ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಂಡ್ಲೇಶ್ವರ್ ಘಾಟ್ನಲ್ಲಿರುವ ನರ್ಮದಾ ನದಿಯ ದಡದಲ್ಲಿ ಭಾನುವಾರ (ಅ.25) ಒಟ್ಟು 343 ಮತದಾರರ ಗುರುತಿನ ಚೀಟಿಗಳು (ವೋಟರ್ ಐಡಿಗಳು) ಪತ್ತೆಯಾಗಿದ್ದು, ಇವೆಲ್ಲವೂ ಇಂದೋರ್ನ ವಿಳಾಸಗಳನ್ನು ಹೊಂದಿವೆ ಎಂದು newindianexpress.com ವರದಿ ಮಾಡಿದೆ.
ಈ ಸಂಬಂಧ ಎಫ್ಐಆರ್ ದಾಖಲಿಸಬೇಕು ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಒತ್ತಾಯಿಸಿದೆ.
ಮಂಡ್ಲೇಶ್ವರ್ ಘಾಟ್ನಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದ ಸಂಸ್ಥೆಯೊಂದರ ಸದಸ್ಯರು ನೀರಿನಲ್ಲಿ ತೇಲುತ್ತಿದ್ದ ಮತ್ತು ನದಿಯ ದಡದಲ್ಲಿ ಬಿದ್ದಿದ್ದ ಗುರುತಿನ ಚೀಟಿಗಳನ್ನು ಗಮನಿಸಿದ್ದಾರೆ. ಸ್ಥಳೀಯ ನಿವಾಸಿಗಳು ಅವುಗಳನ್ನು ಸಂಗ್ರಹಿಸಿ, ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ಹೇಳಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಗುರುತಿನ ಚೀಟಿಗಳು ಪತ್ತೆಯಾದ ಸ್ಥಳದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿರುವ ಇಂದೋರ್ ಜಿಲ್ಲೆಯ ರಾವ್ ವಿಧಾನಸಭಾ ಕ್ಷೇತ್ರಕ್ಕೆ ಸೇರಿವೆ ಎಂದು ತಿಳಿದುಬಂದಿದೆ. ಇವುಗಳಲ್ಲಿ ಇಂದೋರ್ನ ತಿಲಕ್ ನಗರ ಮತ್ತು ಆಸ್ತಾ ಪ್ಯಾಲೇಸ್ನ ವಿಳಾಸಗಳಿವೆ. ಆದರೆ, ಈ ಚೀಟಿಗಳು ನದಿ ದಡಕ್ಕೆ ಹೇಗೆ ತಲುಪಿದವು, ಇವುಗಳನ್ನು ಅಲ್ಲಿ ಎಸೆದವರು ಯಾರು ಮತ್ತು ಇವು ಅಸಲಿ ಚೀಟಿಗಳೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ ಎಂದು newindianexpress.com ವರದಿ ಹೇಳಿದೆ.
ಖಾರ್ಗೋನ್ನಿಂದ ಬಂದ ಸುದ್ಧಿ ವರದಿಗಳ ಪ್ರಕಾರ, ಭಾನುವಾರ ನರ್ಮದಾ ನದಿ ಮತ್ತು ಅದರ ಸುತ್ತಮುತ್ತ ಪತ್ತೆಯಾದ 343 ಕಾರ್ಡ್ಗಳಲ್ಲಿ ಹೆಚ್ಚಿನವು ರಾವ್ ವಿಧಾನಸಭಾ ಕ್ಷೇತ್ರಕ್ಕೆ ಸೇರಿದವು ಎಂದು ತಿಳಿದುಬಂದಿದೆ. ಈ ಕ್ಷೇತ್ರದಿಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರು 2013 ಮತ್ತು 2018 ರಲ್ಲಿ ಗೆಲುವು ಸಾಧಿಸಿದ್ದರು, ಆದರೆ 2023ರ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು ಎಂದು ವರದಿ ಉಲ್ಲೇಖಿಸಿದೆ.
ಖಾರ್ಗೋನ್ನ ಮಂಡ್ಲೇಶ್ವರ್ ಉಪವಿಭಾಗದ ಪೊಲೀಸ್ ಅಧಿಕಾರಿ (ಎಸ್ಡಿಒಪಿ) ಶ್ವೇತಾ ಶುಕ್ಲಾ ಅವರು ಕಂದಾಯ ಇಲಾಖೆಯ ತಂಡವು ಚೀಟಿಗಳನ್ನು ವಶಪಡಿಸಿಕೊಂಡಿದೆ ಮತ್ತು ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಠಾಣೆಯ ಉಸ್ತುವಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ತಮಗೆ ಕಾಂಗ್ರೆಸ್ ಪಕ್ಷದಿಂದ ಈ ಕುರಿತು ದೂರು ಬಂದಿರುವುದನ್ನು ಅವರು ಖಚಿತಪಡಿಸಿದ್ದಾರೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ರವಿ ನಾಯ್ಕ್, ಬ್ಲಾಕ್ ಅಧ್ಯಕ್ಷ ಹಿಮ್ಮತ್ ಸಿಂಗ್ ಪಟೇಲ್ ಮತ್ತು ಪಕ್ಷದ ಇತರ ಕಾರ್ಯಕರ್ತರೊಂದಿಗೆ ಸೇರಿ ಮಂಡ್ಲೇಶ್ವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ನಾಯ್ಕ್ ಅವರು ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದು, ಪ್ರಕರಣ ದಾಖಲಿಸದಿದ್ದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಚೀಟಿಗಳ ಮೇಲಿನ ದಿನಾಂಕಗಳನ್ನು ಬೆಟ್ಟು ಮಾಡಿದ ರವಿ ನಾಯ್ಕ್, ಡಿಜಿಟಲ್ ಮಾದರಿಯನ್ನು 2021ರಲ್ಲಿ ಪರಿಚಯಿಸಲಾಗಿದ್ದರೂ, ಈ ಚೀಟಿಗಳ ಮೇಲೆ 2016ರ ವರ್ಷವಿದೆ ಎಂದು ಹೇಳಿದ್ದಾರೆ. ಇಂತಹ ಚೀಟಿಗಳನ್ನು 2021ಕ್ಕಿಂತ ಮುಂಚಿತವಾಗಿ ಹೇಗೆ ವಿತರಿಸಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಇದು ‘ಮತಗಳ ಕಳ್ಳತನ’ಕ್ಕೆ ಸ್ಪಷ್ಟ ಪುರಾವೆಯಾಗಿದೆ ಎಂದು ಹೇಳಿದ್ದಾರೆ.
ಪೊಲೀಸರು ಮತ್ತು ಆಡಳಿತ ಒತ್ತಡದಲ್ಲಿದ್ದು, ಯಾವುದೇ ಕ್ರಮ ಕೈಗೊಳ್ಳುವ ಮೊದಲು ಪ್ರಾಥಮಿಕ ತನಿಖೆ ನಡೆಸಲು ಒತ್ತಾಯಿಸುತ್ತಿದ್ದಾರೆ ಎಂದು ರವಿ ನಾಯ್ಕ್ ಆರೋಪಿಸಿದ್ದಾರೆ. ಕೇವಲ ಎಪಿಕ್ ಸಂಖ್ಯೆಗಳನ್ನು ಸಿಸ್ಟಂನಲ್ಲಿ ದಾಖಲಿಸುವುದರಿಂದಲೇ ಆ ಕಾರ್ಡ್ಗಳು ಅಸಲಿಯೇ ಅಥವಾ ನಕಲಿಯೇ ಎಂಬುದು ಸ್ಪಷ್ಟವಾಗುವುದರಿಂದ ಪ್ರತ್ಯೇಕ ತನಿಖೆಯ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ನದಿಯ ತಳದಲ್ಲಿ ಇನ್ನೂ ಹೆಚ್ಚಿನ ಕಾರ್ಡ್ಗಳು ಇರಬಹುದು ಎಂಬ ಶಂಕೆಯಿಂದ, ಅವುಗಳನ್ನು ಹುಡುಕಲು ಮುಳುಗುಗಾರರನ್ನು ನಿಯೋಜಿಸಬೇಕು ಎಂದೂ ಕಾಂಗ್ರೆಸ್ ಒತ್ತಾಯಿಸಿದ್ದಾರೆ.
ಇದೇ ರೀತಿಯ ಆವಿಷ್ಕಾರಗಳು ಬೇರೆಡೆಗಳಲ್ಲೂ ವರದಿಯಾಗಿವೆ. ಮಧ್ಯಪ್ರದೇಶದ ಛತ್ತರಪುರ ಜಿಲ್ಲೆಯ ರಾಜಾ ತಲಾಬ್ ಕೊಳವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ, ಅಕ್ಟೋಬರ್ 2025ರಲ್ಲಿ ನೂರಾರು ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಮತ ಕಳ್ಳತನದ ತನ್ನ ಆರೋಪಗಳಿಗೆ ಬೆಂಬಲವಾಗಿ ವಿರೋಧ ಪಕ್ಷವು ಇದನ್ನು ಉಲ್ಲೇಖಿಸಿತ್ತು.


