ದ್ರಾವಿಡ ಚಳವಳಿಯ ನಾಯಕ ಇ.ವಿ.ರಾಮಸ್ವಾಮಿ ಅವರ ಹೆಸರಲ್ಲಿ ಕರ್ನಾಟಕ ವಿಚಾರವಾದಿಗಳ ವೇದಿಕೆ ನೀಡುವ ‘ಪೆರಿಯಾರ್‌ ಪ್ರಶಸ್ತಿ’ಗೆ ಈ ವರ್ಷ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಆಯ್ಕೆಯಾಗಿದ್ದಾರೆ.

ಸೆಪ್ಟೆಂಬರ್‌ 18ರಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಗಾಂಧಿಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

ಚಾಮರಾಜನಗರ ಜಿಲ್ಲೆಯವರಾದ ಮೂಡ್ನಾಕೂಡು ಚಿನ್ನಸ್ವಾಮಿಯವರು ದಲಿತ-ಬಂಡಾಯ ಸಾಹಿತ್ಯದಲ್ಲಿ ವಿಶೇಷ ಛಾಪು ಮೂಡಿಸಿದವರು. “ನಾನೊಂದು ಮರವಾಗಿದ್ದರೆ”, “ನಮ್ಮ ಎಲುಬಿನ ಹಂದರದೊಳಗೊಂದು ಮಂದಿರವಿದೆ” ಎಂದು ಬರೆದು ಕನ್ನಡ ಸಾಹಿತ್ಯದಲ್ಲಿ ಹೊಸ ಸಂಚಲನ ಸೃಷ್ಟಿಸಿದರು. ಸರಳ ಹಾಗೂ ಆಪ್ತವಾಗಿ ಮೂಡಿಬಂದ ಇವರ ಕವಿತೆಗಳು ಬುದ್ಧಪ್ರಜ್ಞೆಯನ್ನು ಬಿತ್ತಿವೆ.

ಇವರ ಕವಿತೆಗಳು ಇಂಗ್ಲೀಷ್, ಸ್ಪ್ಯಾನಿಷ್, ಫ್ರೆಂಚ್ ಹಾಗೂ ಹೀಬ್ರೂ ಭಾಷೆಗಳಿಗೆ ಅನುವಾದಗೊಂಡು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲೂ ಪ್ರಕಟವಾಗಿವೆ. ಔಟ್‌ಲುಕ್‌ ಪತ್ರಿಕೆ ‘ಭಾರತವನ್ನು ಪುನರ್‌ ನಿರ್ಮಾಣ ಮಾಡಿದ 50 ದಲಿತ ಸಾಧಕರ ಪಟ್ಟಿ’ ಪ್ರಕಟಿಸಿದ್ದು, ಅದರಲ್ಲಿ ಚಿನ್ನಸ್ವಾಮಿಯವರ ಹೆಸರೂ ಸೇರಿದೆ.

ನಾನೊಂದು ಮರವಾಗಿದ್ದರೆ, ಚಪ್ಪಲಿ ಮತ್ತು ನಾನು, ಬುದ್ಧ ಬೆಳದಿಂಗಳು, ಮತ್ತೆ ಮಳೆ ಬರುವ ಮುನ್ನ, ಮೋಹದ ದೀಪ, ಪಾಪಪ್ರಜ್ಞೆ, ಕೆಂಡ ಮಂಡಲ, ಬಹುರೂಪಿ, ಒಂದು ಕೊಡ ಹಾಲಿನ ಸಮರ, ಅಪರಿಮಿತದ ಕತ್ತಲೆ, ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ ಸೇರಿದಂತೆ ಇದುವರೆಗೆ 38 ಕೃತಿಗಳನ್ನು ರಚಿಸಿದ್ದಾರೆ. ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಅವರ ಆತ್ಮಕಥನವಾಗಿದೆ.

ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾಗಿ, ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ನಿವೃತ್ತರಾಗಿದ್ದು, ಮೈಸೂರು ವಿವಿ ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನಾ ಮತ್ತು ವಿಸ್ತರಣ ಕೇಂದ್ರ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಚಾಮರಾಜನಗರ 2ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ, ಏಪ್ರಿಲ್ 2011ರಲ್ಲಿ ಭಾಲ್ಕಿಯಲ್ಲಿ ನಡೆದ ಕಲ್ಯಾಣ ನಾಡಿನ ಶರಣ ಸಮ್ಮೇಳನದಲ್ಲಿ ಮತ್ತು ಜೂನ್ 2011ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿದ್ದರು.

ಪೆರಿಯಾರ್‌ ನನ್ನ ಬದುಕಿನ ಭಾಗ: ಮೂಡ್ನಾಕೂಡು ಚಿನ್ನಸ್ವಾಮಿ

‘ನಾನು ಗೌರಿ’ ಮಾಧ್ಯಮದೊಂದಿಗೆ ಮಾತನಾಡಿದ ಮೂಡ್ನಾಕೂಡು ಚಿನ್ನಸ್ವಾಮಿಯವರು, “ಭಾರತದ ಅಪೂರ್ವವಾದ ವಿಚಾರವಾದಿ ಪೆರಿಯಾರ್‌ ರಾಮಸ್ವಾಮಿಯವರ ಹೆಸರಿನ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ಕಳೆದ ಮೂವತ್ತೈದು ವರ್ಷಗಳಿಂದ ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌, ಬುದ್ಧ, ಬಸವ, ಪೆರಿಯಾರ್‌, ಕುವೆಂಪು ಅವರಂತಹ ಮಹಾನೀಯರ ವಿಚಾರಗಳ ಕುರಿತೇ ಬರೆಯುತ್ತಾ, ಮಾತನಾಡುತ್ತಾ ಬಂದಿದ್ದೇನೆ. ಇವರೆಲ್ಲರೂ ನನ್ನ ಬದುಕಿನ ಭಾಗವಾಗಿದ್ದಾರೆ. ನಮಗೆಲ್ಲರಿಗೂ ಸರಿಯಾದ ಹಾದಿಯನ್ನು ತೋರಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.

ಮುಂದುವರಿದು, “ಈ ಲೋಕದ ಮೊದಲ ವಿಚಾರವಾದಿ ಬುದ್ಧ. ಆತ ಯಾವುದೇ ಮೂಢನಂಬಿಕೆಯನ್ನೂ ನಂಬಲಿಲ್ಲ. ಕಣ್ಣಿಗೆ ಕಾಣಿಸದಿರುವುದನ್ನು ತಿರಸ್ಕರಿಸಿದ. ಅನುಭವದ ಮೂಲಕ ಕಂಡುಕೊಂಡ ಸತ್ಯಗಳನ್ನು ಹೇಳಿದ. ನಂತರ ಬಂದ ವಿಚಾರವಂತರಾದ ಬಸವಣ್ಣ, ಬಿರ್ಸಾಮುಂಡಾ, ಫುಲೆ, ಬಾಬಾಸಾಹೇಬರೆಲ್ಲರೂ ವೈದಿಕ ಧರ್ಮದ ಮೌಢ್ಯಗಳನ್ನು ನಿರಾಕರಿಸಿದರು. ಪೆರಿಯಾರ್‌ ಈ ನಿರಾಕರಣೆಯನ್ನು ಸ್ವಲ್ಪ ಒರಟಾಗಿ ಮಾಡಿದರು. ಈ ನೇರ ನುಡಿಗಳನ್ನು ಆ ಕಾಲದ ಜನರು ಸಹಿಸಿಕೊಂಡರು. ತಮಿಳು ನೆಲ ಅವರನ್ನು ಒಪ್ಪಿಕೊಂಡಿತು. ಜಗತ್ತಿಗೆ ಬೆಳಕನ್ನು ಬೀರುವ ಪೆರಿಯಾರ್‌ ಥರದ ಸತ್ಯವಾದಿಗಳು ಎಂದಿಗೂ ಉಳಿಯುತ್ತಾರೆ” ಎನ್ನುತ್ತಾರೆ ಚಿನ್ನಸ್ವಾಮಿ.

“ಕನ್ನಡಿಗರಾದ ಪೆರಿಯಾರ್‌ ತಮಿಳುನಾಡಿನಲ್ಲಿ ಹೆಚ್ಚು ಪ್ರಭಾವಿಸಿದರು. ಕನ್ನಡನಾಡಿನ ಬಹುತೇಕರು ತಮಿಳು ನೆಲದಲ್ಲಿ ಛಾಪು ಮೂಡಿಸಿದ್ದನ್ನು ನೋಡಬಹುದು. ಪೆರಿಯಾರ್‌‌, ಜಯಲಲಿತ, ರಜನಿಕಾಂತ್‌ ಅವರ ಸಾಧನೆಗಳು ಇದಕ್ಕೆ ಉದಾಹರಣೆ” ಎಂದರು.


ಇದನ್ನೂ ಓದಿ: ದ್ರಾವಿಡ ನಾಡಿನ ಹಿಂದಿ ಹೇರಿಕೆ ವಿರೋಧಿ ಚಳುವಳಿಯ ಇತಿಹಾಸ ಮತ್ತು ಪ್ರಸ್ತುತ ರಾಜಕಾರಣವೆಂಬ ನಾಟಕದ ಸುತ್ತ!

LEAVE A REPLY

Please enter your comment!
Please enter your name here