ಕೋವಿಡ್ ಕಾಲಘಟ್ಟದಲ್ಲಿ ಸಾಂಕ್ರಾಮಿಕವನ್ನು ತಡೆಗಟ್ಟುವ ಸಲುವಾಗಿ ಹೇರಲಾದ ಲಾಕ್‌ಡೌನ್‌ನಿಂದಾಗಿ, ಜನರ ಜೀವ ಮತ್ತು ಜೀವನೋಪಾಯಗಳಲ್ಲಿ ಉಂಟಾದ ಬದಲಾವಣೆಗಳು ಮತ್ತು ಸಮಸ್ಯೆಗಳನ್ನು ವಿವರಿಸುವ ಮತ್ತು ಅರ್ಥೈಸುವ ಹಲವು ವರದಿಗಳಿವೆ. ಇದರ ನಡುವೆಯೇ ’ಲಾಕ್ಡ್ ಔಟ್: ಎಮರ್ಜೆನ್ಸಿ ರಿಪೋರ್ಟ್ ಆನ್ ಸ್ಕೂಲ್ ಎಜುಕೇಶನ್’ ವರದಿಯು ನೆನ್ನೆಯಷ್ಟೇ ಬಿಡುಗಡೆಯಾಗಿದೆ.

ಖ್ಯಾತ ಅಭಿವೃದ್ಧಿ ಅರ್ಥಶಾಸ್ತ್ರಜ್ಞ ಹಾಗೂ ಸಾಮಾಜಿಕ ಹೋರಾಟಗಾರ ಜೀನ್ ಡ್ರೆಜ್, ಅಭಿವೃದ್ಧಿ ಅರ್ಥ ಶಾಸ್ತ್ರಜ್ಞೆ ರೀತಿಕ ಖೇರಾ, ಸಂಶೋಧಕರಾದ ವಿಪುಲ್ ಪೈಕ್ರ ಹಾಗು ನಿರಾಲಿ ಭಾಕ್ಲ ಅವರೊಟ್ಟಿಗೆ 100 ಸ್ವಯಂಸೇವಕರು (ಪ್ರಮುಖವಾಗಿ ಕಾಲೇಜು – ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು) ಆಗಸ್ಟ್ ತಿಂಗಳಿನಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ 1362 ಕುಟುಂಬಗಳಿಗೆ ಸೇರಿದ 1 ರಿಂದ 8ನೇ ತರಗತಿಯಲ್ಲಿರುವ ಮಕ್ಕಳ ಆನ್‌ಲೈನ್ ಮತ್ತು ಆಫ್‌ಲೈನ್ ಕಲಿಕೆಯನ್ನು ಅಧ್ಯಯನ ಮಾಡಲಾಗಿದೆ. ಕರ್ನಾಟಕವೂ ಸೇರಿದಂತೆ 15 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಹಿಂದುಳಿದ ಸಮುದಾಯಗಳಿಗೆ ಸೇರಿದ ನಗರಗಳ ಮತ್ತು ಗ್ರಾಮೀಣ ಭಾಗದ ಕೊಳಗೇರಿ ಮತ್ತು ಹಟ್ಟಿಗಳಲ್ಲಿ ವಾಸವಾಗಿರುವ, ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಕುಟುಂಬಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಸಮೀಕ್ಷೆಯನ್ನು ನಡೆಸಲಾಗಿದೆ. ಸಮೀಕ್ಷೆಯಲ್ಲಿ ಅಧ್ಯಯಿಸಲಾದ 1362 ಮಕ್ಕಳು ಮತ್ತು ಅವರ ಕುಟುಂಬಗಳಲ್ಲಿ ಶೇ.60ರಷ್ಟು ಕುಟುಂಬಗಳು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದ್ದರೆ ಹತ್ತಿರಹತ್ತಿರ 60% ಕುಟುಂಬಗಳು ದಲಿತ-ಆದಿವಾಸಿ ಕುಟುಂಬಗಳಾಗಿವೆ.

ಆನ್‌ಲೈನ್ ಶಿಕ್ಷಣವೆಂಬ ಕಟ್ಟು-ಕಥೆ

ಆನ್‌ಲೈನ್ ಶಿಕ್ಷಣದ ತಲುಪುವಿಕೆಯು ಬಹಳ ಅಲ್ಪ ಪ್ರಮಾಣದ್ದು ಎಂದು ಈ ಸಮೀಕ್ಷೆ ಮತ್ತೊಮ್ಮೆ ಸಾರಿ ಹೇಳುತ್ತದೆ. ಶೇ.24% ಮತ್ತು ಶೇ.8% ಕ್ರಮವಾಗಿ ನಗರ ನಿವಾಸಿ ಮತ್ತು ಗ್ರಾಮ ನಿವಾಸಿ ಮಕ್ಕಳು ಮಾತ್ರ ನಿಯತವಾಗಿ ಆನ್‌ಲೈನ್‌ನಲ್ಲಿ ಕಲಿಯುತ್ತಿದ್ದಾರೆ. ಇದಕ್ಕೆ ಕಾರಣ ಬಹಳಷ್ಟಿದ್ದರೂ, ಬಹಳ ಮುಖ್ಯವಾಗಿ ಆನ್‌ಲೈನ್ ಶಿಕ್ಷಣಕ್ಕೆ ಅತ್ಯಗತ್ಯವಾಗಿರುವ ಸ್ಮಾರ್ಟ್‌ಫೋನ್ ಈ ಮಕ್ಕಳ ಕುಟುಂಬಗಳಲ್ಲಿ ಇಲ್ಲದಿರುವುದು. ಕುಟುಂಬದಲ್ಲಿ ಸ್ಮಾರ್ಟ್‌ಫೋನ್ ಇದ್ದವರಲ್ಲಿಯೂ, ನಗರ ಪ್ರದೇಶದಲ್ಲಿ ಶೇ.31% ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ.15% ಮಕ್ಕಳು ಮಾತ್ರ ನಿಯತವಾಗಿ ಕಲಿಯುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸುತ್ತದೆ. ಇದಕ್ಕೆ ಹಲವಾರು ಕಾರಣಗಳೂ ಇರಬಹುದು. ಪೋಷಕರು ತಮ್ಮ ಕೆಲಸಕ್ಕೆ ತೆರಳಿದಾಗ ಫೋನ್‌ಅನ್ನು ಕೊಂಡೊಯ್ಯುವುದರಿಂದ ಮಕ್ಕಳ ಕಲಿಕೆಗೆ ಬಹಳಷ್ಟು ಬಾರಿ ಅದು ಅಲಭ್ಯವಾಗಿರುತ್ತದೆ. ಸಾಕಷ್ಟು ಮನೆಗಳಲ್ಲಿ ಒಂದೇ ಸ್ಮಾರ್ಟ್ ಫೋನ್ ಇದ್ದು ಇಬ್ಬರು ಅಥವಾ ಹೆಚ್ಚು ಮಕ್ಕಳು ಅದನ್ನು ಒಂದೇ ಸಮಯದಲ್ಲಿ ಬಳಸಬೇಕಾದ ಅನಿವಾರ್ಯತೆಯಿಂದಾಗಿ ಮಕ್ಕಳ ಕಲಿಕೆಗೆ ತೊಂದರೆಯುಂಟಾಗುವ ಸಂದರ್ಭಗಳಿವೆ. ಅಲ್ಲದೇ, ತಾವಿರುವ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಿಕ್ಕದೆಯೇ ಅಥವಾ ’ಡೇಟಾ’ ಪ್ಯಾಕ್ ಖರೀದಿಸಲು ಹಣ ಹೊಂದಿಸಲಾಗದಿರುವುದೂ ಸಮಸ್ಯೆಯೇ. ಅಲ್ಲದೇ, ಶಾಲೆಗಳು ಆನ್‌ಲೈನ್‌ನಲ್ಲಿ ಕಲಿಕಾ ಸಾಮಾಗ್ರಿಗಳನ್ನು ಕಳುಹಿಸದಿರುವುದು, ಒಮ್ಮೊಮ್ಮೆ ಕಳುಹಿಸಿದರೂ ಅದು ಮಕ್ಕಳ ಮತ್ತು ಅವರ ತಂದೆ ತಾಯಿಯರಿಗೆ ಅರ್ಥವಾಗದೆ ಹೋಗುವುದೂ ಉಂಟು.

ಒಟ್ಟಿನಲ್ಲಿ, ತಮ್ಮ ಮಕ್ಕಳ ಕಲಿಕೆಗೆ ಅಗತ್ಯವಾಗಿರುವ ಸೌಲಭ್ಯಗಳಿವೆ ಎಂದು ನಗರಗಳಲ್ಲಿ ನೆಲೆಸಿರುವ ಕೇವಲ ಶೇ.23% ಮತ್ತು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಕೇವಲ ಶೇ.8% ಪೋಷಕರು ಭಾವಿಸಿದ್ದಾರೆ. ಅಲ್ಲದೇ, ಆನ್‌ಲೈನ್‌ನಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರಲ್ಲಿ ಶೇ.30%ಕ್ಕೂ ಕಡಿಮೆ ಪೋಷಕರಿಗೆ ತಮ್ಮ ಮಕ್ಕಳಿಗೆ ನೀಡಲಾಗುತ್ತಿರುವ ಆನ್‌ಲೈನ್ ಶಿಕ್ಷಣ ಸಾಮಾಗ್ರಿಗಳು ಸಮಾಧಾನಕಾರವಾಗಿವೆ ಎಂದು ಸಮೀಕ್ಷೆಯು ತಿಳಿಸುತ್ತದೆ.

PC : Forbes India

ಈ ಸಂಗತಿಗಳು ಆನ್‌ಲೈನ್ ಶಿಕ್ಷಣ ಕೋವಿಡ್ ಕಾಲಘಟ್ಟದಲ್ಲಿ ಶಿಕ್ಷಣವು ಎದುರುಗೊಳ್ಳುತ್ತಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬಲ್ಲದು ಎಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಿರುವ ಪ್ರಭುತ್ವದ ವಾದವನ್ನು ಅಸಂಗತಗೊಳಿಸುವುದಲ್ಲದೇ, ಈ ಮಾದರಿಯು ಎಷ್ಟು ಹಾನಿಕಾರಕ ಎಂಬುದನ್ನೂ ಸಾರಿಸಾರಿ ಹೇಳುತ್ತದೆ.

ಅಷ್ಟೇ ಅಲ್ಲದೇ, ಈ ಸಮೀಕ್ಷೆಯು ಇನ್ನೂ ಕೆಲವು ಮಹತ್ವದ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಕೆಲವು ಶಿಕ್ಷಕರು, ಅಪಾರ ಮುತುವರ್ಜಿವಹಿಸಿ ಮಕ್ಕಳಿಗೆ ತಮ್ಮ ಕೆಲಸದ ಜವಾಬ್ದಾರಿಯ ಎಲ್ಲೆಗಳನ್ನೂ ಮೀರಿ ತಮ್ಮದೇ ಅಥವಾ ಹಳ್ಳಿಯ ಯಾರದೋ ಮನೆಯಲ್ಲಿ ಪಾಠ ಹೇಳುವ, ಅವರಿವರಿಂದ ಫೋನ್‌ಗಳನ್ನು ಸಂಗ್ರಹಿಸಿ ಮಕ್ಕಳ ಶಿಕ್ಷಣದ ಸಲುವಾಗಿ ನೀಡುವ ಕೆಲಸಗಳು ನಡೆದಿವೆಯಾದರೂ, ಕೋವಿಡ್ ಸಂದರ್ಭದಲ್ಲಿ ಶಾಲೆಗಳಿಂದ ಹಾಗು ಬಹಳಷ್ಟು ಶಿಕ್ಷಕರಿಂದ ಮಕ್ಕಳ ಆರೋಗ್ಯ ವಿಚಾರಣೆಯಾಗಲೀ ಅಥವಾ ಕಲಿಕೆಗೆ ಹೆಚ್ಚಿನ ಸಹಾಯವಾಗಲೀ ಒದಗಿಬಂದಿಲ್ಲ. ಒಂದಷ್ಟು ಹೋಮ್‌ವರ್ಕ್‌ಗಳು ಮತ್ತು ಪರೀಕ್ಷೆಗಳನ್ನು ನಡೆಸಿದ್ದು ಬಿಟ್ಟರೆ, ಶಾಲೆಗಳು ಬಹಳಷ್ಟು ಬಾರಿ ಮಕ್ಕಳಿಗೆ ಯಾವುದೇ ರೀತಿಯ ಬೆಂಬಲ ನೀಡಲು ಮುಂದಾಗಿಲ್ಲ. ಬೆಂಗಳೂರಿನಲ್ಲಿ ಈ ಸಮೀಕ್ಷೆಯನ್ನು ನಡೆಸಿದ ನಮ್ಮ ಅನುಭವದಲ್ಲಿ ಶಿಕ್ಷಕರು ಪೋಷಕರಿಗೆ ಕರೆ ಮಾಡಿ ಶಾಲಾ ಶುಲ್ಕಗಳನ್ನು ಪಾವತಿಸಲಿಕ್ಕೆ ಒತ್ತಡ ಹೇರಿದ್ದೂ ಉಂಟು! ತಮ್ಮ ಮಕ್ಕಳ ಕಲಿಕೆ ಮುಂದುವರೆಯಬೇಕಾದರೆ ಫೋನ್ ಕೊಂಡುಕೊಡಲೇಬೇಕೆಂದು ಬಹಳ ಒತ್ತಡ ಹಾಕಿದ್ದೂ ಉಂಟು!

ಖಾಸಗಿ ಶಾಲೆಗಳಿಂದ ವಲಸೆ ಹೊರಟ ಮಕ್ಕಳು

ಅಲ್ಲದೇ, ಲಾಕ್‌ಡೌನ್‌ನ ಮುನ್ನ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದ ಮಕ್ಕಳಲ್ಲಿ ಸರಿಸುಮಾರು ಶೇ.26% ಮಕ್ಕಳು ಈಗಾಗಲೇ ಸರ್ಕಾರಿ ಶಾಲೆಗಳತ್ತ ಮುಖಮಾಡಿದ್ದಾರೆ. ಇದಕ್ಕೆ ಮುಖ್ಯವಾಗಿ ಕಂಡು ಬಂದದ್ದು ಉದ್ಯೋಗ ನಷ್ಟ ಮತ್ತು ಲಾಕ್‌ಡೌನ್‌ನ ಕಾರಣದಿಂದಾಗಿ ದಿನಗೂಲಿ ಮಾಡಲಿಕ್ಕಾಗದೆ ಕುಟುಂಬಗಳ ಆದಾಯವು ಬಹಳಷ್ಟು ಬಾರಿ ನಿಂತುಹೋಗಿರುವುದು ಅಥವಾ ಕಡಿಮೆಯಾಗಿ, ಪ್ರೈವೇಟ್ ಶಾಲೆಗಳ ಶುಲ್ಕವನ್ನು ಪಾವತಿಸಲಾಗದಿದ್ದದ್ದು. ಅದರೊಟ್ಟಿಗೆಯೇ, ಇನ್ನೂ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲಿಕ್ಕೆ ಮುಂದಾಗಿದ್ದರೂ, ಅಂತವರಿಗೆ ಪೂರ್ತಿ ವರ್ಷದ ಶಾಲಾ ಶುಲ್ಕ ಪಾವತಿಸಿದ ನಂತರವಷ್ಟೇ ವರ್ಗಾವಣೆ ಪ್ರಮಾಣಪತ್ರ (ಟಿಸಿ) ನೀಡಲಾಗುವುದು ಎಂದು ಖಾಸಗಿ ಶಾಲೆಗಳು ಅಡ್ಡಿಮಾಡುತ್ತಿರುವುದುಂಟು.

ನಿಂತುಹೋದ ಮಧ್ಯಾಹ್ನದ ಬಿಸಿಯೂಟ

ಸಮೀಕ್ಷೆ ನಡೆದ ಎಲ್ಲಾ ರಾಜ್ಯಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವು ನಿಂತುಹೋಗಿದ್ದು, ಅದರ ಬದಲಿಗೆ ಬಹಳಷ್ಟು ಕಡೆಗಳಲ್ಲಿ ದಿನಸಿಯ ರೂಪದಲ್ಲಿ ಕೇವಲ ಅಕ್ಕಿ ಮತ್ತು ಗೋಧಿಯನ್ನು ಮಾತ್ರ ಒದಗಿಸಲಾಗುತ್ತಿದೆ. ಇತ್ತೀಚಿಗೆ ಅಪೌಷ್ಠಿಕತೆಯು ಹೆಚ್ಚಾಗುತ್ತಿವೆ ಎಂಬ ವರದಿಗಳೂ ಬರುತ್ತಿರುವುದಕ್ಕೆ ಇದು ಕೂಡ ಕಾರಣವಾಗಿರಬಹುದು. ಆದರಿಲ್ಲಿ ಗಮನಿಸಬೇಕಾದದ್ದು, ನಗರಗಳಲ್ಲಿ ಶೇ.20% ಕುಟುಂಬಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೇ.14% ಕುಟುಂಬಗಳಿಗೆ ಇದೂ ಕೂಡ ತಲುಪಿಲ್ಲ!

ದಲಿತರು ಮತ್ತು ಆದಿವಾಸಿಗಳು ಶಿಕ್ಷಣದಿಂದ ಇನ್ನೂ ಹೆಚ್ಚು ಹೊರಗಿಡಲ್ಪಟ್ಟಿದ್ದಾರೆ

ಗ್ರಾಮೀಣ ಭಾಗದಲ್ಲಿ ಶೇ.15% ಮಕ್ಕಳು ನಿಯತವಾಗಿ ಕಲಿಯುತ್ತಿದ್ದರೆ, ದಲಿತರು ಮತ್ತು ಆದಿವಾಸಿಗಳಲ್ಲಿ ಆ ಸಂಖ್ಯೆಯು ಶೇ.4%ಕ್ಕೆ ಇಳಿಯುತ್ತದೆ. ಅಲ್ಲದೆ, ಗ್ರಾಮೀಣ ಭಾಗದ ಕುಟುಂಬಗಳಲ್ಲಿ, ಪೋಷಕರ ಅಭಿಪ್ರಾಯದಂತೆ ಶೇ.66% ಮಕ್ಕಳ ವಿದ್ಯಾಭ್ಯಾಸವು ಲಾಕ್‌ಡೌನ್ ಸಂದರ್ಭದಲ್ಲಿ ಕುಂಠಿತವಾಗಿದ್ದರೆ, ದಲಿತರು ಮತ್ತು ಆದಿವಾಸಿಗಳ ಕುಟುಂಬಗಳಲ್ಲಿ ಈ ಸಂಖ್ಯೆಯು ಶೇ.83%ಕ್ಕೆ ಏರುತ್ತದೆ. ಅಂದರೆ, ಯಾವ ಸಮುದಾಯದ ಮಕ್ಕಳಿಗೆ ತಮ್ಮ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿವಿಕೆಯಿಂದಾಗಿ ಶಿಕ್ಷಣ ಅತೀ ಮುಖ್ಯವಾಗುತ್ತದೆಯೋ ಅದೇ ಸಮುದಾಯಗಳ ಮಕ್ಕಳ ಶಿಕ್ಷಣಕ್ಕೇ ತೊಂದರೆ ಹೆಚ್ಚಾಗಿದೆ!

ಹೆಚ್ಚುತ್ತಿರುವ ಬಾಲ ಕಾರ್ಮಿಕರ ಸಮಸ್ಯೆ

ಈ ಸಮೀಕ್ಷೆಯು ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿರುವ ಸಮಸ್ಯೆಯ ಬಗ್ಗೆ ನಮ್ಮನ್ನು ಎಚ್ಚರಿಸುತ್ತದೆ. 10 ವರ್ಷಕ್ಕಿಂತ ಚಿಕ್ಕ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಿಲ್ಲವಾದರೂ 10 ರಿಂದ 14 ವರ್ಷದ ಒಳಗಿನ ಮಕ್ಕಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತಿದೆ. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಲ್ಲಿ ಶೇ.25% ಮಕ್ಕಳು ಕುಟುಂಬದವರ ಜಮೀನುಗಳಲ್ಲಿ ದುಡಿಯುತ್ತಿದ್ದರೆ, ಕನಿಷ್ಠ ಶೇ.8% ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಕಳೆದ ಮೂರು ತಿಂಗಳಲ್ಲಿ ಒಂದಿಲ್ಲೊಂದು ರೀತಿಯ ಹಣ ಸಂಪಾದಿಸುವ ಕೆಲಸಗಳನ್ನು ಕೈಗೊಂಡಿದ್ದಾರೆ. ಇದೇ ರೀತಿಯಲ್ಲಿ ಗಂಡು ಮಕ್ಕಳೂ ಕೆಲಸಕ್ಕೆ ಮೊರೆಹೋಗಿದ್ದಾರೆ.

ಸಮೀಕ್ಷೆಯ ಇತಿ-ಮಿತಿಗಳು

130 ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ದೇಶದಲ್ಲಿ ಕೇವಲ 1362 ಹಿಂದುಳಿದ ಕುಟುಂಬಗಳನ್ನು ಆಯ್ಕೆ ಮಾಡಿ, ಅನುಕೂಲಕರ ಸಮೀಕ್ಷಾ ಮಾದರಿಯಲ್ಲಿ ಅಧ್ಯಯಿಸುವುದು ಸಂಶೋಧನಾ ಮಾದರಿಯ ಮಿತಿಗಳನ್ನು ತೋರುತ್ತದೆ. ಅಲ್ಲದೆಯೇ, ಬೆಂಗಳೂರಿನ ನಗರದಲ್ಲಿ ಈ ಸಮೀಕ್ಷೆಯನ್ನು ನಾನು ಮತ್ತು ನನ್ನ ಸ್ನೇಹಿತ ಪ್ರಭಾಕರನ್ ಚರ್ಚಿಸಿ ಕಂಡುಕೊಂಡ ಒಳನೋಟ ಕೂಡ ಈ ಸಮೀಕ್ಷೆಯು ಯಾವುದೇ ರೀತಿಯಲ್ಲೂ ಪರಿಪೂರ್ಣವಾಗಿಲ್ಲವೆಂಬುದನ್ನು ತೋರಿಸಿಕೊಟ್ಟಿತು. ಲಾಕ್‌ಡೌನ್ ಸಮಯದ ಶಿಕ್ಷಣದ ಸಂಕೀರ್ಣತೆಯನ್ನು ಬಹಳಷ್ಟು ಬಾರಿ ನಮ್ಮ ಪ್ರಶ್ನಾವಳಿಯು ಸೆರೆಹಿಡಿಯುವಲ್ಲಿ ವಿಫಲಗೊಂಡದದ್ದು ಕಂಡುಬಂದಿತ್ತು. ಉದಾಹರಣೆಗೆ, ನಾವು ಸಮೀಕ್ಷೆ ನಡೆಸಿದ ಕೊಳಗೇರಿಯೊಂದರಲ್ಲಿ ಬಹಳಷ್ಟು ಮಕ್ಕಳು ಅಂಗನವಾಡಿಯಲ್ಲಿ ತಮ್ಮ ಕಲಿಕೆಯನ್ನು ಮುಗಿಸಿದ್ದರೂ, ಕಳೆದ ಎರಡು ವರ್ಷದಿಂದ ಸರ್ಕಾರಿ ಶಾಲೆಯಲ್ಲಿ ಅವರಿಗೆ ಕೋವಿಡ್‌ನ ಕಾರಣವನ್ನು ಮುಂದೊಡ್ಡಿ ದಾಖಲಾತಿಯನ್ನು ನೀಡಲಾಗಿಲ್ಲ!

ಅಲ್ಲದೇ, ಕೆಲವು ಮನೆಗಳಲ್ಲಿ ಪೋಷಕರಿಗೆ ತಮ್ಮ ಮಕ್ಕಳ ಖಾಸಗಿ ಶಾಲಾ ಶುಲ್ಕವನ್ನು ಭರಿಸಲಾಗದಿದ್ದರೂ, ಅವರು ತಮ್ಮ ಮಕ್ಕಳ್ಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿರಲಿಲ್ಲ. ತಮ್ಮ ಮಕ್ಕಳ ಎರಡು ಶೈಕ್ಷಣಿಕ ವರ್ಷ ವ್ಯರ್ಥವಾದರೂ, ನಾವು ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವುದಿಲ್ಲವೆಂಬುದು ಅವರ ಪಟ್ಟು. ಇದಕ್ಕೆ ಮುಖ್ಯವಾಗಿ ಕಂಡುಬಂದದ್ದು ಎರಡು ಕಾರಣಗಳು – ಒಂದು, ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದಬೇಕಾಗುತ್ತದೆ ಎಂಬುದು. ಎರಡನೆಯದು, ನಮ್ಮ ಹಿರಿಯ ಮಗ/ಮಗಳನ್ನು ಖಾಸಗಿ ಶಾಲೆಯಲ್ಲಿ ಓದಿಸಿದ್ದೇವೆ. ನಮ್ಮ ಎರಡನೇ ಮಗ/ಮಗಳಿಗೆ ಅನ್ಯಾಯ ಮಾಡುವುದಿಲ್ಲವೆಂಬುದು. ಸರಿ ಮತ್ತು ತಪ್ಪುಗಳಾಚೆಗೆ ಇವೆಲ್ಲವೂ ನಮ್ಮ ಶಾಲಾ ಶಿಕ್ಷಣ ವ್ಯವ್ಯಸ್ಥೆಯ ಸಂಕೀರ್ಣತೆಗಳು ಮತ್ತು ಅದರ ಹಿಂದಿರುವ ಒತ್ತಡಗಳನ್ನು ಸೆರೆಹಿಡಿಯುತ್ತವೆ. ಆದರೆ, ಇವೆಲ್ಲವನ್ನು ಈ ಸಮೀಕ್ಷೆಯು ಬಳಸಿದ ಪ್ರಶ್ನಾವಳಿಯು ಸೆರೆ ಹಿಡಿಯಲಿಕ್ಕೆ ವಿಫಲವಾಗಿತ್ತು.

ಅಲ್ಲದೇ, ಬಹಳಷ್ಟು ಶಿಕ್ಷಣ ತಜ್ಞರು ವಿರೋಧಿಸುವ learning outcome (ಕಲಿಕೆಯ ಫಲ) ಎಂಬ ಶಿಕ್ಷಣವನ್ನು ಬಹಳ ಸೀಮಿತ ನೆಲೆಯಲ್ಲಿ ನೋಡುವ ನವ ಉದಾರವಾದಿ ನಿಲುವನ್ನೂ ಈ ಸಮೀಕ್ಷೆಯು ಒಳಗೊಂಡಿತ್ತು. ಇದು ಕೂಡ ಈ ಸಮೀಕ್ಷೆಯ ದೊಡ್ಡ ಮಿತಿಯೇ ಆಗಿದೆ.

ಆದರೂ ಈ ಎಲ್ಲಾ ಮಿತಿಗಳ ಹೊರತಾಗಿಯೂ ಈ ಸಮೀಕ್ಷೆಯು ಒಂದು ರೀತಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಶಿಕ್ಷಣ ತಜ್ಞರುಗಳು ಮತ್ತು ಶಿಕ್ಷಣ ಹಕ್ಕು ಕಾರ್ಯಕರ್ತರು, ಈ ಹಿಂದೆಯೇ ಲಭ್ಯವಿದ್ದ ಅಂಕಿ-ಅಂಶಗಳನ್ನಾಧರಿಸಿ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರವನ್ನೂ, ಜನರನ್ನೂ ಎಚ್ಚರಿಸುತ್ತಲೇ ಬಂದಿದ್ದರು. ಆದ್ದರಿಂದ, ಈ ಸಮೀಕ್ಷೆಯ ಅಂಕಿ-ಅಂಶಗಳು ಅಚ್ಚರಿಯೆನಿಸುವ ರೀತಿಯಲ್ಲಿ ಕಾಣುವುದಿಲ್ಲವಾದರೂ, ಶಿಕ್ಷಣವೆಂಬ ಮಹತ್ವದ ಕ್ಷೇತ್ರದಲ್ಲಿ ಹಿಂದುಳಿದ, ದಮನಿತ ಸಮುದಾಯದ ಬೇಡಿಕೆಯನ್ನು ಇನ್ನೂ ಗಟ್ಟಿದನಿಯಲ್ಲಿ ಮುಂದಿಡುವುದಕ್ಕೆ ಬೇಕಾದ ’ಸಾಕ್ಷ್ಯಾಧಾರ’ವನ್ನು ನೀಡುತ್ತದೆ.

Graph – 1: Mapping School Closures in India during Covid-19 Pandemic
Source: www.infographic.education.org

ಪ್ರಪಂಚಾದ್ಯಂತ ಬಹುತೇಕ ರಾಷ್ಟ್ರಗಳಲ್ಲಿ, ಕೋವಿಡ್ ಸಾಂಕ್ರಾಮಿಕವನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಲೆಗಳು ಭಾರತದ ರೀತಿಯಲ್ಲೇ ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿದರೂ, ವೇಗವಾಗಿ ತಮ್ಮ ಶಾಲೆಗಳನ್ನು ಪುನರಾರಂಭಿಸಲಿಕ್ಕೆ ಸಜ್ಜಾದವು. ಯುನೆಸ್ಕೊದ ಗ್ಲೋಬಲ್ ಮಾನಿಟರಿಂಗ್ ಆಫ್ ಸ್ಕೂಲ್ ಕ್ಲೋಶರ್ಸ್‌ನ (Global Monitoring of School Closures) ಅಂಕಿ-ಅಂಶಗಳ ಪ್ರಕಾರ ಅತೀ ಹೆಚ್ಚು ಕಾಲ ಶಾಲೆಗಳು ಸ್ಥಗಿತಗೊಂಡ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಐದನೇ ಸ್ಥಾನದಲ್ಲಿದೆ. ಒಟ್ಟು 69 ವಾರ, ಅಥವಾ 17ಕ್ಕೂ ಹೆಚ್ಚು ತಿಂಗಳುಗಳ ಕಾಲ ನಮ್ಮ ಶಾಲೆಗಳು ಮುಚ್ಚಿದ್ದವು. ಕೋವಿಡ್ ಮತ್ತು ಅದನ್ನು ನಿಯಂತ್ರಿಸಲಿಕ್ಕೆ ಹೇರಲಾದ ಲಾಕ್‌ಡೌನ್‌ನ ಹಿನ್ನಲೆಯಲ್ಲಿ ಜನರ ಜೀವ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ಪ್ರತಿಯೊಂದು ಕ್ಷೇತ್ರವೂ ಬಹಳಷ್ಟು ಒತ್ತಡಕ್ಕೊಳಪಟ್ಟಿತ್ತಾದರೂ, ಅದರಲ್ಲಿ ಶಿಕ್ಷಣ ಕ್ಷೇತ್ರವೂ ಮಹತ್ವದ್ದಾಗಿತ್ತು.

2019-20ರ ವೇಳೆಗೆ ದೇಶದಾದ್ಯಂತ 26.4 ಕೋಟಿಗೂ ಹೆಚ್ಚು ಮಕ್ಕಳು ಶಾಲೆಗಳಲ್ಲಿ ಮತ್ತು 3.8 ಕೋಟಿ ಯುವಕರು ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಹಾಗು ಹತ್ತಿರಹತ್ತಿರ 1 ಕೋಟಿ ಶಿಕ್ಷಕರು ಶಾಲೆಗಳಲ್ಲಿ ಮತ್ತು 15 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಕಾಲೇಜುಗಳಲ್ಲಿ ದುಡಿಯುತ್ತಿದ್ದರು. ಇದರಾಚೆಗೆ, ಶಿಕ್ಷಣ ಕ್ಷೇತ್ರದಲ್ಲಿ ಉದ್ಯೊಗಕ್ಕೆತೊಡಗಿಸಿಕೊಂಡಿದ್ದ ಬೋಧಕೇತರ ಸಿಬ್ಬಂದಿಗಳ ಜೀವನವೂ ಶಿಕ್ಷಣ ಕ್ಷೇತ್ರದ ಮೇಲೆ ನೇರವಾಗಿ ಅವಲಂಬಿತವಾಗಿತ್ತು. ಅಂದರೆ, ಸರಿಸುಮಾರು 35 ಕೋಟಿ ಜನರ, ಇಂದಿನ ಮತ್ತು ಮುಂದಿನ ಜೀವನವು ಶಿಕ್ಷಣ ಕ್ಷೇತ್ರವನ್ನು ನೇರವಾಗಿ ಅವಲಂಬಿಸಿತ್ತು. ಇದರರ್ಥ, ಶಿಕ್ಷಣ ಕ್ಷೇತ್ರದಲ್ಲಾಗುವ ಸಣ್ಣ ಬದಲಾವಣೆಗಳೂ ಕೂಡ ನಮ್ಮ ದೇಶದ ಬಹುತೇಕ ಎಲ್ಲ ಕುಟುಂಬಗಳ ಮೇಲೆ ಪರಿಣಾಮ ಬೀರುವಂತಹವು.

ಇಂಥಾ ಒಂದು ಬೃಹತ್ ಕ್ಷೇತ್ರದ ಬಹಳ ಮುಖ್ಯ ಬಿಕ್ಕಟ್ಟನ್ನು ನಿವಾರಿಸುವ ಸಲುವಾಗಿ ನಮ್ಮ ಸರ್ಕಾರಗಳು ಮಾಡಿದ್ದೇನು?

ಕೇವಲ ಶೂನ್ಯಸಂಪಾದನೆ

ಭಾರತದಲ್ಲಿ ಶೈಕ್ಷಣಿಕ ವರ್ಷವು ಜೂನ್-ಜುಲೈನಲ್ಲಿ ಆರಂಭವಾಗಿ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಅಂತ್ಯವಾಗುವ ಕಾರಣ ಬಹುತೇಕ ವಾರ್ಷಿಕ ಪರೀಕ್ಷೆಗಳೆಲ್ಲವೂ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆಯುತ್ತದೆ. ಆದಕಾರಣ, ಮಾರ್ಚ್‌ನಲ್ಲಿ ಹೇರಲಾದ ದಿಢೀರ್ ಲಾಕ್‌ಡೌನ್, ಮಕ್ಕಳಲ್ಲಿ-ಪೋಷಕರಲ್ಲಿ ಸಹಜವಾಗಿಯೇ ಮೊದಲು ಆತಂಕ ಮೂಡಿಸಿದ್ದು ಪರೀಕ್ಷೆಯ ವಿಚಾರದಲ್ಲಿ. ನಂತರ, ಎಲ್ಲೆಲ್ಲಿ ಪಾಠ ನಡೆದಿರಲಿಲ್ಲವೋ ಅಲ್ಲೆಲ್ಲಾ ಪಠ್ಯಗಳನ್ನು ಕಡಿತಗೊಳಿಸುವದರಲ್ಲೇ ನವೆಂಬರ್‌ವರೆಗೂ ಕಾಲ ತಳ್ಳಿದ ಸರ್ಕಾರಗಳು ತದನಂತರದಲ್ಲಿ ಶಿಕ್ಷಕರನ್ನೂ-ಮಕ್ಕಳನ್ನೂ ಮಾನಸಿಕವಾಗಿ ಹಿಂಸಿಸಿಯಾದರೂ ಮಧ್ಯಮ ವರ್ಗ ಮತ್ತು ಖಾಸಗಿ ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಯನ್ನು ಕಾಪಾಡಲಿಕ್ಕೆ ಜಿದ್ದಿಗೆ ಬಿದ್ದು ಪರೀಕ್ಷೆ ನಡೆಸಿದವು.

ಇದರ ಮಧ್ಯೆಯೇ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟುಗಳು ಮಧ್ಯಾಹ್ನದ ಬಿಸಿಯೂಟವನ್ನು ನೀಡಲೇಬೇಕಾಗಿ ಒತ್ತಾಯಿಸಿದಾಗ ಕಾಟಾಚಾರಕ್ಕಾಗಿ ಅದನ್ನು ನೀಡಿವೆ. ತೀರಾ ಇತ್ತೀಚಿಗೆ, ಒಂದು ತಿಂಗಳಿನಿಂದ ಶಾಲಾ ಪುನರಾರಂಭದ ಬಯಲಾಟವನ್ನು ಶುರು ಮಾಡಿವೆ. ಆದರೆ, ಇದರಾಚೆಗೆ, ಶಿಕ್ಷಣ ಕ್ಷೇತ್ರಕ್ಕೆ ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ನ ಪರಿಣಾಮವೇನು? ಆನ್‌ಲೈನ್ ಶಿಕ್ಷಣದಿಂದ ಯಾರಿಗೆ ಅನುಕೂಲ-ಯಾರಿಗೆ ಅನಾನುಕೂಲ ಎಂಬುದೆಲ್ಲದರ ಬಗ್ಗೆ ಒಂದು ಬಾರಿಯಾದರೂ ಕೂಲಂಕುಷವಾಗಿ ಚರ್ಚಿಸಲಿಲ್ಲ, ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ. ಒಂದು ಸಣ್ಣ ಸಮೀಕ್ಷೆಯನ್ನೂ, ಸಂಶೋದನೆಯನ್ನೂ ಕೈಗೊಳ್ಳದೇ ತಮಗಿಷ್ಟ ಬಂದರೀತಿಯಲ್ಲಿ ಶಿಕ್ಷಣ ಕ್ಷೇತ್ರವನ್ನು ನಡೆಸುತ್ತಾ ಬಂದಿವೆ. ಅಲ್ಲದೇ, ಶಿಕ್ಷಣಕ್ಕೆ ಬಜೆಟ್‌ನಲ್ಲಿ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳೆರಡೂ ಅನುದಾನವನ್ನು ಹಿಗ್ಗಿಸುವ ಬದಲು ಕಡಿತಗೊಳಿಸಿದ್ದಲ್ಲದೇ, ತಜ್ಞರ-ವಿದ್ಯಾರ್ಥಿಗಳ-ಶಿಕ್ಷಕರ ವಿರೋಧದ ನಡುವೆಯೂ ಆನ್‌ಲೈನ್ ಶಿಕ್ಷಣವನ್ನು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿವೆ.

ಏನಿಲ್ಲವೆಂದರೂ, ಈ ಸಮೀಕ್ಷೆಯಿಂದಾಗಿ ಶಾಲೆಗಳ ವಿಚಾರವಾಗಿ ಸಂಪೂರ್ಣ ಮೌನ ತಾಳಿದ್ದ ರಾಷ್ಟ್ರೀಯ ಮಾಧ್ಯಮಗಳು, ಈಗ ಕೆಲವಾದರೂ ಜನರೊಂದಿಗೆ ಈ ವಿಷಯನ್ನು ಚರ್ಚಿಸಲು ಮುಂದಾಗಿವೆ ಎನ್ನುವುದೇ ಆಶಾದಾಯಕ ವಿಚಾರ.

ಈ ಸಂದರ್ಭದಲ್ಲಿ ಜನಪರ ಕಾಳಜಿಯುಳ್ಳ ಈ ರೀತ್ಯ ಸಮೀಕ್ಷೆಗಳು ಮತ್ತು ಸಂಶೋಧನೆಗಳನ್ನು ಸಾರ್ವಜನಿಕ ನೀತಿಗಳ ಸುತ್ತ ಚರ್ಚೆಯನ್ನು ಹುಟ್ಟುಹಾಕಲು ಮತ್ತು ಜನರ ಮುಂದೆ ಸತ್ಯವನ್ನು ಬಿಚ್ಚಿಡಲು ಬಳಸಿಕೊಳ್ಳಬೇಕಾದ ಅನಿವಾರ್ಯತೆ ಜನಪರ ಚಳುವಳಿಗಿದೆ. ಈ ರೀತ್ಯ ಪ್ರಯತ್ನಗಳು ಇನ್ನೂ ಹೆಚ್ಚಬೇಕಿದೆ.

ಶಶಾಂಕ್
ಎನ್‌ಐಎಎಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿ. ಪ್ರಗತಿಪರ-ಜನಪರ ಚಳವಳಿಗಳ ಬಗ್ಗೆ ಆಸಕ್ತಿ.


ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ-2020; ಪದವಿ ಶಿಕ್ಷಣ ಪುನಾರಚನೆ ತೇಪೆ ಕೆಲಸ ಆಗದಿರಲಿ

LEAVE A REPLY

Please enter your comment!
Please enter your name here