ಭವಾನಿಪುರ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಚುನಾವಣಾ ಆಯೋಗದ ನೋಟಿಸ್
PC:financialexpress

ಪಶ್ಚಿಮ ಬಂಗಾಳದ ಭವಾನಿಪುರ ಉಪಚುನಾವಣೆ ಸೆಪ್ಟೆಂಬರ್ 30 ರಂದು ನಡೆಯಲಿದೆ. ಈ ವೇಳೆ ಬಿಜೆಪಿಯ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್‌ಗೆ ಚುನಾವಣಾ ಆಯೋಗವು ಶೋಕಾಸ್ ನೋಟಿಸ್ ನೀಡಿದೆ.

ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್‌ ನಾಮಪತ್ರ ಸಲ್ಲಿಸುವಾಗ ಹೆಚ್ಚಿನ ಸಂಖ್ಯೆಯ ಬೆಂಬಲಿಗರನ್ನು ಒಟ್ಟುಗೂಡಿಸಿ ಚುನಾವಣಾ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಯಾವುದೇ ಅನುಮತಿಯಿಲ್ಲದೆ 500 ಕ್ಕಿಂತ ಹೆಚ್ಚಿನ ಅಶಿಸ್ತಿನ ಜನಸಮೂಹವನ್ನು ಒಟ್ಟುಗೂಡಿಸುವ ಮೂಲಕ ಪ್ರಿಯಾಂಕಾ, ಚುನಾವಣಾ ಮಾದರಿ ನೀತಿ ಸಂಹಿತೆ ಮತ್ತು ಕೊರೊನಾ ಸಂಬಂಧಿತ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಟಿಎಂಸಿ ತನ್ನ ದೂರಿನಲ್ಲಿ ಆರೋಪಿಸಿದೆ.

ನಾಮಪತ್ರ ಸಲ್ಲಿಸಲು ತೆರಳುವ ದಾರಿಯಲ್ಲಿ ಪ್ರಿಯಾಂಕಾ ಟಿಬ್ರೆವಾಲ್‌ ‘ಧುನುಚಿ ನಾಚ್’ (ಸಾಂಪ್ರದಾಯಿಕ ಬಂಗಾಳಿ ನೃತ್ಯ, ಸಾಮಾನ್ಯವಾಗಿ ದುರ್ಗಾ ಪೂಜೆಯ ಸಮಯದಲ್ಲಿ ಪ್ರದರ್ಶಿಸುತ್ತಾರೆ) ಪ್ರದರ್ಶಿಸಿದ್ದಾರೆ ಎಂದು ಟಿಎಂಸಿ ದೂರಿನಲ್ಲಿ ತಿಳಿಸಿದೆ.

ಇದನ್ನೂ ಓದಿ: ಬಂಗಾಳ ಉಪಚುನಾವಣೆ: ಮಮತಾ ಬ್ಯಾನರ್ಜಿ ಎದುರು ಸ್ಪರ್ಧಿಸದಿರಲು ಕಾಂಗ್ರೆಸ್ ನಿರ್ಧಾರ

ಮಂಗಳವಾರ ಚುನಾವಣಾಧಿಕಾರಿ ಹೊರಡಿಸಿದ ನೋಟಿಸ್‌ನಲ್ಲಿ ಭವಾನಿಪುರ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಸಲ್ಲಿಸಿದ ವರದಿಯನ್ನು ಉಲ್ಲೇಖಿಸಲಾಗಿದೆ. ವರದಿಯಲ್ಲಿ ಶಂಭುನಾಥ ಪಂಡಿತ್ ಬೀದಿ ಮತ್ತು ಇತರ ಸ್ಥಳಗಳಲ್ಲಿ ಬಿಜೆಪಿ ಬೆಂಬಲಿಗರು ಹೆಚ್ಚಾಗಿ ಸೇರಿದ್ದ ಕಾರಣ ಸಂಚಾರ ದಟ್ಟಣೆ ಉಂಟಾಗಿತ್ತು ಎಂದಿದೆ.

ಈ ಆರೋಪಗಳನ್ನು ಬಿಜೆಪಿ ಅಭ್ಯರ್ಥಿ ಪ್ರಿಯಾಂಕ ಟಿಬ್ರೆವಾಲ್ ನಿರಾಕರಿಸಿದ್ದಾರೆ. “ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಕ್ಕೆ ಟಿಎಂಸಿ ಹೆದರುತ್ತಿತ್ತು. ನಾನು ಚುನಾವಣಾ ಪ್ರಚಾರ ಮಾಡದಂತೆ ತಡೆಯಲು ಚುನಾವಣಾ ಆಯೋಗಕ್ಕೆ ದೂರು ನೀಡಿದೆ” ಎಂದು ಹೇಳಿದ್ದಾರೆ.

“ನಾನು ನಾಮಪತ್ರ ಸಲ್ಲಿಸಲು ಹೋದಾಗ ಅಪಾರ ಸಂಖ್ಯೆಯ ಜನರನ್ನು ಕರೆದುಕೊಂಡು ಹೋಗಿದ್ದೇನೆ. ಮಾದರಿ ನೀತಿ ಸಂಹಿತೆ ಹಾಗೂ ಕೋವಿಡ್ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದೇನೆ ಎಂದು ಆರೋಪಿಸಿ ಟಿಎಂಸಿ ದೂರು ನೀಡಿದೆ. ಇದರಿಂದ ಚುನಾವಣಾ ಆಯೋಗವು ನನಗೆ ನೋಟಿಸ್ ಕಳುಹಿಸಿದೆ. ನನ್ನ ಉತ್ತರ ಏನೇ ಇದ್ದರೂ ನಾನು ಉತ್ತರಿಸುತ್ತೇನೆ “ಎಂದು ಹೇಳಿದ್ದಾರೆ.

“ಆದರೆ, ನಾನು ನನ್ನ ನಾಮಪತ್ರ ಸಲ್ಲಿಸಲು ತೆರಳಿದ್ದ ವಾಹನದಲ್ಲಿ ಸುವೇಂಧು ಅಧಿಕಾರಿಯನ್ನು ಹೊರತುಪಡಿಸಿ ಯಾರೂ ಇರಲಿಲ್ಲ.  ಬಿಜೆಪಿ ಬೆಂಬಲಿಗರು ತಾವಾಗಿಯೇ ಜೊತೆಗೆ ಪ್ರಯಾಣಿಸಿದ್ದಾರೆ. ಜನಸಂದಣಿಯನ್ನು ತಡೆಯುವುದು ಪೊಲೀಸ್ ಮತ್ತು ಸ್ಥಳೀಯ ಆಡಳಿತದ ಕೆಲಸ” ಎಂದು  ಹೇಳಿದ್ದಾರೆ.

ಇಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಣ ಗುರುದ್ವಾರಕ್ಕೆ ಭೇಟಿ ನೀಡಿದ್ದು, ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿರುವ ರೈತರ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ.

ಭವಾನಿಪುರ ಉಪಚುನಾವಣೆ ಸೆಪ್ಟೆಂಬರ್ 30 ರಂದು ನಡೆಯಲಿದ್ದು, ಅಕ್ಟೋಬರ್ 3 ರಂದು ಮತ ಎಣಿಕೆ ನಡೆಯಲಿದೆ.


ಇದನ್ನೂ ಓದಿ: ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಲಿರುವ ಅಭ್ಯರ್ಥಿಯನ್ನು ಘೋಷಿಸಿದ ಬಿಜೆಪಿ

LEAVE A REPLY

Please enter your comment!
Please enter your name here