Homeಕರ್ನಾಟಕ’ಕರುಣೆ ಬೇಡ, ಘನತೆಯಿಂದ ಬದುಕುವ ಹಕ್ಕು ಬೇಕು’: ರಂಗದ ಮೇಲೆ ಇಂದು ’ಅಕ್ಕಯ್’ ಕಥನ

’ಕರುಣೆ ಬೇಡ, ಘನತೆಯಿಂದ ಬದುಕುವ ಹಕ್ಕು ಬೇಕು’: ರಂಗದ ಮೇಲೆ ಇಂದು ’ಅಕ್ಕಯ್’ ಕಥನ

’ಸಮಾಜ ಯಾವುದನ್ನು ಅಮುಖ್ಯ ಎನ್ನುತ್ತದೋ ಅಂತಹ ಸಬ್ಜೆಕ್ಟ್‌ ಆಗಿ ನನಗೆ ಅಕ್ಕಯ್ ಮುಖ್ಯ”- ಬೇಲೂರು ರಘುನಂದನ್

- Advertisement -
- Advertisement -

“ನಮಗೆ ಜನರು ತೋರುವ ಕರುಣೆ ಬೇಡ, ಸಾಮಾನ್ಯ ಜನರಂತೆ ಘನತೆಯಿಂದ ಬದುಕುವ, ಸಂವಿಧಾನ ನೀಡಿರುವ ಹಕ್ಕುಗಳು ಬೇಕು” ಎನ್ನುತ್ತಾರೆ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ.

“ಇದುವರೆಗೂ ಟ್ರಾನ್ಸ್‌ಜೆಂಡರ್‌ ಸಮುದಾಯದವರನ್ನು ಮಂಗಳಮುಖಿಯರು, ನಿತ್ಯ ಮುತೈದೆಯರು ಅಂತ ಕರೆದು ಚಪ್ಪಾಳೆ ತಟ್ಟಲು, ನಿಂಬೆ ಹಣ್ಣು, ಸೆರಗು ನಿವಾಳಿಸಲು, ದೃಷ್ಟಿ ತೆಗೆಯಲು ಸೀಮಿತವಾಗಿಸಿದ್ದಾರೆ. ಅದು ಹೋಗಬೇಕು ಅವರು ಸಾಮಾನ್ಯ ಜನರಂತೆ ಸಮಾನತೆಯಿಂದ ಬದುಕಬೇಕು” ಎಂದಿದ್ದು ರಂಗ ನಿರ್ದೇಶಕ ಬೇಲೂರು ರಘುನಂದನ್.

“ಅಕ್ಕಯ್ ಕಥೆ ಒಬ್ಬರ ಕಥೆಯಲ್ಲ. ಅವರ ಇಡೀ ಬದುಕನ್ನು ಸಮಾಜಕ್ಕೆ ತೋರಿಸಬೇಕು. ಮುಂದಿನ ಪೀಳಿಗೆ ಈ ಸಮುದಾಯದ ಬಗ್ಗೆಗಿನ ಕಲ್ಪನೆಯಿಂದ ಬದಲಾಗಬೇಕು” ಎಂದು ಭಾವುಕರಾಗಿದ್ದು ರಂಗಕರ್ಮಿ ನಯನಾ ಸೂಡ….

ಈ ಪೀಠಿಕೆಯೆಲ್ಲಾ ಏಕೆಂದರೆ ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ಅವರ ಜೀವನ ಆಧಾರಿತ ಪ್ರೊ. ಡಾಮಿನಿಕ್ ನಿರೂಪಣೆ ಮಾಡಿರುವ ’ಅಕ್ಕಯ್’ ಕೃತಿ ರಂಗದ ಮೇಲೆ ಪ್ರದರ್ಶನಗೊಳ್ಳುತ್ತಿದೆ.

ಈ ನಾಟಕವನ್ನು ಕಾಜಾಣ ಮತ್ತು ರಂಗಪಯಣ ಸಹಯೋಗದಲ್ಲಿ ರಂಗ ನಿರ್ದೇಶಕ ಬೇಲೂರು ರಘುನಂದನ್‌ ನಿರ್ದೇಶಿಸಿ ರಂಗದ ಮೇಲೆ ತರುತ್ತಿದ್ದಾರೆ. ರಂಗಕರ್ಮಿ ನಯನಾ ಸೂಡ ಅಕ್ಕಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ನೆಪದಲ್ಲಿ ನಾನುಗೌರಿ.ಕಾಂ ಮೂವರನ್ನು ’ಅಕ್ಕಯ್’ ಕುರಿತು ಮಾತನಾಡಿಸಿದೆ.

ಇದನ್ನೂ ಓದಿ: ಸಂಸ್ಕೃತಿ, ಸಮಾಜದ ದ್ವಿಮುಖ ನೀತಿ ತೆರದಿಟ್ಟ ಅಕ್ಕಯ್ ಪದ್ಮಶಾಲಿ ಭಾಷಣ

May be an image of 1 person and text

“ಸಾಮಾಜಿಕ ವ್ಯವಸ್ಥೆಯಲ್ಲಿ ಕಟ್ಟುಪಾಡುಗಳನ್ನು ಒಡೆಯುವ ನಾಟಕವಿದು. ಗಂಡಸು ಗಂಡಸಿನ ಪಾತ್ರ, ಹೆಂಗಸು ಹೆಂಗಸಿನ ಪಾತ್ರವನ್ನೇ ಮಾಡಬೇಕು ಎನ್ನುವ ಧೋರಣೆಯನ್ನು ಒಡೆದು ಹಾಕಿದ ನಾಟಕ. ನನ್ನ ಪಾತ್ರವನ್ನು ಅಂದರೆ ಲಿಂಗಪರಿವರ್ತನೆಯಾದ ಮಹಿಳೆಯ ಪಾತ್ರವನ್ನು ಮತ್ತೊಬ್ಬ ಮಹಿಳೆ ಮಾಡುತ್ತಿದ್ದಾರೆ. ಅಂದರೆ ಯೋನಿಯ ಆಧಾರದಲ್ಲಿ ಹುಟ್ಟಿರುವ ಮಹಿಳೆ ನನ್ನ ಪಾತ್ರವನ್ನು ಮಾಡುತ್ತಿರುವುದು ದೇಶದ ರಂಗಭೂಮಿಯಲ್ಲಿ ಮೊದಲು. ಬೇಲೂರು ರಂಘುನಂದನ್ ಈ ನಾಟಕವನ್ನು ನಿರ್ದೇಶನ ಮಾಡಿದ್ದಾರೆ. ಅವರ ನಿದೇರ್ಶಶನದ ಕಾರಣಕ್ಕೆ ನನಗೆ ನಾಟಕದ ಮೇಲೆ ಇಷ್ಟು ನಂಬಿಕೆಯಿದೆ” ಎನ್ನುತ್ತಾರೆ ಅಕ್ಕಯ್ ಪದ್ಮಶಾಲಿ.

No photo description available.
ಅಕ್ಕಯ್ ಪದ್ಮಶಾಲಿ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ

“ಸಾಮಾಜಿಕ ತೊಡಕುಗಳು, ಒಡಕುಗಳು, ಸವಾಲುಗಳನ್ನು ಪ್ರಶ್ನೆ ಮಾಡುತ್ತಾ , ಜನ ನಮ್ಮ ಮೇಲಿಟ್ಟುರುವ ಕರುಣೆಯನ್ನು ಪ್ರಶ್ನೆ ಮಾಡುವ ನಾಟಕವಿದು. ನಮಗೆ ಕರುಣೆ ಬೇಡ, ಸಾಮಾನ್ಯ ಮನುಷ್ಯರಂತೆ ಘನತೆಯಿಂದ ಬದುಕುವ ಅವಕಾಶಗಳು, ಸಂವಿಧಾನ ನೀಡಿರುವ ಹಕ್ಕುಗಳು ಬೇಕು” ಎಂದು ಆಗ್ರಹಿಸಿದ್ದಾರೆ.

ನಾಟಕದ ತಯಾರಿ ಬಗ್ಗೆ ಮಾತನಾಡಿರುವ ಅವರು “ನಯನಾ ಸೂಡ ಅತ್ಯದ್ಭುತವಾಗಿ ಜೀವಿಸಿದ್ದಾರೆ. ರಾಜ್‌ಗುರು ಅವರ ಸಂಗೀತದ ಬಗ್ಗೆ ಎರಡು ಮಾತಿಲ್ಲ. ಈ ನಾಟಕ ನಗು, ಅಳು, ಹಾಸ್ಯ, ಹೋರಾಟ, ಭಾವನೆಗಳು, ನೃತ್ಯ ಎಲ್ಲವೂ ಒಳಗೊಂಡಿರುವ ಭಿನ್ನವಾದ ನಾಟಕ. ನಾನು ತಾಲೀಮಿನ ಸಮಯದಲ್ಲಿ ಜೊತೆಗಿದ್ದು ನೋಡಿದ್ದೇನೆ ನಯನ ಒಬ್ಬರೇ ಎಲ್ಲಾ ಪಾತ್ರಗಳನ್ನು ನಿಭಾಯಿಸಿರುವ ರೀತಿ ಅದ್ಭುತ. ತುಂಬಾ ಆಳವಾಗಿ ಈ ನಾಟಕಕ್ಕೆ ಕೆಲಸ ಮಾಡಿದ್ದೇವೆ” ಎನ್ನುತ್ತಾರೆ ಹೋರಾಟಗಾರ್ತಿ ಅಕ್ಕಯ್.

 

ಅಕ್ಕಯ್ ನಿರ್ದೇಶಕ ಬೇಲೂರು ರಘುನಂದನ್ ಮಾತನಾಡಿ, “ನನ್ನ ಇದುವರೆಗಿನ ನಾಟಕದ ಪಯಣವೇ ಅಂಚಿಗೆ ತಳ್ಳಲ್ಪಟ್ಟ, ಯಾವ ವಿಷಯಗಳನ್ನು ಪರದೆಯ ಮೇಲೆ ತಂದಿಲ್ಲವೋ ಅಂತಹ ವಿಷಯಗಳನ್ನು ಸುತ್ತುವರೆದಿವೆ. ನನ್ನ ಭೂಮಿ, ರಕ್ತವರ್ಣಿ, ತಿಪ್ಪೆರುದ್ರ ಸೇರಿಸಂತೆ ಹಲವು ನಾಟಕಗಳು ಇದೆ ರೀತಿಯ ವಿಷಯಗಳನ್ನು ಹೊಂದಿವೆ. ಸಮಾಜ ಯಾವುದನ್ನು ಅಮುಖ್ಯ ಎನ್ನುತ್ತದೋ ಅಂತಹ ಸಬ್ಜೆಕ್ಟ್‌ ಆಗಿ ನನಗೆ ಅಕ್ಕಯ್ ಮುಖ್ಯ. ಅಕ್ಕಯ್ ಪದ್ಮಶಾಲಿ ನನ್ನ ಬಹುಕಾಲದ ಗೆಳೆಯರು ಕೂಡ. ಇದೇ ಸಮಯಕ್ಕೆ ಅವರ ಜೀವನ ಕೃತಿ ಬಂತು. ಜೀವನ ಕೃತಿಯಾದ ಒಂದು ಸ್ಪರ್ಶ ಇರುತ್ತದೆ. ಅದೇ ರಂಗದ ಮೇಲೆ ಬಂದಾಗ ಇನ್ನೊಂದು ಕಲಾತ್ಮಕ ಸ್ಪರ್ಶ ಸಿಗುತ್ತದೆ. ಅವರ ಹೋರಾಟ, ಬದುಕು, ಜೀವನಕ್ಕೆ ಮತ್ತೊಂದು ರೂಪ ಬರುತ್ತದೆ” ಎನ್ನುತ್ತಾರೆ.

“ಈ ನಾಟಕ ಯಾಕೆ ಮುಖ್ಯ ಅಂದರೆ, ಇದುವರೆಗೂ ಮಂಗಳಮುಖಿಯರು, ನಿತ್ಯ ಮುತೈದೆಯರು ಅಂದು ರೋಮ್ಯಾಂಟಿಸೈಜ್ ಮಾಡಿ ಚಪ್ಪಾಳೆ ತಟ್ಟಲು, ನಿಂಬೆ ಹಣ್ಣು ನಿವಾಳಿಸಲು, ಸೆರಗು ನಿವಾಳಿಸಲು, ದೃಷ್ಟಿ ತೆಗೆಯಲು ಸೀಮಿತವಾಗಿಸಿದ್ದಾರೆ. ಇದ್ಯಾವುದು ಆಗಬಾರದು ಎಂಬ ದೊಡ್ಡ ಚಳವಳಿ ಈ ಸಮುದಾಯದಲ್ಲೇ ನಡೆಯುತ್ತಿದೆ. ಅವರು ಕೂಡ ಎಲ್ಲರಂತೆ ಸಾಮಾನ್ಯವಾಗಿ ಬದುಕಬೇಕು ಎನ್ನುವ ಹೋರಾಟದ ಸಾಧ್ಯತೆಯಾಗಿ ಅಕ್ಕಯ್ ನಾಟಕ ಬಂದಿದೆ. ಇದುವರೆಗೂ ಈ ಸಮುದಾಯದ್ದು ಗೋಳಿನ ಕಥನವಾಗಿ ತೋರಿಸಲಾಗಿದೆ. ಈಗಲೂ ನೋವು, ಸಂಘರ್ಷವಿದೆ. ಆದರೆ, ಈ ನಾಟಕ ಆ ಸಂಘರ್ಷವನ್ನು ದಾಟಿಕೊಂಡು ಮುಂದೆ ಏನಾಗಬೇಕು ಎಂಬುದನ್ನು ಹೇಳುತ್ತದೆ. ಸಮಾಜದ ಮುಖ್ಯವಾಹಿನಿಯಲ್ಲಿರದಿದ್ದರೂ ಕೂಡ ತಮ್ಮನ್ನು ಪ್ರತ್ಯೇಕವಾಗಿ ನೋಡದೆ ಎಲ್ಲರಂತೆ ಸಮಾನವಾಗಿ ನೋಡಬೇಕು ಎಂಬ ಆಶಯವಿದೆ” ಎಂದರು.

May be an image of 1 person, beard, standing, sunglasses, sky and road
ಬೇಲೂರು ರಘುನಂದನ್, ನಾಟಕ ನಿರ್ದೇಶಕರು

“ಭಾರತದಲ್ಲಿ ಇಂತಹ ಒಂದು ಟ್ರಾನ್ಸ್‌ಜೆಂಡರ್‌ ವಿಷಯದ ಸಿನಿಮಾ, ನಾಟಕದಲ್ಲಿ ಒಬ್ಬ ಪುರುಷ ಇಂತಹ ಪಾತ್ರಗಳನ್ನು ಮಾಡುತ್ತಾರೆ. ಇಲ್ಲದಿದ್ದರೆ ಲೈಂಗಿಕ ಅಲ್ಪಸಂಖ್ಯಾತ ಹೆಣ್ಣು ಮಕ್ಕಳು ಮಾಡುತ್ತಾರೆ. ಅಂತಹ ಕಟ್ಟುಪಾಡನ್ನು ಈ ನಾಟಕದಲ್ಲಿ ಮುರಿಯಲಾಗಿದೆ. ಹೀಗಾಗಿ ಇದರಲ್ಲಿ ಒಬ್ಬ ಹೆಣ್ಣು ಮಗಳು ಈ ಪಾತ್ರವನ್ನು ಮಾಡುತ್ತಿದ್ದಾರೆ” ಎಂದರು. 

“ಇದನ್ನು ರಂಗದ ಮೇಲೆ ತರುವ ಯೋಚನೆಗೆ ಅಕ್ಕಯ್ ತುಂಬಾ ಉತ್ಸಾಹ ತೋರಿಸಿದರು. ಅವರು ಪಟ್ಟು ಹಿಡಿದು ನನ್ನ ಕೈಯಲ್ಲಿ ಈ ನಾಟಕ ನಿರ್ದೇಶನ ಮಾಡಿಸಿದ್ದಾರೆ. ನನ್ನ ಸಮುದಾಯದ ಕಥನ ಸಮಾಜಕ್ಕೆ ತಲುಪಬೇಕು ಎಂಬ ಸಮಾಧಾನ, ನೆಮ್ಮದಿಯಿದೆ ಎನ್ನತ್ತಾರೆ ಅಕ್ಕಯ್. ಇನ್ನು ನಯನಾ ಅವರು ತುಂಬಾ ಹುಮ್ಮಸ್ಸಿನಿಂದ ಈ ಪಾತ್ರ ಮಾಡುತ್ತಿದ್ದಾರೆ. ತುಂಬಾ ಜನ ಇರಿಸು ಮುರಿಸು ಮಾಡಿಕೊಳ್ಳುತ್ತಾರೆ ಇಂತಹ ಪಾತ್ರ ಮಾಡಲು. ಆದರೆ ಆಕೆ ಮಾತ್ರ ತುಂಬಾ ಬದ್ಧತೆಯಿಂದ ಈ ಪಾತ್ರ ಮಾಡುತ್ತಿದ್ದಾರ. ತುಂಬಾ ಶ್ರಮ ಹಾಕಿ ಎರಡು ತಿಂಗಳಿನಿಂದ ಕೆಲಸ ಮಾಡಿದ್ದೇವೆ” ಎಂದು ನಾಟಕದ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಕ್ಕಯ್ ಆಗಿ ಏಕವ್ಯಕ್ತಿ ನಾಟಕದಲ್ಲಿ ಮೊದಲ ಬಾರಿಗೆ ಕಾಣಿಸಿಕೊಲ್ಳುತ್ತಿರುವ ನಯನಾ ಸೂಡ, “ಅಕ್ಕಯ್, ನನ್ನ ಇಡೀ ರಂಗಭೂಮಿ ಪಯಣದಲ್ಲಿ ದೊಡ್ಡ ಮೈಲಿಗಲ್ಲು, ಅಕ್ಕಯ್ ಪುಸ್ತಕವನ್ನು ಓದುವುದು ಬೇರೆ, ಕೇಳುವುದು ಬೇರೆ… ಆದರೆ ಅವರೇ ಆಗಿ ಅನುಭವಿಸುವುದು ಬೇರೆ. ಅದು ಮಾನಸಿಕ, ದೈಹಿಕ ಹಿಂಸೆಗಳು” ಎನ್ನುತ್ತಾರೆ.

“ಒಬ್ಬ ಕಲಾವಿದೆಯಾಗಿ ನನಗಿದ್ದ ಮೊದಲ ಸವಾಲು ಎಂದರೆ, ನಾನು ಮೊದಲು ಗಂಡಾಗಿ, ಆಮೇಲೆ ಹೆಣ್ಣಾಗಿ ಬಳಿಕ ಒಬ್ಬ ಹೋರಾಟಗಾರ್ತಿಯಾಗಿ ರೂಪುಗೊಳ್ಳುವುದಿದೆಯಲ್ಲ ಅದು ಕಷ್ಟ. ನಯನಾ ಒಬ್ಬ ಹೆಣ್ಣು. ಅದೇ ಹೆಣ್ಣು ಮತ್ತೆ ಗಂಡಾಗಿ ಹೆಣ್ಣಾಗುವುದಿದೆಯಲ್ಲ ಅದು ನನಗೆ ಸವಾಲಾಗಿತ್ತು. ಇಲ್ಲಿ ನಾವು ಅಕ್ಕಯ್ ಅವರನ್ನು ಅನುಕರಣೆ ಮಾಡಿಲ್ಲ. ಅವರನ್ನು ಅನುಕರಣೆ ಮಾಡುವುದು ನಮ್ಮ ಉದ್ದೇಶವಲ್ಲ. ಅವರ ಇಡೀ ಬದುಕನ್ನು ಸಮಾಜಕ್ಕೆ ತೋರಿಸಬೇಕು. ಮುಂದಿನ ಪೀಳಿಗೆ ಈ ಸಮುದಾಯದ ಬಗೆಗಿನ ಕಲ್ಪನೆಯಿಂದ ಬದಲಾಗಬೇಕು” ಎಂದರು.

ನಯನಾ ಸೂಡ, ರಂಗಕರ್ಮಿ

“ಈ ನಾಟಕದಲ್ಲಿ ನನಗೆ ನಟನೆಯ ಹೊರತಾಗಿ ನಾನೇ ಜೀವಿಸಿದ್ದೇನೆ. ಅವರ ಸಂಕಟ, ವ್ಯವಸ್ಥೆ ಮೇಲಿನ ಆಕ್ರೋಶ, ಅಳು , ಸಿಟ್ಟು ಎಲ್ಲವೂ ಜೊತೆಗೂಡಿದೆ. ನಾನು ಅಕ್ಕಯ್ ಅವರನ್ನು ಅನುಸರಿಸಿಲ್ಲ. ಅವರು ನನ್ನಲ್ಲಿ ತುಂಬಿಕೊಂಡಿದ್ದಾರೆ. ದೊಡ್ಡ ಅನುಭವಗಳ ಗುಚ್ಛ ಇದು. ಏಕವ್ಯಕ್ತಿ ನಾಟಕದಲ್ಲಿ ಹೆಚ್ಚು ಸವಾಲಾಗುವುದು ಎಲ್ಲಾ ಪಾತ್ರಗಳನ್ನು ನಟಿಸುವುದು. ಇಲ್ಲಿ ಮುಖ್ಯ ಪಾತ್ರದಾರಿಯಾಗಿ ನಟಿಸುವ ಜೊತೆಗೆ ಆಕೆಯ ತಂದೆಯಾಗಬೇಕು, ಪೊಲೀಸ್ ಆಗಬೇಕು, ಮತ್ತೊಬ್ಬ ಟ್ರಾನ್ಸ್‌ಜೆಂಡರ್‌ ಆಗಬೇಕು. ಲೈಂಗಿಕ ಕಾರ್ಯಕರ್ತೆಯಾಗಬೇಕು. ಹೆಣ್ಣನು ಬಳಸಿಕೊಳ್ಳಲು ಬರುವ ಗಂಡಸಾಗಬೇಕು. ಎಲ್ಲಾ ತುಮಲಗಳನ್ನು ನಾನು ಅನುಭವಿಸಬೇಕು. ಇಲ್ಲಿ ಭಾವನೆಗಳು ಅತೀ ವೇಗವಾಗಿ ಬದಲಾಗಬೇಕು. ಅಳುವ ಹೆಣ್ಣಾಗಿ ಬಳಿಕ ದರ್ಪ ತೋರುವ ಪೊಲೀಸಾಗಬೇಕು. ಅತ್ಯಾಚಾರದಿಂದ ಕುಗ್ಗಿದವಳಾಗಬೇಕು ಅದೇ ಕ್ಷಣದಲ್ಲಿ ದೈಹಿಕ ಕಾಮನೆಗಳ ಗಂಡಸಾಗಬೇಕು. ಇಂತಹ ನಾಟಕದಲ್ಲಿ ಪ್ರಪಂಚವನ್ನೇ ಮರೆಯಬೇಕಾಗಿದೆ” ಎಂದು ಭಾವುಕರಾಗುತ್ತಾರೆ ನಯನಾ ಸೂಡ.

“ಈ ನಾಟಕ ಎಷ್ಟು ಜನರಿಗೆ ತಲುಪುತ್ತದೋ, ಜನರು ಏನು ಹೇಳೋತ್ತಾರೋ ಗೊತ್ತಿಲ್ಲ. ಆದರೆ, ಆ ಸಮುದಾಯದ ಒಬ್ಬರೇ ಒಬ್ಬರಿಗೂ ಈ ನಾಟಕದಿಂದ ನೋವಾಗಬಾರದು ಅಷ್ಟೆ ನನ್ನ ಆಶಯ. ಒಬ್ಬ ಗಂಡು ಎಲ್ಲಾ ಪಾತ್ರ ಮಾಡುವಾಗ, ಹೆಣ್ಣು ಯಾಕೆ ಮಾಡಬಾರದು. ಅವರ ಕಥೆಯನ್ನು ಒಬ್ಬ ಹೆಣ್ಣೇ ಹೇಳಬೇಕು ಎಂಬುದನ್ನು ಅಕ್ಕಯ್ ಮತ್ತು ರಘುನಂದನ್  ಇಬ್ಬರು ಒಪ್ಪಿಕೊಂಡರು. ಜೊತೆಗೆ ಸಂಗಾತಿ ರಾಜ್‌ಗುರು ಸಹಕಾರವನ್ನು ಮರೆಯುವಂತಿಲ್ಲ” ಎನ್ನುತ್ತಾರೆ ನಯನಾ.

ಅಕ್ಕಯ್ ಪದ್ಮಶಾಲಿ ಅವರ ಮೊದಲ ಹೆಸರು ಜಗದೀಶ. ಅವರಲ್ಲಿ ಐದನೇ ವರ್ಷದಿಂದ ಎಂಟನೇ ವರ್ಷದ ಹೊತ್ತಿಗೆ ಹೆಣ್ಣಿನ ಭಾವನೆಗಳು ಆರಂಭವಾಗಿದ್ದವು. ಗಂಡು ಮಗುವಿನ ಸಂಭ್ರಮದಲ್ಲಿದ್ದ ತಂದೆ ತಾಯಿಗೆ ನಾನು ಅದರ ವಿರುದ್ಧ ಹೋಗಿದ್ದು ಅವರಿಗೆ ದೊಡ್ಡ ಆಘಾತವಾಗಿತ್ತು. ಇಷ್ಟು ವರ್ಷಗಳ ಹೋರಾಟದ ಫಲವಾಗಿ ಈಗೊಂದು 5 ವರ್ಷಗಳ ಹಿಂದೆ ನನ್ನ ತಾಯಿ ನನ್ನನ್ನು ಮಗಳೆಂದೇ ಒಪ್ಪಿಕೊಂಡಿದ್ದಾರೆ ಎಂದು ತಿಳಿಸುತ್ತಾರೆ ಅಕ್ಕಯ್.

ಅಕ್ಕಯ್ ನಾಟಕ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ (ಮಾ.6) ಸಂಜೆ 6 ಗಂಟೆಗೆ ಆರಂಭವಾಗಲಿದೆ. 15 ವರ್ಷದ ಮೇಲ್ಪಟ್ಟವರಿಗೆ ಪ್ರವೇಶವಿದೆ. ಪ್ರವೇಶ ಉಚಿತವಾಗಿದೆ. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅನಿಂದ್ಯಾ ಹಾಜ್ರ ಸೇರಿದಂತೆ ಹಲವು ಮಂದಿ ಭಾಗಿಯಾಗಲಿದ್ದಾರೆ.

ಇಂದು ಮೊದಲ ಪ್ರದರ್ಶನ ಕಾಣುತ್ತಿರುವ ಈ ನಾಟಕಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈಗಾಗಲೇ ರಾಜ್ಯದಲ್ಲಿ 10 ಶೋಗಳು ಬುಕ್ ಆಗಿವೆ ಎಂಬ ಮಾಹಿತಿಯನ್ನು ತಂಡ ನೀಡಿದೆ.


ಇದನ್ನೂ ಓದಿ: ಅಕ್ಕಯ್ ಸಂದರ್ಶನ; ಮಂಗಳ ಮತ್ತು ಅಮಂಗಳ ಅನ್ನುವಂತದ್ದೆಲ್ಲ ಬ್ರಾಹ್ಮಣ್ಯ ಪ್ರೇರಿತ; ಇರುವುದು ಮನುಷ್ಯರು ಮತ್ತು ವೈವಿಧ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...