Homeನ್ಯಾಯ ಪಥಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

- Advertisement -
- Advertisement -

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ ಸವಾಲಿನ ಕೆಲಸವೇ ಆಗಿತ್ತು. ಬರ ನಿರ್ವಹಣೆಗೆ ಅಂದಿನ ಎಸ್.ಎಂ. ಕೃಷ್ಣ ಸರ್ಕಾರ ಸಾಕಷ್ಟು ಒತ್ತು ನೀಡಿದ್ದರಿಂದ ನಮ್ಮ ಹಳ್ಳಿಯಲ್ಲೂ ರಾಸುಗಳಿಗೆ ಮೇವು ವಿತರಣೆಯಾಗಿತ್ತು, ಮಹಿಳೆಯರು-ಪುರುಷರಿಗೆ ಕೆರೆ ಹೂಳೆತ್ತುವ ಕೆಲಸ ಕೊಟ್ಟಿದ್ದರು. ದಿನಕ್ಕೆ ಹದಿನೈದು ರೂಪಾಯಿ ಕೂಲಿ; ಮೂರು ಕೆಜೆ ಅಕ್ಕಿ ಕೊಡುತ್ತಿದ್ದರು. ಅಂದಿನ ಕಾಂಗ್ರೆಸ್ ಸರ್ಕಾರ ಕೊಟ್ಟಿದ್ದ ’ಉದ್ಯೋಗ ಖಾತ್ರಿ’ಯಿಂದ ದಲಿತ ಮತ್ತು ಹಿಂದುಳಿದ ಜಾತಿಗಳ ಬಹುತೇಕ ಕುಟುಂಬಗಳಿಗೆ ಸಾಕಷ್ಟು ನೆರವಾಗಿದ್ದಂತೂ ಸತ್ಯ. ಆ ಬಳಿಕ, ನಮ್ಮ ಊರಿನಲ್ಲಿ ಸರ್ಕಾರದ ಯಾವ ಯೋಜನೆಗಳಲ್ಲೂ ಜನರು ಭಾಗಿಯಾಗಿದ್ದು ನಾನು ನೋಡೇಇಲ್ಲ. ಯಂತ್ರಗಳನ್ನು ಬಳಸಿ ನಡೆಸಿದ ಕಾಮಗಾರಿಗಳ ಸ್ಥಳದಲ್ಲೂ ಮನರೇಗಾ ಯೋಜನೆಯ ಕಾಮಗಾರಿ ಎಂಬ ಫಲಕಗಳನ್ನಷ್ಟೇ ನೋಡಿದ್ದೇನೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಪ್ರತಿವರ್ಷ ಬರ ಅಥವಾ ನೆರೆಗೆ ಈಡಾಗುತ್ತಲೇ ಇರುತ್ತವೆ. ಬರ-ನೆರೆ ಏನೇ ಬಂದರೂ ಬೇಸಿಗೆ ಹೊತ್ತಿಗೆ ಊರಿಗೆಊರೇ ಖಾಲಿಯಾಗುತ್ತದೆ.. ವೃದ್ಧರು ಮತ್ತು ಮಕ್ಕಳನ್ನು ಹೊರತುಪಡಿಸಿ ಬಹುತೇಕ ಭೂರಹಿತರು ಬೆಂಗಳೂರು, ಗೋವಾ ಮತ್ತು ಮಹಾರಾಷ್ಟ್ರಕ್ಕೆ ವಲಸೆ ಹೋಗುತ್ತಾರೆ.. ಅದು ಅವರಿಗೆ ಅನಿವಾರ್ಯವೂ ಹೌದು. ಆದರೆ, ಎಸ್.ಎಂ. ಕೃಷ್ಣ ಅವರು ಜಾರಿಗೆ ತಂದಿದ್ದ ’ಉದ್ಯೋಗ ಖಾತ್ರಿ’ ಯೋಜನೆಯು ಮುಂದೆ ಯುಪಿಎ ಸರ್ಕಾರದ ಒಂದು ಮಹತ್ತರ ಯೋಜನೆಯಾಗಿ, ’ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ ಎಂಬ ಕಾಯ್ದೆ ಮೂಲಕ ಉತ್ತರ ಕರ್ನಾಟಕದಲ್ಲಿ ಅಲ್ಪಮಟ್ಟಿಗೆ ವಲಸೆ ತಡೆದಿದೆ.. ಊರಿನಲ್ಲಿ ಅನಾಥರಂತೆ ಬದುಕುತ್ತಿದ್ದ ವೃದ್ಧರಿಗೂ ಕೆಲಸ ನೀಡಿದೆ, ದೈಹಿಕವಾಗಿ ಸಶಕ್ತರಲ್ಲದವರಿಗೂ ನೆರವಾಗಿದೆ. ಈ ಕುರಿತ ’ಯಶಸ್ವಿ ಗಾಥೆ’ಗಳನ್ನು ಹುಡುಕಿ ಹೊರಟ ನಮಗೆ ಅಚ್ಚರಿ ಆಗಿದ್ದಂತೂ ಸತ್ಯ. ರಾಯಚೂರಿನ ಲಿಂಗಸಗೂರು, ಹಟ್ಟಿ ಮತ್ತು ಕಲಬುರಗಿಯ ಹಲವು ಹಳ್ಳಿಗಳ ಭೇಟಿಯಲ್ಲಿ ಹತ್ತಾರು ’ಮನರೇಗಾ’ ಫಲಾನುಭವಿಗಳನ್ನು ಭೇಟಿಯಾಗಿದ್ದೇನೆ.. ಹಲವಾರು ಯಶಸ್ಸಿನ ಕತೆಗಳನ್ನು ಕಂಡಿದ್ದೇನೆ.

ಅದು ಲಿಂಗಸಗೂರಿನ ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿಯ ವೀರಾಪುರ ಗ್ರಾಮ, ಮಾಳಮ್ಮ ಎಂಬ ಎಂಬತ್ತರ ವಯಸ್ಸಿನ ಕಣ್ಣು ಕಾಣದ ವೃದ್ಧೆ ಮತ್ತು ಮಾದೇವಿ-ದುರ್ಗಮ್ಮ ಹೆಸರಿನ 60ರ ಆಸುಪಾಸಿನ ಅವರ ಇಬ್ಬರು ಮಕ್ಕಳು ಮಾತ್ರ ಮನೆಯಲ್ಲಿದ್ದಾರೆ. 30 ವರ್ಷಗಳ ಹಿಂದೆಯೇ, ಮಾದೇವಿ-ದುರ್ಗಮ್ಮ ಇಬ್ಬರ ಗಂಡಂದಿರೂ ಸಾವನ್ನಪ್ಪಿದ್ದಾರೆ. ಅಂದಿನಿಂದಲೂ ತನ್ನ ತಂದೆ-ತಾಯಿಯ ಜೊತೆಗೇ ಈ ಇಬ್ಬರೂ ಹೆಣ್ಣುಮಕ್ಕಳ ವಾಸ; ಅವರ ತಂದೆ ಸಹ ಕೆಲವು ವರ್ಷಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಮಾದೇವಿ ಅವರಿಗೆ ಮಾತ್ರ ಒಬ್ಬಳು ಹೆಣ್ಣು ಮಗಳಿದ್ದು, ಅವರಿಗೆ ಮದುವೆ ಮಾಡಿದ್ದಾರೆ. ಭೂರಹಿತ ಕುಟುಂಬದ ಈ ಮೂವರೂ ಮಹಿಳೆಯರು ದೈಹಿಕವಾಗಿ ಸದೃಢರಾಗಿದ್ದಾಗ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ತಾಯಿಯಂತೆ ಮಾದೇವಿ-ದುರ್ಗಮ್ಮ ಅವರಿಗೂ ವಯಸ್ಸಾಗಿದೆ.. ಬಡತನದ ಜೊತೆಗೆ ಅನಾರೋಗ್ಯವೂ ಅವರ ಬೆನ್ನು ಬಿದ್ದಿದೆ. ಊರಿನ ಬೇರೆ ಜನರಂತೆ ಇವರಿಗೆ ಭೂಮಿಯೂ ಇಲ್ಲ.. ವಲಸೆ ಹೋಗಿ ದುಡಿಯುವಷ್ಟು ಕಸುವೂ ಸಹ ದೇಹದಲ್ಲಿಲ್ಲ. ಅಂತಹ ಸಂದರ್ಭದಲ್ಲಿ ಇವರಿಗೆ ನೆರವಾಗಿದ್ದೇ ವಿಧವಾ ವೇತನ ಮತ್ತು ಮನರೇಗಾ ಕೆಲಸ.

ಮೂವರಿಗೂ ವಿಧವಾ ವೇತನ ಬರುತ್ತದೆ.. ಇತ್ತೀಚಿಗೆ ರಾಜ್ಯ ಸರ್ಕಾರ ಘೋಷಿಸಿದ ಗ್ಯಾರಂಟಿ ಯೋಜನೆಯೂ ಸಿಗುತ್ತಿದೆ. ಆದರೆ, ಅದಕ್ಕೂ ಮೊದಲು ಇವರಿಗೆ ನೆರವಾಗಿದ್ದು ಉದ್ಯೋಗ ಖಾತ್ರಿ. ವಿಧವಾ ವೇತನದ ಜೊತೆಗೆ ವರ್ಷದಲ್ಲಿ ಮೂರು ತಿಂಗಳು ಸಿಗುತ್ತಿದ್ದ ನರೇಗಾ ಕಾಮಗಾರಿಯಲ್ಲಿ ಈ ಮಹಿಳೆಯರು ಕೆಲಸ ಮಾಡಿದ್ದಾರೆ. ಹೆಚ್ಚೇನೂ ದೈಹಿಕ ಶ್ರಮ ಬೇಡದ ಕೆಲಸ ಕೊಡುವುದರಿಂದ ತಪ್ಪದೇ ನರೇಗಾ ಕೂಲಿಯಾಳುಗಳಾಗಿ ದುಡಿಯುತ್ತಾರೆ. ಅದರಿಂದ ಬರುವ ವೇತನದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಜೊತೆಗೆ, ಮೂರ್ನಾಲ್ಕು ಆಡುಗಳನ್ನು ಸಾಕಿಕೊಂಡಿದ್ದು, ಗ್ರಾಮ ಪಂಚಾಯಿತಿ ವತಿಯಿಂದ ಕಟ್ಟಿಸಿಕೊಟ್ಟಿರುವ ಆಶ್ರಯ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಒಟ್ಟಾರೆ ಈ ಮೂವರು ಮಹಿಳೆಯರ ಬದುಕಿನಲ್ಲಿ ನರೇಗಾ ಯೋಜನೆ ಸಾಕಷ್ಟು ನೆರವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ನಮ್ಮೊಂದಿಗೆ ಮಾತನಾಡಿದ ಮಾದೇವಿ, “ನಾವು ಅಕ್ಕತಂಗಿ ಇಬ್ಬರೂ ಉದ್ಯೋಗ ಖಾತ್ರಿ ಕೆಲಸ ಮಾಡುತ್ತೇವೆ. ತಿಂಗಳಲ್ಲಿ 14 ದಿನ ಕೆಲಸ ನೀಡ್ತಾರೆ, ನಾನು ನನ್ನ ತಂಗಿ ಇಬ್ಬರೂ ಕೆಲಸ ಮಾಡ್ತೇವೆ. ಬರುವ ಹಣದಲ್ಲಿ ಮನೆ ಖರ್ಚು ನಿಭಾಯಿಸ್ತೇವೆ. ಬೇಸಿಗೆಯಲ್ಲಿ ಕೆಲಸ ಇಲ್ಲದಿದ್ದರೆ ಮನೆಯಲ್ಲೇ ಕೂರಬೇಕಾಗುತ್ತದೆ. ನಮಗೆ ಬರಬೇಕಾಗಿದ್ದ ವಿಧವಾವೇತನವನ್ನೂ ಹಲವು ವರ್ಷಗಳಿಂದ ನಿಲ್ಲಿಸಿದ್ದಾರೆ. ನನ್ನ ಮಗಳು ಮೂರು ವರ್ಷ ಇದ್ದಾಗಲೇ ಗಂಡ ತೀರಿಹೋದರು. ಮಳೆಗಾಲದಲ್ಲಿ ಕೂಲಿ ಕೆಲಸ ಮಾಡುತ್ತೇವೆ, ಇಬ್ಬರಲ್ಲಿ ಒಬ್ಬರು ಆಡು ಮೇಯಿಸುತ್ತಾರೆ. ಕಷ್ಟವಿದ್ದಾಗ ಪಡೆದ ಸಾಲವನ್ನು ನರೇಗಾ ಹಣ ಬಂದಾಗ ತೀರಿಸುತ್ತೇವೆ. ಸರ್ಕಾರದಿಂದ ಕೊಡುವ ಅಕ್ಕಿ ಕೊಟ್ಟು ಜೋಳ ಖರೀದಿ ಮಾಡುತ್ತೇವೆ. ಜೀವನ ಹೇಗೋ ನಡೆಯುತ್ತಿದೆ” ಎಂದರು.

ಗುಡ್ಡದ ನಡುವೆ ಜಲಕ್ರಾಂತಿ; ನರೇಗಾ ಕಾರ್ಮಿಕರ ಶ್ರಮ ಸಾರ್ಥಕ

ರಾಜ್ಯದಲ್ಲಿ ಅತ್ಯಂತ ಹೆಚ್ಚು ಬಾರಿ ಬರಕ್ಕೆ ತುತ್ತಾಗಿರುವ ಜಿಲ್ಲೆಗಳಲ್ಲಿ ರಾಯಚೂರು ಸಹ ಒಂದು.. ಲಿಂಗಸಗೂರು ತಾಲೂಕಿನ ಹಟ್ಟಿ ಗಣಿಯಲ್ಲಿ ಬೆಲೆಬಾಳುವ ಚಿನ್ನ ಸಿಗುತ್ತಿದ್ದರೂ, ಶುದ್ಧ ಕುಡಿಯುವ ನೀರು ಮಾತ್ರ ಲಭಿಸುತ್ತಿಲ್ಲ. ಹಟ್ಟಿಯಿಂದ ಕೇವಲ ಐದಾರು ಕಿಲೋಮೀಟರ್ ದೂರದಲ್ಲಿರುವ ವೀರಾಪುರ ಗ್ರಾಮ ಸಹ ಇದಕ್ಕೆ ಹೊರತಾಗಿಲ್ಲ. ಬೇಸಿಗೆಯಲ್ಲಿ ಈ ಊರಿನ ಜನ ಸಹ ನೀರಿಲ್ಲದೆ ಪರಿತಪಿಸುತ್ತಾರೆ. ಆದರೆ, ಅಚ್ಚರಿ ಎನಿಸಿದ್ದು, ಮೂರ್ನಾಲ್ಕು ವರ್ಷಗಳ ಕಾಲ ಈ ಊರಿನ ನರೇಗಾ ಕಾರ್ಮಿಕರ ಶ್ರಮದಿಂದ ಜಲಕ್ರಾಂತಿಯೇ ಆಗಿದೆ. ಊರಿನ ಗುಡ್ಡಗಳ ನಡುವೆ ಮಳೆಗಾಲದಲ್ಲಿ ಹರಿದುಹೋಗುತ್ತಿದ್ದ ನೀರಿಗೆ ದೊಡ್ಡ ಹೊಡ್ಡು ನಿರ್ಮಿಸಿದ್ದಾರೆ.. ಕಾಮಗಾರಿ ಸಂದರ್ಭದಲ್ಲಿ ಅಡ್ಡಸಿಕ್ಕಿದ ಕಲ್ಲುಬಂಡೆಯನ್ನೂ ಕಾರ್ಮಿಕರೇ ಕೈನಿಂದ ಹೊಡೆದು ಗೋಕಟ್ಟೆ ನಿರ್ಮಿಸಿದ್ದಾರೆ.. ಈಗ ಅಲ್ಲಿ ಬೇಸಿಗೆಯಲ್ಲೂ 10 ಅಡಿಗೂ ಹೆಚ್ಚು ನೀರು ನಿಲ್ಲುತ್ತದೆ. ಗುಡ್ಡಕ್ಕೆ ಮೇಯಲು ಬರುವ ದನಕರುಗಳು ಅಲ್ಲಿ ನೀರು ಕುಡಿಯುತ್ತವೆ. ಅಕ್ಕಪಕ್ಕದ ಜಮೀನಿನ ಬೋರ್ವೆಲ್‌ಗಳು ರೀಚಾರ್ಜ್ ಆಗಿದ್ದು, ಬೇಸಿಗೆಯಲ್ಲೂ ಬೆಳೆ ಬೆಳೆಯುತ್ತಿದ್ದಾರೆ.



ವೀರಾಪುರದ ಇಂತಹದ್ದೊಂದು ಜಲಕ್ರಾಂತಿಗೆ ಶ್ರಮಿಸಿದವರಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ವೀರಾಪುರ ಕೂಡಾ ಒಬ್ಬರು. ಬೆಂಗಳೂರಿನಲ್ಲಿ ಮಾಧ್ಯಮ ವೃತ್ತಿ ಮಾಡುತ್ತಿದ್ದ ರಮೇಶ್, ಕೆಲ ವರ್ಷಗಳ ಹಿಂದೆ ಕೆಲಸ ಬಿಟ್ಟು ಊರು ಸೇರಿದವರು. ಅಲ್ಲಿ ಹಟ್ಟಿ ಗಣಿ ಕಾರ್ಮಿಕರನ್ನು ಸಂಘಟಿಸುವ ಜೊತೆಗೆ, ತಾವೇ ಕಾರ್ಮಿಕರಾಗಿದ್ದುಕೊಂಡು ಸಾಕಷ್ಟು ನರೇಗಾ ಕಾಮಗಾರಿಗಳನ್ನೂ ಮಾಡಿಸಿದ್ದಾರೆ. ಕೊನೆಗೆ, ತಮ್ಮದೇ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು ಗೆದ್ದು, ಆ ಮೂಲಕ ಗ್ರಾಮದಲ್ಲಿ ಒಂದು ದೊಡ್ಡ ಗೋಕಟ್ಟೆ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.

ನಮ್ಮೊಂದಿಗೆ ಮಾತನಾಡಿದ ರಮೇಶ್ ವೀರಾಪುರ, “ಮನರೇಗಾ ಕೇವಲ ಒಂದು ಯೋಜನೆಯಾಗಿರಲಿಲ್ಲ.. ಒಂದು ಕಾನೂನಾಗಿತ್ತು. ಅದರ ಪರಿಣಾಮ ಜನರಿಗೆ ಉದ್ಯೋಗದ ಭದ್ರತೆ ಸಿಕ್ಕಿ, 100 ದಿನಗಳ ಉದ್ಯೋಗ ಖಾತ್ರಿ ನೀಡಿತ್ತು. ನಾವು ಅರ್ಜಿ ಹಾಕಿದ 14 ದಿನದ ಒಳಗೆ ಕೆಲಸ ನೀಡಬೇಕು ಎಂದು ಕಾನೂನಿನಲ್ಲೇ ಉಲ್ಲೇಖಿಸಲಾಗಿತ್ತು. ಜನರಿಗೆ ಓದುಬರಹ ಬರದೇ ಇದ್ದರೂ, ಫಾರ್ಮ್ ನಂ-6 ಪಡೆದು ಪಂಚಾಯಿತಿಗೆ ಅರ್ಜಿ ಕೊಟ್ಟರೆ ಕೆಲಸ ಸಿಗುತ್ತಿತ್ತು. ಕೆಲಸ ಮುಗಿದ 14 ದಿನಗಳ ಒಳಗೆ ವೇತನ ಕೂಡ ಸಿಗುತ್ತಿತ್ತು. ಅನೇಕ ಕಾರ್ಮಿಕರು ಭೂರಹಿತರು, ಅವರಲ್ಲಿ ಬಹಳಷ್ಟು ಜನ ಉದ್ಯೋಗ ಖಾತ್ರಿಯನ್ನು ಅವಲಂಬಿಸಿದ್ದಾರೆ. 100 ದಿನಗಳ ಕೆಲಸ ಮುಗಿದ ಬಳಿಕ ಮಳೆಗಾಲದಲ್ಲಿ ಬೇರೆಯವರ ಹೊಲದಲ್ಲಿ ದುಡಿಯುತ್ತಿದ್ದರು. ಆ ಮೂಲಕ ಜನರು ಗುಳೆ ಹೋಗುವುದು ತಪ್ಪುತ್ತಿತ್ತು” ಎಂದು ಹೇಳಿದರು.

“ಉದ್ಯೋಗ ಖಾತ್ರಿ ಯೋಜನೆಯಿಂದ ನಮ್ಮ ಗ್ರಾಮದಲ್ಲಿ ಸಾಕಷ್ಟು ಸಾಮಾಜಿಕ ಮತ್ತು ಪ್ರಾಕೃತಿಕ ಬದಲಾವಣೆಗಳನ್ನು ಕಂಡಿದೆ. ಮನರೇಗಾ ಮೂಲಕವೇ ಚರಂಡಿ, ಶಾಲಾ ಕಾಂಪೌಂಡ್, ಸಿಸಿ ರಸ್ತೆ ಸಹ ಮಾಡಿಸಿದ್ದೇವೆ. ನರೇಗಾದಿಂದಲೇ ವೀರಾಪುರ ಗುಡ್ಡದಲ್ಲಿ ಗೋಕಟ್ಟೆ ನಿರ್ಮಿಸಿ, ಹಳ್ಳಗಳಲ್ಲಿ ಹೂಳೆತ್ತಿ ನೀರು ನಿಲ್ಲಿಸಿದ್ದೇವೆ. ರೈತರ ಹೊಲಗಳಲ್ಲಿ ಕೃಷಿ ಹೊಂಡ, ಬದು, ಬಸಿಗಾಲುವೆ ಕಾಮಗಾರಿಗಳನ್ನೂ ಸಹ ಮಾಡಿದ್ದೇವೆ. ಈ ಯೋಜನೆಯ ಸಣ್ಣಪುಟ್ಟ ಅಡೆತಡೆಗಳನ್ನು ಕೇಂದ್ರ ಸರ್ಕಾರ ಸರಿಪಡಿಸಿ ಯೋಜನೆಯನ್ನು ಮುಂದುವರಿಸಬೇಕು” ಎಂದರು.

ನರೇಗಾ ಕಾರ್ಮಿಕನಾಗಿರುವ ಖಾಸಗಿ ಕಾಲೇಜು ಪ್ರಾಧ್ಯಾಪಕ

ಹಟ್ಟಿ ಬಳಿಯ ಮತ್ತೊಂದು ಗ್ರಾಮ ತವಗ (ರೋಡಲಬಂಡ ಗ್ರಾಮ ಪಂಚಾಯಿತಿ), ನಾವು ತವಗದ ಹೊಳೆ ತಲುಪುವ ಹೊತ್ತಿಗೆ 11 ಗಂಟೆಯಾಗಿತ್ತು. ಎರಡನೇ ಸುತ್ತಿನ ಹಾಜರಾತಿ ಪಡೆಯುವ ಹೊತ್ತು, ಎಲ್ಲರೂ ಊಟ ಮಾಡಿ ವಿಶ್ರಮಿಸುತ್ತಿದ್ದರು. ನರೇಗಾ ಕಾರ್ಮಿಕರಲ್ಲಿ ಬಹುತೇಕರು ಮಧ್ಯ ವಯಸ್ಕರು ಮತ್ತು ವೃದ್ದರೇ ಅಲ್ಲಿ ಕೆಲಸ ಮಾಡುತ್ತಿದ್ದರು. ಕೆಲವರು ಕಡಿಮೆ ವಯಸ್ಸಿನ ಮಹಿಳೆಯರು ಮತ್ತು ಯುವಕರಿದ್ದರು. ಆ ಗುಂಪಿನಲ್ಲಿ ಗಮನ ಸೆಳೆದದ್ದು ಕಾಶಿಪತಿ ಬಡಿಗೇರ್ ಎಂಬ ಯುವಕ. 30ರ ಆಸುಪಾಸಿನ ಕಾಶಿಪತಿ ವೃತ್ತಿಯಲ್ಲಿ ಖಾಸಗಿ ಕಾಲೇಜಿನ ಪ್ರಾಧ್ಯಾಪಕರಾಗಿದ್ದಾರೆ. ಕಾಲೇಜಿಗೆ ರಜೆ ಇರುವಾಗ ಈಗಲೂ ಅವರು ನರೇಗಾ ಯೋಜನೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಾರೆ. ಏಕೆಂದರೆ, ಖಾಸಗಿ ಕಾಲೇಜಿನಲ್ಲಿ ಅವರಿಗೆ ಕೊಡುವ ಸಂಬಳ ಹತ್ತು ಸಾವಿರ ರೂಪಾಯಿ ಅಷ್ಟೇ, ಮೂರು ತಿಂಗಳು ಅವರು ನರೇಗಾದಲ್ಲಿ ದುಡಿದರೆ, ಕಾಲೇಜಿನಲ್ಲಿ ಕೊಡುವುದಕ್ಕಿಂತಲೂ ಹೆಚ್ಚಿನ ವೇತನ ಸಿಗುತ್ತದೆ.

ನಮ್ಮ ಜೊತೆ ಮಾತಿಗಿಳಿದ ಕಾಶಿಪತಿ ಬಡಿಗೇರ್, “ನಾನು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ, ರಜೆ ಇದ್ದಾಗ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡ್ತೀನಿ. ಇದರಿಂದ ಎಲ್ಲ ಜನರಿಗೆ ಸಾಕಷ್ಟು ಅನುಕೂಲ ಆಗಿದೆ. ಗ್ರಾಮೀಣ ಭಾಗದ ಜನರಿಗೆ ಈ ಯೋಜನೆ ಅತ್ಯವಶ್ಯಕವಾಗಿದೆ. ಮೊದಲು ಬೇಸಿಗೆ ಆರಂಭವಾಗುತ್ತಿದ್ದಂತೆಯೇ ನಮ್ಮೂರಿನ ಬಹುತೇಕರು ಬೆಂಗಳೂರು-ಪುಣೆ ನಗರಗಳಿಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದರು. ಐದು ವರ್ಷದ ಹಿಂದೆ, ನಮಗೆ ಉದ್ಯೋಗ ಖಾತ್ರಿಯಲ್ಲಿ ನೋಂದಾಯಿಸಿಕೊಂಡ ಬಳಿಕ ಸಾಕಷ್ಟು ಜನರು ವಲಸೆ ಹೋಗುವುದು ತಪ್ಪಿದೆ. ಇದರಿಂದ ಬಡವರಿಗೆ ಆರ್ಥಿಕವಾಗಿ ಸಾಕಷ್ಟು ಅನುಕೂಲ ಆಗಿದೆ. ಉದ್ಯೋಗ ಖಾತ್ರಿಯಿಂದ ಬರುವ ಹಣದಲ್ಲಿ ಜನರು, ಆರೋಗ್ಯ, ಮಕ್ಕಳ ಶಿಕ್ಷಣ, ಮನೆ ಖರ್ಚು ನಿಭಾಯಿಸಲು ಬಳಸುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನನಗೆ ಸಂಬಳ ಕಡಿಮೆ ಇದೆ, ಅದು ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಉದ್ಯೋಗ ಖಾತ್ರಿಯಿಂದ ಬರುವ ಹಣ ಸಹಕಾರಿಯಾಗಿದೆ” ಎಂದರು.

ತವಗ ಗ್ರಾಮದ ದಲಿತ ಸಮುದಾಯದ ಮಹಿಳೆ ಹುಲಿಗೆಮ್ಮ ಮಾತನಾಡಿ, “ಸಾರ್ ನಮಗೆ ಉದ್ಯೋಗ ಖಾತ್ರಿ ಕೆಲಸ ಇನ್ನೂ ಹೆಚ್ಚಿನ ದಿನ ಬೇಕು. ಈ ಕೆಲಸ ಆರಂಭಿಸಿದ ಬಳಿಕ ನಾವು ಬೆಂಗಳೂರಿಗೆ ವಲಸೆ ಹೋಗುವುದನ್ನೇ ನಿಲ್ಲಿಸಿದ್ದೇವೆ. ಉದ್ಯೋಗ ಖಾತ್ರಿ ನಿಂತರೆ ನಾವು ಗುಳೇ ಹೋಗಲೇಬೇಕಾಗುತ್ತದೆ. ಬೆಂಗಳೂರಿನಲ್ಲಿ ನಾವು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದೆವು. ಮಳೆಗಾಲದಲ್ಲಿ ಜಮೀನಿನ ಕೂಲಿ ಕೆಲಸ ಮಾಡುತ್ತೇವೆ. ಬೇಸಿಗೆಯಲ್ಲಿ ಉದ್ಯೋಗ ಖಾತ್ರಿ ಕೆಲಸ ಸಿಗುತ್ತದೆ. ಇದರಿಂದ ಬರುವ ಹಣದಲ್ಲಿ ನಾವು ಮನೆ ಬಳಕೆ ವಸ್ತುಗಳನ್ನು ಕೊಳ್ಳುತ್ತೇವೆ, ಮಕ್ಕಳ ಶಿಕ್ಷಣಕ್ಕೂ ನೆರವಾಗುತ್ತಿದೆ. ಸಣ್ಣ-ಪುಟ್ಟ ಸಾಲವನ್ನೂ ತೀರಿಸಿದ್ದೇವೆ. ನಮಗೆ ಉದ್ಯೋಗ ಖಾತ್ರಿಯಲ್ಲಿ ಇನ್ನೂ ಹೆಚ್ಚಿನ ದಿನ ಕೆಲಸ ನೀಡಬೇಕು” ಎಂದರು.

ಲಿಂಗಸಗೂರು ಸಮೀಪದ, ಹೊನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡೋಣಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲೂ ಸಹ ಬೆಳ್ಳಂಬೆಳಗ್ಗೆಯೇ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಹೊಳೆ ಮತ್ತು ಕಾಲುವೆಗಳ ಹೂಳೆತ್ತುವ ಕೆಲಸ ಮಾಡುತ್ತಿದ್ದ ಅವರು, ನಮ್ಮೊಂದಿಗೆ ಮಾತಿಗಿಳಿದರು ಅಲ್ಲಿನ ಬಹುತೇಕ ಕಾರ್ಮಿಕರು ವೃದ್ಧರು ಮತ್ತು ಮಹಿಳೆಯರು.

70ರ ಆಸುಪಾಸಿನ ವೃದ್ಧೆ ಕೂಡ ಆ ಗುಂಪಿನ ಸದಸ್ಯರಲ್ಲಿ ಒಬ್ಬರು, “ನಮಗೆ ಉದ್ಯೋಗ ಖಾತ್ರಿಬೇಕು, ನಮ್ಮಂತ ಬಡವರು ಅದರಿಂದಲೇ ಬದುಕುತ್ತಿದ್ದೇವೆ. ಕೂಲಿ ಕೊಡೋರು, ಒಮ್ಮೆ ಕರೀತಾರಾ.. ಮತ್ತೊಮ್ಮೆ ಕರಿಯಂಗಿಲ್ಲ.. ಕೆಲಸ ಇಲ್ಲದಿದ್ರೆ ಮನೆಯಲ್ಲೇ ಕೂರಬೇಕು. ಆದ್ದರಿಂದ, ನಮಗೆ ಉದ್ಯೋಗ ಖಾತ್ರಿ ಬೇಕೇಬೇಕು. ನರೇಗಾ ಶುರು ಆದಾಗಿನಿಂದ ಕೆಲಸ ಮಾಡ್ತಿದ್ದೇನೆ” ಎಂದರು.

ಅದೇ ಗುಂಪಿನ ಮತ್ತೋರ್ವ ವೃದ್ಧೆ ಗಂಗಮ್ಮ ಮಾತನಾಡಿ, “ನಮ್ಮ ಕಟುಂಬ ಈಗ ಇಬ್ಭಾಗವಾಗಿ ಬೇರೆಬೇರೆಯಾಗಿದ್ದಾರೆ. ನರೇಗಾದಿಂದ ಬರುವ ಹಣದಲ್ಲಿ ನಾವು ಹೊಲಕ್ಕೆ ಗೊಬ್ಬರ ಖರೀದಿಸುತ್ತೇವೆ. ಮೊಮ್ಮಕ್ಕಳು ಆಗಾಗ ಹಣ ಕೇಳ್ತಾರೆ, ಅವರಿಗೆ ಕೊಡಬೇಕು. ನಮ್ಮ ಖರ್ಚಿಗೆ ಯಾರೂ ದುಡ್ಡು ಕೊಡಲ್ಲ. ಉದ್ಯೋಗ ಖಾತ್ರಿಯಿಂದ ನೆರವಾಗಿದೆ” ಅಂತಾರೆ.

ಕಲಬುರಗಿಯಲ್ಲಿ ಕ್ರಾಂತಿ ಮಾಡಿದ ನರೇಗಾ ಕಾರ್ಮಿಕರು

ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ, ಅದರಲ್ಲೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮನರೇಗಾ ಪರಿಣಾಮಕಾರಿಯಾಗಿ ಜಾರಿಯಾಗಿದೆ. ಬಹುತೇಕ ಹಳ್ಳಿಗಳ ಜನರು ಈ ಬಗ್ಗೆ ಜಾಗೃತಿ ಹೊಂದಿದ್ದಾರೆ. ರಾಯಚೂರು ಜಿಲ್ಲೆಯಿಂದ ಕಲಬುರಗಿಗೆ ಪ್ರಯಾಣಿಸಿದ ನಮಗೆ, ಅಲ್ಲಿನ ಮೂರೇ ಮೂರು ಹಳ್ಳಿಗಳಲ್ಲಿ ನರೇಗಾ ಕಾರ್ಮಿಕರು ನಡೆಸಿರುವ ಕ್ರಾಂತಿ ನೋಡಿ ಅಚ್ಛರಿಯಾಯಿತು. ಜನವಾದಿ ಮಹಿಳಾ ಸಂಘಟನೆಯ ಪ್ರಮುಖರಾದ ಕೆ.ನೀಲಾ ಮತ್ತು ಮೀನಾಕ್ಷಿ ಬಾಳಿ ಅವರ ತಂಡದ ಮನವರಿಕೆಯ ಬಳಿಕ ಬಹುತೇಕ ಹಳ್ಳಿಗಳ ಜನರು ಪ್ರತಿ ವರ್ಷ ನರೇಗಾ ಕೆಲಸ ಮಾಡುತ್ತಾರೆ.. ಗ್ರಾಮ ಪಂಚಾಯಿತಿಗೆ ತಾವೇ ಖುದ್ದಾಗಿ ತೆರಳಿ ಅರ್ಜಿ ಕೊಟ್ಟು ಕೆಲಸ ಮಂಜೂರು ಮಾಡಿಸುತ್ತಾರೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ, ಕೆಲವರು ಚಿನ್ನ ಖರೀದಿಸಿದರೆ, ಮತ್ತೆ ಕೆಲವರು ಆಶ್ರಯ ಯೋಜನೆಯ ಸಹಾಯಧನ ಜೊತೆಗೆ ನರೇಗಾ ಕೂಲಿ ಹಣದಿಂದ ಮನೆಯನ್ನೂ ಕಟ್ಟುತ್ತಿದ್ದಾರೆ. ಕಲಬುರಗಿ ಸುತ್ತಮುತ್ತಲಿನ ಹಳ್ಳಿಯಾದ ಭೋಪಾಲ್ ತೆಗನೂರ ಪಾಳ, ಅಜಾದ್ ಪುರ ಗ್ರಾಮಗಳಲ್ಲಿ ಕಾರ್ಮಿಕರು ಕೆರೆಗಳನ್ನು ಪುನರುಜ್ಜೀವಗೊಳಿಸಿದ್ದಾರೆ.

ಶಾಲೆಯ ಮೆಟ್ಟಿಲನ್ನೇ ತುಳಿಯದ ಭೋಪಾಲ್ ತೆಗನೂರ ಗ್ರಾಮದ ಶೋಭಾ ಪುಂಡಲೀಕ ಈಗ ಜನವಾದಿ ಮಹಿಳಾ ಸಂಘಟನೆಯ ಸದಸ್ಯೆ, ಮಹಿಳಾ ದೌರ್ಜನ್ಯ ವಿರೋಧಿ ಮತ್ತು ರೈತ ಹೋರಾಟಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದಾರೆ. “ಓದಲು ಬರೆಯಲು ಬಾರದ ನನಗೆ ಇಷ್ಟೆಲ್ಲಾ ಜಾಗೃತಿ ಮೂಡಿದ್ದು ನರೇಗಾದಿಂದ, ಜನವಾದಿ ಮಹಿಳಾ ಸಂಘಟನೆಯ ನೀಲಾ ಮೇಡಂ ಅವರಿಂದ” ಎನ್ನುತ್ತಾರೆ ಶೋಭಾ.

ನಮ್ಮೊಂದಿಗೆ ಮಾತನಾಡಿದ ಶೋಭಾ, “ವೆಂಕಟ ಬೇನೂರು ಗ್ರಾಮದಲ್ಲಿ ನಾವು ಉದ್ಯೋಗ ಖಾತ್ರಿ ಕೆಲಸ ಮಾಡುವ ಮೂಲಕ ಅಲ್ಲಿನ ಕೆರೆ ಹೂಳು ತೆಗೆದಿದ್ದೇವೆ. ಇದರಿಂದ ಜನಗಳಿಗೆ ಹಾಗೂ ದನಕರುಗಳಿಗೆ ಕುಡಿಯುವಷ್ಟು ನೀರು ನಿಲ್ಲುತ್ತಿದೆ. ನರೇಗಾದಿಂದ ಬಂದ ಹಣದಲ್ಲಿ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದೇವೆ. ಇಬ್ಬರು ಮಕ್ಕಳು ಪದವಿ ಓದಿದ್ದಾರೆ. ಮತ್ತೊಬ್ಬ ಮಗ ಪಿಯುಸಿ ಮುಗಿಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಖಾತ್ರಿ ಹಣ ಹಾಗೂ ಸರ್ಕಾರದ ಸಹಾಯಧನ ಪಡೆದು, ನಾಲ್ಕೈದು ಲಕ್ಷ ಖರ್ಚು ಮಾಡಿ ಮನೆ ಕಟ್ಟಿಕೊಂಡಿದ್ದೇವೆ. ನಮಗೆ ಜಮೀನಿಲ್ಲ.. ಮಳೆಗಾಲದಲ್ಲಿ ಬೇರೆಯವರ ಹೊಲದಲ್ಲಿ ಕೆಲಸ ಮಾಡುತ್ತೇವೆ, ಬೇಸಿಗೆಯಲ್ಲಿ ಉದ್ಯೋಗ ಖಾತ್ರಿ ಕೆಲಸ ಮಾಡುತ್ತೇವೆ. ಗಂಡಹೆಂಡತಿ ಇಬ್ಬರೂ ಸೇರಿ ದುಡಿದು ಸಾಕಷ್ಟು ಹಣ ಗಳಿಸುತ್ತಿದ್ದೇವೆ. ಕೂಲಿಗೆ ಹೋದರೆ ಹಣ ಕಡಿಮೆ, ನರೇಗಾದಲ್ಲಿ ಗಂಡುಹೆಣ್ಣಿಗೆ ಸಮಾನವಾಗಿ ಕೂಲಿ ಕೊಡ್ತಾರೆ.. ಉದ್ಯೋಗ ಖಾತ್ರಿ ಉಳಿಯಲೇಬೇಕು ಎಂದು ನಾವು ಹೋರಾಟ ಕೂಡಾ ಮಾಡುತ್ತಿದ್ದೇವೆ” ಎಂದರು.

ಶೋಭಾ ಮತ್ತು ಅವರ ಪತಿ ಕಳೆದ ಏಳು-ಎಂಟು ವರ್ಷ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿದು ಮನೆ ಕಟ್ಟುತ್ತಿದ್ದಾರೆ. ಪ್ರತಿ ಬೇಸಿಗೆಯಲ್ಲಿ ನರೇಗಾ ಹಣ ಬಂದಾಗ ಮನೆ ಕೆಲಸ ಮಾಡಿಸುವುದು, ಮೂರು ಮಕ್ಕಳಿಗೆ ಓದಿಸುವುದಕ್ಕೆ ಬಳಸುತ್ತಿದ್ದಾರೆ. ಉದ್ಯೋಗ ಖಾತ್ರಿ ಕೆಲಸ ಇಲ್ಲದಾಗ, ಕೃಷಿ ಕೂಲಿಕಾರರಾಗಿ ಕೆಲಸ ಮಾಡ್ತಾರೆ. ಜನವಾದಿ ಮಹಿಳಾ ಸಂಘಟನೆಯಲ್ಲಿ ಸಕ್ರಿಯರಾಗಿರುವ ಅವರು, ಉದ್ಯೋಗ ಖಾತ್ರಿ, ರೈತ ಹೋರಾಟ, ಸಾರಾಯಿ ನಿಷೇಧ ಸೇರಿದಂತೆ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ.

ತಮ್ಮ ಹೋರಾಟದ ಬದುಕಿನ ಕುರಿತು ಮಾತನಾಡಿದ ಅವರು, “ಮೊದಲು ನಾನು ಗುಲ್ಬರ್ಗಕ್ಕೆ ಹೋಗಲಿಕ್ಕೂ ಹೆದರುತ್ತಿದ್ದೆ, ಉದ್ಯೋಗ ಖಾತ್ರಿ ಯೋಜನೆ ಪರಿಚಯ ಆದಮೇಲೆ ನಾನೇ ಈಗ ಹತ್ತು ಜನರನ್ನು ಕರೆದುಕೊಂಡು ಬೆಂಗಳೂರಿಗೆ ಹೋರಾಟಕ್ಕೆ ಹೋಗುತ್ತೇನೆ” ಎಂದು ಆತ್ಮವಿಶ್ವಾಸದಿಂದ ಮಾತನಾಡಿದರು.

ವೆಂಕಟ ಬೇನೂರಿನ ಯುವ ರೈತ ಬಂಗಾರಪ್ಪ ಮಾತನಾಡಿ, “ನಮ್ಮೂರು ಮತ್ತು ಪಕ್ಕದ ಊರಿನ ಜನರೆಲ್ಲಾ ಸೇರಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಕೆರೆ ಹೂಳೆತ್ತುವ ಕೆಲಸ ಮಾಡಿದ್ದೇವೆ. ಮೊದಲು ಕೆರೆಯಲ್ಲಿ ನೀರು ನಿಲ್ಲುತ್ತಿರಲಿಲ್ಲ. ಎರಡು ವರ್ಷ ನಿರಂತರವಾಗಿ ಕೆಲಸ ಮಾಡಿದ್ದೇವೆ, ಪ್ರತಿವರ್ಷ ಬೇಸಿಗೆಯಲ್ಲಿ ಸ್ವಲ್ಪ ಸ್ವಲ್ಪ ಕೆಲಸ ಮಾಡಿದ್ದೇವೆ. ಈಗ ಕೆರೆಯಲ್ಲಿ ದನಕರುಗಳಿಗೆ ಕುಡಿಯುವುದಕ್ಕೆ ನೀರು ನಿಲ್ಲುತ್ತಿದೆ. ಕೆರೆ ನೋಡುವುದಕ್ಕೂ ಸುಂದರವಾಗಿದೆ. ಬಿಡುವಿದ್ದಾಗ ಇಲ್ಲಿ ಬಂದು ಕೂರುತ್ತೇವೆ” ಎಂದರು.

ಕಲಬುರಗಿ ಸಮೀಪದಲ್ಲೇ ಇರುವ ಅಝಾದ್ ಪುರದಲ್ಲಿ ಸಹ ಕೆರೆ ಪುನರುಜ್ಜೀವಗೊಂಡಿದೆ. ಇಲ್ಲಿಯೂ ಸಹ ಜನವಾದಿ ಮಹಿಳಾ ಸಂಘಟನೆಯ ಸಂಪರ್ಕದಿಂದ ನರೇಗಾ ಕುರಿತು ಹೆಚ್ಚಿನ ಜಾಗೃತಿ ಮೂಡಿದೆ.

ನಮ್ಮೊಂದಿಗೆ ಮಾತನಾಡಿದ ಅಜಾದ್ ಪುರದ ಶೋಭಾ ಅನಿಲ್, “ಕಳೆದ ಹತ್ತು ವರ್ಷದಿಂದ ನಾವು ನರೇಗಾ ಕೆಲಸ ಮಾಡುತ್ತಿದ್ದೇವೆ. ಒಮ್ಮೆ ನಾವು ಮಾಡಿದ ಕೂಲಿ ಎಷ್ಟು ದಿನಗಳಾದರೂ ಬಂದಿರಲಿಲ್ಲ. ಜಿಲ್ಲಾಕೇಂದ್ರಕ್ಕೆ ತೆರಳಿದ ನಾವು ರಾತ್ರಿ 11 ಗಂಟೆವರೆಗೂ ಅಲ್ಲೇ ಕುಳಿತು ಹಣ ಜಮಾ ಮಾಡಿಸಿದ್ದೆವು. ಅದರಿಂದ ಬಂದ ಹಣದಲ್ಲಿ ಮಕ್ಕಳ ಶಿಕ್ಷಣಕ್ಕೆ ಬಳಸಿದ್ದೇವೆ. ನಮ್ಮ ಊರಿನ ಕೆರೆ ಮತ್ತು ಕಾಲುವೆ ಹೂಳು ತೆಗೆದಿದ್ದೇವೆ. ಉದ್ಯೋಗ ಖಾತ್ರಿ ಆರಂಭಿಸಿದ ಬಳಿಕ, ಜನವಾದಿ ಸಂಘಟನೆ ಜೊತೆಗೂಡಿ ಮಹಿಳಾ, ರೈತ ಮತ್ತು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದ್ದೇವೆ. ಊರಿನ ಹೆಣ್ಣುಮಕ್ಕಳೆಲ್ಲರೂ ಒಗ್ಗಟ್ಟಾಗಿದ್ದೇವೆ” ಎಂದು ಮಾತನಾಡಿದ ಶೋಭಾ ಅವರ ಮುಖದಲ್ಲೂ ಆತ್ಮವಿಶ್ವಾಸ ಕಾಣುತ್ತಿತ್ತು.

ಕಲಬುರಗಿಯಲ್ಲಿ ನಾವು ಕೊನೆಯದಾಗಿ ಭೇಟಿ ಕೊಟ್ಟ ಗ್ರಾಮ ಪಾಳ, ಇಲ್ಲಿ ಹಲವಾರು ನರೇಗಾ ಯಶಸ್ವಿಗಾಥೆಗಳಿವೆ. ಮಕ್ಕಳ ಉನ್ನತ ಶಿಕ್ಷಣ, ಮದುವೆ, ಮನೆ ಕಟ್ಟಲು ಮತ್ತು ಭೂರಹಿತ ದೇವದಾಸಿ ಮಹಿಳೆಯರ ಜೀವನ ನಿರ್ವಹಣೆಗೆ ನರೇಗಾ ಕೂಲಿ ನೆರವಾಗಿದೆ. ಕಾರ್ಮಿಕರ ಪರಿಶ್ರಮದಿಂದ ಗ್ರಾಮದ ದೊಡ್ಡ ಕೆರೆಯೊಂದು ಪುನರುಜ್ಜೀವಗೊಂಡಿದೆ.

ಉದ್ಯೋಗ ಖಾತ್ರಿ ಹಣದಿಂದ ಮಗಳಿಗೆ ಪತ್ರಿಕೋದ್ಯಮ, ಮಗನನ್ನು ಸೈನ್ಸ್ ಓದಿಸಿದ ದಂಪತಿ

ಪಾಳ ಗ್ರಾಮದ ಮಾದೇವಿ ಚಂದಯ್ಯ ಮಾತನಾಡಿ, “ಜನವಾದಿ ಮಹಿಳಾ ಸಂಘಟನೆಯವರು ನಮಗೆ ಉದ್ಯೋಗ ಖಾತ್ರಿ ಪರಿಚಯಿಸಿದರು. ಈ ಯೋಜನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ನಮಗೆ ಮನವರಿಕೆ ಮಾಡಿಕೊಟ್ಟರು. ಅವರ ಮಾತಿನ ಬಳಿಕ ನಾವು ಕೆಲಸ ಆರಂಭಿಸಿದ್ದೇವೆ. ಇದರಿಂದ ನಮಗೆ ಸಾಕಷ್ಟು ಒಳ್ಳೆಯದಾಗಿದೆ. ನೂರು ರೂಪಾಯಿಯಿಂದ ಮುನ್ನೂರು ರೂಪಾಯಿ ದಾಟುವವರೆಗೂ ನಾವು ಕೆಲಸ ಮಾಡಿದ್ದೇವೆ. ಉದ್ಯೋಗ ಖಾತ್ರಿ ಹಣದಿಂದ ನಮ್ಮ ಮಕ್ಕಳಿಗೆ ಓದಿಸಿದ್ದೇವೆ. ದೊಡ್ಡ ಮಗಳು ಪತ್ರಿಕೋದ್ಯಮ ಮಾಡಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಳೆ. ಎರಡನೇ ಮಗ ಸೈನ್ಸ್ ಓದಿದ್ದಾನೆ. ಮೂರನೇ ಮಗ ಬಿ.ಕಾಂ, ಸಣ್ಣವನು ಊರಲ್ಲೇ ಓದುತ್ತಿದ್ದಾನೆ. ಉದ್ಯೋಗ ಖಾತ್ರಿ ಮತ್ತು ಕೂಲಿ ಕೆಲಸದ ಮೂಲಕ ಮಕ್ಕಳನ್ನು ಓದಿಸುತ್ತಿದ್ದೇವೆ. ಬೆಳಗ್ಗೆ ಉದ್ಯೋಗ ಖಾತ್ರಿ ಕೆಲಸ ಮಾಡಿ, ಮಧ್ಯಾಹ್ನದ ಬಳಿಕ ನಮ್ಮ ಹೊಲದಲ್ಲಿ ಕೆಲಸ ಮಾಡಿದ್ದೇವೆ. ಉದ್ಯೋಗ ಖಾತ್ರಿ ಮೂಲಕ ಕೆರೆಯಲ್ಲಿ ಕಳೆ- ಹೂಳು ತೆಗೆದಿದ್ದೇವೆ. ನೀಲಾ ಮೇಡಂ ಪರಿಚಯವಾದ ಬಳಿಕ ಉದ್ಯೋಗ ಖಾತ್ರಿ ವೇತನ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಭಾಗವಹಿಸಿದ್ದೇವೆ. ಕಲಬುರಗಿ, ಸುತ್ತಲಿನ ಹಳ್ಳಿ ಹಾಗೂ ಬೆಂಗಳೂರಿಗೂ ಹೋಗಿ ಹೋರಾಟದಲ್ಲಿ ಭಾಗಿಯಾಗಿದ್ದೇವೆ” ಎಂದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...