ಭಾಗ-1
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಅಂತರದಿಂದ ಸೋತ ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದ ಭಾರತೀಯ ಜನತಾ ಪಕ್ಷವು, ಮತದಾರರ ಪ್ರಮಾಣ ಹೆಚ್ಚಿಸಿಕೊಳ್ಳುವ ಬದಲು ವಿಪಕ್ಷಗಳ ಪರವಾಗಿರುವ ಮತದಾರರ ಹೆಸರನ್ನೇ ಎಸ್‌ಐಆರ್ ಹೆಸರಿನಲ್ಲಿ ಡಿಲೀಟ್ ಮಾಡುವ ಮೂಲಕ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆ ಮೂಲಕ ಪ್ರಜಾತಂತ್ರವನ್ನೇ ತನ್ನಿಷ್ಟದಂತೆ ನಡೆಸಿಕೊಳ್ಳುತ್ತಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಆದ ಅನಾಹುತವೇ ಕರ್ನಾಟಕದಲ್ಲೂ ಆಗಿಬಿಡಬಹುದು ಎಂಬ ಆತಂಕ ಹಲವರನ್ನು ಕಾಡುತ್ತಿದೆ.
14 ವರ್ಷದ ಟಿಎಂಸಿ ಆಡಳಿತಕ್ಕೆ ಬ್ರೇಕ್ ಕೊಟ್ಟ ಎಸ್‌ಐಆರ್
2021 ರ ವಿಧಾನಸಭಾ ಚುನಾವಣೆಯಲ್ಲಿ BJP 77 ಸ್ಥಾನಗಳನ್ನು ಗೆದ್ದಿತ್ತು. 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸಹ ಬಿಜೆಪಿ ಗೆದ್ದಿದ್ದು ಕೇವಲ 12 ಸೀಟುಗಳು ಮಾತ್ರ. ಆದರೆ, ಟಿಎಂಸಿ 29 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ ತನ್ನ ಪ್ರಭಾವ ಎಷ್ಟಿದೆ ಎಂಬುದನ್ನು ತೋರಿಸಿತ್ತು. ಆದರೆ, 2026 ರ ವಿಧಾಸಭಾ ಚುನಾವಣೆಯಲ್ಲಿ ಬಿಜೆಪಿ ಹತ್ತಿರತ್ತಿರ 190 ಕ್ಷೇತ್ರಗಳಲ್ಲಿ ಗೆದ್ದಿದೆ, ಐದೇ ವರ್ಷದಲ್ಲಿ 100ಕ್ಕೂ ಹೆಚ್ಚು ಸೀಟುಗಳನ್ನು ಹೆಚ್ಚಿಸಿಕೊಂಡಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮೂಲಕ ತಮ್ಮ ಮತದಾನದ ಹಕ್ಕನ್ನೇ ಕಳೆದುಕೊಂಡ 27 ಲಕ್ಷ ಜನರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಪಶ್ಚಿಮ ಬಂಗಾಳದಲ್ಲಿ 2011ರ ವಿಧಾನಸಭಾ ಚುನಾವಣೆ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಮಹತ್ವದ್ದು. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ), ದಶಕಗಳ ಕಾಲ ಆಳಿದ್ದ ಎಡರಂಗದ ಆಡಳಿತವನ್ನು ಅಂತ್ಯಗೊಳಿಸಿತು.
294 ಒಟ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 184 ಸ್ಥಾನಗಳನ್ನು ಗೆದ್ದಿತ್ತು. ಇದರಲ್ಲಿ ಕಾಂಗ್ರೆಸ್ ಪಕ್ಷ 42 ಸ್ಥಾನಗಳನ್ನು ಪಡೆದುಕೊಂಡಿತ್ತು. ಹಲವು ದಶಕಗಳಿಂದ ಬಂಗಾಳವನ್ನು ಆಳಿದ್ದ ಎಡರಂಗ 62 ಸ್ಥಾನಗಳಿಗೆ ಕುಸಿದಿತ್ತು. ಆ ಮೂಲಕ ಮಮತಾ ಬ್ಯಾನರ್ಜಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
2016ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಹವಾಸ ಬಿಟ್ಟು ಸ್ವತಂತ್ರವಾಗಿ ಸ್ಪರ್ಧಿಸಿದ ಮಮತಾ ಬ್ಯಾನರ್ಜಿ ತಮ್ಮ ಅಧಿಕಾರವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. ಎಡಪಕ್ಷಗಳು ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೂ ಟಿಎಂಸಿ ಭರ್ಜರಿ ಜಯ ಸಾಧಿಸಿತು. ತೃಣಮೂಲ ಕಾಂಗ್ರೆಸ್ 211 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್-ಎಡರಂಗ ಮೈತ್ರಿ ಕೇವಲ 76 ಸ್ಥಾನಗಳನ್ನು ಪಡೆದಿತ್ತು. ಆಗ ಬಿಜೆಪಿ ಗೆದ್ದಿದ್ದು ಕೇವಲ 3 ಸ್ಥಾನಗಳು. ಮಮತಾ ಬ್ಯಾನರ್ಜಿ ಎರಡನೇ ಬಾರಿಗೆ ಮುಖ್ಯಮಂತ್ರಿಯೂ ಆದರು.
2021ರ ವಿಧಾನಸಭಾ ಚುನಾವಣೆಯಲ್ಲಿ ಸಹ, ಬಿಜೆಪಿಯ ಪ್ರಬಲ ಪ್ರತಿರೋಧದ ನಡುವೆಯೂ, ತನಗೆ ನಿಷ್ಠನಾಗಿದ್ದ ಸುವೇಂದು ಅಧಿಕಾರಿ ಬಿಜೆಪಿ ಸೇರಿದರೂ ಜಗ್ಗದ ಮಮತಾ ಬ್ಯಾನರ್ಜಿ, ಚುನಾವಣೆಯಲ್ಲಿ ಗೆದ್ದು ಮೂರನೇ ಅವಧಿಗೆ ಮುಖ್ಯಮಂತ್ರಿಯಾದರು. ಈ ಚುನಾವಣೆಯು ಟಿಎಂಸಿ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿಗೆ ಸಾಕ್ಷಿಯಾಯಿತು. ಬಿಜೆಪಿ ಪ್ರಬಲ ಪೈಪೋಟಿ ನೀಡಿದರೂ, ಟಿಎಂಸಿ ಮರಳಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.
ಆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 213 ಕ್ಷೇತ್ರಗಳಲ್ಲಿ ಗೆದ್ದರೆ, ಬಿಜೆಪಿ 77 ಸ್ಥಾನಗಳಲ್ಲಿ ಮಾತ್ರ ಜಯ ಪಡೆದುಕೊಂಡಿತು. ವಿಶೇಷವೆಂದರೆ, ಎಡರಂಗ ಮತ್ತು ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದವು. 2024ರ ಲೋಕಸಭಾ ಚುನಾವಣೆ ಮತ್ತು 2026ರ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತು ಎಡರಂಗ ಚೇತರಿಸಿಕೊಂಡಿಲ್ಲ. ಎಸ್‌ಐಆರ್ ನಡುವೆಯೂ ಬಿಜೆಪಿಗೆ ಪ್ರಬಲ ಪ್ರತಿರೋಧ ತೋರಿರುವ ಮಮತಾ ಬ್ಯಾನರ್ಜಿ ತಮ್ಮ ಸ್ಥಾನಗಳನ್ನು 81 ಸ್ಥಾನಗಳಿಗೆ ತಂದು ನಿಲ್ಲಿಸಿದ್ದಾರೆ.
ಟಿಎಂಸಿ ಈಗ ಸೋತಿರುವ ಬಹುತೇಕ ಕ್ಷೇತ್ರಗಳು, ಕಳೆದ ಚುನಾವಣೆಯಲ್ಲಿ ಟಿಎಂಸಿ ಕಡಿಮೆ ಅಂತರದಿಂದ ಸೋತ ಕ್ಷೇತ್ರಗಳು ಎಂಬುದನ್ನು ಗಂಭೀರವಾಗಿ ಗಮನಿಸಬೇಕಾಗಿದೆ. ಕಡಿಮೆ ಅಂತರದಿಂದ ಸೋತ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿದ್ದ ಬಿಜೆಪಿ, ಎಸ್‌ಐಆರ್ ಮೂಲಕ ಟಿಎಂಸಿ ಮತಬ್ಯಾಂಕ್‌ನ ಶೇ.5ರಿಂದ ಶೇ.10 ರಷ್ಟು ಮತಗಳನ್ನು ಡಿಲೀಟ್ ಮಾಡಿಸಿದೆ ಎಂಬ ಆರೋಪವಿದೆ.
ಕರ್ನಾಟಕದಲ್ಲಿ ಎಸ್‌ಐಆರ್ ನಡೆದರೆ ಕಾಂಗ್ರೆಸ್ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?
ಬಿಹಾರ ಮತ್ತು ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶವು ಹಲವು ರಾಜ್ಯಗಳ ರಾಜಕೀಯ ಪಕ್ಷಗಳಿಗೆ ಹಾಗೂ ನಾಗರಿಕ ಸಂಘಟನೆಗಳಿಗೆ ಆಘಾತ ಮೂಡಿಸಿದೆ. ಪ್ರಜಾಸತ್ತಾತ್ಮಕ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಬಿಜೆಪಿಯ ಕುತಂತ್ರದಿಂದ ಕೋಟ್ಯಾಂತರ ಅರ್ಹ ನಾಗರಿಕರು ತಮ್ಮ ಮತದಾನದ ಹಕ್ಕನ್ನೇ ಕಳೆದುಕೊಳ್ಳುತ್ತಿದ್ದಾರೆ. ಆ ಮೂಲಕ ಬಿಜೆಪಿ ಕುತಂತ್ರದ ಮೂಲಕ ರಾಜ್ಯಗಳ ಅಧಿಕಾರ ಹಿಡಿಯುತ್ತಿರುವುದು ಬಿಹಾರ ಮತ್ತು ಬಂಗಾಳದಲ್ಲಿ ಸಾಬೀತಾಗಿದೆ. ಇದೀಗ 2028ಕ್ಕೆ ಚುನಾವಣೆ ಎದುರಿಸಲಿರುವ ಕರ್ನಾಟಕವೂ ಎಸ್‌ಐಆರ್‌ನಿಂದ ಅಪಾಯಕ್ಕೆ ಸಿಲುಕುವುದು ನಿಚ್ಛಳವಾಗಿದೆ.
ಕಡಿಮೆ ಅಂತರದಿಂದ ಗೆದ್ದ ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣು
2028ರ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಗೆದ್ದ ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಯು, ಅಂತಹ ಕ್ಷೇತ್ರಗಳಲ್ಲಿ ಎಸ್‌ಐಆರ್ ಹೆಸರಿನಲ್ಲಿ ಕಾಂಗ್ರೆಸ್ ಮತಬ್ಯಾಂಕ್ ಒಡೆಯುವ ಸಾಧ್ಯತೆ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿರುವ 135 ಕ್ಷೇತ್ರಗಳಲ್ಲಿ 97 ರಿಂದ 100 ಸ್ಥಾನಗಳನ್ನು ಕಡಿಮೆ ಅಂತರರಿಂದ ಗೆದ್ದಿದೆ. ಅವುಗಳಲ್ಲಿ ಸಿದ್ದರಾಮಯ್ಯ ಸರ್ಕಾರದ 20 ಜನ ಸಚಿವರ ಕ್ಷೇತ್ರಗಳು ಸೇರಿವೆ! ಪರಿಶಿಷ್ಟ ಜಾತಿಯ 10 ಕ್ಷೇತ್ರಗಳು, ಪರಿಶಿಷ್ಟ ಪಂಗಡದ 9 ಕ್ಷೇತ್ರಗಳು ಸೇರಿವೆ. ಒಂದು ವೇಳೆ ಕರ್ನಾಟಕದಲ್ಲಿ ಎಸ್‌ಐಆರ್ ಜಾರಿಯಾದರೆ ಈ 100 ಕ್ಷೇತ್ರಗಳಲ್ಲಿ ಬಹುತೇಕ ಬಿಜೆಪಿ ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ ಎಲ್ಲ ಸಾಧ್ಯತೆಗಳಿವೆ. ಕುತಂತ್ರದ ಮೂಲಕ ಬಿಜೆಪಿ ರಾಜ್ಯದಲ್ಲಿ ಮೊದಲ ಭಾರಿಗೆ ಬಹುಮತ ಪಡೆಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಎಸ್‌ಐಆರ್ ಜಾರಿಯಾದರೆ ಕಾಂಗ್ರೆಸ್ ಕಳೆದುಕೊಳ್ಳುವ ಕ್ಷೇತ್ರಗಳು ಯಾವು?
ಗಾಂಧಿನಗರ:
ಮೊದಲನೆಯದಾಗಿ, ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಎಸ್‌ಸಿ/ಎಸ್‌ಟಿ, ಮುಸ್ಲಿಂ ಮತ್ತು ತಮಿಳು ಭಾಷಿಕ ಮತದಾರರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ವಲಸಿಗರೂ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. 2018ರ ಚುನಾವಣೆಯಲ್ಲಿ 47,354 ಮತಗಳನ್ನು ಪಡೆದಿದ್ದ ದಿನೇಶ್ ಗುಂಡೂರಾವ್ ಗೆದ್ದಿದ್ದರು. ಬಿಜೆಪಿಯ ಎ.ಆರ್. ಸಪ್ತಗಿರಿ ಗೌಡ 37,284 ಮತಗಳನ್ನು ಪಡೆದರೆ, ಜೆಡಿಎಸ್‌ನ ವಿ. ನಾರಾಯಣಸ್ವಾಮಿ 36,635 ಮತಗಳನ್ನು ಪಡೆದಿದ್ದರು. ದಿನೇಶ್ ಗುಂಡೂರಾವ್ ಅವರು 10,070 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಸುಮಾರು ಶೇ.56.8 ರಷ್ಟು ಪತದಾನವಾಗಿತ್ತು. ಆದರೆ, 2023 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ವಿರುದ್ಧ ದಿನೇಶ್ ಗುಂಡೂರಾವ್ ಕೂದಲೆಳೆ ಅಂತರದಲ್ಲಿ ಗೆದ್ದಿದ್ದರು. ಅವರ ಗೆಲುವಿನ ಅಂತರ ಕೇವಲ 105 ಮತಗಳು!
ಈ ಕ್ಷೇತ್ರದಲ್ಲಿರುವ ಸ್ಲಂಗಳಲ್ಲಿ ಹೆಚ್ಚಿನ ಜನರು ಅನಕ್ಷರಸ್ತರಾಗಿದ್ದು, ಬಹುತೇಕರು ವಲಸಿಗರಾಗಿರುವುದರಿಂದ ಎಸ್‌ಐಆರ್ ಜಾರಿಯಾದರೆ ಹಲವರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ. ಹಾಗೇನಾದರೂ ಆದರೆ ಬಿಜೆಪಿ ಖಂಡಿತವಾಗಿ ಈ ಕ್ಷೇತ್ರದಲ್ಲಿ ಸುಲಭ ಜಯ ಸಾಧಿಸಲಿದೆ. ಈ ಆಪಾಯವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಲೇಬೇಕಾಗಿದೆ.
ಶೃಂಗೇರಿ:
ಇನ್ನು ಎರಡನೇ ಕ್ಷೇತ್ರ ನೋಡುವುದಾದರೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಆದರೆ, ಮೂರು ವರ್ಷಗಳ ನಂತರ ನ್ಯಾಯಾಲಯದ ಆದೇಶದ ಬಳಿಕ ನಡೆದ ಮರು ಮತ ಎಣಿಕೆಯಲ್ಲಿ ಡಿ.ಎನ್. ಜೀವರಾಜ್ ಅವರೇ ಗೆದ್ದಿದ್ದಾರೆ. ಎಸ್‌ಐಆರ್ ಜಾರಿಗೂ ಮೊದಲೇ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದ ಮೇಲೂ ಕಾಂಗ್ರೆಸ್ ಹೆಚ್ಚಿನ ಗಮನಹರಿಸಬೇಕಾಗುತ್ತದೆ.
ಮಾಲೂರು:
ಕಾಂಗ್ರೆಸ್ ಕಳೆದುಕೊಳ್ಳಬಹುದಾದ ಮೂರನೇ ಕ್ಷೇತ್ರ ಕೋಲಾರದ ಮಾಲೂರು. ಕಾಂಗ್ರೆಸ್‌ನ ಕೆ.ವೈ. ನಂಜೇಗೌಡ 50,955 ಮತಗಳನ್ನು ಪಡೆದು ವಿಜೇತರಾಗಿದ್ದರು. ಬಿಜೆಪಿಯ ಕೆ.ಎಸ್. ಮಂಜುನಾಥ ಗೌಡ ಅವರು 50,707 ಮತಗಳನ್ನು ಪಡೆದಿದ್ದರು. ಇಲ್ಲಿ ಕಾಂಗ್ರೆಸ್ ಗೆಲುವಿನ ಅಂತರ ಕೇವಲ 248 ಮತಗಳು ಮಾತ್ರ. ನ್ಯಾಯಾಲಯದ ಆದೇಶದ ಬಳಿಕ ನಡೆದ ಮರು ಮತ ಎಣಿಗೆ ನಂತರವೂ ನಂಜೇಗೌಡ ಅವರೇ ಗೆದ್ದರು. ಎಸ್‌ಐಆರ್ ಜಾರಿಯಾದರೆ ಮಾಲೂರು ಕ್ಷೇತ್ರವೂ ಸಹ ಕಾಂಗ್ರೆಸ್ ‘ಕೈ’ತಪ್ಪುವ ಸಾಧ್ಯತೆ ಇದೆ.
ಮಾಲೂರು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಆದೇಶದಂತೆ ನಡೆದ ಮರು ಮತ ಎಣಿಕೆಯಲ್ಲಿಯೂ ಕೆ.ವೈ. ನಂಜೇಗೌಡ ಅವರು ಸುಮಾರು 250 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. 2026ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಸಹ ಆದೇಶ ಎತ್ತಿಹಿಡಿದು ನಂಜೇಗೌಡ ಅವರ ಶಾಸಕ ಸ್ಥಾನವನ್ನು ಖಚಿತಪಡಿಸಿದೆ.
ಮೂಡಿಗೆರೆ:
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರ ಸಹ ಎಸ್‌ಐಆರ್ ಅಪಾಯಕ್ಕೆ ಸಿಲುಕಲಿರುವ ಕ್ಷೇತ್ರಗಳಲ್ಲೊಂದು. ಕಾಂಗ್ರೆಸ್‌ನ ನಯನ ಮೋಟಮ್ಮ 722 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ವಿಜೇತರಾದರು. ನಯನಾ ಮೋಟಮ್ಮ 50,843 ಮತಗಳನ್ನು ಪಡೆದರೆ, ಬಿಜೆಪಿಯ ದೀಪಕ್ ದೊಡ್ಡಯ್ಯ ಅವರು 50,121 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಇಲ್ಲಿ ಹಲವು ಕಾಫಿ ಎಸ್ಟೇಟ್‌ಗಳಿರುವುದರಿಂದ ಈ ಕ್ಷೇತ್ರದಲ್ಲಿಯೂ ಸಹ ವಲಸಿಗರ ಸಂಖ್ಯೆ ಅತ್ಯಧಿಕವಾಗಿದೆ. ಹಲವು ವರ್ಷಗಳ ಹಿಂದೆ ಇಲ್ಲಿಗೆ ಕೆಲಸಕ್ಕೆ ಬಂದು ನೆಲೆ ಕಂಡುಕೊಂಡಿರುವವರು ಎಸ್‌ಐಆರ್ ಪರಿಷ್ಕರಣೆಗೆ ಒಳಪಟ್ಟರೆ ಮತದಾರರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ.
ಜಗಳೂರು:
2023ರ ಚುನಾವಣೆಯಲ್ಲಿ ಜಗಳೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜೇತರಾದರೂ ಕಡಿಮೆ ಮತಗಳ ಅಂತರದಿಂದ ಫಲಿತಾಂಶ ನಿರ್ಧಾರವಾಗಿತ್ತು. ಕಾಂಗ್ರೆಸ್‌ನ ಬಿ. ದೇವೇಂದ್ರಪ್ಪ 50,765 ಮತಗಳನ್ನು ಪಡೆದರೆ, ಬಿಜೆಪಿಯ ಎಸ್.ವಿ. ರಾಮಚಂದ್ರ ಅವರು 49,891 ಮತಗಳನ್ನು ಪಡೆದಿದ್ದರು. ಪಕ್ಷೇತರ ಅಭ್ಯರ್ಥಿಯಾಗಿದ್ದ ಎಚ್.ಪಿ. ರಾಜೇಶ್ 49,442 ಮತಗಳನ್ನುಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದ್ದರು. ಈ ಕ್ಷೇತ್ರದ ಗೆಲುವಿನ ಅಂತರ ಕೇವಲ 874 ಮತಗಳು ಮಾತ್ರ.
ಮಂಡ್ಯ:
2023ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕಾಂಗ್ರೆಸ್‌ನ ರವಿಕುಮಾರ್ ಗೌಡ 61,411 ಮತಗಳನ್ನು ಪಡೆದು ವಿಜೇತರಾಗಿದ್ದರು. ಜೆಡಿಎಸ್‌ನ ಬಿ.ಆರ್. ರಾಮಚಂದ್ರ ಅವರು 59,392 ಮತಗಳನ್ನು ಪಡೆದರೆ, ಬಿಜೆಪಿ ಅಶೋಕ್ ಎಸ್.ಡಿ. ಜಯರಾಮ್ ಅವರು 30,661 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. ಇಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಅಂತರ 2,019 ಮತಗಳು ಮಾತ್ರ. ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಇದರೊಂದಿಗೆ ದಲಿತ ಮತ್ತು ಮುಸ್ಲಿಂ ಮತದಾರರೂ ಗಮನಾರ್ಹವಾಗಿದ್ದಾರೆ.
ಕಾರವಾರ:
ಉತ್ತರ ಕನ್ನಡ ಜಿಲ್ಲೆಯ ಆಡಳಿತ ಕೆಂದ್ರವಾದ ಕಾರವಾರ ವಿಧಾನಸಭಾ ಕ್ಷೇತ್ರವು ಕರಾವಳಿ ತೀರದ ಪ್ರಮುಖ ರಾಜಕೀಯ ಕ್ಷೇತ್ರವಾಗಿದೆ. 2023ರ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಾಂಗ್ರೆಸ್‌ನ ಸತೀಶ್ ಕೃಷ್ಣ ಸೈಲ್ ಅವರು 77,445 ಮತಗಳನ್ನು ಪಡೆದರೆ, ಬಿಜೆಪಿಯ ರೂಪಾಲಿ ನಾಯಕ್ ಅವರು 75,307 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನ ಗೆಲುವಿನ ಅಂತರ ಕೇವಲ 2,138 ಮತಗಳು ಮಾತ್ರ.
2024ರ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯ ಪ್ರಕಾರ, ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,25,154 ಮತದಾರರಿದ್ದಾರೆ. ಇದರಲ್ಲಿ ಮಹಿಳಾ ಮತದಾರರ ಸಂಖ್ಯೆಯು ಪುರುಷ ಮತದಾರರಿಗಿಂತ ಸ್ವಲ್ಪ ಹೆಚ್ಚಿದೆ. ಈ ಕ್ಷೇತ್ರದಲ್ಲಿ ಸುಮಾರು 14,424 ಮುಸ್ಲಿಂ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ. ಒಟ್ಟು ಮತದಾರರಲ್ಲಿ ಮುಸ್ಲಿಂ ಮತದಾರರ ಪಾಲು ಸುಮಾರು ಶೇ6.6 ರಷ್ಟಿದೆ.
ಭದ್ರಾವತಿ:
ಶಿವಮೊಗ್ಗ ಜಿಲ್ಲೆಯ ಕೈಗಾರಿಕಾ ನಗರಿ ಎಂದೇ ಖ್ಯಾತಿಯಾಗಿರುವ ಭದ್ರಾವತಿ ವಿಧಾನಸಭಾ ಕ್ಷೇತ್ರವು ಪ್ರಮುಖ ರಾಜಕೀಯ ಕ್ಷೇತ್ರಗಳಲ್ಲಿ ಒಂದಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಮತ್ತು ನಿಕಟ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್‌ನ ಬಿ.ಕೆ. ಸಂಗಮೇಶ್ವರ ಅವರು 66,208 ಮತಗಳನ್ನು ಪಡೆದು ವಿಜೇತರಾದರು. ಜೆಡಿಎಸ್ ಶಾರದಾ ಅಪ್ಪಾಜಿ ಅವರು 63,503 ಮತಗಳನ್ನು ಪಡೆದಿದ್ದರು. ಬಿಜೆಪಿಯ ಮಂಗೋಟೆ ರುದ್ರೇಶ್ ಅವರು 21,279 ಮತಗಳನ್ನು ಪಡೆದಿದ್ದರು. ಇಲ್ಲಿ ಕಾಂಗ್ರೆಸ್‌ನ ಗೆಲುವಿನ ಅಂತರ 2,705 ಮತಗಳು ಮಾತ್ರ.
ಕಲಬುರಗಿ ಉತ್ತರ:
ಕಲಬುರಗಿ ಜಿಲ್ಲೆಯ ಕೇಂದ್ರಭಾಗದಲ್ಲಿರುವ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರವು ಹೈದರಾಬಾದ್ ಕರ್ನಾಟಕ ಭಾಗದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. 2023ರ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕಾಂಗ್ರೆಸ್‌ನ ಕನೀಜ್ ಫಾತಿಮಾ ಅವರು 80,973 ಮತಗಳನ್ನು ಪಡೆದು ವಿಜೇತರಾಗಿದ್ದರು. ಬಿಜೆಪಿಯ ಚಂದ್ರಕಾಂತ್ ಬಿ. ಪಾಟೀಲ್ ಅವರು 78,261 ಮತಗಳನ್ನು ಪಡೆದಿದ್ದರು. ಈ ಕ್ಷೇತ್ರದ ಗೆಲುವಿನ ಅಂತರ ಸುಮಾರು 2,712 ಮತಗಳು ಮಾತ್ರ. ಇದು ಪ್ರತಿ ಚುನಾವಣೆಗೆ ಕಡಿಮೆಯಾಗುತ್ತಲೇ ಇದೆ. 2018ರ ಚುನಾವಣೆಯಲ್ಲಿಯೂ ಕನೀಜ್ ಫಾತಿಮಾ ಅವರು ಜಯ ಸಾಧಿಸಿದ್ದರು. ಅವರು 64,311 ಮತಗಳನ್ನು ಪಡೆದರೆ, ಚಂದ್ರಕಾಂತ್ ಬಿ. ಪಾಟೀಲ್ 58,371 ಮತಗಳನ್ನು ಪಡೆದಿದ್ದರು. 2018ರ ಗೆಲುವಿನ ಅಂತರ 5,940 ಮತಗಳು ಆಗಿತ್ತು.
ಈ ಕ್ಷೇತ್ರದಲ್ಲಿ ಒಟ್ಟು ಸುಮಾರು 3.07 ಲಕ್ಷ ಮತದಾರರಿದ್ದಾರೆ. ಅದರಲ್ಲಿ ಮುಸ್ಲಿಂ ಸಮುದಾಯದ ಮತದಾರರು ಸುಮಾರು ಶೇ.52 ರಷ್ಟಿದ್ದಾರೆ. ಕಾಂಗ್ರೆಸ್ ಗೆಲುವಿಗೆ ಇದೂ ಒಂದು ಕಾರಣವಾಗಿದೆ. ಉಳಿದಂತೆ ಲಿಂಗಾಯತರು ಮತ್ತು ದಲಿತ ಸಮುದಾಯದ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಎಸ್‌ಐಆರ್ ಜಾರಿಯಾದರೆ ಹಲವು ಮುಸ್ಲಿಂ ಸಮುದಾಯದ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವ ಸಾಧ್ಯತೆ ಇದೆ.
ಬೈಲಹೊಂಗಲ:
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ವಿಧಾನಸಭಾ ಕ್ಷೇತ್ರವು ಉತ್ತರ ಕರ್ನಾಟಕದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಇಲ್ಲಿ ಹಲವು ವರ್ಷಗಳಿಂದ ಕಾಂಗ್ರೆಸ್ ಪ್ರಾಬಲ್ಯ ಮುಂದುವರೆದಿದೆ. 2023ರ ಚುನಾವಣೆಯಲ್ಲಿ ಬೈಲಹೊಂಗಲದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಾಂಗ್ರೆಸ್‌ನ ಮಹಾಂತೇಶ ಕೌಜಲಗಿ ಅವರು 58,408 ಮತಗಳನ್ನು ಪಡೆದು ವಿಜೇತರಾಗಿದ್ದರು. ಬಿಜೆಪಿಯ ಜಗದೀಶ್ ಚನ್ನಪ್ಪ ಮೆಟಗುಡ್ ಅವರು 55,630 ಮತಗಳನ್ನು ಪಡೆದಿದ್ದರು. ಇಲ್ಲಿ ಕಾಂಗ್ರೆಸ್ ಗೆಲುವಿನ ಅಂತರ 2,778 ಮತಗಳು ಮಾತ್ರ.
ಇನ್ನು 2018ರ ವಿಧಾನಸಭಾ ಚುನಾವಣಾ ಫಲಿತಾಂಶ ನೋಡುವುದಾದರೆ, ಮಹಾಂತೇಶ ಕೌಜಲಗಿ 47,040 ಮತಗಳನ್ನು ಪಡೆದು ವಿಜೇತರಾಗಿದ್ದರು. ಆಗ ಪಕ್ಷೇತರವಾಗಿ ಸ್ಪರ್ಧಿಸಿದ್ದ ಜಗದೀಶ್ ಮೆಟಗುಡ್ 41,918 ಮತಗಳನ್ನು ಪಡೆದಿದ್ದರು. ಆಗಲೂ ಸಹ ಕೌಜಲಗಿ 5,122 ಮತಗಳ ಅಂತರದಿಂದ ಗೆದ್ದಿದ್ದರು.
2011ರ ಜನಗಣತಿಯ ಅಂದಾಜಿನ ಪ್ರಕಾರ, ಈ ಕ್ಷೇತ್ರದಲ್ಲಿ ಹಿಂದೂಗಳು ಸುಮಾರು ಶೇ.75.3, ಮುಸ್ಲಿಮರು ಶೇ.22 ರಷ್ಟಿದ್ದಾರೆ. ಲಿಂಗಾಯತ ಸಮುದಾಯದ ಮತದಾರರು ಇಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಆದರೆ, ಎಸ್‌ಐಆರ್ ಜಾರಿಯಿಂದ ಮುಸ್ಲಿಂ ಸಮುದಾಯದ ಮತದಾರರು ತೊಂದರೆ ಅನುಭವಿಸಬಹುದು.
ಕಿತ್ತೂರು:
ಬೆಳಗಾವಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಿತ್ತೂರು ಸಹ ಪ್ರಮುಖವಾದದ್ದು. ಪ್ರಸ್ತುತ ಇಲ್ಲಿ ಕಾಂಗ್ರೆಸ್‌ನ ಬಾಬಾಸಾಹೇಬ್ ಡಿ. ಪಾಟೀಲ್ ಕ್ಷೇತ್ರದ ಶಾಸಕರಾಗಿದ್ದಾರೆ. ಇವರು 2023ರ ಚುನಾವಣೆಯಲ್ಲಿ ಬಿಜೆಪಿಯ ಹಾಲಿ ಶಾಸಕರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅತ್ಯಂತ ನಿಕಟ ಪೈಪೋಟಿ ನಡೆದಿತ್ತು. ಬಾಬಾಸಾಹೇಬ್ ಡಿ. ಪಾಟೀಲ್ ಅವರು 77,536 ಮತಗಳನ್ನು ಪಡೆದರೆ, ಬಿಜೆಪಿಯ ಮಹಾಂತೇಶ್ ದೊಡ್ಡಗೌಡರ್ ಅವರು 74,543 ಮತಗಳನ್ನು ಪಡೆದಿದ್ದರು. ಇಲ್ಲಿನ ಗೆಲುವಿನ ಅಂತರ 2,993 ಮತಗಳು ಮಾತ್ರ.
ಹಳಿಯಾಳ:
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಆರ್.ವಿ. ದೇಶಪಾಂಡೆ ಅವರ ಭದ್ರಕೋಟೆ ಎಂದೇ ಹೆಸರುವಾಸಿಯಾಗಿದೆ. ಆದರೆ, ಎರಡು ಚುನಾವಣೆಗಳಲ್ಲಿ ದೇಶಪಾಂಡೆ ಅವರು ಕಡಿಮೆ ಅಂತರದಿಂದ ಗೆದ್ದಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ.
2023ರ ಚುನಾವಣೆಯಲ್ಲಿ ಹಳಿಯಾಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಇತ್ತು. 57,240 ಮತಗಳನ್ನು ಪಡೆದ ಆರ್.ವಿ. ದೇಶಪಾಂಡೆ ವಿಜೇತರಾದರು. 53,617 ಮತಗಳನ್ನು ಪಡೆದ ಬಿಜೆಪಿಯ ಸುನೀಲ್ ಹೆಗಡೆ ಎರಡನೇ ಸ್ಥಾನ ಪಡೆದರು. ಜೆಡಿಎಸ್‌ನ ಶ್ರೀಕಾಂತ ಲಕ್ಷ್ಮಣ ಘೋಟ್ನೇಕರ್ ಅವರು 28,814 ಮತಗಳನ್ನು ಪಡೆದರು. ಇಲ್ಲಿನ ಗೆಲುವಿನ ಅಂತರ 3,623 ಮತಗಳು ಮಾತ್ರ.
ಯಾದಗಿರಿ:
ಯಾದಗಿರಿ ವಿಧಾನಸಭಾ ಕ್ಷೇತ್ರ ಸಹ ಕಾಂಗ್ರೆಸ್ ಕಡಿಮೆ ಮತಗಳ ಅಂತರದಲ್ಲಿ ಗೆದ್ದ ಕ್ಷೇತ್ರಗಳಲ್ಲಿ ಒಂದಾಗಿದೆ. ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಈ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿಯೂ ಸಹ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. 53,802 ಮತಗಳನ್ನು ಪಡೆದ ಚನ್ನಾರೆಡ್ಡಿ ಪಾಟೀಲ್ ತುನ್ನೂರು ವಿಜೇತರಾದರು. ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ್ ಅವರು 50,129 ಮತಗಳನ್ನು ಪಡೆದರೆ, ಪಕ್ಷೇತರ ಅಭ್ಯರ್ಥಿಯಾಗಿದ್ದ ಹನುಮಗೌಡ ಬೀರಂಕಲ್ 36,838 ಮತಗಳನ್ನು ಪಡೆದಿದ್ದರು. ಇಲ್ಲಿ ಕಾಂಗ್ರೆಸ್ ಗೆಲುವಿನ ಅಂತರ 3,673 ಮತಗಳು ಮಾತ್ರ.
ಚಾಮರಾಜ:
ಮೈಸೂರು ನಗರದ ಕೇಂದ್ರ ಭಾಗದಲ್ಲಿರುವ ಚಾಮರಾಜ ವಿಧಾನಸಭಾ ಕ್ಷೇತ್ರವು ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯೂ ಆಗಿದೆ. ಕೆ. ಹರೀಶ್ ಗೌಡ ಅವರು 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ ಸಹ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೆ. ಹರೀಶ್ ಗೌಡ 72,931 ಮತಗಳನ್ನು ಪಡೆದರೆ, ಬಿಜೆಪಿಯ ಎಲ್. ನಾಗೇಂದ್ರ ಅವರು 68,837 ಮತಗಳನ್ನುಪಡೆದಿದ್ದರು. ಇಲ್ಲಿನ ಗೆಲುವಿನ ಅಂತರ 4,094 ಮತಗಳು.
ಮುಂದುವರೆಯುವುದು…


