ಆಂಧ್ರಪ್ರದೇಶ: ಯೋಧನ ಮೃತದೇಹ ಹಸ್ತಾಂತರಿಸಿ ತೆರಳುತ್ತಿದ್ದಾಗ ಅಪಘಾತ; 4 ಪೊಲೀಸರು ಮೃತ

ಆಂಧ್ರಪ್ರದೇಶದಲ್ಲಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಹುತಾತ್ಮ ಯೋಧನ ಪಾರ್ಥೀವ ಶರೀರವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಿ ಹಿಂದಿರುಗುತ್ತಿದ್ದ ವೇಳೆ ರಾಜ್ಯದ ಶ್ರೀಕಾಕುಳಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಜಿಲ್ಲೆಯ ಭೈರಿ ಸಾರಂಗಪುರಂನಲ್ಲಿರುವ ಯೋಧನ ಕುಟುಂಬಕ್ಕೆ ಯೋಧನ ಮೃತದೇಹ ಹಸ್ತಾಂತರಿಸಿದ ಬಳಿಕ ಪೊಲೀಸ್‌ ಸಿಬ್ಬಂದಿ ಹಿಂದಿರುಗುತ್ತಿದ್ದರು. ಈ ವೇಳೆ ಅವರ ಕಾರು ಪಲಸಾ ಬಳಿಯಿರುವ ಹೆದ್ದಾರಿ-16ರಲ್ಲಿ ಅಪಘಾತಕ್ಕೀಡಾಗಿದೆ. ದುರ್ಘಟನೆಯಲ್ಲಿ ಓರ್ವ ಸಬ್​ ಇನ್ಸ್​ಪೆಕ್ಟರ್​ ಮತ್ತು ಮೂವರು ಸಶಸ್ತ್ರ ಮೀಸಲು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಪುತ್ತೂರು-ಸುಳ್ಯದಲ್ಲಿ ಅನೈತಿಕ ಪೊಲೀಸ್‌ಗಿರಿ ಉಪದ್ರವ; ಜಿ.ಪಂ-ತಾ.ಪಂ ಚುನಾಚಣೆಗಾಗಿ ಈ ಆಟ?

ಶ್ರೀಕಾಕುಳಂಗೆ ತೆರಳುತ್ತಿದ್ದ ಪೊಲೀಸ್‌ ಜೀಪ್‌ಗೆ ಲಾರಿಯೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು ಎಸ್​ಐ ಜೆ. ಕೃಷ್ಣುಡು, ಹೆಡ್​ ಕಾನ್ಸ್​ಟೇಬಲ್​ಗಳಾದ ವೈ ಬಾಬು ರಾವ್​, ಟಿ. ಆಂಟೋನಿ ಮತ್ತು ಚಾಲಕ ಪಿ. ಜನಾರ್ಧನ ರಾವ್​ ಎಂದು ಗುರುತಿಸಲಾಗಿದೆ.

ಅಪಘಾತದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಆದಷ್ಟು ಬೇಗ ವರದಿ ಸಲ್ಲಿಸುವಂತೆ ಡೆಪ್ಯುಟಿ ಇನ್ಸ್​ಪೆಕ್ಟರ್​ ಜನರಲ್​ ಮತ್ತು ಶ್ರೀಕಾಕುಳಂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ಸೂಚನೆ ನೀಡಿರುವುದಾಗಿ ಪೊಲೀಸ್​ ಮಹಾನಿರ್ದೇಶಕ ಡಿ. ಗೌತಮ್​ ಸಾವಂಗ್​ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ನಾಲ್ವರು ಸಿಬ್ಬಂದಿಯನ್ನು ಕಳೆದುಕೊಂಡಿರುವುದು ಪೊಲೀಸ್​ ಇಲಾಖೆಗೆ ತುಂಬಲಾರದ ನಷ್ಟ, ಮೃತರ ಕುಟುಂಬದ ನೆರವಿಗೆ ಇಲಾಖೆ ನಿಲ್ಲಲಿದೆ ಎಂದು ಡಿಜಿಪಿ ಸಾವಂಗ್​ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಎ ವಿರೋಧಿ ನಾಟಕಕ್ಕೆ ಪೊಲೀಸ್ ವಿಚಾರಣೆ: ಜೆಜೆ ಕಾಯ್ದೆಯಡಿ ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ – ಹೈಕೋರ್ಟ್

ನಾನುಗೌರಿ ಯೂಟ್ಯೂಬ್ ಚಾನೆಲ್ Subscribe ಮಾಡಿ 

LEAVE A REPLY

Please enter your comment!
Please enter your name here