Homeನ್ಯಾಯ ಪಥಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

- Advertisement -
- Advertisement -

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ ಜಾರಿಗೊಳಿಸುವಲ್ಲಿ ಒಂದು ಸಮಾಧಾನಕರ ಸೂತ್ರವನ್ನು ಕಂಡುಕೊಂಡಿದೆ.

2023ರಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ದಲಿತರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಮುಖ್ಯ ಕಾರಣ ಒಳಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದು ಹಾಗೂ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಾಗಿತ್ತು. ಬಿಜೆಪಿ ಆತುರಾತುರವಾಗಿ ಕಡೆಯ ಕ್ಷಣದಲ್ಲಿ ಒಳಮೀಸಲಾತಿ ಕುರಿತು ಕೈಗೊಂಡ ನಾಟಕವನ್ನು ಅರಿತ ದಲಿತರು 2024 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದರು. ಸುಮಾರು ಶೇ.60ರಷ್ಟು ದಲಿತರು ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಂಡಿರುವುದು ಚುನಾವಣಾ ಮತ ವಿಶ್ಲೇಷಣೆಯಿಂದ ತಿಳಿದುಬರುತ್ತದೆ. ಹೀಗೆ ಮತ್ತೆ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ 2.0 ಸರ್ಕಾರವು ತನ್ನ ಮೂರು ವರ್ಷದ ಅವಧಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಕ್ರಮ ಕೈಗೊಂಡಿತು. ಹೀಗೆ ಮಾಡಲು ಒಳಮೀಸಲಾತಿ ಹೋರಾಟಗಾರರು ಮತ್ತೆ ಬೀದಿಗಿಳಿಯಬೇಕಾದ್ದೇ ವಿಪರ್ಯಾಸ. ಆದರೂ ಸರ್ಕಾರ ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿಯನ್ನು ರಚಿಸಿ, ಹಿಂದೆಂದೂ ಆ ಮಟ್ಟಕ್ಕೆ ಆಗಿರದ ಸಮೀಕ್ಷೆ ಕೈಗೊಂಡು ಪರಿಶಿಷ್ಟ ಜಾತಿಗಳ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ದತ್ತಾಂಶದ ಆಧಾರದ ಮೇಲೆ ಅಂದಾಜಿಸಿತು. ಜೊತೆಗೆ ಶೇ.17 ಮೀಸಲಾತಿ ಪ್ರಮಾಣದಲ್ಲಿ ನಾಲ್ಕು ಗುಂಪುಗಳನ್ನಾಗಿ ಮಾಡಿ ಒಳಮೀಸಲಾತಿಗೆ ಶಿಫಾರಸು ಮಾಡಿತು. ಆದರೆ ಬಲಗೈ ಸಮುದಾಯವು ತನ್ನ ಜನಸಂಖ್ಯೆಯನ್ನು ತಪ್ಪು ಅಂದಾಜು ಮಾಡಿದ್ದು, ಮೀಸಲಾತಿ ಪ್ರಮಾಣ ಸರಿಯಾಗಿ ನಿಗದಿಪಡಿಸಿಲ್ಲವೆಂದು ಪುನರ್ ಪರಿಶೀಲಿಸಬೇಕೆಂದು ಹೋರಾಟ ಮಾಡಿದ ಪರಿಣಾಮವಾಗಿ ಸರ್ಕಾರವು ಎಡಗೈ ಪ್ರವರ್ಗ ‘ಎ’ಗೆ ಶೇ.6, ಬಲಗೈ ಪ್ರವರ್ಗ ‘ಬಿ’ಗೆ ಶೇ.6 ಹಾಗೂ ಸ್ಪೃಶ್ಯ-ಅಲೆಮಾರಿಗಳಿಗೆ ಶೇ.5 ಒಳಮೀಸಲಾತಿ ನೀಡಿ ಬಲಗೈ ಸಮುದಾಯವನ್ನು ಸಮಾಧಾನಪಡಿಸಿತಾದರೂ, ಅಲೆಮಾರಿ ಸಮುದಾಯಗಳನ್ನು ಅನಾಥರನ್ನಾಗಿ ಮಾಡಿದ್ದಕ್ಕೆ ಅಲೆಮಾರಿ ಸಮುದಾಯದ ಜೊತೆಗೆ ಎಡಗೈ ಸಮುದಾಯದ ಹೋರಾಟ ಮುಂದುವರಿಯಿತು. ಅಲೆಮಾರಿಗಳ ಹೋರಾಟಕ್ಕೆ ಮಾದಿಗ ಸಂಘಟನೆಗಳು ಬೆಂಬಲ ನೀಡಿದವು. ಅಲೆಮಾರಿಗಳು ದೆಹಲಿಗೆ ಹೋಗಿ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಯಿತು. ಈಗಿನ್ನೂ ಒಳಮೀಸಲಾತಿ ವಿಚಾರ ನ್ಯಾಯಾಲಯದಲ್ಲಿಯೇ ಇದೆ.

ಈ ನಡುವೆ ಎಲ್ಲವೂ ಸರಿಹೋಯಿತೇನೋ ಅಂದುಕೊಳ್ಳುವಷ್ಟರಲ್ಲಿ ರೋಸ್ಟರ್ ಬಿಂದು ಸಮಸ್ಯೆ ಉದ್ಭವಿಸಿತು. ರೋಸ್ಟರ್ 100 ಬಿಂದುಗಳಲ್ಲಿ ಮೊದಲನೆಯ ಹುದ್ದೆ ಎಸ್ಸಿ ಪ್ರವರ್ಗ ಎ ಗೆ, ಒಂಬತ್ತನೇ ಬಿಂದು ಎಸ್ಸಿ ಪ್ರವರ್ಗ ಬಿ ಹಾಗೂ ಹದಿನೈದನೆಯ ಬಿಂದು ಎಸ್ಸಿ ಪ್ರವರ್ಗ ಸಿ ಗೆ ಹಂಚಿಕೆ ಮಾಡಲಾಯಿತು. ಇದು ಹೊಸದಲ್ಲದಿದ್ದರೂ ಈ ಹಿಂದಿನಿಂದಲೂ ನಡೆದುಕೊಂಡು ಬಂದ ಪರಿಪಾಠವೇ ಆಗಿತ್ತು ಹಾಗೂ ನ್ಯಾಯಾಲಯಗಳ ತೀರ್ಪು ಸಹ ‘ವೃಂದ ಮತ್ತು ವಿಷಯ’ ಆಧಾರಿತವಾಗಿ ಮೀಸಲು ರೋಸ್ಟರ್ ಬಿಂದು ನಿಗದಿಪಡಿಸಲು ತೀರ್ಪು ನೀಡಿದ್ದರಿಂದ ಅದನ್ನೇ ನ್ಯಾಯೋಚಿತವೆಂದು ಪರಿಗಣಿಸಲಾಗಿತ್ತು. ಆದರೆ ಈ ರೋಸ್ಟರ್ ಬಿಂದು ಅಳವಡಿಸಿದಾಗ 15 ಕ್ಕಿಂತ ಕಡಿಮೆ ಹುದ್ದೆಗಳ ನೇಮಕಾತಿ (ಈ ಹುದ್ದೆಗಳು ಹೆಚ್ಚಾಗಿ ಕ್ಲಾಸ್ 1 ರ ಹುದ್ದೆಗಳಾಗಿರುತ್ತವೆ) ಯಲ್ಲಿ ಎಲ್ಲಾ ಹುದ್ದೆಗಳೂ ಪ್ರವರ್ಗ ಎ ಗೆ ಹೋಗುತ್ತದೆ. ಇನ್ನೆರಡು ಪ್ರವರ್ಗಗಳಿಗೆ ಮುಂದಿನ 30 ವರ್ಷಗಳವರೆಗೆ ಯಾವುದೇ ನೇಮಕಾತಿ ಆಗುವುದಿಲ್ಲ. ನೇಮಕಾತಿ ಆಗಲು ಆ ಹುದ್ದೆಯಲ್ಲಿನ ವ್ಯಕ್ತಿ ನಿವೃತ್ತಿಯೇ ಆಗಬೇಕೆಂಬ ವಾದವನ್ನು ತೂರಿಬಿಡಲಾಯಿತು. ಇದು ಮೇಲ್ನೋಟಕ್ಕೆ ಸತ್ಯವಾದ ಸಂಗತಿಯೂ ಆಗಿತ್ತು. ಅದಷ್ಟೇ ಅಲ್ಲದೇ ಈ ಒಂದು ವಿಚಾರವನ್ನು ತನ್ನ ರಾಜಕೀಯಕ್ಕೆ ಬಳಸಿಕೊಂಡ ಆರೆಸ್ಸೆಸ್ ಮನುವಾದಿ ವಾದಿರಾಜ, ಅತ್ತಕಡೆ ಬಲಗೈ ಬಿಜೆಪಿ ಶಾಸಕರನ್ನೂ ಇತ್ತಕಡೆ ಎಡಗೈನ ಕೆಲವು ಅತಿರೇಕದ ‘ಮಾತುಗಾರರನ್ನು’ ಎದುರುಬದಿರಾಗಿಸುವಲ್ಲಿ ಯಶಸ್ವಿಯಾದನು. ಇದಕ್ಕೆ ತಕ್ಕಂತೆ ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹದೇವಪ್ಪ ಸಹ ಅತ್ಯಂತ ಅಸೂಕ್ಷ್ಮವಾಗಿ ನಡೆದುಕೊಂಡರು. ಎರಡೂ ಸಮುದಾಯಗಳನ್ನು ಒಗ್ಗೂಡಿಸಿ ಮಾತುಕತೆಗೆ ಮುಂದಾಗಲಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಒಳಗಿನ ‘ಪಟ್ಟು’ಗಳನ್ನೆಲ್ಲಾ ಹೊರಹಾಕುತ್ತಾ ಎಡಗೈ ಮತ್ತು ಬಲಗೈ ಸಮುದಾಯದ ಅತಿರೇಕಿಗಳಿಗೆ ಇಲ್ಲಸಲ್ಲದ ‘ಆಹಾರ’ ಒದಗಿಸಿದರು. ಇದರಿಂದಾಗಿ ಬಲಗೈ ಸಮುದಾಯದ ‘ಮಾತುಗಾರರು’ ಈ ರೋಸ್ಟರ್ ಪದ್ಧತಿಯಿಂದ ತಮಗೆ ಅನ್ಯಾಯವಾಗುತ್ತದೆ ಎಂದು ಗಟ್ಟಿಯಾದ ವಾದ ಮಂಡಿಸಿದರೆ, ಎಡಗೈ ಸಮುದಾಯದವರು ಇಷ್ಟು ದಿನ ‘ನೀವೇ’ ತಿಂದಿದ್ದೀರಿ, ಇನ್ನು 30 ವರ್ಷ ನಮಗೆ ತಿನ್ನಲು ಬಿಡಿ ಎಂಬ ವಾದ ಮುಂದಿಟ್ಟರು. ಈ ಇಬ್ಬರೂ ಬಹಿರಂಗವಾಗಿಯೇ ಅತಿರೇಕದ ವಾದ ಮಾಡುತ್ತಿದ್ದರು. ಸ್ವತಃ ನಾಗಮೋಹನ ದಾಸ್ ವರದಿಯೇ ಹೇಳುವಂತೆ ಬಲಗೈ ಸಮುದಾಯ ಇದ್ದಬದ್ದ ಎಲ್ಲಾ ಮೀಸಲಾತಿಯನ್ನೂ ಪಡೆದುಕೊಂಡಿರಲಿಲ್ಲ, ಅದರಲ್ಲಿ ಎಡಗೈ ಸಮುದಾಯವೂ ಪಡೆದುಕೊಂಡಿತ್ತು. ಎಡಗೈ ಸಮುದಾಯದ ‘ಖಾಲಿ ತಟ್ಟೆ’ ರೂಪಕ ಕೇವಲ ‘ತಪ್ಪಾಗಿತ್ತು’. ಇದೇ ಸಮಯದಲ್ಲಿ ಬಲಗೈ ಸಮುದಾಯದ ಅತಿರೇಕಿಗಳು ಎಡಗೈ ಸಮುದಾಯದವರು ಬೇಕಾದರೆ ‘ಪ್ರತಿಭೆ’ಯ ಮೂಲಕ ಸ್ಪರ್ಧಾತ್ಮಕವಾಗಿ ನಮ್ಮೊಂದಿಗೆ ಸ್ಪರ್ಧಿಸಲಿ ಎಂದು ‘ಬ್ರಾಹ್ಮಣ’ವಾದಿ ವಾದ ಮಾಡಿದರು. ಇದನ್ನು ಹಿಡಿದುಕೊಂಡು ಬಲಗೈ ಸಮುದಾಯದವರು ‘ಅಂಬೇಡ್ಕರ್ ವಾದಿಗಳೆಂದು’ ಕರೆದುಕೊಳ್ಳುತ್ತಾರೆ. ಇದೇ ಅಂಬೇಡ್ಕರ್ ವಾದ ಎಂದು ಎಡಗೈ ಸಮುದಾಯದ ಅತಿರೇಕಿಗಳು ವಾದಿಸಿದರು. ಮತ್ತೊಂದೆಡೆ ಅಂಬೇಡ್ಕರ್ ಮೀಸಲಾತಿ ಸಾಕು-ಒಳಮೀಸಲಾತಿ ಬಿಸಾಕು ಎಂಬ ಅಪ್ರಬುದ್ಧ ಮಾತುಗಳೂ ಬಂದವು. ಈ ಎರಡೂ ಕಡೆಯ ಅತಿರೇಕಿಗಳು ಪರಸ್ಪರ ‘ಅಂಬೇಡ್ಕರ್ ವಿರೋಧಿ’ ನಡೆಯನ್ನು ಆಚರಿಸುತ್ತಾ ಕೆಸರೆರಚಿಕೊಳ್ಳುತ್ತಿದ್ದರು. ದಲಿತೇತರ ಸಮಾಜ ನಮ್ಮನ್ನು ಹೇಗೆ ನೋಡುತ್ತಿರಬಹುದು ಎಂಬ ಕಿಂಚಿತ್ತು ಅಂಜಿಕೆಯೂ ಇಲ್ಲದಂತೆ ಸಾಮಾಜಿಕ ಜಾಲತಾಣದಲ್ಲಿ ಗುದ್ದಾಡುತ್ತಿತ್ತು.

ಈ ನಡುವೆ ಕರ್ನಾಟಕ ಹೈಕೋರ್ಟ್ ಶೇ. 50 ಮೀಸಲಾತಿಯನ್ನು ಮೀರದಂತೆ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಬೇಕೆಂದು ನಿರ್ದೇಶನ ನೀಡಿದ್ದರಿಂದ ಶೇ. 17ಕ್ಕೆ ನಿಗದಿಗೊಳಿಸಿದ್ದ ಮೀಸಲಾತಿ ಪ್ರಮಾಣವು ಶೇ. 15ಕ್ಕೆ ಇಳಿಕೆಯಾಗಬೇಕಾಗಿತ್ತು. ಈ ತೀರ್ಪನ್ನೇ ಮುಂದುಮಾಡಿಕೊಂಡ ಕರ್ನಾಟಕ ಸರ್ಕಾರದ ಸಚಿವ ಸಂಪುಟವು, 56,000 ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿತಾದರೂ ಅದರಲ್ಲಿ ಒಳಮೀಸಲಾತಿ ನೀತಿಯನ್ನು ಅಳವಡಿಸುವುದಿಲ್ಲ, ಹೈಕೋರ್ಟ್ ತೀರ್ಪು ಇದಕ್ಕೆ ವ್ಯತಿರಿಕ್ತವಾಗಿದೆ ಎಂಬ ತೀರ್ಮಾನಕ್ಕೆ ಬಂದಿತು. ಈ ಬೆಳವಣಿಗೆ ಎಡಗೈ ಮತ್ತು ಬಲಗೈ ಅತಿರೇಕಿಗಳ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯಿತು. ನಿಜಕ್ಕೂ ಈ ತೀರ್ಮಾನ ಕಳೆದ 30 ವರ್ಷಗಳ ಒಳಮೀಸಲಾತಿ ಹೋರಾಟಕ್ಕೆ ಮಾಡಿದ ಅನ್ಯಾಯವಾಗಿತ್ತಲ್ಲದೇ, ತಾನೇ ಮಾಡಿದ್ದ ಕಾನೂನಿನ ಉಲ್ಲಂಘನೆಯಾಗಿತ್ತು.

ಮಾದಿಗ ಸಮುದಾಯ ಮತ್ತೆ ಬೀದಿಗಿಳಿದು ಹೋರಾಡಿತು. ಇದರ ಬೆನಹಿಂದೆಯೇ ಬಲಗೈ ಸಮುದಾಯ ಹೋರಾಟ ಮಾಡಿತು. ಮನುವಾದಿ ಬೆಂಬಲಿತ ಅತಿರೇಕಿಗಳ ‘ಹಿಕಮತು’ ಫಲ ನೀಡಿತ್ತು. ಕರ್ನಾಟಕದಾದ್ಯಂತ ಸಾಮಾಜಿಕ ಜಾಲತಾಣ ಗಮನಿಸುತ್ತಿದ್ದ ಎಡಗೈ-ಬಲಗೈ ಪ್ರಜ್ಞಾವಂತರಿಗೆ ‘ಅಸಹ್ಯ’ ಮೂಡಿಸುವಂತೆ ವಾದಗಳು ನಡೆಯುತ್ತಿದ್ದವು. ಇದೇನಿದು..! ಹೊಲೆಮಾದಿಗರು ಪರಸ್ಪರ ಹೊಡೆದಾಡಿಕೊಳ್ಳುವಂತಿದ್ದಾರಲ್ಲ ಎಂಬ ಮಾತುಗಳು ಕೇಳಲಾರಂಭಿಸಿದವು. ಇದೆಲ್ಲವನ್ನೂ ನಿಭಾಯಿಸಬೇಕಿದ್ದ ದಲಿತ ಸಂಘರ್ಷ ಸಮಿತಿಯ ನಾಯಕರುಗಳು ಮೌನವಹಿಸಿ, ಒಂದಲ್ಲಾ ಒಂದು ವಾದದೊಂದಿಗೆ ತಮ್ಮನ್ನು ತಳುಕು ಹಾಕಿಕೊಂಡರು. ಮಾತನಾಡಬೇಕಾದಾಗ ಮಾತನಾಡದಿದ್ದರೆ ಯಾವುದೋ ಒಂದು ಬಣದೊಂದಿಗೆ ನಾವಿದ್ದೇವೆ ಎಂದೇ ಅರ್ಥವಲ್ಲವೇ? ನಿಜಕ್ಕೂ ದಸಂಸ ನಾಯಕರು ಮನಸ್ಸು ಮಾಡಿದ್ದರೆ ಈ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ ಅಂತಹ ಅವಕಾಶವನ್ನು ಕಳೆದುಕೊಂಡರು.

ಇಂತಹ ವಿಷಮ ಪರಿಸ್ಥಿತಿ ನಿರ್ಮಾಣವಾಗಿದ್ದಾಗಲೇ ಮೈಸೂರಿನ ಪೂರ್ಣಾನಂದರವರು, ಕೋಲಾರದ ಗಡ್ಡಂ ವೆಂಕಟೇಶ್‌ರವರು, ಬೆಂಗಳೂರಿನ ಹೆಣ್ಣೂರು ಶ್ರೀನಿವಾಸ್‌ರವರು, ಹ.ರಾ.ಮಹೇಶ್ ರವರು ತಮ್ಮ ಮುಂದಾಳತ್ವದಲ್ಲಿ ಎಡಗೈ-ಬಲಗೈ ಸಮುದಾಯಗಳ ಅತಿರೇಕಿಗಳು ಮಾಡುತ್ತಿರುವ ರಂಪಾಟದ ವಿರುದ್ಧ ’ಐಕ್ಯ ಸಭೆ’ಗಳನ್ನು ನಡೆಸಿದರು. ಈ ಸಭೆಗಳೂ ಫಲ ನೀಡಿದವು. ಇದಕ್ಕೆ ಕಾರಣ ಸಾಮಾಜಿಕ ಜಾಲವನ್ನು ಹೊರತುಪಡಿಸಿ ರಾಜ್ಯಾದ್ಯಂತ ಹಲವು ಹೊಲೆಮಾದಿಗ ಮನಸ್ಸುಗಳು ಒಗ್ಗಟ್ಟನ್ನು ಬಯಸುತ್ತಿದ್ದವು. ಎಡ-ಬಲ ಒಗ್ಗಟ್ಟಿದ್ದರೆ ಆನೆಬಲ ಎಂಬ ಘೋಷದೊಂದಿಗೆ ಒಂದಾಗುವ ಮಾತುಗಳನ್ನೂ ಆಡಿದರು. ಒಳಮೀಸಲಾತಿಯ ಹೊರತಾಗಿರುವ ಬೆಟ್ಟದಷ್ಟು ಜವಾಬ್ದಾರಿಗಳನ್ನು ನೆನೆಸಿದರು. ಇದರ ಪರಿಣಾಮವಾಗಿ ಅತಿರೇಕಿಗಳ ಆಟಾಟೋಪಕ್ಕೆ ಬ್ರೇಕ್ ಬಿದ್ದಿತು. ಮನುವಾದಿಯ ಹಿಂಬಾಲಕರಿಗೆ ದಿಗಿಲು ಹುಟ್ಟುಕೊಂಡಿತು. ಮನುವಾದಿಯಂತೂ ತೀರ ತಲೆಕೆಡಿಸಿಕೊಂಡು ಸಿಕ್ಕಸಿಕ್ಕವರ ಬಳಿ ಹೊಲೆಮಾದಿಗರ ಒಗ್ಗಟ್ಟು ಮುರಿಯುವ ಕುರಿತು ಸಂಚುಗಳನ್ನು ರೂಪಿಸಲು ಆರಂಭಿಸಿದನು. ಆದರೆ ಈ ಎಲ್ಲಕ್ಕೂ ಇತಿಶ್ರೀ ಹಾಡುವಂತೆ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯು ತೀರ್ಮಾನ ತೆಗೆದುಕೊಂಡಿದೆ.

ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕುರಿತು ಸಚಿವ ಸಂಪುಟದ ನಿರ್ಣಯ

1. ಪರಿಶಿಷ್ಟ ಜಾತಿಗೆ ನಿಗದಿಪಡಿಸಿರುವ ಶೇಕಡಾ 15 ಮೀಸಲಾತಿಯಲ್ಲಿ ಪ್ರವರ್ಗ-ಎ, ಪ್ರವರ್ಗ-ಬಿ ಹಾಗೂ ಪ್ರವರ್ಗ-ಸಿ ಗಳಿಗೆ ಒಳಮೀಸಲಾತಿಯನ್ನು ಕ್ರಮವಾಗಿ 5.25 : 5.25 : 4.5 ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಯಿತು. ಪ್ರವರ್ಗ “ಸಿ” ಗೆ ಲಭ್ಯವಾಗುವ ಹುದ್ದೆಗಳಲ್ಲಿ ಶೇಕಡಾ 20 ರಷ್ಟು ಹುದ್ದೆಗಳನ್ನು 59 ಅಲೆಮಾರಿ ಜಾತಿಗಳಿಗೆ ಮೀಸಲಿರಿಸತಕ್ಕದ್ದು.

1) ಈ ತೀರ್ಮಾನವನ್ನು ಅನುಷ್ಠಾನಗೊಳಿಸಲು 400 ಬಿಂದುಗಳ ವರ್ತುಲಗಳನ್ನು ಅನುಪಾಲಿಸಲು ತೀರ್ಮಾನಿಸಲಾಯಿತು.

2) ಯಾವುದೇ ವೃಂದದಲ್ಲಿ 3ಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಬಿಂದುಗಳು ಲಭ್ಯವಾಗುತ್ತಿದ್ದಲ್ಲಿ, ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಗಳನ್ನು ಪರಿಶಿಷ್ಟ ಜಾತಿ ಸಾಮಾನ್ಯ ಎಂದು ಪರಿಗಣಿಸಿ, ನೇಮಕಾತಿ ಮಾಡತಕ್ಕದ್ದು.

ರಾಜ್ಯ ಸರ್ಕಾರವು ಈ ಮೇಲಿನಂತೆ ತೀರ್ಮಾನ ತೆಗೆದುಕೊಂಡಿದ್ದು ಎಡಗೈ ಸಮುದಾಯ ಬಯಸಿದಂತೆ 56,432 ಹುದ್ದೆಗಳಿಗೆ ಒಳಮೀಸಲಾತಿಯನ್ನು ಅನ್ವಯಿಸಲಾಗಿದೆ. ಹಾಗೂ ಬಲಗೈ ಸಮುದಾಯ ಬಯಸಿದಂತೆ ರೋಸ್ಟರ್ ಬಿಂದುಗಳಲ್ಲಿ ಬದಲಾವಣೆ ತರಲಾಗಿದೆ. ಜೊತೆಗೆ ಅಲೆಮಾರಿ ಗುಂಪುಗಳಿಗೆ ಒಳಮೀಸಲಾತಿ ಒಳಗಡೆಯೇ ಶೇ.20 ಮೀಸಲಾತಿ ಒದಗಿಸಲಾಗಿದೆ. ಜೊತೆಗೆ ಹೆಚ್ಚುವರಿ ಶೇ.6 ರಷ್ಟು ಹುದ್ದೆಗಳನ್ನು (ಶೇ.56 ಮೀಸಲಾತಿ ಮೀರಿದರೆ ದೊರಕುವ) ಬ್ಯಾಕ್ ಲಾಗ್ ಇಡಲಾಗುತ್ತದೆ.

ಇಷ್ಟಾಗಿಯೂ ಯಾವುದೇ ವೃಂದದಲ್ಲಿ 3ಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಬಿಂದುಗಳು ಲಭ್ಯವಾಗುತ್ತಿದ್ದಲ್ಲಿ, ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಗಳನ್ನು ಪರಿಶಿಷ್ಟ ಜಾತಿ ಸಾಮಾನ್ಯ ಎಂದು ಪರಿಗಣಿಸಿ, ನೇಮಕಾತಿ ಮಾಡತಕ್ಕದ್ದು ಎಂದಿರುವುದು ಇಷ್ಟು ದಿನ ಹಿಂದುಳಿದಿದ್ದ ಜಾತಿಗಳಿಗೆ ಅನ್ಯಾಯವಾಗುತ್ತದೆ. ಆದರೆ ಇದನ್ನು ಬಿಟ್ಟರೆ ಸದ್ಯದ ಪರಿಸ್ಥಿತಿಯಲ್ಲಿ ಬೇರೇನು ದಾರಿಗಳಿತ್ತು? ನನಗೂ ತಿಳಿಯುತ್ತಿಲ್ಲ. ಅಷ್ಟೇ ಅಲ್ಲ ಯಾರಿಗೂ ತಿಳಿಯುತ್ತಿಲ್ಲ. ಬಿಟ್ಟುಕೊಡುವ ಗುಣವಿಲ್ಲದಿದ್ದರೆ, ರಾಜಕೀಯ ವೋಟ್ ಬ್ಯಾಕ್ ಆಟದಲ್ಲಿ ಇದು ಸಾಮಾನ್ಯವೇ ಅಲ್ಲವೇ?

ಕೊನೆಯದಾಗಿ, ಅಲೆಮಾರಿಗಳಿಗೆ ಪ್ರತ್ಯೇಕವಾಗಿಯೇ ಮೀಸಲಾತಿ ಕಲ್ಪಿಸಬಹುದಿತ್ತು.


ಇದನ್ನೂ ಓದಿ: ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...