Homeಮುಖಪುಟಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

- Advertisement -
- Advertisement -

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) “ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ” ಎಂದು ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಎಚ್ಚರಿಸಿದ್ದಾರೆ. ಅಲ್ಲದೆ, ಈ ಕೂಡಲೇ ಆ ಹೊಸ ವಿಭಾಗವನ್ನು ಹಿಂಪಡೆಯಬೇಕು ಎಂದು ಅವರು ಆಯೋಗವನ್ನು ಒತ್ತಾಯಿಸಿದ್ದಾರೆ.

ಹೊಸ ಮತದಾರರು ಫಾರ್ಮ್ 6 ಅನ್ನು ಬಳಸಿಕೊಂಡು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಇದರ ಆನ್‌ಲೈನ್ ಆವೃತ್ತಿಯಲ್ಲಿ ಈಗ ಅರ್ಜಿದಾರರು ತಮ್ಮ, ತಮ್ಮ ಪೋಷಕರ ಅಥವಾ ಅಜ್ಜ-ಅಜ್ಜಿಯರ ಹೆಸರುಗಳು ಕೊನೆಯ ಎಸ್‌ಐಆರ್ ನಂತರ ಸಿದ್ಧಪಡಿಸಲಾದ ಮತದಾರರ ಪಟ್ಟಿಯಲ್ಲಿ ಇವೆಯೇ ಎಂದು ಘೋಷಿಸಲು ಕೋರಲಾಗುತ್ತಿದೆ. ಆದರೆ, ಇದೇ ಫಾರ್ಮ್‌ನ ಡೌನ್‌ಲೋಡ್ ಮಾಡಬಹುದಾದ (ಪಿಡಿಎಫ್) ಆವೃತ್ತಿಯಲ್ಲಿ ಈ ಮಾಹಿತಿಯನ್ನು ಕೇಳಲಾಗಿಲ್ಲ.

ಸಾಮಾನ್ಯವಾಗಿ ಫಾರ್ಮ್ 6 ರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು 1950ರ ಜನಪ್ರತಿನಿಧಿ ಕಾಯ್ದೆ ಅಥವಾ ಅದಕ್ಕೆ ಸಂಬಂಧಿಸಿದ ನಿಯಮಗಳಿಗೆ ಸಂಸತ್ತಿನ ತಿದ್ದುಪಡಿಯ ಅಗತ್ಯವಿರುತ್ತದೆ. ಆದರೆ, ಈ ಎಸ್‌ಐಆರ್ ಘೋಷಣೆಯ ಸೇರ್ಪಡೆಯನ್ನು ಬೆಂಬಲಿಸಲು ಅಂತಹ ಯಾವುದೇ ತಿದ್ದುಪಡಿಯನ್ನು ಮಾಡಲಾಗಿಲ್ಲ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ದಾಮಿನಿ ನಾಥ್ ಭಾನುವಾರ ವರದಿ ಮಾಡಿದ್ದರು.

“ಒಂದು ವೇಳೆ ಪರಿಸ್ಥಿತಿ ನಿಜಕ್ಕೂ ಹೀಗಿದ್ದರೆ (ಮೇಲೆ ಹೇಳಿದಂತೆ), ಆಯೋಗವು ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ” ಎಂದು ಕೇರಳದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಂಸದ ಬ್ರಿಟ್ಟಾಸ್ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಸೋಮವಾರ (ಜುಲೈ 13) ಬರೆದ ಪತ್ರದಲ್ಲಿ ತಿಳಿಸಿದ್ದು, ಈ ಬೆಳವಣಿಗೆಯ ಕುರಿತು ತಮ್ಮ “ತೀವ್ರ ಕಳಕಳಿ”ಯನ್ನು ವ್ಯಕ್ತಪಡಿಸಿದ್ದಾರೆ.

ಸಂವಿಧಾನದ 324 ನೇ ವಿಧಿಯು ಮತದಾರರ ಪಟ್ಟಿಗಳನ್ನು ಸಿದ್ಧಪಡಿಸಲು ಮತ್ತು ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗಕ್ಕೆ ವ್ಯಾಪಕವಾದ ಅಧಿಕಾರಗಳನ್ನು ನೀಡುತ್ತದೆ. ಆದರೆ ಅದನ್ನು “ಶಾಸನಬದ್ಧ ನಿಯಮಗಳನ್ನು ಮರುಬರೆಯಲು ಅಥವಾ ಸಂಸತ್ತು ಸ್ಪಷ್ಟವಾಗಿ ಬೇರೆಡೆಗೆ ವಹಿಸಿರುವ ಅಧಿಕಾರಗಳನ್ನು ತಾನೇ ವಹಿಸಿಕೊಳ್ಳಲು ಬಳಸಿಕೊಳ್ಳಲು ಸಾಧ್ಯವಿಲ್ಲ” ಎಂದು ಬ್ರಿಟ್ಟಾಸ್ ವಾದಿಸಿದ್ದಾರೆ. ಯಾವುದೇ ತಿದ್ದುಪಡಿ ಇಲ್ಲದೆ ಈ ಹೊಸ ಘೋಷಣೆಯನ್ನು ಜಾರಿಗೆ ತಂದಿರುವುದನ್ನು ಮತ್ತು ಇದು ಇಲ್ಲದೆ ಆನ್‌ಲೈನ್ ಅರ್ಜಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿರುವುದನ್ನು ಅವರು “ಸಂಪೂರ್ಣವಾಗಿ ಕಾನೂನು ಬಾಹಿರ” ಎಂದು ಕರೆದಿದ್ದಾರೆ.

ಫಾರ್ಮ್ 6 ರ ಆಫ್‌ಲೈನ್ ಆವೃತ್ತಿಯಲ್ಲಿ ಎಸ್‌ಐಆರ್ ಘೋಷಣೆ ಇಲ್ಲದಿರುವುದನ್ನು ಉಲ್ಲೇಖಿಸಿದ ಬ್ರಿಟ್ಟಾಸ್, “ಒಬ್ಬರು ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಆರಿಸಿಕೊಂಡರೆ ಮತ್ತು ಇನ್ನೊಬ್ಬರು ಭೌತಿಕವಾಗಿ ಅರ್ಜಿ ಸಲ್ಲಿಸುತ್ತಾರೆ ಎಂಬ ಕಾರಣಕ್ಕಾಗಿ ಒಂದೇ ಪರಿಸ್ಥಿತಿಯಲ್ಲಿರುವ ನಾಗರಿಕರನ್ನು ವಿಭಿನ್ನ ಕಾನೂನು ಕಟ್ಟುಪಾಡುಗಳಿಗೆ ಒಳಪಡಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಇದು ಕಾನೂನಿನ ಮುಂದೆ ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದಿದ್ದಾರೆ.

“ಲಕ್ಷಾಂತರ ಹೊಸ ಮತದಾರರು, ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು, ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳು, ದತ್ತು ಪಡೆದ ಮಕ್ಕಳು, ಅನಾಥರು, ತಮ್ಮ ಕುಟುಂಬಗಳಿಂದ ದೂರಾದವರು ಮತ್ತು ಕಳೆದ ಹಲವು ದಶಕಗಳಲ್ಲಿ ಪೋಷಕರು ಅಥವಾ ಅಜ್ಜ-ಅಜ್ಜಿಯರು ಬೇರೆ ಕ್ಷೇತ್ರಗಳಿಗೆ ವಲಸೆ ಹೋಗಿರುವ ನಾಗರಿಕರು ತಮ್ಮ ಹಳೆಯ ಚುನಾವಣಾ ವಿವರಗಳನ್ನು ಒದಗಿಸಲು ಯಾವುದೇ ಪ್ರಾಯೋಗಿಕ ಮಾರ್ಗಗಳನ್ನು ಹೊಂದಿಲ್ಲದಿರಬಹುದು” ಎಂದು ಬರೆದಿರುವ ಬ್ರಿಟ್ಟಾಸ್, 2002-03 ರ ಎಸ್‌ಐಆರ್‌ಗಳ ನಂತರ ಸಿದ್ಧಪಡಿಸಲಾದ ಮತದಾರರ ಪಟ್ಟಿಗಳು ಸುಲಭವಾಗಿ ಲಭ್ಯವಿಲ್ಲದಿರಬಹುದು ಎಂಬುದನ್ನು ಸಹ ನೆನಪಿಸಿದ್ದಾರೆ.

ಎಸ್‌ಐಆರ್ ವಿಭಾಗವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿರುವ ಬ್ರಿಟ್ಟಾಸ್ ಅವರು, “ಈ ಅನಧಿಕೃತ ಘೋಷಣೆ” ಇಲ್ಲ ಎಂಬ ಒಂದೇ ಕಾರಣಕ್ಕಾಗಿ ಯಾವುದೇ ಅರ್ಜಿಗಳನ್ನು ತಿರಸ್ಕರಿಸದಂತೆ, ಬಾಕಿ ಉಳಿಸಿಕೊಳ್ಳದಂತೆ ಅಥವಾ ಅಪೂರ್ಣ ಎಂದು ಗುರುತಿಸದಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.

“ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಘೋಷಣೆ ಅಗತ್ಯ ಎಂದು ಆಯೋಗವು ಭಾವಿಸಿದರೆ, ಅದಕ್ಕೆ ಸರಿಯಾದ ಸಾಂವಿಧಾನಿಕ ಮಾರ್ಗವೆಂದರೆ 1950ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 28ರ ಅನ್ವಯ, ಸಮರ್ಥ ಪ್ರಾಧಿಕಾರದ ಮೂಲಕ 1960ರ ಮತದಾರರ ನೋಂದಣಿ ನಿಯಮಗಳಿಗೆ ತಿದ್ದುಪಡಿ ಮಾಡಲು ಶಿಫಾರಸು ಮಾಡುವುದಾಗಿದೆ” ಎಂದು ಅವರು ಬೆಟ್ಟು ಮಾಡಿದ್ದಾರೆ.

ಹೆಸರು ಹೇಳಲಿಚ್ಛಿಸದ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಭಾನುವಾರ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಆಯೋಗವು ಈ ಎಸ್‌ಐಆರ್ ಘೋಷಣೆಯನ್ನು ಕೇವಲ ‘ಸೂಚನೆಗಳ ಮೂಲಕ’ ಸೇರಿಸಿದೆಯೇ ಹೊರತು, ಫಾರ್ಮ್ 6 ಅನ್ನು ಯಾವುದೇ ರೀತಿಯಲ್ಲಿ ತಿದ್ದುಪಡಿ ಮಾಡಿಲ್ಲ ಎಂದು ತಿಳಿಸಿದ್ದಾರೆ. “ಇದು ಮತದಾರರ ಮ್ಯಾಪಿಂಗ್ ಮಾಡಲು ಸಹಾಯ ಮಾಡುತ್ತದೆ ಮತ್ತು ಹೊಸ ಮತದಾರರು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳ ಹೊರೆಯನ್ನು ಕಡಿಮೆ ಮಾಡುತ್ತದೆ” ಎಂದು ಆ ಅಧಿಕಾರಿಯ ಹೇಳಿಕೆಯನ್ನು ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.

ಚುನಾವಣಾ ಆಯೋಗವು ಎಸ್‌ಐಆರ್ ನಡೆಸುತ್ತಿರುವ ವಿಧಾನವು ಈಗಾಗಲೇ ತೀವ್ರ ವಿವಾದಕ್ಕೆ ಈಡಾಗಿರುವ ಬೆನ್ನಲ್ಲೇ, ಈ ಹೊಸ ಘೋಷಣೆಯ ಸೇರ್ಪಡೆ ಬಂದಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ, ನೋಂದಣಿಗಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತು ತೀರ್ಪು ನೀಡಬೇಕಾಗಿದ್ದ ನ್ಯಾಯಮಂಡಳಿಗಳಿಗೆ ಸಾಕಷ್ಟು ಸಮಯ ನೀಡದ ಕಾರಣಕ್ಕಾಗಿ, ಕಳೆದ ಏಪ್ರಿಲ್‌ನ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 27 ಲಕ್ಷ ಮತದಾರರು ಮತ ಚಲಾಯಿಸಲು ಸಾಧ್ಯವಾಗದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...