈವರೆಗೆ ನಮಗೆ ಸ್ಪಂದಿಸಿಲ್ಲ ಎಂದಿದ್ದಾರೆ.

ನಿತ್ಯಾನಂದ ಪಾಲೇಕರ್ ಮಾತನಾಡಿ, ಸಮಾಜಕ್ಕೆ ಒಳ್ಳೆಯದಾಗುವ ಅಭಿವೃದ್ಧಿ ವಿಚಾರ ಇಟ್ಟುಕೊಂಡು ರಾಜಕೀಯ ಮಾಡಿ. ದ್ವೇಷ ಮೂಡಿಸುವಂತಹ, ಪರಸ್ಪರ ಜಗಳ ಮಾಡುವಂತಹ ರಾಜಕೀಯ ಮಾಡಬೇಡಿ. ಕೋಮು ಗಲಭೆ ಕಿಚ್ಚು ಹಚ್ಚಿಸುವ ಬದಲು ಅಭಿವೃದ್ಧಿ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದ್ದಾರೆ.

ವಿಕ್ರಂ, ರಾಮ್, ನಾಗರಾಜ, ಪ್ರದೀಪ್ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಆ್ಯನಿಮೇಟೆಡ್ ವಿಡಿಯೋ ಹಂಚಿಕೆ: ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read