Homeಮುಖಪುಟಸಾಲು ಸಾಲು ಹೆಣಗಳಿಗೆ ಲೆಕ್ಕವಿಟ್ಟವರ್‍ಯಾರು?

ಸಾಲು ಸಾಲು ಹೆಣಗಳಿಗೆ ಲೆಕ್ಕವಿಟ್ಟವರ್‍ಯಾರು?

- Advertisement -
- Advertisement -

ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ಶೈತ್ಯಾಗಾರದಲ್ಲಿ 15 ತಿಂಗಳಿನಿಂದ ‘ಅಂತ್ಯಸಂಸ್ಕಾರ’ ಕಾಣದೆ ಅನಾಥವಾಗುಳಿದ ಎರಡು ಶವಗಳ ಸುದ್ದಿ ಕೇಳಿದಾಗ ವಿಚಲಿತಗೊಂಡಿದ್ದೆ. ಪರಮ ಪವಿತ್ರ ಗಂಗೆಯ ಒಡಲಲ್ಲಿ ಹರಿದು ಬಂದ ಸಾಲುಸಾಲು ಹೆಣಗಳು ನಿದ್ದೆಗೆಡಿಸಿತ್ತು. ಎರಡನೇ ಅಲೆ ಸಂದರ್ಭದಲ್ಲಿ ‘ದಹನ’ಕ್ಕಾಗಿ ಕಾದು ನಿಂತ ಮೃತ ದೇಹಗಳ ಸಾಲು ಕಂಡಾಗಲು ಯಾತನೆಯಿಂದ ನರಳಿದ್ದೆ. ಇಂತಹ ‘ಚಿತ್ರಣ’ ನನ್ನನ್ನು ಮಾತ್ರವಲ್ಲ ನಿಮ್ಮೆಲ್ಲರನ್ನೂ ವಿಹ್ವಲರನ್ನಾಗಿಸಿರಬಹುದು.

ಗುಜರಾತಿನ ಕವಯಿತ್ರಿ ಪಾರುಲ್ ಖಕ್ಕಡ್ ಅವರು ರಚಿಸಿರುವ ಶವ-ವಾಹಿನಿ-ಗಂಗಾ ಹಾಡು ಕೇಳಿಬರುತ್ತಿದೆ. ಅಂದಹಾಗೆ ಕವನ ಆಲಿಸಿದ ಸ್ತ್ರೀದ್ವೇಷವಾದಿಗಳು ಸುಮಾರು 28 ಸಾವಿರ ನಿಂದನೆಗಳ ಸಂದೇಶಗಳನ್ನು ಹರಿಯಬಿಟ್ಟಿದ್ದಾರೆ. ಕಾರಣ ಪಾರುಲ್ ಗಂಗೆಯಲ್ಲಿ ತೇಲುತ್ತಿದ್ದ ಹೆಣಗಳ ಬಗ್ಗೆ ಕವನ ರಚಿಸಿದ್ದರು. “ಎಲ್ಲವೂ… ಒಳ್ಳೆಯದೆ. ಒಡೆಯನೇ… ನಿನ್ನ ರಾಜ್ಯದಲ್ಲಿ ಎಲ್ಲವೂ ಕ್ಷೇಮವೇ? ಇದೀಗ ಗಂಗಾ ಶವದ ವಾಹಕವಾಗಿದೆ”- ಇದೇ ಕವನದ ವಸ್ತುವಿಷಯ. ತೀವ್ರವಾಗಿ ಕಾಡುತ್ತದೆ.

ಕ್ರೂರ ಕೊರೊನಾ ಇಂದಿಗೂ ಬಿಡದೆ ಕಾಡುತ್ತಲೇ ಇದೆ. ಇದರೊಂದಿಗೆ ಈಗ ‘ಒಮೈಕ್ರಾನ್’ ಕೂಡ ಸೇರಿಕೊಂಡಿದೆ. ಇದು ನಮ್ಮನ್ನು ‘ವಸಾಹತುಶಾಹಿ’ ಯುಗಕ್ಕೆ ಕೊಂಡೊಯ್ದಂತೆ ಕಾಣುತ್ತಿದೆ. ಬಹಳ ಹಿಂದೆ ಅಂದರೆ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬರಗಾಲ ಬಂದಾಗ ಜನ ಹಸಿವಿನಿಂದ ಅಥವಾ
ಸೋಂಕು ರೋಗಗಳಿಗೆ ಒಳಗಾಗಿ ಜೀವಬಿಟ್ಟಾಗ ಹೊಳೆ-ಕಾಲುವೆ-ನದಿಪಾಲು ಮಾಡಿ ಕೈತೊಳೆದುಕೊಳ್ಳಲಾಗುತ್ತಿತ್ತಂತೆ. ಸ್ವಾತಂತ್ರ್ಯಾನಂತರದ ಭಾರತದಲ್ಲೂ ಇದೇ ದಯನೀಯ ಸ್ಥಿತಿ ಇದೆ. ಉತ್ತರ ಪ್ರದೇಶದ ಗಡಿಯಲ್ಲಿರುವ ಬಿಹಾರದ ಬುಕ್ಸರ್‌ನಲ್ಲಿರುವ ಗಂಗಾ ನದಿಯ ತಟದಲ್ಲೂ ‘ಉಸಿರಿಲ್ಲದ ದೇಹಗಳು’ ಕೊಚ್ಚಿಕೊಂಡುಹೋಗಿವೆ. ನೀರುಪಾಲಾದ ದೇಹಗಳ ಸಂಖ್ಯೆಯನ್ನು ಕೆಲವರು 48 ಎಂತಲೂ, ಮತ್ತೂ ಕೆಲವರು 150 ಎಂತಲೂ ಹೇಳುತ್ತಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಸೋಂಕಿನಿಂದ ಸುಮಾರು 38 ಸಾವಿರ ಸೋಂಕಿತರು ಮೃತಪಟ್ಟಿರುತ್ತಾರೆಂದು ಸರ್ಕಾರ ಹೇಳಿದೆ. ಆದರೆ ಸುಮಾರು 3 ಲಕ್ಷ ಮಂದಿ ಮೃತಪಟ್ಟಿದ್ದಾರೆಂದು ಕೆಲ ಮೂಲಗಳು ಹೇಳುತ್ತಿವೆ. ಸಾವಿನ ಲೆಕ್ಕದಲ್ಲಿ ಭಾರೀ ಅಂತರವಿರುವುದರಿಂದ ‘ಡೆತ್ ಆಡಿಟ್’ ನಡೆಯಬೇಕೆಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ರಾಮಲಿಂಗಾರೆಡ್ಡಿ ಒತ್ತಾಯಿಸಿದ್ದರು.

ನೆರೆಯ ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ 6 ಸಾವಿರ ಕೊರೊನಾ ಸಾವುಗಳನ್ನು ಮುಚ್ಚಿಟ್ಟಿದೆ ಎಂಬ ಆರೋಪವೂ ಕೇಳಿಬಂದಿತ್ತು. 2021ರ ಜೂನ್ 1ರವರೆಗೆ 13,235 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆಂದು ಆರ್‌ಟಿಐ ಅರ್ಜಿಯೊಂದಕ್ಕೆ ಕೇರಳ ಸರ್ಕಾರ ಉತ್ತರಿಸಿತ್ತು. ಆದರೆ ಇದೇ ಅವಧಿಯಲ್ಲಿ 19,584 ಮಂದಿ ಕೊರೊನಾಗೆ ಬಲಿಯಾಗಿದ್ದಾರೆಂದು ಜನನ-ಮರಣ ಮುಖ್ಯ ನೋಂದಣಿ ಕಚೆರಿಯಿಂದ ಗೊತ್ತಾಗಿದೆ.

ಇನ್ನು ಗುಜರಾತ್‌ನ 170 ಪುರಸಭೆಗಳ ಪೈಕಿ 68 ಪುರಸಭೆಗಳಲ್ಲಿ ಮರಣದ ದಾಖಲಾತಿಗಳು ದೊರೆತಿವೆ. ಇವು ಕೈಯಲ್ಲಿ ಬರೆದವಾಗಿವೆ. ಇದು 2019ರಿಂದ 2021ರ ಏಪ್ರಿಲ್‌ವರೆಗಿದ್ದು, ದಾಖಲಾತಿ ಸಾವಿರಾರು ಪುಟಗಳಲ್ಲಿವೆ. ಅಮ್ರೇಲಿಯ ಒಂದು ಚಿತಾಗಾರದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ 7 ಡೆತ್ ರಿಜಿಸ್ಟರ್ ಭರ್ತಿಯಾಗಿವೆ. ಪ್ರತಿ ರಿಜಿಸ್ಟರ್‌ನಲ್ಲಿ 100 ಪುಟಗಳಿವೆಯಂತೆ. 2020ರ ಬಳಿಕ 10,075 ಜನ ಮಾತ್ರ ಕೊರೊನಾಗೆ ಬಲಿಯಾಗಿದ್ದಾರೆಂದು ಗುಜರಾತ್ ಸರ್ಕಾರ ಹೇಳಿದೆ. ಆದರೆ 2021ರ ಏಪ್ರಿಲ್ ಮಾಸ ಒಂದರಲ್ಲಿಯೇ 68 ಪುರಸಭೆಗಳ ವ್ಯಾಪ್ತಿಯಲ್ಲಿ 12,757 ಸಾವುಗಳಾಗಿವೆ ಎಂದು ಮರಣ ನೋಂದಣಿ ಇಲಾಖೆ ಹೇಳಿದೆ.

ಕೊರೊನಾ ಮೊದಲ ಮತ್ತು ಎರಡನೇ ಅಲೆಯ ಕಾಲದಲ್ಲಾದ ಸಾವು-ನೋವುಗಳ ಕುರಿತಂತೆ ಪ್ರಕಟಗೊಂಡಿರುವ ಅಂಕಿ-ಸಂಖ್ಯೆಗಿಂತ ಹಲವು ಪಟ್ಟು ಹೆಚ್ಚು ಸಂಭವಿಸಿದೆ ಎಂಬುದು ದಿಗ್ಭ್ರಮೆ ಮೂಡಿಸುತ್ತಿದೆ. ಇದು ಆಧುನಿಕ ಭಾರತದ ‘ಮಾನವ ದುರಂತ’ ಎಂದೇ ಬಣ್ಣಿಸಬಹುದಾಗಿದೆ. ಕೊರೊನಾ ಉಂಟುಮಾಡಿದ ‘ಮಾನವ ಜೀವದ ಧ್ವಂಸ’ ಕುರಿತಂತೆ ‘ಸಮಗ್ರ ಸಂಶೋಧನೆ’ ನಡೆಯುವ ಅಗತ್ಯವಿದೆ.

ಭಾರತ ಸರ್ಕಾರದ ಪ್ರಕಾರ ಅಧಿಕೃತ ಅಂಕಿ-ಸಂಖ್ಯೆ 4 ಲಕ್ಷ 14 ಸಾವಿರಕ್ಕಿಂತ ಹೆಚ್ಚು ಸಾವು-ನೋವುಗಳು ಈ ದೇಶದಲ್ಲಿ ಒಟ್ಟಾರೆಯಾಗಿ ಸಂಭವಿಸಿವೆ. 20.07.2021ರಂದು ಬಿಡುಗಡೆಗೊಂಡ ವರದಿಯೊಂದು ನಮ್ಮ ದೇಶದಲ್ಲಾದ ಸಾವು-ನೋವುಗಳ ಸಂಖ್ಯೆಯನ್ನು ಲೆಕ್ಕಹಾಕಿದೆ. ಅಧಿಕೃತ ದಾಖಲೆ ಪ್ರಮಾಣ ಮತ್ತು ನಿರೀಕ್ಷಿತ ನೈಜ ಸಂಖ್ಯೆಯ ನಡುವಿನ ಅಂತರ 3 ಮಿಲಿಯನ್‌ನಿಂದ 4.7 ಮಿಲಿಯನ್‌ನಷ್ಟಿದೆ ಎಂದು ವರದಿ ಅಂದಾಜಿಸಿದೆ. ಇದು ಜನವರಿ 2020ರಿಂದ ಜೂನ್ 2021ರ ನಡುವೆ ನಡೆದ ಸಾವು-ನೋವುಗಳನ್ನು ಆಧರಿಸಿ, ಲೆಕ್ಕಹಾಕಿ ಪ್ರಕಟಿಸಿರುವ ವರದಿಯಾಗಿದೆ. ಇದು ಸರ್ಕಾರದ ಅಂಕಿ-ಸಂಖ್ಯೆಗಿಂತ ಸುಮಾರು ಹತ್ತುಪಟ್ಟು ಹೆಚ್ಚು! ಖಚಿತವಾದ ಸಾವು-ನೋವುಗಳ ಅಂಕಿ-ಸಂಖ್ಯೆ ನೀಡುವಲ್ಲಿ ಸರ್ಕಾರದ ಅಸ್ಪಷ್ಟತೆಯನ್ನು ಈ ವರದಿ ಆರೋಪಿಸುತ್ತಿದೆ. ಇದಕ್ಕೆ ಪುರಾವೆಯಾಗಿ ಬೆಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ 15 ತಿಂಗಳ ನಂತರ ಎರಡು ಶವಗಳು ಕಾಣಿಸಿಕೊಂಡಿರುವುದನ್ನು ಕಾಣಬಹುದಾಗಿದೆ.

ಗಂಗೆಯಲ್ಲಿ ತೇಲಿದ ಶವಗಳ ‘ಹೊಣೆಗಾರಿಕೆ’ ಹೊರಲು ಉತ್ತರ ಪ್ರದೇಶದ ಸರ್ಕಾರವಾಗಲಿ, ಬಿಹಾರ ಸರ್ಕಾರವಾಗಲಿ ತಯಾರಿಲ್ಲ. ಘನತೆಯ ‘ಅಂತ್ಯಸಂಸ್ಕಾರ’ ಕಾಣದ ಘಟನೆಗೆ ಪರಸ್ಪರ ಬೊಟ್ಟುಮಾಡಿ ಹೊಣೆಗಾರಿಕೆಯಿಂದ ಜಾರಿಕೊಂಡಿದೆ. ಬೆಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ 15 ತಿಂಗಳನಂತರ ದೊರೆತ 2 ಶವಗಳಿಗೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಿ ಸರ್ಕಾರ ಕೈತೊಳೆದುಕೊಂಡಿದೆ.

ಇಂತಹ ಅಚ್ಚರಿಯ, ಹೀನಾತಿಹೀನ ದುರ್ಘಟನೆಗಳು ನಮ್ಮಂತಹ ದೇಶಗಳಲ್ಲಿ ಮಾತ್ರ ಕಾಣಲು ಸಾಧ್ಯ. ನೆನಪಿರಲಿ, ಕೊರೊನಾ ಪೀಡಿತರ ಮತ್ತವರ ಕುಟುಂಬಸ್ಥರಿಗೆ ಹಲವೆಡೆ ‘ಸಾಮೂಹಿಕ ಬಹಿಷ್ಕಾರ’ ಹಾಕಿದ ಪ್ರಸಂಗಗಳು ವರದಿಯಾಗಿದ್ದವು. ಇದನ್ನು ನಿರ್ಬಂಧಿಸಬೇಕಾದ ಆಡಳಿತಗಾರರು ಮೂಕರಾಗುಳಿದಿದ್ದು ‘ದುರಂತ’ದ ವಿಚಾರ. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ತಾನಗಳಲ್ಲಿ ಇಂತಹ ‘ಸಾಮಾಜಿಕ ಬಹಿಷ್ಕಾರ’ದ ಭೀತಿಯಿಂದಲೂ ಮೃತದೇಹಗಳನ್ನು ಗಂಗೆಯ ಪಾಲು ಮಾಡಲಾಗಿದೆ.

ಇದಿಷ್ಟೇ ಅಲ್ಲ, ಕೊರೊನಾ ಸೋಂಕಿಗೆ ಸಿಲುಕಿ ಬಲಿಯಾದವರಿಗೆ ಮರಣ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸುವ ಕೆಲಸವನ್ನು ನಮ್ಮ ಆಡಳಿತಗಾರರು ಮೊದಲಿಗೆ ಮಾಡಿರಲಿಲ್ಲ. ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಎಂ.ಆರ್. ಶಾ ನೇತೃತ್ವದ ನ್ಯಾಯಪೀಠ ಆರು ವಾರಗಳ ಒಳಗಾಗಿ ಮಾರ್ಗಸೂಚಿ ರೂಪಿಸಲೇಬೇಕೆಂದು ನಿರ್ದೇಶನ ನೀಡಿ, ಅಸಮಾಧಾನ ವ್ಯಕ್ತಪಡಿಸಿದಾಗ ‘ಕೋವಿಡ್ ಮರಣ ಪ್ರಮಾಣಪತ್ರ’ದ ಮಾರ್ಗಸೂಚಿಗಳನ್ನು ಹೊರಡಿಸಿತ್ತು.

ಕೊರೊನಾ ಕಾಲದಲ್ಲಾದ ‘ಸಾವುಗಳ ಸಂಖ್ಯೆ’ ಖಚಿತವಾಗಿ ಗೊತ್ತಾಗಬೇಕಾಗುತ್ತದೆ. ಅಂಕಿ-ಸಂಖ್ಯೆ ಜನರ ದಾರಿ ತಪ್ಪಿಸಬಾರದು. ಆದರೆ ತಪ್ಪಿಸಿಕೊಂಡ ‘ಸಾವು’ಗಳ ಸಂಖ್ಯೆ ಅಗಾಧವಾಗಿದ್ದರೆ, ಅದು ಹೊರಬರಬೇಕಿದೆ. ನಮ್ಮಲ್ಲಿ ಸಾವು-ನೋವಿನ ಸಂಖ್ಯೆ ಲಕ್ಷದ ಲೆಕ್ಕದಲ್ಲಿ ಆಗಿದೆಯೇ ಹೊರತು ನೂರು ಅಥವಾ ಸಾವಿರದ ಲೆಕ್ಕದಲ್ಲಿ ಆಗಿಲ್ಲ. ಹೀಗಾಗಿ ಇದನ್ನು ಆಧುನಿಕ ಭಾರತದ ಅತ್ಯಂತ ಕೆಟ್ಟ ‘ಮಾನವ ದುರಂತ’ ಎಂದೇ ವಾದಿಸಬಹುದಾಗಿದೆ. ನಮ್ಮ ದೇಶ ವಿಭಜನೆಗೊಂಡ ಬಳಿಕ ಇಷ್ಟೊಂದು ಪ್ರಮಾಣದ
ಸಾವು-ನೋವು-ವಲಸೆ ಕಂಡಿರಲಿಲ್ಲ.

2020-21ರ ನಮ್ಮ ದೇಶದ ಸನ್ನಿವೇಶವನ್ನು ಎಚ್ಚರಿಕೆಯಿಂದ, ಅತಿಸೂಕ್ಷ್ಮವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಇಂತಹ ಅಧ್ಯಯನ ನಡೆದರೆ ಮಾತ್ರ ಅಧಿಕ ಸಾವು-ನೋವುಗಳ ನಿಖರ ಮತ್ತು ಸಂಪೂರ್ಣ ವಿವರ ಗೊತ್ತಾಗುತ್ತದೆ. ಅಲ್ಲದೆ ಭವಿಷ್ಯದಲ್ಲಿ ದೇಶದ ‘ಆರೋಗ್ಯ ವ್ಯವಸ್ಥೆ’ಯನ್ನು ಸದೃಢಗೊಳಿಸುವ ವಿಧಾನವನ್ನು ಅರಿಯಬಹುದಾಗಿದೆ. ಇಂತಹ ಸಾವು-ನೋವು ಹೆಚ್ಚಳವಾಗಲು ‘ಅನಿಶ್ಚತತೆ’, ‘ಭೀತಿ’ ಮತ್ತು ‘ಮಾನಸಿಕ ಒತ್ತಡ’ಗಳು ಕೂಡ ಕಾರಣೀಭೂತವಾಗಿದೆ. ಇವೆಲ್ಲದರಿಂದಾಗಿ ಬಹಳಷ್ಟು ಜನರ ಜೀವನೋಪಾಯವನ್ನು ಇದು ಅಸ್ತವ್ಯಸ್ತಗೊಳಿಸಿತ್ತು.

ಅನ್ಯದೇಶಗಳು ಕೂಡ ಸಾವು-ನೋವಿನ ಸಂಖ್ಯೆಯ ವಾಸ್ತವಿಕತೆಯನ್ನು ಮರೆಮಾಚಿವೆ ಎಂಬುದೂ ಕೂಡ ಇಲ್ಲಿ ಮುಖ್ಯ. 2021ರ ಜುಲೈ ಮಾಸದವರೆಗೂ ಸುಮಾರು 9 ಲಕ್ಷ ಜನರನ್ನು ಅಮೆರಿಕ ದೇಶ ಕಳೆದುಕೊಂಡಿದೆ. ಅಧಿಕೃತವಾಗಿ 6 ಲಕ್ಷವೆಂದು ಪ್ರಕಟಣೆ ಕೊಟ್ಟಿದೆ. ಇದನ್ನು ಅಲ್ಲಿನ ವೈದ್ಯ, ಪ್ರಧಾನ ಆರೋಗ್ಯ ಸಲಹೆಗಾರ ಡಾ. ಅಂಥೋನಿ ಫೌಸಿ ಪ್ರಶ್ನಿಸಿ ವಿವಾದಕ್ಕೀಡು ಮಾಡಿದ್ದಾರೆ. ಜೊತೆಗೆ ಎಣಿಕೆಯ ‘ವೈಜ್ಞಾನಿಕತೆ’ ಮತ್ತು ‘ವಿಶ್ವಾಸಾರ್ಹತೆ’ಯನ್ನು ಪ್ರಶ್ನಿಸಿದ್ದಾರೆ. ವಿಶ್ವಸಂಸ್ಥೆ ಕೂಡ ವಿವಿಧ ದೇಶಗಳು ಕೊಟ್ಟಿರುವ ಸಾವು-ನೋವುಗಳ ಅಂಕಿ-ಸಂಖ್ಯೆಗಿಂತ ಪ್ರಮಾಣ ಹೆಚ್ಚಿದೆ ಎಂದಿದೆ. ಅಮೆರಿಕ ಸೇರಿದಂತೆ ಜಗತ್ತಿನ ಉದ್ದಗಲಕ್ಕೆ ಹಲವು ದೇಶಗಳು ಶೇಕಡ 50ರಿಂದ 100ರಷ್ಟು ‘ಕಡಿಮೆ ಎಣಿಕೆ’ ಕೊಟ್ಟಿವೆ.

ಇಷ್ಟಾದರೂ ಜನರಿಗೆ ಎಚ್ಚರಿಕೆ ಮೂಡಿರುವ ಬಗ್ಗೆ ಸಂದೇಹವಾಗುತ್ತದೆ. ಕೊರೊನಾ ಸೋಂಕಿನ ವೇಗ ಸ್ವಲ್ಪ ಇಳಿಕೆ ಕಾಣುತ್ತಿದ್ದಂತೆ ಗುಜರಾತ್‌ನಲ್ಲಿ ಹಿಂದೂ ಮಹಿಳೆಯರು ‘ಕಳಸಪೂಜೆ’ಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಸಲ್ಮಾನರ ದಂಡೊಂದು ತಮ್ಮ ಧರ್ಮಗುರುಗಳ ಆಶೀರ್ವಾದ ಪಡೆಯಲು ಬಾದಾಯುನ್‌ಗೆ ಭೇಟಿ ನೀಡಿದೆ. ಇದೇ ರೀತಿ ಫ್ರೇಜರ್‌ಟೌನ್‌ನ ಚರ್ಚ್ ಆವರಣದಲ್ಲಿ ಧರ್ಮಗುರುಗಳ ಉಪದೇಶ ಕೇಳಲು ಸಾಮಾಜಿಕ ಅಂತರ ಮರೆತು ಜನ ಸೇರಿದ್ದರು. ಸರ್ಕಾರಗಳ ವೈಫಲ್ಯಗಳನ್ನು ಪ್ರಶ್ನಿಸಬೇಕಾದ ಜನರೂ ಜವಾಬ್ದಾರಿಯಿಂದ ನಡೆದುಕೊಳ್ಳುವ ಅಗತ್ಯ ಇದೆ. ದೇವರ ಮೇಲೆ ಭಾರ ಹಾಕುವ ಸರ್ಕಾರಗಳು ಜನರ ಇಂತಹ ನಡೆಯನ್ನು ಉಪಯೋಗಿಸಿಕೊಳ್ಳುವ ಅಪಾಯ ಇದೆ.

ಇವತ್ತಿಗೂ ಎಷ್ಟೋ ದೇಶವಾಸಿಗಳು ‘ಕೊರೊನಾ’ ಒಂದು ಸೋಂಕಿನ ರೋಗವೆಂದು ನಂಬಲು ತಯಾರಿಲ್ಲ. ಇವರಲ್ಲಿ ಬಹುತೇಕರು ಕೊರೊನಾ ಒಂದು ‘ದೇವರ ಶಾಪ’ ಎಂಬಂತೆಯೇ ಭಾವಿಸಿದ್ದಾರೆ. ಇದನ್ನು ಹೋಗಲಾಡಿಸುವ ಪ್ರಯತ್ನವನ್ನು ಆಡಳಿತಗಾರರು ಮಾಡಬೇಕಿದೆ. ಇಲ್ಲಿ ವಿದ್ಯಾವಂತರು ಕೂಡ ದೇವರು ‘ಮನುಕುಲ’ವನ್ನು ಶಿಕ್ಷಿಸುತ್ತಿದ್ದಾನೆ ಎಂದೇ ನಂಬಿದ್ದಾರೆ. ಇಂತಹ ಮೂಢನಂಬಿಕೆಗಳ ಲಾಭವನ್ನು ‘ಅಸಮರ್ಥ ಸರ್ಕಾರ’ಗಳು ಪಡೆಯುತ್ತಿವೆ. ಹೀಗಾಗಿ ಸರ್ಕಾರ ಮುನ್ನಡೆಸುವವರು ಜನರಿಗೆ ಇದು ನಿಮ್ಮ ‘ಹಣೆಬರಹ’ ಎಂದು ನಂಬಿಸಿದೆ. ದೇವರೇ ನಿಮ್ಮನ್ನು ರಕ್ಷಿಸಬೇಕು. ನರಮನುಷ್ಯರಿಂದ ರಕ್ಷಿಸಲು ಸಾಧ್ಯವಿಲ್ಲವೆಂದು ಎಂದು ಕೂಡ ಹೇಳಿತ್ತು. ಇಂತಹ ತಿರಸ್ಕಾರದಿಂದ ಕೂಡಿದ ‘ಅಸಡ್ಡೆ’ಯ ಮಾತುಗಳಿಂದಲೇ ಸೋಂಕು ಮತ್ತಷ್ಟು ವಿಜೃಂಭಿಸಲು ಸಾಧ್ಯವಾಯಿತು. ಇವತ್ತು ನಮ್ಮ ಆಡಳಿತಗಾರರ ನಡೆಯನ್ನು ಜಗತ್ತು ಗಮನಿಸುತ್ತಿದೆ. ನಮ್ಮ ‘ದೋಣಿ’ ತಲೆಕೆಳಗಾಗಿದೆ. ಕೊಳೆತ ಸ್ಥಿತಿಯಲ್ಲಿ ನಾವುಗಳಿದ್ದೇವೆ. ಹೀಗಾಗಿಯೇ ‘ಸಾವು’ ಬದುಕುಳಿದವರ ಪಾಲಿಗೆ ‘ಗಂಭೀರ’ವಾದ ವಿಷಯವಾಗಿದೆ.

ಹೀಗಾಗಿ ಮುಂದೆ 3ನೇ ಅಲೆ, 4ನೇ ಅಲೆ, 5ನೇ ಅಲೆ ಕೂಡ ಬಂದರೂ ಆತುರದ ನಿರ್ಧಾರಕ್ಕೆ ಬರುವುದರ ಬಗ್ಗೆ ನಮ್ಮ ‘ತಜ್ಞ’ರು ಚಿಂತಿಸಬೇಕಿದೆ. ಜನ ಕೂಡ ಸಮಚಿತ್ತದಿಂದ, ವಿಶಾಲ ದೃಷ್ಟಿಕೋನದಿಂದ ಯೋಚಿಸಿ ‘ಸಾಮಾಜಿಕ ಅಂತರ’ ಕಾಯ್ದುಕೊಂಡು, ‘ಮಾಸ್ಕ್’ಧಾರಣೆ ಮಾಡಿಕೊಂಡು ಬದುಕಬೇಕಿದೆ. ತಿರುಚುವ ಸತ್ಯಗಳ ಬಗ್ಗೆ ಜಾಗರೂಕರಾಗಬೇಕು. ಮೂಢನಂಬಿಕೆಗಳಿಂದ ದೂರ ಇರಬೇಕು. ಆಗ ಉಂಟಾಗಬಹುದಾದ ಸಂಕಷ್ಟಗಳನ್ನು ತಡೆಯಬಹುದಾಗಿದೆ.

ಡಾ. ಎಂ.ಎಸ್. ಮಣಿ

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ ಪುಸ್ತಕಗಳು ಪ್ರಕಟವಾಗಿದೆ. ಮನುಭಾರತ ಬಿಡುಗಡೆಗೆ ಸಿದ್ಧವಾಗಿದೆ.


ಇದನ್ನೂ ಓದಿ: ಕೊರೊನಾ ಪ್ರಕರಣದಲ್ಲಿ ಹೆಚ್ಚಳ: ಆಸ್ಪತ್ರೆಗಳು, ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ಒಕ್ಕೂಟ ಸರ್ಕಾರ ನಿರ್ದೇಶನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...