Homeಕರ್ನಾಟಕಸಂಸ್ಕೃತಿ, ಸಮಾಜದ ದ್ವಿಮುಖ ನೀತಿ ತೆರದಿಟ್ಟ ಅಕ್ಕಯ್ ಪದ್ಮಶಾಲಿ ಭಾಷಣ

ಸಂಸ್ಕೃತಿ, ಸಮಾಜದ ದ್ವಿಮುಖ ನೀತಿ ತೆರದಿಟ್ಟ ಅಕ್ಕಯ್ ಪದ್ಮಶಾಲಿ ಭಾಷಣ

‘ಸಂವಿಧಾನ ಪೀಠಿಕೆ- ಒಂದು ಪುಟ್ಟ ಮುನ್ನುಡಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಾ.ಅಕ್ಕಯ್ ಪದ್ಮಶಾಲಿಯವರು ಲಿಂಗತ್ವ ಅಲ್ಪಸಂಖ್ಯಾತರ ನೋವುಗಳನ್ನು ಹಂಚಿಕೊಂಡರೆ, ಗಾಯಕಿ ಎಂ.ಡಿ.ಪಲ್ಲವಿಯವರು, "ಹೋರಾಟದಿಂದಲೇ ಸಂವಿಧಾನದ ಗುರಿಗಳನ್ನು ತಲುಪಬೇಕಿದೆ" ಎಂದರು.

- Advertisement -

‘ಒಂದೆಡೆ ಸಂಸ್ಥೆ’ಯ ಸಂಸ್ಥಾಪಕಿಯಾಗಿರುವ ಅಕ್ಕಯ್ ಪದ್ಮಶಾಲಿಯವರು ಲಿಂಗತ್ವ ಅಲ್ಪಸಂಖ್ಯಾತರ ದಿಟ್ಟದನಿ. ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಸಮಾಜಕ್ಕಿರುವ ತಾತ್ಸಾರದ ವಿರುದ್ಧ ಅಕ್ಕಯ್‌ ಪದ್ಮಶಾಲಿಯವರು ಮಾತನಾಡಲು ನಿಂತರೆಂದರೆ ಇಡೀ ಸಮಾಜಕ್ಕೆ ಕನ್ನಡಿ ಹಿಡಿದಂತೆ ಭಾಸವಾಗುತ್ತದೆ.

ಜನ ಪ್ರಕಾಶನ, ಪರ್ಯಾಯ ಕಾನೂನು ವೇದಿಕೆ ಹಾಗೂ ಮಾರ್ಗ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರಿನ ರಾಜೇಂದ್ರನಗರದ ಡಾ.ಅಂಬೇಡ್ಕರ್‌ ಸಮುದಾಯಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಂವಿಧಾನ ಪೀಠಿಕೆ ಒಂದು ಪುಟ್ಟ ಮುನ್ನುಡಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರಾಡಿದ ಮಾತುಗಳು ಸಮಾಜದ ದ್ವಿಮುಖ ನೀತಿಗಳನ್ನು ತೆರದಿಟ್ಟವು.

“ಪ್ರಕೃತಿ ಉದ್ಭವವಾದಾಗಿನಿಂದ ನಾವು (ಲಿಂಗತ್ವ ಅಲ್ಪಸಂಖ್ಯಾತರು) ಇದ್ದೇವೆ ಎನ್ನಲಾಗುತ್ತದೆ. ಹರಿ-ಹರನ ಪುತ್ರನಾಗಿ ಅಯ್ಯಪ್ಪ ಹುಟ್ಟಲು ಹೇಗೆ ಸಾಧ್ಯ? ಹರಿ ಒಬ್ಬ ಗಂಡು, ಹರ ಒಬ್ಬ ಗಂಡು- ಇಬ್ಬರು ಗಂಡಸರ ಮಧ್ಯೆ ಸೆಕ್ಸ್‌ ಮಾಡಿದರೆ ಮಕ್ಕಳಾಗಲು ಸಾಧ್ಯವಾಗುತ್ತದಾ? ಇಬ್ಬರಲ್ಲಿ ಒಬ್ಬರಿಗೆ ಯೋನಿ ಇರಬೇಕಾಗುತ್ತದೆ. ಶಿವನನ್ನು ಅರ್ಧನಾರೀಶ್ವರ ಎನ್ನುತ್ತಾರೆ. ಅಯ್ಯೋ, ನನಗೆ ಎಷ್ಟು ಗೌರವ ಸಿಗುತ್ತದೋ? ಸಾಂಸ್ಕೃತಿಕವಾಗಿ ನೀವು ನಮ್ಮನ್ನು ಒಪ್ಪಿಕೊಳ್ಳುತ್ತೀರಿ. ಸಾಮಾಜಿಕವಾಗಿ ಯಾಕೆ ನಮ್ಮನ್ನು ನೀವು ಒಪ್ಪಿಕೊಂಡಿಲ್ಲ” ಎಂದು ಅಕ್ಕಯ್ ಪದ್ಮಶಾಲಿ ಪ್ರಶ್ನಿಸಿದರು.

“ಈ ಸಮಾಜದಲ್ಲಿ ಜಾತಿ, ಧರ್ಮ, ಪ್ರಾಂತ್ಯ, ಬಟ್ಟೆ, ಊಟ ಎಲ್ಲ ವಿಚಾರಗಳಲ್ಲೂ ಸಮಸ್ಯೆಗಳನ್ನು ಕಾಣುತ್ತಿದ್ದೇವೆ. ನಾನು ಮದುವೆಯಾದರೂ ಕಷ್ಟ, ಇಲ್ಲದಿದ್ದರೂ ಕಷ್ಟ. ಬೆಳ್ಳಿಗೆ ಇದ್ದರೂ ಕಷ್ಟ, ಕಪ್ಪಗಿದ್ದರೂ ಕಷ್ಟ. ಮೊಲೆಗಳು ದಪ್ಪ ಇದ್ದರೂ ಕಷ್ಟ, ಸಣ್ಣ ಇದ್ದರೂ ಕಷ್ಟ. ಹಾಗಿದ್ದರೆ ನಾವು ಯಾವ ಸಮಾಜವನ್ನು ಸಮಾಧಾನ ಮಾಡಲು ಹೊರಟ್ಟಿದ್ದೇವೆ? ನೀವು ನಮ್ಮನ್ನು ಕೇಳಿದರೆ ನಾನು ಸಮಾಜಕ್ಕೆ ಸಮಾಧಾನ ಮಾಡಲು ಖಂಡಿತ ಇಲ್ಲ, ನನಗೆ ನಾನು ಸಮಾಧಾನ ಮಾಡಿಕೊಳ್ಳಲು ಇದ್ದೇನೆ ಎನ್ನುತ್ತೇನೆ. ನೈಸರ್ಗಿಕವಾಗಿ ಲಿಂಗತ್ವ ಬದಲಾವಣೆ ಆಗಿರಬೇಕಾದರೆ, ರಾಮ, ಅಲ್ಲಾ, ಜೀಸಸ್ ಬಂದು ಲಿಂಗತ್ವ ಬದಲಾವಣೆ ತಪ್ಪು ಎಂದು ಹೇಳಿಲ್ಲ. ಧರ್ಮಗ್ರಂಥಗಳನ್ನು ವಿಶ್ಲೇಷಿಸುವ ಕಳ್ಳರು ತಪ್ಪು ಎನ್ನುತ್ತಾರೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿಯವರು ಭಗವದ್ಗೀತೆಯೇ ದೇಶದ ಸಂವಿಧಾನ ಎಂದು ಮಾತನಾಡುವಾಗ ಹೆಣ್ಣು ಮಕ್ಕಳಿಗೆ ಅವಕಾಶ ಕೊಡುತ್ತಾರೆ?” ಎಂದು ಕೇಳಿದರು.

“ಈ ದೇಶದ ಸವೋಚ್ಚ ನಾಯಕ, ಜನಸೇವಕ ಎಂದು ಅಂದುಕೊಂಡಿದ್ದಾನಲ್ಲ ಆತನೂ ತನ್ನ ಹೆಂಡತಿಗೆ ಹಿಂಸೆ ನೀಡಿ ಆಚೆ ಬಂದವನಾಗಿದ್ದಾನೆ. ಮಹಿಳಾ ಶೋಷಣೆ ಮಾಡುವವರು ಯಾರೇ ಆದರೂ ಕ್ಷಮಿಸಲು ಆಗಲ್ಲ. ಲಿಂಗತ್ವ ಅಲ್ಪಸಂಖ್ಯಾತರಾಗುವುದು ಕಷ್ಟವಾಗಿದೆ. ಯಾಕೆಂದರೆ ಇವುಗಳ ಕುರಿತು ಮಾತನಾಡಲ್ಲ. ಇಂದು ಮಾತನಾಡುತ್ತಿದ್ದೇವೆ ಎಂದರೆ ಲಿಂಗತ್ವ ಅಲ್ಪಸಂಖ್ಯಾತ ಹೋರಾಟ ಕಾರಣವಾಗಿದೆ. ಎಲ್ಲ ರೀತಿಯ ಚಳವಳಿಗಳೂ ನಮಗೆ ಬೆಂಬಲ ನೀಡಿವೆ. ಧರ್ಮದ, ಜಾತೀಯ ಚೌಕಟ್ಟಿನ ವಿರುದ್ಧ ನಾವು ಸೆಣಸಾಡುತ್ತಿದ್ದೇವೆ” ಎಂದು ತಿಳಿಸಿದರು.


ಇದನ್ನೂ ಓದಿರಿ: 2 ತಿಂಗಳಿನಿಂದ ವೇತನವಿಲ್ಲ: ಎಐಸಿಸಿಟಿಯು ನೇತೃತ್ವದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಕಾರ್ಮಿಕರ ಪ್ರತಿಭಟನೆ


“ನಮಗೆ ಸ್ಮಶಾನವೇ ಇಲ್ಲ. 2009ರಲ್ಲಿ ಸತ್ತ ನಾಯಿಗಳಿಗೆ ಮಣ್ಣು ಮಾಡಲು ಸ್ಮಶಾನವನ್ನು ಕೊಡುತ್ತೇವೆ ಎಂದು ಬಿಜೆಪಿ ಸರ್ಕಾರ ಹೇಳಿತು. ನಮಗೆ ಇರಲು ಮನೆಯೂ ಇಲ್ಲ. ಅಂದರೆ ನಾವು ಪ್ರಾಣಿಗಳಿಗಿಂತ ಕಡೆಯವರಾ ಎಂಬ ಪ್ರಶ್ನೆ ಮೂಡುತ್ತದೆ. 1860ನೇ ಇಸವಿಯಿಂದ ಇತ್ತೀಚಿನ ವರ್ಷಗಳವರೆಗೆ ನಾವು ಕಾನೂನಿನ ಕಣ್ಣಿನಲ್ಲಿ ಕ್ರಿಮಿನಲ್‌ ಆಗಿದ್ದವು. ಯೋನಿ ಮತ್ತು ಶಿಶ್ನದ ಆಧಾರದಲ್ಲಿ ಆಗುವ ಸೆಕ್ಸ್‌ನಿಂದ ಸಂತಾನೋತ್ಪತಿ ಆಗುತ್ತದೆ. ಹಾಗಿದ್ದರೆ ಮಾತ್ರ ಅದು ಸೆಕ್ಸ್‌ ಎಂದು ಮೆಕಾಲೆ ಕಾನೂನು ಹೇಳಿತ್ತು. ಮಕ್ಕಳು ಹುಟ್ಟಿಸಲು ಮಾತ್ರವೇ ಸೆಕ್ಸ್ ಮಾಡುತ್ತಾರಾ? ನಾನು ಕಾನೂನು ವ್ಯವಸ್ಥೆಗೆ ಧನ್ಯವಾದ ಹೇಳುತ್ತೇನೆ. ಸಂವಿಧಾನದ ಮುಂದೆ ಸಮಾನ ಪ್ರಜೆಗಳಾಗಿ ತೃತೀಯ ಲಿಂಗಿಗಳನ್ನು ಕಾಣಬೇಕು ಎಂದು ಸುಪ್ರೀಂ ಕೋರ್ಟ್ 2014ರಲ್ಲಿ ಹೇಳಿತು” ಎಂದು ಧನ್ಯತೆ ಅರ್ಪಿಸಿದರು.

“ಮೂಲಭೂತವಾದಿಗಳು ಗೊತ್ತಾ? ಈ ಬಾಬಾ ರಾಮ್‌ ದೇವ್‌. ಅದೇ ಪತಂಜಲಿ. ಅಯ್ಯೋ ದೇವರೆ, ಅವರ ಜೊತೆಗೆ ಕೆಲವು ಜನ ಸೇರಿಸಿಕೊಂಡು ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ದಾವೆಯನ್ನು ಹೂಡಿದರು. ಭಾರತಕ್ಕೆ ಅಂಟು ರೋಗಬಂದಿದೆ, ಮುಟ್ಟಿದ ತಕ್ಷಣ ಸಲಿಂಗ ಕಾಮಿಗಳಾಗುತ್ತಾರೆ, ಲೆಸ್ಬಿಯನ್ ಆಗುತ್ತಾರೆ ಎಂದು ಆರೋಪಿಸಿದರು. ನಾವು ಇದನ್ನು ಒಪ್ಪಲಿಲ್ಲ. ಹೋರಾಟ ಮಾಡಿದೆವು. ಶಾಲೆ, ಕಾಲೇಜಿಗಳಿಗೆ ಬಂದೆವು, ಎಲ್ಲ ಚಳವಳಿಗಳ ಜೊತೆ ಕೂತೆವು. ಆಮೇಲೆ ಕಾನೂನು ಹೋರಾಟ ಮಾಡಿದೆವು. ನಮ್ಮನ್ನು ಅಪರಾಧಿಗಳನ್ನಾಗಿ ಮಾಡುವ ಪ್ರಕ್ರಿಯೆ ನಡೆಯುತ್ತಲೇ ಬಂದಿತ್ತು. ಅಂತಿಮವಾಗಿ ನಾವು ಅಪರಾಧಿಗಳಲ್ಲ ಎಂದು ತೀರ್ಪು ಹೊರಬಂತು” ಎಂದು ತಮ್ಮ ಹೋರಾಟದ ಕ್ಷಣಗಳನ್ನು ಮೆಲುಕು ಹಾಕಿದರು ಅಕ್ಕಯ್‌ ಪದ್ಮಶಾಲಿ.

ಕನಸಿನ ಸಾಕಾರಕ್ಕೆ ಸಂವಿಧಾನ ರೋಡ್ ಮ್ಯಾಪ್‌: ಗಾಯಕಿ ಎಂ.ಡಿ.ಪಲ್ಲವಿ

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿಯವರು, “ಸ್ವಾತಂತ್ರ್ಯ ನಂತರ ದೇಶ ಯಾವ ರೀತಿ, ಸಮಾಜ ಯಾವ ರೀತಿ ಇರಬೇಕು ಅನ್ನುವ ಕನಸನ್ನು ಸಂವಿಧಾನ ಕಟ್ಟಿಕೊಟ್ಟಿತು. ನಮ್ಮ ಕನಸಿನ ಗುರಿಗೆ ಒಂದು ರೀತಿಯ ರೋಡ್ ಮ್ಯಾಪ್ ನಮ್ಮ ಸಂವಿಧಾನ. ನಾವಿನ್ನೂ ಗುರಿಯನ್ನು ಮುಟ್ಟಿಲ್ಲ. ಸಮಾನತೆ ಎಲ್ಲರಿಗೂ ಸಿಕ್ಕಿಲ್ಲ” ಎಂದು ವಿಷಾದಿಸಿದರು.

“ಆ ಆದರ್ಶಮಯ ಸಮಾಜ ಸಿಗದೆ ಇರುವುದಕ್ಕೆ ನಾವೇ ಕಾರಣ. ಆ ರೋಡ್ ಮ್ಯಾಪ್, ಆ ಬ್ಲೂಪ್ರಿಂಟ್ ನಮ್ಮ ಬಳಿ ಇದೆ. ನಾವು ಇನ್ನು ಕೂಡ ಹೋರಾಟದಿಂದಲೇ ಮುನ್ನಡೆಯಬೇಕಿದೆ. ಪ್ರಗತಿಪರ ಹೋರಾಟಗಳಿಂದಲೇ ಸಂವಿಧಾನದ ಕನಸನ್ನು ಸಾಕಾರಗೊಳಿಸುವ, ಎಲ್ಲರಿಗೂ ಎಲ್ಲ ರೀತಿಯ ಸಮಾನತೆ ದೊರಕಿಸುವ ಕೆಲಸ ಆಗಬೇಕಿದೆ. ಹೋರಾಟಗಳಿಂದ, ಅರಿವಿನಿಂದ, ಸಂವಿಧಾನ ಓದುವುದರಿಂದ, ನಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಗುರಿ ಮುಟ್ಟಬಹುದಾಗಿದೆ” ಎಂದು ಅಭಿಪ್ರಾಯಪಟ್ಟರು.

“ನಮ್ಮದು ಬಹುದೊಡ್ಡ ಪ್ರಜಾಪ್ರಭುತ್ವ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಈ ಪ್ರಜಾಪ್ರಭುತ್ವದಲ್ಲಿ ಕೆಲವು ಕೊರತೆಗಳಿವೆ. ಆದರೆ ಅದರತ್ತಲೇ ನಾವು ನಡೆದುಕೊಂಡು ಹೋಗುವುದನ್ನು ಬಿಟ್ಟು ಪ್ರಜಾಪ್ರಭುತ್ವವನ್ನು ಗಟ್ಟಿಯಾಗಿಸಬೇಕಿರುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ. ಆ ಜವಾಬ್ದಾರಿಯನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮ ಸಂವಿಧಾನವನ್ನು ನಾವು ಓದಬೇಕು. ನಮ್ಮ ಹಕ್ಕುಗಳನ್ನು, ಕನಸುಗಳನ್ನು ಅರ್ಥಮಾಡಿಕೊಂಡರೆ ಗುರಿ ಸ್ಪಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ನಾನು ಕೂಡ ಕೆಲಸ ಮಾಡುತ್ತೇನೆ” ಎಂದು ತಿಳಿಸಿದರು.

ಸಂವಿಧಾನದಿಂದಾಗಿ ಸಾಧನೆಗಳಾಗಿವೆ: ಜಸ್ಟೀಸ್ ದಾಸ್‌

ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನ ದಾಸ್‌, “ಸಂವಿಧಾನ ಜಾರಿಯಾಗಿ 73 ವರ್ಷಗಳ ಈ ಅವಧಿಯಲ್ಲಿ ಏನೂ ಸಾಧನೆಯಾಗಿಲ್ಲ ಎಂದು ಹೇಳಲಾಗದು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 1947ರಲ್ಲಿ 600 ಜನ ರಾಜ ಮಹಾರಾಜರು ಇದ್ದರು. ಎಲ್ಲರನ್ನು ಒಂದುಗೂಡಿಸಿ, ಭಾರತ ರಚನೆಯಾಗಿದ್ದು, ಸಂವಿಧಾನದಿಂದ. ಪಾಳೇಗಾರಿಕೆ ತೊಲಗಿಸಿ, ಪ್ರಜಾಪ್ರಭುತ್ವವನ್ನು ಕಟ್ಟಿದ್ದೇವೆ. ಈ ಪ್ರಜಾಪ್ರಭುತ್ವದಲ್ಲಿ ಎಲ್ಲ ಜನರೂ ಪಾಲ್ಗೊಳ್ಳುತ್ತಿರುವುದಕ್ಕೆ ಕಾರಣ ಸಂವಿಧಾನ” ಎಂದರು.

“ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ಶೇ. 80ರಷ್ಟು ಸಾಕ್ಷರತೆ ಸಾಧಿಸಿದ್ದೇವೆ. ಬಡತನ ರೇಖೆಯನ್ನು ಶೇ. 21ಕ್ಕೆ ಇಳಿಸಿದ್ದೇವೆ. ಒಂದಿಷ್ಟು ಮೂಲಸೌಕರ್ಯವನ್ನು ಪಡೆದುಕೊಂಡಿದ್ದೇವೆ. ಸಂವಿಧಾನದಿಂದಾಗಿ ಮಹಿಳೆಯೊಬ್ಬರು ಪ್ರಧಾನಿಯಾದರು. ದಲಿತರೊಬ್ಬರು ರಾಷ್ಟ್ರಪತಿಯಾದರು. ಐಎಎಸ್‌, ಐಪಿಎಸ್, ಐಆರ್‌ಎಸ್‌ಗಳಾಗಿ ಮಹಿಳೆಯರು, ದಲಿತರು ಅಧಿಕಾರ ಹಿಡಿದರು. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು, ದಲಿತರು ಪ್ರವೇಶಿಸಿದ್ದಾರೆ. ಇದಕ್ಕೆ ಕಾರಣ ಭಾರತದ ಸಂವಿಧಾನ” ಎಂದು ಬಣ್ಣಿಸಿದರು.

ದಸಂಸ ರಾಜ್ಯ ಮುಖಂಡರಾದ ಎನ್‌.ವೆಂಕಟೇಶ್, ಸೇಂಟ್ ಜೋಸೆಫ್ ಕಾಲೇಜಿನ ನಿರ್ದೇಶಕರಾದ ಫಾದರ್ ಜೆರಾಲ್ಡ್ ಡಿ’ಸೌಜ ಎಸ್.ಜೆ., ಪ್ರಕಾಶಕರಾದ ರಾಜಶೇಖರ್‌‌, ಮುಖಂಡರಾದ ಪ್ರಭಾಕರ್‌ ಹಾಜರಿದ್ದರು. ಕಾನೂನು ವಿದ್ಯಾರ್ಥಿ ಪೂರ್ಣಾ ಕಾರ್ಯಕ್ರಮವನ್ನು ನಿರೂಪಿಸಿದರು.


ಇದನ್ನೂ ಓದಿರಿ: ಸಮಾಜವನ್ನು ಬದಲಾಯಿಸುವ ಮುನ್ನ ಯುವಜನರು ತಮ್ಮನ್ನು ಬದಲಾಯಿಸಿಕೊಳ್ಳಬೇಕು- ಕಾಮ್ರೇಡ್ ಪ್ರತಿಭಾ ನಾಯಕ್


+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial