ಕಾಂಗ್ರೆಸ್ ಅಭ್ಯರ್ಥಿ ಹಾಗೂ ಬಹುಭಾಷಾ ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಅವರು ಮೊಗಾ ವಿಧಾನಸಭಾ ಕ್ಷೇತ್ರದಿಂದ ಸೋತಿದ್ದಾರೆ. ಚುನಾವಣಾ ಆಯೋಗದ ಅಧಿಕೃತ ಘೋಷಣೆ ಬಾಕಿಯಿದೆ.
ಕಳೆದ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿತ್ತು. 1977ರಿಂದ 2017ರ ವರೆಗಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಇಲ್ಲಿಂದ ಆರು ಬಾರಿ ಗೆದ್ದಿದೆ. 2017ರಲ್ಲಿ ನಡೆದ ಚುನಾವಣೆಯಲ್ಲಿಯೂ ಕಾಂಗ್ರೆಸ್‌ನಿಂದ ಹರ್ಜೋತ್ ಸಿಂಗ್ ಗೆದ್ದಿದ್ದರು.
ಆದರೆ, ಈ ಬಾರಿ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಭರ್ಜರಿ ಗೆಲುವು ಸಾಧಿಸುತ್ತಿದೆ. ಚುನಾವಣಾ ಸಮೀಕ್ಷೆಗಳನ್ನು ತಲೆ ಕೆಳಗು ಮಾಡಿ ಬಹುಮತಕ್ಕಿಂತಲೂ ಅಧಿಕ ಸ್ಥಾನಗಳನ್ನು ಎಎಪಿ ತನ್ನದಾಗಿಸಿದೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಮತ್ತು ಕಾಂಗ್ರೆಸ್ ಅಬ್ಯರ್ಥಿ ಮಾಳವಿಕಾ ಸೂದ್, ಸೋನು ಸೂದ್ ಅವರ ಸಹೋದರಿಯಾಗಿರುವುದರಿಂದ ಈ ಸ್ಥಾನವು ಸೆಲೆಬ್ರಿಟಿಗಳ ಸ್ಥಾನವಾಗಿತ್ತು. ಆದರೆ, ಈ ಬಾರಿ ಮೊಗಾ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಡಾ.ಅಮಂದೀಪ್ ಕೌರ್ ಅರೋರಾ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: Punjab Election Results | ಪಂಜಾಬ್‌ನಲ್ಲಿ AAP ಭರ್ಜರಿ ಜಯ; ಸಂಪೂರ್ಣ ಫಲಿತಾಂಶ ಹೀಗಿದೆ
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಡಾ.ಅಮಂದೀಪ್ ಕೌರ್ ಅರೋರಾ 58,813 ಮತ ಗಳಿಸಿದ್ದು, ಮಾಳವಿಕಾ ಸೂದ್ 38,125 ಮತ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಶಿರೋಮಣಿ ಅಕಾಲಿದಳ ಅಭ್ಯರ್ಥಿ 28,213 ಮತ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ನಾಲ್ಕನೇ ಸ್ಥಾನದಲ್ಲಿದ್ದು, 10,558 ಮತ ಗಳಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭರ್ಜರಿ ಜಯವನ್ನು ಸಾಧಿಸಿದೆ. ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ತಾನು ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳಲ್ಲೂ ಸೋಲುಂಡಿದ್ದಾರೆ. ಜೊತೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೊತ್ ಸಿಂಗ್ ಸಿಧು ಅವರು ಕೂಡಾ ಸೋಲುಂಡಿದ್ದಾರೆ.
ಇಷ್ಟೇ ಅಲ್ಲದೆ ಕಾಂಗ್ರೆಸ್ ತೊರೆದು ಬೇರೆಯೆ ಪಕ್ಷ ಕಟ್ಟಿ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕೂಡಾ ಸೋಲುಂಡಿದ್ದಾರೆ. ರಾಜ್ಯದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ, ಶಿರೋಮಣಿ ಅಕಾಲಿ ದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್ ಕೂಡಾ ಸೋಲುಂಡಿದ್ದಾರೆ. ಇವರು ಒಟ್ಟು ಐದು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.
ಪಂಜಾಬ್‌ನ ಸಂಪೂರ್ಣ ಫಲಿತಾಂಶ ಹೀಗಿದೆ.
ಒಟ್ಟು ಕ್ಷೇತ್ರ 117, ಬಹುಮತಕ್ಕೆ 59 ಸ್ಥಾನಗಳ ಅಗತ್ಯ
ಆಮ್ ಆದ್ಮಿ ಪಕ್ಷ – 92
ಕಾಂಗ್ರೆಸ್ – 18
ಶಿರೋಮಣಿ ಅಕಾಲಿದಳ – 3
ಬಿಎಸ್‌ಪಿ – 1
ಬಿಜೆಪಿ – 2
ಪಕ್ಷೇತರ – 1
ಇದನ್ನೂ ಓದಿ: ಪಂಜಾಬ್ ಚುನಾವಣಾ ಫಲಿತಾಂಶ: ಹಾಲಿ, ಮಾಜಿ ಸಿಎಂಗಳಿಗೆಲ್ಲ ಸೋಲಿನ ರುಚಿ