Homeನ್ಯಾಯ ಪಥಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

- Advertisement -
- Advertisement -

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.

ಆದರೂ, ಮನುಷ್ಯ ಭೂಮಿಯ ಮೇಲೆ ಅಸ್ತಿತ್ವ ಕಂಡುಕೊಂಡ ದಿನದಿಂದಲೂ “ಅಸ್ವಸ್ಥತೆ” ಎಂಬುದು ಬಿಟ್ಟೂಬಿಡದೆ ಕಾಡುತ್ತಿದೆ. ರೋಗಗಳನ್ನು ಅನುಸರಿಸುವುದು ಚಿಕಿತ್ಸೆಗೂ ನೈಸರ್ಗಿಕವಾಗಿತ್ತು. ದುರಾದೃಷ್ಟ ಎಂದರೆ, “ನಿವಾರಣೆ” ಎಂಬುದು ರೋಗಕ್ಕಿಂತ ಭೀಕರ ಎಂಬುದು ಸಾಬೀತಾಗಿದೆ.

ಆದರೂ ನಾನೇಳಲು ಹೊರಟಿರುವ ವಿಚಾರ ನಿಜ ಆಗಬಾರದೆಂಬ ಮನದಾಳದ ಬಯಕೆ ಇದೆ. ಆದರೆ ನಾವು ಊಹಿಸಲು ಸಾಧ್ಯವಾಗದ ಬಗೆಯಲ್ಲಿ BA.3.2 ಅಥವಾ ಸಿಕಾಡಾ ಎಂದು ಕರೆಯಲ್ಪಡುವ ರೂಪಾಂತರಗೊಳ್ಳುವ ಸೋಂಕು ಸದ್ದಿಲ್ಲದೆ ಹರಡುತ್ತಿದೆ. ಈಗಾಗಲೇ ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹಲವೆಡೆ ಪತ್ತೆ ಆಗಿರುವುದನ್ನು ಕೆಲವು ಅಧಿಕಾರಿಗಳು ಆಫ್ ದಿ ರೆಕಾರ್ಡ್‌ನಲ್ಲಿ ಹೇಳಿದ್ದಾರೆ.

ಮಾರ್ಚ್ 19 ರ ವರದಿಯಲ್ಲಿ ಯುಎಸ್ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಕೂಡ ಸಿಡಿಸಿ ಪ್ರಕರಣಗಳು ಹೆಚ್ಚುತ್ತಿರುವುದನ್ನು ಹೇಳಿತ್ತು. ಇದಲ್ಲದೆ, ವಿಶ್ವ ಆರೋಗ್ಯ ಸಂಸ್ಥೆ ಸಿಕಾಡಾ ಸೋಂಕನ್ನು ತನ್ನ ಮೇಲ್ವಿಚಾರಣೆಯಲ್ಲಿರುವ ರೂಪಾಂತರಗಳ ಪಟ್ಟಿಗೂ ಸೇರಿಸಿದೆ. ಇಲ್ಲಿಯವರೆಗೂ, BA.3.2 20ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿರುವುದನ್ನು ಗಮನಿಸಬೇಕಿದೆ.

ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಪ್ರತಿಷ್ಠಾನದ ವೈದ್ಯಕೀಯ ನಿರ್ದೇಶಕ ಡಾ. ರಾಬರ್ಟ್ ಹಾಪ್ಕಿನ್ಸ್ ಜೂನಿಯರ್ ಪ್ರಕಾರ, 2025 ರ ಜೂನ್‌ನಲ್ಲಿ ಅಮೆರಿಕಕ್ಕೆ ಬಂದ ಪ್ರಯಾಣಿಕರಲ್ಲಿ ಇದರ ರೂಪಾಂತರವನ್ನು ಮೊದಲು ಗುರುತಿಸಲಾಗಿತ್ತು.

ಹೀಗೆ ಕನಿಷ್ಠ 25 ರಾಜ್ಯಗಳ 132 ಸ್ಥಳಗಳಲ್ಲಿದ್ದ ತ್ಯಾಜ್ಯ ನೀರಿನ ಮಾದರಿಗಳಲ್ಲಿ ಸಿಕಾಡಾ ಕಂಡುಬಂದಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದಲ್ಲಿ 2024ರ ನವೆಂಬರ್‌ನಲ್ಲಿ ಕಾಣಿಸಿಕೊಂಡು 2025ರ ಸೆಪ್ಟೆಂಬರ್‌ನಲ್ಲಿ ಏರಿಕೆ ಕಂಡಿತ್ತು.ಗೊತ್ತಿರಲಿ, BA.3.2 ಸುಮಾರು 70 ರಿಂದ 75 ಬಗೆಯ ರೂಪಾಂತರಗಳನ್ನು ಹೊಂದಲಿದೆ. ಇದು ಹಿಂದಿನ ತಳಿಗಳಿಗಿಂತ ಭಿನ್ನವಾಗಿಯೂ ಇದೆ. ಮಾರ್ಚ್ 14ರ ಹೊತ್ತಿಗೆ, ಟ್ರ್ಯಾಕಿಂಗ್ ಡೇಟಾದಂತೆ, ಸಂಗ್ರಹಿಸಲಾದ ತ್ಯಾಜ್ಯ ನೀರಿನ ಮಾದರಿಗಳಲ್ಲಿ ಈ ರೂಪಾಂತರವು ಸುಮಾರು ಶೇಕಡ 3.7 ರಷ್ಟಿದೆ. ಮತ್ತೊಂದು ರೂಪಾಂತರವಾದ XFG, ಶೇಕಡ 53 ರಷ್ಟು ಹೆಚ್ಚು ಪ್ರಬಲವಾಗಿದೆ.

ಇದರ ಮಧ್ಯೆ ಯುಕೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಪ್ರಮುಖ ಅಸ್ಟ್ರಾಜೆನಿಕಾ ತಾನು ಕೊರೋನಾ ಕಾಲದಲ್ಲಿ ಕೊಟ್ಟಿದ್ದ ಲಸಿಕೆ ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮವನ್ನು ಉಂಟುಮಾಡಬಹುದೆಂಬುದನ್ನು ಒಪ್ಪಿಕೊಂಡಿದೆ.

ಇಂತಹ ಆಘಾತಕಾರಿ ಮಾಹಿತಿಯನ್ನು ಲಂಡನ್‌ನ ಹೈಕೋರ್ಟ್ ಪ್ರಕರಣವೊಂದರ ವಿಚಾರಣೆಯ ಹೊತ್ತಲ್ಲಿ ಬಹಿರಂಗಪಡಿಸಿದೆ. ಇಷ್ಟಕ್ಕೂ ಐವತ್ತೊಂದು ಜನ ಅಸ್ಟ್ರಾಜೆನಿಕಾ ಲಸಿಕೆ ಪಡೆದ ನಂತರ ತಮ್ಮನ್ನು ಒಳಗೊಂಡಂತೆ ತಮ್ಮ ಪ್ರೀತಿಪಾತ್ರರು ಸೇರಿ TTS, ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್‌ನೊಂದಿಗೆ ಥ್ರಂಬೋಸಿಸ್‌ನಿಂದ ಬಳಲುತ್ತಿದ್ದಾರೆಂದು ಆಪಾದಿಸಿದ್ದಾರೆ. ಇದು ಸೃಷ್ಟಿಸುವ ಮಾರಣಾಂತಿಕ ಪರಿಣಾಮಗಳಲ್ಲಿ ಮೆದುಳಿನ ಹಾನಿ, ಹೃದಯಾಘಾತ, ಪಲ್ಮನರಿ ಎಂಬಾಲಿಸಮ್ ಮತ್ತು ಅಂಗಚ್ಛೇದನವೂ ಸೇರಿದೆ. ಯುಕೆಯ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಅರ್ಜಿದಾರರು ಪರಿಹಾರವನ್ನು ಬಯಸಿದ್ದಾರೆ. ಅರ್ಜಿದಾರರ ಬಳಿ ಲಸಿಕೆ ಸಾವು, ಗಾಯಗಳುಂಟಾಗಿದೆ ಎಂಬುದನ್ನು ದೃಢೀಕರಿಸುವ ದಾಖಲೆಗಳಿರುವುದು ಗೊತ್ತಾಗಿದೆ.

ಇದೀಗ ನಮ್ಮ ದೇಶಕ್ಕೂ ಬಹಳ ಮಹತ್ವದ್ದಾಗಿದೆ. ಕಾರಣ ಇಲ್ಲಿಯೂ ಪುಣೆ ಮೂಲದ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ಅಸ್ಟ್ರಾಜೆನಿಕಾದ ಲಸಿಕೆಯನ್ನು ಕೋವಿಶೀಲ್ಡ್ ಎಂಬ ಹೆಸರಿಟ್ಟು ಮಾರಾಟ ಮಾಡಲಾಗಿದೆ.

ಇಲ್ಲಿ ರೋಗಿಗಳ ಸುರಕ್ಷತೆ ತನ್ನ ಅತ್ಯುನ್ನತ ಆದ್ಯತೆ ಎಂದು ಅಸ್ಟ್ರಾಜೆನಿಕಾ ಹೇಳಿಕೊಂಡಿತಾದರೂ ಸಹ ಕೋವಿಶೀಲ್ಡ್ ಲಸಿಕೆಗಳನ್ನು ಪಡೆದಿರುವ ನಮ್ಮವರಲ್ಲಿ ಮೂಡಿರುವ ಅನುಮಾನ ಮತ್ತು ಆತಂಕವನ್ನು ನಿವಾರಿಸಲು ಪೂರ್ಣ ಪ್ರಮಾಣದ ತನಿಖೆ ನಡೆಸುವ ಅಗತ್ಯವಿದೆ. ಪ್ರಕರಣ ಸುಪ್ರೀಂಕೋರ್ಟ್‌ಗೂ ತಲುಪಿದೆ. ಸುಪ್ರೀಂನಲ್ಲಿ ಅರ್ಜಿದಾರರೊಬ್ಬರು ಲಸಿಕೆಯ ಅಡ್ಡಪರಿಣಾಮಗಳನ್ನು ಪರೀಕ್ಷಿಸಲು ವೈದ್ಯಕೀಯ ತಜ್ಞರ ಸಮಿತಿಯನ್ನು ರಚಿಸಲು ನಿರ್ದೇಶನವನ್ನು ಕೋರಿರುತ್ತಾರೆ.

ಇಷ್ಟಕ್ಕೂ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯುವ ಮತ್ತು ಜೀವಗಳನ್ನು ಉಳಿಸುವ ಉಮೇದಿನಿಂದ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ತ್ವರಿತಗೊಳಿಸಲಾಗಿತ್ತು.

ಇಲ್ಲಿ ಅಡ್ಡಪರಿಣಾಮಗಳು, ಅಪರೂಪವಾಗಿದ್ದರೂ ಸಹ, ಅಸ್ಟ್ರಾಜೆನಿಕಾ ಲಸಿಕೆಯ ಸುರಕ್ಷತೆಯ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಎದ್ದಿದೆ. ನಿಯಂತ್ರಕ ಅಧಿಕಾರಿಗಳ ಪಾತ್ರವೂ ಪರಿಶೀಲನೆಗೆ ಒಳಪಟ್ಟಿದೆ. ಲಸಿಕೆ ಹಾಕಿಸಿಕೊಂಡವರ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಲೋಪಗಳನ್ನು ಗುರುತಿಸಲು ಆಳವಾದ ವಿಚಾರಣೆಯನ್ನು ನಡೆಸಬಹುದೆಂಬ ಆಶಯವನ್ನು ಹೊಂದಲಾಗಿದೆ.

ಇನ್ನೂ ನನ್ನನ್ನು ಅಧೀರತೆಗೆ ತಳ್ಳಿದ್ದು ಎಲೋನ್ ಮಸ್ಕ್ ಅವರ ಹೇಳಿಕೆ

ಹೌದು ಆರು ವರ್ಷಗಳ ಹಿಂದೆ ಎರಗಿ ಬಂದಿದ್ದ ಕೊರೋನಾ ಜಗತ್ತನ್ನು ಬಿರುಗಾಳಿಯಂತೆ ಆವರಿಸಿ ಇದರ ಹಾವಳಿಗೆ ಲಕ್ಷಾಂತರ ಜನರ ಪ್ರಾಣವನ್ನು ನುಂಗಿತ್ತು.

ಇದನ್ನು ಎದುರಿಸಲು ಸಾಧ್ಯವಾಗದೆ ಜಗದಗಲ ಹಲವೆಡೆ ಲಾಕ್‌ಡೌನ್‌ಗಳನ್ನು ಸಹ ಘೋಷಿಸಿದಾಗ ನಿರುದ್ಯೋಗ ಬಿಕ್ಕಟ್ಟು ಸಹ ಉಲ್ಬಣಗೊಂಡಿತ್ತು. ಜನರ ಜೀವ ಉಳಿಸಲು ಹಲವು ದೇಶಗಳು ಲಸಿಕಾ ಅಭಿಯಾನಗಳನ್ನು ನಡೆಸಿದವು. ಇದೇನೇ ಇರಲಿ, ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಅವರು ಕೊರೋನಾ ಲಸಿಕೆಯಿಂದಾಗಿ 60,000 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದಿರುವ ಹೇಳಿಕೆ ಹೊಸ ಬಗೆಯ ಭೀತಿಯನ್ನು ಹುಟ್ಟುಹಾಕಿ ಜಗದಗಲ ಕೋಲಾಹಲವನ್ನೇ ಸೃಷ್ಟಿಸಿದೆ.

ಇಷ್ಟಕ್ಕೂ ಕೊರೋನಾ ಲಸಿಕೆ ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ ಎಂದು ಹಲವರು ಮಾತಿನ ಮಧ್ಯೆ ಆಗಾಗ ಕೇಳುತ್ತಿರುತ್ತಾರೆ. ಕೊರೋನಾ ಲಸಿಕೆ ಮನುಷ್ಯನ ಡಿಎನ್‌ಎಯನ್ನು ಬದಲಾಯಿಸಿ ಬಿಡುತ್ತದೆ ಎಂಬ ಸುದ್ದಿಯ ನಡುವೆ ಲಸಿಕೆಯೊಳಗಡೆ ಮೈಕ್ರೋಚಿಪ್‌ನ್ನು ಅಳವಡಿಸಲಾಗಿದೆ. ಇದು ಬಿಲ್‌ಗೇಟ್ಸ್‌ಗೆ ಸಂಬಂಧಿಸಿದ್ದು, 5G ತಂತ್ರಜ್ಞಾನದ ಮೂಲಕ ಜನರನ್ನು ಮೇಲ್ವಿಚಾರಣೆ ಮಾಡಲು ಬಳಸಬಹುದೆಂಬ ಗುಸುಗುಸು ಕೂಡ ವ್ಯಕ್ತವಾಗಿತ್ತು. ಇವು ಆಧಾರರಹಿತ ಮತ್ತು ವೈಜ್ಞಾನಿಕ ಆಧಾರವಿಲ್ಲ. ಇವೆಲ್ಲವೂ ತಪ್ಪುಗ್ರಹಿಕೆ ಮತ್ತು ವದಂತಿ ಎಂದು ಸರ್ಕಾರದ ವಕ್ತಾರರು ವಾದಿಸಿದ್ದರು.

ಇದಾದನಂತರ ಇದೀಗ ಮತ್ತೆ ಕೊರೋನಾ ಲಸಿಕೆಯ ವಿಚಾರ ಮತ್ತೊಮ್ಮೆ ಚರ್ಚೆಯ ವಸ್ತುವಾಗಿದೆ. ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಎರಡನೇ ಡೋಸ್ ಲಸಿಕೆ ತೆಗೆದುಕೊಂಡ ನಂತರ ತಮ್ಮ ಅನುಭವದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಹಾಗಾದರೆ ಕೊರೋನಾ ಲಸಿಕೆ ನಮ್ಮೆಲ್ಲರ ಜೀವ ಕಾಪಾಡಿಲ್ಲವೇ ಎಂದು ಹಿಂದಕ್ಕೆ ತಿರುಗಿ ನೋಡಿದಾಗ ಲಸಿಕೆಗಾಗಿ ನಾವು ಪಟ್ಟ ಪಾಡೆಲ್ಲವೂ ಕಣ್ಮುಂದೆ ಹಾದುಹೋದಂತಾಗುತ್ತದೆ. ಅಂದು ಜೀವ ಉಳಿಸಲೆಂದೇ ಬಂದಿದ್ದ ಲಸಿಕೆಯನ್ನು ಕಾಯ್ದಿರಿಸಲು ಬಹುತೇಕ ದೇಶವಾಸಿಗಳು ಮೊಬೈಲ್‌ನಲ್ಲಿಯೇ ಮುಳುಗಿದ್ದರು.

ಹೀಗೆ ಮೊಬೈಲ್‌ಗೆ ಮೊರೆ ಹೋದವರಲ್ಲಿ ಅಕ್ಷರಸ್ಥರು, ಅನಕ್ಷರಸ್ಥರು ಎಲ್ಲರೂ ಇದ್ದರು. ಇಂತಹ ತುರುಸಿನ ಸ್ಪರ್ಧೆಯಲ್ಲಿ ನನ್ನ ಕಿರಿಯ ಮಗ ಮನು ಕೂಡ ಇದ್ದ. ಹೇಗಾದರೂ ಮಾಡಿ ಲಸಿಕೆ ಹಾಕಿಸಿಕೊಳ್ಳಬೇಕೆಂಬ ಮುನ್ನೆಚ್ಚರಿಕೆ ಮನೆಯಲ್ಲಿ ಇವನಿಗೆ ಹೆಚ್ಚಾಗಿದ್ದರಿಂದ ಹೀಗಾಗಿ ಕೋವಿಡ್ ಆಪ್‌ಗೆ ಅಂಟಿಕೊಂಡು ಕೂತಿರುತ್ತಿದ್ದ. ಮೊದಲಿನಿಂದಲೂ ರಷ್ಯಾ ಎಂದರೆ ನನಗೊಂಥರಾ ಸೆಳೆತ. ಬಹುಶಃ ಇದೇ ಕಾರಣಕ್ಕೆ ಸ್ಪುಟ್ನಿಕ್ ಲಸಿಕೆಯನ್ನೇ ಹಾಕಿಸಿಕೊಳ್ಳಬೇಕೆಂದು ತಹತಹಿಸುತ್ತಿದ್ದೆ. ಇದಕ್ಕೆ ಕಾರಣವೂ ಇತ್ತು.

ಅಂದು ಬಂಜರು ಭೂಮಿಯಲ್ಲಿ ಬಂಗಾರ ಬೆಳೆದ ಬೆಳೆಯಂತಾಗಿತ್ತು ಲಸಿಕೋದ್ಯಮ. ಹಲವು ಬಗೆಯಲ್ಲಿ ಪ್ರಯತ್ನಪಟ್ಟ ನಂತರ ನಾನು ಬಯಸಿದ್ದ, ನಂಬಿದ್ದ ಸ್ಪುಟ್ನಿಕ್ ಲಸಿಕೆ ರಷ್ಯಾದಿಂದ ಜಯನಗರದಲ್ಲಿರುವ ಮಿಂಚು ಮನೆ ಬಳಿಗೆ ಬಂದಿತ್ತು. ಇಲ್ಲಿಯೂ ಅಷ್ಟೇ, ಲಸಿಕೆ ಹಾಕಿಸಿಕೊಳ್ಳುವವರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಪಡೆದುಕೊಂಡನಂತರ ಸಾಹಸವೊಂದನ್ನು ಸಾಧಿಸಿದಂತಹ ಭಾವ ಆಗದೆ ಇರುತ್ತಿರಲಿಲ್ಲ ಇಷ್ಟಕ್ಕೂ ಸ್ಪುಟ್ನಿಕ್ ಚುಚ್ಚುಮದ್ದು ಹಾಕಿಸಿಕೊಳ್ಳುವ ಆಪ್ ಬೆಳಗಿನ ಜಾವ ಒಂಬತ್ತಕ್ಕೆ ತೆರೆದುಕೊಂಡರೂ ಇದಕ್ಕಾಗಿ ಮೊಬೈಲ್ ಬಟನ್ ಒತ್ತುತ್ತಾ ಕೂತಿರಬೇಕಿತ್ತು. ಒಮ್ಮೆ ನೋಂದಾಯಿಸಿಕೊಂಡರೆ ಅದರಲ್ಲಿಯೇ ಲಸಿಕೆ ದೃಢೀಕರಣ ಪತ್ರ ದೊರೆತರೂ ದಿನವೊಂದಕ್ಕೆ 15 ಸ್ಲಾಟ್‌ಗಳಷ್ಟೇ ತೆರೆದುಕೊಳ್ಳುತ್ತಿತ್ತು. ಮನು ಹರಸಾಹಸ ಪಟ್ಟು ಲಸಿಕೆ ಹಾಕಿಸಿಕೊಳ್ಳಲು ಸಮಯ ಕಾಯ್ದಿರಿಸಿದ ಘಳಿಗೆ ಅವಿಸ್ಮರಣೀಯ ಮೊದಲಿಗೆ ನನ್ನ ಪತ್ನಿ ಲಸಿಕೆ ಹಾಕಿಸಿಕೊಳ್ಳಲು ಒಪ್ಪಿಕೊಂಡಿರಲಿಲ್ಲ. ಮಕ್ಕಳ ಒತ್ತಡಕ್ಕೆ ಮಣಿದು ಲಸಿಕೆ ಹಾಕಿಸಿಕೊಂಡರಾದರೂ ಆತಂಕವನ್ನು ಮಾತ್ರ ಕೆಳಗಿಳಿಸಿರಲಿಲ್ಲ. ಪತ್ನಿ ಅಕ್ಷರಸ್ಥಳಾದರೂ ಉಡದ ಪಟ್ಟಿನ ಜಾಯಮಾನದವಳು. ಮನೆಯಲ್ಲಿ ಎಲ್ಲರೂ ಛೇಡಿಸಿದಾಗಲು ನೋವಾಗುತ್ತದೆ. ಹೃದಯದ ಸಮಸ್ಯೆ ಎದುರಾಗುವ ಸಂಭವವಿದೆ ಎಂದು ನುಣುಚಿಕೊಳ್ಳಲು ಯತ್ನಿಸುತ್ತಿದ್ದಳು. ಮನೆಯವರೆಲ್ಲರೂ ಕೂಡಿ ಮನವೊಲಿಸಿ ಸ್ಪುಟ್ನಿಕ್ ಕೊಡಿಸಿದ್ದೆವು.

ಆಕೆಯೊಳಗೆ ಒಳ್ಳೆಯ ಗುಣಗಳಿದ್ದರೂ ಸಾಮರ್ಥ್ಯ ಮತ್ತು ದಕ್ಷತೆಯೊಂದಿಗೆ ಹಠಮಾರಿ ಗುಣವು ಒಳಗೆ ಸೇರಿಕೊಂಡಿತ್ತು. ಅದೆಷ್ಟರ ಮಟ್ಟಿಗೆ ಎಂದರೆ ಅದು ಬಂಡೆಯಂತೆ ಅಭೇದ್ಯವಾಗಿತ್ತು. ಸದಾ ಗುಟ್ಟೊಂದನ್ನು ಹೇಳುವಂತೆ ಲಸಿಕೆ ರಹಸ್ಯ ಬಿಚ್ಚಿಡುತ್ತಿದ್ದಳು. ಮಗನ ಫೋನ್‌ನಲ್ಲಿ ಲಸಿಕೆ ಎಷ್ಟು ಭಯಾನಕ ಎಂಬುದನ್ನು ವೀಕ್ಷಿಸಿರುವೆ ಎಂದು ಸಮಜಾಯಿಷಿ ಕೊಡುತ್ತಿದ್ದಳು. ಡಾಕ್ಟರ್ ಅದ್ಹೇಗೆ ಸುಳ್ಳು ಹೇಳಲು ಸಾಧ್ಯ ಎಂದು ಹುದುಗಿದ್ದ ಅನುಮಾನ ಕಿತ್ತೊಗೆಯಲು ಪ್ರಯತ್ನಿಸಿದ್ದೆ.

ಇವೆರಡೂ ನೈಜ ಉದಾಹರಣೆಗಳೇ ಅಂದಿನ ಲಸಿಕಾ ಕಾರ್ಯಕ್ರಮಕ್ಕೆ ದೊರೆತ ಪ್ರತಿಕ್ರಿಯೆಯನ್ನು ಬಹುತೇಕ ತಿಳಿಸಿದಕೊಳ್ಳಬಹುದು. ಒಟ್ಟಾರೆ. ಅಂದು ಲಸಿಕೆ ಜನರಲ್ಲಿ ಆತ್ಮವಿಶ್ವಾಸ ಮತ್ತು ನಂಬಿಕೆಯನ್ನು ಬಲವಾಗಿ ಕೂರಿಸಿತ್ತು.

ಮತ್ತೊಂದೆಡೆ, ಬಾಬಾ ರಾಮದೇವ್ ಸೋಂಕು ನಿರೋಧಕ ಬೂಸ್ಟರ್‌ಗಳೆಂದು ಗೋಮೂತ್ರ ಹಾಗೂ ಸಗಣಿಯನ್ನು ಕೊರೋನಾಗೆ ರಾಮಬಾಣ ಎಂದು ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಿದ್ದ. ಇದರಿಂದ ವೈಜ್ಞಾನಿಕ ನಂಬಿಕೆಗಳಿಗೆ ಧಕ್ಕೆಯಷ್ಟೇ ಆಗದೆ, ಕೊರೋನಾ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗಿತ್ತು. ಕೇಂದ್ರ ಸರ್ಕಾರದ ಮೌನದ ಕಾರಣ, ವೈಜ್ಞಾನಿಕ ಸಾಧನೆ, ಸತ್ಯದ ಅಲ್ಲಗಳೆಯುವಿಕೆ ಬದಿಗೆ ಸರಿದು, ಸ್ವಯಂಘೋಷಿತ ಬಾಬಾನ ಉತ್ಪನ್ನಗಳಿಗೆ ಪ್ರಾಯೋಜಕನಂತಾಗಿತ್ತು.

ಗೊತ್ತಿರಲಿ ಸಗಣಿಯ ಸ್ನಾನದ ಹಿಂದೆ ಗೋ ರಾಜಕಾರಣದ ಜೊತೆಗೆ ಹಿಂದೂ ಪ್ರಾಬಲ್ಯತೆ ಮುನ್ನಲೆಗೆ ತರುವ ಹುನ್ನಾರವೂ ಅಡಗಿತ್ತು. ಇಂತಹ ಸುಳ್ಳು ಆದ್ಯತೆಗಳೇ ಅಂದು ಹಲವು ಜನರ ಪ್ರಾಣ ತೆಗೆಯಲು ಕಾರಣ ಎಂಬುದನ್ನು ಮರೆಯಬಾರದು. ಒಂದಿಡಿ ಜಗತ್ತು ಲಸಿಕೆ, ಔಷಧ, ಆಕ್ಸಿಜನ್ ಕನ್ಸಟ್ರೇಟರ್, ಮಾಸ್ಕ್, ಸ್ಯಾನಿಟೈಸರ್ ಸಂಗ್ರಹಣೆಗೆ ಮುಂದಾಗಿದ್ದರೆ ನಮ್ಮ ದೇಶದ ಮುಖ್ಯಸ್ಥರು ಲಸಿಕೆ ಅಭಿಯಾನ ಕುರಿತು ಬೆನ್ನು ತಟ್ಟಿಕೊಂಡು ನಮ್ಮ ದೇಶ ವಿಶ್ವದ ಔಷಧ ಅಂಗಡಿ ಎಂದು ಸಂಭ್ರಮಿಸುತ್ತಿದ್ದರು.

ಇದೇನೇ ಇರಲಿ, ವಿಜ್ಞಾನಿಗಳು ಮತ್ತು ವೈದ್ಯರು ಎರಡನೇ ಅಲೆಯ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರೂ, ಕಿವಿಗೊಡದೆ ನಿರ್ಲಕ್ಷ್ಯ ತೋರಿ, ಮೊದಲನೇ ಅಲೆಯಲ್ಲಿಯೇ ನಮಗೆಲ್ಲ ನಿರೋಧಕತೆ ಬಳಸಿಕೊಂಡಿದ್ದೇವೆ ಎಂಬ ಭಾವ ಮೂಡಿಸಿದ್ದರು.

ಇಷ್ಟಲ್ಲದೆ, ಮುಂದಿನ ಪೀಳಿಗೆಗೂ ರೋಗ ಲಕ್ಷಣ ಸಹ ಇರುವುದಿಲ್ಲ ಎಂಬ ಊಹೆಯಲ್ಲಿದ್ದೆವು. ಇಂತಹ ಹುಸಿ ನಂಬಿಕೆಯೊಂದಿಗೆ ರಾಗಿ, ಜೋಳ, ಗೋಧಿಯಂತಹ ಉತ್ಕೃಷ್ಟ ಆಹಾರದೊಂದಿಗೆ ಮಸಾಲೆ ಮಿಲೆಟ್ ತಿನ್ನುವ ನಾವು ಕೊರೋನಾದೊಂದಿಗೆ ಹೋರಾಡಬಲ್ಲವೆಂಬ ವಿಶ್ವಾಸ ಸಾಮಾಜಿಕ ಮಾಧ್ಯಮಗಳ ಮೂಲಕ ಸಂವೇದಿಸಲಾಗಿತ್ತು. ಇದರ ಮಧ್ಯೆ ನಡೆದ ಚುನಾವಣಾ ರ್‍ಯಾಲಿ, ಗಂಗಾ ಸ್ನಾನದಂತಹ ಪ್ರಲೋಭನೆಗಳು ಕೊರೋನಾ ಮತ್ತಷ್ಟು ಭೀಕರವಾಗಿ ಹರಡಿ, ಕಾಡಿದ್ದನ್ನು ಮರೆಯಲಾಗುವುದಿಲ್ಲ.

ಇನ್ನೂ ನಾಲ್ಕು ವರ್ಷಗಳ ಹಿಂದೆ, ಕೊರೋನಾ ವೈರಸ್ ಜಗದಗಲ ಹರಡಿ ಅತಿ ಹೆಚ್ಚಿನ ಸಂಖ್ಯೆಯ ಸಾವುಗಳಾದವು. ಕೊರೋನಾ ಚೀನಾದ ವುಹಾನ್‌ನಲ್ಲಿ ಹುಟ್ಟಿಕೊಂಡಿತಾದರೂ, ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ಆರಂಭದಲ್ಲಿ ಪ್ರಾಥಮಿಕ ಸೋಂಕು ಬಾವಲಿಗಳ ಮೂಲಕ ಹರಡುತ್ತದೆ ಎಂದೇ ನಂಬಲಾಗಿತ್ತು. ವುಹಾನ್‌ನಲ್ಲಿರುವ ಪ್ರಯೋಗಾಲಯದಿಂದ ತಪ್ಪಿಸಿಕೊಂಡಿರಬಹುದೆಂಬ ಅನುಮಾನಗಳು ವ್ಯಕ್ತವಾಗಿದ್ದವು. ಇದರ ಬಗ್ಗೆ ಚೀನಾ 2019 ರ ಡಿಸೆಂಬರ್ 31 ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಔಪಚಾರಿಕವಾಗಿ ಮಾಹಿತಿ ಕೊಟ್ಟಿತ್ತಾದರೂ ನ್ಯುಮೋನಿಯಾ ಹೆಚ್ಚಾಗಿ ಲಕ್ಷಾಂತರ ಜನ ಜೀವ ಬಿಟ್ಟಿದ್ದರು. 2020ರ ಮಾರ್ಚ್ 11 ರವರೆಗೆ ಇದನ್ನು ಸಾಂಕ್ರಾಮಿಕ ರೋಗ ಎಂದೇ ಘೋಷಿಸಿರಲಿಲ್ಲ. ಹೀಗಾಗಿಯೇ, ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ವಿಚಾರದಲ್ಲಿ ಚುರುಕುತನವನ್ನೇ ತೋರಿಸಿರಲಿಲ್ಲ ಎಂದು ಆರೋಪಿಸಲಾಗಿದೆ.

ಕೊರೋನಾ ರೋಗದಿಂದಾಗಿ ಅಮರಿಕಾದ ಒಂದು ಮಿಲಿಯನ್‌ನಷ್ಟು ಸಾವುಗಳು ಸಂಭವಿಸಿದ್ದವು. ಸಂಭವಿಸಿದೆ. ಕೊರೋನಾದಿಂದ ಉಂಟಾಗಿರುವ ಸಾವಿನ ಸಂಖ್ಯೆಯನ್ನು ಅಂದಾಜಿಸಿದರೆ ಅದು 7 ಮಿಲಿಯನ್‌ಗಿಂತಲೂ ಹೆಚ್ಚು ಕಂಡುಬರುತ್ತದೆ.

ಇದೇ ಬಗೆಯಲ್ಲಿ 1918-20ರಲ್ಲಿ ಜಗತ್ತನ್ನು ಕಾಡಿ 50-100 ಮಿಲಿಯನ್ ಜನರ ಜೀವ ಹರಣ ಮಾಡಿದ ಸ್ಪ್ಯಾನಿಷ್ ಜ್ವರವನ್ನು ನೆನಪಿಗೆ ತರುತ್ತದೆ. ಆಗ ಜಗದ ಜನಸಂಖ್ಯೆ ಸುಮಾರು 1.8 ಬಿಲಿಯನ್‌ನಷ್ಟಿತ್ತು. ನಮ್ಮ ದೇಶ ಕೂಡ ಸ್ಪ್ಯಾನಿಷ್ ಜ್ವರಕ್ಕೆ ತೀವ್ರವಾಗಿ ಸಿಲುಕಿದಾಗ ವೈರಸ್‌ಗೆ ಯಾವುದೇ ಬಗೆಯ ಚಿಕಿತ್ಸೆಯು ಗೊತ್ತಿರಲಿಲ್ಲವಾದರೂ, ಮೂಲಭೂತ ನೈರ್ಮಲ್ಯ ಮತ್ತು ಸಾಮಾಜಿಕ ಅಂತರವನ್ನು ಪಾಲಿಸಿದ ಸ್ಥಳಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿರಲಿಲ್ಲ. ಕೊರೋನಾ ಕಾಣಿಸಿಕೊಂಡ ಆರಂಭದಲ್ಲಿ ಎದುರಿಸಲು ಯಾವುದೇ ಶಿಷ್ಟಾಚಾರಗಳನ್ನು ಹೊಂದಿರಲಿಲ್ಲ. ಆದರೂ ಸಾಮಾಜಿಕ ಅಂತರ ಮಾಸ್ಕ್ ಮತ್ತು ಕೈ ನೈರ್ಮಲ್ಯದ ಮೇಲೆ ಅವಲಂಬಿತವಾದೆವು. ಆದಷ್ಟು ಬೇಗ ಲಸಿಕೆಯನ್ನು ಕಂಡುಹಿಡಿಯುವ ದೃಢಸಂಕಲ್ಪ ಇದ್ದದ್ದರಿಂದ ಒಂದು ವರ್ಷದೊಳಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಯಿತು.

ಡೆಲ್ಟಾ ರೂಪಾಂತರದಿಂದಾಗಿ 2021ರಲ್ಲೂ ಕಾಡಿ ವರ್ಷಾಂತ್ಯದ ವೇಳೆಗೆ ನಮ್ಮಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಕೋವಿಡ್‌ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಮತ್ತು ಜನರಿಗೆ ಲಸಿಕೆ ಹಾಕಲು ಕೆಲವು ಸಂದರ್ಭಗಳಲ್ಲಿ ತಮ್ಮ ಪ್ರಾಣ ಸೇರಿದಂತೆ ಎಲ್ಲವನ್ನೂ ನೀಡಿದ ಸ್ಪರ್ಶ ಆಸ್ಪತ್ರೆಯ ತಜ್ಞ ವೈದ್ಯ ಡಾ|| ನಾಗೇಶ ಬಸವರಾಜ್ ಹೋಮಿಯೋಪಥಿ ತಜ್ಞ ವೈದ್ಯ ಡಾ|| ಬಿ.ಟಿ.ರುದ್ರೇಶ್, ಹಾಗೂ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯ ತಜ್ಞ ವೈದ್ಯ ಡಾ|| ಶಿವಕುಮಾರ್ ಸ್ವಾಮಿ ಅವರಂತಹ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಹಾಗೂ ವಿಜ್ಞಾನಿಗಳಿಗೆ ನಾವು ಸದಾ ಕೃತಜ್ಞರಾಗಿರಬೇಕು.

ಇವರುಗಳ ಅನುಪಮ ಸೇವೆ ಮತ್ತು ತ್ಯಾಗವನ್ನು ಸ್ಮರಿಸಿ ದೇಶದೆಲ್ಲೆಡೆ ಸ್ಮಾರಕಗಳನ್ನು ನಿರ್ಮಿಸಬೇಕಿದೆ.

ಇಷ್ಟಕ್ಕೂ ಅಂದು ಕಾಲದ ಅಭಾವ ಹಾಗೂ ಲಸಿಕೆಯ ತುರ್ತು ಅಗತ್ಯದ ಕಾರಣದಿಂದ ಹಲವು ಕಂಪನಿಗಳು ಕಡ್ಡಾಯ ವೈದ್ಯಕೀಯ ಪ್ರಯೋಗದೊಂದಿಗೆ ರಾಜಿ ಮಾಡಿಕೊಂಡವು. ಇದುವೇ ದೀರ್ಘಕಾಲಿನ ಅಡ್ಡ ಪರಿಣಾಮಕ್ಕೆ ಎಡೆಮಾಡಿಕೊಟ್ಟಿದೆ. ತಾನು ಆವಿಷ್ಕರಿಸಿದ ಕೊರೋನಾ ಲಸಿಕೆ ಅಪರೂಪದ ಅಡ್ಡ ಪರಿಣಾಮವಾದ ತ್ರೊಂಬೋಸಿಸ್‌ನೊಂದಿಗೆ ತ್ರೊಂಬೊಸೈಟೊಫೆನಿಯಾ ಸಿಂಡ್ರೋಮ್‌ಗೆ ಎಡೆ ಮಾಡಿಕೊಡುತ್ತದೆ ಎಂಬುದನ್ನು ಇಂಗ್ಲೆಂಡಿನ ಅಸ್ಟ್ರಾಜೆನಿಕಾ ಕಂಪನಿ ಕೂಡ ಒಪ್ಪಿಕೊಂಡಿದೆ. ಇದುವೇ ನನ್ನಂತಹ ಹಲವರಲ್ಲಿ ದಿಗ್ಭ್ರಮೆ ಮೂಡಿಸಿದೆ.

ಅಂದರೆ ಲಸಿಕೆ ಪಡೆದವರಲ್ಲಿ ಕೆಲವು ಅಪರೂಪದ ಪ್ರಕರಣಗಳಲ್ಲಿ ಅಡ್ಡ ಪರಿಣಾಮ ಉಂಟಾಗುವ ಸಂಭವಗಳಿವೆ. ಅದು ರಕ್ತ ಹೆಪ್ಪುಗಟ್ಟುವ ರೋಗ ಇರಬಹುದು. ಅಸ್ಟ್ರಾಜೆನಿಕಾ ಎಸಗಿರುವ ತೀವ್ರ ಆರೋಗ್ಯ ಹಾನಿ ಹಾಗೂ ಸಾವುಗಳ ಆಪಾದನೆಯ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳು ಅಲ್ಲಲ್ಲಿ ಎದ್ದಿದ್ದವು. ನಮ್ಮ ದೇಶದಲ್ಲಿ ಲಸಿಕೆಯನ್ನು ಇದೇ ಹೆಸರಿನ ಬದಲು ಕೋವಿಶೀಲ್ಡ್‌ನ್ನು ಅಸ್ಟ್ರಾಜೆನಿಕಾ ಪಾಲುದಾರಿಕೆಯೊಂದಿಗೆ ತಯಾರಿಸಲಾಗಿದೆ. ಇಷ್ಟಕ್ಕೂ ನಮ್ಮಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತ್ತು. ಇದರ ಸಿಇಓ ಆಡಾರ್ ಪುನಾವಾಲ ಅಭಿಯಾನದ ಪೋಸ್ಟರ್ ಬಾಯ್ ಆಗಿದ್ದರು. ಇದನ್ನು ತುರ್ತಾಗಿ ಬಳಸಲು ವಿಶೇಷ ಪ್ರಕರಣದಡಿ ಅನುಮೋದನೆ ನೀಡಿ ಸೈರಸ್ ಫೋನಾವಾಲಾಗೆ ಅತ್ಯುನ್ನತ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು ಕೊಡಲಾಗಿದೆ.

ಇಲ್ಲಿ ವಿಪರ್ಯಾಸ ಎಂದರೆ, ಅಸ್ಟ್ರಾಜೆನಿಕಾ ತನ್ನ ಲಸಿಕೆಯ ಲೋಪವನ್ನು ಒಪ್ಪಿಕೊಂಡ ಒಂದು ದಿನದ ನಂತರದಲ್ಲೇ ಮಹಿಳೆಯೊಬ್ಬರ ಪೋಷಕರಿಂದ ಕಾನೂನುಕ್ರಮ ಎದುರಿಸುವಂತಾಗಿತ್ತು. ಪಾಪದ ಮಹಿಳೆ ಲಸಿಕೆ ತೆಗೆದುಕೊಂಡ ಬಳಿಕ ಮರಣ ಹೊಂದಿದ್ದಳು. ಕಾರುಣ್ಯ ಮತ್ತು ರಿಥೈಕಾ 2021 ರ ಜುಲೈನಲ್ಲಿ ಮಾಡದ ತಪ್ಪಿಗಾಗಿ ಜೀವ ಬಿಟ್ಟಿದ್ದರು. ಆಗ ಕಾರುಣ್ಯಳ ಸಾವಿನ ಕುರಿತು ತನಿಖೆ ಮಾಡಬೇಕೆಂಬ ಕೂಗು ಎದ್ದಿತ್ತು ಪ್ರಕರಣದ ತನಿಖೆಗೆ ಒಂದು ನಿಷ್ಪಕ್ಷಪಾತ ಮಂಡಳಿಯನ್ನು ರಚಿಸುವಂತೆ ರಿಟ್ ಅರ್ಜಿಯಲ್ಲಿ ಮನವಿ ಮಾಡಿದ್ದರು.

ಸಂತ್ರಸ್ತೆಯ ಪೋಷಕರಾದ ವೇಣುಗೋಪಾಲನ್ ಗೋವಿಂದನ್ ಅವರು ಅಸ್ಟ್ರಾಜೆನಿಕಾದಿಂದ ತಪ್ಪೊಪ್ಪಿಗೆ ತಡವಾಗಿ ಬಂದಿದೆ. ರಕ್ತ ಹೆಪ್ಪುಗಟ್ಟುವಿಕೆಯಿಂದ ಸಾವುಗಳಾಗಿವೆ. 15 ಯುರೋಪಿಯನ್ ರಾಷ್ಟ್ರಗಳು ಇದನ್ನು ಅಮಾನತುಗೊಳಿಸಿದ ನಂತರವಾದರೂ, ಲಸಿಕೆ ಪೊರೈಕೆಯನ್ನು ನಿಲ್ಲಿಸಬೇಕಿತ್ತೆಂದು ಮನವಿಯಲ್ಲಿ ವಿಷಾದ ವ್ಯಕ್ತಪಡಿಸಿದ್ದರು.

ಇದೇ ಹೊತ್ತಲ್ಲಿ ಆರೋಗ್ಯ ಕ್ಷೇತ್ರದ ತಜ್ಞರೊಬ್ಬರು ಶೇಕಡ 90ರಷ್ಟು ಜನರಿಗೆ ಇದೇ ಲಸಿಕೆ ಕೊಡಲಾಗಿದೆ. ಅವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟನೆ ಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಸಂತ್ರಸ್ತೆಯ ತಂದೆ, ಸರ್ಕಾರ ಹಾಗೂ ಕೋವಿಶೀಲ್ಡ್ ತಯಾರಕರು ದೇಶದ ಉದ್ದಗಲ ಸಾಕಷ್ಟು ಆಧಾರ ಹಾಗೂ ಪುರಾವೆಗಳ ಮೂಲಕ ಲಸಿಕೆ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ಮಾರಾಟ ಮಾಡಿದ್ದಾದರೂ, ಜನ ಸಮುದಾಯದಲ್ಲಿ ಇದರ ಸಂಭವನೀಯ ಅಡ್ಡ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಿಲ್ಲ ಎಂದು ಹೇಳಿದ್ದನ್ನಿಲ್ಲಿ ಗಮನಿಸಬಹುದು. ಅಲ್ಲದೆ, ಕೋವಿಶೀಲ್ಡ್ ಅಡ್ಡ ಪರಿಣಾಮ ಹಾಗೂ ಅಪಾಯಕಾರಿ ಅಂಶಗಳ ಬಗ್ಗೆ ವೈದ್ಯಕೀಯ ರಂಗದ ತಜ್ಞರ ಸಮಿತಿಯೊಂದನ್ನು ರಚಿಸುವಂತೆ ಕೋರಿ ರಚನಾ ಗಂಗಾ ಮತ್ತು ಗೋವಿಂದನ್ ಅವರುಗಳು ಸರ್ವೋಚ್ಚ ನ್ಯಾಯಾಲಯದ ಮುಂದೆ ಕೂಡ ಹೋಗಿದ್ದರು. ಜೊತೆಗೆ ಲಸಿಕೆಯಿಂದಾಗಿ ತೀವ್ರ ಸ್ವರೂಪದ ಅಂಗವೈಕಲ್ಯ ಅಥವಾ ಸಾವಿಗೀಡಾದವರಿಗೆ ಪರಿಹಾರ ನೀಡುವಂತೆಯೂ ಕೋರಿದ್ದರು. ಇನ್ನೊಂದು ಗಹನವಾದ ವಿಚಾರ ಎಂದರೆ, ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಅವರ ಪಟ ಕಾಣೆಯಾಗಿದ್ದಕ್ಕೂ ಕೋಲಾಹಲ ಉಂಟಾಗಿತ್ತು. ಲಸಿಕಾ ಅಭಿಯಾನದ ಹೊತ್ತಲ್ಲಿಯೇ, ಅನುಮಾನಾಸ್ಪದ ಸಾವುಗಳ ಬಗ್ಗೆ ಸುದ್ದಿ ಹೊರಬರುತ್ತಿದ್ದಾಗ ಇದರಿಂದಾಗಿಯೇ ಫೋಟೋ ತೆಗೆದಿರಬಹುದೆಂಬ ವಿಶ್ಲೇಷಣೆಗಳು ಹರಿದಾಡಿದ್ದವು. ಇಲ್ಲೊಂದು ಸಲಹೆ ಅದು ಜಿಮ್‌ಗೆ ತೆರಳುವ ಮುನ್ನ ಯುವಕರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಸೂಕ್ತ. ಇಷ್ಟಕ್ಕೂ ಹೃದಯಾಘಾತ ಎಂಬುದು ಇಂದಿನದಲ್ಲ. ಬಹಳ ಹಿಂದಿನಿಂದಲೂ ಇದೆ.

ಇದೇನೇ ಇರಲಿ, ಎರಡನೇ ಅಲೆಯ ಮಧ್ಯದಲ್ಲಿಯೇ ಪರಿಸ್ಥಿತಿ ಕೈಮೀರಿ ಹೋದಾಗ ಸೋಂಕಿತರು ಮಾಸ್ಕ್, ಸ್ಯಾನಿಟೈಸರ್, ಹಾಸಿಗೆ, ಔಷಧ, ಪ್ರಾಣವಾಯುವಿಗಾಗಿ ಆಸ್ಪತ್ರೆಗಳ ಮುಂದೆ ಸರದಿಯಲ್ಲಿ ನಿಲ್ಲುತ್ತಿದ್ದರು.

ಇದು ಎಷ್ಟರಮಟ್ಟಿಗೆ ಆಯಿತೆಂದರೆ ಗತಿಸಿದವರಿಗೊಂದು ಗೌರವಯುತ ಸಂಸ್ಕಾರ ನಡೆಸಲು ಆಗಿರಲಿಲ್ಲ. ಇಂತಹ ಅನಾಹುತಕ್ಕೆ ಆಡಳಿತಗಾರರ ಶೋಕೇಸ್ ಇಮೇಜ್ ಕಾರಣವೇ ಎಂಬುದು ಕೂಡ ತನಿಖೆಗೆ ಒಳಪಡುವ ಅಗತ್ಯವಿದೆ.

ಮೊದಲಿಗೆ 45 ವರ್ಷ ವಯಸ್ಸಾದವರೆಲ್ಲರೂ ಲಸಿಕೆ ಪಡೆಯಬಹುದೆಂಬ ಘೋಷಣೆ ಹೊರಬಿತ್ತಾದರೂ ದೇಶದ 1.39 ಬಿಲಿಯನ್ ಅಂದರೆ 1,390 ಮಿಲಿಯನ್ ಜನರು 45 ವರ್ಷ ಮೇಲ್ಪಟ್ಟವರಿದ್ದರು. ಆದರೆ 2021 ಜೂನ್ ವೇಳೆಗೆ 169.6 ಮಿಲಿಯನ್ ಜನರಿಗೆ ಮಾತ್ರ ಮೊದಲ ಹಂತದ ಲಸಿಕೆ ಹಾಕಿಸಿಕೊಂಡಿದ್ದರೆ ಶೇಕಡ 43.5 ಮಿಲಿಯನ್ ಜನರಿಗೆ ಎರಡು ಹಂತದ ಲಸಿಕೆ ಹಾಕಿಸಿಕೊಂಡಿದ್ದರು. ಇದರಂತೆ 45 ವರ್ಷ ದಾಟಿದವರು ಮೊದಲ ಹಂತದ ಲಸಿಕೆಯನ್ನು ಹೆಚ್ಚುಕಡಿಮೆ ಶೇಕಡ 67ರಷ್ಟು ಜನ, ಎರಡು ಹಂತದ ಲಸಿಕೆಯನ್ನು ಶೇಕಡ 17ರಷ್ಟು ಜನ ಮಾತ್ರ ಪಡೆದಿದ್ದರು.

ಇದನ್ನೇ ಸಾಧನೆ ಎಂಬಂತೆ ಸರ್ಕಾರ ಅಂದು ಬಿಂಬಿಸಿಕೊಂಡಿತಾದರೂ, ಲಸಿಕೆಯ ಅಭಿಯಾನವನ್ನು ದೇಶದೊಳಗಿನ 45 ವರ್ಷದೊಳಗಿನವರನ್ನೇ ಗುರಿಯಾಗಿಟ್ಟುಕೊಂಡಿತ್ತು. ಅಂದರೆ 252 ಮಿಲಿಯನ್ ಜನರ ಜೀವ ಕಾಪಾಡುವ ಉದ್ದೇಶ ಇತ್ತು. ಇಂತಹ ಲೆಕ್ಕದಲ್ಲಿ ದೇಶದ ಸಶಸ್ತ್ರ ಪಡೆಯ ಯೋಧರು, ಸಂಸದರು, ಪೊಲೀಸರು, ವೈದ್ಯರು, ಆರೋಗ್ಯ ಕಾರ್ಯಕರ್ತರು ಕೂಡಿಕೊಂಡು ಮೊದಲ ಹಂತದ ಲಸಿಕೆ ಹಾಕಿಸಿಕೊಂಡಿದ್ದರು.

ಇನ್ನೂ ಲಸಿಕೆಯ ಮೊದಲ ಡೋಸ್ ನ್ನು ಶೇಕಡ 12.4 ಜನರಿಗೆ ಮಾತ್ರ ನೀಡಲು ಸಮರ್ಥವಾಗಿದ್ದೆವು. ಶೇಕಡ 3.2ರಷ್ಡು ಜನ ಮಾತ್ರ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದರೆಂದು ಕೆಲವು ಪತ್ರಿಕೆಗಳು ಸುದ್ದಿ ಮಾಡಿದ್ದವು. ಇದು ಜಗತ್ತಿನಲ್ಲಿಯೇ ಅತ್ಯಂತ ವೇಗದ ಕಾರ್ಯಕ್ರಮವೇ? ಎಂಬ ಶೀರ್ಷಿಕೆಯಡಿ ವ್ಯಂಗ್ಯವೂ ವ್ಯಕ್ತವಾಗಿತ್ತು.

ಗೊತ್ತಿರಲಿ, ನಮ್ಮದು ಜನಸಂಖ್ಯೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ. ಸುಮಾರು 1.39 ಬಿಲಿಯನ್ ಅಂದರೆ 1,390 ಮಿಲಿಯನ್ ಎಂದು ಅಂದಾಜು ಮಾಡಲಾಗಿದೆ. 2021 ಜೂನ್ 1ರ ಹೊತ್ತಿಗೆ 7.6 ಬಿಲಿಯನ್ ಅಂದರೆ 7,600 ಮಿಲಿಯನ್ ಜನರಲ್ಲಿ ಸುಮಾರು 2 ಬಿಲಿಯನ್ ಜನ, ಅಂದರೆ 2000 ಮಿಲಿಯನ್ ಜನ ಮಾತ್ರ ಲಸಿಕೆ ಪಡೆದಿದ್ದರು.

ಇದರಲ್ಲಿ 1560 ಮಿಲಿಯನ್ ಜನ ಅಂದರೆ ಜಗತ್ತಿನ ಜನಸಂಖ್ಯೆಯಲ್ಲಿ ಶೇಕಡ 20.5ರಷ್ಟು ಮಾತ್ರ ಮೊದಲ ಡೋಸ್ ಪಡೆದವರಿದ್ದರು. 440 ಮಿಲಿಯನ್ ಅಂದರೆ ಶೇಕಡ 5.7 ರಷ್ಟು ಜನ ಮಾತ್ರ ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಪಡೆದಿದ್ದರು. ಆದರೆ ನಮ್ಮಲ್ಲಿ ಶೇಕಡ 12.4 ರಷ್ಟು ಮೊದಲ ಡೋಸ್ ಪಡೆದಿದ್ದರು.

ನಮ್ಮ ಜನಸಂಖ್ಯೆ ಜಗತ್ತಿನ 5/1 ಭಾಗ ಮಾತ್ರ. ಆದರೆ ಸಂಪೂರ್ಣ ಲಸಿಕೆ ಹೊಂದಿದ ಜನರ ಪ್ರಮಾಣಕ್ಕೆ ಕೇವಲ ಶೇಕಡ 9.7 ರಷ್ಟು ಕೊಡುಗೆ ಕೊಟ್ಟಿತ್ತು. ಶೇಕಡ 10ರಷ್ಟು ಜನ ಮಾತ್ರ ಮೊದಲ ಲಸಿಕೆ ಪಡೆದವರಿದ್ದರು. ಇದನ್ನು ಇತರೆ ದೇಶಗಳಿಗೆ ಹೋಲಿಸಿಕಂಡಾಗ, ಚೀನಾ ತನ್ನ 1.4 ಬಿಲಿಯನ್ ಜನಸಂಖ್ಯೆಯಲ್ಲಿ 680 ಮಿಲಿಯನ್ ಜನರಿಗೆ ಅಂದರೆ ಶೇಕಡ 48ರಷ್ಟು ಲಸಿಕೆ ನೀಡಿತ್ತು. ಅಮೆರಿಕ ತನ್ನ 332 ಮಿಲಿಯನ್ ಜನರಿಗೆ 296.4 ಮಿಲಿಯನ್ ಡೋಸ್‌ನಷ್ಟು ಅಂದರೆ ಶೇಕಡ 89ರಷ್ಟು ಲಸಿಕೆ ಕೊಡಿಸಿತ್ತು.

ಮಲೇಶಿಯಾ 3.36 ಮಿಲಿಯನ್ ಲಸಿಕೆಯನ್ನು ತನ್ನ ಶೇಕಡ 10ರಷ್ಟು ಜನರಿಗೆ, ಬಾಂಗ್ಲಾ 10.2 ಮಿಲಿಯನ್ ಲಸಿಕೆಗಳನ್ನು ಶೇಕಡ 6ರಷ್ಟು ಜನರಿಗೆ, ಪಾಕಿಸ್ತಾನ 7.9 ಮಿಲಿಯನ್ ಲಸಿಕೆಗಳನ್ನು ಅಂದರೆ ಶೇಕಡ 3ರಷ್ಟು ಜನರಿಗೆ ಮಾತ್ರ ಕೊಡಿಸಿದ್ದವು. ಇದೇನೇ ಇರಲಿ, ಲಸಿಕೆ ನೀಡುವಿಕೆಯ ವೇಗವನ್ನು ನಮ್ಮ ದೇಶದಲ್ಲಿ ಹೆಚ್ಚಿಸಿಕೊಳ್ಳಬೇಕಿತ್ತೆಂಬ ಅಭಿಪ್ರಾಯದೊಂದಿಗೆ, ಸಂಗ್ರಹಣೆ ಮಾಡುವುದರಲ್ಲಿಯೂ ಮತ್ತಷ್ಟು ಆಸಕ್ತಿ ತೋರಬೇಕಿತ್ತು. ಇದಕ್ಕೆ ಖಾಸಗಿ ಕಂಪನಿಗಳ ಮೇಲೆ ಅವಲಂಬಿಸಿದ್ದೇ ಕಾರಣವಾಗಿರಬಹುದು. ಸೀರಮ್ ಇನ್‌ಸ್ಟಿಟ್ಯೂಟ್ ಮತ್ತು ಭಾರತ ಬಯೋಟೆಕ್ ಕಂಪನಿಗಳು ಸಕಾಲದಲ್ಲಿ ತಮ್ಮ ಗುರಿ ತಲುಪುವಲ್ಲಿ ವಿಫಲಗೊಂಡಿದ್ದನ್ನು ಗಮನಿಸಬಹುದು. ಅಂತಾರಾಷ್ಟ್ರೀಯ ಲಸಿಕೆ ತಯಾರಕರು ಮುಂಚಿತವಾಗಿ ಬಂದಿದ್ದ ಬೇಡಿಕೆಯಿಂದಾಗಿ ನಮಗೆ ತಲುಪಿಸಲು ಸಾಧ್ಯವಾಗಿರಲಿಲ್ಲ. ವಯಸ್ಕರಿಗೆ ಲಸಿಕೆ ನೀಡುತ್ತೇವೆ ಎಂಬ ಹೇಳಿಕೆಗಳಿಗೇನು ಕೊರತೆ ಇರಲಿಲ್ಲ. ಆದರೆ ಅಂಕಿಅಂಶ ಬೇರೆಯದೆ ಕಥೆ ಹೇಳುತ್ತಿತ್ತು. ಮೇ ಮಾಸದಲ್ಲಿ 60 ಮಿಲಿಯನ್ ಲಸಿಕೆಗಳನ್ನು ನೀಡಲಾಗಿತ್ತು. ದೇಶದ 840 ಮಿಲಿಯನ್ ವಯಸ್ಕರ ಜನರಿಗೆ ಲಸಿಕೆ ನೀಡಲು ನಮಗೆ 1680 ಡೋಸ್‌ಗಳಷ್ಟು ಲಸಿಕೆಯ ಅಗತ್ಯ ಇತ್ತಾದರೂ 213 ಮಿಲಿಯನ್ ಜನರಿಗೆ ಲಸಿಕೆ ನೀಡಲು 1470 ಮಿಲಿಯನ್ ಲಸಿಕೆ ಅಗತ್ಯವಿದ್ದು, ಇದಕ್ಕಾಗಿ ದಿನವೊಂದಕ್ಕೆ 8.8 ಮಿಲಿಯನ್ ಲಸಿಕೆಯ ಅಗತ್ಯವಿತ್ತು.

ಇದರ ಮಧ್ಯೆ ಎಲೋನ್ ಮಸ್ಕ್ ಹೇಳಿಕೆ ನಿಜವೇ ಎಂದು ಶೋಧಿಸಲು ಮುಂದಾದೆ.

ಕೊರೋನಾ ಲಸಿಕೆ ಲಭ್ಯವಾಗುವ ಮೊದಲೇ ವುಹಾನ್ ವೈರಸ್‌ಗೆ ತುತ್ತಾಗಿತ್ತೆಂದು ಮಸ್ಕ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಸರಳ ಕೆಮ್ಮು ಮತ್ತು ಶೀತ-ಜ್ವರ ಇದರ ಲಕ್ಷಣವಾಗಿದ್ದವು. ಎರಡನೇ ಡೋಸ್ ಲಸಿಕೆ ತೆಗೆದುಕೊಂಡ ನಂತರವೂ ನನ್ನ ಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದರಿಂದ ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾನಾಗ ಸಾಯುತ್ತೇನೆ ಎಂದೇ ಭಾವಿಸಿದ್ದೆ. ಇಂತಹ ಗಂಭೀರ ಹೇಳಿಕೆಯನ್ನು ಮುಖ್ಯವಾಹಿನಿಯ ಮಾಧ್ಯಮಗಳು ಸ್ಥಾನವನ್ನೇ ನೀಡಲಿಲ್ಲ ಎಂದು ಮಸ್ಕ್ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ಕೊರೋನಾ ಲಸಿಕೆಯ ಬಗ್ಗೆ ಎಲೋನ್ ಮಸ್ಕ್ ಅನುಮಾನ ವ್ಯಕ್ತಪಡಿಸಿದ್ದು ಇದೇ ಮೊದಲಲ್ಲ. 2020 ರಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಹಲವು ದೇಶಗಳು ಹೇರಿದ್ದ ಲಾಕ್‌ಡೌನ್‌ನ್ನು ಮಸ್ಕ್ ವಿರೋಧಿಸಿದ್ದರು.

2023 ರಲ್ಲಿ ಖ್ಯಾತ ಬ್ಯಾಸ್ಕೆಟ್‌ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ ಅವರ ಮಗನಿಗೆ ಹೃದಯಾಘಾತ ಆದನಂತರ ಎಲೋನ್ ಮಸ್ಕ್ ಅದನ್ನು ಕೊರೋನಾ ಲಸಿಕೆಗೆ ಲಿಂಕ್ ಮಾಡಲು ಪ್ರಯತ್ನಿಸಿದ್ದರು.

ನಾವು ಎಲ್ಲದಕ್ಕೂ ಕೊರೋನಾ ಲಸಿಕೆಯನ್ನು ದೂಷಿಸಲು ಸಾಧ್ಯವಿಲ್ಲ. ಆದರೆ ಲಸಿಕೆಗೆ ಯಾವುದೇ ಬಗೆಯ ಪಾತ್ರವಿಲ್ಲ ಎಂಬರ್ಥವಲ್ಲ ಎಂದು ಮಸ್ಕ್ ಪೋಸ್ಟ್ ಮಾಡಿದ್ದರು. ಅದೇ ವರ್ಷದಲ್ಲಿ, ಲಸಿಕೆಯ ಡೋಸ್ ತೆಗೆದುಕೊಂಡ ನಂತರ ಅವರ ಸ್ಥಿತಿ ಹದಗೆಟ್ಟಿತ್ತೆಂದು ಕೂಡ ಮಸ್ಕ್ ಹೇಳಿಕೊಂಡಿದ್ದರು.

ಪ್ರವಾಸಕ್ಕಾಗಿ ನಾನು ಮೂರು ಡೋಸ್ ಲಸಿಕೆಯನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ ಮೂರನೇ ಡೋಸ್ ನಂತರ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಒದಗಿತೆಂದು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದರು.

ಇನ್ನೂ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ಮತ್ತಷ್ಟು ಕೆದಕಲು ಆರಂಭಿಸಿದಾಗ ಆಘಾತಕಾರಿ ವಿಷಯಗಳು ಎದ್ದು ಕಾಡಲಾರಂಭಿಸಿದವು.ಅದರಲ್ಲಿ ಕೊರೋನಾ ನಂತರದ ದಿನಗಳಲ್ಲಿ ಮಹಿಳೆಯರು ತಮ್ಮ ಮುಟ್ಟಿನ ಹೊತ್ತಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಗೊಂದಲವನ್ನು ಅನುಭವಿಸುತ್ತಿರುವುದು ಗಾಬರಿ ಮೂಡುಸುತ್ತಿದೆ.

ಮೊದಲಿಗೆ ಮುಟ್ಟಿನ ಸಮಸ್ಯೆ ಕುರಿತ ವರದಿ ಹೊರಬರುತ್ತಿದ್ದರೂ ಅವು ಸಾಮಾನ್ಯ ಎಂಬಂತಿತ್ತು. ಆದರೆ ಇದರ ಬಗ್ಗೆ ಇಲಿನಾಯ್ಸ್ ವಿಶ್ವವಿದ್ಯಾಲಯದ ಮಾನವಶಾಸ್ತ್ರಜ್ಞೆ ಕೇಟ್ ಕ್ಲಾನ್ಸಿ ಅವರು ಆಸ್ಥೆ ವಹಿಸಿ ಅಧ್ಯಯನ ನಡೆಸಲು ಮುಂದಾಗಿದ್ದರು.
ಕೊರೋನಾ ಲಸಿಕೆಗಳನ್ನು ತುರ್ತು ಬಳಕೆಯ ಅನುಮೋದನೆ ಪಡೆಯಲು ಅಗತ್ಯವಿರುವ ಕನಿಷ್ಟ ಮಾಹಿತಿಯನ್ನು ಪಡೆಯಲು ಮೂಲ ಕ್ಲಿನಿಕಲ್ ಪ್ರಯೋಗಗಳನ್ನಷ್ಟೇ ನಡೆಸಲಾಗಿತ್ತೆಂಬ ಊಹಾಪೋಹಗಳು ಹರಿದಾಡಿದ್ದರೂ ಅಡ್ಡಪರಿಣಾಮಗಳನ್ನು ಗ್ರಹಿಸುವುದು ಅಷ್ಟು ಸುಲಭವಲ್ಲ. ಶೋಧಿಸುತ್ತಾ ಸಾಗಿದಂತೆ, ವಿ-ಸೇಫ್ ಎಂಬ ಸ್ವಯಂ-ವರದಿ ಮಾಡುವ ವ್ಯವಸ್ಥೆ ಇದೆ ಎಂಬುದು ಗೊತ್ತಾಯಿತು. ಇದು ವಿಚಿತ್ರ ಬಗೆಯ ಮುಟ್ಟಿನ ಸಮಸ್ಯೆಗಳನ್ನು ಒಳಗೊಂಡಂತೆ ಎಲ್ಲಾ ಬಗೆಯ ದೈಹಿಕ ಬದಲಾವಣೆಗಳನ್ನು ಟ್ರ್ಯಾಕ್ ಮಾಡಿದೆ.

ಇದರಂತೆ, ಲಸಿಕೆಯಿಂದಾಗಿ ಮಹಿಳೆಯರು ಸೌಮ್ಯ ಅಥವಾ ಮಧ್ಯಮ ಪ್ರಮಾಣದ ಅಡ್ಡಪರಿಣಾಮಗಳನ್ನು ಅನುಭವಿಸಿರುವ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ಇನ್ನೂ ಹೆಸರಾಂತ ಜಾನ್ಸನ್ ಮತ್ತು ಜಾನ್ಸನ್ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆ ಆಗುತ್ತಿತ್ತು. ಹೀಗೆ ಬಳಲುತ್ತಿದ್ದ 28 ಜನರಲ್ಲಿ ಇಪ್ಪತ್ತೆರಡು ಜನ ಮಹಿಳೆಯರೇ ಇದ್ದರು. ಇತರೆ ಲಸಿಕೆಗಳನ್ನು ಹಾಕಿಸಿಕೊಂಡ ನಂತರ ತೀವ್ರ ಬಗೆಯ ಅಲರ್ಜಿ ಪ್ರತಿಕ್ರಿಯೆ ಆಗಿರುವುದು ಹರಿದಾಡಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಅದರಲ್ಲೂ ಅನಾಫಿಲ್ಯಾಕ್ಸಿಸ್ ಹೊಂದಿರುವವರಲ್ಲಿಯೂ ಮಹಿಳೆಯರಿದ್ದರು. ಇಷ್ಟಲ್ಲದೆ, ಕೊರೋನಾ ಲಸಿಕೆ ಪಡೆದನಂತರ ಮಹಿಳೆಯರ ಮೇಲೆ ತೀವ್ರವಾದ, ವ್ಯಾಪಕವಾದ ದದ್ದುಗಳು ಎದ್ದಿರುವುದು ಸುದ್ದಿಯಾಗಿ ಸಹಿಸಲಾಗದಂತಹ ಸಮಸ್ಯೆಯಾಗಿತ್ತು. ಇನ್ನಿಲ್ಲಿ, ಮಹಿಳೆಯರ ರೋಗನಿರೋಧಕ ವ್ಯವಸ್ಥೆಯಿಂದ ಭ್ರೂಣವನ್ನು ಸೋಂಕಿನಿಂದ ರಕ್ಷಿಸಲು ಹೊಂದಿಕೊಳ್ಳುತ್ತವೆ. ಆದರೆ ಭ್ರೂಣವನ್ನು ರೂಪಿಸುವ ಕೋಶಗಳ ಮೇಲೆ ದಾಳಿ ಎಸಗಿಲ್ಲ.

ಇನ್ನೊಂದು ಬಹುಮುಖ್ಯ ವಿಚಾರ ಎಂದರೆ, ಲಸಿಕೆಯಿಂದಾಗಿ ಲೈಂಗಿಕ ಹಾರ್ಮೋನು ಮತ್ತು ರೋಗನಿರೋಧಕ ವ್ಯವಸ್ಥೆಯು ಪರಸ್ಪರ ಪ್ರಭಾವ ಬೀರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ರೋಗನಿರೋಧಕ ತಜ್ಞೆ ಸಾಬ್ರಾ ಕ್ಲೈನ್ ಹೇಳಿದ್ದರು. ಇದೇ ಹೊತ್ತಲ್ಲಿ ಲಸಿಕೆಯಿಂದಾಗುವ ಮುಟ್ಟಿನ ಸಮಸ್ಯೆಯನ್ನು ಅಧ್ಯಯನ ಮಾಡಲು ರಾಷ್ಟ್ರೀಯ ಆರೋಗ್ಯ ಸಂಸ್ಥೆಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇನೆ ಎಂದು ಕೂಡ ತಿಳಿಸಿದ್ದರು. ಇಷ್ಟಲ್ಲದೆ, ಇತರೆ ಬಗೆಯ ಅಡ್ಡಪರಿಣಾಮಗಳು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಸಾಮಾನ್ಯವಾಗಿದೆಯೇ ಅಥವಾ ಎಲ್ಲಾ ವಯಸ್ಸಿನ ಮಹಿಳೆಯರಲ್ಲೂ ಸಾಮಾನ್ಯವಾಗಿದೆಯೇ ಎಂಬುದರ ಬಗ್ಗೆಯೂ ಅಧ್ಯಯನದ ಮಾಹಿತಿ ಹೊರಬರಬೇಕಿದೆ.

ಜಾನ್ಸನ್ ಮತ್ತು ಜಾನ್ಸನ್ ಚುಚ್ಚುಮದ್ದಿನ ನಂತರ ರಕ್ತ ಹೆಪ್ಪುಗಟ್ಟುವಿಕೆಗೆ ಒಳಗಾದ ಎಲ್ಲಾ ಮಹಿಳೆಯರು 18 ರಿಂದ 48 ವರ್ಷ ವಯಸ್ಸಿನವರೇ ಆಗಿರುವುದು ಗಮನಾರ್ಹ.

ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಿಗೆ ಅನುಮೋದನೆಗೊಂಡ ಎಲ್ಲಾ ತರಹದ ಲಸಿಕೆಗಳು ಉಂಟುಮಾಡಿರುವ ಪರಿಣಾಮಗಳ ಬಗ್ಗೆಯೂ ಚರ್ಚೆಯಾಗಬೇಕಿದೆ. ಇದರ ನಡುವೆ, ಗರ್ಭನಿರೋಧಕ ಮಾತ್ರೆ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯದೊಂದಿಗೆ ಸಂಬಂಧ ಹೊಂದಿವೆ ಎಂಬ ಅಂತೆಕಂತೆಗಳನ್ನು ತೇಲಿಬಿಡಲಾಗಿತ್ತು. ಹೀಗೆ ತೇಲಿ ಬಿಡುವ ಮೂಲಕ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯನ್ನು ತಳ್ಳಿಹಾಕುವ ಪ್ರಯತ್ನವೂ ನಡೆದಿತ್ತು. ಇದೇನೆ ಇರಲಿ, ಗರ್ಭನಿರೋಧಕ ಮಾತ್ರೆಯಿಂದ ಮಹಿಳೆಯರಿಗೆ ರಕ್ತ ಹೆಪ್ಪುಗಟ್ಟುವಿಕೆ ಬರದಂತೆ ತಡೆಯಲು ಸರ್ಕಾರ ಮುಂದಾಗಬೇಕಿದೆ.

ಇನ್ನೂ ಲಸಿಕೆಯ ಅಡ್ಡಪರಿಣಾಮಗಳ ಕುರಿತು ದೊರೆಯುವ ಮಾಹಿತಿಯ ಮೂಲವೆಂದರೆ VAERS ಎಂಬ ವೆಬ್‌ಸೈಟ್‌ನಲ್ಲಿದೆ. ಇಲ್ಲಿ ದೊರಕುವ ಮಾಹಿತಿಯು ದಾರಿತಪ್ಪಿಸುವಂತಿರಬಹುದು.

ಆದರೆ, ಅಮೆರಿಕಾದಂತಹ ದೇಶದಲ್ಲಿಂದು ಅರ್ಧದಷ್ಟು ಜನಸಂಖ್ಯೆಯ ಜನರು ಲಸಿಕೆಗಳನ್ನು ಪಡೆದಿದ್ದರೂ, ತೀವ್ರವಾದ ರೋಗಗಳಿಗೆ ಒಳಗಾಗುತ್ತಿದ್ದಾರೆ.

ಇದಿಷ್ಟೇ ಅಲ್ಲದೇ ಜರ್ಮನಿಯಲ್ಲಿ ನಡೆದ ಸಂಸದೀಯ ವಿಚಾರಣೆಯ ಹೊತ್ತಿನಲ್ಲಿ, ಮಾಜಿ ಔಷಧಕಾರ ಕೊರೋನಾ ಲಸಿಕೆಗಳಿಗೆ ಸಂಬಂಧಿಸಿದ ಸಾವುಗಳ ಬಗ್ಗೆ ನೀಡಿರುವ ಹೇಳಿಕೆ ಹೆದರಿಕೆಯನ್ನುಂಟುಮಾಡಿದೆ. ಮಾರ್ಚ್ 19, 2026 ರಂದು ಅಮೆರಿಕನ್ ಕಂಪನಿಯ ಫೈಜರ್‌ನ ಯುರೋಪಿಯನ್ ಕೇಂದ್ರದ ಮಾಜಿ ಅಧಿಕಾರಿ ಡಾ. ಹೆಲ್ಮಟ್ ಸ್ಟರ್ಜ್ ಅವರು, ಜರ್ಮನ್ ಸಂಸತ್ತಿನ ಕೊರೋನಾ ವಿಚಾರಣಾ ಆಯೋಗದ ಮುಂದೆ ಸಾಕ್ಷ್ಯ ಕೊಟ್ಟಿದ್ದು ಬೆಚ್ಚಿ ಬೀಳಿಸುತ್ತದೆ.

ಕೊರೋನಾ ಲಸಿಕೆಯನ್ನು ಮಾರುಕಟ್ಟೆಗೆ ಬಿಡುವ ಮುನ್ನ 10 ಬಗೆಯ ಅಗತ್ಯ ಪೂರ್ವ-ಕ್ಲಿನಿಕಲ್ ಸುರಕ್ಷತಾ ಪರೀಕ್ಷೆಗಳನ್ನು ನಡೆಸಲಾಗಿರಲಿಲ್ಲ ಎಂದು ಡಾ. ಹೆಲ್ಮಟ್ ಸ್ಟರ್ಜ್ ಹೇಳಿಕೊಂಡಿದ್ದಾರೆ. ಇದೇ ಹೊತ್ತಲ್ಲಿ, ಜರ್ಮನಿಯಲ್ಲಿ ಸಂಭವಿಸಿದ ಸಾವಿನ ಅಂಕಿಅಂಶಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದರು. ಜರ್ಮನ್ ಸರ್ಕಾರದ ಅಂಕಿಅಂಶಗಳಂತೆ, ಕೊರೋನಾದಿಂದ 2,133 ಜನರು ಸಾವನ್ನಪ್ಪಿದ್ದರೆ, ಇದನ್ನು ಡಾ. ಹೆಲ್ಮಟ್ ಅವರು 63,990 ರಷ್ಟೆಂದು ಅಂದಾಜಿಸಿದ್ದರೆಂದು ತೇಲಿಬಿಡಾಗಿತ್ತು.

ಆರೋಗ್ಯ ತಜ್ಞರ ಪ್ರಕಾರ, ಯುಎಸ್ ವರದಿ ಮಾಡುವ ವ್ಯವಸ್ಥೆಗೆ ರೂಪಿಸಲಾದ ಮಾನದಂಡಗಳನ್ನು ಜರ್ಮನಿಗೆ ಅನ್ವಯಿಸಿ ಕಾಣುವುದು ತಪ್ಪು.

ಆದರೂ ಕೋವಿಶೀಲ್ಡ್ ಲಸಿಕೆ ಪಡೆದ ಸೀಮಿತ ಸಂಖ್ಯೆಯ ವ್ಯಕ್ತಿಗಳು TTS ಸಿಂಡ್ರೋಮ್‌ನಿಂದ ಬಳಲುತ್ತಿದ್ದಾರೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆಯೇ ತಿಳಿಸಿದೆ. ಇದೇನೇ ಇದ್ದರೂ ಕೋವಿಶೀಲ್ಡ್ ಲಸಿಕೆಯಿಂದ ಎಷ್ಟು ಸಾವುಗಳನ್ನು ತಪ್ಪಿಸಲಾಯಿತೆಂದು ಹೇಳುವ ಜವಾಬ್ದಾರಿ ಸರ್ಕಾರಕ್ಕೆ ಇದೆ ಇದರಿಂದ ಸರ್ಕಾರ ನುಣುಚಿಕೊಳ್ಳಬಾರದು.

ಸದ್ಯ ಒಂದೆಡೆ ಯುದ್ಧ ಮತ್ತೊಂದೆಡೆ ಸಿಟಾಡೆಲ್ ನಂತಹ ವೈರಸ್ ನಡುವೆ ಜನರ ಜೀವ- ಜೀವನ ಸುರಕ್ಷಿತವಾಗಿಡಲು ಯೋಜನೆಯೊಂದನ್ನು ರೂಪಿಸಬೇಕಿದೆ. ಜಗತ್ತು ಮುಂದೆ ಬಂದು ನೆರವು ನೀಡುತ್ತದೆ ಎಂದು ಕಾಯದೆ, ಅಂತರರಾಷ್ಟ್ರೀಯ ವೈದ್ಯಕೀಯ ಔಷಧ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ಸರ್ಕಾರ ಒಪ್ಪಂದ ಮಾಡಿಕೊಳ್ಳಬೇಕು. ಉತ್ಪಾದನೆಯ ವೇಗ ಹೆಚ್ಚಿಸಿಕೊಳ್ಳಲು ಮಾರ್ಗೋಪಾಯ ಇರುವ ಸಾಧ್ಯತೆಗಳನ್ನು ಶೋಧಿಸುವುದರೊಂದಿಗೆ, ಸಾರ್ವಜನಿಕ ವಲಯದ ಉದ್ಯಮಗಳನ್ನು ಅಂದರೆ ಮುಚ್ಚಿರುವ ಎನ್ ಜಿ ಇ ಎಫ್‌ನಂತಹ ಕಾರ್ಖಾನೆಗಳನ್ನು ಪುನಃಶ್ಚೇತನಗೊಳಿಸಬೇಕು. ನಾವು ವಾಸಿಸುವ ಮನೆಯಿಂದ ದೆಹಲಿಯ ಪಾರ್ಲಿಮೆಂಟ್ ಭವನದವರೆಗೂ ಇಂತಹ ವಿಷಯ ಚರ್ಚೆಗಳಾಗಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...

ನೇತ್ರಾವತಿ ತೀರದಲ್ಲಿ ‘ಅಂತರಗಂಗೆ’ಯಂತೆ ಹರಿಯುತ್ತಿರುವ ಪ್ರತಿರೋಧ: ವೇದವಲ್ಲಿಯಿಂದ ಸೌಜನ್ಯಳವರೆಗೆ ಪ್ರತಿಧ್ವನಿಸುತ್ತಿರುವ ಪ್ರಶ್ನೆ-‘ಕೊಂದವರು ಯಾರು?’

ಪ್ರಪಂಚದಾದ್ಯಂತ ಪಿತೃಪ್ರಧಾನ ವ್ಯವಸ್ಥೆ ಮತ್ತು ಪ್ರಭುತ್ವಗಳು ಹಲವು ರೀತಿಗಳಲ್ಲಿ ಮಹಿಳೆಯರನ್ನು ದಮನಿಸುವ ವಿಧಾನಗಳನ್ನು ಕಂಡುಕೊಂಡು ಕರಗತ ಮಾಡಿಕೊಂಡಿವೆ. ಅದರಲ್ಲಿ ಅತ್ಯಂತ ಪರಿಣಾಮಕಾರಿಯಾದುದು, ದೇವರು, ಭಕ್ತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ದಮನಕ್ಕೊಳಪಡಿಸುವ ತಂತ್ರ....