ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಪ್ರಸಕ್ತ ಸಾಲಿನಿಂದ, ಅಂದರೆ 2021-22ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ಸಾಮಾನ್ಯ ಶಿಕ್ಷಣದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ತರಗತಿಗಳನ್ನು ಪುನಾರಚಿಸಿ ಜಾರಿಗೊಳಿಸಲು ಮುಂದಾಗಿದ್ದು, ಇದಕ್ಕೆ ಬೇಕಾದ ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳನ್ನು ರೂಪಿಸಲು 33 ವಿಷಯವಾರು ಸಮಿತಿಗಳನ್ನು ರಚಿಸಿ ಆದೇಶಿಸಿದೆ. ಬರುವ ಸೆಪ್ಟಂಬರ್ 6ರ ಒಳಗಾಗಿ ಈ ಎಲ್ಲಾ ಸಮಿತಿಗಳು ಅವುಗಳಿಗೆ ವಹಿಸಿರುವ ವಿಷಯಗಳಿಗೆ ಸಂಬಂಧಿಸಿದಂತೆ ಮೊದಲ ವರ್ಷದ ಪದವಿ ತರಗತಿಗಳಿಗೆ ಸಂಬಂಧಿಸಿದಂತೆ ಮಾತ್ರ ಪಠ್ಯಕ್ರಮ ರೂಪಿಸಲು ತಿಳಿಸಲಾಗಿದೆ. ಇದೇ ಕಾರಣಕ್ಕೆ ಕರ್ನಾಟಕ ಉನ್ನತ ಶಿಕ್ಷಣ ಸಚಿವಾಲಯ ಈ ಹಿಂದೆ ರಚಿಸಲಾಗಿದ್ದ ಪ್ರೊ.ಬಿ.ತಿಮ್ಮೇಗೌಡ ಇವರ ಅಧ್ಯಕ್ಷತೆಯ ಕಾರ್ಯಪಡೆ ಉಪಸಮಿತಿ ಪಠ್ಯಕ್ರಮವನ್ನು ಪುನಾರಚಿಸಲು ಮಾರ್ಗಸೂಚಿ ಚೌಕಟ್ಟೊಂದನ್ನು ರೂಪಿಸಿಕೊಟ್ಟಿದ್ದು, ಆ ಚೌಕಟ್ಟಿನೊಳಗೇ ಪಠ್ಯಕ್ರಮ ವಿನ್ಯಾಸಗೊಳಿಸಬೇಕಿದೆ. ಜೊತೆಗೆ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಈ ಬಗ್ಗೆ ನೀಡಿರುವ ಮಾರ್ಗಸೂಚಿಯನ್ನು ಕೂಡ ಗಮನಕ್ಕೆ ತೆಗೆದುಕೊಂಡು ನಾಲ್ಕು ವರ್ಷದ ಪದವಿ ತರಗತಿಯ ಸಂರಚನೆಯನ್ನು ಮತ್ತು ಅದಕ್ಕನುಗುಣವಾಗಿ ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ಅಧ್ಯಯನಕ್ಕೆ ಸಂಬಂಧಿಸಿದ ವಿಷಯವಾರು ಮಾದರಿ ಪಠ್ಯಕ್ರಮ ಮತ್ತು ಬೋಧನಾ ವಿಧಾನವನ್ನು ವಿನ್ಯಾಸಗೊಳಿಸುವುದು ಸಮಿತಿಗಳ ಕೆಲಸ.

ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳು ಸಾಮಾನ್ಯ ಶಿಕ್ಷಣ ವಲಯದ ಇದೇ ಪಠ್ಯವನ್ನು ಯಥಾವತ್ತಾಗಿ ಜಾರಿಗೊಳಿಸಬೇಕೋ ಅಥವಾ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶವಿದೆಯೋ ತಿಳಿದಿಲ್ಲ. ಯಥಾವತ್ತಾಗಿ ಜಾರಿಗೊಳಿಸಬೇಕೆನ್ನುವುದಾದರೆ ವಿಶ್ವವಿದ್ಯಾನಿಲಯಗಳಿಗಿರುವ ಅಷ್ಟೋ ಇಷ್ಟೋ ಶೈಕ್ಷಣಿಕ ಸ್ವಾಯತ್ತತೆಯನ್ನೂ ಕಿತ್ತುಕೊಂಡಂತೆ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವುದು ಮತ್ತು ಶಿಕ್ಷಕರಿಗೆ ಪಠ್ಯವಿಷಯಗಳನ್ನು ಮತ್ತು ಬೋಧನಾ ವಿಧಾನಗಳನ್ನು ರೂಪಿಸುವ ಸಂಪೂರ್ಣ ಸ್ವಾತಂತ್ರ್ಯ ಕೊಡುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಉದ್ದೇಶ. ಆರಂಭದ ಕಾರ್ಯಾನುಷ್ಠಾನದಲ್ಲೇ ಎಡವಟ್ಟುಗಳಾಗುತ್ತಿವೆ. 2030ರ ಹೊತ್ತಿಗೆ ದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳನ್ನು ದೊಡ್ಡ ಪ್ರಮಾಣದ ಬಹುಶಿಸ್ತೀಯ ಉನ್ನತ ಶಿಕ್ಷಣ ಸಂಸ್ಥೆಗಳನ್ನಾಗಿಸುವುದು ಮತ್ತು ಸಂಯೋಜನಾ ವ್ಯವಸ್ಥೆಯನ್ನು ಕೈಬಿಡುವುದು ನೀತಿಯ ಉದ್ದೇಶವಾಗಿದ್ದರೂ ಈ ಎಲ್ಲಾ ಸಂಸ್ಥೆಗಳಲ್ಲಿ ಏಕರೂಪದ ಪಠ್ಯವಿನ್ಯಾಸವಿರಬೇಕೆನ್ನುವುದರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ.

ಇದನ್ನು ಪಕ್ಕಕ್ಕಿಟ್ಟು ನೋಡಿದರೂ, ಶಿಕ್ಷಣ ನೀತಿ ರೂಪುಗೊಂಡು ವರ್ಷ ಕಳೆದರೂ ಸುಮ್ಮನಿದ್ದ ಕರ್ನಾಟಕ ಸರ್ಕಾರ ಇದೀಗ ಏಕಾಏಕಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಸಲು ಮುಂದಾಗಿರುವುದು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಪೋಷಕರನ್ನೊಳಗೊಂಡಂತೆ ಎಲ್ಲರನ್ನೂ ಆತಂಕಕ್ಕೀಡುಮಾಡಿದೆ. ಎರಡು ಪ್ರಮುಖ ಕಾರಣಗಳಿಂದಾಗಿ ಈ ಆತಂಕ. ಒಂದು, ಕಲಿಯಬೇಕಾದ ಮತ್ತು ಕಲಿಸಬೇಕಾದ ಪಠ್ಯವಿಷಯದ ಬಗ್ಗೆ ಕಲಿಯುವ ಮತ್ತು ಕಲಿಸುವವರಿಗೇ ಇರುವ ಸಮಗ್ರ ಮಾಹಿತಿ ಕೊರತೆ. ಮತ್ತೊಂದು, ಕೋವಿಡ್-19ರ ದುರಿತ ಸಂದರ್ಭದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಲೇಜು ಮತ್ತು ವಿಶ್ವವಿದ್ಯಾನೀಯಗಳಿಂದ ಭೌತಿಕವಾಗಿ ದೂರವಿದ್ದು ಈಗ ಒಂದಷ್ಟು ರಿಲಾಕ್ಸ್ ಆಗುತ್ತಿದ್ದಂತೆಯೇ ಬದಲಾದ ಪಠ್ಯ ಮತ್ತು ಬೋಧನಾಕ್ರಮಗಳ ಬಗ್ಗೆ ಮತ್ತು ಅದಕ್ಕೆ ಅಗತ್ಯವಿರುವ ಪುಸ್ತಕ, ಪ್ರಯೋಗಾಲಯ, ಕೊಠಡಿ, ಶಿಕ್ಷಕರ ತರಬೇತಿ ಮುಂತಾದ ಮೂಲಸೌಲಭ್ಯಗಳ ಕುರಿತು ಯೋಚಿಸಲೂ ಸಾಧ್ಯವಿರದಷ್ಟು ಸಮಯದಲ್ಲಿ ಹಸಿಹಸಿಯಾಗಿ ಈ ನೀತಿಯನ್ನು ಜಾರಿಗೊಳಿಸುವ ಸರ್ಕಾರದ ತುರ್ತು ಅರ್ಥವಾಗುತ್ತಿಲ್ಲ. ಹೋಗಲಿ, ಈ ಬದಲಾವಣೆಗಳನ್ನು ವಾಸ್ತವಗೊಳಿಸಲು ಬೇಕಾದ ಹಣಕಾಸು ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆಯೇ ಎಂದರೆ, ಅದೂ ಇಲ್ಲ. ಕೇಂದ್ರ ಸರ್ಕಾರದ ಮುಂಗಡ ಪತ್ರದಲ್ಲೂ ಇಲ್ಲ, ರಾಜ್ಯ ಸರ್ಕಾರದ ಮುಂಗಡ ಪತ್ರದಲ್ಲೂ ಸುಳಿವಿಲ್ಲ.

ಹಾಗಿದ್ದೂ, ರಾಷ್ಟ್ರೀಯ ಶಿಕ್ಷಣ ನೀತಿ-2020 ಕುರಿತು ಚರ್ಚಿಸುವ ಉದ್ದೇಶ ಈ ಲೇಖನದ್ದಲ್ಲ. ಕರ್ನಾಟಕ ಸರ್ಕಾರ ಈಗ ಕೈಗೊಳ್ಳುತ್ತಿರುವ ಕ್ರಮಗಳನ್ನು ಕುರಿತು ಹೇಳುವುದಾದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅದರ ಆಶಯದ ಶಬ್ದಗಳಲ್ಲಿ ಹೇಳುವುದಾದರೆ ಪಾರದರ್ಶಕವಾಗಿ, ಭಾಗಿದಾರರ ಪಾಲ್ಗೊಳ್ಳುವಿಕೆಯ ಮೂಲಕ, ಉದ್ಯೋಗದಾಯಿತ್ವ, ಸಮಾನತೆ, ಒಳಗೊಳ್ಳುವಿಕೆ ಮತ್ತು ಭಾರತೀಯ ಸಂವಿಧಾನಾತ್ಮಕ ನಾಗರಿಕ ಪ್ರಜ್ಞೆಯನ್ನು ಉನ್ನತ ಶಿಕ್ಷಣ ವಲಯದ ವಿದ್ಯಾರ್ಥಿಗಳಲ್ಲಿ ಸ್ಥಾಯಿಗೊಳಿಸುವ ಉದ್ದೇಶ ನಿಜಕ್ಕೂ ಇಲ್ಲ ಎಂದೇ ಹೇಳಬಹುದು. ಇರುವುದು ನಿಜವೇ ಆಗಿದ್ದರೆ ಈಗ ಮುಂದಾಗಿರುವ ಕ್ರಮಗಳಲ್ಲಿ ಕೆಲವೊಂದು ಮಾರ್ಪಾಡುಗಳು ಅಗತ್ಯವಾಗಿ ಬೇಕು. ಅವುಗಳಲ್ಲಿ ಮುಖ್ಯವಾಗಿ:

1. ಸರ್ಕಾರದ ಆದೇಶದ ಪ್ರಕಾರ ಈಗ ರಚಿಸಲಾಗಿರುವ ಸಮಿತಿಗಳು ಬರುವ ಸೆಪ್ಟಂಬರ್ 6ರ ಒಳಗೆ ಮೊದಲ ವರ್ಷದ ಪದವಿ ತರಗತಿಗಳಿಗೆ ಮಾತ್ರ ಪಠ್ಯಕ್ರಮವನ್ನು ವಿನ್ಯಾಸಗೊಳಸಲು ಸೂಚಿಸಲಾಗಿದೆ. ಈ ಪಠ್ಯಕ್ರಮ ಈ ಶೈಕ್ಷಣಿಕ ವರ್ಷದಿಂದ ಜಾರಿಗೊಳ್ಳುವುದಾದರೆ ಪ್ರವೇಶಾತಿ ಬಯಸಿಬರುವ ವಿದ್ಯಾರ್ಥಿಗಳಿಗೆ ತಾವು ಮುಂದಿನ ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಯಾವ ವಿಷಯಗಳನ್ನು ಹೇಗೆ ಅಧ್ಯಯನ ಮಾಡುತ್ತೇವೆ ಮತ್ತು ಪದವಿಯ ನಂತರ ಯಾವ ಜ್ಞಾನ ಹಾಗೂ ಕೌಶಲ್ಯಗಳನ್ನು ಪ್ರಮಾಣೀಕರಿಸಿಕೊಂಡು ಜೀವನಾವಶ್ಯಕ ಉದ್ಯೋಗಗಳಿಗೆ ತಯಾರಾಗುತ್ತೇವೆ ಎನ್ನುವುದರ ಬಗ್ಗೆ ಸ್ಪಷ್ಟ ಕಲ್ಪನೆ ಮೂಡುವುದು ಸಾಧ್ಯವಿಲ್ಲ. ಹಾಗೆಯೇ
ಅಧ್ಯಾಪಕರಿಗೂ ಕೂಡ. ಯಾರಿಗೆ, ಯಾವ ವರ್ಷ ಏನನ್ನು ಕಲಿಸಬೇಕಿದೆ ಮತ್ತು ಅದಕ್ಕೆ ತಾವು ಮಾಡಿಕೊಳ್ಳಬೇಕಾದ ಸಿಧ್ಧತೆ ಏನು ಎನ್ನುವ ಬಗ್ಗೆಯಾಗಲೀ, ಅಗತ್ಯ ಪಠ್ಯಪುಸ್ತಕಗಳ ರಚನೆ ಬಗ್ಗೆಯಾಲೀ ಸ್ಪಷ್ಟತೆ ಹೊಂದುವುದು ಸಾಧ್ಯವಿಲ್ಲ. ಹೀಗಿದ್ದಾಗ ಭಾವೀ ಪದವಿ ಶಿಕ್ಷಣಾರ್ಥಿಗಳು ಪ್ರವೇಶಾತಿ ಸಂದರ್ಭದಲ್ಲಿ ಏನನ್ನು ಆಧರಿಸಿ ಯಾವ ಪದವಿ ಮತ್ತು ವಿಷಯಗಳನ್ನು ಆಯ್ದುಕೊಂಡು ಅಧ್ಯಯನ ಮಾಡಲು ತೀರ್ಮಾನಿಸಬೇಕು? ಅಪರಿಪೂರ್ಣ ಮಾಹಿತಿ ಆಧರಿಸಿದ ಅವರ ತೀರ್ಮಾನ ಆಯ್ಕೆ ಹಕ್ಕಿನ ಅವಕಾಶವನ್ನೇ ಅವರಿಂದ ಕಸಿದುಕೊಂಡಂತಾಗುವುದಿಲ್ಲವೆ? ಆದ್ದರಿಂದ ಪಠ್ಯಕ್ರಮ, ಬೋಧನಾ ವಿಧಾನ, ಪಠ್ಯಪುಸ್ತಕಗಳು, ಭೌತಿಕ ಮೂಲಸೌಲಭ್ಯ, ಬದಲಾದ ಸಂದರ್ಭಕ್ಕೆ ತಕ್ಕಂತೆ ಶಿಕ್ಷಕರಿಗೆ ತರಬೇತಿ ಮುಂತಾದುವುಗಳ ಬಗ್ಗೆ ಸ್ಪಷ್ಟ ಪರಿಕಲ್ಪನೆ ಮತ್ತು ಸಿದ್ಧತೆಗಳಿಲ್ಲದೆ ಅವಸರ ಅವಸರವಾಗಿ, ಅರೆಬರೆ ಪಠ್ಯವನ್ನು ಕಂತು ಕಂತಾಗಿ ಜಾರಿಗೊಳಿಸುವುದರಿಂದ ಹೊಸ ನೀತಿಯ ಆಶಯ ಈಡೇರುವುದಿಲ್ಲ.

ಆದ್ದರಿಂದ ಪ್ರಸಕ್ತ ಸಾಲಿನಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಂಡು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಬಹುದಾಗಿದೆ. ಸೂಕ್ತ ವ್ಯವಸ್ಥೆಯೊಂದಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಈ ನೀತಿಯನ್ನು ಜಾರಿಗೊಳಿಸಲು ತೀರ್ಮಾನಿಸಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕ್ರಮ ಸರಿಯಿದೆ. ಇದೇ ತೀರ್ಮಾನವನ್ನು ಇತರೆ ವಿಶ್ವವಿದ್ಯಾನಿಲಯಗಳಿಗೆ ಅನ್ವಯಿಸಿದರೆ ಸಾಕು. ಒಂದೇ ರಾಜ್ಯದಲ್ಲಿ ವೃತ್ತಿಪರ ಮತ್ತು ಸಾಮಾನ್ಯ ವಿಶ್ವವಿದ್ಯಾನಿಲಯಗಳ ನಡುವೆ ವ್ಯತ್ಯಾಸ ಏಕೆ?

2. ಪದವಿ ಶಿಕ್ಷಣ ಹಂತದಲ್ಲಿ ಪ್ರತಿ ವರ್ಷ ಕಲಿಯುವ ಮತ್ತು ಕಲಿಸುವ ವಿಷಯಗಳನ್ನು ’ಮೇಜರ್ ಮತ್ತು ಮೈನರ್’ ವಿಷಯಗಳೆಂದು ಗುರುತಿಸಲಾಗಿದೆ. ನಾಲ್ಕು ದಶಕಗಳ ಹಿಂದೆ ಇದೇ ಪರಿಕಲ್ಪನೆಯಲ್ಲಿ ವಿಷಯಗಳ ವರ್ಗೀಕರಣವಿತ್ತು. ಕಲಿಯುವ ವಿಷಯಗಳಲ್ಲೇ ಈ ಅಸಮತೋಲನ ಹುಟ್ಟುಹಾಕುವ ಪರಿಭಾಷೆ ಬೇಡದ ಕಾರಣಕ್ಕೆ ಎಲ್ಲಾ ವಿಶ್ವವಿದ್ಯಾನಿಲಯಗಳು ಅದನ್ನು ಕೈಬಿಟ್ಟು ಏಕರೂಪವಾಗಿ ’ಐಚ್ಛಿಕ’ ಎನ್ನುವ ಪದಬಳಕೆ ಮಾಡಿದವು. ಈಗ ಅದೇಕೆ ಈ ಪದಗಳು ಮತ್ತೆ ಮುನ್ನೆಲೆಗೆ ಬಂದವೋ, ಆಶ್ಚರ್ಯ. ಮೈನರ್ ವಿಷಯ ಎಂದರೆ ಯಾವ ರೀತಿಯಲ್ಲಿ? ಕಡಿಮೆ ಅಂಕಗಳಿಗೆ ಅಧ್ಯಯನ ಮಾಡುವುದೋ, ಕಡಿಮೆ ಅವಧಿಯ ಬೋಧನೆಯೋ ಅಥವಾ ಎರಡೂ ಸೇರಿ ಇರಬಹುದೋ ಸ್ಪಷ್ಟವಿಲ್ಲ. ಏನೇ ಇರಲಿ, ಭಾಷಾ ವಿಷಯ ಮತ್ತು ಕೌಶಲ್ಯ ವಿಷಯಗಳನ್ನು ಹೊರತುಪಡಿಸಿ ಅಧ್ಯಯನ ಮಾಡುವ ಎಲ್ಲ ಮೂಲ ವಿಷಯಗಳನ್ನು ’ಐಚ್ಛಿಕ’ ಎಂದೇ ಪರಿಗಣಿಸಬೇಕು.

3. ಪುನಾರಚಿತ ಪದವಿ ತರಗತಿಯಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳು ಆರು ವಿಷಯಗಳನ್ನು ಅಧ್ಯಯನ ಮಾಡಲು ಪ್ರೊ. ತಿಮ್ಮೇಗೌಡ ಅವರ ಅಧ್ಯಕ್ಷತೆಯ ಸಮಿತಿಯ ಮಾರ್ಗಸೂಚಿ ವರದಿಯಲ್ಲಿ ನಿಗದಿಪಡಿಸಲಾಗಿದೆ. ಆ ಪ್ರಕಾರ ಮೊದಲ ವರ್ಷದಲ್ಲಿ ಎರಡು ಮೂಲ ವಿಷಯಗಳು, ಎರಡು ಭಾಷಾ ವಿಷಯಗಳು ಮತ್ತೆರಡು, ಉದ್ಯೋಗ ಕೌಶಲ್ಯ ಮತ್ತು ಸಾಮರ್ಥ್ಯ ಅಭಿವೃದ್ಧಿಗೆ ಸಂಬಂಧಿಸಿದವುಗಳಾಗಿವೆ. ಕೊನೆಯ ಎರಡು ವಿಷಯಗಳ ಪಠ್ಯಕ್ರಮ ರಾಷ್ಟ್ರೀಯ ಕೌಶಲ್ಯಾರ್ಹತೆಗಳ ಚೌಕಟ್ಟು (National Skill Qualification Frame Work Level 5, 6, 7, 8) ಪ್ರಕಾರ ವಿವಿಧ ವರ್ಷಗಳಲ್ಲಿ ಕಲಿಸಬೇಕೆಂದು ನಿರ್ಧಾರವಾಗಿದ್ದು, ಆ ವಿಷಯಗಳು ಏನೆಂಬುದು ಈಗ ನೇಮಿಸಿರುವ ವಿಷಯವಾರು ಪಠ್ಯವಿನ್ಯಾಸ ಮಾದರಿ ವಿವರಗಳನ್ನು ನೀಡಿದ ನಂತರವೇ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಿಳಿಯುವಂತಹುದಾಗಿದೆ. ಅದೂ ಸದ್ಯಕ್ಕೆ ಮೊದಲ ವರ್ಷಕ್ಕೆ ಮಾತ್ರ. ಮತ್ತೆ ಇವು ಹೊಸ ವಿಷಯಗಳಾಗಿರುವುದರಿಂದ ಪ್ರವೇಶಾತಿ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಇವುಗಳ ಬಗೆಗಿನ ಮಾಹಿತಿ ಪೂರ್ಣಪ್ರಮಾಣದಲ್ಲಿ ಲಭ್ಯವಾಗಬೇಕು. ಜೊತೆಗೆ, ಈ ವಿಷಯಗಳನ್ನು ಬೋಧಿಸುವ ಪ್ರಾಧ್ಯಾಪಕರು ಯಾರು ಎನ್ನುವುದನ್ನು ಸಮಿತಿಗಳ ವರದಿ ಪಡೆದು ಸ್ಪಷ್ಟವಾಗಿ ನಮೂದಿಸಬೇಕು. ಇಲ್ಲವಾದರೆ ಎಲ್ಲರೂ ಎಲ್ಲ ವಿಷಯಗಳನ್ನು ಬೋಧಿಸಬಹುದೇ ಎನ್ನುವ ಗೊಂದಲ ಅಧ್ಯಾಪಕರ ವಲಯದಲ್ಲಿ ಮೂಡುವುದು ಸಹಜ.

ಮುಂದುವರೆದು, ಈ ವಿಷಯಗಳ ಬೋಧನೆಗೆ ಬೇಕಾದ ತರಬೇತಿಯನ್ನು ಶೈಕ್ಷಣಿಕ ವರ್ಷಾರಂಭಕ್ಕೆ ಮುನ್ನವೇ ಕೊಡುವ ವ್ಯವಸ್ಥೆ ಬೇಕು. ಇಲ್ಲವಾದರೆ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ವೃತ್ತಿ ಶಿಕ್ಷಣವೂ ಒಳಗೊಂಡಂತೆ ಸಾಮಾನ್ಯ ಪದವಿ ತರಗತಿಗಳಲ್ಲಿ ಬೋಧಿಸುತ್ತಿರುವ ’ಭಾರತೀಯ ಸಂವಿಧಾನ?’ ಮತ್ತು ’ಪರಿಸರ ವಿಜ್ಞಾನ’ಗಳ ಬೋಧನೆ ಮತ್ತು ಕಲಿಕೆಯ ಸ್ಥಿತಿ ಹೇಗೆ ನಿರ್ಲಕ್ಷ್ಯಕ್ಕೆ ಒಳಗಾಗಿದೆಯೋ ಅದೇ ಸ್ಥಿತಿ ಈ ವಿಷಯಗಳಿಗೂ ಬರಬಹುದು. ಒಳಹೊಕ್ಕು ಪರಿಶೀಲಿಸಿದರೆ ಮಾತ್ರ ಇದು ತಿಳಿದೀತು. ಹೀಗಾಗಬಾರದೆಂದರೆ, ಈ ವಿಷಯಗಳನ್ನು ಬೋಧಿಸುವ ಅಧ್ಯಾಪಕರ ವಿದ್ಯಾರ್ಹತೆಯನ್ನು ಪಠ್ಯವಿನ್ಯಾಸದ ಜೊತಗೇ ಸ್ಪಷ್ಟಪಡಿಸಬೇಕು.

4. ಅನುಭವಾತ್ಮಕ ಕಲಿಕೆಯ (Experiential Learning) ಅಂಶಗಳಾದ ಕ್ಷೇತ್ರ ಕಾರ್ಯ, ಯೋಜನಾ ಕೆಲಸ, ವೃತ್ತಿಪೂರ್ವ ಕಲಿಕೆ (ಇಂಟರ್ನ್‌ಶಿಪ್) ಮೊದಲಾದುವುಗಳನ್ನ ಪಠ್ಯದ ಭಾಗವಾಗಿಸಿಕೊಂಡು ಮೌಲ್ಯಾಂಕಗಳನ್ನು
ನಿರ್ಧರಿಸಿದರೆ ಮಾತ್ರ ಪರಿಣಾಮಕಾರಿಯಾಗಬಲ್ಲವು. ಹಾಗೆಯೇ ಕ್ರೀಡಾ, ಸಾಂಸ್ಕೃತಿಕ ಮತ್ತು ಸಮಾಜಮುಖೀ ವಿಸ್ತರಣಾ ಚಟುವಟಿಕೆಗಳೂ ಕೂಡ. ಈ ಬಗ್ಗೆ ಪಠ್ಯಸೂಚಿಯಲ್ಲಿ ಸ್ಪಷ್ಟತೆ ಇರುವಂತೆ ನಿರ್ದೇಶನಗಳು ಬೇಕು. ಅಂದರೆ, ಯಾವ ವಿಷಯ ಮತ್ತು ಚಟುವಟಿಕೆಗಳನ್ನು ಯಾವ ಅಧ್ಯಾಪಕ ಎಷ್ಟು ಅವಧಿಗೆ ಯಾವ ವಿದ್ಯಾರ್ಥಿಗಳಗೆ ಎಲ್ಲಿ ಮತ್ತು ಹೇಗೆ ಬೋಧಿಸಬೇಕು ಮತ್ತು ಮೌಲ್ಯಮಾಪನಗೊಳಿಸಬೇಕು ಎನ್ನುವುದು ಸಾಂಸ್ಥಿಕ ಆಬಿವೃದ್ಧಿ ಯೋಜನೆ ಮತ್ತು ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿಗಳಲ್ಲಿ (Institutional Development Plan & Academic Calander) ಸ್ಪಷ್ಟವಿರಬೇಕು. ಅದು ಖಾಸಗಿ ಸಂಸ್ಥೆಯಾಗಲೀ, ಸರ್ಕಾರಿ ಸಂಸ್ಥೆಯಾಗಲೀ ಸೂಕ್ತ ಮೂಲಸೌಲಭ್ಯ ಕಡ್ಡಾಯವಾಗಿ ನಿರ್ಮಾಣ ಆಗಿರಬೇಕು. ಇಲ್ಲವಾದರೆ ಕಾಟಾಚಾರದ ಬೋಧನೆ ಮತ್ತು ಕಲಿಕೆಯಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದು ಖಚಿತ.

5. ಯಾವುದೇ ಶಿಕ್ಷಣ ವ್ಯವಸ್ಥೆಯಲ್ಲಿ ಯಶಸ್ಸು ಅಥವಾ ಸಾಧನೆ ಎಂದರೆ ಅದು ಶಿಕ್ಷಕ ಮತ್ತು ಶೈಕ್ಷಣಿಕ ಆಡಳಿತದ ಕ್ರಿಯಾಶೀಲ ಪಾತ್ರ. ಅದಕ್ಕಾಗಿಯೇ ನೀತಿಯಲ್ಲಿ ಸ್ಪಷ್ಟ ಉಲ್ಲೇಖವಿರುವಂತೆ, “ಪ್ರೇರೇಪಿತ, ಚೈತನ್ಯಪೂರಕ, ಆವಿಷ್ಕಾರಯುಕ್ತ, ವೃತ್ತಿಸಂತೋಷ ಮನಸ್ಥಿತಿಯ ಶಿಕ್ಷಕರ” ತಯಾರಿಗೆ ಕ್ರಮಗಳು ಬೇಕಿವೆ. ರಾಜ್ಯದಲ್ಲಿರುವ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಲಿ ಹತ್ತು ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ದಶಕಗಳಿಂದ ಸಮಯಕ್ಕೆ ಸರಿಯಾಗಿ ಸಿಗದ ಮಾಸಿಕ 10-15 ಸಾವಿರ ರೂಪಾಯಿಗಳಿಗೆ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಅನುದಾನಿತ ಕಾಲೇಜುಗಳಲ್ಲಿ ನಿವೃತ್ತಿ, ನಿಧನ ಮುಂತಾದ ಕಾರಣಗಳಿಂದಾಗಿ ತೆರವಾಗುವ ಬೋಧಕ ಸ್ಥಾನಗಳಿಗೆ ದಶಕಗಳಾದರೂ ನೇಮಕಾತಿ ಮಾಡಿಕೊಳ್ಳುವ ಅನುಮತಿ ಅನುಮೋದನೆಗಳಿಲ್ಲ. ಸರ್ಕಾರಿ ಕಾಲೇಜುಗಳಲ್ಲಿರುವಂತೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡರೆ ಅನುದಾನವಿಲ್ಲ. ಇನ್ನೂ ಹೇಳುವುದಾದರೆ, ಖಾಸಗಿ ಉದ್ಯೋಗ ಸಂಸ್ಥೆಗಳಲ್ಲಿ ಕೆಲಸ ಮಾಡುವ ತಾತ್ಕಾಲಿಕ ಉದ್ಯೋಗಿಗಳಿಗಾದರೂ ಸರಿ, ಭವಿಷ್ಯ ನಿಧಿ ಮತ್ತು ಇಎಸ್‌ಐ ಸೌಲಭ್ಯಗಳನ್ನು ನೀಡುವುದು ಕಡ್ಡಾಯವಾಗಿದೆ.

ಆದರೆ ಸರ್ಕಾರಿ ವಲಯದಲ್ಲಿ ಅಂಗನವಾಡಿ ಶಿಕ್ಷಕಿಯರನ್ನೂ ಒಳಗೊಂಡಂತೆ ಅತಿಥಿ ಉಪನ್ಯಾಸಕರಿಗೆ ಯಾವುದೇ ಕನಿಷ್ಟ ಸೌಲಭ್ಯಗಳಿಲ್ಲ. ಇಂಥ ದುಸ್ಥಿತಿಯ ಅಧ್ಯಾಪಕರಿಂದ ಅದೆಂತಹ ಗುಣಮಟ್ಟದ ಬೋಧನೆ ಮತ್ತು ಸಂಶೋಧನೆಗಳನ್ನು ನಿರೀಕ್ಷಿಸಲಾದೀತು? ಆದ್ದರಿಂದ ಈ ಹೊಸ ಶಿಕ್ಷಣ ನೀತಿ ಜಾರಿಯ ಸಂದರ್ಭದಲ್ಲಾದರೂ ಪಠ್ಯ ಮತ್ತು ಬೋಧನಾ ವಿನ್ಯಾಸಗಳ ಜೊತೆಜೊತೆಗೆ ಅನುದಾನಿತ ಮತ್ತು ಸರ್ಕಾರಿ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುವ ಅತಿಥಿಕರಾರು ಆಧಾರಿತ ಉಪನ್ಯಾಸಕರಿಗೆ
ಈ ಸೌಲಭ್ಯಗಳು ಘೋಷಣೆಯಾಗಬೇಕು. ಹಾಗೆಯೇ ಖಾಲಿ ಇರುವ ಬೋಧಕರ ಮತ್ತು ಪೂರಕ ಹುದ್ದೆಗಳಿಗೆ ಕಾಲಮಿತಿಯಲ್ಲಿ ನೇಮಕಾತಿ ಪೂರ್ಣಗೊಳ್ಳಬೇಕು. ಅಧ್ಯಾಪಕರಿಲ್ಲದ ಮತ್ತು ಅರೆಬರೆ ಮೂಲಸೌಲಭ್ಯವಿರುವ ಸ್ಥಿತಿಯಲ್ಲಿ ಶೈಕ್ಷಣಿಕ ಗುಣಮಟ್ಟ ಎಂದರೆ ಕಳಪೆ ಮಾತ್ರ. ಅದು ಉನ್ನತ ಶಿಕ್ಷಣದ ವಿದ್ಯಾರ್ಥಿಗಳಗೆ ಮಾಡುವ ವಂಚನೆ ಮತ್ತು ಅನ್ಯಾಯ.

6. ಹೊಸ ಶಿಕ್ಷಣ ನೀತಿಯಲ್ಲಿ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಈ ದಿಶೆಯಲ್ಲಿ ಪದವಿ ಶಿಕ್ಷಕರ ನೇಮಕಾತಿಗೆ ಇರುವ ಪರೀಕ್ಷೆಯ ಮಾದರಿಯಲ್ಲಿ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರ ನೇಮಕಾತಿಯನ್ನು ಕೂಡ ಪಾರದರ್ಶಕ ಗುಣಮಟ್ಟದ ಪರೀಕ್ಷೆಯ ಮೂಲಕ ನಡೆಸುವ ವ್ಯವಸ್ಥೆಯಾಗಬೇಕು. ಜೊತೆಗೆ, ಕುಲಪತಿಗಳ ಮತ್ತು ಕುಲಸಚಿವರುಗಳ ನೇಮಕಾತಿ ಸಂದರ್ಭದಲ್ಲಿ ಏರ್ಪಡುವ ಅನಾರೋಗ್ಯಕರ ಪೈಪೋಟಿಯನ್ನು ತಡೆಯುವ ಕ್ರಮಗಳು ಬೇಕು. ದುರಂತ ಎಂದರೆ ಬಹಳಷ್ಟು ಸಂದರ್ಭಗಳಲ್ಲಿ, ಅದು ಯಾವುದೇ ಸರ್ಕಾರವಿರಲಿ, ಬಹುತೇಕ ಕುಲಪತಿಗಳ ಮತ್ತು ಕುಲಸಚಿವರ ನೇಮಕಾತಿ ರಾಜಕೀಯ ಪಕ್ಷಪಾತ ಮತ್ತು ಪ್ರಭಾವಗಳಿಂದಾಗಿಯೇ ಆಗಿವೆ ಮತ್ತು ಆಗುತ್ತಿವೆ ಕೂಡ. ಕೃಪಾಕಟಾಕ್ಷವಿಲ್ಲದ ಸಮರ್ಥರು ನಿರ್ಲಕ್ಷಕ್ಕೊಳಗಾಗಿರುವುದರಿಂದಲೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಬೋಧನೆ ಮತ್ತು ಸಂಶೋಧನೆಗಳು ಸಾಧ್ಯವಾಗುತ್ತಿಲ್ಲ. ಇದನ್ನು ನೀತಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಕೂಡ (ರಾ.ಶಿ.ನೀ.2020, 9ನೇ ಅನುಕ್ರಮಣಿಕೆ).

7. ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಹುಶಿಸ್ತಿನ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳನ್ನಾಗಿ ನಿರ್ಧರಿತ ರೀತಿಯಲ್ಲಿ ಮಾರ್ಪಡಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮುಂದಾಗಿದೆ. ಹಾಗೆಯೇ ಈಗಿನ ಏಕಶಿಸ್ತಿನ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳನ್ನು ಬಹುಶಿಸ್ತಿನ ಸಂಸ್ಥೆಗಳನ್ನಾಗಿಸುವ ಆಶಯದ ಬಗ್ಗೆ ಸರ್ಕಾರದ ಚಿಂತನೆ ಏನು ಎನ್ನುವುದು ತಿಳಿದಿಲ್ಲ. ಜೊತೆಗೆ, ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸಂಶೋಧನಾ ವಿಶ್ವವಿದ್ಯಾನಿಲಯಗಳು, ಬೋಧನೆ ಮತ್ತು ಸಂಶೋಧನಾ ವಿಶ್ವವಿದ್ಯಾನಿಲಯಗಳು ಹಾಗೂ ಪದವಿ ನೀಡುವ ಸ್ವಾಯತ್ತ ಕಾಲೇಜುಗಳನ್ನಾಗಿ ವರ್ಗೀಕರಿಸುವ ಬಗ್ಗೆ ಕೂಡ ಯಾವ ತೀರ್ಮಾನವೂ ಇಲ್ಲ. ಇವೆಲ್ಲವುಗಳನ್ನು ಬಿಟ್ಟು ಬರೀ ಸಾಮಾನ್ಯ ಪದವಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರ ಮೂರು ಮತ್ತು ನಾಲ್ಕು ವರ್ಷದ ಪದವಿ ತರಗತಿಗಳಿಗೆ ಪಠ್ಯಕ್ರಮ ರೂಪಿಸಿ ಜಾರಿಗೊಳಿಸಲು ಮುಂದಾಗಿರುವುದು ಸರಿಯಲ್ಲ. ಇದೊಂದರ ಮೂಲಕವೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ರಾಜ್ಯಗಳಲ್ಲಿ ಮುಂದಿನ ಸಾಲಿನಲ್ಲಿ ನಿಲ್ಲುತ್ತೇವೆನ್ನುವ ಧೋರಣೆ ಅತ್ಯಂತ ಅವಸರದ ಹೆಜ್ಜೆಗಳು.

8. ಇನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಶಿಕ್ಷಕರನ್ನು ತರಬೇತುಗೊಳಿಸುವ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳಿಗೆ ಸಂಬಂಧಿಸಿದಂತೆ ನಾಲ್ಕು ವರ್ಷದ ಸಮಗ್ರ ಪದವಿ ತರಗತಿಗೆ ಪಠ್ಯವಿನ್ಯಾಸಗಳಿಸಲು ಶಿಕ್ಷಣ ಮತ್ತು ದೈಹಿಕ ಶಿಕ್ಷಣಕ್ಕೆ ವಿಷಯಗಳಿಗೆ ಎರಡು ಪ್ರತ್ಯೇಕ ಸಮಿತಿಗಳನ್ನು ನೇಮಕ ಮಾಡಲಾಗಿದೆ. ಅಲ್ಲಿಯೂ ಇದೇ ಅಸ್ಪಷ್ಟತೆಗಳು ತಲೆದೋರುವುದರಲ್ಲಿ ಸಂಶಯವಿಲ್ಲ. ಉದ್ಯೋಗದ ಯಾವ ಖಾತ್ರಿಯೂ ಇಲ್ಲದೆ ಕೊಡುವ ಈ ಪ್ರಶಿಕ್ಷಣ ಪ್ರಶಿಕ್ಷಣಾರ್ಥಿಗಳ ಶೋಷಣೆ ಅಷ್ಟೆ. ಬೇರೆ ವೃತ್ತಿಗಳಿಗಿರುವಂತೆ ಕೆಲಸ ಕೊಟ್ಟು ತರಬೇತಿ ಕೊಡಬಾರದೇಕೆ? ಇಂಥ ಪ್ರಶ್ನೆಗಳಿಗೆ ರಾಜ್ಯ ಸರ್ಕಾರಗಳಿಂದಲೂ ಉತ್ತರವಿಲ್ಲ, ರಾಷ್ಟ್ರೀಯ ನೀತಿಯಲ್ಲೂ ಉಲ್ಲೇಖವಿಲ್ಲ.

ಆದ್ದರಿಂದ ಈ ವಿಷಯಗಳ ಕುರಿತಂತೆ ಸೂಕ್ತ ತಿಳಿವು ಮತ್ತು ಸ್ಪಷ್ಟತೆ ಕಂಡುಕೊಳ್ಳಲು ಅನುವಾಗುವಂತೆ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಸ್ವಪ್ರೇರಣೆಯಿಂದ ಮುಂದಾಗಲು ಸಾಧ್ಯವಾಗುವಂತೆ ಪ್ರಸಕ್ತ ಸಾಲಿನಲ್ಲಿ ಅಗತ್ಯ ಸೌಲಭ್ಯಗಳನ್ನು ನಿರ್ಮಿಸಿಕೊಂಡು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸುವುದು ಸೂಕ್ತವಾಗಿದೆ. ಒಮ್ಮೆ ಕ್ರಮ ಕೈಗೊಂಡು ಒತ್ತಡ ಬಂದಾಗ ಉತ್ತರವಿಲ್ಲದೆ ಕೈಬಿಡುವುದು ಉತ್ತಮ ಸರ್ಕಾರದ ನಡೆ ಅಲ್ಲ. ಇತ್ತೀಚೆಗೆ, ಇದೇ ಪದವಿ ತರಗತಿಗಳ ಎರಡನೇ ವರ್ಷದ ಬೋಧನೆಗೆ ಸಂಬಂಧಪಟ್ಟಂತೆ ಕನ್ನಡ ಭಾಷಾ ವಿಷಯವನ್ನು ಕೈಬಿಡಲಾಗಿದೆ ಎನ್ನುವ ಸುದ್ದಿಯ ಕಾರಣಕ್ಕೆ ಭುಗಿಲೆದ್ದ ಜನಾಭಿಪ್ರಾಯಕ್ಕೆ ಮಣಿದು ಸರಿಪಡಿಸಿಕೊಂಡ ಕಹಿ ಅನುಭವ ಸರ್ಕಾರಕ್ಕೆ ಈಗಾಗಲೇ ಆಗಿರುವುದರಿಂದ ಎಚ್ಚರದ ವಿವೇಚನಾಯುಕ್ತ ಮತ್ತು ಸರ್ವಸಮ್ಮತ ಕ್ರಮಗಳನ್ನು ಜರುಗಿಸುವದು ಒಳಿತು. ಶೈಕ್ಷಣಿಕ ಸುಧಾರಣೆ ತೇಪೆ ಕೆಲಸವಾಗದೆ ಸಮಗ್ರ ಅಭಿವೃದ್ಧಿಯ ತಳಕ್ಕೆ ಗಟ್ಟಿ ತಳಪಾಯವಾಗುವ ಮಾನವ ಸಂಪನ್ಮೂಲ ನಿರ್ಮಾಣಕ್ಕೆ ಕಾರಣವಾಗಬೇಕು.

ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ

ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ
ವಿಶ್ರಾಂತ ಪ್ರ್ರಾಂಶುಪಾಲರು, ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದರ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರು. ಆರ್ಥಿಕ ಮತ್ತು ಶೈಕ್ಷಣಿಕ ಚಿಂತಕರು. ಚಿತ್ರದುರ್ಗ ಮೂಲದವರು.


ಇದನ್ನೂ ಓದಿ: ಕೋವಿಡ್ ಕಾಲಘಟ್ಟದಲ್ಲಿ ಶಿಕ್ಷಣದ ಆರ್ಥಿಕತೆಯ ಬಗ್ಗೆ ಅಸಡ್ಡೆ ತೋರುತ್ತಿರುವ ಸರ್ಕಾರ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ
+ posts

LEAVE A REPLY

Please enter your comment!
Please enter your name here