Homeಕರ್ನಾಟಕಇದು ಖುಷಿಯ ವಿಚಾರ; ಆತಂಕದ್ದೂ ಕೂಡ.... ಹನುಮಂತನ ಕತೆಯ ಸಿನಿಮಾಗೆ ಆತನೇ ಹೀರೋ!

ಇದು ಖುಷಿಯ ವಿಚಾರ; ಆತಂಕದ್ದೂ ಕೂಡ…. ಹನುಮಂತನ ಕತೆಯ ಸಿನಿಮಾಗೆ ಆತನೇ ಹೀರೋ!

- Advertisement -
- Advertisement -

ಯಾವುದೇ ಕಲೆಯ ತರಬೇತಿ ಇಲ್ಲದ, ಅಂತಹ ಯಾವ ಹಿನ್ನಲೆ ಅಥವಾ ಪರಿಸರದಲ್ಲಿ ಬೆಳೆಯದೇ ಇರುವ, ಗಾಂಧಿನಗರದಿಂದ 500 ಕಿ.ಮೀ. ದೂರದ ಉತ್ತರ ಕರ್ನಾಟಕದ ಒಂದು ಪುಟ್ಟ ಗ್ರಾಮದ ಶ್ರಮಜೀವಿ ಯುವಕನೊಬ್ಬನಿಗೆ ಸಿನಿಮಾ ಹೀರೊ ಆಗುವ ಅವಕಾಶ ಸಿಕ್ಕಿದೆ. ಇದು ಖುಷಿಯ ವಿಷಯ. ಇಲ್ಲಿ ಆತಂಕಕ್ಕೆ ಕಾರಣವೆಂದರೆ ಹಿಂದಿನ ಇಂತಹ ಪ್ರಸಂಗಗಳನ್ನೆ ನೆನೆದರೆ ಇಂತಹ ಹುಡುಗರು ಸಿನಿಮಾ ಮಂದಿಯ ತೆವಲು ಮತ್ತು ಸ್ವಾರ್ಥಕ್ಕೆ ಬಲಿಯಾಗಿ ತಮ್ಮ ಬದುಕನ್ನೆ ನಾಶ ಮಾಡಿಕೊಂಡ ದುರಂತ ನಮ್ಮ ಮುಂದೆ ಇದೆ.

ಈಗ ಸ ರಿ ಗ ಮ ಪ ಖ್ಯಾತಿಯ ಹನುಮಂತನನ್ನು ಹೀರೋ ಮಾಡಲು ಹೊರಟ ಯುವಕ ಉಡುಪಿ ಜಿಲ್ಲೆಯ ಕುಂದಾಪುರದ ಸಂದೇಶ ಶೆಟ್ಟಿ ಅಜ್ರಿ. ಸಿನಿಮಾ ನುಡಿಕಟ್ಟು ಮತ್ತು ತಂತ್ರಜ್ಞಾನ ಕೌಶಲ್ಯಗಳ ಮೇಲೆ ಈಗ ತಾನೇ ಹಿಡಿತ ಸಾಧಿಸುತ್ತಿರುವ ಈ ಯುವಕ ಗಾಂಧಿನಗರದ ವ್ಯವಹಾರದ ದೃಷ್ಟಿಯಲ್ಲಿ ನೋಡುವುದಾದರೆ ಒಂದರ್ಥದಲ್ಲೇ ಮುಗ್ಧನೇ. ಗಾಂಧಿನಗರ, ಕನಿಷ್ಕಾ ಇತ್ಯಾದಿ ಸಂಕೀರ್ಣ ‘ಸಿನಿ ಸಂತೆ’ಯಿಂದ ದೂರ ಇರುವಾತನೇ.

ನಿರ್ದೇಶಕ ಸಂದೇಶ್

ಮುಂಬೈಯಲ್ಲಿ ಹವ್ಯಾಸಿಯಾಗಿ ಸಿನಿಮಾ ಕೌಶಲ್ಯ ಕಲಿತ ಸಂದೇಶ್ ಈಗಾಗಲೇ ‘ಕತ್ತಲ ಕೋಣೆ’ ಎಂಬ ಸಿನಿಮಾವನ್ನು ನಿರ್ದೇಶಿಸಿ ಕೈಸುಟ್ಟುಕೊಂಡಿದ್ದಾರೆ. ಆ ಕತೆಯಲ್ಲಿ ಕರಾವಳಿಯಲ್ಲಿನ ಗಾಂಜಾ ಮಾಫಿಯಾದ ಚಿತ್ರಣವನ್ನು, ಆ ಮಾಫಿಯಾದ ಸದಸ್ಯರು ನಿಗೂಢವಾಗಿದ್ದರೂ, ಅವರು ಸಾರ್ವಜನಿಕ ಜೀವಮದಲ್ಲಿ ಸಭ್ಯ ಗಣ್ಯರಂತೆ ನಟಿಸುವುದನ್ನು ತೋರಿಸುತ್ತಲೇ, ಯುವಶಕ್ತಿಯ ಚೈತನ್ಯವನ್ನು ಹಿಂಡಿ ಹಾಕುತ್ತಿರುವ ಗಾಂಜಾ ದಂಧೆಯ ಬಗ್ಗೆ ಪೊಲೀಸ್ ವ್ಯವಸ್ಥೆ ಜಾಣಕುರುಡನ್ನು ಪ್ರದರ್ಶಿಸುವುದನ್ನು ತೋರಿಸಲು ಯತ್ನಿಸಿದ್ದಾರಂತೆ. ಅಂದಂತೆ ಈ ಚಿತ್ರದಲ್ಲಿ ಗಾಂಜಾ ಮಾಫಿಯದ ಡಾನ್ ಪತ್ರಿಕೆಯೊಂದನ್ನು ನಡೆಸುತ್ತಿರುತ್ತಾನೆ, ಆತನ ಸಂಸ್ಥೆಯಲ್ಲಿರುವ ಪತ್ರಕರ್ತರಿಗೂ ಇದರ ಅರಿವಿರುವುದಿಲ್ಲವಂತೆ. ಕೊಡಗಿನಲ್ಲಿ ಪ್ರವಾಹ ಸಂಭವಿಸಿದ ಕಾರಣಕ್ಕೆ ಆ ಭಾಗದಲ್ಲಿ ಚಿತ್ರಕ್ಕೆ ಹಿನ್ನಡೆ ಆಯಿತು ಎಂಬುದು ಸಂದೇಶ ಅಂಬೋಣ. ಆದರೆ ಈ ಚಿತ್ರವನ್ನು ಮಾರ್ಕೆಟ್ ಮಾಡುವುದರಲ್ಲಿ ಅವರು ಸಂಪೂರ್ಣ ಸೋತಿದ್ದಾರೆ.

ಈಗ ಅದರಿಂದ ಪಾಠ ಕಲಿತಿರುವೆ ಅಂದಿರುವ ಅವರು, ಈಗಾಗಲೇ ಹಲವು ಹೊಸ ನಿರ್ಮಾಪಕರನ್ನು ಸಂಪರ್ಕಿಸಿದ್ದಾರಂತೆ. ಹಾಡುಹಕ್ಕಿ ಹನುಮಂತನ ಮನೆಗೂ ಹೋಗಿ ಅವರ ಕುಟುಂಬದವರಿಗೆ ಭರವಸೆ ನೀಡಿ ಹನುಮಂತನನ್ನು ಸಿನಿಮಾಕ್ಕೆ ಒಪ್ಪಿಸಿದ್ದಾರೆ.

‘ಹನುಮಂತನಲ್ಲಿ ಮುಗ್ಧತೆ ಇರುವುದು ನಿಜವಾದರೂ ಅದು ಪೂರ್ತಿ ಸತ್ಯವಲ್ಲ. ಬಣ್ಣದ ಜಗತ್ತಿನ ಯಾಮಾರಿಸುವ ಕಲೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಆತ ಅದನ್ನು ನೇರವಾಗಿ ಹೇಳುವುದಿಲ್ಲ, ಅದನ್ನು ತನ್ನ ಆಡುಭಾಷೆಯಲ್ಲಿ ವಂಗ್ಯದೊಂದಿಗೆ ಅಭಿವ್ಯಕ್ತಿಸುತ್ತಾನೆ. ಇನ್ನೊಂದು ವಿಷಯವೆಂದರೆ ಹನುಮಂತನಿಗೆ ದಿಢೀರ್ ಖ್ಯಾತಿಯ ಯಾವ ಗೀಳೂ ಇಲ್ಲ. ಈಗ ಆತ ಬೇರೆ ಬೇರೆ ಊರುಗಳಲ್ಲಿ ಸ್ಟೇಜ್ ಶೋಗಳಲ್ಲಿ ಭಾಗವಹಿಸಿ ಅವರು ಕೊಟ್ಟ ಗೌರವಧನ ಪಡೆಯುತ್ತಿದ್ದಾನೆ. ಜನರಿಂದ ಸಿಗುವ ಪ್ರೀತಿಯೇ ಆತನಿಗೆ ಸಂಪತ್ತಾಗಿದೆ. ಆದರೆ ಲೌಕಿಕ ಬದುಕಿಗೆ ಅದೆಲ್ಲ ಸಾಕಾಗುವುದಿಲ್ಲವಲ್ಲ. ನಮ್ಮ ಸಿನಿಮಾದ ಮೂಲಕ ಆತನ ಗಾಯನ ಕಲೆ ಮತ್ತು ಆತನಲ್ಲಿರುವ ನಟನೆಯನ್ನು ಜನರು ಎದುರು ಇಡುವ ಪ್ರಾಮಾಣಿಕ ಯತ್ನವನ್ನು ಮಾಡುತ್ತೇವೆ’ ಎನ್ನುತ್ತಾರೆ ಸಂದೇಶ್.

ಝೀ ಟಿವಿಯಲ್ಲಿ ಈ ಹಿಂದೆ ಶಿರಹಟ್ಟಿ ಕಡೆಯ ಹನುಮಂತನ ಹೆಸರಿನ ಇನ್ನೊಬ್ಬ ತಳಸಮುದಾದಯದ ಯುವಕ ಪ್ರಶಸ್ತಿ ಪಡೆದ ನಂತರ ಸಿನಿಮಾದಲ್ಲಿ ಹಾಡಲು ಅವಕಾಶ ಎಂದೆಲ್ಲ ಪ್ರಚಾರವಾಯಿತಾದರೂ ಈಗ ಆತನ ಹೆಸರೇ ಇಲ್ಲ. ‘ಜಂಗ್ಲಿ ಜಾಕಿ’ ಹೆಸರಿನ ಸಿನಿಮಾ ಎಂಬ ಎಂಬ ವಂಚಕ ಜಾಲದಲ್ಲಿ ಸಿಕ್ಕ ಆದಿವಾಸಿ ಯುವಕ ರಾಜೇಶ್ ಮಾನಸಿಕ ಅಸ್ವಸ್ಥನಾಗಿ ಆತ್ಮಹತ್ಯೆಯನ್ನು ಮಾಡಿಕೊಂಡ ದುರಂತ ನಮ್ಮ ಮುಂದೆ ಇದೆ.

ಇದರ ಬಗ್ಗೆ ಸ್ಪಷ್ಟ ಅರಿವಿರುವ ಸಂದೇಶ್, ಈ ಸಿನಿಮಾ ಕತೆಯಲ್ಲಿ ಇಂತಹ ವಂಚನೆಯ ವಿಷಯವೂ ಮತ್ತು ಹಳ್ಳುಗಾಡಿನ ಪ್ರತಿಭೆಗಳಿಗೆ ಅವಕಾಶ ಕೊಡುತ್ತಲೇ ಅವರ ಸಹಜ ಸ್ವಭಾವವನ್ನು ಟಿಆರ್ಪಿಗೆಂದು ಬಳಸಿಕೊಳ್ಳುವ ಆತುರದಲ್ಲಿ ಅವರನ್ನ ಬಫುನ್‍ಗಳನ್ನಂತೆ ಮಾಡುವ ಕ್ರೌರ್ಯವನ್ನು ಸೂಕ್ಷ್ಮವಾಗಿ ತೋರಿಸುತ್ತಿದ್ದೇವೆ. ಹನುಮಂತನ ಬದುಕಿನ ಚಿತ್ರಣದ ವಿವರಗಳು ಮನೋಜ್ಞವಾಗಿ ಮೂಡಿ ಬರಲಿವೆ ಎಂದರು ಸಂದೇಶ್.

ಹಾಡು ಮತ್ತು ಗಾಯನ ಕಲೆ ಹಿಂದಿರುವ ಸಾಂಸ್ಕೃತಿಕ ರಾಜಕಾರಣ, ಆ ಕಾರಣಕ್ಕಾಗಿ ಸಮುದಾಯವೊಂದರ ಹಿಡಿತದಲ್ಲಿ ಈ ಕಲೆಗಳು ಬಂಧಿಯಾಗಿದ್ದ ಇತುಹಾಸವನ್ನೂ ಸಂದೇಶ್ ನಮ್ಮ ಮುಂದಿಡಲಿದ್ದಾರಂತೆ. ಹನುಮಂತ ಮತ್ತು ಸಂದೇಶ ಇಬ್ಬರಿಗೂ ಒಳ್ಳೆಯದಾಗಲಿ. ನಮ್ಮಲ್ಲಿರುವ ಆತಂಕವನ್ನು ಸಂದೇಶ್ ದೂರ ಮಾಡಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಧನ್ಯವಾದ ಸರ್ ಕಲಾವಿದರು ನಿಮ್ಮಂತಹ ಪತ್ರಕರ್ತರ ಬರಹಗಳಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ,

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...