Homeಚಳವಳಿಗುರು ರವಿದಾಸ್ ಜಯಂತಿ: ಯುಪಿಯಲ್ಲಿ ಹುಟ್ಟಿದ ಸಂತನ ಜನ್ಮದಿನಕ್ಕೆ ಸಿಖ್ಖರ ನಾಡು ಪಂಜಾಬ್‌ನಲ್ಲಿ ಹಬ್ಬ

ಗುರು ರವಿದಾಸ್ ಜಯಂತಿ: ಯುಪಿಯಲ್ಲಿ ಹುಟ್ಟಿದ ಸಂತನ ಜನ್ಮದಿನಕ್ಕೆ ಸಿಖ್ಖರ ನಾಡು ಪಂಜಾಬ್‌ನಲ್ಲಿ ಹಬ್ಬ

’ಪ್ರೀತಿ, ಸಹಾನುಭೂತಿ, ಪರಸ್ಪರ ಸಹಿಷ್ಣುತೆ ಮತ್ತು ಮನುಕುಲದ ಏಕತೆಯ ಅವರ ಬೋಧನೆಗಳನ್ನು ನಾವು ಅಳವಡಿಸಿಕೊಳ್ಳೋಣ’- ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ

- Advertisement -
- Advertisement -

ಗುರು ರವಿದಾಸ್ 15 ರಿಂದ 16 ನೇ ಶತಮಾನದ ಭಕ್ತಿ ಚಳವಳಿಯ ಪ್ರಮುಖ ಕವಿ-ಸಂತ. ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್ ಮತ್ತು ಹರಿಯಾಣ ಪ್ರದೇಶಗಳಲ್ಲಿ ಗುರುವಾಗಿ ಪೂಜಿಸಲ್ಪಡುವ ಅವರು ಕವಿ, ಸಮಾಜ ಸುಧಾರಕ ಮತ್ತು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರು.

ಗುರು ರವಿದಾಸ್ ಅವರ ಜನ್ಮದಿನದ ನಿಖರವಾದ ದಿನಾಂಕ ತಿಳಿದಿಲ್ಲ. ಆದರೆ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ 1377 C.E ನಲ್ಲಿ ಜನಿಸಿದರು ಎಂದು ನಂಬಲಾಗಿದೆ. ಉತ್ತರ ಪ್ರದೇಶದಲ್ಲಿ ಹುಟ್ಟಿದ್ದಾರೆ ಎಂದು ನಂಬಲಾಗಿದ್ದರೂ ಕೂಡ ತಮ್ಮ ಜೀವನವನ್ನು ಪಂಜಾಬ್‌ನಲ್ಲಿ ಕಳೆದ ಕಾರಣ ಇವರಿಗೆ ಹೆಚ್ಚು ಅನುಯಾಯಿಗಳಿರುವುದು ಪಂಜಾಬ್‌ನಲ್ಲಿ.

ಗುರು ರವಿದಾಸ್ ಜಯಂತಿಯನ್ನು ಪಂಜಾಬ್‌ನಲ್ಲಿ ವೈಭವಯುತವಾಗಿ ಆಚರಿಸಲಾಗುತ್ತದೆ. ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹೇಬದಲ್ಲಿಯೂ ಗುರು ರವಿದಾಸರ ದೋಹೆ/ವಚನಗಳನ್ನು ಸೇರಿಸಲಾಗಿದೆ. ಅವರ ಬೋಧನೆಗಳನ್ನು ಪಂಜಾಬಿನಲ್ಲಿ ಅನುಸರಿಸಲಾಗುತ್ತದೆ.

ಇದನ್ನೂ ಓದಿ: ಅಂಬೇಡ್ಕರ್‌ರವರು ರವಿದಾಸರ ಮತ್ತೊಂದು ರೂಪ ಎಂದು ಭಾವಿಸಿರುವ ಈ ಚಮ್ಮಾರರ ಮಂದಿರದ ಕುರಿತು 

ಬಲ್ಜಿತ್ ಸಿಂಗ್, ಪಂಜಾಬ್

ಪಂಜಾಬ್‌ನಲ್ಲಿ ನಡೆಯುವ ಗುರು ರವಿದಾಸ್ ಜಯಂತಿ ಆಚರಣೆ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಪಂಜಾಬಿನ ಸಂಗ್ರೂರ್ ಜಿಲ್ಲೆಯ ರೋಜಾವ್ ಗ್ರಾಮದ ನಿವಾಸಿ ಬಲ್ಜಿತ್ ಸಿಂಗ್ ಮಾತನಾಡಿದ್ದಾರೆ. “ಈ ದಿನಕ್ಕಾಗಿ ಪಂಜಾಬ್‌ನಲ್ಲಿ ಕೆಲವು ತಿಂಗಳುಗಳ ಮೊದಲೆ ತಯಾರಿಗಳು ಆರಂಭವಾಗುತ್ತವೆ. ಜಯಂತಿ ಆಚರಣೆಗೆ ಹಣ ಸಂಗ್ರಹಿಸಲಾಗುತ್ತದೆ. ಪಂಜಾಬ್‌ನ ಬೀದಿ ಬೀದಿಗಳಲ್ಲಿ ಲಂಗರ್‌ (ನಮ್ಮಲ್ಲಿನ ದಾಸೋಹ ರೀತಿ) ಆಯೋಜಿಸಲಾಗುತ್ತದೆ. ಈಗ ತಾನೇ ನಾನು ಗುರುದ್ವಾರಕ್ಕೆ ಹೋಗಿ ನಮನ ಸಲ್ಲಿಸಿ ಬಂದೆ. ಈಗಾಗಲೇ ಊರಿನ ಎಲ್ಲರೂ ಸೇರಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಊರಿನ ಎಲ್ಲರಿಗೂ ಲಂಗರ್‌ ಆಯೋಜನೆಯಾಗುತ್ತದೆ. ಎಲ್ಲರು ಜೊತೆಯಲ್ಲಿ ಕುಳಿತು ಊಟ ಮಾಡುತ್ತಾರೆ. ಹಬ್ಬದ ವಾತಾವರಣ ಇಡೀ ಪಂಜಾಬ್‌ನಲ್ಲಿರುತ್ತದೆ” ಎಂದರು.

“ಇವರ ಹೆಸರಿನಲ್ಲಿ ಎಲ್ಲಾ ಗ್ರಾಮಗಳಲ್ಲಿ ಟ್ರಸ್ಟ್ ಇವೆ. ಅಲ್ಲಿ ಸಂಗ್ರಹಿಸಿದ ಹಣದಲ್ಲಿ ಬಡವರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲಾಗುತ್ತದೆ. ಅನಾಥಾಶ್ರಮ ಮತ್ತು ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗುತ್ತದೆ. ಮಕ್ಕಳಿಗೆ ಅವರ ಬಗ್ಗೆ ತಿಳಿಸಲು ರಾಜ್ಯ ಸರ್ಕಾರದ ಪಠ್ಯಪುಸ್ತಕದಲ್ಲಿ ಅವರ ಬಗ್ಗೆ ಪಾಠವಿದೆ. ನಮ್ಮ ಪವಿತ್ರ ಗ್ರಂಥ ಗುರು ಗ್ರಂಥ ಸಾಹೇಬದಲ್ಲಿ ಅವರ ಬೋಧನೆಗಳನ್ನು ಅಳವಡಿಸಲಾಗಿದೆ” ಎಂದರು.

“15, 16 ನೇ ಕಾಲದಲ್ಲಿಯೇ ಜಾತಿಯನ್ನು ಬಹಿಷ್ಕರಿಸಿದ್ದ, ಅದರ ವಿರುದ್ಧ ಹೋರಾಡಿದವರು ಅವರು. ಅವರು ಹುಟ್ಟಿನ ಸಂದರ್ಭದಲ್ಲಿ ಭೇದ ಭಾವ ಅತಿಯಾಗಿತ್ತು. ಇವುಗಳನ್ನು ತೊಲಗಿಸುವಲ್ಲಿ ಅವರ ಪಾತ್ರ ಅಪಾರ. ಅವರು ಉತ್ತರ ಪ್ರದೇಶದ ಬನಾರಸ್‌ನಲ್ಲಿ ಹುಟ್ಟಿದ್ದರೂ ಕೂಡ ಅವರ ಜೊತೆಗೆ ನಮಗೆ ಅವಿನಾಭಾವ ಸಂಭಂಧವಿದೆ. ಚಮ್ಮಾರ ಜಾತಿಯ ಅತ್ಯಧಿಕ ಜನಸಂಖ್ಯೆ ಪಂಜಾಬ್‌ನಲ್ಲಿದೆ. ಗುರು ರವಿದಾಸ್ ಬಳಿಕ ಗುರುನಾನಕ್‌ ಬಂದಿದ್ದಾರೆ ಎಂಬ ಉಲ್ಲೇಖವಿದೆ. ಹೀಗಾಗಿ ಇವರ ಬೊಧನೆಗಳನ್ನು ಗುರುಗ್ರಂಥ ಸಾಹೇಬದಲ್ಲಿ ಅಳವಡಿಸಲಾಗಿದೆ. ಮೇಲು ಕೀಳುಗಳ ವಿರುದ್ಧದ ಹೋರಾಟದಲ್ಲಿ ನಮ್ಮ ಸ್ಪೂರ್ತಿ ಇವರು” ಎನ್ನುತ್ತಾರೆ ಬಲ್ಜಿತ್.

ಇದನ್ನೂ ಓದಿ: ಅಂಬೇಡ್ಕರ್‌ರವರು ರವಿದಾಸರ ಮತ್ತೊಂದು ರೂಪ ಎಂದು ಭಾವಿಸಿರುವ ಈ ಚಮ್ಮಾರರ ಮಂದಿರದ ಕುರಿತು

ಇನ್ನು ಉತ್ತರ ಪ್ರದೇಶದ ಬನಾರಸ್‌ನಲ್ಲಿರುವ, ಪ್ರತಿಬಾರಿಯ  ಗುರು ರವಿದಾಸ್ ಜಯಂತಿಯನ್ನು ಕಣ್ತುಂಬಿಕೊಳ್ಳುವ ವಿದ್ಯಾರ್ಥಿ ಮಾರುತಿ ಮಾನವ್‌ ಕೂಡ ನಾನುಗೌರಿ.ಕಾಂ ಜೊತೆಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಮಾರುತಿ ಮಾನವ್, ಬನಾರಸ್

“ಪ್ರತಿ ವರ್ಷ ಪಂಜಾಬಿನಿಂದ ಒಂದು ವಾರದ ಮುಂಚೆಯಿಂದಲೇ ಜನರು ಇಲ್ಲಿಗೆ ಬರಲು ಆರಂಭಿಸುತ್ತಾರೆ. ಇಲ್ಲಿ ಅವರಿಗೆ ಲಂಗರ್‍ ವ್ಯವಸ್ಥೆ, ಉಳಿಯಲು ಸ್ಥಳ ಎಲ್ಲವನ್ನು ಅವರೇ ಮಾಡಿಕೊಳ್ಳುತ್ತಾರೆ. ಕನಿಷ್ಠ ಅಂದರೆ 5 ಲಕ್ಷಕ್ಕೂ ಹೆಚ್ಚು ಜನ ಬರುತ್ತಾರೆ. ಇಲ್ಲಿ ಇರುವ ಎಲ್ಲಾ ಟ್ರಸ್ಟ್‌ಗಳು ಪಂಜಾಬಿನವರದ್ದು. ದೇವಸ್ಥಾನವನ್ನು ನೋಡಿಕೊಳ್ಳುವವರು ಕೂಡ ಇದೆ ಟ್ರಸ್ಟ್‌ಗಳು. ಫೆ.10 ರಿಂದಲೇ ಜನರ ದಂಡು ಬರಲು ಶುರುವಾಗಿತ್ತು. ಇವತ್ತು ಇನ್ನು ಅಧಿಕ ಜನ ಸೇರಿದ್ದಾರೆ. ಇನ್ನು ಒಂದು ವಾರ ಇಲ್ಲಿ ಜನರ ದಂಡು ಇದ್ದೆ ಇರುತ್ತದೆ” ಎನ್ನುತ್ತಾರೆ.

“ಇಲ್ಲಿನ ಮೇಲ್ಜಾತಿಯ ಸಂತರು, ಗುರುಗಳು, ಸಾಮಂತರು ಗುರು ರವಿದಾಸರಿಗೆ ಮನ್ನಣೆ ಕೊಡಲಿಲ್ಲ. ಅವರು ಕೊನೆಯ ದಿನಗಳನ್ನು ಹೆಚ್ಚು ಪಂಜಾಬ್‌ನಲ್ಲಿ ಕಳೆದಿದ್ದಾರೆ. ಅಲ್ಲಿ ಅವರ ಬೋಧನೆಗಳು ಹೆಚ್ಚು ಪ್ರಭಾವ ಬೀರಿವೆ. ಹೀಗಾಗಿ ಅಲ್ಲಿನ ಜನ ಅವರನ್ನು ಹೆಚ್ಚು ಆರಾಧಿಸುತ್ತಾರೆ. ಇದು ಅವರ ಜನ್ಮಸ್ಥಳವಾದ್ದರಿಂದ ಇಲ್ಲಿ ಬರುತ್ತಾರೆ. ಅವರಿಗೆ ಗೌರವ ಸಲ್ಲಿಸುತ್ತಾರೆ” ಎಂದು ಮಾರುತಿ ಮಾನವ್ ತಿಳಿಸಿದರು.

ಇನ್ನು ವಾರಣಾಸಿಗೆ ತೆರಳಿರುವ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ, ಸಂತ ಶಿರೋಮಣಿ ಗುರು ರವಿದಾಸ್ ಜನಮ್ ಆಸ್ಥಾನ ಮಂದಿರದಲ್ಲಿ ಪೂಜೆ ಸಲ್ಲಿಸಿದ್ದಾರೆ. ಪ್ರೀತಿ, ಸಹಾನುಭೂತಿ, ಪರಸ್ಪರ ಸಹಿಷ್ಣುತೆ ಮತ್ತು ಮನುಕುಲದ ಏಕತೆಯ ಅವರ ಬೋಧನೆಗಳನ್ನು ನಾವು ಅಳವಡಿಸಿಕೊಳ್ಳೋಣ ಎಂದಿದ್ದಾರೆ.

ಗುರು ರವಿದಾಸ್ ಜಯಂತಿಯನ್ನು ಪಂಜಾಬ್‌ನಲ್ಲಿ ವೈಭವಯುತವಾಗಿ ಆಚರಿಸಲಾಗುತ್ತದೆ. ರಾಜ್ಯದ ಜನಸಂಖ್ಯೆಯ ಶೇಕಡಾ 32 ರಷ್ಟಿರುವ ಪರಿಶಿಷ್ಟ ಜಾತಿಗಳ ಸಮುದಾಯದ ಜನರು ಫೆಬ್ರವರಿ 16 ರಂದು ನಡೆಯಲಿರುವ ಅವರ ಜನ್ಮದಿನದಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ, ರಾಜ್ಯದಿಂದ ಸುಮಾರು 20 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಪರಿಶಿಷ್ಟ ಜಾತಿ ಸಮುದಾಯದವರು ಫೆಬ್ರವರಿ 10 ರಿಂದ 16 ರವರೆಗೆ ಉತ್ತರ ಪ್ರದೇಶದ ಬನಾರಸ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ. ಹೀಗಾಗಿ ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಯನ್ನು ಫೆ.14ರ ಬದಲು ಫೆ.20 ರಂದು ಚುನಾವಣೆ ನಡೆಸಲಾಗುತ್ತಿದೆ.


ಇದನ್ನೂ ಓದಿ: ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಗುರು ರವಿದಾಸ್ ಜಯಂತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...