ಕ್ಯಾಂಪಸ್ನಲ್ಲಿ ಚುನಾಯಿತ ಪ್ರತಿನಿಧಿಗಳ ಮಂಡಳಿಯನ್ನು ಮರುಸ್ಥಾಪಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ನಡೆಸಿದ ಸುದೀರ್ಘ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು (ಜೆಎಂಐ) ಸುಮಾರು 20 ವರ್ಷಗಳ ನಂತರ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಪುನರಾರಂಭಿಸುವುದಾಗಿ ಸೋಮವಾರ (ಅ.26) ಘೋಷಿಸಿದೆ.
ಆದರೆ, ವಿಶ್ವವಿದ್ಯಾಲಯದ ಈ ಭರವಸೆಯನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತಿರಸ್ಕರಿಸಿದ್ದಾರೆ. ವಿವಿ ಹೊರಡಿಸಿರುವ ನೋಟಿಸ್ನಲ್ಲಿ ಚುನಾವಣಾ ಪ್ರಕ್ರಿಯೆಗೆ ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸಿಲ್ಲ ಮತ್ತು ಪ್ರಾಕ್ಟರ್ (ಮುಖ್ಯ ಶಿಸ್ತು ಅಧಿಕಾರಿ) ರಾಜೀನಾಮೆಗೆ ಸಂಬಂಧಿಸಿದ ತಮ್ಮ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಹೊರಡಿಸಿದ ಆದೇಶದಲ್ಲಿ, ವಿದ್ಯಾರ್ಥಿ ಸಂಘದ ಸಂವಿಧಾನಕ್ಕೆ ಅನುಮೋದನೆ ದೊರೆತ 15 ದಿನಗಳ ನಂತರ ಚುನಾವಣೆಗಳು ನಡೆಯಲಿವೆ ಎಂದು ತಿಳಿಸಿದೆ. “ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ಸಂಘದ (ಜೆಎಂಐಎಸ್ಯು) ಸಂವಿಧಾನಕ್ಕೆ ಅನುಮೋದನೆ ದೊರೆತ ದಿನಾಂಕದಿಂದ 15 ದಿನಗಳ ನಂತರ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯಲಿದೆ” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘವನ್ನು 2006ರಲ್ಲಿ ವಿಸರ್ಜಿಸಲಾಗಿತ್ತು. ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳಿಗೆ ಚುನಾಯಿತ ಪ್ರಾತಿನಿಧ್ಯವನ್ನು ಖಾತರಿಪಡಿಸಿಕೊಳ್ಳಲು ಅದರ ಮರುಸ್ಥಾಪನೆಗೆ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದರು.
ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿರುದ್ಧ ಕೈಗೊಳ್ಳಲಾಗಿದ್ದ ಎಲ್ಲಾ ಅಮಾನತು ಆದೇಶಗಳು ಮತ್ತು ಕಾರಣ ಕೇಳಿ ನೀಡಲಾಗಿದ್ದ ನೋಟಿಸ್ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಮತ್ತು ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿ ನಡೆಸಿದ್ದಾರೆನ್ನಲಾದ ದೌರ್ಜನ್ಯ ಹಾಗೂ ಹಲ್ಲೆಯ ಆರೋಪಗಳ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ಸಮಿತಿಯನ್ನು ರಚಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಲು ಜಾಮಿಯಾ ಕುಲಸಚಿವ (Registrar) ಮಹತಾಬ್ ಆಲಂ ರಿಝ್ವಿ ಅವರು ಸೋಮವಾರ ಮುಂಜಾನೆ ಸುಮಾರು 4:30ಕ್ಕೆ ಧರಣಿ ಸ್ಥಳಕ್ಕೆ ಆಗಮಿಸಿದ್ದರು. ಆಡಳಿತ ಮಂಡಳಿಯ ಅಧಿಕೃತ ಆದೇಶದ ಪ್ರತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಅವರು, ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ತಿಳಿಸುವ ಮೂಲಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು ಎಂದು indiatoday.in ವರದಿ ಮಾಡಿದೆ.
ಆದರೆ, ಆದೇಶ ಪ್ರತಿಯಲ್ಲಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ಸ್ಪಷ್ಟವಾದ ವಿವರಣೆಯನ್ನು ನೀಡಿಲ್ಲ ಎಂದು ವಾದಿಸಿದ ವಿದ್ಯಾರ್ಥಿಗಳು ಅದನ್ನು ತಿರಸ್ಕರಿಸಿದ್ದಾರೆ. ವಿದ್ಯಾರ್ಥಿ ಸಂಘದ ಸಂವಿಧಾನಕ್ಕೆ ಅನುಮೋದನೆ ಸಿಕ್ಕ 15 ದಿನಗಳ ಒಳಗಾಗಿ ಚುನಾವಣೆ ನಡೆಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆಯಾದರೂ, ಆ ಅನುಮೋದನೆಯನ್ನು ಯಾವಾಗ ನೀಡಲಾಗುತ್ತದೆ ಎಂಬುದನ್ನು ಎಲ್ಲಿಯೂ ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ ಎಂದು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೋರಾಟ ಮುಂದುವರಿಯಲಿದೆ ಎಂದ ವಿದ್ಯಾರ್ಥಿಗಳು
ವಿದ್ಯಾರ್ಥಿಗಳು ಪ್ರಾಕ್ಟರ್ ಅವರ ರಾಜೀನಾಮೆಗೆ ಸಂಬಂಧಿಸಿದ ತಮ್ಮ ಬೇಡಿಕೆಯನ್ನು ಆದೇಶದಲ್ಲಿ ಕೈಬಿಟ್ಟಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಆದೇಶವು ತಾವು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಕಾರಣವಾದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ತಾವು ಅಸ್ಪಷ್ಟ ಭರವಸೆಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಕ್ಯಾಂಪಸ್ನಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಅರ್ಥಪೂರ್ಣ ವಿದ್ಯಾರ್ಥಿ ಪ್ರಾತಿನಿಧ್ಯವನ್ನು ಪಡೆದುಕೊಳ್ಳುವ ಉದ್ದೇಶದಿಂದ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಶ್ವವಿದ್ಯಾಲಯದ ಆದೇಶವು ಸುಮಾರು ಎರಡು ದಶಕಗಳ ನಂತರ ವಿದ್ಯಾರ್ಥಿ ಸಂಘದ ಚುನಾವಣೆಗಳು ಪುನರಾರಂಭಗೊಳ್ಳುವ ಸಾಧ್ಯತೆಯ ಮುನ್ಸೂಚನೆ ನೀಡಿದೆಯಾದರೂ, ವಿದ್ಯಾರ್ಥಿ ಸಂಘದ ಸಂವಿಧಾನಕ್ಕೆ ಅನುಮೋದನೆ ನೀಡುವ ಕುರಿತು ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ಪ್ರಕಟಿಸದೇ ಇರುವುದು ಪ್ರಸ್ತುತ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿ ಉಳಿದಿದೆ.
ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ತಮ್ಮ ಬೇಡಿಕೆಗಳನ್ನು ಸ್ಪಷ್ಟವಾಗಿ ಈಡೇರಿಸುವವರೆಗೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದ್ದಾರೆ.
ವಿದ್ಯಾರ್ಥಿ ಸಂಘವನ್ನು ಪುನಃಸ್ಥಾಪಿಸಬೇಕೆಂದು ಒತ್ತಾಯಿಸಿ ಜಾಮಿಯಾ ಮಿಲ್ಲಿಯಾದ ವಿದ್ಯಾರ್ಥಿಗಳು ಅಕ್ಟೋಬರ್ 11ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಶನಿವಾರ(ಅ.24) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಬಲವಂತವಾಗಿ ತೆರವುಗೊಳಿಸಲು ಪ್ರಯತ್ನಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಆ ಬಳಿಕ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಕ್ಯಾಂಪಸ್ನಲ್ಲಿ ನೀರಿನ ಪೂರೈಕೆಯನ್ನು ಕಡಿತಗೊಳಿಸಲಾಗಿದೆ. ಕ್ಯಾಂಪಸ್ ಆವರಣದೊಳಗೆ ಪ್ರವೇಶ ಹಾಗೂ ನಿರ್ಗಮನವನ್ನು ನಿರ್ಬಂಧಿಸಲಾಗಿದೆ. ಭಾರೀ ಪೊಲೀಸ್ ನಿಯೋಜನೆಯ ನಡುವೆಯೂ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.


