“ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?” ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು.
ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ ‘ಕರ್ನಾಟಕ ಮುಸ್ಲಿಂ ಸಮಾವೇಶ’ವು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಸಾಂವಿಧಾನಿಕ ಜವಾಬ್ದಾರಿಗಳನ್ನು ನೆನಪಿಸುವ ಜೊತೆಗೆ, ಮುಸ್ಲಿಮರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿತು.
“ಸಮುದಾಯದ ಕುರಿತ ಸರ್ಕಾರದ ನಿರ್ಲಕ್ಷ್ಯವನ್ನು ಇನ್ನು ಮುಂದೆ ಸಹಿಸಿಕೊಂಡು ಸುಮ್ಮನಿರುವುದಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಸರ್ಕಾರದ ಬಳಿ ಆಗ್ರಹಿಸಲು ಈ ನಾಡಿನ ಮುಸ್ಲಿಮರಿಗೆ ಸಂಪೂರ್ಣ ಹಕ್ಕಿದೆ. ನಾವು ನಿಮಗೆ ಮತ ಹಾಕಿದ್ದೇವೆ. ನಿಮ್ಮ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದೇವೆ. ಅದಕ್ಕಾಗಿ ಇಲ್ಲಿ ನಿಂತು ಕೇಳುವ ಸಂಪೂರ್ಣ ಹಕ್ಕು ನಮಗಿದೆ. ನಮ್ಮ ಆಗ್ರಹಗಳನ್ನು ಆಲಿಸಿ, ಜಾರಿಗೊಳಿಸುವುದು ನಿಮ್ಮ ಕರ್ತವ್ಯವಾಗಿದೆ” ಎಂದು ಸಮಾವೇಶ ಎಚ್ಚರಿಸಿತು.
ಸುಮಾರು 40 ಮುಸ್ಲಿಂ ಸಂಘಟನೆಗಳ ‘ಕರ್ನಾಟಕ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ’ ಆಯೋಜಿಸಿದ್ದ ಈ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ‘ಕಾಂಗ್ರೆಸ್ ಹೇಳಿದ್ದೇನು? ಮಾಡಿದ್ದೇನು? ಮುಂದೇನು?’ ಎಂಬ ಸಮಗ್ರ ವರದಿಯನ್ನು ಸಮಾವೇಶದಲ್ಲಿ ಬಿಡುಗಡೆಗೊಳಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.

ಸಮಾವೇಶದಲ್ಲಿ ಆಶಯ ಮಾತನಾಡಿದ ಒಕ್ಕೂಟದ ಮುಖಂಡರಾದ ಮುಹಮ್ಮದ್ ಯಾಸಿನ್ ಮಲ್ಪೆಯವರು ಇಡೀ ಸಮಾವೇಶದ ಉದ್ದೇಶವನ್ನು ವಿವರವಾಗಿ ಮಂಡಿಸಿದರು ಮತ್ತು ಸಮಾವೇಶದ ಸುತ್ತ ಎದ್ದಿರುವ ಪ್ರಶ್ನೆಗಳಿಗೆ ಮಾರ್ಮಿಕವಾದ ಪ್ರತಿಕ್ರಿಯೆಗಳನ್ನೂ ನೀಡಿದರು.
“ಗೆದ್ದವರ ಉತ್ತರದಾಯಿತ್ವವನ್ನು, ಗೆಲ್ಲಿಸಿದವರು ಪ್ರಶ್ನಿಸುವಂತಹ ಈ ಸಮಾವೇಶ ಅತ್ಯಂತ ಪ್ರಜಾತಾಂತ್ರಿಕವಾಗಿದೆ. ಈ ಸಮಾವೇಶದ ಹಿಂದೆ ಯಾರಿದ್ದಾರೆ? ಅಂತ ಕೇಳಲಾಗುತ್ತಿದೆ. ಈ ಸಮಾವೇಶದ ಹಿಂದೆ ಯಾರೂ ಇಲ್ಲ. ಯಾರೆಲ್ಲಾ ಇದ್ದಾರೋ ಅವರೆಲ್ಲರೂ ಮುಂದೆಯೇ ಇದ್ದಾರೆ. ಇರುವವರೆಲ್ಲರೂ ಧೈರ್ಯದಿಂದ ಮುಂದೆ ನಿಂತು ಈ ಸಮಾವೇಶವನ್ನು ಆಯೋಜಿಸಿದ್ದಾರೆ. ಈ ಸಮಾವೇಶದ ಮುಂದೆ ಇರುವವರೆಲ್ಲರೂ ಈ ರಾಜ್ಯದ ಮುಸ್ಲಿಮರು. ಈ ಸಮಾವೇಶವನ್ನು ಬೆಂಬಲಿಸಿ, ವೇದಿಕೆಯ ಮೇಲೆ ಕುಳಿತವವರೆಲ್ಲರೂ ವಿವಿಧ ಮುಸ್ಲಿಂ ಸಂಘಟನೆಗಳ ನಾಯಕರು. ಇಲ್ಲಿಗೆ ಬಂದವರೆಲ್ಲರೂ ವಿವಿಧ ಜಿಲ್ಲೆಗಳ ಮಸೀದಿ, ಜಮಾತ್‌ಗಳ ಹೊಣೆಗಾರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಉಲಮಾಗಳು, ಯುವಕರು, ಸಾಮಾಜಿಕ ಕಾರ್ಯಕರ್ತರು. ಇಲ್ಲಿರುವ ಪ್ರತಿಯೊಬ್ಬ ಮುಖಂಡರ ಹಿಂದೆ ನೂರಾರು ಬೆಂಬಲಿಗರಿದ್ದಾರೆ, ಮತದಾರರಿದ್ದಾರೆ. ಅವರೆಲ್ಲರೂ ಮುಸ್ಲಿಮರನ್ನು ಕಾಂಗ್ರೆಸ್ ನಡೆಸಿಕೊಳ್ಳುತ್ತಿರುವ ರೀತಿಯಿಂದ ಬೇಸತ್ತು, ‘ನೀವು ಚುನಾವಣೆಯಲ್ಲಿ ನೀಡಿದ್ದ ಆಶ್ವಾಸನೆಗಳು ಏನಾದವು?’ ಎಂದು ಕೇಳುವುದಕ್ಕಾಗಿ ಇಲ್ಲಿ ಬಂದು ಸೇರಿದ್ದಾರೆ” ಎಂದು ಯಾಸಿನ್ ಮಲ್ಪೆ ಸ್ಪಷ್ಟಪಡಿಸಿದರು.
“ಮುಸ್ಲಿಮರು ಸಮಾವೇಶ ಮಾಡಿದರೆ, ಸಾಮಾಜಿಕ ಧ್ರುವೀಕರಣಕ್ಕೆ ಕಾರಣವಾಗುವುದಿಲ್ಲವೇ ಎಂದು ಕೇಳುತ್ತಾರೆ. ಹೀಗೆ ಭಾವಿಸುವವರಿಗೆ ಹೇಳುವುದಿಷ್ಟೇ: ಈ ರಾಜ್ಯದ ಒಕ್ಕಗರು, ಲಿಂಗಾಯತರು, ಬ್ರಾಹ್ಮಣರು, ದಲಿತರು, ವಿವಿಧ ಸಮುದಾಯಗಳು ಹಾಗೂ ರೈತ, ಕಾರ್ಮಿಕ ಇತ್ಯಾದಿ ವರ್ಗಗಳು ತಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಸಭೆ ಸಮಾರಂಭ ಸಮಾವೇಶ ಪ್ರತಿಭಟನೆ ಎಲ್ಲವನ್ನೂ ಮಾಡುತ್ತವೆ. ಅದು ಅವರ ಸಾಂವಿಧಾನಿಕ ಹಕ್ಕು. ಅವರ ಹಕ್ಕುಗಳನ್ನು ಆಲಿಸಿ, ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯ. ಆದರೆ ಆ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ನಡೆಸುವ ಸಮಾವೇಶಗಳು ಧ್ರುವೀಕರಣಕ್ಕೆ ಕಾರಣವಾಗುತ್ತವೆ ಎಂದು ಯಾರೂ ಎಂದೂ ವಾದಿಸುವುದಿಲ್ಲ. ಹೀಗಿರುವಾಗ ಮುಸ್ಲಿಮರು ಸಮಾವೇಶ ಮಾಡಿದರೆ ಮಾತ್ರ ಧ್ರುವೀಕರಣ ಆಗುತ್ತದೆ ಎಂಬ ಆತಂಕ ಏಕೆ” ಎಂದು ಪ್ರಶ್ನಿಸಿದರು.
“ಸರಕಾರ ನೀಡಿದ್ದ ಭರವಸೆಗಳನ್ನು ಸರ್ಕಾರಕ್ಕೆ ಮುಸ್ಲಿಂ ಸಮುದಾಯ ನೆನಪಿಸುತ್ತಿದೆ. ಮಾತ್ರವಲ್ಲ, ನಮ್ಮಿಂದ ಮತ ಪಡೆದು ನಮ್ಮನ್ನು ನಿರ್ಲಕ್ಷಿಸುತ್ತಿದ್ದೀರಿ ಎಂದು ನೆನಪಿಸಲು ಈ ಸಮಾವೇಶ ನಡೆಯುತ್ತಿದೆ. ಇಂದು ನಾವು ಸಮಾಜದ ಮುಂದೆ ಹೊಸ ಬೇಡಿಕೆಗಳನ್ನು ಇಡುತ್ತಿಲ್ಲ. ನಮ್ಮ ಬೇಡಿಕೆಗಳು ಈಡೇರಿಸಲಾಗದ ಬೇಡಿಕೆಗಳಲ್ಲ. ಎಲ್ಲವೂ ನ್ಯಾಯಯುತ ಮತ್ತು ಸಂವಿಧಾನಬದ್ಧ ಬೇಡಿಕೆಗಳಾಗಿವೆ. ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡಿ ನಡೆಸಿದ ಜಾತಿ ಸಮೀಕ್ಷೆಯನ್ನು ಬಿಡುಗಡೆ ಮಾಡಬಾರದು ಎನ್ನುವಂತಹ ಸಂವಿಧಾನ ವಿರೋಧಿ ಬೇಡಿಕೆಯನ್ನು ನಾವು ಮಂಡಿಸುತ್ತಿಲ್ಲ. ಬದಲಾಗಿ ಸರ್ಕಾರವೇ ನೀಡಿರುವ ಭರವಸೆಗಳನ್ನು ಈಡೇರಿಸಿ ಎಂದು ಮಾತ್ರವೇ ಹೇಳುತ್ತಿದ್ದೇವೆ” ಎಂದು ಛಾಟಿ ಬೀಸಿದರು.
“ಇದು ಯಾರ ವಿರುದ್ಧವೂ ನಡೆಯುತ್ತಿರುವ ಸಮಾವೇಶವಲ್ಲ. ಇದರ ಹಿಂದೆ ಸಂಘರ್ಷದ ಉದ್ದೇಶವಿಲ್ಲ. ನಮಗೆ ಯಾರೊಂದಿಗೂ ದ್ವೇಷವಿಲ್ಲ. ನಿಂದನೆ ಬೈಗುಳಗಳಿಗೆ ಆಸ್ಪದವಿಲ್ಲ. ಆದರೆ ನಮ್ಮನ್ನು (ಮುಸ್ಲಿಮರನ್ನು) ಕುರಿತ ಸರ್ಕಾರದ ನಿರ್ಲಕ್ಷ್ಯವನ್ನು ಇನ್ನು ಮುಂದೆ ಸಹಿಸಿಕೊಂಡು ಸುಮ್ಮನಿರುವುದಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಸರ್ಕಾರದ ಬಳಿ ಆಗ್ರಹಿಸಲು ಈ ನಾಡಿನ ಮುಸ್ಲಿಮರಿಗೆ ಸಂಪೂರ್ಣ ಹಕ್ಕಿದೆ. ನಾವು ನಿಮಗೆ ಮತ ಹಾಕಿದ್ದೇವೆ. ನಿಮ್ಮ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದೇವೆ. ಅದಕ್ಕಾಗಿ ಇಲ್ಲಿ ನಿಂತು ಕೇಳುವ ಸಂಪೂರ್ಣ ಹಕ್ಕು ನಮಗಿದೆ. ಆ ಆಗ್ರಹವನ್ನು ಆಲಿಸಿ, ಜಾರಿಗೊಳಿಸುವುದು ನಿಮ್ಮ ಕರ್ತವ್ಯವಾಗಿದೆ” ಎಂದರು.

ಚುನಾವಣಾ ಪೂರ್ವದ ಸನ್ನಿವೇಶಗಳು ಮತ್ತು ಅಂದು ಕಾಂಗ್ರೆಸ್ ಕೊಟ್ಟಿದ್ದ ಮಾತುಗಳನ್ನು ಯಾಸಿನ್ ದಾಖಲಿಸಿದರು.
“ಬಿಜೆಪಿ ಅಧಿಕಾರದ ಅವಧಿಯಲ್ಲಿ ಸರ್ಕಾರದ ಘೋರ ಪಕ್ಷಪಾತಿ ಮತ್ತು ಕೋಮುವಾದಿ ಧೋರಣೆಗಳಿಂದಾಗಿ ಸಮಾಜದಲ್ಲಿ ಅಶಾಂತಿ ಅಪನಂಬಿಕೆಗಳು ಅಪಾರವಾಗಿದ್ದವು. ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಭಾರೀ ಹಿಂಸಾಚಾರ ಮತ್ತು ದೌರ್ಜನ್ಯದ ಘಟನೆಗಳು ನಡೆದಿದ್ದವು. ಮುಸ್ಲಿಮರ ಅಸ್ಮಿತೆ, ಬದುಕು, ಜೀವನೋಪಾಯಗಳ ಮೇಲೆಯೂ ಯೋಜಿತ ದಾಳಿ ನಡೆದಿದ್ದವು. ಇಂತಹ ಸನ್ನಿವೇಶದಲ್ಲಿ ಚುನಾವಣೆ ಎದುರಾದಾಗ ಕಾಂಗ್ರೆಸ್ ನೀಡಿದ ಆಶ್ವಾಸನೆಗಳಿಂದ ಈ ಸಮುದಾಯದಲ್ಲಿ ಆಶಾವಾದ ಬೆಳೆಯಿತು. ಕಾಂಗ್ರೆಸ್ ನಾಯಕರು ಅಂದಿನ ಬಿಜೆಪಿ ಸರ್ಕಾರದ ಒಂದೊಂದು ತಪ್ಪನ್ನು ಪ್ರಸ್ತಾಪಿಸಿ, ಅದನ್ನು ಸರಿಪಡಿಸುವುದೇ ನಮ್ಮ ಆದ್ಯತೆಯಾಗಿರುತ್ತದೆ ಎಂದು ವಾಗ್ದಾನ ಮಾಡಿದ್ದರು. ಜಾತ್ಯತೀತ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ, ಎಲ್ಲರಿಗೂ ನ್ಯಾಯ ಸಮಾನತೆಯನ್ನು ಒದಗಿಸುವ ದ್ವೇಷವನ್ನು ಹತ್ತಿಕ್ಕಿ, ಸಹಬಾಳ್ವೆಯನ್ನು ಪ್ರೋತ್ಸಾಹಿಸುವ, ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವ ಸರಕಾರ ನಮ್ಮದಾಗಲಿದೆ ಎಂದು ಕಾಂಗ್ರೆಸ್ ಘೋಷಿಸಿತ್ತು” ಎಂದರು.
“ಕರ್ನಾಟಕವನ್ನು ಮತ್ತೆ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವುದಾಗಿ ಕಾಂಗ್ರೆಸ್ ಭರವಸೆ ಕೊಟ್ಟಿತ್ತು. ಆದ್ದರಿಂದ ರಾಜ್ಯದ ಮುಸ್ಲಿಮರು ಒಗ್ಗಟ್ಟಾಗಿ, ಮತಗಳು ಚದುರು ಹೋಗದಂತೆ ನೋಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿದರು. ಇನ್ನೊಂದು ಪಕ್ಷದ ಆಯ್ಕೆಗೆ ಅವಕಾಶವಿದ್ದರೂ ಸುಭದ್ರ ಸರ್ಕಾರದ ರಚನೆಗಾಗಿ ಕಾಂಗ್ರೆಸ್ ಪಕ್ಷವನ್ನು ಮುಸ್ಲಿಮರು ಬೆಂಬಲಿಸಿದರು. ಸಂಪೂರ್ಣವಾಗಿ ಕಾಂಗ್ರೆಸ್ ಪರ ನಿಂತರು. ಯಾವುದೇ ಸಮುದಾಯಕ್ಕಿಂತ ಹೆಚ್ಚಿನ ಮತಗಳನ್ನು ಮುಸಲ್ಮಾನರು ಕಾಂಗ್ರೆಸ್ ಪಕ್ಷಕ್ಕೆ ನೀಡಿರುವುದನ್ನು ಚುನಾವಣೋತ್ತರ ಅಂಕಿ-ಅಂಶಗಳು ಸಾಬೀತುಪಡಿಸಿವೆ. ಪಕ್ಷದ ನಾಯಕರು ಕೂಡ ಇದನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಯಾರಿಗೂ ಅನುಮಾನವಿಲ್ಲ. ಆದರೆ ಅದಾಗಿ ಮೂರು ವರ್ಷಗಳು ಕಳೆದಿವೆ. ಸರಕಾರಕ್ಕೆ ಇನ್ನೆರಡು ವರ್ಷಗಳು ಬಾಕಿ ಉಳಿದಿವೆ. ಮುಸ್ಲಿಮರಿಗೆ ಕಾಂಗ್ರೆಸ್ ನೀಡಿದ ಭರವಸೆಗಳು ಏನಾದವು ಎಂದು ಪ್ರಶ್ನಿಸುವ ಕಾಲ ಬಂದಿದೆ. ಏನೆಲ್ಲವನ್ನು ಈಡೇರಿಸಿದೆ, ಏನೆಲ್ಲ ಈಡೇರಿಸಿಲ್ಲ, ಮುಸ್ಲಿಮರೊಂದಿಗೆ ಕಾಂಗ್ರೆಸ್ ಸರ್ಕಾರ ಹೇಗೆ ನಡೆದುಕೊಂಡಿದೆ ಎಂಬುದನ್ನು ನೆನಪಿಸಲು ಮತ್ತು ಆಶ್ವಾಸನೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಈ ಸಮಾವೇಶ ನಡೆಯುತ್ತಿದೆ” ಎಂದು ವಿವರಿಸಿದರು.
ಸಮಾವೇಶದ ಪರವಾಗಿ ಯಾಸಿನ್ ಮಲ್ಪೆಯವರು ಹತ್ತು ವಿಚಾರಗಳನ್ನು ಸರ್ಕಾರದ ಮುಂದೆ ಇಟ್ಟರು.
1. ನೀವು ಅಧಿಕಾರಕ್ಕೆ ಬರುವ ಮೊದಲು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವೇ ದ್ವೇಷ ಹರಡಲು ಪ್ರೋತ್ಸಾಹ ನೀಡುತ್ತಿತ್ತು. ಮುಸ್ಲಿಮರ ವಿರುದ್ಧ ದ್ವೇಷ ಭಾಷಣ, ದ್ವೇಷ ಅಪರಾಧ ಮತ್ತು ಪ್ರಚಾರ ವ್ಯಾಪಕವಾಗಿ ನಡೆಯುತ್ತಿತ್ತು. ನೀವು ಕಡಿವಾಣ ಹಾಕುವುದಾಗಿ ಆ ಸಂಘಟನೆಗಳ ಹೆಸರನ್ನು ಉಲ್ಲೇಖಿಸಿ ಹೇಳಿದ್ದೀರಿ. ಸರ್ಕಾರ ಬಂದ ಆರಂಭದಲ್ಲಿ ಮುಖ್ಯಮಂತ್ರಿಯವರು, ಉಪಮುಖ್ಯಮಂತ್ರಿಯವರು, ಕೆಲ ಸಚಿವರು ಈ ವಿಚಾರವನ್ನು ಪುನರುಚ್ಚರಿಸಿದರು. ಸರ್ಕಾರ ಬಂದು ಮೂರು ವರ್ಷವಾಯಿತು ಈಗ ನಿಮಗೇನು ಆಯಿತು? ಇವತ್ತಿಗೂ ದ್ವೇಷಕೋರರು ನಿರಾತಂಕವಾಗಿ ಓಡುತ್ತಿದ್ದಾರೆ ಏಕೆ ಹೀಗಾಗಿದೆ? ಎಂದು ಮುಸ್ಲಿಮರು ಸರ್ಕಾರವನ್ನು ಕೇಳುತ್ತಿದ್ದಾರೆ. ದ್ವೇಷ ಭಾಷಣವನ್ನು ತಡೆಯೋದು, ಅಪರಾಧಿಗಳಿಗೆ ಶಿಕ್ಷೆ ಕೊಡುವುದು ಸರ್ಕಾರ ಮುಸ್ಲಿಮರಿಗೆ ಮಾಡುವ ಉಪಕಾರವಲ್ಲ. ಅದು ಸರ್ಕಾರದ ಕರ್ತವ್ಯ; ಬಂಧುತ್ವವನ್ನು ಉಳಿಸಲು ಸರ್ಕಾರ ನಿರ್ವಹಿಸಬೇಕಾದ ಸಾಂವಿಧಾನಿಕ ಜವಾಬ್ದಾರಿ. ದ್ವೇಷ ಹರಡುವವರನ್ನು ನಿಯಂತ್ರಿಸಿ ಮತ್ತು ನಿರ್ಬಂಧಿಸಿ ಈ ನಾಡನ್ನು ನೀವು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾರ್ಪಡಿಸಬೇಕು.
2.ಹಿಜಾಬ್ ನಿಷೇಧಿಸಿ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣವನ್ನು ಕಿತ್ತುಕೊಳ್ಳಲಾಗಿತ್ತು. ಹಿಜಾಬ್‌ಗೆ ಅವಕಾಶ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ನಾವು ಸಮಾವೇಶವನ್ನು ಘೋಷಿಸುವವರೆಗೂ ಹಿಜಾಬ್ ಆದೇಶ ಹಾಗೆಯೇ ಇತ್ತು. ಈ ಸಮಾವೇಶಕ್ಕೆ ಎರಡು ದಿನ ಹಿಂದೆಯಷ್ಟೇ ನಮ್ಮ ಬೇಡಿಕೆಗಳಲ್ಲಿ ಒಂದಾದ ಹಿಜಾಬ್ ನಿಷೇಧವನ್ನು ಘೋಷಿಸಲಾಗಿದೆ. ಸರ್ಕಾರವನ್ನು ಈ ವಿಚಾರದಲ್ಲಿ ಸ್ವಾಗತಿಸುತ್ತೇವೆ. ಆದರೆ ಬಿಜೆಪಿ ಒಂದು ದಿನದಲ್ಲಿ ಜಾರಿಗೆ ತಂದ ನಿಷೇಧವು ಮೂರು ವರ್ಷ ಹಾಗೆ ಇದ್ದದ್ದು ಯಾಕೆ? ಅದಕ್ಕಾಗಿ ಒಂದು ಸಮಾವೇಶ ನಡೆಯಬೇಕಾಗಿ ಬಂದಿದ್ದಕ್ಕೆ ತೀವ್ರ ವಿಷಾದವಿದೆ.
3.ಸಂವಿಧಾನಬದ್ಧವಾಗಿ ಮುಸ್ಲಿಮರಿಗೆ ನೀಡಲಾಗಿದ್ದ 2ಬಿ ಮೀಸಲಾತಿಯನ್ನು ಬಿಜೆಪಿ ಸರ್ಕಾರ ರದ್ದು ಮಾಡಿತ್ತು. ಆದರೆ ನೀವು ಮರುಸ್ಥಾಪಿಸುವ ಭರವಸೆ ಈಡೇರಿಲ್ಲ. ಅನ್ಯಾಯವಾಗಿ ಕಿತ್ತುಕೊಂಡ ಮೀಸಲಾತಿಯನ್ನು ಇನ್ನೂ ಮರಳಿಸಿಲ್ಲ. ಸುಪ್ರೀಂ ಕೋರ್ಟ್ ತಡೆ ನೀಡಿ ಮೂರು ವರ್ಷವಾಗಿದೆ. ಅದರ ಶಾಸನಾತ್ಮಕ ಜಾರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯಾಂಗದ ಪರಿಪೂರ್ಣ ಆದೇಶ ಪಡೆದುಕೊಳ್ಳಲು ಯಾವುದೇ ಪ್ರಯತ್ನವನ್ನೂ ಮಾಡಿಲ್ಲ. ಈ 2ಬಿ ಮೀಸಲಾತಿ ತಕ್ಷಣ ಜಾರಿಗೆ ತರಲು ಸಮಾವೇಶ ಆಗ್ರಹಿಸುತ್ತದೆ.
4.ಮುಸ್ಲಿಮರಿಗೆ ಹಿಂಸೆ ಕೊಡುವ ಏಕಮಾತ್ರ ಉದ್ದೇಶದಿಂದ ಬಿಜೆಪಿ ಜಾರಿಗೆ ತಂದ ಗೋಹತ್ಯೆ ನಿಷೇಧ ಕಾಯ್ದೆ, ಇಂದು ರೈತರಿಗೆ, ಕಾರ್ಮಿಕರಿಗೆ, ಮಾಂಸದ ವ್ಯಾಪಾರಿಗಳಿಗೆ ಹಾಗೂ ಜಾನುವಾರು ಸಾಗಾಟಗಾರರ ಪಾಲಿಗೆ ಮರಣಶಾಸನವಾಗಿ ಮಾರ್ಪಟ್ಟಿದೆ. ನಕಲಿ ಗೋರಕ್ಷಕರು ದಾಳಿ ನಡೆಸಲು ಮತ್ತು ಲೂಟಿ ಮಾಡಲು ಈ ಕಾಯ್ದೆ ಸುವರ್ಣವಕಾಶ ನೀಡಿದೆ. ಅಂತಹ ಜನವಿರೋಧಿ ಕಾಯ್ದೆಯನ್ನು ವಾಪಸ್ ಪಡೆಯುವ ಅಥವಾ ತಿದ್ದುಪಡಿ ಮಾಡುವ ಭರವಸೆ ನೀಡಲಾಗಿತ್ತು. ಆದರೆ ಅದು ಕೂಡ ಈವರೆಗೆ ನಿಮ್ಮಿಂದ ಸಾಧ್ಯವಾಗಿಲ್ಲ.
5.ಮುಸ್ಲಿಮರಿಗೆ ಕಿರುಕುಳ ನೀಡುವ ದುರದ್ದೇಶದಿಂದ ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಜಾರಿಗೆ ತಂದಿತ್ತು. ವಾಪಸ್ ಪಡೆಯುವುದಾಗಿ ನಿರ್ಧರಿಸಿದರೂ ಸದನದಲ್ಲಿ ಮಂಡಿಸದೆ ಬಾಕಿ ಇಡಲಾಗಿದೆ. ಯಾಕೆ ದ್ವಂದ್ವ ನೀತಿಯನ್ನು ಅನುಸರಿಸುತ್ತೀರಿ ಎಂದು ಸಮಾವೇಶ ಪ್ರಶ್ನಿಸುತ್ತದೆ. ಕೂಡಲೇ ಈ ಸಂವಿಧಾನ ವಿರೋಧಿ ಕಾಯ್ದೆಯನ್ನು ಹಿಂಪಡೆದು ಜನರ ಧಾರ್ಮಿಕ ಸ್ವಾತಂತ್ರ್ಯ ರಕ್ಷಿಸಬೇಕು.
6.ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಕಾಂಗ್ರೆಸ್‌ನ ಧೋರಣೆಯು ತೀವ್ರ ನಿರಾಸೆ ತಂದಿದೆ. ಸಮುದಾಯದಲ್ಲಿ ಅಸಮಾಧಾನವಿದೆ. ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 13. ಕಾಂಗ್ರೆಸ್‌ನ 136 ಎಂಎಲ್ಎಗಳ ಪೈಕಿ 9 ಮಂದಿ ಮುಸ್ಲಿಮರಿದ್ದಾರೆ ಅಷ್ಟೇ. ನಿಮ್ಮ ಸರ್ಕಾರ ಬಂದ ಮೇಲೆ ನಡೆದ 15 ವಿಧಾನಸಭಾ ಸೀಟುಗಳ ಆಯ್ಕೆಯಲ್ಲಿ ಒಬ್ಬ ಮುಸ್ಲಿಮರಿಗೆ ಮಾತ್ರ ಸ್ಥಾನ ಸಿಕ್ಕಿದೆ. ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲೂ ಟಿಕೆಟ್ ನೀಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಆ ಕುರಿತು ಯಾವುದೇ ಬೇಡಿಕೆಯನ್ನು ನೀವು ಪರಿಗಣಿಸುತ್ತಿಲ್ಲ. ಬೇಡಿಕೆ ಇಟ್ಟಿದ್ದೇ ತಪ್ಪು ಎಂದು ನಡೆಸಿಕೊಳ್ಳಲಾಗುತ್ತದೆ ಎಂದರೆ ಏನಿದರ ಅರ್ಥ? ಮುಸ್ಲಿಮರು ಕೇವಲ ವೋಟು ಹಾಕಿಕೊಂಡು ಇರಬೇಕಾ? ಯಾವ ಹಕ್ಕನ್ನು ಕೇಳಬಾರದು ಎಂದು ಬಯಸುತ್ತಿದ್ದೀರಾ? ಎಂದು ಈ ಸಮಾವೇಶ ಕೇಳುತ್ತದೆ. ಸಚಿವ ಸಂಪುಟ, ವಿಧಾನಸಭೆ, ವಿಧಾನಪರಿಷತ್ ಮಾತ್ರವಲ್ಲದೆ ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲೂ ಮುಸ್ಲಿಂ ಪ್ರಾತಿನಿಧ್ಯ ತೀರಾ ಕಡಿಮೆ ಇದೆ. ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರಲ್ಲಿ ಒಬ್ಬನೇ ಒಬ್ಬ ಮುಸ್ಲಿಮನಿಲ್ಲ. ಮುಸ್ಲಿಮರಿಗೆ ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಸಮಾವೇಶ ಆಗ್ರಹಿಸುತ್ತದೆ.
7.ಮುಸ್ಲಿಮರಿಗೆ ಸಾವಿರ ಕೋಟಿ ರೂ.ಗಳ ಅನುದಾನ ಮೀಸಲಿಡುವುದಾಗಿ ಭರವಸೆ ನೀಡಲಾಗಿತ್ತು. ಅರ್ಧದಷ್ಟು ಹಣವನ್ನು ನೀಡಿಲ್ಲ. ಇದರಿಂದ ಸಮುದಾಯದ ಶಿಕ್ಷಣ, ಅಭಿವೃದ್ಧಿ ಹಿಂದುಳಿದಿದೆ. ತಕ್ಷಣ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಸಮಾವೇಶ ಆಗ್ರಹಿಸಿದೆ.
8.ವಕ್ಫ್ ಆಸ್ತಿಗಳ ರಕ್ಷಣೆಯಾಗಿಲ್ಲ. ಕೇಂದ್ರ ಸರ್ಕಾರ ದುರದ್ದೇಶಪೂರಿತವಾಗಿ ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಪರಿಣಾಮಕಾರಿಯಾಗಿ ವಿರೋಧಿಸಲಿಲ್ಲ. ಮುಸ್ಲಿಮರ ಹಕ್ಕುಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಯಾವುದೇ ಆಸಕ್ತಿಯನ್ನು ತೋರಿಸಲಿಲ್ಲ. ಇದಕ್ಕೆ ಸಮಾವೇಶ ಅಸಮಾಧಾನ ವ್ಯಕ್ತಪಡಿಸುತ್ತದೆ ಮತ್ತು ವಕ್ಫ್ ಆಸ್ತಿಗಳ ರಕ್ಷಣೆಗೆ ಆಗ್ರಹಿಸುತ್ತದೆ.
9.ಜಾತಿ ಸಮೀಕ್ಷೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ದುರ್ಬಲ ವರ್ಗಗಳಿಗೆ, ದಲಿತ ದಮನಿತರಿಗೆ ಅನ್ಯಾಯ ಮಾಡಿದೆ ಮತ್ತು ನಿರಾಸೆ ಉಂಟು ಮಾಡಿದೆ. ಸಿದ್ದರಾಮಯ್ಯನವರ ಮೊದಲ ಅಧಿಕಾರವಧಿಯಲ್ಲಿ ಅವರೇ ಮಾಡಿಸಿದ್ದ ಕಾಂತರಾಜ ಆಯೋಗದ ವರದಿಯನ್ನು ಜಾರಿ ಮಾಡಿ ಈ ನಾಡಿನ ಎಲ್ಲ ವರ್ಗಗಳಿಗೆ ನ್ಯಾಯ ಒದಗಿಸಬೇಕಿತ್ತು. ಅದು ಐತಿಹಾಸಿಕ ದಾಖಲೆಯಾಗಿ ಇಡೀ ದೇಶದಲ್ಲಿ ಮಾದರಿಯಾಗುತ್ತಿತ್ತು. ಆದರೆ ಕೆಲವೇ ಕೆಲವು ಬಲಾಢ್ಯ ಸಮುದಾಯಗಳ ಒತ್ತಡಕ್ಕೆ ಮಣಿದು ಆ ವರದಿಯನ್ನು ಬದಿಗಿಟ್ಟು ಇನ್ನೊಂದು ವರದಿಯನ್ನು ಮಾಡಿದಿರಿ. ಮಧುಸೂದನ ನಾಯ್ಕ ಆಯೋಗದ ವರದಿಯೂ ಮಂಡನೆಯಾಗಿಲ್ಲ. ಕೂಡಲೇ ಜಾತಿ ಸಮೀಕ್ಷೆ ವರದಿಯನ್ನು ಜಾರಿಗೊಳಿಸಬೇಕೆಂದು ಸಮಾವೇಶ ಆಗ್ರಹಿಸುತ್ತದೆ. ಮುಸ್ಲಿಂ ಸಮುದಾಯಗಳಲ್ಲಿ ಹಿಂದುಳಿದಿರುವ ನದಾಫ್, ಪಿಂಜಾರ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
10. ಮುಸ್ಲಿಂ ವಿದ್ಯಾರ್ಥಿಗಳಿಗೆ ಈ ಸರ್ಕಾರದಿಂದ ಒಂದಿಷ್ಟು ಒಳ್ಳೆಯ ಕೆಲಸಗಳು ಆಗಿವೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಅದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಆದರೆ ಅದ್ಯಾವುದೂ ತೃಪ್ತಿಕರವಾಗಿಲ್ಲ ಎಂಬುದನ್ನು ಗಮನಕ್ಕೆ ತರುತ್ತೇವೆ. ವಿದ್ಯಾರ್ಥಿವೇತನದ ಸಮರ್ಪಕ ವಿತರಣೆ, ವಸತಿ ನಿಲಯ ನಿರ್ವಹಣೆ ಮೊದಲಾದ ವಿಚಾರಗಳಲ್ಲಿ ಬಹಳ ಕೆಲಸಗಳು ಆಗಬೇಕಿದೆ. ಮೌಲಾನಾ ಆಝಾದ್ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ. ಅವುಗಳನ್ನು ಅಭಿವೃದ್ಧಿಪಡಿಸಬೇಕಿದೆ.
ಕೊನೆಯದಾಗಿ, ಎಸ್‌ಐಆರ್ ಸಂಬಂಧಿಸಿದ್ದು, ಕಾಂಗ್ರೆಸ್ ನೀಡಿದ ಭರವಸೆಗಳಿಗೆ ಹೊರತಾದ ಬೇಡಿಕೆಯಾಗಿದೆ. ಎಸ್‌ಐಆರ್‌ನಿಂದಾಗಿ ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಯಾವ ಪರಿಣಾಮ ಬೀರಿದೆ ಎಂಬುದನ್ನು ನೋಡಬೇಕಿದೆ. ನಾಗರಿಕತ್ವವನ್ನೇ ಎಸ್‌ಐಆರ್ ಮೂಲಕ ಕಸಿಯಲಾಗುತ್ತಿದೆ. ಎಸ್ಐಆರ್ ಕರ್ನಾಟಕದಲ್ಲೂ ನಡೆಯಲಿದೆ. ಈ ವಿಚಾರದಲ್ಲಿ ಸರ್ಕಾರ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಬೇಕಿದೆ. ಮತದಾನದ ಹಕ್ಕಿನಿಂದ ಯಾರೂ ವಂಚಿತರಾಗದೆ ಇರುವಂತೆ ನೋಡಿಕೊಳ್ಳಬೇಕು.


