Homeಚಳವಳಿದ್ರಾವಿಡ ಮಣ್ಣಲ್ಲಿ 'ಸ್ವಾಭಿಮಾನ'ದ ಬೀಜ ಭಿತ್ತಿ 'ಸಮಾನತೆ'ಯ ಫಸಲು ತೆಗೆದ ಪೆರಿಯಾರ್

ದ್ರಾವಿಡ ಮಣ್ಣಲ್ಲಿ ‘ಸ್ವಾಭಿಮಾನ’ದ ಬೀಜ ಭಿತ್ತಿ ‘ಸಮಾನತೆ’ಯ ಫಸಲು ತೆಗೆದ ಪೆರಿಯಾರ್

- Advertisement -
- Advertisement -

‘ದೇವರಿಲ್ಲ, ದೇವರಿಲ್ಲ, ದೇವರೇ ಇಲ್ಲ. ದೇವರನ್ನು ಕಂಡುಹಿಡಿದವನು ಮೂರ್ಖ. ದೇವರನ್ನು ಪ್ರಚಾರ ಮಾಡುವವನು ನೀಚ. ದೇವರನ್ನು ಪೂಜಿಸುವವನು ಅನಾಗರಿಕ’

***

‘ಮನುಷ್ಯ ಮನುಷ್ಯನಿಗೆ ಸಮಾನ; ಶೋಷಣೆ ಆಗಬಾರದು. ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡಬೇಕು. ಯಾರೂ ಯಾರಿಗೂ ಹಾನಿ ಮಾಡಬಾರದು. ಸಾಮಾನ್ಯವಾಗಿ ಯಾರಿಂದಲೂ ಕುಂದುಕೊರತೆ ಅಥವಾ ದೂರಿಗೆ ಅವಕಾಶ ಇರಬಾರದು. ಪ್ರತಿಯೊಬ್ಬರೂ ರಾಷ್ಟ್ರೀಯ ಮನೋಭಾವದಿಂದ ಬದುಕಬೇಕು ಮತ್ತು ಇತರರನ್ನು ಬದುಕಲು ಬಿಡಬೇಕು’

***

‘ಪುರುಷನು ಮಹಿಳೆಯನ್ನು ತನ್ನ ಸ್ವಂತ ಆಸ್ತಿಯಂತೆ ಪರಿಗಣಿಸಿ, ತನ್ನಂತೆ ಆಕೆಗೆ ಭಾವನೆಗಳನ್ನು ಹೊಂದುವ ಸಾಮರ್ಥ್ಯ ಹೊಂದಿಲ್ಲ ಎಂದುಕೊಳ್ಳುತ್ತಾನೆ. ಜಮೀನುದಾರರು ಸೇವಕರನ್ನು ನಡೆಸಿಕೊಳ್ಳುವ ರೀತಿ ಮತ್ತು ಉನ್ನತ ಜಾತಿಯವರು ಕೆಳಜಾತಿಯವರನ್ನು ನಡೆಸಿಕೊಳ್ಳುವುದಕ್ಕಿಂತ ಪುರುಷನು ಮಹಿಳೆಯರನ್ನು ನಡೆಸಿಕೊಳ್ಳುವ ರೀತಿ ತುಂಬಾ ಕೆಟ್ಟದಾಗಿದೆ. ಜಾತಿ ಸಂಬಂಧಗಳಲ್ಲಿ ಪರಸ್ಪರ ಪರಿಣಾಮ ಬೀರುವ ಸಂದರ್ಭಗಳಲ್ಲಿ ಮಾತ್ರ ಅವರನ್ನು ಕೀಳಾಗಿ ನಡೆಸಿಕೊಳ್ಳುತ್ತವೆ; ಆದರೆ ಪುರುಷರು ತಮ್ಮ ಹುಟ್ಟಿನಿಂದ ಸಾಯುವವರೆಗೂ ಕ್ರೂರವಾಗಿ ಮತ್ತು ಗುಲಾಮರಂತೆ ವರ್ತಿಸುತ್ತಾರೆ’

ಮೇಲಿನ ಮೂರು ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ… ಮೊದಲನೆ ಹೇಳಿಕೆಯಲ್ಲಿ ವೈಚಾರಿಕತೆ, ಎರಡನೇ ಹೇಳಿಕೆಯಲ್ಲಿ ಸಾಮಾಜಿಕ ನ್ಯಾಯ, ಮೂರನೇ ಹೇಳಿಕೆಯಲ್ಲಿ ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದ್ರಾವಿಡ ತಮಿಳುನಾಡಿನಲ್ಲಿ ಭಿತ್ತಿದ ‘ಸ್ವಾಭಿಮಾನ’ದ ಬೀಜ ಇಂದು ಅಲ್ಲಿ ‘ಸಮಾನತೆ’ಯ ಫಸಲು ಕೊಡುತ್ತಿದೆ. ಎಲ್ಲಿಯವರೆಗೆ ಎಂದರೆ..! ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ‘ಸನಾತನ ಎನ್ನುವುದು ವೈರಾಣು ಇದ್ದಂತೆ, ಅದನ್ನು ವಿರೋಧಿಸಬಾರದು ನಿರ್ಮೂಲನೆ ಮಾಡಬೇಕು’ ಎಂದು ಹೇಳುವವರೆಗೆ.

1879ರ ಸೆಪ್ಟೆಂಬರ್ 17ರಂದು ಕೊಯಮತ್ತೂರು ಜಿಲ್ಲೆ ಈರೋಡ್‌ನಲ್ಲಿ ಜನಿಸಿದ ಇ.ವಿ. ರಾಮಸ್ವಾಮಿ, 24 ಡಿಸೆಂಬರ್ 1973ರಂದು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದರು. ತಮ್ಮ ಸುಧೀರ್ಘ ಜೀವನದಲ್ಲಿ ಮೌಢ್ಯ ವಿರೋಧಿ, ಬ್ಯಾಹ್ಮಣ್ಯ ವಿರೋಧಿಯಾಗಿದ್ದ ಅವರು, ಸ್ವಾಭಿಮಾನ ಹಾಗೂ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದವರು. ಹಿಂದಿ ವಿರೋಧಿ ಚಳವಳಿಯನ್ನು ದಕ್ಷಿಣ ಭಾರತದಲ್ಲಿ ಗಟ್ಟಿಗೊಳಿಸಿದವರು. ಅವರು ಭೌತಿಕವಾಗಿ ನಿಧನರಾಗಿ 49 ವರ್ಷಗಳನ್ನು ಪೂರೈಸಿ, ಐವತ್ತಕ್ಕೆ ಕಾಲಿಟ್ಟಿರುವ ಈ ಸಂದರ್ಭದಲ್ಲಿ, ಅವರ ಕ್ರಾಂತಿಕಾರಿ ಜೀವನದ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.

ಇ.ವಿ. ರಾಮಸ್ವಾಮಿ ‘ಪೆರಿಯಾರ್’ ಆಗಿದ್ದು ಹೇಗೆ?

ತಮಿಳಿನಲ್ಲಿ ಪೆರಿಯಾರ್ ಎಂದರೆ ದೊಡ್ಡವರು ಎಂದರ್ಥ. ಇವಿ ರಾಮಸ್ವಾಮಿ ಎಂಬ ನಿಜ ನಾಮಧೇಯದ ವ್ಯಕ್ತಿ ತನ್ನ ಹೋರಾಟದ ಮೂಲಕ ಕ್ರಮೇಣ ದಕ್ಷಿಣ ಭಾರತದಲ್ಲಿ ‘ಪೆರಿಯಾರ್’ ಆಗಿ ಬದಲಾದರು. ಈ ಹೆಸರನ್ನು ಜನರೇ ಅವರಿಗೆ ಇಟ್ಟದ್ದು. ಪೆರಿಯಾರ್ ಅಥವಾ ತಂಥೈ ಪೆರಿಯಾರ್ ಎಂದು ಪ್ರಸಿದ್ಧರಾಗಿರುವ ಈರೋಡ್ ವೆಂಕಟಪ್ಪ ರಾಮಸ್ವಾಮಿ ಅವರು ಭಾರತದ ಪ್ರಮುಖ ವಿಮೋಚಕ ಮತ್ತು ದ್ರಾವಿಡ ಚಳವಳಿಯ ರಾಜಕಾರಣಿ. ಅವರು ದೇಶದ ದಕ್ಷಿಣ ಭಾಗದಲ್ಲಿ ಸ್ವಾಭಿಮಾನ ಚಳವಳಿ ಮತ್ತು ದ್ರಾವಿಡರ್ ಕಳಗಂ ಅನ್ನು ಪ್ರಾರಂಭಿಸಿದರು. ಅವರನ್ನು ‘ದ್ರಾವಿಡ ಚಳವಳಿಯ ಪಿತಾಮಹ’ ಎಂದೂ ಕರೆಯಲಾಗುತ್ತದೆ. ಅವರು ತಮಿಳುನಾಡಿನಲ್ಲಿ ಚಾಲ್ತಿಯಲ್ಲಿದ್ದ ಬ್ರಾಹ್ಮಣ್ಯದ ಪ್ರಾಬಲ್ಯ, ಲಿಂಗ ತಾರತಮ್ಯ ಮತ್ತು ಜಾತಿ ಅಸಮಾನತೆಯ ವಿರುದ್ಧ ಬಂಡಾಯವೆದ್ದು, ಅದನ್ನು ತಕ್ಕಮಟ್ಟಿಗೆ ತೊಡೆದುಹಾಕುವಲ್ಲಿ ಯಶಸ್ವಿಯಾದವರು.

ಸ್ವಾತಂತ್ರ್ಯ ಪೂರ್ವದ ತಮಿಳುನಾಡಿನಲ್ಲಿ ಸ್ವಾಭಿಮಾನ ಚಳವಳಿಯನ್ನು ಪೆರಿಯಾರ್ ಆರಂಭಿಸಿದರು; ಈ ಹೋರಾಟವು ಆಗ ಚಾಲ್ತಿಯಲ್ಲಿದ್ದ ಸಮಕಾಲೀನ ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸುವ, ಜಾತಿ, ಧರ್ಮ ಮತ್ತು ದೇವರಿಲ್ಲದ ಹೊಸ, ತರ್ಕಬದ್ಧ ಸಮಾಜವನ್ನು ರಚಿಸುವ ಗುರಿಯನ್ನು ಹೊಂದಿದ್ದ ಕ್ರಿಯಾತ್ಮಕ ಸಾಮಾಜಿಕ ಚಳವಳಿಯಾಗಿತ್ತು.

ವೈಕಂ ಹೀರೋ ಪೆರಿಯಾರ್!

1924ರಲ್ಲಿ ತಿರುವಾಂಕೂರಿನಲ್ಲಿ ನಡೆದ ಪ್ರಸಿದ್ಧ ವೈಕಂ ಸತ್ಯಾಗ್ರಹವನ್ನು ಇ.ವಿ. ರಾಮಸ್ವಾಮಿ ಪೆರಿಯಾರ್ ಮುನ್ನಡೆಸಿದರು. ಅಲ್ಲಿ ತುಳಿತಕ್ಕೊಳಗಾದ ಸಮುದಾಯದ ಜನರು ದೇವಾಲಯದೊಳಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು. ಅಂದಿನ ಮದ್ರಾಸ್ ಪ್ರಾಂತ್ಯದ ತಿರುವಾಂಕೂರು ಸರ್ಕಾರವು ಅಂತಿಮವಾಗಿ ಅಂತಹ ಪ್ರತ್ಯೇಕತೆಯನ್ನು ಸಡಿಲಿಸಿತು. ಜನರಿಗೆ ದೇವಾಲಯದೊಳಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು. ಆದ್ದರಿಂದ ಪೆರಿಯಾರ್ ಅವರಿಗೆ ‘ವೈಕಂ ಹೀರೋ’ ಎಂಬ ಬಿರುದು ನೀಡಲಾಯಿತು.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಸಕ್ರಿಯ ಬೆಂಬಲದೊಂದಿಗೆ ವೈಕಂ ಸತ್ಯಾಗ್ರಹ ಆರಂಭವಾಗಿತ್ತು. ಒಂದು ವಾರದೊಳಗೆ ಅದರ ಎಲ್ಲ ನಾಯಕರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾರ್ಜ್ ಜೋಸೆಫ್, ಸಿ. ರಾಜಗೋಪಾಲಾಚಾರಿ ಅಂಥವರು ಗಾಂಧಿ ಅವರಿಂದ ಸಲಹೆ ಕೇಳಿದರು. ನಂತರ, ಅವರು ಸತ್ಯಾಗ್ರಹವನ್ನು ಮುನ್ನಡೆಸುವಂತೆ ಪೆರಿಯಾರ್ ಅವರಿಗೆ ಪತ್ರ ಬರೆದರು.

ಆಗ ತಮಿಳುನಾಡು ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಪೆರಿಯಾರ್ ರಾಜಕೀಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ವೈಕಂ ತಲುಪುವ ಮೊದಲು ರಾಜಾಜಿ ಅವರಿಗೆ ತಾತ್ಕಾಲಿಕ ಅಧಿಕಾರವನ್ನು ಹಸ್ತಾಂತರಿಸಿ ಹೋರಾಟಕ್ಕೆ ಧುಮುಕಿದರು. ಆ ದಿನದಿಂದ 1925ರ ವಿಜಯೋತ್ಸವದ ದಿನದವರೆಗೆ, ಅವರು ನಿರ್ಣಾಯಕ ಘಟ್ಟದಲ್ಲಿ ಹೋರಾಟದ ನಾಯಕತ್ವ ವಹಿಸಿದ್ದರು.

ಸಂಪ್ರದಾಯವಾದಿಗಳು, ಪೊಲೀಸರ ದಬ್ಬಾಳಿಕೆಯಿಂದ ಉಂಟಾದ ಹಿಂಸೆ ಮತ್ತು ಅವಮಾನದ ಕಾರಣಕ್ಕಾಗಿ ಪೆರಿಯಾರ್ ಸತ್ಯಾಗ್ರಹದ ಅಧ್ಯಕ್ಷತೆ ವಹಿಸಿದ್ದರು. ಹಿಂಸಾಚಾರದ ವಿರುದ್ಧ ಸಿಡಿದೆದ್ದರು. ಹೋರಾಟಕ್ಕೆ ಜನರನ್ನು ಸಜ್ಜುಗೊಳಿಸುವ ಹಾಗೂ ಬೆಂಬಲವನ್ನು ಕ್ರೋಢೀಕರಿಸಲು, ಅವರು ವೈಕಂ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡಿದರು. ಹಲವಾರು ಪಟ್ಟಣಗಳಲ್ಲಿ ಸಾರ್ವಜನಿಕ ಭಾಷಣಗಳನ್ನು ಮಾಡಿ ಹೋರಾಟಕ್ಕೆ ಜನರನ್ನು ಸೆಳೆದರು.

ಕೇರಳದ ನಾಯಕರು ಸತ್ಯಾಗ್ರಹವನ್ನು ಅಖಿಲ ಭಾರತ ವಿಷಯವನ್ನಾಗಿ ಮಾಡಲು ಗಾಂಧಿಯವರ ಅನುಮತಿಯನ್ನು ಕೇಳಿದಾಗ, ‘ತಮಿಳುನಾಡಿನ ಸ್ವಯಂಸೇವಕರು ಅದನ್ನು ಜೀವಂತವಾಗಿಡುತ್ತಾರೆ’ ಎಂದು ಹೇಳಿದ್ದ ಗಾಂಧಿ, ತಮ್ಮ ನೇತೃತ್ವವನ್ನು ನಿರಾಕರಿಸಿದರು.

ವೈಚಾರಿಕತೆಯ ಪ್ರತಿಪಾದನೆ:

ದೇವರು, ಮೌಢ್ಯ ಹಾಗೂ ಅಸಮಾನತೆಯ ಕುರಿತು ಪೆರಿಯಾರ್ ಅವರು ತಮ್ಮ ಆಲೋಚನೆಗಳನ್ನು ಜನರ ಮುಂದೆ ಪ್ರಸ್ತುತಪಡಿಸುವಾಗ ಬಹಳಷ್ಟು ಸೂಕ್ಷ್ಮತೆ, ಪ್ರಾಮಾಣಿಕತೆಯಿಂದ ಮಂಡಿಸುತ್ತಿದ್ದರು; ಅವರ ಮಾತಿನಲ್ಲಿದ್ದ ಸ್ಪಷ್ಟತೆಯು, ವಿಭಿನ್ನ ನಂಬಿಕೆಗಳನ್ನು ಅಭ್ಯಾಸ ಮಾಡುತ್ತಿದ್ದ ಜನರನ್ನೂ ಸಹ ವೈಚಾರಿಕತೆಗೆ ಸೆಳೆಯುವಲ್ಲಿ ಸಹಕಾರಿಯಾಯಿತು.

”ಯಾವುದೇ ಅಭಿಪ್ರಾಯವನ್ನು ನಿರಾಕರಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ, ಅದರ ಅಭಿವ್ಯಕ್ತಿಯನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ” ಎಂದು ಪೆರಿಯಾರ್ ಜನರಿಗೆ ಹೇಳುತ್ತಿದ್ದರು.

ಪೆರಿಯಾರ್ ಅವರ ವಿಚಾರಗಳ ಬಂಡಾಯದ ಸ್ವಭಾವ ಮತ್ತು ಅವರ ಹುರುಪಿನ ಕಾರ್ಯನಿರ್ವಹಣೆಯಿಂದಾಗಿ ಅವರನ್ನು ‘ವಿಗ್ರಹಭಂಜಕ’ ಎಂದು ಕರೆಯಲಾಗುತ್ತದೆ. ಅವರಿಗಿದ್ದ ಭವಿಷ್ಯದ ದೃಷ್ಟಿಕೋನವು ಅವರ ಎಲ್ಲಾ ಕ್ರಿಯೆಗಳ ಭಾಗವಾಗಿತ್ತು. ಕೇವಲ ಸಾಮಾಜಿಕ ಅನಿಷ್ಟಗಳ ನಿರ್ಮೂಲನೆಯ ಗುರಿಯನ್ನು ಮಾತ್ರ ಹೊಂದಿರಲಿಲ್ಲ; ಅವರು ಸಮಾಜದ ಸಾಮೂಹಿಕ ಗುಣಮಟ್ಟವನ್ನು ಹೆಚ್ಚಿಸದ ಚಟುವಟಿಕೆಗಳನ್ನು ಕೊನೆಗೊಳಿಸಲು ಬಯಸಿದ್ದರು.

ವೈಚಾರಿಕತೆಯ ಅಡಿಪಾಯ

ರಾಜಕೀಯ ಚಿಂತನೆಯ ವಿಕಾಸವನ್ನು ಅರ್ಥಮಾಡಿಕೊಂಡಿದ್ದ ಅವರ ದೃಷ್ಟಿಕೋನವು ವ್ಯಕ್ತಿತ್ವ ವಿಕಸನ ಮತ್ತು ವ್ಯಕ್ತಿಗಳ ಸ್ವಾತಂತ್ರ್ಯದ ಬಗ್ಗೆ ಇರುತ್ತಿತ್ತು. ಅವರು ವೈಚಾರಿಕತೆಯನ್ನೇ ಪ್ರಮುಖ ವಸ್ತುವನ್ನಾಗಿಸಿಕೊಂಡು ಪ್ರಸ್ತುತಪಡಿಸಿದರು. ‘ವಿವೇಕವು ಆಲೋಚನೆಯಲ್ಲಿದೆ; ವೈಚಾರಿಕತೆಯೇ ಚಿಂತನೆಯ ಮುನ್ನುಡಿ’ ಎಂದು ಹೇಳುತ್ತಿದ್ದರು.

ತುಳಿತಕ್ಕೊಳಗಾದವರ ಜೊತೆ ನಾನು ಯಾವಾಗಲೂ ನಿಲ್ಲುತ್ತೇನೆ ಎಂದು ಪೆರಿಯಾರ್ ಘೋಷಿಸಿದ್ದರು. ಕಳೆದ ಶತಮಾನದಲ್ಲಿ ತಮಿಳುನಾಡಿನಲ್ಲಿ ಹಲವಾರು ಸಮಾಜ ಸುಧಾರಕರು ತಮ್ಮ ಕ್ರಾಂತಿಕಾರಿ ಚಿಂತನೆಗಳನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ. ಆ ಹಾದಿಯಲ್ಲಿ ಪೆರಿಯಾರ್ ಕೂಡ ಒಂದು ವಿಶಿಷ್ಟವಾದ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದರೆ ತಪ್ಪಾಗಲಾರದು.

‘ವೈಚಾರಿಕತೆ, ವಿಜ್ಞಾನ ಅಥವಾ ಅನುಭವವನ್ನು ಆಧರಿಸಿದ ಯಾವುದೇ ವಿರೋಧವು ಒಂದಲ್ಲ ಒಂದು ದಿನ ವಂಚನೆ, ಸ್ವಾರ್ಥ, ಸುಳ್ಳು ಮತ್ತು ಪಿತೂರಿಗಳನ್ನು ಬಹಿರಂಗಪಡಿಸುತ್ತದೆ’ ಎಂದು ಬಲವಾಗಿ ನಂಬಿದ್ದರು.

ತಮಿಳುನಾಡಿನಲ್ಲಿ ಬ್ರಾಹ್ಮಣರ ಪ್ರಾಬಲ್ಯ, ಮಹಿಳೆಯರ ಮೇಲಿನ ದಬ್ಬಾಳಿಕೆ, ಜಾತಿ ಪ್ರಾಬಲ್ಯದ ವಿರುದ್ಧ ಅವರ ಕೃತಿಗಳು ಸದಾ ಮಾತನಾಡುತ್ತಿದ್ದವು. ಅವರು ಹೆಚ್ಚಾಗಿ ವೈಚಾರಿಕತೆ, ಸ್ವಾಭಿಮಾನ, ಮಹಿಳಾ ಹಕ್ಕುಗಳು ಮತ್ತು ಜಾತಿ ನಿರ್ಮೂಲನೆಯ ತತ್ವಗಳನ್ನು ಪ್ರಚಾರ ಮಾಡಿದರು. ಅವರು ಭಾಷೆಯ ‘ಮೇಲರಿಮೆ’ಯ ಕಾರಣಕ್ಕಾಗಿ ದಕ್ಷಿಣ ಭಾರತದ ಜನರನ್ನು ಶೋಷಣೆ ಮತ್ತು ಕಡೆಗಣಿಸುವುದನ್ನು ವಿರೋಧಿಸಿದರು.

‘ಮರಣ’ದ ನಂತರವೂ ‘ಬದುಕಿ’ದ ಪೆರಿಯಾರ್

‘ಮಳೆ ನಿಂತರೂ, ಮಳೆ ಹನಿ ನಿಲ್ಲಲಿಲ್ಲ’ ಎನ್ನುವ ಹಾಗೆ, ಪೆರಿಯಾರ್ ಮರಣದ ನಂತರ ಅವರ ವೈಚಾರಿಕ ಕಿಡಿ ಮತ್ತಷ್ಟು ಹೆಚ್ಚಾಯಿತು. 49 ವರ್ಷದ ನಂತರ ಈಗಲೂ ಆ ಕಿಡಿ ಪುರೋಹಿತಶಾಹಿಗಳ ನಿದ್ದೆಗೆಡಿಸುತ್ತಿದೆ. 1973ರಲ್ಲಿ ಪೆರಿಯಾರ್ ಅವರ ಮರಣದ ನಂತರ, ಜನವರಿ 1974ರಲ್ಲಿ ತಮಿಳುನಾಡಿನಾದ್ಯಂತ ಅನೇಕ ಸಮ್ಮೇಳನಗಳು ನಡೆದವು, ಅದೇ ವರ್ಷ ಪೆರಿಯಾರ್ ಅವರ ಪತ್ನಿ, ದ್ರಾವಿಡರ್ ಕಳಗಂನ ಹೊಸ ಮುಖ್ಯಸ್ಥೆ ಮಣಿಯಮ್ಮಾಯಿ ಅವರು ‘ರಾಮ-ಸೀತೆ’ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಿದರು. ಈ ಕೃತ್ಯಕ್ಕಾಗಿ ಅವರನ್ನು ಜೈಲಿಗೆ ಕೂಡ ಹಾಕಲಾಯಿತು.

ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ನಡೆದ 1974ರ ಮೇ ದಿನದ ಸಭೆಗಳಲ್ಲಿ, ತಮಿಳರಿಗೆ 80 ಪ್ರತಿಶತ ಉದ್ಯೋಗಗಳನ್ನು ಮೀಸಲಿಡುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು. ಇದಾದ ಕೆಲವೇ ದಿನಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ದ್ರಾವಿಡರ್ ಕಳಗಂನ ಆದರ್ಶಗಳನ್ನು ಹರಡಲು ಯುವಕ-ಯುವತಿಯರಿಗೆ ತರಬೇತಿ ನೀಡಲು ತಿರುಚಿರಾಪಳ್ಳಿಯ ಪೆರಿಯಾರ್ ಮ್ಯಾನ್ಷನ್‌ನಲ್ಲಿ ಶಿಬಿರವನ್ನು ನಡೆಸಲಾಯಿತು.

17 ಸೆಪ್ಟೆಂಬರ್ 1974 ರಂದು ಪೆರಿಯಾರ್ ಅವರ ಜನ್ಮದಿನದಂದು, ಪೆರಿಯಾರ್ ವಿಚಾರವಾದಿ ಗ್ರಂಥಾಲಯ, ಸಂಶೋಧನಾ ಗ್ರಂಥಾಲಯ ಮತ್ತು ಸಂಶೋಧನಾ ಸಂಸ್ಥೆಯನ್ನು ಅಂದಿನ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಉದ್ಘಾಟಿಸಿದರು. ಈ ಗ್ರಂಥಾಲಯವು ಪೆರಿಯಾರ್ ಅವರ ವಿಚಾರವಾದಿ ಕೃತಿಗಳು, ಪೆರಿಯಾರ್ ಅವರ ಹಸ್ತಪ್ರತಿಗಳು ಮತ್ತು ಅವರ ಧ್ವನಿಮುದ್ರಿತ ಭಾಷಣಗಳನ್ನು ಒಳಗೊಂಡಿತ್ತು.

ಅದೇ ವರ್ಷದಲ್ಲಿ ಈರೋಡ್‌ಲ್ಲಿರುವ ಪೆರಿಯಾರ್ ಅವರ ಪೂರ್ವಜರ ಮನೆಯನ್ನು ಸ್ಮಾರಕ ಕಟ್ಟಡವಾಗಿ ಸಮರ್ಪಿಸಲಾಯಿತು. 20 ಫೆಬ್ರವರಿ 1977 ರಂದು, ಮದ್ರಾಸ್‌ನಲ್ಲಿ ಪೆರಿಯಾರ್ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ದ್ರಾವಿಡರ ಕಳಗಂನ ಆಡಳಿತ ಸಮಿತಿಯು ಅಂದು ನಡೆಸಿದ ಸಭೆಯಲ್ಲಿ, ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಜನತಾ ಪಕ್ಷ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಮಾರ್ಕ್ಸ್‌ವಾದಿ ಪಕ್ಷಕ್ಕೆ ಸೇರಿದ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಲಾಯಿತು.

16 ಮಾರ್ಚ್ 1978 ರಂದು ಮಣಿಯಮ್ಮಾಯಿ ನಿಧನರಾದರು. ದ್ರಾವಿಡರ್ ಕಳಗಂನ ವ್ಯವಸ್ಥಾಪಕ ಸಮಿತಿಯು 17 ಮಾರ್ಚ್ 1978 ರಂದು ಕೆ. ವೀರಮಣಿ ಅವರನ್ನು ದ್ರಾವಿಡರ್ ಕಳಗಂನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿತು. ಅಂದಿನಿಂದ ಪೆರಿಯಾರ್-ಮಣಿಯಮ್ಮಾಯಿ ಎಜುಕೇಶನಲ್ ಮತ್ತು ಚಾರಿಟಬಲ್ ಸೊಸೈಟಿಯು ಪೆರಿಯಾರ್ ಶತಮಾನೋತ್ಸವ ಮಹಿಳಾ ಪಾಲಿಟೆಕ್ನಿಕ್ ಅನ್ನು 21 ಸೆಪ್ಟೆಂಬರ್ 1980 ರಂದು ತಂಜಾವೂರಿನಲ್ಲಿ ಪ್ರಾರಂಭಿಸಿತು. ಮೇ 1982, ಕಾಲೇಜ್ ಫಾರ್ ಕರೆಸ್ಪಾಂಡೆನ್ಸ್ ಎಜುಕೇಶನ್ ಅನ್ನು ಪೆರಿಯಾರ್ ವಿಚಾರವಾದಿ ಪ್ರಚಾರ ಸಂಘಟನೆಯ ಆಶ್ರಯದಲ್ಲಿ ಪ್ರಾರಂಭಿಸಲಾಯಿತು.

ಅಂಬೇಡ್ಕರ್ ಒಡನಾಟ

ಬೌದ್ಧಿಕವಾಗಿ ಅಂಬೇಡ್ಕರ್ ಮತ್ತು ಪೆರಿಯಾರ್ ಒಂದೇ ಸಾಲಿನಲ್ಲಿ ಕಾಣಿಸಿಕೊಂಡವರು. 1932ರಲ್ಲಿ ನಡೆದ ಎರಡನೇ ದುಂಡುಮೇಜಿನ ಸಮ್ಮೇಳನದಲ್ಲಿ ಅಂಬೇಡ್ಕರ್ ಪರವಾಗಿ ನಿರ್ಣಯಗಳನ್ನು ಪೆರಿಯಾರ್ ತೆಗೆದುಕೊಂಡರು. ಇಬ್ಬರೂ ಹಿಂದೂ ಧರ್ಮ ಮತ್ತು ಅದರ ಅಂತರ್ಗತ ‘ಬ್ರಾಹ್ಮಣವಾದ’ದ ತೀವ್ರ ವಿಮರ್ಶಕರಾಗಿದ್ದರು.

ಅಂಬೇಡ್ಕರ್ ಅವರು 1940ರಲ್ಲಿ ಮದ್ರಾಸ್ (ಚೆನ್ನೈ) ನಲ್ಲಿ ಪೆರಿಯಾರ್ ಅವರನ್ನು ಭೇಟಿ ಮಾಡಿದ್ದರು. ಆಗ ದಲಿತರು ಮತ್ತು ಹಿಂದುಳಿದ ವರ್ಗಗಳ ದುಃಸ್ಥಿತಿಯ ಕುರಿತು ಚರ್ಚಿಸಿದರು. ಅವರು ಮತ್ತೆ 1944 ರಲ್ಲಿ ಮದರಾಸಿನಲ್ಲಿ ಭೇಟಿಯಾದರು. 1954 ರಲ್ಲಿ ಕಠ್ಮಂಡುವಿನಲ್ಲಿ ಕೊನೆಯ ಬಾರಿಗೆ ಭೇಟಿಯಾದರು.

ಒಟ್ಟಾರೆ, ಪೆರಿಯಾರ್ ನಿಧನರಾದ 50 ವರ್ಷಗಳ ನಂತರವೂ ಅವರು ಪ್ರತಿಪಾದಿಸಿದ ಸಿದ್ಧಾಂತವನ್ನು ದ್ರಾವಿಡ ನೆಲ ಜೀವಂತವಾಗಿ ಇರಿಸಿದೆ. ಸನಾತನ ವ್ಯವಸ್ಥೆಯ ವಿರುದ್ಧ ಉದಯನಿಧಿ ಸ್ಟಾಲಿನ್ ಅವರ ಇತ್ತೀಚಿನ ಪ್ರತಿಪಾದನೆಯು ಪೆರಿಯಾರ್ ಅವರ ಸಿದ್ಧಾಂತದ ಇನ್ನೂ ಜೀವಂತವಾಗಿದೆ ಹಾಗೂ ಅವರ ಸಿದ್ಧಾಂತವು ಇಂದಿನ ರಾಜಕೀಯದ ಮೇಲೆ ನಿರಂತರ ಪ್ರಭಾವವನ್ನು ಬೀರುವಲ್ಲಿ ಯಶಸ್ವಿಯಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ.

ಪೆರಿಯಾರ್ ಪ್ರಯಾಣದ ಒಂದು ನೋಟ

1879- ಈರೋಡ್ ವೆಂಕಟಪ್ಪ ರಾಮಸ್ವಾಮಿ ಜನನ
1919- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು
1920- ಮದ್ರಾಸ್ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ.
1924- ವೈಕಂ ಸತ್ಯಾಗ್ರಹದಲ್ಲಿ ಭಾಗವಹಿಸಿದರು
1925- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಸ್ವಾಭಿಮಾನ ಚಳವಳಿಯನ್ನು ರೂಪಿಸಿದರು.
1929-32- ಪೆರಿಯಾರ್ ಯುರೋಪ್ ಮತ್ತು ಸೋವಿಯತ್ ಯೂನಿಯನ್ ಪ್ರವಾಸ ಮಾಡಿದರು
1939- ರಾಮಸ್ವಾಮಿ ಜಸ್ಟಿಸ್ ಪಕ್ಷದ ಮುಖ್ಯಸ್ಥರಾದರು
1940- ಹಿಂದಿ ಹೇರಿಕೆಯನ್ನು ಯಶಸ್ವಿಯಾಗಿ ವಿರೋಧಿಸಿದರು.
1953- ಗಣೇಶನ ವಿಗ್ರಹಗಳನ್ನು ಒಡೆದರು
1973- 94ನೇ ವಯಸ್ಸಿನಲ್ಲಿ ನಿಧನರಾದರು

ಅವರ ಪ್ರಕಟಣೆಗಳು:

1925 – ಕುಡಿಅರಸು ತಮಿಳು ವಾರಪತ್ರಿಕೆಯನ್ನು ಸ್ಥಾಪಿಸಿದರು
1928 – “ದಂಗೆ” ಮತ್ತು ಇಂಗ್ಲಿಷ್ ಮ್ಯಾಗಜೀನ್ ಅನ್ನು ಪ್ರಕಟಿಸಲಾಯಿತು.
1930 – “ಕುಟುಂಬ ಯೋಜನೆ” ಕುರಿತು ಪುಸ್ತಕವನ್ನು ಪ್ರಕಟಿಸಿದರು
1933 – ‘ಪುರಟ್ಚಿ’ ಅಂದರೆ ಕ್ರಾಂತಿ ಪುಸ್ತಕದ ಪ್ರಕಟಣೆ
1934 – 1934 ರಲ್ಲಿ ತಮಿಳು ವಾರಪತ್ರಿಕೆ ‘ಪಗುತರಿವು’ (ವೈಚಾರಿಕತೆ) ಪ್ರಕಟಿಸಲಾಯಿತು
1950 ರಲ್ಲಿ ಅವರು ತಮ್ಮ ಪುಸ್ತಕ ಪೊನ್ಮೊಝಿಗಲ್ (ಸುವರ್ಣ ಹೇಳಿಕೆಗಳು) ಪ್ರಕಟಣೆಗಾಗಿ ಸೆರೆವಾಸ ಅನುಭವಿಸಿದರು.
“ಉನ್ಮೈ (ಸತ್ಯ) ತಮಿಳು ದ್ವೈಮಾಸಿಕವನ್ನು 1970 ರಲ್ಲಿ ಅವರು ತಿರುಚಿರಾಪಳ್ಳಿಯಲ್ಲಿ ಮೊದಲು ಪ್ರಾರಂಭಿಸಿದರು.
2022 ರಲ್ಲಿ, ಡಿಎಂಕೆ ಸರ್ಕಾರವು ಪೆರಿಯಾರ್ ಅವರ ಕೃತಿಗಳನ್ನು 21 ಭಾಷೆಗಳಲ್ಲಿ ಭಾಷಾಂತರಿಸಲು ನಿರ್ಧರಿಸಿತು.

ಇದನ್ನೂ ಓದಿ; ಇಂದು 96ನೇ ವರ್ಷದ ‘ಮನುಸ್ಮೃತಿ ದಹನ’ ದಿನ; ‘ಮನುವಾದಿ’ ಮನಸ್ಸುಗಳಿಗೆ ಪೆಟ್ಟುಕೊಟ್ಟ ದಿನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...