Homeಮುಖಪುಟಸೆ.17: ಸಾಮಾಜಿಕ ನ್ಯಾಯ ದಿನ; ಸ್ವಾಭಿಮಾನದ ಸಂಕೇತ ದ್ರಾವಿಡ ಸೂರ್ಯ ಪೆರಿಯಾರ್

ಸೆ.17: ಸಾಮಾಜಿಕ ನ್ಯಾಯ ದಿನ; ಸ್ವಾಭಿಮಾನದ ಸಂಕೇತ ದ್ರಾವಿಡ ಸೂರ್ಯ ಪೆರಿಯಾರ್

- Advertisement -
- Advertisement -

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡಿಗರು ಸ್ವಾಭಿಮಾನಿಗಳು. ಆದರೆ, ನಮ್ಮ ಸ್ವಾಭಿಮಾನಕ್ಕೆ ಒಕ್ಕೂಟ ಸರ್ಕಾರ ಕೊಳ್ಳಿ ಇಟ್ಟಿದೆ. ನಮ್ಮದಲ್ಲದ ಭಾಷೆಯನ್ನು ನಮ್ಮ ಮೇಲೆ ಹೇರುವ ಸಲುವಾಗಿ ಸೆ.14ರಂದು ಹಿಂದಿ ದಿವಸ್ ಎಂದು ಘೋಷಿಸಿದ್ದು, ಅದನ್ನು ಕನ್ನಡಿಗರೂ ಆಚರಿಸುವಂತೆ ತಾಕೀತು ಮಾಡಿದೆ. ನಮ್ಮ ಸ್ವಾಭಿಮಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಪರ ಚಳವಳಿಗಾರರು ಹಿಂದಿ ದಿವಸ್‌ಅನ್ನು ವಿರೋಧಿಸಿ ರಾಜ್ಯಾದ್ಯಂತ ಹೋರಾಟ ನಡೆಸಿರುವುದು ಆಶಾದಾಯಕ ಬೆಳವಣಿಗೆ. ಆದರೆ, ಇಂತಹದ್ದೇ ಹಿಂದಿ ವಿರೋಧಿ ಹೋರಾಟವನ್ನು ಸ್ವಾತಂತ್ರ್ಯ ಪೂರ್ವದಲ್ಲಿ 30ರ ದಶಕದಲ್ಲೇ ನಡೆಸಿದ್ದವರು ಪೆರಿಯಾರ್. ಜನಸಾಮಾನ್ಯರನ್ನು ಕಾಡುವ ವಿಚಾರಗಳಲ್ಲಿ ದೂರದೃಷ್ಟಿ ಹೊಂದಿದ್ದ ಕಾರಣಕ್ಕೆ ಅವರನ್ನು ದ್ರಾವಿಡ ನಾಡಿನ ವಿಳಾಸ ಎಂದು ಬಣ್ಣಿಸಲಾಗಿದೆ. ಆದರೆ, ವಿಪರ್ಯಾಸ ನೋಡಿ ಹಿಂದಿ ದಿವಸ್ ಮತ್ತು ಪೆರಿಯಾರ್ ಹುಟ್ಟುಹಬ್ಬ ಎರಡೂ ಹಿಂದುಮುಂದು ಬಂದಿರುವುದು ಕಾಕತಾಳೀಯವೇನೋ?

ರಾಮಸ್ವಾಮಿ ಪೆರಿಯಾರ್ ಹೋರಾಟ ದ್ರಾವಿಡ ನಾಡು ಮತ್ತು ಭಾಷೆಗಷ್ಟೇ ಸೀಮಿತವಾಗಿರಲಿಲ್ಲ. ಜಾತಿ ವಿರೋಧಿ, ಅಸ್ಪೃಶ್ಯ ವಿರೋಧಿ, ಬ್ರಾಹ್ಮಣ್ಯದ ವಿರೋಧಿ, ಮಹಿಳಾ ಶೋಷಣೆ ವಿರೋಧಿ, ಮೌಢ್ಯತೆಗಳ ವಿರೋಧಿ ಹೀಗೆ ಪೆರಿಯಾರ್ ಹೋರಾಟದ ಬಾಹುಗಳು ಎಲ್ಲಾ ಎಲ್ಲೆಗಳನ್ನೂ ಮೀರಿ ವಿಸ್ತರಿಸಿದ್ದು ವಿಶೇಷ. ದಶಕಗಳು ಉರುಳಿದರೂ ಪೆರಿಯಾರ್ ನೀಡಿದ ವೈಚಾರಿಕತೆಯಿಂದ ಇಂದಿಗೂ ತಮಿಳುನಾಡನ್ನು ಸ್ವಾಭಿಮಾನದ ನೆಲೆಯಲ್ಲಿ ಅಲ್ಲಿನ ಆಡಳಿತ ವ್ಯವಸ್ಥೆ ಮುನ್ನಡೆಸಲು ಸಾಧ್ಯವಾಗುತ್ತಿದೆ ಮತ್ತು ತಮಿಳುನಾಡನ್ನು ಇತರೆ ರಾಜ್ಯಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

“ಜಗತ್ತಿನ ಯಾವ ಮೂಲೆಯಲ್ಲಿ ಯಾರ ಮೇಲೆ ಶೋಷಣೆಯಾದರೂ ನಾನು ಶೋಷಿತನ ಪರ” ಎಂದು ಘೋಷಿಸಿಕೊಂಡಿದ್ದ ಪೆರಿಯಾರ್ ಸಾಯುವವರೆಗೆ ಹೋರಾಟ ಕಣದಿಂದ ಹಿಂದೆ ಸರಿದವರಲ್ಲ. ತಮ್ಮ ಹೋರಾಟದ ಫಲವಾಗಿ ದ್ರಾವಿಡ ಪಕ್ಷ ತಮಿಳುನಾಡಿನಲ್ಲಿ ಅಧಿಕಾರ ಹಿಡಿದ ನಂತರವೂ ತಮ್ಮದೇ ಪಕ್ಷ ಮತ್ತು ಶಿಷ್ಯರ ವಿರುದ್ಧವೇ ಹೋರಾಡಿದವರು ಪೆರಿಯಾರ್. ಅವರ ಹೋರಾಟದ ವಿವಿಧ ಆಯಾಮಗಳ ಪರಿಚಯ ಇಲ್ಲಿದೆ!

ದಕ್ಷಿಣ ಏಷ್ಯಾದ ಸಂತ ಪೆರಿಯಾರ್

ಕನ್ನಡವನ್ನು ಮಾತೃಭಾಷೆಯನ್ನಾಗಿ ಹೊಂದಿದ್ದ ಕುಟುಂಬದಲ್ಲಿ ಸೆಪ್ಟೆಂಬರ್ 17, 1879ರಲ್ಲಿ ಈರೋಡಿನಲ್ಲಿ ಜನಿಸಿದ ಪೆರಿಯಾರ್ ಅವರ ಮೂಲ ಹೆಸರು ರಾಮಸ್ವಾಮಿ ನಾಯ್ಕರ್. ತಮಿಳಿನಲ್ಲಿ ತುಂಬಾ ಗೌರವದಿಂದ ದೊಡ್ಡವರು ಎಂದು ಗುರುತಿಸುವ ಪದವೇ ಪೆರಿಯಾರ್. ಇದು ತಮಗೆ ತಾವೇ ಅಥವಾ ಯಾವುದೇ ಸಂಸ್ಥೆ ಅವರಿಗೆ ಕೊಡಮಾಡಿದ ಬಿರುದಲ್ಲ, ಬದಲಾಗಿ ಸಮುದಾಯಕ್ಕಾಗಿ ದುಡಿದು, ಅವರ ಮಧ್ಯೆಯೇ ಬೆಳೆದು, ಬಹುಜನರ ಹಿತಾಸಕ್ತಿಗಾಗಿ ಬದುಕನ್ನೇ ಸವೆಸಿದ ವ್ಯಕ್ತಿಯನ್ನ ಜನ ಅಭಿಮಾನದಿಂದ ಕರೆದದ್ದು “ಪೆರಿಯಾರ್” ಎಂದು.

ಶ್ರೀಮಂತ ವ್ಯಾಪಾರಸ್ಥರ ಮನೆಯಲ್ಲಿ ಹುಟ್ಟಿದ್ದ ಪೆರಿಯಾರ್ ದ್ರಾವಿಡ ನಾಡಿನಲ್ಲಿ ಜಾತಿವಿರೋಧಿ ಚಳವಳಿಗೆ ಅಡಿಪಾಯ ಹಾಕಿದ್ದೆ ಒಂದು ವಿಶೇಷ ಪ್ರಸಂಗದಲ್ಲಿ. ಆರಂಭ ಕಾಲದಲ್ಲಿ ಅಪಾರ ಆಸ್ತಿಕರಾಗಿದ್ದ ಪೆರಿಯಾರ್, ಕೌಟುಂಬಿಕ ವಿಚಾರವಾಗಿ ತಮ್ಮ ತಂದೆಯವರು ಕಟುವಾಗಿ ಬೈಯ್ದದ್ದರಿಂದ ಮನೆ ಬಿಟ್ಟು ವಾರಣಾಸಿಗೆ ತಲುಪಿದ್ದರು. ಆದರೆ, ಅಲ್ಲಿನ ಅನಾಚಾರಗಳು ಅವರಿಗೆ ಕೆಟ್ಟ ಅನುಭವ ನೀಡಿತ್ತು. ಗಂಗಾ ನದಿಯಲ್ಲಿ ತೇಲುತ್ತಿದ್ದ ಹೆಣಗಳನ್ನು ಕಂಡು ಬೇಸರಗೊಂಡರು. ಇದೇ ವೇಳೆ 1904ರಲ್ಲಿ ರಾಮಸ್ವಾಮಿಯವರ ಬದುಕನ್ನು ಬದಲಿಸುವಂತ ಒಂದು ಘಟನೆ ನಡೆಯಿತು. ಕಾಶಿಯಲ್ಲಿನ ಛತ್ರಗಳಲ್ಲಿ ಕೇವಲ ಬ್ರಾಹ್ಮಣರಿಗೆ ಮಾತ್ರ ಉಚಿತವಾಗಿ ಊಟ ಹಾಕಲಾಗುತ್ತಿತ್ತು. ಹಸಿವೆಯಿಂದ ಕಂಗೆಟ್ಟಿದ್ದ ರಾಮಸ್ವಾಮಿ ಹೇಗಾದರೂ ಮಾಡಿ ಊಟಮಾಡಬೇಕೆಂದು ಜನಿವಾರ ಧರಿಸಿ, ಛತ್ರವೊಂದಕ್ಕೆ ಹೋಗಿದ್ದರು.

ಆದರೆ, ಮೀಸೆ ಬಿಟ್ಟಿದ್ದ ಇವರನ್ನು ಬ್ರಾಹ್ಮಣರಲ್ಲವೆಂದು ಗುರುತಿಸಿದ ಕಾವಲುಗಾರರು, ಅಪಮಾನಗೊಳಿಸಿ ಹೊರಗೆ ತಳ್ಳಿದರು. ಆದರೆ ಛತ್ರದಿಂದ ಹೊರಬಿದ್ದ ರಾಮಸ್ವಾಮಿ ಕಣ್ಣಿಗೆ, ಆ ಕಟ್ಟಡ ನಿರ್ಮಿಸಲು ಹಣ ನೀಡಿದ್ದ ವ್ಯಕ್ತಿ, ದಕ್ಷಿಣ ಭಾರತದ ದ್ರಾವಿಡ ಜನಾಂಗದ ಶ್ರೀಮಂತ ವರ್ತಕನೆಂಬುದು ಗೊತ್ತಾಯಿತು. ತಮ್ಮವನೇ ಆದ ಮನುಷ್ಯ ಕೊಟ್ಟ ಹಣದಿಂದ ನಿರ್ಮಿಸಲಾಗಿರುವ ಛತ್ರದಲ್ಲಿ ತಮಗೇ ಅನ್ನ ಹಾಕಲು ನಿರಾಕರಿಸಿದ್ದರ ಬಗ್ಗೆ ಚಿಂತಿಸಿದರು.

ಇದು ವೈದಿಕರು ಮತ್ತು ಜಾತಿ ಪದ್ಧತಿ ಬಗ್ಗೆ ರಾಮಸ್ವಾಮಿಯವರಲ್ಲಿ ತಿರಸ್ಕಾರ ಹುಟ್ಟುವಂತೆ ಮಾಡಿತು. ಕಾಶಿಯಲ್ಲಿ ನಡೆದ ಘಟನೆ ಮನಸ್ಸಿಗೆ ದೊಡ್ಡ ಗಾಯವುಂಟುಮಾಡಿತ್ತು, ಹಿಂದೂ ಧರ್ಮದ ಬಗ್ಗೆ ಇದ್ದ ಒಳ್ಳೆಯ ಭಾವನೆಗಳನ್ನು ನಾಶಗೊಳಿಸಿತು. ಆವರೆಗೆ ಆಸ್ತಿಕನಾಗಿದ್ದ ರಾಮಸ್ವಾಮಿ ಅಲ್ಲಿನಿಂದ ಮುಂದಕ್ಕೆ ನಾಸ್ತಿಕರಾಗಿ ಬದಲಾದರು. ತಂದೆಯ ಮಾತಿನಿಂದ ಬೇಸರಗೊಂಡು ಮನೆ ಬಿಟ್ಟಿದ್ದ ರಾಮಸ್ವಾಮಿ ಮನೆಗೆ ಹಿಂತಿರುಗಿ ಜಾತಿ ವಿರೋಧಿ ಚಳವಳಿ ಕಟ್ಟಿದ್ದು ಇಂದು ಇತಿಹಾಸ.

ಮನೆಯಿಂದಲೇ ಮೊದಲು ಜಾತಿಯನ್ನು ನಿರ್ಮೂಲನೆ ಮಾಡಬೇಕೆಂದು ಪಣ ತೊಟ್ಟಿದ್ದ ಅವರು ತಮ್ಮ ಹೆಸರಿನ ಮುಂದಿದ್ದ ಜಾತಿಸೂಚಕ ನಾಯ್ಕರ್ ಎಂಬ ಪದವನ್ನು ಕೈಬಿಟ್ಟು ಅದನ್ನೇ ಒಂದು ಚಳುವಳಿಯನ್ನಾಗಿ ರೂಪಿಸಿದ್ದರು. ಹೆಸರಿನ ಮುಂದಿರುವ ಜಾತಿಸೂಚಕ ಪದವನ್ನು ತೆಗೆದುಹಾಕುವ ಆ ಮೂಲಕ ಜಾತಿಮುಕ್ತ ಸಮಾಜದ ಆಶಾವಾದದ ಕಡೆಗಿನ ಹೆಜ್ಜೆ ಹಾಕುವ ಹೋರಾಟಕ್ಕೆ ನಾಂದಿ ಹಾಡಿದ್ದೇ ಪೆರಿಯಾರ್. ಅಂದು ಪೆರಿಯಾರ್ ಕರೆಗೆ ಓಗೊಟ್ಟ ಲಕ್ಷಾಂತರ ಯುವಕರು ತಮ್ಮ ಹೆಸರಿನ ಮುಂದಿನ ಜಾತಿ ಸೂಚಕ ಪದವನ್ನು ಕೈಬಿಟ್ಟಿದ್ದರು.

ಈ ದೇಶವನ್ನ ಎಂದಿಗಾದರೂ ಶತಮಾನಗಳಷ್ಟು ಹಿಂದಕ್ಕೆ ಸರಿಸಿಬಿಡಬಹುದಾದ ಶಕ್ತಿ ಇಲ್ಲಿನ ಕೋಮುವಾದ ಮತ್ತು ಜಾತಿವಾದಗಳಿಗಿದೆ. ಇದು ಈ ನೆಲದ ಅಮಾನವೀಯ ’ವರ್ಣಾಶ್ರಮ’ದ ಪರಿಕಲ್ಪನೆಯ ಫಲ. ಮೊದಲಿಗಿದ್ದ ಸಹಜ ಸಮಾನತೆಯ ಬದುಕಿನ ಮೂಲ ಸಂಸ್ಕೃತಿಗೆ, ವಲಸೆ ಸಂಸ್ಕೃತಿ ಬೆರೆಸಿದ ವಿಷವೇ ’ಜಾತಿ’ ಎಂಬ ಸತ್ಯ ಎಲ್ಲರಿಗೂ ಅರ್ಥವಾಗಿರುವ ಸಂಗತಿ. ಇದನ್ನ ಬಾಲ್ಯದಲ್ಲಿಯೇ ಗ್ರಹಿಸಿ, ಪ್ರಶ್ನಿಸಿ, ಪ್ರತಿಭಟಿಸಿ, ನಿಜದ ಲೋಕಜ್ಞಾನಕ್ಕೆ ಮುಖಾಮುಖಿಯಾದವರೇ ಈ ಪೆರಿಯಾರ್.

ಪುರಾಣದ ಕಥೆಗಳು ಆರ್ಯರ ಶ್ರೇಷ್ಠತೆಯ ಪ್ರತಿಪಾದನೆ ಮತ್ತು ಈ ನೆಲದ ನಿಜದ ಜನರಾದ ದ್ರಾವಿಡರ ಶೋಷಣೆ ಎನ್ನುವುದನ್ನು ಬಹಳ ಬೇಗನೇ ಅರ್ಥೈಸಿಕೊಂಡ ಪೆರಿಯಾರ್ ಅವರಿಗೆ ಒಂದು ಹಂತದಲ್ಲಿ ಮುಂದಿನ ಗುರಿ ನಿಚ್ಚಳವಾಯ್ತು. ಯಾವುದು ಅಸಮಾನತೆಯ ಮೂಲ ಎನ್ನುವುದು ಸ್ಪಷ್ಟವಾಯ್ತು. ಬ್ರಾಹ್ಮಣಶಾಹಿಯ ಶೋಷಣೆಯ ರೂಪುರೇಷೆಯನ್ನ ಸ್ಪಷ್ಟಪಡಿಸಿಕೊಂಡರು. “ದ್ರಾವಿಡರನ್ನು ನೀಚರಂತೆ ಕಾಣುವ ಪುರುಣ ಗ್ರಂಥಗಳನ್ನು ಮೊದಲ ಸುಟ್ಟುಬಿಡಿ ಇಲ್ಲವೇ ತಿಪ್ಪೆಗೆ ಎಸೆಯಿರಿ” ಎಂದು ಕರೆ ನೀಡಿದ್ದರು. ಕೇರಳದ ವೈಕೋಂನಲ್ಲಿ ದಲಿತರನ್ನು ದೇವಾಲಯಕ್ಕೆ ಪ್ರವೇಶಿಸುವಂತೆ ಮಾಡಿದ್ದ ಅವರ ಹೋರಾಟ ಗಡಿಗಳನ್ನೂ ಮೀರಿ ಬೆಳೆದಿತ್ತು. ತಮಿಳುನಾಡಿನ ಮೂಲೆಮೂಲೆಗೂ ಸಂಚರಿಸಿ ದಲಿತರೂ ಕೆರೆಯ ನೀರನ್ನು ಕುಡಿಯುವಂತೆ ಮಾಡಿದ್ದ ಅವರ ಹೋರಾಟ ಸ್ವಾಭಿಮಾನದ ಪ್ರತೀಕವಾಗಿತ್ತು.

ಬಾಲ್ಯವಿವಾಹದ ವಿರುದ್ಧದ ಮತ್ತು ವಿಧವಾ ವಿವಾಹಕ್ಕಾಗಿ ಅವರ ಕೂಗು ಬ್ರಾಹ್ಮಣಶಾಹಿಗಳ ಕಣ್ಣು ಕೆಂಪಾಗಿಸಿತ್ತು. ಪೆರಿಯಾರ್ ಅವರ ಒಂದು ಕೂಗಿಗೆ ಸಾಲು ಸಾಲು ಅಂತರ್ಜಾತಿ ವಿವಾಹಗಳೂ ನಡೆದು ಹೊಸ ಕ್ರಾಂತಿಗೆ ನಾಂದಿ ಹಾಡಿದ್ದು ಸಣ್ಣ ಮಾತಲ್ಲ. ನೋಡನೋಡುತ್ತಿದ್ದಂತೆ ಪೆರಿಯಾರ್ ಒಂದಿಡೀ ಬಹುಜನ ಸಮಾಜದ ಧ್ವನಿಯಾಗಿ, ಸಾಕ್ಷಿಪ್ರಜ್ಞೆಯಾಗಿ ಬದಲಾಗಿದ್ದರು.

ಈರೋಡಿನಲ್ಲಿ ಅಂದಿನ ಮಹಾರೋಗವೆನಿಸಿಕೊಂಡಿದ್ದ ಪ್ಲೇಗು ಕಾಣಿಸಿಕೊಂಡು ನೂರಾರು ಮಂದಿ ಸತ್ತು ಸಾವಿರಾರು ಮಂದಿ ಊರು ತೊರೆದಾಗ, ಅದೊಂದು ಸಾಂಕ್ರಾಮಿಕ ರೋಗ ಎಂಬ ಕಾರಣಕ್ಕೆ
ಬಂಧುಬಾಂಧವರೂ ಸಂಸ್ಕಾರಕ್ಕೆ ಹಿಂಜರಿಯುವಾಗ ಹಲವರ ಹೆಣಗಳನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಸಾಗುವ ಮೂಲಕ ನಿಜದ ಮಹಾಮನುಷ್ಯ ಎಂದು ಜನಸಾಮಾನ್ಯರ ಅಪಾರ ಪ್ರೀತಿಗೆ ಪಾತ್ರರಾದರು.

ಕ್ರಮೇಣ ಪೆರಿಯಾರರ ಚಿಂತನೆಗಳಿಗೆ ಒಂದಿಷ್ಟು ಆಶಾವಾದದ ಪ್ರತಿಕ್ರಿಯೆ ತೋರಿಸುವ, ಅವರೊಳಗೊಂದಾಗುವ ಜನರೂ ದೊರೆತರು. ಜ್ಞಾನದ ಹಣತೆ ನಿಧಾನವಾಗಿ ಬೆಳಕು ಚೆಲ್ಲತೊಡಗಿತು. ವ್ಯಕ್ತಿತ್ವ ದೊಡ್ಡದಾದ್ದರಿಂದ ಅವರು ಕ್ರಮೇಣ ಇತರರ ಗಮನ ಸೆಳೆಯತೊಡಗಿ ಹಲವಾರು ಗೌರವಾನ್ವಿತ ಕೆಲಸಗಳಿಗೆ ಅನಿವಾರ್ಯ ಎನ್ನುವಂತಾದರು. ತಮ್ಮ ಸಹೋದರಿಯ ಒಂಬತ್ತು ವರ್ಷದ ಮಗಳು ವಿಧವೆಯಾದಾಗ ಬಹುದೊಡ್ಡ ವಿರೋಧಗಳ ನಡುವೆಯೂ ಬಾಲವಿಧವೆಗೆ ಮರುಮದುವೆ ಮಾಡಿಸುವಲ್ಲಿ ಯಶಸ್ವಿಯಾದ ಪೆರಿಯಾರರಿಗೆ, ಆದರ್ಶ ಕೇವಲ ಹೇಳುವುದಷ್ಟೇ ಆಗಿರಲಿಲ್ಲ. ಹಾಗಾಗಿಯೇ ಮುಂದೆ ಈ ನೆಲದ ಬಹುಜನರು ಪುರೋಹಿತರ ಮಧ್ಯಸ್ಥಿಕೆ ಇಲ್ಲದೆ ವಿವಾಹವಾಗುವ ಆದರ್ಶ ಸರಳ ವಿವಾಹವೊಂದನ್ನು ಪರಿಕಲ್ಪಿಸಿ ಅವರೇ ಅದರ ನೇತೃತ್ವವಹಿಸಿ ನೂರಾರು ಮದುವೆಗಳಿಗೆ ಸಾಕ್ಷಿಯಾದರು. ಆದರ್ಶವಾದಿ, ಕನಸುಗಾರ ಮತ್ತು ವಸ್ತುನಿಷ್ಠ ಬದಲಾವಣೆಯ ಕಡೆಗೆ ನಿರಂತರವಾಗಿ ತುಡಿಯುತ್ತಿದ್ದರು.

Indian spiritual and political leader Mohandas Gandhi circa 1935.

ಸ್ವಾತಂತ್ರ್ಯ ಚಳವಳಿ ಮತ್ತು ಗಾಂಧಿಯವರಿಂದ ಪ್ರಭಾವಿತರಾದ ಪೆರಿಯಾರರು ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಹಾಗಾಗಿಯೇ ಗಾಂಧಿಯವರು ಈರೋಡಿಗೆ ಬಂದಾಗ ಪೆರಿಯಾರರ ಮನೆಯಲ್ಲಿಯೇ ಉಳಿಯುತ್ತಿದ್ದರು. ಗಂಡಸರ ಕುಡಿತದಿಂದಾಗಿ ದುರಂತಕ್ಕೀಡಾಗುವ ಮಹಿಳೆಯರ ದಾರುಣ ಬದುಕಿನ ಕುರಿತು ಪೆರಿಯಾರ್ ಗಾಂಧಿಯವರೊಂದಿಗೆ ಚರ್ಚಿಸಿದರು. ಗಾಂಧಿಯವರ ಮದ್ಯಪಾನ ವಿರೋಧಿ ಚಳವಳಿಯ ರೂಪುರೇಷೆಯೊಂದು ಇಲ್ಲಿಯೇ ಅಸ್ತಿತ್ವಕ್ಕೆ ಬಂದಿತು. ಈ ಚಳವಳಿಯಲ್ಲಿ ಮುಂದೆ ಪೆರಿಯಾರ್ ಅವರ ಹೆಂಡತಿ ಮತ್ತು ಸಹೋದರಿ ಪಾಲ್ಗೊಂಡರು. ಗಾಂಧಿಯ ಪ್ರಭಾವ, ಖಾದಿ ಪ್ರಚಾರದಲ್ಲೆಲ್ಲಾ ತೊಡಗಿಸಿಕೊಂಡಿದ್ದ ಪೆರಿಯಾರರು ಮುಂದೆ ಈ ನೆಲದ ಜಾತಿವ್ಯವಸ್ಥೆ ಕುರಿತ ಗಾಂಧಿಯವರ ಧೋರಣೆಗಳಿಂದ ಬೇಸತ್ತು ಗಾಂಧಿ ಮತ್ತು ಕಾಂಗ್ರೆಸ್‌ನಿಂದ ವಿಮುಖರಾದದ್ದು ಅವರ ದೃಢ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ಪೆರಿಯಾರ್ ಮತ್ತು ಹಿಂದಿ ವಿರೋಧಿ ಚಳವಳಿ

ಭಾಷಾಭಿಮಾನದ ವಿಚಾರದಲ್ಲಿ ಇತರರಿಗಿಂತ ತಮಿಳುರು ತುಸು ಹೆಚ್ಚೇ ಭಾವುಕ ಜೀವಿಗಳು. ಹೊರಗಿನಿಂದ ನೋಡುವವರಿಗೆ ಅವರ ಭಾಷಾಭಿಮಾನ ಅತಿರೇಕವಾಗಿ ಕಂಡರೂ ಅತ್ಯಂತ ಪ್ರಾಚೀನ ಭಾಷೆ ಎಂಬ ಅಭಿಮಾನದಲ್ಲಿ ತಮ್ಮ ಭಾಷೆಯ ಮೇಲೆ ಅವರು ತೋರುವ ಪ್ರೀತಿ ಹಾಗೂ ಅದನ್ನು ರಕ್ಷಿಸಲು ಅವರು ತೋರುವ ಪ್ರಾಮಾಣಿಕ ಪ್ರಯತ್ನ ದೇಶದ ಎಲ್ಲಾ ಭಾಷಿಕರಿಗೆ ಮಾದರಿಯಾಗಬಲ್ಲದು.

ಮೆಟ್ರೋದಲ್ಲಿ ಹಿಂದಿ ಬರಹ ಸರಿಯಲ್ಲ. ಕನ್ನಡಿಗರ ಮೇಲೆ ಹಿಂದಿ ಹೇರಿಕೆ ತರವಲ್ಲ ಎಂದು ನಾವು ಈಗ ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದೇವೆ. ಮೈಲಿ ಕಲ್ಲುಗಳ ಹಿಂದಿ ಬರಹಕ್ಕೆ ಬಣ್ಣ ಬಳಿಯುತ್ತಿದ್ದೇವೆ. ಆದರೆ, ತಮಿಳುನಾಡಿನ ನಾಯಕರು ಸ್ವಾತಂತ್ರ್ಯಪೂರ್ವ ಕಾಲದಲ್ಲೇ ಹಿಂದಿ ಹೇರಿಕೆಯ ವಿರುದ್ಧ ಚಳವಳಿ ನಡೆಸಿ ರೈಲ್ವೆ ನಿಲ್ದಾಣಗಳಲ್ಲಿನ ಹಿಂದಿ ಫಲಕಕ್ಕೆ ಬಣ್ಣ ಬಳಿದು ಪ್ರತಿಭಟಿಸಿದ್ದರು. 1937-38 ರಲ್ಲೇ ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿಯನ್ನು ದೊಡ್ಡಮಟ್ಟದಲ್ಲಿ ಕಟ್ಟಿದ ಕೀರ್ತಿ ಪೆರಿಯಾರ್ ಅವರಿಗೆ ಸಲ್ಲುತ್ತದೆ. ಕರ್ನಾಟಕದಲ್ಲಿಯೂ ಹಿಂದಿ ವಿರೋಧದ ಕೂಗು ಅಷ್ಟು ಹಿಂದೆ ಇತ್ತಾದರೂ ಅದು ಚಳವಳಿ ಸ್ವರೂಪ ಪಡೆದಿರಲಿಲ್ಲ.

ತಮಿಳುನಾಡಿನಲ್ಲಿ ಭಾಷಾ ಚಳುವಳಿ ಕಟ್ಟಿ, ದಕ್ಷಿಣ ಭಾರತದಲ್ಲಿ ಹೊಸ ರಾಜಕಾರಣದ ಪಥ ಪರಿಕಲ್ಪನೆಯನ್ನು ಕಟ್ಟಿಕೊಟ್ಟ ಹೋರಾಟಗಾರ ರಾಮಸ್ವಾಮಿ ಪೆರಿಯಾರ್. 1938ರಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿದ್ದ ಸಿ. ರಾಜಗೋಪಾಲಾಚಾರಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದಿ ಭಾಷೆಯನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಬಳಸಬೇಕು ಎಂಬ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಆಗಲೇ ಪೆರಿಯಾರ್, ಅಣ್ಣಾದೊರೈ ಹಾಗೂ ಖ್ಯಾತ ಕವಿ ಭಾರತಿದಾಸನ್ ಇದನ್ನು ವಿರೋಧಿಸಿ ಚಳವಳಿ ರೂಪಿಸಿದ್ದರು. ಫೆಬ್ರವರಿ 27, 1938ರಲ್ಲೇ ತಮಿಳುನಾಡಿನಲ್ಲಿ ಹಿಂದಿ ಭಾಷಾ ವಿರೋಧಿ ಸಮ್ಮೇಳನ ನಡೆಸಲಾಗಿತ್ತು. ಕಾಂಚೀಪುರಂನಲ್ಲಿ ನಡೆದ ಮೊದಲ ಹಿಂದಿ ಭಾಷೆ ವಿರೋಧಿ ಸಮ್ಮೇಳನದಲ್ಲಿ ಮಾತನಾಡುವ ಮೂಲಕ ಪೆರಿಯಾರ್ ಮತ್ತು ಅಣ್ಣಾದೊರೈ ರಾಜ್ಯಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದರು.

ಹಿಂದಿ

ಈ ಸಮ್ಮೇಳನದಿಂದಾಗಿ ತಮಿಳುನಾಡಿನಾದ್ಯಂತ ಹಿಂದಿ ಹೇರಿಕೆಯ ವಿರುದ್ಧ ದೊಡ್ಡ ಮಟ್ಟದ ಜನಾಂದೋಲನ ಸೃಷ್ಟಿಯಾಯಿತು. ಇದು ನಂತರ ದೊಡ್ಡ ಮಟ್ಟದ ಹಿಂಸಾಚಾರಕ್ಕೂ ಕಾರಣವಾಗಿ ಸಂಘಟನೆಗೆ ಸೇರಿದ ನಟರಾಜನ್ ಹಾಗೂ ತಾಳಮುತ್ತು ಎಂಬುವವರು ಪೊಲೀಸರ ಥಳಿತಕ್ಕೆ ಬಲಿಯಾಗಿದ್ದರು. ಈ ಇಬ್ಬರ ಬಲಿ ಹಿಂದಿ ವಿರೋಧಿ ಚಳವಳಿಗೆ ಬೇರೆಯದೆ ದಿಕ್ಕು ತೋರಿಸಿತು. ಪರಿಣಾಮ ಜನರ ಹೋರಾಟಕ್ಕೆ ಮಣಿದ ಮದ್ರಾಸ್ ಪ್ರಾಂತ್ಯದ ಸರ್ಕಾರ ಕೊನೆಗೂ 1940ರಲ್ಲಿ ಈ ಆದೇಶವನ್ನು ಹಿಂತೆಗೆದುಕೊಂಡಿತ್ತು. ಆದರೆ ಈ ಪ್ರತಿಭಟನೆ ಮತ್ತಷ್ಟು ತಾರಕಕ್ಕೇರಿದ್ದು ಮಾತ್ರ 1965ರಲ್ಲಿ.

ದ್ರಾವಿಡ ಭಾಷಾ ಚಳವಳಿ ಕಟ್ಟಿದ ನಾಯಕ

1965ರಲ್ಲಿ ಪ್ರಧಾನಿ ಜವಹರ್ ಲಾಲ್ ನೆಹರು ಮರಣಾನಂತರ ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ಮತ್ತೊಮ್ಮೆ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸುವ ಎಲ್ಲಾ ಪ್ರಯತ್ನಗಳು ವ್ಯಾಪಕವಾಗಿ ನಡೆದಿದ್ದವು. ಕಾಂಗ್ರೆಸ್‌ನ ಈ ಪ್ರಯತ್ನಕ್ಕೆ ಎಲ್ಲಾ ರಾಜ್ಯಗಳು, ಪ್ರಾದೇಶಿಕ ಪಕ್ಷಗಳು ಮೌನ ಸಮ್ಮತಿ ನೀಡಿದ್ದವು. ಆದರೆ ಆ ಒಂದು ಪ್ರಾದೇಶಿಕ ಪಕ್ಷ ಮಾತ್ರ ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಎತ್ತಿತ್ತು. ಆ ಪಕ್ಷದ ಹೆಸರೇ “ದ್ರಾವಿಡ ಮುನ್ನೇತ್ರ ಕಳಗಂ”. ತಂದೈ ಪೆರಿಯಾರ್, ಅಣ್ಣಾದೊರೈ ಹಾಗೂ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಕರುಣಾನಿಧಿ ಈ ಚಳವಳಿಯ ಮುಂಚೂಣಿ ನಾಯಕರಾಗಿದ್ದರು.

1953ರಲ್ಲೇ ಕಲ್ಲಕುಡಿ ಎಂಬ ತಮಿಳುನಾಡಿನ ಪುರಾತನ ನಗರಕ್ಕೆ ದಾಲ್ಮಿಯಾಪುರಂ (ಸಿಮೆಂಟ್ ಕಂಪೆನಿಯ ಹೆಸರು) ಎಂದು ಹೆಸರಿಡಲು ನಿರ್ಧರಿಸಿದ್ದ ಕೇಂದ್ರದ ವಿರುದ್ಧ ಈ ಮೂವರು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದ್ದರು. ಕರುಣಾನಿಧಿಯವರಂತೂ ರೈಲು ಹಳಿಗಳ ಮೇಲೆ ಮಲಗಿ ಪ್ರತಿಭಟಿಸಿ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿ 3 ತಿಂಗಳು ಸೆರೆವಾಸ ಅನುಭವಿಸಿದ್ದರು. ತಮಿಳುನಾಡಿನಲ್ಲಿ ಅಣ್ಣಾದೊರೈ ನೇತೃತ್ವದಲ್ಲಿ ಹಿಂದಿ ವಿರೋಧಿ ಚಳವಳಿ ಆರಂಭವಾಗಿತ್ತು. ಆದರೆ ಪೆರಿಯಾರ್ ಮತ್ತು ಅಣ್ಣಾದೊರೈ ಅವರ ಸೇನಾನಿಯಾಗಿ ಆ ಚಳವಳಿ ಇಡೀ ತಮಿಳುನಾಡಿನಾದ್ಯಂತ ವ್ಯಾಪಿಸುವಂತೆ ಮಾಡಿದ್ದು ಇದೇ ಕರುಣಾನಿಧಿ.

ಪೆರಿಯಾರ್ ಅವರ ಒಂದೇ ಒಂದು ಕೂಗಿಗೆ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಿಟ್ಟು ರಸ್ತೆಗಿಳಿದಿದ್ದರು. ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ತಂಜಾವೂರು ಮಧುರೈಗಳಲ್ಲಿ ವಿದ್ಯಾರ್ಥಿಗಳ ಹೋರಾಟ ನಿಯಂತ್ರಣವನ್ನೂ ಮೀರಿತ್ತು. ಈ ಹೋರಾಟದ ಕಿಡಿ ಅಷ್ಟೇ ಶೀಘ್ರವಾಗಿ ಕೇರಳ, ಆಂಧ್ರಪ್ರದೇಶ ಹಾಗೂ ಅಂದಿನ ಮೈಸೂರು ರಾಜ್ಯಕ್ಕೂ ವ್ಯಾಪಿಸಿತ್ತು. “ದ್ರಾವಿಡ್ ಮುನ್ನೇತ್ರ ಕಳಗಂ” ಸ್ಥಾಪಕ ಅಣ್ಣಾದೊರೈ ದ್ರಾವಿಡರಿಗೆ ಪ್ರತ್ಯೇಕ ರಾಷ್ಟ್ರದ ಒತ್ತಾಯವನ್ನು ಕೇಂದ್ರದ ಮುಂದಿರಿಸಿದ್ದರು. ಹೋರಾಟ ತೀವ್ರ ಸ್ವರೂಪ ಪಡೆಯುತ್ತಿತ್ತು. ಪರಿಣಾಮ ಕೊನೆಗೂ ಮಣಿದ ಕೇಂದ್ರ ಸರ್ಕಾರ ಹಿಂದಿಯನ್ನು ರಾಷ್ಟ್ರಭಾಷೆ ಮಾಡುವ ತನ್ನ ನಿರ್ಧಾರವನ್ನು ಕೈಬಿಟ್ಟಿತ್ತು. ಇಂದಿಗೂ ಸಹ ನವ ದೆಹಲಿಯ ನಾಯಕರು ಭಾಷೆಯ ವಿಚಾರಕ್ಕೆ ತಮಿಳುನಾಡನ್ನು ಎದುರುಹಾಕಿಕೊಳ್ಳುವ ಧೈರ್ಯ ಮಾಡದೆ ಇರುವುದಕ್ಕೆ ಪೆರಿಯಾರ್ ಎಂಬ ಪದವೇ ಕಾರಣ ಎಂದರೂ ಅತಿಶಯೋಕ್ತಿ ಅಲ್ಲ.

PC : The News Minute

ಭಾಷಾ ಚಳವಳಿಯ ಹೊರತಾಗಿಯೂ ಮೂರ್ತಿಪೂಜೆ, ಜಾತೀಯತೆ, ಮೂಢನಂಬಿಕೆಗಳು, ಸ್ತ್ರೀ ಮತ್ತು ಕೆಳವರ್ಗದ ಜನಜೀವನದ ಶೋಷಣೆಗಳನ್ನು ವಿರೋಧಿಸಿ ಪೆರಿಯಾರ್ ರಾಮಸ್ವಾಮಿಯವರು ಮಾಡಿದ ಕ್ರಾಂತಿ ಮಹತ್ವಪೂರ್ಣವಾದುದು. ’ದ್ರಾವಿಡರ ಸ್ವಾಭಿಮಾನ’ ಎಂಬುದು ಅವರ ಕ್ರಾಂತಿಕಾರಕ ಮಾತು. ಅಂದು ಮದ್ರಾಸು ಪ್ರಾಂತ್ಯದಲ್ಲಿ ಹೆಚ್ಚು ಚುರುಕಾಗಿದ್ದ ಚಳವಳಿ ಹೆಚ್ಚಾಗಿ ತಮಿಳಿಗರನ್ನು ಒಳಗೊಂಡಿತ್ತಾದರೂ, ಹಲವು ಹೋರಾಟಗಳ ಬಳಿಕ, ಕೇರಳದ ’ವೈಕೊಂ’ನಲ್ಲಿನ ದೇವಸ್ಥಾನಗಳಲ್ಲಿ ಹಿಂದುಳಿದವರಿಗೆ ಪ್ರವೇಶ ಮುಂತಾದ ವಿಚಾರಗಳಲ್ಲಿ ಅದು ಗಡಿ ಮೀರಿತ್ತು.

ಬೆಂಗಳೂರಿನಲ್ಲಿ ನಡೆದ ರಾಷ್ಟ್ರಭಾಷೆಯ ಕುರಿತಾದ ಸಮಾವೇಶದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದ ಪೆರಿಯಾರರು, ಹಿಂದಿಯನ್ನು ರಾಷ್ಟ್ರಭಾಷೆ ಎಂದು ಮಾಡಿ ಅದರಡಿಯಲ್ಲಿ ದ್ರಾವಿಡ ಸಂಸ್ಕೃತಿಯನ್ನು ನಾಶಮಾಡುವ ಪ್ರವೃತ್ತಿಗೆ ಎಡೆಮಾಡಿಕೊಡದೆ, ಒಂದು ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಭಾಷೆಯನ್ನೇ ಅಳವಡಿಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯಕ್ಕೆ ಬಂದಿದ್ದರು.

PC: Minnambalam

ಯುನೆಸ್ಕೋ ಅವರಿಗೆ ನೀಡಿರುವ ಪ್ರಶಸ್ತಿ ಪತ್ರ ಹೀಗೆ ಹೇಳುತ್ತದೆ: “ಇವರು ನವಯುಗದ ಪ್ರವಾದಿ, ದಕ್ಷಿಣ ಪೂರ್ವ ಏಷ್ಯಾದಲ್ಲಿನ ಸಾಕ್ರೆಟಿಸ್. ಕ್ರಾಂತಿಕಾರಕ ಬದಲಾವಣೆಗಳ ಪಿತಾಮಹರಾದ ಈತ ಎಲ್ಲಾ ರೀತಿಯ ಅಜ್ಞಾನ, ಮೂಢನಂಬಿಕೆ, ಕಟ್ಟುಪಾಡು, ಮನುಷ್ಯ ಮನುಷ್ಯನ ನಡುವಿನ ಭೇದಗಳಿಗೆ ಕಡುವಿರೋಧಿಯಾಗಿದ್ದಾರೆ”.

ರಾಮಸ್ವಾಮಿ ನಾಯ್ಕರ್ ಅವರ ಹಿಂದಿ ವಿರೋಧ, ಬ್ರಾಹ್ಮಣ ಜನಸಮುದಾಯದ ಆಚರಣೆಗಳ ವಿರೋಧ, ದೇವರ ಚಿತ್ರವನ್ನು ಸಾರ್ವಜನಿಕವಾಗಿ ಸುಡುವ ರೀತಿ ಇವೆಲ್ಲಾ ಕ್ರಾಂತಿಕಾರಕ ವ್ಯಕ್ತಿ ನಡೆಸುವ ಉಗ್ರಸ್ವರೂಪಗಳನ್ನು ಪಡೆದುಕೊಂಡವು ಎಂಬ ನಿಟ್ಟಿನಲ್ಲಿ ಹಲವು ವಿಭಿನ್ನ ನಿಲುವುಗಳು ಮೂಡಿರುವುದು ಸಹಜವಾದರೂ, ನಮ್ಮ ಜಾತೀಯ ಪದ್ಧತಿಯಲ್ಲಿ ಕೆಲವೊಂದು ಮೂಲಭೂತ ಬದಲಾವಣೆಗಳು ಅವಶ್ಯವಿದ್ದ ಕಾಲದಲ್ಲಿ, ’ಮನುಷ್ಯ ಮನುಷ್ಯನನ್ನು ಮನುಷ್ಯನಂತೆ ಕಾಣುವ’ ಅನಿವಾರ್ಯತೆ ನಿರ್ಮಾಣವಾಗಬೇಕಿದ್ದ ಹಿನ್ನೆಲೆಯಲ್ಲಿ ರಾಮಸ್ವಾಮಿ ನಾಯ್ಕರ್ ಅಂತಹವರ ಸಮಾಜ ಸುಧಾರಣಾ ಕಾರ್ಯಗಳನ್ನು
ಅರ್ಥೈಸುವುದು ಕೂಡಾ ಅತ್ಯಂತ ಮಹತ್ವದ ವಿಚಾರವಾಗಬೇಕಾಗುತ್ತದೆ.

ಬಡಜನರ, ಶೋಷಿತ ಜನಾಂಗದ ಪರ ಧ್ವನಿಯಾಗಿ, ಶೋಷಿತ ಜನಾಂಗ ಮತ್ತು ಸ್ತ್ರೀಯರಿಗೆ ಸಮಾನತೆ ಇಲ್ಲದಿದ್ದ ಕಾಲದಲ್ಲಿ ಅವರು ತಂದ ಸಮಾಜದ ಸುಧಾರಣೆಗಳ ಪ್ರಯತ್ನವನ್ನು ಇಂದಿನ ಸಮಾಜ ಪಡೆದಿದೆ. ಸಮಾಜ ಸುಧಾರಣೆಗಳ ಬಗೆಗೆ ಆಸ್ಥೆ ಹೊಂದಿದ್ದ ಪೆರಿಯಾರ್ ಅವರಿಗೆ ರಾಜಕೀಯ ಲಾಭ ಪಡೆದು ಅಧಿಕಾರ ನಡೆಸುವುದು ಬೇಕಿರಲಿಲ್ಲ. ಆದರೆ ಅವರ ಚಿಂತನೆಗಳೇ ಇಂದು ತಮಿಳುನಾಡಿನಲ್ಲಿ ಅಧಿಕಾರ ನಡೆಸುವವರಿಗೆ ದಾರಿದೀಪವಾಗಿದೆ ಎಂದರೆ ತಪ್ಪಾಗಲಾರದು.

ಸ್ತ್ರೀಯರಿಗೂ ಆಸ್ತಿಯಲ್ಲಿ ಹಕ್ಕುಂಟು ಎಂಬ ಕಾಯ್ದೆಯನ್ನು ಮೊದಲು ಅಂಗೀಕರಿಸಿದ್ದೇ ತಮಿಳುನಾಡು. ಈ ನಿರ್ಣಯದ ಹಿಂದೆ ಪೆರಿಯಾರ್ ಚಿಂತನೆಯೇ ಮೂಲ ಎಂಬುದು ಕೂಡ ಮಹತ್ವದ್ದು. ಇನ್ನು ಪ್ರಸ್ತುತ ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್ ಹತ್ತಾರು ಸಾಮಾಜಿಕ ಯೋಜನೆಗಳನ್ನು ಜಾರಿಗೆ ತಂದು ಜನಪ್ರಿಯರಾಗುತ್ತಿದ್ದಾರೆ. ಜಾತಿಯನ್ನು ನಿರ್ಮೂಲನೆ ಮಾಡಿ ಸಮಾನತೆ ಸಾರುವ ಹಳ್ಳಿಗೆ 10 ಲಕ್ಷ ಉದ್ಯೋಗಾವಕಾಶ, ಯಾವುದೇ ಸಂಸ್ಥೆಯಲ್ಲಿ ನಿಂತು ಕೆಲಸ ಮಾಡುವ ನೌಕರರಿಗೆ ಕೂರಲು ಕನಿಷ್ಟ ಒಂದು ಚೇರು ನೀಡಲೇಬೇಕು, ಯಾವುದೇ ಜಾತಿಯವರೂ ಅರ್ಚಕರಾಗಬಹುದು ಎಂಬ ಡಿಎಂಕೆ ಪಕ್ಷದ ಕ್ರಾಂತಿಕಾರಕ ಯೋಜನೆಗಳ ಹಿಂದೆ ಇರುವುದು ಇದೇ ಪೆರಿಯಾರ್ ಎಂಬ ಥಿಂಕ್ ಟ್ಯಾಂಕ್ ಎಂಬುದನ್ನು ಯಾರೂ ಮರೆಯುವಂತಿಲ್ಲ.

ಸಾಯುವವರೆಗೆ ಸಮಾನತೆಗಾಗಿ ಹೋರಾಡಿದ್ದ ಪೆರಿಯಾರ್ ಡಿಸೆಂಬರ್ 24, 1973ರಲ್ಲಿ ತಮ್ಮ 94ನೆಯ ವಯಸ್ಸಿನಲ್ಲಿ ನಿಧನರಾದರು. ಆದರೆ, ಅವರ ಚಿಂತನೆಗಳು ಮಾತ್ರ ಸಮಾಜಕ್ಕೆ ದಾರಿದೀಪವಾಗಿದೆ. ಭಾರತೀಯ ಸಮಾಜದಲ್ಲಿ ಮೂಲಭೂತ ಬದಲಾವಣೆಗಳಿಗಾಗಿ ತಮ್ಮ ಸ್ವಾರ್ಥ ತ್ಯಜಿಸಿ ತಾವು ನಂಬಿದ್ದ ಧ್ಯೇಯ, ಮಾನವೀಯತೆ, ಸಮಾನತೆ, ಸ್ವಾಭಿಮಾನಗಳಿಗಾಗಿ ಶ್ರಮಿಸಿದ ರಾಮಸ್ವಾಮಿ ನಾಯ್ಕರ್ ಅವರು ಹಲವು ಕಾರಣಗಳಿಗೆ ಸ್ಮರಣೀಯರಾಗಿದ್ದಾರೆ. ಪೆರಿಯಾರ್ ಅವರ ಹುಟ್ಟಿದ ದಿನವಾದ ಸೆಪ್ಟಂಬರ್ 17ಅನ್ನು ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸುವಂತೆ ತಮಿಳುನಾಡು ಸರ್ಕಾರ ಇತ್ತೀಚೆಗೆ ಕರೆಕೊಟ್ಟಿರುವುದು ಈ ಧೀಮಂತ ಹೋರಾಟಗಾರನನ್ನು ಹೊಸ ಪೀಳಿಗೆ ಮತ್ತೆ ನೆನಪಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡಲಿದೆ.


ಇದನ್ನೂ ಓದಿ: ಪೆರಿಯಾರ್‌ ಪ್ರಶಸ್ತಿಗೆ ಮೂಡ್ನಾಕೂಡು ಚಿನ್ನಸ್ವಾಮಿ ಆಯ್ಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೀಸಲಾತಿ ಹೇಳಿಕೆ: ಆಧಾರ ಸಹಿತ ಸಾಬೀತುಪಡಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಸವಾಲು

0
ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂಬ ಹೇಳಿಕೆಯನ್ನು ಆಧಾರ ಸಹಿತ ಸಾಬೀತುಪಡಿಸಬೇಕು. ಇಲ್ಲದಿದ್ದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ...