“8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ” ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ ಕಾಲದಲ್ಲಿ, ಮಾನವೀಯ ಜೀವನಕ್ಕಾಗಿ ಕಾರ್ಮಿಕರು ಎತ್ತಿದ ಧ್ವನಿಯೇ ಈ ಸಮತೋಲನದ ನಿಯಮಕ್ಕೆ ದಾರಿ ಮಾಡಿಕೊಟ್ಟಿತು.
8 ಗಂಟೆ ಕೆಲಸ ಎಂಬುದು ಕೇವಲ ಒಂದು ನಿಯಮವಲ್ಲ ಅದು ಕಾರ್ಮಿಕರ ಗೌರವ, ಅವರ ಆರೋಗ್ಯ ಮತ್ತು ಬದುಕಿನ ಗುಣಮಟ್ಟವನ್ನು ಕಾಪಾಡುವ ಮೂಲಭೂತ ತತ್ವವಾಗಿದೆ. ಆದರೆ ಈ ಮೂಲಭೂತ ತತ್ವಗಳನ್ನೆ ಗೌಣ ಮಾಡುವ ಹೊಸ ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ ಎಂಬ ಕೂಗು ಕಾರ್ಮಿಕ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
ಮೇ 1 (MAY DAY ಕಾರ್ಮಿಕರ ಐಕ್ಯತೆ, ಹೋರಾಟ ಮತ್ತು ಹಕ್ಕುಗಳ ಪ್ರತೀಕ. ಈ ದಿನವು ಕೇವಲ ಆಚರಣೆಯಲ್ಲ; ಶ್ರಮಿಕರ ಒಗ್ಗಟ್ಟಿನ ಶಕ್ತಿಯ ಸ್ಮರಣೆ. ಇದೇ ಸಂದರ್ಭದಲ್ಲಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾರ್ಮಿಕ ಸಂಹಿತೆಗಳ ಒಳಹೊರಹುಗಳನ್ನು ಅರಿತುಕೊಳ್ಳುವುದು ಅತ್ಯಗತ್ಯವಾಗಿದೆ.
ಹೊಸ ಕಾರ್ಮಿಕ ಸಂಹಿತೆಗಳು ಹಳೆಯ ಹಲವಾರು ಕಾನೂನುಗಳನ್ನು ಒಗ್ಗೂಡಿಸಿ ನಾಲ್ಕು ಪ್ರಮುಖ ಕೋಡ್‌ಗಳಾಗಿ ರೂಪಿಸಲ್ಪಟ್ಟಿವೆ. ಸರ್ಕಾರದ ವಾದ ಏನೆಂದರೆ ಇದರಿಂದ ಕಾನೂನುಗಳು ಸರಳಗೊಳ್ಳುತ್ತವೆ, ಉದ್ಯಮಗಳಿಗೆ ಸುಗಮತೆ ಹೆಚ್ಚುತ್ತದೆ ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗುತ್ತದೆ. “Ease of Doing Business” ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವೆಂದು ಹೇಳಲಾಗುತ್ತದೆ.
ಭಾರತದಲ್ಲಿ ದೀರ್ಘಕಾಲದಿಂದ ಜಾರಿಯಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ಸರಳಗೊಳಿಸಿ, ಅವುಗಳನ್ನು 4 ಪ್ರಮುಖ ಲೇಬರ್ ಕೋಡ್‌ಗಳನ್ನಾಗಿ ರೂಪಿಸಿರುವುದು ಕೇಂದ್ರ ಸರ್ಕಾರದ ಮಹತ್ವದ ಆರ್ಥಿಕಸಾಮಾಜಿಕ ಸುಧಾರಣೆ ಎಂದು ಹೇಳುತ್ತಿದೆ. ಈ ಬದಲಾವಣೆಗಳನ್ನು ಸಂಸತ್ತು (Parliament Of India) ಅಂಗೀಕರಿಸಿದ್ದು, ಕಾರ್ಮಿಕ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶ ಹೊಂದಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.

ಕೇಂದ್ರದಲ್ಲಿ 3ನೇ ಬಾರಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರವು ನಾಲ್ಕು ಕೋಡ್‌ಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದೇ 2026 ಏಪ್ರಿಲ್ 1ರಿಂದ ದೇಶಾದ್ಯಂತ ಈ ನಾಲ್ಕು ಕೋಡ್‌ಗಳು ಕಾರ್ಯಾಚರಣೆಗೆ ಬಂದಿವೆ. ಈ ಬಗ್ಗೆ ಕೇಂದ್ರ ಸರ್ಕಾರ ವ್ಯಾಪಕವಾದ ಪ್ರಚಾರವನ್ನು ಕೈಗೊಂಡಿದೆ.
ಹಿನ್ನೋಟ
1998 ರಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ನೇಮಿಸಿದ್ದ ರವೀಂದ್ರ ವರ್ಮ ನೇತೃತ್ವದ ಎರಡನೇ ಕಾರ್ಮಿಕ ಆಯೋಗ 2002 ರಲ್ಲಿ ಕಾರ್ಮಿಕ ಕಾನೂನುಗಳ ಸಂಹಿತೀಕರಣಕ್ಕೆ ಶಿಫಾರಸ್ಸು ಮಾಡಿತ್ತು. 2014 ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ಜಾರಿಯಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್‌ಗಳನ್ನಾಗಿ ರೂಪಿಸುವ ಘೋಷಣೆ ಮಾಡಿತ್ತು. ಆಗ ದೇಶದ ಕಾರ್ಮಿಕ ವರ್ಗದಿಂದ ಐಕ್ಯ ಪ್ರತಿರೋಧ ಎದುರಾಗಿತ್ತು. ಆದರೆ ದೇಶದ ಶ್ರೀಮಂತ ಕಾರ್ಪೊರೇಟ್ ಉದ್ಯಮಪತಿಗಳು ಕಾರ್ಮಿಕ ಕಾನೂನುಗಳ ಸುಧಾರಣೆಗೆ ಒತ್ತಾಯ ಮಾಡುತ್ತಲೇ ಬಂದಿದ್ದರು. ಪರಿಣಾಮ ಕೇಂದ್ರ ಸರ್ಕಾರ 2019-20 ರಲ್ಲಿ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್‌ಗಳಲ್ಲಿ ವಿಲೀನಗೊಳಿಸಿತ್ತು.
ಹೊಸ ಕಾರ್ಮಿಕ ಸಂಹಿತೆಗಳು :
1. ವೇತನ ಸಂಹಿತೆ (Wage On Code)
2. ಕೈಗಾರಿಕಾ ಸಂಬಂಧಗಳ ಸಂಹಿತೆ (Code on industrial Relation)
3. ಸಾಮಾಜಿಕ ಭದ್ರತಾ ಸಂಹಿತೆ (Code On Social Security)
4. ವೃತ್ತಿ ಸುರಕ್ಷತೆ ಮತ್ತು ಕೆಲಸ ಪರಿಸ್ಥಿತಿ ಕುರಿತಾದ ಸಂಹಿತೆ Code on Occupational Safety and Working Conditions) ಕೇಂದ್ರ ಸರ್ಕಾರದ ವಾದ.
ಹಳೆಯ 29 ಕಾರ್ಮಿಕ ಕಾನೂನುಗಳಿಗಿದ್ದ ಗೊಂದಲವನ್ನು ಕಡಿಮೆ ಮಾಡಿ, 4 ಸಂಹಿತೆಗಳಾಗಿ ರೂಪಿಸಿರುವುದು ನಿಯಮಗಳನ್ನು ಅರ್ಥಮಾಡಿಕೊಳ್ಳಲು ಸುಲಭ ಮಾಡುತ್ತದೆ. ಉದ್ಯಮಿಗಳಿಗೆ ಮತ್ತು ಕಾರ್ಮಿಕರಿಗೆ ಹೆಚ್ಚು ಅವಕಾಶಗಳನ್ನು ಮಾಡಿಕೊಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸುಗಮ ವ್ಯವಹಾರ (Ease of Doing Business)
ನಿಯಮಗಳ ಸರಳೀಕರಣದಿಂದ ಉದ್ಯಮಗಳಿಗೆ ಅನುಕೂಲವಾಗುತ್ತದೆ. ಇದರಿಂದ ಹೂಡಿಕೆ ಹೆಚ್ಚಾಗಿ, ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.
ಡಿಜಿಟಲೀಕರಣ ಮತ್ತು ಪಾರದರ್ಶಕತೆ
ವೇತನ ಪಾವತಿ, ನೋಂದಣಿ ಮುಂತಾದವುಗಳನ್ನು ಡಿಜಿಟಲ್ ಮಾಡುವ ಮೂಲಕ ಭ್ರಷ್ಟಾಚಾರ ಕಡಿಮೆಯಾಗುವ ನಿರೀಕ್ಷೆ ಇದೆ.
ಸಾಮಾಜಿಕ ಭದ್ರತೆ ವಿಸ್ತರಣೆ
ಅಸಂಘಟಿತ ವಲಯ, ಗಿಗ್ ವರ್ಕರ್‌ಗಳು (gig workers) ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರಿಗೆ ಸಹ ಕೆಲವು ಮಟ್ಟದ ಭದ್ರತೆ ಒದಗಿಸುವ ಪ್ರಯತ್ನ ಮಾಡಲಾಗಿದೆ.
ಏಕೀಕೃತ ವ್ಯವಸ್ಥೆ
“ಒಂದು ದೇಶ ಒಂದು ಕಾರ್ಮಿಕ ಕಾನೂನು” ಎಂಬ ರೀತಿಯಲ್ಲಿ ಎಲ್ಲ ರಾಜ್ಯಗಳಿಗೂ ಒಂದೇ ಮಾದರಿಯ ವ್ಯವಸ್ಥೆ ರೂಪಿಸುವ ಪ್ರಯತ್ನವಾಗಿದೆ.
ಕೇಂದ್ರ ಸರ್ಕಾರ ಪ್ರಸ್ತಾಪಿಸುತ್ತಿರುವ “ಒಂದು ದೇಶ ಒಂದು ಕಾರ್ಮಿಕ ಕಾನೂನು” ಪರಿಕಲ್ಪನೆ, ಏಕೀಕೃತ ಕಾನೂನು ವ್ಯವಸ್ಥೆಯಿಂದ ದೇಶಾದ್ಯಂತ ಒಂದೇ ರೀತಿಯ ನಿಯಮಗಳು ಜಾರಿಯಾಗುವುದರಿಂದ, ಉದ್ಯಮಗಳಿಗೆ ಸ್ಪಷ್ಟತೆ ಮತ್ತು ಸುಗಮತೆ ಹೆಚ್ಚುತ್ತದೆ. ಇದರಿಂದ ಹೂಡಿಕೆ ಆಕರ್ಷಣೆ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. “Ease of Doing Business” ಹೆಚ್ಚಿಸುವುದರಲ್ಲಿ ಇದು ಪ್ರಮುಖ ಪಾತ್ರ ವಹಿಸಬಹುದು ಎಂಬುದು ಕೇಂದ್ರ ಸರ್ಕಾರದ ವಾದ.
“ಒಂದು ದೇಶ ಒಂದು ಕಾರ್ಮಿಕ ಕಾನೂನು” ಎಂಬ ಪರಿಕಲ್ಪನೆ ಮೊದಲ ನೋಟಕ್ಕೆ ಸರಳ ಮತ್ತು ಆಕರ್ಷಕವಾಗಿ ಕಾಣಬಹುದು. ಆದರೆ, ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಇದು ಅನೇಕ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ.
ಮೊದಲನೆಯದಾಗಿ, ಭಾರತದಲ್ಲಿ ಪ್ರತಿ ರಾಜ್ಯವೂ ವಿಭಿನ್ನ ಆರ್ಥಿಕ ಪರಿಸ್ಥಿತಿ, ಉದ್ಯೋಗ ರಚನೆ ಮತ್ತು ಕಾರ್ಮಿಕರ ಪರಿಸ್ಥಿತಿ ಬೇರೆ ಬೇರೆಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲ ರಾಜ್ಯಗಳಿಗೂ ಒಂದೇ ಮಾದರಿಯ ಕಾನೂನು ಅನ್ವಯಿಸುವುದು ಸ್ಥಳೀಯ ಅಗತ್ಯಗಳನ್ನು ನಿರ್ಲಕ್ಷಿಸುವಂತಾಗಿದೆ. ಒಂದು ರಾಜ್ಯಕ್ಕೆ ಸೂಕ್ತವಾದ ನಿಯಮ ಮತ್ತೊಂದು ರಾಜ್ಯಕ್ಕೆ ಅನಾನುಕೂಲಕರವಾಗಬಹುದು.
ಎರಡನೆಯದಾಗಿ, ಕಾರ್ಮಿಕ ಕಾನೂನುಗಳು ಸಂವಿಧಾನದ ಸಹವರ್ತಿ ಪಟ್ಟಿಯಲ್ಲಿ ಬರುತ್ತವೆ. ಅಂದರೆ, ರಾಜ್ಯಗಳಿಗೆ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಕಾನೂನು ರೂಪಿಸುವ ಹಕ್ಕು ಇದೆ. “ಒಂದು ದೇಶ ಒಂದು ಕಾನೂನು” ಎಂಬ ಧೋರಣೆ ಈ ಸ್ವಾಯತ್ತತೆಯನ್ನು ಮಿತಿಗೊಳಿಸುವ ಅಪಾಯವನ್ನು ಹೊಂದಿದೆ. ಇದು ಫೆಡರಲ್ ವ್ಯವಸ್ಥೆಯ ಮೂಲಭೂತ ಆತ್ಮಕ್ಕೆ ವಿರೋಧವಾಗುತ್ತದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಕಾರ್ಮಿಕ ಸಂಘಗಳು ಸಂಹಿತೆಗಳನ್ನು ಏಕೆ ವಿರೋಧಿಸುತ್ತಿವೆ?
ನಾಲ್ಕು ಸಂಹಿತೆಗಳನ್ನು ಜಾರಿಗೊಳಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ (ಜೆಸಿಟಿಯುಗಳು) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಪ್ರತಿಭಟಿಸಿವೆ.
ಸಂಸತ್ತಿನಲ್ಲಿ ಸರಿಯಾಗಿ ಚರ್ಚೆ ನಡೆಸದೆ ನಾಲ್ಕು ಸಂಹಿತೆಗಳನ್ನು ಅಂಗೀಕರಿಸಲಾಗಿದೆ. ಭಾರತೀಯ ಕಾರ್ಮಿಕ ಸಮ್ಮೇಳನ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನಗಳಲ್ಲಿ ಚರ್ಚೆ ನಡೆಸದೆ ಸಂಹಿತೆಗಳ ಜಾರಿಯ ಕುರಿತು ಅಧಿಸೂಚನೆ ಹೊರಡಿಸಲಾಗಿದೆ ಎಂಬುದು ಕಾರ್ಮಿಕ ಸಂಘಟನೆಗಳ ಮೊದಲ ಆಕ್ಷೇಪವಾಗಿದೆ.
ಹೊಸ ಸಂಹಿತೆಯು ಮುಷ್ಕರಗಳನ್ನು ಪರಿಣಾಮಕಾರಿಯಾಗಿ ನಿಷೇಧಿಸುವ ಮೂಲಕ, ಸ್ಥಾಯಿ ಆದೇಶಗಳನ್ನು ದುರ್ಬಲಗೊಳಿಸುವ ಮೂಲಕ ಮತ್ತು ಉದ್ಯೋಗದ ಸುರಕ್ಷತೆಯನ್ನು ತೆಗೆದುಹಾಕುವ ಮೂಲಕ ಕಾರ್ಮಿಕರನ್ನು ‘ವರ್ಚುವಲ್ ಸ್ಲೇವರಿ’ (ಸಾಂಕೇತಿಕ ಗುಲಾಮಗಿರಿ) ಸ್ಥಿತಿಗೆ ತಳ್ಳುತ್ತವೆ. ಕಾರ್ಮಿಕರ ಸಾಮೂಹಿಕ ಮಾತುಕತೆಯ ಅಧಿಕಾರ ಸಂಪೂರ್ಣವಾಗಿ ಕಸಿದುಕೊಳ್ಳಲಾಗಿದೆ ಎಂದು ಕಾರ್ಮಿಕ ಸಂಘಟನೆಗಳು ಹೇಳಿವೆ.
ಕಾರ್ಮಿಕರ ಹಕ್ಕನ್ನು ಮತ್ತಷ್ಟು ದುರ್ಬಲ ಗೊಳಿಸಲಿರುವ ‘ಲೇಬರ್ ಕೋಡ್’
ನಾಲ್ಕು ಸಂಹಿತೆಗಳನ್ನು “ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್” ಹೆಸರಿನಲ್ಲಿ ಉದ್ಯಮಪತಿಗಳ ವ್ಯವಹಾರಗಳನ್ನು ಸುಲಭಗೊಳಿಸಲು ಮತ್ತು ದೇಶದ ಅಭಿವೃದ್ಧಿ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಮಹತ್ತರ ಹೆಜ್ಜೆ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆ.
ನಿಯಮಗಳನ್ನು ಸರಳಗೊಳಿಸುವ ಹೆಸರಿನಲ್ಲಿ ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸಿದರೆ, ಅದು ಉದ್ಯಮಗಳಿಗೆ ಅನುಕೂಲವಾದರೂ, ಕಾರ್ಮಿಕರ ಭದ್ರತೆಯನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ. ಕೆಲಸದ ಅವಧಿ ಹೆಚ್ಚಿಸುವುದು, ಕಾರ್ಮಿಕರ ಸುರಕ್ಷತೆ, ಕನಿಷ್ಠ ವೇತನ ಮುಂತಾದವುಗಳನ್ನು ಮೊಟಕುಗೊಳಿಸುವ ಅಪಾಯವಿದೆ. ಹಲವು ದಶಕಗಳಿಂದ ಪಡೆದಿರುವ, ಸಾಮಾಜಿಕ ಭದ್ರತೆಗಳು ಹಾಗೂ “ಸಂಘ ಕಟ್ಟುವ” ಸ್ವಾತಂತ್ರ್ಯ ಸೇರಿ ಹಲವು ಹಕ್ಕುಗಳನ್ನು ಕಳೆದುಕೊಂಡು ಶ್ರಮಿಕರನ್ನು ಮತ್ತಷ್ಟು ಅಸಹನೀಯ ಪರಿಸ್ಥಿತಿಗೆ ದೂಡಲಿವೆ ಎಂದು ಈ ಸಂಹಿತೆಗಳು ಜಾರಿ ವಿರುದ್ಧ ಕಾರ್ಮಿಕ ಸಂಘಗಳು ನಿರಂತರ ಹೋರಾಟಗಳನ್ನು ನಡೆಸುತ್ತ ಬಂದಿವೆಯಾದರೂ, ಕಾರ್ಮಿಕರ ಕೂಗಿಗೆ ಕಿವಿಗೊಡದ ಕೇಂದ್ರ ಸರ್ಕಾರವು ಕೊನೆಗೂ ಲೇಬರ್ ಕೋಡ್‌ಗಳನ್ನು ಜಾರಿ ಮಾಡಿದೆ.
ಈಗಾಗಲೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾರ್ಮಿಕ ಸಂಹಿತೆಗಳನ್ನು ಹಲವು ಟ್ರೇಡ್ ಯೂನಿಯನ್‌ಗಳು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಿವೆ. ಕಾರ್ಮಿಕ ಸಂಘಟನೆಗಳ ಮುಖಂಡರು ಈ ಹೊಸ ಕಾರ್ಮಿಕ ಕಾನೂನುಗಳನ್ನು ಯಾವ ಕಾರಣಕ್ಕೆ ವಿರೋಧಿಸಲಾಗುತ್ತಿದೆ ಎಂದು ‘ಗೌರಿ ಲಂಕೇಶ್’ ನ್ಯಾಯಪಥದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಾರ್ಮಿಕರು ದಶಕಗಳ ಹೋರಾಟದ ಮೂಲಕ ಗಳಿಸಿದ ಹಕ್ಕುಗಳು ಹೊಸ ಕಾರ್ಮಿಕ ಸಂಹಿತೆಗಳ ಹೆಸರಿನಲ್ಲಿ ನಿಧಾನವಾಗಿ ಹಿಂತೆಗೆದುಕೊಳ್ಳಲಾಗುತ್ತಿರುವುದೇ ದುಃಖಕರ ಸಂಗತಿ ಎಂದಿದ್ದಾರೆ Center Of Indian Trade Union (CITU) ರಾಜ್ಯ ಕಾರ್ಯದರ್ಶಿ ಮಹಾಂತೇಶ್.
“Ease of Doing Business” ಎಂಬ ಹೆಸರಿನಲ್ಲಿ ತರಲಾಗುತ್ತಿರುವ ಈ ಕಾನೂನುಗಳು ವಾಸ್ತವದಲ್ಲಿ ಉದ್ಯಮಗಳಿಗೆ ಹೆಚ್ಚು ಅನುಕೂಲ ಕಲ್ಪಿಸುವಂತೆಯೇ ಮಾಡಲಾಗಿದೆ. ಕೆಲಸದ ಅವಧಿಯನ್ನು ಹೆಚ್ಚು ಮಾಡುವ ಮೂಲಕ ಕೆಲಸಗಾರರ ಹೊರೆಯನ್ನು ಹೆಚ್ಚಿಸುವ ಅಪಾಯವಿದ್ದು, ಇದು ಉದ್ಯೋಗ ಭದ್ರತೆಯ ಕುಗ್ಗಿಸುವ ಕ್ರಮಗಳಾಗಿದ್ದು, ಯೂನಿಯನ್ ಹಕ್ಕುಗಳ ಮೇಲಿನ ನಿಯಂತ್ರಣ ಸಾಧಿಸಲು ಇದು ದಾರಿ ಮಾಡಿಕೊಡುತ್ತದೆ. ಈ ಸಂಹಿತೆಗಳಿಂದ ಕಾರ್ಮಿಕರಿಗೆ ಲಾಭವೇನು ಎಂದು ಸರ್ಕಾರ ಇದುವರೆಗೂ ಸ್ಪಷ್ಟವಾಗಿ ಹೇಳಿಲ್ಲ.
ಕಾರ್ಮಿಕರ ಹೋರಾಟದಿಂದ ಬಂದ 8 ಗಂಟೆಗಳ ಕೆಲಸದ ತತ್ವ, ಕನಿಷ್ಠ ವೇತನ, ಸುರಕ್ಷಿತ ಕೆಲಸದ ವಾತಾವರಣ ಇವು ಯಾವುದೇ ದಾನವಲ್ಲ. ಇವುಗಳ ಹಿಂದೆ ಇರುವುದು ಹೋರಾಟದ ಇತಿಹಾಸ. ಆದರೆ ಇಂದಿನ ನೀತಿಗಳು ಕಾರ್ಮಿಕರನ್ನು ಉತ್ಪಾದನೆಯ ಒಂದು ಸಾಧನವಾಗಿ ಮಾತ್ರ ನೋಡುತ್ತಿರುವಂತಿವೆ.
ವಿಶೇಷವಾಗಿ ಅಸಂಘಟಿತ ಕಾರ್ಮಿಕರ ವಿಷಯದಲ್ಲಿ, ಸಾಮಾಜಿಕ ಭದ್ರತೆ ವಿಸ್ತರಣೆ ಎಂಬ ಭರವಸೆ ನೀಡಲಾಗುತ್ತಿದೆಯಾದರೂ, ಅದರ ಅನುಷ್ಠಾನ ಸ್ಪಷ್ಟವಾಗಿಲ್ಲ. ಇದೊಂದು ರೀತಿ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ. ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಮಿಕರ ಹಕ್ಕುಗಳನ್ನು ಕಡಿಮೆ ಮಾಡುವ ಪ್ರವೃತ್ತಿ ಮುಂದುವರಿದರೆ, ಅದು ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ. ದೇಶದ ಅಭಿವೃದ್ಧಿ ಅಳೆಯಬೇಕಾದದ್ದು ಲಾಭದ ಪ್ರಮಾಣದಿಂದಲ್ಲ, ಕಾರ್ಮಿಕರ ಬದುಕಿನ ಗುಣಮಟ್ಟದಿಂದ.
2018 ರಲ್ಲಿ, ಕೇಂದ್ರ ಸರ್ಕಾರವು ’ರಾಷ್ಟ್ರೀಯ ಕನಿಷ್ಠ ವೇತನವನ್ನು ನಿಗದಿಮಾಡಲು ತಜ್ಞ ಸಮಿತಿ’ಯನ್ನು ನೇಮಿಸಿತು. ಈ ಸಮಿತಿ 2019ರಲ್ಲಿ ದಿನಕ್ಕೆ ರೂ.375 (ತಿಂಗಳಿಗೆ ರೂ.9750) ಗಳನ್ನು ’ರಾಷ್ಟ್ರೀಯ ಕನಿಷ್ಠವೇತನ’ ವನ್ನು “ವೈಜ್ಞಾನಿಕವಾಗಿ ಕನಿಷ್ಠ ವೇತನವನ್ನು ನಿಗದಿಪಡಿಸಿದ್ದೇವೆ” ಎಂದು ಸಮಿತಿ ಶಿಫಾರಸ್ಸನ್ನು ಸಮರ್ಥಿಸಿತ್ತು.
7ನೇ ವೇತನ ಆಯೋಗ ಶಿಫಾರಸು ಮಾಡಿದ ರೂ.18,000 ಕನಿಷ್ಠ ವೇತನಕ್ಕಿಂತ ಬಹಳ ಕಡಿಮೆ ಎಂದು ಕಾರ್ಮಿಕ ಸಂಘಗಳು ಇದನ್ನು ತಿರಸ್ಕರಿಸಿದ್ದವು. ಇಷ್ಟಾಗಿಯೂ, ಜುಲೈ 2019 ರಲ್ಲಿ ರಾಷ್ಟ್ರೀಯ ಫ್ಲೋರ್ ಕನಿಷ್ಠ ವೇತನವನ್ನು (NFMW) ದಿನಕ್ಕೆ ರೂ. 176 ರಿಂದ ಕೇವಲ ರೂ. 2 ಹೆಚ್ಚಿಸಿ ರೂ. 178ಕ್ಕೆ ಏರಿಸಲಾಯಿತು. ಪ್ರಸ್ತುತ ದಿನಕ್ಕೆ ಕೇವಲ ರೂ.178 ನಿಗದಿಪಡಿಸಿದ ಮೊತ್ತವನ್ನು ನೋಡಿದಾಗ, “ಉತ್ತಮ ಜೀವನಮಟ್ಟವನ್ನು ಒದಗಿಸುತ್ತೇವೆ ಎನ್ನುವ ಮೋದಿ ಆಡಳಿತದ ಭರವಸೆ ದೇಶದ ದುಡಿಯುವ ಜನರ ಮೇಲೆ ಮಾಡಿದ ವಂಚನೆಯಾಗಿ ಕಾಣುತ್ತದೆ. ಈ ಸಂಹಿತೆಗಳು ಕಾರ್ಮಿಕರನ್ನು ಮತ್ತಷ್ಟು ಶೋಷಣೆಗೆ ತಳ್ಳಿ ಮಾಲೀಕರ ಅಡಿಯಾಳಾಗಿಸಲು ಅನುಕೂಲ ಮಾಡಿಕೊಡಲಿವೆ.

ಭಾರತದ ಸಂವಿಧಾನದಲ್ಲಿ ಕಾರ್ಮಿಕ ವಿಷಯಗಳು ಸಹವರ್ತಿ ಪಟ್ಟಿಯಲ್ಲಿ ಸೇರಿರುವುದು ಅತ್ಯಂತ ಮಹತ್ವದ್ದಾಗಿದೆ. ಇದರ ಅರ್ಥ, ಕಾರ್ಮಿಕರ ಹಕ್ಕುಗಳು, ಅವರ ವೇತನ, ಕೆಲಸದ ಪರಿಸ್ಥಿತಿ, ಸಾಮಾಜಿಕ ಭದ್ರತೆ ಮುಂತಾದ ವಿಷಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಎರಡಕ್ಕೂ ಕಾನೂನು ರಚನೆಗೆ ಅಧಿಕಾರ ಹೊಂದಿವೆ. ಈ ಸಂದರ್ಭದಲ್ಲಿ ಕಾರ್ಮಿಕರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಲು ಅವಕಾಶವಿದೆ.
ಉದಾಹರಣೆಗೆ ಕೇಂದ್ರ ಸರ್ಕಾರವು ದೇಶದಾದ್ಯಂತ ಒಂದು ಸಮಾನ ಕಾನೂನು ವ್ಯವಸ್ಥೆಯನ್ನು ಜಾರಿ ಮಾಡಲು ಪ್ರಯತ್ನಿಸುತ್ತದೆ, ಆದರೆ ಅದನ್ನು ರಾಜ್ಯ ಸರ್ಕಾರಗಳು ಒಪ್ಪಿಕೊಳ್ಳಲೇಬೆಕು ಎಂಬುದಾಗಲಿ, ಅದನ್ನೆ ಯಥಾವತ್ತು ಜಾರಿ ಮಾಡಬೇಕೆಂಬ ಕಡ್ಡಾಯವೇನು ಇಲ್ಲ. ಕಾರ್ಮಿಕ ಸಂಹಿತೆಗಳ ಮೂಲಕ ನಿಯಮಗಳನ್ನು ಸರಳಗೊಳಿಸುವ ಉದ್ದೇಶ ಇದೆ ಎಂದು ಕೇಂದ್ರ ಸರ್ಕಾರ ಕಾನೂನು ರೂಪಿಸಿದರೆ, ರಾಜ್ಯಗಳಿಗೆ ತಮ್ಮ ಸ್ಥಳೀಯ ಆರ್ಥಿಕತೆ, ಜೀವನ ನಿರ್ವಹಣೆ, ಹಾಗೂ ಉದ್ಯೋಗ ಪರಿಸ್ಥಿತಿಗಳನ್ನು ಗಮನಿಸಿ ಕಾನೂನು ರೂಪಿಸಲು ಅವಕಾಶವಿದೆ.
ಕೇಂದ್ರ ಸರ್ಕಾರದ ನೂತನ ವೇತನ ಸಂಹಿತೆ, ಎಲ್ಲ ಕೆಲಸಗಾರರಿಗೂ ಕನಿಷ್ಟ ವೇತನ ಖಾತ್ರಿಪಡಿಸುತ್ತದೆ. ಮಾತ್ರವಲ್ಲ ಅಸಂಘಟಿತರು ಸೇರಿ ಎಲ್ಲಾ ನೌಕರರು/ಕಾರ್ಮಿಕರಿಗೆ ಕಾನೂನುಬದ್ಧ ಕನಿಷ್ಟ ವೇತನದ ಹಕ್ಕನ್ನು ನೀಡುತ್ತದೆ. ಆದರೆ ವೇತನ ಸಂಹಿತೆಯ ಸೆಕ್ಷನ್ 2 (z) (D) ಪ್ರಕಾರ, ’ಕಾರ್ಮಿಕ (Worker) ಎಂಬ ಪದವು “ಪ್ರತಿ ತಿಂಗಳು ಹದಿನೈದು ಸಾವಿರ ರೂಪಾಯಿಗಿಂತ ಹೆಚ್ಚು ವೇತನ ಪಡೆಯುವ ಮೇಲ್ವಿಚಾರಣಾ ಹುದ್ದೆಯಲ್ಲಿರುವ ಯಾವುದೇ ನೌಕರ/ಳನ್ನು ಒಳಗೊಳ್ಳುವುದಿಲ್ಲ. ಆದ್ದರಿಂದ, ವೇತನ ಸಂಹಿತೆಯ ವ್ಯಾಪ್ತಿಯಿಂದ ಬಹುಸಂಖ್ಯೆಯ ಕಾರ್ಮಿಕರನ್ನು ಹೊರಗಿಡಲಾಗಿದೆ.
ಹತ್ತು ಮಂದಿಗಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಯಾವುದೇ ಕಾರ್ಖಾನೆ ಹಾಗೂ ವಿದ್ಯುತ್ ಸಹಾಯವಿಲ್ಲದೆ ನಡೆಯುವ ಮತ್ತು ಇಪ್ಪತ್ತು ಮಂದಿಗಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಯಾವುದೇ ಕಾರ್ಖಾನೆಗಳು ವೇತನ ಸಂಹಿತೆಯ ವ್ಯಾಪ್ತಿಗೆ ಬರುವುದಿಲ್ಲ. ಅಂದರೆ, ವಾರ್ಷಿಕ ಕೈಗಾರಿಕಾ ಸಮೀಕ್ಷಾ ವರದಿ 2017-18 ಪ್ರಕಾರ ಸುಮಾರು 48% ಕಾರ್ಖಾನೆಗಳು ವೇತನ ಸಂಹಿತೆಯ ವ್ಯಾಪ್ತಿಯಿಂದ ಹೊರಗುಳಿಯುತ್ತವೆ. ಹೀಗಾಗಿ ಎಲ್ಲರಿಗೂ ಕಾನೂನುಬದ್ಧ ಕನಿಷ್ಟ್ಟ ವೇತನದ ಹಕ್ಕನ್ನು ಸ್ಥಾಪಿಸುತ್ತದೆ ಎಂಬ ಸರ್ಕಾರದ ಹೇಳಿಕೆ ಅಪ್ಪಟ ಸುಳ್ಳಾಗಿದೆ ಎನ್ನುತ್ತಾರೆ ಕಾರ್ಮಿಕ ಸಂಘಟನೆಯ (CITU) ಮುಖಂಡ ಕೆ. ಮಹಾಂತೇಶ್.
ರಾಜ್ಯದಲ್ಲಿ ಹೊಸ ಕಾರ್ಮಿಕ ಸಂಹಿತೆಗಳ ವಿರುದ್ಧ ಹೋರಾಟದ ಮುಂಚೂಣಿಯಲ್ಲಿ ಇರುವ ಮತ್ತೊಂದು ಸಂಘಟನೆ All India United Trade Union Centre (AIUTUC). ಈ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ K.V. ಭಟ್ ನ್ಯಾಯಪಥದ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ಬಲಪಡಿಸುವ ಬದಲು, ಅವುಗಳನ್ನು ಮಿತಿಗೊಳಿಸುವ ದಿಕ್ಕಿನಲ್ಲಿ ಸಾಗುತ್ತಿವೆ. “ಸುಧಾರಣೆ” ಎಂಬ ಹೆಸರಿನಲ್ಲಿ ತರಲಾಗುತ್ತಿರುವ ನಿಯಮಗಳು, ಉದ್ಯಮಗಳಿಗೆ ಅನುಕೂಲ ಕಲ್ಪಿಸುವುದರೊಂದಿಗೆ, ಕಾರ್ಮಿಕರ ಉದ್ಯೋಗ ಭದ್ರತೆ, ವೇತನ ಹಾಗೂ ಸಂಘಟನೆ ಹಕ್ಕುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸುತ್ತಾರೆ.
ಸಾಮಾಜಿಕ ಭದ್ರತೆ ಸಂಹಿತೆ-2020 ಸಂಹಿತೆಯ ಸೆಕ್ಷನ್ 109-114 ಗಳು ಗಿಗ್ ಹಾಗೂ ಬೀದಿಬದಿ ವ್ಯಾಪಾರಿಗಳನ್ನು ಒಳಗೊಂಡಂತೆ ಎಲ್ಲ ಕಾರ್ಮಿಕರಿಗೆ ಜೀವನ, ಆರೋಗ್ಯ, ಮಾತೃತ್ವ ಮತ್ತು ಭವಿಷ್ಯ ನಿಧಿ ಸೌಲಭ್ಯಗಳನ್ನು ಒಳಗೊಂಡ ಸಾಮಾಜಿಕ ಭದ್ರತೆಯನ್ನು ವಿಸ್ತರಿಸುತ್ತದೆ ಎನ್ನುತ್ತಲೇ ಅಗ್ರಿಗೇಟರ್ (Aggregator) ಸಂಸ್ಥೆಗಳ ಕೊಡುಗೆಯ ಮೊತ್ತವನ್ನು 12% ಮಾತ್ರ ಸೀಮಿತಗೊಳಿಸಲಾಗಿದೆ. ಇದರಿಂದ ಯಾವ ಸೌಲಭ್ಯಗಳೂ ಸಿಗುವ ಖಾತ್ರಿಯೇ ಇಲ್ಲ. 50 ಉದ್ಯೋಗಿಗಳನ್ನು ಹೊಂದಿರುವ ಸಹಕಾರಿ ಸಂಘಗಳನ್ನು ಭವಿಷ್ಯ ನಿಧಿ (EPF) ವ್ಯಾಪ್ತಿಯಿಂದ ಹೊರಗುಳಿಸಲಾಗಿದೆ. ಜತೆಗೆ 10 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳ ಜೊತೆಗೆ ತಿಂಗಳಿಗೆ ರೂ.21,001 ವೇತನ ಪಡೆಯುವ ನೌಕರರು ಕಾರ್ಮಿಕರ ರಾಜ್ಯ ವಿಮೆ (ESI) ವ್ಯಾಪ್ತಿಯಿಂದ ಹೊರ ಬರುತ್ತಾರೆ. ಜತೆಗೆ 10 ಅಥವಾ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳ ಉದ್ಯೋಗಿಗಳು ಮಾತ್ರವೇ ಗ್ರಾಚ್ಯುಯಿಟಿ, ಮಾತೃತ್ವ ಲಾಭಗಳಿಗೆ ಅರ್ಹರಾಗುತ್ತಾರೆ.

ಇನ್ನೂ ಹತ್ತಕ್ಕಿಂತ ಕಡಿಮೆ ಕಾರ್ಮಿಕರನ್ನು ನೇಮಿಸಿರುವ ಕಟ್ಟಡ ನಿರ್ಮಾಣ ಸಂಸ್ಥೆಗಳು ಸಾಮಾಜಿಕ ಭದ್ರತಾ ಸಂಹಿತೆಯ ವ್ಯಾಪ್ತಿಗೆ ಬರುವುದಿಲ್ಲ. ರೂ.50 ಲಕ್ಷಕ್ಕಿಂತ ಕಡಿಮೆ ವೆಚ್ಚದ ನಿರ್ಮಾಣ ಕಂಪನಿಗಳನ್ನು ಸಂಹಿತೆಯಿಂದ ಹೊರಗಿಡಲಾಗಿದೆ. ಇದರಿಂದ ರಾಜ್ಯಗಳ ಕಲ್ಯಾಣ ಮಂಡಳಿಗೆ ಬರುವ ನಿಧಿ ಹರಿವು ನಿಂತು ಹೋಗಲಿದೆ. ಇದುವರೆಗೂ ಕಲ್ಯಾಣ ಸೌಲಭ್ಯಗಳಿಗೆ ಮಾತ್ರವೇ ಸೆಸ್ ನಿಧಿ ಬಳಕೆ ಮಾಡಬೇಕೆಂಬ ಷರತ್ತು ತೆಗೆದು ವಲಸೆ ಕಾರ್ಮಿಕರಿಗೆ ತಂಗುದಾಣ, ಕೌಶಲ್ಯ ತರಬೇತಿ ಕೇಂದ್ರಗಳು, ವಸತಿಶಾಲೆಗಳ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಕಾರ್ಮಿಕರು ಅವರ ಅವಲಂಬಿತರ ಭವಿಷ್ಯಕ್ಕಾಗಿ ಶೇಖರಣೆಯಾಗುವ ಸಾವಿರಾರು ಕೋಟಿ ನಿಧಿ ರಾಜಕೀಯ ಹಿಂಬಾಲಕರಾದ ಗುತ್ತಿಗೆದಾರರ ಜೇಬು ಸೇರಲಿದೆ. ಲಕ್ಷಾಂತರ ಕಾರ್ಮಿಕರು ಈಗ ಪಡೆಯುವ ವಿವಿಧ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ತಿಂಗಳಿಗೆ ರೂ.18,000ಕ್ಕಿಂತ ಹೆಚ್ಚಿನ ವೇತನ ಪಡೆಯುವ ಅಂತರರಾಜ್ಯ ವಲಸೆ ಕಾರ್ಮಿಕರು ಈ ಸಂಹಿತೆಯ ವ್ಯಾಪ್ತಿಗೆ ಬರುವುದಿಲ್ಲ. ಮೇಲ್ಕಂಡ ಅಂಶಗಳನ್ನು ಪರಿಶೀಲಿಸಿದಾಗ ಸುಮಾರು 50 ಕೋಟಿ ಕಾರ್ಮಿಕರಿಗೆ ಸಾರ್ವತ್ರಿಕವಾಗಿ ಸಾಮಾಜಿಕ ಭದ್ರತೆ ಒದಗಿಸುತ್ತೇವೆ ಎನ್ನುವ ಕೇಂದ್ರ ಸರ್ಕಾರದ ವಾದದಲ್ಲಿ ಯಾವುದೇ ಸತ್ಯಾಂಶವಿಲ್ಲ.
ಈಗಾಗಲೇ ಜಾರಿಯಲ್ಲಿ 29 ಕಾರ್ಮಿಕ ಕಾನೂನುಗಳನ್ನು ಲೇಬರ್ ಕೋಡ್ ಹೆಸರಿನಲ್ಲಿ ವಿಲೀನಗೊಳಿಸಲಾಗಿದೆ. ವಿಲೀನಗೊಳಿಸಿರುವುದು ಮಾತ್ರವಲ್ಲ, ಅವುಗಳನ್ನು ಮಾರ್ಪಾಡು ಮಾಡಿ ಕನಿಷ್ಟ ವೇತನವನ್ನು ಫ್ಲೋರ್ ಮಿನಿಮಮ್ ವೇಜಸ್ ಎಂದು ಮಾಡಿದೆ.
ಈ ವೇತನದ ಮಟ್ಟವೇ ಪ್ರಮುಖ ಪ್ರಶ್ನೆ. “ಅಡಿಪಾಯ” ಎಂದು ನಿಗದಿಪಡಿಸುವ ಈ ವೇತನವು ನಿಜವಾಗಿಯೂ ಕಾರ್ಮಿಕನ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಧ್ಯವೇ? ಆಹಾರ, ವಸತಿ, ಆರೋಗ್ಯ, ಶಿಕ್ಷಣ ಇವುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ, ನಿಗದಿಪಡಿಸಲಾದ ಕನಿಷ್ಟ ವೇತನ ಅಗತ್ಯ ಜೀವನ ನಿರ್ವಹಣೆಗೆ ಪೂರಕವಾಗಿರಬೇಕು. ಎರಡನೆಯದಾಗಿ, ರಾಜ್ಯಗಳಿಗೆ ಈ ಫ್ಲೋರ್ ವೇತನಕ್ಕಿಂತ ಹೆಚ್ಚು ನಿಗದಿ ಮಾಡುವ ಸ್ವಾತಂತ್ರ್ಯ ಇದ್ದರೂ, ಹಲವಾರು ಸಂದರ್ಭಗಳಲ್ಲಿ ಆರ್ಥಿಕ ಒತ್ತಡಗಳು, ಮಾಲೀಕರ ಕೃಪಾಕಟಾಕ್ಷದ ಕಾರಣಕ್ಕೆ ರಾಜ್ಯ ಸರ್ಕಾರಗಳು ಮಾಡುವುದಿಲ್ಲ. ಇವುಗಳ ನಡುವೆ ಕಾರ್ಮಿಕರ ಹಿತಾಸಕ್ತಿ ಯಾವ ಮಟ್ಟಿಗೆ ಪ್ರಾಮುಖ್ಯತೆ ಪಡೆಯುತ್ತದೆ ಎಂಬುದು ಪ್ರಶ್ನಾರ್ಥಕ. ಎನ್ನುತ್ತಾರೆ AIUTUC ರಾಜ್ಯ ಉಪಾಧ್ಯಕ್ಷರಾದ K.V ಭಟ್.
ಈ ಹೊಸ ಕಾರ್ಮಿಕ ಸಂಹಿತೆಯಲ್ಲಿ ನಿಗದಿತ ಅವಧಿಯ (Fixed Term) ನೌಕರರ ನೇಮಕಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಮಾಲೀಕರು ಉದ್ಯೋಗಾವಧಿಯನ್ನು ಕಡಿತ ಮಾಡಿ ಒಂದು ವರ್ಷಕ್ಕಿಂತ ಮೊದಲೇ ಮನೆಗೆ ಕಳಿಸಿ ಗ್ರಾಚ್ಯುಯಿಟಿ ಪಾವತಿಯಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು. ಇದಲ್ಲದೆ ಕಾರ್ಮಿಕರು ಸಂಘ ಕಟ್ಟಿಕೊಳ್ಳುವ ಹಕ್ಕು, ನ್ಯಾಯಬದ್ದ ಬೇಡಿಕೆಗಳಿಗಾಗಿ ‘ಮುಷ್ಕರ’ ನಡೆಸುವ ಹಕ್ಕು, ನಿಗದಿತ ಅವಧಿಯ ಕೆಲಸದ ಹಕ್ಕು ಮತ್ತು ಹೆಚ್ಚುವರಿ ಭತ್ಯೆಗಳಿಂದ ವಂಚಿತರನ್ನಾಗಿಸುವ ನಿಯಮಾವಳಿಗಳನ್ನು ಸಂಹಿತೆಗಳಲ್ಲಿ ರೂಪಿಸಲಾಗಿದೆ ಎನ್ನುತ್ತಾರೆ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ಅಧ್ಯಕ್ಷರಾದ ಸುಷ್ಮಾ ವರ್ಮಾ.
ಕೆಲಸದ ಸ್ಥಳ ಹಾಗೂ ಕಾರ್ಮಿಕ ಕಾನೂನುಗಳ ಉಲ್ಲಂಘನೆಗಳನ್ನು ತಡೆಯುವ ಹಾಗೂ ದಂಡ ಮತ್ತು ಶಿಕ್ಷೆ ವಿಧಿಸುವ ಅಧಿಕಾರ ಹೊಂದಿದ್ದ ಫ್ಯಾಕ್ಟರಿ ಹಾಗೂ ಕಾರ್ಮಿಕ ನಿರೀಕ್ಷಕರ ಹುದ್ದೆಗಳನ್ನು ಫೆಸಿಲಿಟೇಟರ್ ಎಂದು ಬದಲಾಯಿಸಲಾಗಿದೆ.

ಲಿಂಗಾಧಾರಿತ ಭೇದಭಾವವನ್ನು ನಿಷೇಧಿಸಲಾಗಿದೆ ಎಂದು ಹೇಳುತ್ತಲೇ ಮೂಲ ಕಾಯ್ದೆಯಲ್ಲಿ ಇದ್ದ ಲಿಂಗಾಧಾರಿತ ಸಮಾನತೆಯ ವಿಧಿಗಳನ್ನು ಸಡಿಲಗೊಳಿಸಿ ಅಪಾಯಕಾರಿ ಮತ್ತು ಹಾನಿಕಾರಕ ಕೆಲಸಗಳು ಸೇರಿ ಮಹಿಳಾ ಕಾರ್ಮಿಕರನ್ನು ಸಂಜೆ 7:00 ರಿಂದ ಬೆಳಿಗ್ಗೆ 8:00 ಗಂಟೆಯವರೆಗೆ ದುಡಿಸಲು ಅನುಮತಿ ನೀಡಿವೆ. ಜತೆಗೆ ಕೈಗಾರಿಕಾ ಸಂಬಂಧ ಸಂಹಿತೆ (IR Code) ನಿಯಮವು 300 ಜನರಿಗಿಂತಲೂ ಕಡಿಮೆ ಕಾರ್ಮಿಕರನ್ನು ಹೊಂದಿರುವ ಸಂಸ್ಥೆ/ಉಧ್ಯಮಗಳು ಲೇಆಫ್ ಘೋಷಿಸಿಕೊಳ್ಳಲು, ಸರ್ಕಾರದ ಪೂರ್ವಾನುಮತಿ ಪಡೆಯದೆ ಕಾರ್ಮಿಕರನ್ನು ವಜಾಗೊಳಿಸಲು ಅವಕಾಶ ನೀಡಿದೆ. ಕಾರ್ಮಿಕರನ್ನು ನೇಮಿಸಲು ಮತ್ತು ವಜಾಗೊಳಿಸಲು ನಮಗೆ ಸಂಪೂರ್ಣ ಹಕ್ಕಿರಬೇಕು ಎನ್ನುವ ಮಾಲೀಕರ ವಾದವನ್ನು ಕೇಂದ್ರ ಸರ್ಕಾರ ಮಾನ್ಯ ಮಾಡಿದೆ.
ಭಾರತದಲ್ಲಿ ಅಸಂಘಟಿತ ಕ್ಷೇತ್ರ ದೊಡ್ಡ ಪ್ರಮಾಣದಲ್ಲಿದೆ. ಕಟ್ಟಡ ಕಾರ್ಮಿಕರು, ಗೃಹಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಕೃಷಿ ಕೂಲಿಕಾರರು, ಡೆಲಿವರಿ ಕಾರ್ಮಿಕರು ಇವರೆಲ್ಲರೂ ಅಸಂಘಟಿತ ಕಾರ್ಮಿಕರ ವ್ಯಾಪ್ತಿಗೆ ಬರುತ್ತಾರೆ. ಇವರಲ್ಲಿ ಬಹುತೇಕರಿಗೆ ಶಾಶ್ವತ ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಹಾಗೂ ಕಾನೂನು ರಕ್ಷಣೆ ಇಲ್ಲ. ಈ ಹಿನ್ನೆಲೆಯಲ್ಲೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾರ್ಮಿಕ ಸಂಹಿತೆಗಳು (Labour Codes) ಅಸಂಘಟಿತ ಕಾರ್ಮಿಕರ ಹಕ್ಕುಗಳಿಗೆ ಕತ್ತರಿ ಹಾಕುತ್ತವೇ ಹೊರತು ಹೊಸ ಭರವಸೆಗಳನ್ನಲ್ಲ ಎನ್ನುತ್ತಾರೆ ಶ್ರಮಿಕ ಶಕ್ತಿ ಸಂಘಟನೆಯ ನಾಯಕಿ ಸುಷ್ಮಾ ವರ್ಮಾ.
ಹೊಸ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡಿರುವ ಕೇಂದ್ರ ಸರ್ಕಾರ ಮತ್ತೆ ಕರ್ಮ ಸಿದ್ಧಾಂತವನ್ನು ಕಾರ್ಮಿಕರ ಮೇಲೆ ಏರಿಕೆ ಮಾಡಿದೆ. ಈಗಾಗಲೇ ಕಾರ್ಮಿಕರಿಗೆ ಮತ್ತು ಮಾಲೀಕರಿಗೆ ಒಂದು ಕಾನೂನುಗಳು ರೂಪಿಸಲ್ಪಟ್ಟಿದ್ದವು. ಈ ಹಿಂದೆ ಇದ್ದ 44 ಕೇಂದ್ರ ಮತ್ತು 189 ರಾಜ್ಯದ ಕಾರ್ಮಿಕ ಕಾನೂನುಗಳನ್ನು ವಿಲೀನ ಮಾಡುತ್ತೇವೆ ಎಂದು ಸಂಹಿತೆ ಹೆಸರಿನಲ್ಲಿ ನಾಶ ಮಾಡಿರುವುದೇ ಈ ಸರ್ಕಾರದ ಸಾಧನೆ ಎಂದಿದ್ದಾರೆ ಕಾರ್ಮಿಕರ ಪರ ವಕೀಲರಾದ ಬಾಲನ್.
ಭಾರತದ ಕಾರ್ಮಿಕ ಚಳವಳಿಯ ಇತಿಹಾಸದಲ್ಲಿ 1926ನೇ ವರ್ಷ ಒಂದು ಮಹತ್ವದ ತಿರುವು. ಈ ಸಮಯದಲ್ಲಿ ಜಾರಿಗೆ ಬಂದ Trade Unions Act, 1926 ಕಾನೂನು, ಕಾರ್ಮಿಕರ ಹಕ್ಕುಗಳಿಗೆ ಮೊದಲ ಬಾರಿಗೆ ಸ್ಪಷ್ಟವಾದ ಕಾನೂನುಬದ್ಧ ಮಾನ್ಯತೆಯನ್ನು ನೀಡಿತು.
ಈ ಕಾನೂನು ಬರುವ ಮೊದಲು, ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುವುದು ಸುಲಭವಾಗಿರಲಿಲ್ಲ. ಅವರ ಸಂಘಟನೆಗಳನ್ನು ಕಾನೂನು ಮಾನ್ಯತೆ ಇಲ್ಲದೆ ಗೌಣ ಮಾಡಲಾಗುತ್ತಿತ್ತು. ಆದರೆ 1926ರ ಈ ಕಾನೂನು ಕಾರ್ಮಿಕರ ಧ್ವನಿಗೆ ಕಾನೂನು ರಕ್ಷಣೆ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.
ಈ ಕಾನೂನು ಕಾರ್ಮಿಕ ಸಂಘಟನೆಗಳನ್ನು ನೋಂದಣಿ ಮಾಡಲು ಅವಕಾಶ ನೀಡಿತು. ಇದರಿಂದ ಟ್ರೇಡ್ ಯೂನಿಯನ್‌ಗಳು ಕಾನೂನುಬದ್ಧ ಸಂಸ್ಥೆಗಳಾಗಿ ಗುರುತಿಸಲ್ಪಟ್ಟವು. ಇದು ಕಾರ್ಮಿಕರಿಗೆ ಒಗ್ಗಟ್ಟಿನಿಂದ ಮಾತಾಡುವ ಶಕ್ತಿಯನ್ನು ನೀಡಿತು. ಉದ್ಯೋಗದಾರರ ವಿರುದ್ಧ ಕಾರ್ಮಿಕರು ಒಗ್ಗಟ್ಟಾಗಿ ತಮ್ಮ ಬೇಡಿಕೆಗಳನ್ನು ಮಂಡಿಸಿದಾಗ, ಅವರಿಗೆ ತಕ್ಷಣವೇ ಕಾನೂನು ಸಮಸ್ಯೆಗಳು ಎದುರಾಗದಂತೆ ಕೆಲವು ಭದ್ರತೆಗಳನ್ನು ಒದಗಿಸಲಾಯಿತು.
ನಮ್ಮ ಸಂವಿಧಾನ ಕಾರ್ಮಿಕರ ಹಕ್ಕುಗಳನ್ನು ನೇರವಾಗಿ ಮತ್ತು ಪರೋಕ್ಷವಾಗಿ ರಕ್ಷಿಸುತ್ತದೆ. ಸಮಾನತೆ (Article 14), ಬದುಕಿನ ಹಕ್ಕು (Article 21), ಮತ್ತು ಸಂಘಟನೆ ಮಾಡುವ ಹಕ್ಕು (Article 19(1)(c)) ಇವು ಕಾರ್ಮಿಕರ ಬದುಕಿಗೆ ಮೂಲಭೂತವಾದ ಹಕ್ಕುಗಳು. ಯಾವುದೇ ಕಾನೂನು ಈ ಹಕ್ಕುಗಳನ್ನು ದುರ್ಬಲಗೊಳಿಸುವ ರೀತಿಯಲ್ಲಿ ಜಾರಿಯಾಗಬಾರದು.
ಈ ಹಿನ್ನೆಲೆಯಲ್ಲೇ, ಹೊಸ ಕಾರ್ಮಿಕ ಸಂಹಿತೆಗಳ ಬಗ್ಗೆ ಉದ್ಭವಿಸುತ್ತಿರುವ ಆತಂಕಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕೆಲಸದ ಅವಧಿಯಲ್ಲಿ ಪರಿಷ್ಕರಣೆ ಎಂಬ ಹೆಸರಿನಲ್ಲಿ ಅತಿಯಾದ ಕೆಲಸದ ಒತ್ತಡ ಉಂಟಾಗುವ ಸಾಧ್ಯತೆ, ಉದ್ಯೋಗ ಭದ್ರತೆಯನ್ನು ಕಸಿದುಕೊಳ್ಳುವುದು ಮತ್ತು ಕಾರ್ಮಿಕ ಸಂಘಟನೆಗಳ ಚಟುವಟಿಕೆಗಳ ಮೇಲೆ ನಿಯಂತ್ರಣ ಇವುಗಳು ಸಂವಿಧಾನಾತ್ಮಕ ಹಕ್ಕುಗಳ ಆತ್ಮಕ್ಕೆ ವಿರುದ್ಧವಾಗಿದೆ.
ಆರ್ಟಿಕಲ್ 14 ನೀಡುವ ಸಮಾನತೆಯ ಹಕ್ಕು, ಒಂದೇ ಕೆಲಸಕ್ಕೆ ಸಮಾನ ಅವಕಾಶ ಮತ್ತು ಸಮಾನ ವೇತನ ಖಚಿತಪಡಿಸಬೇಕು. ಆದರೆ ಉದ್ಯೋಗದ ಅನಿಶ್ಚಿತತೆ ಮತ್ತು ವಿವಿಧ ರೀತಿಯ ಉದ್ಯೋಗ ಮಾದರಿಗಳ ಹೆಚ್ಚಳ, ಈ ಸಮಾನತೆಯ ತತ್ವವನ್ನು ದುರ್ಬಲಗೊಳಿಸುವ ಅಪಾಯವಿದೆ.
ಆರ್ಟಿಕಲ್ 21 ನೀಡುವ ಬದುಕಿನ ಹಕ್ಕು ಕೇವಲ ಬದುಕುವುದಕ್ಕೆ ಸೀಮಿತವಲ್ಲ ಅದು ಗೌರವಯುತ ಜೀವನದ ಹಕ್ಕು. ಉದ್ಯೋಗ ಭದ್ರತೆ ಇಲ್ಲದ, ನಿರಂತರ ಅನಿಶ್ಚಿತತೆಯೊಳಗಿನ ಕೆಲಸದ ಪರಿಸ್ಥಿತಿಗಳು ಈ ಹಕ್ಕಿನ ಅರ್ಥವನ್ನೇ ಬುಡಮೇಲು ಮಾಡುತ್ತದೆ.

ಆರ್ಟಿಕಲ್ 19(1)(c) ಕಾರ್ಮಿಕರಿಗೆ ಸಂಘಟಿತವಾಗಿ ಹೋರಾಡುವ ಹಕ್ಕು ನೀಡುತ್ತದೆ. ಆದರೆ ಸಂಘಟನೆಗಳ ಶಕ್ತಿಯನ್ನು ಮಿತಿಗೊಳಿಸುವ ಯಾವುದೇ ಕ್ರಮಗಳು, ಈ ಹಕ್ಕಿನ ಪರಿಣಾಮವನ್ನು ಕುಗ್ಗಿಸುವ ಸಾಧ್ಯತೆ ಇದೆ.
ಹೊಸ ಕೋಡ್‌ಗಳನ್ನು ಜಾರಿ ಮಾಡುವ ಮೂಲಕ ಕಾರ್ಮಿಕರು ಜೀತದಾಳುಗಳಾಗಿ ದುಡಿಯಿರಿ ಎಂದು ಕೇಂದ್ರ ಸರ್ಕಾರ ಹೇಳುತ್ತಿರುವಂತಿದೆ. ಇದು ಮನುವಿನ ಕರ್ಮ ಸಿದ್ಧಾಂತದ ಮುಂದುವರಿದ ಭಾಗ. ಕಾರ್ಮಿಕರನ್ನು ಮಾಲೀಕರ ಅಡಿಯಾಳಾಗಿ ಮುಂದುವರಿಸುವುದು ಇದರ ಹಿಂದಿರುವ ಅಜೆಂಡಾ ಎಂದರೆ ತಪ್ಪಾಗಲಾರದು ಎನ್ನುತ್ತಾರೆ ವಕೀಲ ಬಾಲನ್.
ಕಾರ್ಮಿಕರ ಅಭಿಪ್ರಾಯ ಕೇಳದೆ, ಅವರ ಹಿತಾಸಕ್ತಿಗಳನ್ನು ಪರಿಗಣಿಸದೆ ಯಾವುದೇ ನೀತಿ ಜಾರಿಯಾಗಬಾರದು. ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಮಿಕರ ಹಕ್ಕುಗಳನ್ನು ಕಡಿತ ಮಾಡುವ ಪ್ರಯತ್ನಗಳನ್ನು ಪ್ರಶ್ನಿಸುವುದು ಅತ್ಯವಶ್ಯಕ. ಕಾರ್ಮಿಕರ ಶ್ರಮವೇ ದೇಶದ ಅಭಿವೃದ್ಧಿ ಆಗಿರುವುದರಿಂದ, ಅವರ ಹಕ್ಕುಗಳ ರಕ್ಷಣೆ ಸರ್ಕಾರದ ಆದತೆಯಾಗಬೇಕಾಗುತ್ತದೆ.
ಕಾರ್ಮಿಕ ದಿನಾಚರಣೆಯ ಮೇ ದಿದ (MAY DAY) ಈ ಸಂದರ್ಭದಲ್ಲಿ, ಕಾರ್ಮಿಕರ ಹಕ್ಕುಗಳನ್ನು ಬಲಪಡಿಸುವ ನೀತಿಗಳತ್ತ ಸರ್ಕಾರ ಗಮನಹರಿಸಬೇಕು. ಇಲ್ಲದಿದ್ದರೆ ಈ ದೇಶ ಬಂಡವಾಳಿಗರ ಕಪಿಮುಷ್ಠಿಗೆ ಸಿಲುಕಿ, ಅವರ ಲಾಭದ ಆಸೆಗೆ ಕಾರ್ಮಿಕರಷ್ಟೇ ಅಲ್ಲದೆ ಈ ದೇಶದ ಜನಸಾಮಾನ್ಯರೂ ಕೂಡ ನರಳುವಂತಾಗುತ್ತದೆ.
ಇದನ್ನೂ ಓದಿ: ಗಿಗ್ ಕಾರ್ಮಿಕರ ಹಿನ್ನೆಲೆ ಪರಿಶೀಲನೆ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಸರ್ಕಾರ


