Homeಕರ್ನಾಟಕಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

- Advertisement -
- Advertisement -

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ ಚರ್ಚೆಗೆ ತೆರೆ ಎಳೆಯಲಾಗಿದೆ.

ಡಿ.ಕೆ ಶಿವಕುಮಾರ್ ಅವರ ಹೊಸ ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿ (ಬಲಗೈ) ಸಮುದಾಯದ ಡಾ.ಜಿ ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ. ಸಚಿವರಾಗಿ ಲಿಂಗಾಯತ ಸಮುದಾಯದ ಎಂ.ಬಿ ಪಾಟೀಲ್, ಕ್ರಿಶ್ಚಿಯನ್ ಸಮುದಾಯದ ಕೆ.ಜೆ.ಜಾರ್ಜ್, ಪರಿಶಿಷ್ಟ ಜಾತಿ (ಎಡಗೈ) ಸಮುದಾಯದ ಕೆ.ಎಚ್.ಮುನಿಯಪ್ಪ, ರೆಡ್ಡಿ ಸಮುದಾಯದ ರಾಮಲಿಂಗಾರೆಡ್ಡಿ, ಪರಿಶಿಷ್ಟ ಪಂಗಡದ ಸತೀಶ್ ಜಾರಕಿಹೊಳಿ, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಯು.ಟಿ ಖಾದರ್, ಒಕ್ಕಲಿಗ ಸಮುದಾಯದ ಕೃಷ್ಣಬೈರೇಗೌಡ, ಪರಿಶಿಷ್ಟ ಜಾತಿ (ಬಲಗೈ) ಸಮುದಾಯದ ಪ್ರಿಯಾಂಕ್ ಖರ್ಗೆ, ಕುರುಬ ಸಮುದಾಯದ ಯತೀಂದ್ರ ಸಿದ್ದರಾಮಯ್ಯ, ಲಿಂಗಾಯತ ಸಮುದಾಯದ ಶರಣಪ್ರಕಾಶ್ ಪಾಟೀಲ್, ಕುರುಬ ಸಮುದಾಯದ ಬೈರತಿ ಸುರೇಶ್, ಲಿಂಗಾಯತ ಸಮುದಾಯದ ಈಶ್ವರ್ ಖಂಡ್ರೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಈ ಮೂಲಕ ಹೊಸ ಸರ್ಕಾರದ ಮೊದಲ ಹಂತದಲ್ಲಿ ಪರಿಶಿಷ್ಟ ಜಾತಿ (ಬಲಗೈ) ಸಮುದಾಯದ ಇಬ್ಬರು, ಎಡಗೈ ಸಮುದಾಯದ ಒಬ್ಬರು, ಲಿಂಗಾಯತ ಸಮುದಾಯದ ಮೂವರು, ಒಕ್ಕಲಿಗ ಸಮುದಾಯದ ಇಬ್ಬರು, ಕುರುಬ ಸಮುದಾಯದ ಇಬ್ಬರು, ಪರಿಶಿಷ್ಟ ಪಂಗಡ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ರೆಡ್ಡಿ ಸಮುದಾಯದ ತಲಾ ಒಬ್ಬರಿಗೆ ಸ್ಥಾನ ದೊರೆತಿದೆ.

ಜಾತಿ ಲೆಕ್ಕಾಚಾರಗಳನ್ನು ನೋಡಿದರೆ ಒಂದಷ್ಟು ಪ್ರಮುಖ ಜಾತಿಗಳಿಗೆ ಮೊದಲ ಹಂತದಲ್ಲಿ ಪ್ರಾತಿನಿಧ್ಯ ಕೊಟ್ಟು ಸಮಾಧಾನಪಡಿಸಲಾಗಿದೆ. ಆದರೆ, ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹೆಚ್‌.ಸಿ ಮಹದೇವಪ್ಪ, ಹೆಚ್‌.ಕೆ ಪಾಟೀಲ್, ಸಂತೋಷ್ ಲಾಡ್, ಝಮೀರ್ ಅಹ್ಮದ್‌ರಂತಹ ಹಿರಿಯ ಮತ್ತು ಪ್ರಮುಖ ನಾಯಕರನ್ನು ಹೊರಗಿಟ್ಟಿರುವುದು ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಮುಖವಾಗಿ, ಝಮೀರ್ ಅಹ್ಮದ್ ಅವರಿಗೆ ಮೊದಲ ಹಂತದಲ್ಲಿ ಅವಕಾಶ ಸಿಗದಿರುವುದಕ್ಕೆ ಮುಸ್ಲಿಂ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ. ಮುಸ್ಲಿಂ ಸಮುದಾಯದಿಂದ ಯು.ಟಿ ಖಾದರ್ ಅವರಿಗೆ ಅವಕಾಶ ನೀಡಲಾಗಿದೆಯಾದರೂ, ಝಮೀರ್ ಅಹ್ಮದ್ ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಮುಸ್ಲಿಮರ ಮಾಸ್ ಲೀಡರ್ ಎನಿಸಿಕೊಂಡಿದ್ದಾರೆ. ಕೇವಲ ಮುಸ್ಲಿಮರಷ್ಟೇ ಅಲ್ಲದೆ, ದಲಿತರು, ಕ್ರೈಸ್ತರು ಸೇರಿದಂತೆ ಹಿಂದುಳಿದ, ತಳ ಸಮುದಾಯಗಳ ಜನ ಬೆಂಬಲವೂ ಝಮೀರ್ ಅಹ್ಮದ್ ಅವರಿಗಿದೆ.

ಉಳ್ಳಾಲದಲ್ಲಿ ಹೆಚ್ಚಿನ ಮತಗಳು ಮುಸ್ಲಿಮರದ್ದೇ ಇದೆ, ಹಾಗಾಗಿ, ಯುಟಿ ಖಾದರ್ ಸುಲಭವಾಗಿ ಗೆಲ್ಲುತ್ತಾರೆ. ಆದರೆ, ಚಾಮರಾಜಪೇಟೆಯಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕವಲ್ಲ. ಇಲ್ಲಿ ಝಮೀರ್ ಅಹ್ಮದ್ ಗೆಲ್ಲಬೇಕಾದರೆ ಎಲ್ಲಾ ಸಮುದಾಯಗಳ ಮತಗಳು ಬೇಕು. ಚಾಮರಾಜಪೇಟೆಯಲ್ಲಿ ಝಮೀರ್ ಸತತ ಗೆಲುವಿನ ಹಿಂದೆ ಮುಸ್ಲಿಮರ ಜೊತೆ ದಲಿತರು ಸೇರಿದಂತೆ ಇತರ ಹಿಂದುಳಿದವರ ಬೆಂಬಲವಿದೆ. ಎಲ್ಲಾ ಜನ ಸಮುದಾಯವನ್ನು ವಿಶ್ವಾಸದಲ್ಲಿ ಮುನ್ನಡೆಸುವಲ್ಲಿ ಝಮೀರ್ ಅಹ್ಮದ್ ಸಫಲರಾಗಿದ್ದಾರೆ ಎನ್ನಲಾಗ್ತಿದೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ವೇಳೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಝಮೀರ್ ಅಹ್ಮದ್ ನೇತೃತ್ವದ ತಂಡ ಒತ್ತಾಯಿಸಿತ್ತು. ಆಗ ತಮ್ಮ ಮಗನಿಗೆ ಟಿಕೆಟ್ ಕೈ ತಪ್ಪುವ ಆತಂಕದಲ್ಲಿದ್ದ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ್, ತನ್ನ ಸಹೋದ್ಯೋಗಿಯಾಗಿದ್ದ ಹಿರಿಯ ನಾಯಕ ಝಮೀರ್ ಅಹ್ಮದ್ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಇದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿತ್ತು.

ಅತಿ ಹೆಚ್ಚು ಮುಸ್ಲಿಂ ಮತಗಳಿದ್ದರೂ, ದಾವಣಗೆರೆ ದಕ್ಷಿಣದಲ್ಲಿ ಝಮೀರ್ ಅಹ್ಮದ್ ತಂಡದ ಬೇಡಿಕೆಯನ್ನು ಕಡೆಗಣಿಸಿ, ಕಾಂಗ್ರೆಸ್ ಹೈಕಮಾಂಡ್ ಸಮರ್ಥ್ ಶಾಮನೂರುಗೆ ಟಿಕೆಟ್ ನೀಡಿತು. ಟಿಕೆಟ್ ಸಿಗದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅವರನ್ನು ಚುನಾವಣೆ ಬಳಿಕ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ನಸೀರ್ ಅಹ್ಮದ್ ಅವರನ್ನು ಆ ಹುದ್ದೆಯಿಂದ ಬಿಡುಗಡೆಗೊಳಿಸಿತು. ಝಮೀರ್ ಅಹ್ಮದ್ ಅವರ ತಲೆದಂಡ ಆಗುವ ಸಾಧ್ಯತೆಯೂ ಇತ್ತು. ಆದರೆ, ಝಮೀರ್ ಅವರಿಗೆ ಇರುವ ಜನ ಬೆಂಬಲದಿಂದ ಅವರು ಉಳಿದುಕೊಂಡರು ಎಂದು ಹೇಳಲಾಗ್ತಿದೆ.

ಹೊಸ ಸರ್ಕಾರ ರಚನೆಯ ವೇಳೆ ದಾವಣಗೆರೆ ಗೊಂದಲಗಳು ತಣ್ಣಗಾಗಿತ್ತು. ಹಾಗಾಗಿ, ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಹಾಗೂ ಹಿರಿಯರಾದ ಝಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಅವರ ಬೆಂಬಲಿಗರು ನಂಬಿದ್ದರು. ಆದರೆ, ಈ ನಡುವೆ ವೈರಲ್ ಆದ ಆಡಿಯೋ ಒಂದು ಝಮೀರ್ ಅವರ ಅವಕಾಶ ತಪ್ಪಿಸಿತಾ? ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ದಾವಣಗೆರೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡದ ಕೋಪದಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಝಮೀರ್ ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಝಮೀರ್ ಅಹ್ಮದ್ ತಮ್ಮ ಆಪ್ತ ಮೊಹಮ್ಮದ್ ಸಿರಾಜ್ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಕಾಲ್ ರೆಕಾರ್ಡ್ ಆಡಿಯೋ ವೈರಲ್ ಆಗಿದೆ. ಹೊಸ ಸರ್ಕಾರ ರಚನೆಯಾಗುವ ಸಮಯದಲ್ಲೇ ಆಡಿಯೋ ಹೊರ ಬಂದಿರುವುದು ಝಮೀರ್ ಅವರಿಗೆ ಸಚಿವ ಸ್ಥಾನ ಕೈ ತಪ್ಪುವಂತೆ ಮಾಡಿತು ಎನ್ನಲಾಗ್ತಿದೆ. ಮತ್ತೊಂದೆಡೆ ಅಡಿಯೋ ಬಿಡುಗಡೆ ಮಾಡುವ ಮೂಲಕ ಉದ್ದೇಶಪೂರ್ವಕವಾಗಿ ಝಮೀರ್ ಅವರಿಗೆ ಸಚಿವ ಸ್ಥಾನ ಕೈ ತಪ್ಪುವಂತೆ ಮಾಡಲಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ಆಡಿಯೋ ವೈರಲ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಾಜಿ ಸಚಿವ ಎಸ್‌ಎಸ್‌ ಮಲ್ಲಿಕಾರ್ಜನ್, “ಝಮೀರ್‌ ಮಾತನಾಡಿದ ಆಡಿಯೋ ಈಗ ಹೊರಬಂದಿದೆ. ಬಿಜೆಪಿಗೆ ಸಹಾಯ ಮಾಡಲು ಅವರು ಹೀಗೆ ಮಾಡಿದ್ದಾರೆ. ಅವರಿಗೆ ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ ಆಗಿದೆ” ಎಂದು ಹೇಳಿದ್ದರು.

ಹೊಸ ಸರ್ಕಾರ ರಚನೆಯ ಸಂದರ್ಭದಲ್ಲೇ ಆಡಿಯೋ ಬಿಡುಗಡೆ ಮಾಡಿದವರು ಯಾರು? ಅದು ನಿಜವಾದ ಆಡಿಯೋ ಹೌದಾ? ದಾವಣಗೆರೆ ಚುನಾವಣೆ ನಡೆದು ತಿಂಗಳು ಕಳೆದ ಬಳಿಕ, ಈಗ ಆಡಿಯೋ ವೈರಲ್ ಆಗಲು ಕಾರಣ ಏನು? ಎಂಬ ಪ್ರಶ್ನೆಗಳು ಈಗ ಮೂಡಿವೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಶೇಕಡ 88ರಷ್ಟು ಮುಸ್ಲಿಮರು ಕಾಂಗ್ರೆಸ್‌ ಮತಚಲಾಯಿಸಿದ್ದಾರೆ ಎಂದು ವರದಿಯಾಗಿತ್ತು. 2018ರ ಚುನಾವಣೆಗೆ ಹೋಲಿಸಿದರೆ (ಆಗ ಶೇ. 61ರಷ್ಟು ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿದ್ದರು), 2023ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯದಿಂದ ದಾಖಲೆಯ ಶೇ. 27ರಷ್ಟು ಮತಗಳು ಹೆಚ್ಚಳವಾಗಿದ್ದವು.

ರಾಜ್ಯದಲ್ಲಿ ಪ್ರಸ್ತುತ ಮುಸ್ಲಿಂ ಜನಸಂಖ್ಯೆ ಸುಮಾರು ಶೇಕಡ 13 ರಿಂದ 14 ರಷ್ಟಿದೆ. ರಾಜ್ಯದ ಒಟ್ಟು ಸಚಿವ ಸಂಪುಟದ ಗರಿಷ್ಠ ಮಿತಿ 34 ಸಚಿವರು (ಮುಖ್ಯಮಂತ್ರಿ ಸೇರಿ). ಜನಸಂಖ್ಯೆಯ ಈ ಶೇಕಡಾವಾರು ಅನುಪಾತವನ್ನು (13-14%) ನೇರವಾಗಿ 34 ಸಚಿವ ಸ್ಥಾನಗಳಿಗೆ ಲೆಕ್ಕ ಹಾಕಿದರೆ, ಮುಸ್ಲಿಂ ಸಮುದಾಯಕ್ಕೆ 4 ರಿಂದ 5 ಸಚಿವ ಸ್ಥಾನಗಳನ್ನು ನೀಡಬೇಕಾಗುತ್ತದೆ.

ಸಿದ್ದರಾಮಯ್ಯ ಸಂಪುಟದಲ್ಲಿ ಝಮೀರ್ ಅಹ್ಮದ್ ಖಾನ್ ಮತ್ತು ರಹೀಮ್ ಖಾನ್ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ಕೊಡಲಾಗಿತ್ತು. ಹೆಚ್ಚುವರಿಯಾಗಿ ಯು.ಟಿ ಖಾದರ್ ಅವರಿಗೆ ಸ್ಪೀಕರ್ ಹುದ್ದೆ ನೀಡಲಾಗಿತ್ತು. ಆದರೆ, ಅದು ಸಚಿವ ಸಂಪುಟಕ್ಕೆ ಸೇರಿರಲಿಲ್ಲ.

2023ರ ಚುನಾವಣೆಯ ನಂತರ ಮುಸ್ಲಿಂ ಸಂಘಟನೆಗಳು ಮತ್ತು ನಾಯಕರು ಜನಸಂಖ್ಯೆ ಮತ್ತು ಮತದಾನದ ಪ್ರಮಾಣಕ್ಕೆ ಅನುಗುಣವಾಗಿ ತಮಗೆ 1 ಉಪಮುಖ್ಯಮಂತ್ರಿ ಸ್ಥಾನ ಮತ್ತು ಕನಿಷ್ಠ 4-5 ಪ್ರಮುಖ ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಸಿದ್ದರಾಮಯ್ಯ ಸಂಪುಟದಲ್ಲಿ ಈ ಬೇಡಿಕೆ ಈಡೇರಿಲ್ಲ.

ಡಿ.ಕೆ ಶಿವಕುಮಾರ್ ಅವರ ಹೊಸ ಸರ್ಕಾರದಲ್ಲಿ ಮುಸ್ಲಿಂ ಸಮುದಾಯದಿಂದ ಸದ್ಯಕ್ಕೆ ಯು.ಟಿ ಖಾದರ್ ಒಬ್ಬರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಇನ್ನು ಎರಡನೇ ಹಂತದಲ್ಲಿ ಹೆಚ್ಚೆಂದರೆ ಒಬ್ಬರು ಅಥವಾ ಇಬ್ಬರನ್ನು ಸೇರಿಸಿಕೊಳ್ಳಬಹುದು. ಈ ರೀತಿಯಾದರೆ, ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಕ್ಕಂತಾಗುವುದಿಲ್ಲ. ಕಳೆದ ಬಾರಿ ಇದ್ದ ಹೆಚ್ಚುವರಿ ಸ್ಪೀಕರ್ ಹುದ್ದೆಯೂ ಈ ಬಾರಿ ಕೈತಪ್ಪಲಿದೆ. ಹಾಗಾಗಿ, ಡಿಕೆಶಿ ಸಂಪುಟದಲ್ಲಾದರೂ ಕಾಂಗ್ರೆಸ್ ಗೆಲ್ಲಿಸಿದ ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಾ? ಎಂದು ಸಮುದಾಯ ಕಾಯುತ್ತಿದೆ.

ಇದು ಮುಸ್ಲಿಮರ ಕಥೆಯಾದರೆ ಇನ್ನುಳಿದ ಅಲ್ಪಸಂಖ್ಯಾತ ಜೈನ, ಬೌದ್ದ ಮತ್ತು ಸಿಖ್ ಸಮುದಾಗಳಿಗೆ ಡಿಕೆಶಿ ಸಂಪುಟದಲ್ಲಿ ಮೊದಲ ಹಂತದಲ್ಲಿ ಯಾವುದೇ ಸ್ಥಾನಗಳು ದೊರೆತಿಲ್ಲ. ಸಿದ್ದರಾಮಯ್ಯ ಸಂಪುಟದಲ್ಲಿ ಮಾಜಿ ಸಚಿವ ದಿವಂಗತ ಸುಧಾಕರ್ ಅವರು ಜೈನ ಸಮುದಾಯದ ಪ್ರತಿನಿಧಿಯಾಗಿದ್ದರು. ಇತರ ಅಲ್ಪಸಂಖ್ಯಾತ ಸಮುದಾಯಗಳಿಂದ ಯಾರೂ ಸಚಿವರಾಗಿರಲಿಲ್ಲ. ಈ ಸಂಪುದಲ್ಲಿ ಜೈನರಿಗೂ ಪ್ರತಿನಿಧಿ ಇಲ್ಲದಂತಾಗಿದೆ.

ಹೊಸ ಸರ್ಕಾರದಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಸೇರಿ 14 ಜನರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ಖಾತೆಗಳ ಹಂಚಿಕೆಯೂ ಆಗಿಲ್ಲ. ಮುಂದಿನ ದಿನಗಳಲ್ಲಿ ಸಂಪುಟ ವಿಸ್ತರಣೆ ಅಗತ್ಯವಾಗಿದೆ. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನ ಸಿಗುತ್ತದಾ? ಝಮೀರ್ ಅಹ್ಮದ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದಾ? ಎಂಬ ಕುತೂಹಲದಲ್ಲಿ ಅವರ ಬೆಂಬಲಿಗರು ಇದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಝಮೀರ್ ಅಹ್ಮದ್ ಅವರನ್ನು ಮೊದಲ ಪಟ್ಟಿಯಲ್ಲಿ ಕೈ ಬಿಟ್ಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ರಹೀಂ ಖಾನ್, ತನ್ವೀರ್ ಸೇಠ್, ಕನೀಝ್ ಫಾತಿಮಾ, ರಿಝ್ವಾನ್ ಅರ್ಷದ್ ಅವರ ಹೆಸರುಗಳು ಮುನ್ನೆಲೆಗೆ ಬಂದಿವೆ. ಒಂದು ಡಿಸಿಎಂ ಹುದ್ದೆ ನೀಡಬೇಕು ಎಂಬ ಆಗ್ರಹವೂ ಕೇಳಿ ಬರುತ್ತಿದೆ. ಸಿಎಂ ಡಿ.ಕೆ ಶಿವಕುಮಾರ್ ಮತ್ತು ಕಾಂಗ್ರೆಸ್‌ ಹೈಕಮಾಂಡ್ ಇವೆಲ್ಲವನ್ನೂ ಹೇಗೆ ನಿಭಾಯಿಸಲಿದೆ ಎಂದು ಕಾದು ನೋಡಬೇಕಿದೆ.








ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...