Homeನ್ಯಾಯ ಪಥ‘ಮಾವಿನ ಮರ’ ಕಂಡ ಕನಸು

‘ಮಾವಿನ ಮರ’ ಕಂಡ ಕನಸು

- Advertisement -
- Advertisement -

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ ಮರ’ ಎಂಬ ಕವನ ಸಂಕಲನವು ಓದುಗರ ಜವಾಬ್ದಾರಿಯನ್ನು ನೆನಪಿಸುವಂತಿದೆ. ಬರೆಯುವುದು ಮತ್ತು ಪ್ರಕಟಿಸುವುದು ಹೆಚ್ಚು ಸುಲಭವಾಗುತ್ತಿರುವ, AI ಯಂತಹ ತಂತ್ರಜ್ಞಾನದ ಸಹಾಯ ಒದಗಿಬಂದಿರುವ, ಅವಕಾಶ-ಪ್ರಶಸ್ತಿಗಳು ನಿಯಂತ್ರಕ ಕೇಂದ್ರಗಳಾಗಿ ಬರಹವನ್ನು ವಿಚಾರವನ್ನು ಹೈಜಾಕ್ ಮಾಡುತ್ತಿರುವ, ಕಾಲ-ದೇಶ-ಸಂದರ್ಭದಲ್ಲಿದ್ದೇವೆ. ಈ ಅವಸರವನ್ನು ತಡೆದು, ಕಾವ್ಯ ಬರೆಯುವುದೊಂದು ಸಾಂಸ್ಕೃತಿಕ ಜವಾಬ್ದಾರಿ ಎನ್ನುವ ಆಳದ ಬದ್ಧತೆಯಲ್ಲಿ ಬರೆಯಿಸಿಕೊಂಡ ಕವಿತೆಗಳಿವು. ಪ್ಯಾಲಿಸ್ತೀನಿ ಕವಿ ಮಹಮ್ಮೂದ್ ದರ್ವೀಶ್‌ರ “ಕಾವ್ಯವು ಸತ್ಯವನ್ನು ಬಗೆಯುವ ಉದ್ದೇಶಪೂರ್ವಕವಾದ ಕ್ರಿಯೆ. ಆಳವಾಗಿ ಮತ್ತು ಪ್ರಾಮಾಣಿಕವಾಗಿ ಅದೊಂದು ಅಪಾಯಕಾರಿ ಚಟುವಟಿಕೆ” ಎಂಬ ಮಾತು ಈ ಕವಿತೆಗಳನ್ನು ಓದುವಾಗ ನೆನಪಾಗುತ್ತದೆ. ಇಲ್ಲಿಯ ಬಹುತೇಕ ಕವಿತೆಗಳು ದೇಶ-ಕಾಲಗಳ ಒತ್ತಡದಲ್ಲಿ ಸೃಷ್ಟಿಯಾದವು. ಬಾಲ್ಜಾಕ್ ಹೇಳುವ, French Society is Crieater, I am writer ಎನ್ನುವಂತೆ. ಇಂದು ಸಂವೇದನಾಶೀಲತೆ ಎರಡು ವಿಧದ ಆಕ್ರಮಣಗಳಿಂದ ದಿಗ್ಭ್ರಾಂತಗೊಂಡಿದೆ. ಬಂಡವಾಳೋದ್ಯಮವು ಸಾಂಸ್ಕೃತಿಕ ವಿನ್ಯಾಸದ ಮೇಲೆ ದಾಳಿಮಾಡಿದೆ. ಸಾಮಾಜಿಕ-ಆರ್ಥಿಕ ಸ್ಥಿತ್ಯಂತರವು ಸಾಂಸ್ಕೃತಿಕತೆಯನ್ನು ನಾಶಮಾಡಿದೆ ಎಂಬ ಸತ್ಯ ತೀರಾ ಸರಳವಾದದ್ದು. ಈಗಿದು, ಸಾಂಸ್ಕೃತಿಕ ಸಂರಚನೆಗಳನ್ನು ತನ್ನ ಬಳಕೆಯ ಪದಾರ್ಥವಾಗಿಸಿ; ತನಗೆ ಬೇಕಾದಂತೆ ಮಾರ್ಪಡಿಸುತ್ತದೆ. ಬಂಡವಾಳೋದ್ಯಮವು ಸಾಹಿತ್ಯ ಕಲೆಗಳನ್ನು ತಾನು ಖರೀದಿಸಬಲ್ಲ ವಲಯವಾಗಿಸಿದ್ದರಿಂದ, ಸಾಹಿತಿಗಳೂ ಕಲಾವಿದರೂ ಆ ಆಕರ್ಷಣೆಗೆ ಒಳಗಾಗುತ್ತಾರೆ. ಪರಿಣಾಮವಾಗಿ ಡಾ. ರಾಜೇಂದ್ರ ಚೆನ್ನಿಯವರು ಗುರುತಿಸುವಂತೆ, ಪ್ರತಿರೋಧಿಸಬೇಕಾದ ಸಾಹಿತ್ಯ-ಕಲೆಗಳು ಮಾರುಕಟ್ಟೆಯಲ್ಲಿ ಸಿಂಗರಿಸಿಕೊಂಡು ಬಿಕರಿಗೆ ಕುಳಿತ ಮಾಲುಗಳಾಗಿವೆ. ಸಾಂಸ್ಕೃತಿಕ ಜವಾಬ್ದಾರಿಯಿಂದ ಜಾರಿಕೊಂಡಿವೆ. ಸಹಜತೆಯನ್ನು ಶಕ್ತಿಯನ್ನು ಕಳೆದುಕೊಂಡಿವೆ. ಈ ಸ್ಥಿತಿಯಲ್ಲಿ ಬರಹಗಾರಿಕೆಯ ಪ್ರಾಮಾಣಿಕತೆಯು ಹೆಚ್ಚು ಆತಂಕಕ್ಕೆ ಒಳಗಾಗಬೇಕಿದೆ. ಎರಡನೆಯ ಆತಂಕ ಭಾಷೆಯದು. ಮನುಷ್ಯ ಕುಲವು ಕಟ್ಟಿ ನಿರ್ವಹಿಸಿಕೊಂಡು ಬಂದ ಭಾಷೆಯು, ಸಹಜ ಸಂವಹನಾಶೀಲತೆಯನ್ನು ಕಳೆದುಕೊಂಡಿದೆ. ಮಾತು ಕ್ಲೀಷೆಯಾಗಿದೆ. ಅರ್ಥಹೀನವಾಗಿ ಬಳಸಿ ಜಾಳುಗೊಳಿಸಲಾಗಿದೆ. ತುಳಿಯುವವರು, ತುಳಿತಕ್ಕೆ ಒಳಗಾಗುವವರೂ ಒಂದೇ ಭಾಷೆಯಲ್ಲಿ ವ್ಯವಹರಿಸಬೇಕಾದ ದಿಗಿಲು; ಭಾಷೆಯನ್ನೇ ಜೀವದ್ರವ್ಯವಾಗಿಸಿಕೊಂಡ ಬರಹಗಾರರಿಗೆ ಬಿಕ್ಕಟ್ಟಿನ ಸಂಗತಿ. ಆ ಭಾಷೆಯನ್ನು ಮುರಿದು ಕಟ್ಟಿ, ಅದರ ಆಳದ ಸತ್ವವನ್ನು ಮರುಕಳಿಕೆ ಮಾಡಿಕೊಳ್ಳುವುದು ಬರಹಗಾರರು ಹಾಯಬೇಕಾದ ಇಕ್ಕಟ್ಟು. ತನ್ನ ಭಾಷಿಕ ಸಮುದಾಯಕ್ಕೆ ತನ್ನ ಕಾಲದ ಸ್ಮೃತಿಯನ್ನು ಶಾಶ್ವತವಾಗಿ ಉಳಿಸಬೇಕಾದ ಕವಿಗಳು ರೂಪಕದ ಮೂಲಕ ಭಾಷೆಯ ತ್ರಾಣವನ್ನು ಮರುಜೀವಿಸಿಕೊಳ್ಳುವ ಅಗತ್ಯಕ್ಕೆ ಒಳಗಾಗುತ್ತಾರೆ. ಈ ಸಂಕಲನದ ಕಾವ್ಯಭಾಷೆಯು ಇಂತಹ ನೀರು, ನೆಲ, ಗಾಳಿ, ಬೆಳಕುಗಳ ಫಲಿತ.

ಕರುಳಿಗೆ ಚಳಿ
ಹೊದಿಕೆ ಹೊಲಿಯುವ
ನೇಕಾರನಿನ್ನೂ ಹುಟ್ಟಿಲ್ಲ
ಹಳಬರು ಹೊಲಿದ ಕೌದಿಗಳು
ಸವೆದುಹೋಗಿವೆ


’ಬುದ್ಧನೆಂಬ ನೇಕಾರ’ ಎಂಬ ಕವಿತೆಯಲ್ಲಿ ಚಳಿ, ನೂಲು, ಕೌದಿ ಎಂಬೆಲ್ಲ ಪದಗಳೂ ಪರಸ್ಪರ ಸಂಕರಗೊಂಡು, ಸಮಕಾಲೀನ ಸಂಕಟಗಳಿಗೆ ನೇವರಿಸುವ ಬೆರಳುಗಳಾಗಿ ಸಾಂತ್ವನಿಸುತ್ತವೆ. ’ಕಡಲ ನಡುವಿನ ದೀರ್ಘ ನದಿ ಅವನು’ ಎಂದು ಬುದ್ಧನನ್ನು ಕಾಣಿಸಿದಾಗ, ಈ ಬಾಳ ಪ್ರವಾಹವನ್ನೂ ಕಾಪಿಟ್ಟು ಸಂಭಾಳಿಸಬಲ್ಲ ಬುದ್ಧ ತತ್ವ ಮನಸ್ಸಿನಲ್ಲಿ ಊರುತ್ತದೆ.

ಇಲ್ಲಿಯ ಕವಿತೆಗಳ ವಿಶಿಷ್ಟತೆಯೆಂದರೆ, ಪರಂಪರೆ ಮತ್ತು ವರ್ತಮಾನಗಳನ್ನು ಸಾವಯವ ಸಮಗ್ರೀಕರಣದಲ್ಲಿ ಎರಕಗೊಳಿಸುತ್ತ ಓದುಗ ಪ್ರಜ್ಞೆಯನ್ನು ದಟ್ಟವಾಗಿ ವ್ಯಾಪಿಸಿಕೊಳ್ಳುವುದು. ಅಲ್ಲಮ ಹೇಳುವ, ’ಹಿಂದಣ ಅನಂತವನು ಮುಂದಣ ಅನಂತವನು ಒಂದು ನುಡಿ ಒಳಗೊಳ್ಳುವ’ ಪ್ರಯತ್ನ.

“ಹಬ್ಬದ ಹರಕೆಯ ಕುರಿಯಂತೆ
ಲೋಕಕ್ಕೆ ಲೋಕವೇ
ಗರಿಕೆ ಮೇಯುತ್ತಿದೆ”


“ಲೋಕದ ಅರ್ಧಜನ ಗಿಳಿಗಳಾಗಿದ್ದಾರೆ”- ಇಂತಹ ನುಡಿಗಳು, ಜನಬಾಳಿನ ಸಾರ್ಥಕತೆಯನ್ನು ಸದಾ ಕನಸಿದ ಅಣ್ಣ ಬಸವಣ್ಣನೊಂದಿಗೆ ಕರುಳುಬಳ್ಳಿಯ ನಂಟು ಹೊಂದಿವೆ. ಇಂದು ಬರೆಯುವ ಮಾತ್ರವಲ್ಲ ಬದುಕುವ ಪ್ರತಿಯೊಬ್ಬರೂ ಪರಂಪರೆಯ ಸ್ಮೃತಿಕೋಶದ ಜ್ಞಾನ ಮತ್ತು ವಿವೇಕಗಳ ಫಲಾನುಭವಿಗಳು. ಅದನ್ನ ವಿಸ್ಮೃತಿಗೆ ತಳ್ಳಬಾರದ ಜವಾಬ್ದಾರಿಯನ್ನೂ ಹೊಂದಿರಬೇಕಾದವರು. ಇಲ್ಲಿಯ ಬಹುತೇಕ ಕವಿತೆಗಳು ಓದುಗರಲ್ಲಿ ಇರಬೇಕಾದ ಈ ಸಂವೇದನಾಶೀಲತೆಯನ್ನು ಬಯಸುತ್ತವೆ. “ತಲೆಕಡಿವ ಗಂಡುಗೊಡಲಿ ಎದ್ದು ಕೂತಿದೆ” ಎಂದಾಗ, ಇಂದಿನ ಪಿತೃಸತ್ತೆಯ ಠೇಂಕಾರವು ಹೊಂದಿರುವ ಅಂದಿನ ಬೇರುಗಳನ್ನು ಕಾಣಿಸುತ್ತದೆ. ಮಾತೃಹತ್ಯೆಯನ್ನು ಮೌಲ್ಯವಾಗಿಸಿಕೊಂಡ ಗಂಡುಗೊಡಲಿ ಧರ್ಮದ ಕವಚದೊಳಗೆ ಮುಚ್ಚಟೆಯಾಗಿದೆಯಲ್ಲವೇ? ಎಂದು ಪ್ರಶ್ನಿಸುತ್ತದೆ. ಪರಂಪರೆಯೊಂದಿಗೆ ಸಾಧಿಸಿಕೊಳ್ಳಬೇಕಾದ ಸಂಬಂಧಕ್ಕೆ ಯಾವ ಸೀಮೆಯೂ ಇಲ್ಲ. ಅದು ಚರಿತ್ರೆ, ಪುರಾಣ, ಮಹಾಕಾವ್ಯ, ಜನಪದದಂತಹ ಹಲವು ಆಯಾಮಗಳಲ್ಲಿ ಹೊಕ್ಕುಬಳಕೆಯದ್ದು. ’ಗಾಂಧಾರದಿಂದ ಹರಿದುಬಂದ ನದಿಯೇಕೆ ಉಪ್ಪು?’ ಎಂದು ಓದಿದಾಗ, ಧಕ್ಕನೆ ನೆನಪಾಗುವುದು, ಗಂಡಿನ ಭೋಗಕ್ಕಾಗಿ ಹೆಣ್ಣನ್ನು ಗೆದ್ದು ತರುವ, ಗೆದ್ದು ತಂದ ’ವಸ್ತು’ವನ್ನು ಇನ್ನೊಬ್ಬನ ತಾಬೆಗೆ ಕೊಡಬಹುದಾದ; ಅದಕ್ಕೆ ಯಾವ ಮುಜುಗರವೂ ಇಲ್ಲದ, ನ್ಯಾಯ-ನೀತಿಗಳು ಗಂಡಾಳಿಕೆಯ ಹಿತಕಾಯ್ವ ಕಾವಲುಗಳಾದ ಮಹಾಭಾರತದ ಭೀಷ್ಮರಥದ ಗಾಲಿಗಳನ್ನು ನೆನಪಿಸುತ್ತದೆ. ಈ ದುರಂತದ ಕಥನಕ್ಕೆ ಮುಗಿತಾಯವೇ ಇಲ್ಲವೇ? ದೇಶದ ಗಡಿಯಾದ ಕಾಶ್ಮೀರದ ಹೆಣ್ಣುಗಳ ಯಾತನೆಯ ಕಣ್ಣೀರು ಇನ್ನೂ ಹರಿಯುತ್ತಲೇ ಇದೆಯಲ್ಲವೇ? ಪುರಾಣ ಚರಿತ್ರೆ-ವರ್ತಮಾನಗಳನ್ನು ಒಂದು ನುಡಿ, ಜೀವದೊಕ್ಕಲು ಮಾಡಿಕೊಳ್ಳುವ ಭಾಷಿಕ ಸಾರ್ಥಕತೆಯಿದು.

ಇಲ್ಲಿಯ ಕವಿತೆಗಳ ವಿಶಿಷ್ಟತೆಯ ಮತ್ತೊಂದು ಪದರದ ವಿನ್ಯಾಸವಿರುವುದು ತೊಟ್ಟಿಕ್ಕುತ್ತಿರುವ ಕರುಣಾರ್ದ್ರತೆಯಲ್ಲಿ. ವಿಷಾದದ ಕಡಲನ್ನು ದಾಟಿಸುವ ಏಕೈಕ ತೆಪ್ಪ ಕರುಣೆ, ಬುದ್ಧ ಇಲ್ಲಿಯ ಪುನರಾವರ್ತಿತ ಎಚ್ಚರ, ಬುದ್ಧನಿಲ್ಲಿ ಅವಿಮರ್ಶಿತ ವಾಸ್ತವವಲ್ಲ. ವಿಮರ್ಶಿಸಬಹುದಾದ ಎಚ್ಚರ ಎನ್ನುವುದೇ ಬುದ್ಧಪ್ರೀತಿ. ಯಶೋಧರೆಯ ಕಣ್ಣೋಟ, ಇಂದಿನ ಮನುಷ್ಯನಾದ ಕವಿಯ ಕಣ್ಣೋಟಗಳು ಬುದ್ಧನನ್ನು ತಿಳಿವ ಬಗೆಗಳಾಗಿವೆ.

ಬಸುರಿಯರ ಕಾಲಿಡಿದು, ಕೇಳುವೆ
ಎದೆ ಕರುಣದ ಮಕ್ಕಳ
ಹೆತ್ತು ಕೊಡಿರವ್ವ ತಾಯೆ


’ದೇವರ ಬಯಸಿ, ದೆವ್ವಗಳ ಹೆರುತ್ತಿರುವ ನಾಡಿ’ನಲ್ಲಿ ಹಿಂಸೆ ವಿಜೃಂಭಿಸುತ್ತಿದೆ. ಈ ಸುಡುಬೆಂಕಿಗೆ ಕರುಣೆಯ ಜೀವಜಲದ ಸ್ಪರ್ಶ ಬೇಕಿದೆ. ವರ್ತಮಾನದ ಹಿಂಸಾರತಿಯನ್ನು ಪುನಃ ಪುನಃ ಎದುರಿಡಬೇಕಾದ ಸಂಕಟದಲ್ಲಿ ಕವಿತೆಗಳಿಗೆ ವಿಷಾದಯೋಗ ಪ್ರಾಪ್ತವಾಗುತ್ತದೆ. ಶೋಷಣೆಯನ್ನು ಸಿದ್ಧ ಮಾನದಂಡದಲ್ಲಿ, ಸರಳ ವರ್ಗೀಕರಣದಲ್ಲಿ ಹಿಡಿದಿಡಲಾಗುತ್ತಿಲ್ಲ. “ಹೂವಿನೆಳೆ ಕದಪಿನಲ್ಲೆಲ್ಲೂ ಕೊಲೆಯ ಸಾಕ್ಷಿಗಳಿಲ್ಲ್ಲ” ಮನಸ್ಸು ಜುಂಗುಡುತ್ತದೆ. ಇದು ಸಾಕ್ಷ್ಯನಾಶವಲ್ಲ. ಸಾಕ್ಷ್ಯವನ್ನು ನೆನಪೂ ಇರದಂತೆ ಇಲ್ಲವಾಗಿಸೋದು “ಕೊಲೆಗಡುಕತನಕೆ ವಸಂತ ವಿಲಾಸ” ಪ್ರಾಪ್ತವಾಗಿರುವ ವರ್ತಮಾನದ ಸುಡುಸತ್ಯದ ಹಲವು ನುಡಿಗಟ್ಟುಗಳಿಲ್ಲಿ ಮಳೆಕಾಡುಗಳಂತೆ ದಟ್ಟೈಸಿದೆ. ಯುವಜನಾಂಗದ ನಿಸ್ತೇಜತೆಯು, ಯುದ್ಧದ ದುರಂತಕ್ಕಿಂತಲೂ ಹೇಯ-ಎಂಬ ಚಡಪಡಿಕೆಯಿದು. ಮೆದುಳು ಕಿತ್ತು, ಬುಟ್ಟಿ ತುಂಬಿ ಹೋಳಿಯಾಡುತ್ತಿರುವ ಯುವಕರು, ಜಯಘೋಷದಲ್ಲಿ ನಿರತರು. “ಬೀಜ ಒಡೆಸಿಕೊಂಡು ಬೀದಿ ಅಲೆಯುತ್ತಿಹ, ಎಳೆಯ ಹುಡುಗರು” ಕವಿಯನ್ನು ಗಾಢವಾಗಿ ಕಲಕಿದ್ದಾರೆ. ಇಲ್ಲಿರುವುದು ವ್ಯಂಗ್ಯವಲ್ಲ. ವಿಷಾದ. ಇಂತಹ ನಿಸ್ಸತ್ವದ ಯುವಕರು ಯಾರೂ ಆಗಬಹುದು. ಅವರು ನಮ್ಮ ನಿಮ್ಮ ಮನೆಯಂಗಳದಿಂದಲೂ ಬೀದಿಗೆ ಇಳಿದಿರಬಹುದು. ’ರಣಪಿಶಾಚಿಗಳು, ರಂಗಕಟ್ಟಿ ಕುಣಿವ ಈ ಕಾಲದಲ್ಲಿ ಏನೂ ಆಗಿ ಬಿಡಬಹುದು ಮಾತ್ರವಲ್ಲ, ಆಗುತ್ತಲೂ ಇದೆ. ಇಂತಹ ಅನಾಹುತಗಳಿಗೆ ಕಾವ್ಯದ ಪ್ರತಿಸ್ಪಂದನೆ ಏನಿರುತ್ತದೆ? ಯಾಕಿರುತ್ತದೆ? ಹೌದು, ಸಾಮಾಜಿಕ ಗಾಯಗಳನ್ನು, ಕಾನೂನು ನ್ಯಾಯಗಳಿಂದ ಒಂದಿಷ್ಟು ಗುಣಪಡಿಸಬಹುದು. ಆದರೆ, ಸಾಂಸ್ಕೃತಿಕವಾಗಿ ಛಿದ್ರವಾಗುತ್ತಿರುವ ಸಮಾಜವನ್ನು ಜೋಡಿಸುವುದು ಹೇಗೆ? ಧರ್ಮ ಮತ್ತು ರಾಜಕಾರಣಗಳು ಅನೈತಿಕತೆಯ ದಾರಿಯಲ್ಲಿ ಸಾಗುವಾಗ ಅಂತಹ ಸಮಾಜವನ್ನು ಕಲೆ-ಸಾಹಿತ್ಯಗಳೇ ಸಂಭಾಳಿಸಬೇಕಲ್ಲವೇ? ಎಂಬ ಆದಿಮ ಪ್ರಶ್ನೆಯಿದು. ಜನಸಾಮಾನ್ಯರು, ಬ್ರೆಕ್ಟ ಗುರುತಿಸುವ ’ರಾಜಕೀಯ ನಿರಕ್ಷರಸ್ಥ’ರಾದರೆ, ಸಾಹಿತ್ಯ-ಕಲೆಗಳ ಹೊಣೆ ಭಾರವಾಗುತ್ತದೆ. ’ಕುರಿಗಳ ಕುತ್ತಿಗೆ ಬಲು ಸಣ್ಣದು’ ಎನ್ನುವ ಕವಿತೆ, ಪ್ರಭುತ್ವವೇ ಅನ್ಯಾಯದ ಮಾರ್ಗ ತೆರೆದರೆ, ನ್ಯಾಯ ಕೇಳುವುದು ಯಾರಲ್ಲಿ? ಎಂಬ ಪ್ರಶ್ನೆಯನ್ನಿಡುತ್ತಿದೆ. ’ರಕ್ತದಲ್ಲಿ ಚಿತ್ರ ಬರೆಯುವ ಕಲೆಯನ್ನು ಕಲಿಸುವ ಸ್ಕೂಲು ತೆರೆದರೆ’, ಇದನ್ನು ತಿಳಿದಿರುವ ಮಧ್ಯಮವರ್ಗದ (ಕವಿ ಅವರನ್ನು ನಡುವರ್ಗೀಕರು ಎನ್ನುತ್ತಾರೆ) ಜನರು ಮೌನದಿಂದಿರುತ್ತಾರೆ. ಅವಕಾಶವಾದಿಗಳಾಗುತ್ತಾರೆ. ಸಾಮಾಜಿಕ ಕೆಡುಕು, ಕಾವ್ಯಕೆ ಪ್ರೇರಣೆಯಾಗುತ್ತದೆಂಬ ನಂಬಿಕೆಯೂ ಇಲ್ಲಿ ಸೋತು ಹೋಗುತ್ತದೆ. ಕೆಡುಕು ಎಷ್ಟು ದಟ್ಟವಾಗಿ ವ್ಯಾಪಿಸಿದೆಯೆಂದರೆ, ಒಳಿತಿನ ಸ್ಪರ್ಶ ಯಾರಿಗೂ ಅರಿವಾಗುವುದಿಲ್ಲ. ಅದರ ಪರಿಚಯವೇ ಮರೆತುಹೋಗಿದೆ. ಕವಿ ಮತ್ತು ರಾಜ ಇಬ್ಬರೂ ಪರಸ್ಪರ ಅದಲು ಬದಲಾಗಬಹುದಾದ ಮಾಯಾಜಾಲವಿದು. ಇವು ವರ್ತಮಾನದಲ್ಲಿ ನಿಂತು, ಮಾನವ ಚರಿತ್ರೆಯನ್ನು ಹೊಕ್ಕು ಹಾಯುವ ಅಪ್ಪಟ ರಾಜಕೀಯ ಕವಿತೆಗಳು. ಕಾವ್ಯವನ್ನು ಸುಕೋಮಲ ಬಂಧ…..ಎನ್ನುವ ವಿಮರ್ಶೆಯನ್ನು ಅಲ್ಲಗಳೆಯುವ ಕವಿತೆಗಳು. ತನ್ನ ನಿಲುವನ್ನು ತಾನು ವ್ಯಕ್ತಿಸುವ ನಿಷ್ಠುರ ಕಾವ್ಯಮೀಮಾಂಸೆ ಆತ್ಮವಿಶ್ವಾಸ ಮತ್ತು ಸವಾಲುಗಳನ್ನು ಏಕಕಾಲದಲ್ಲಿ ಒಡಲುಗೊಂಡ ಕವಿತೆಗಳು.

ಈ ಸಂಕಲನದ ಕವಿತೆಗಳ ಇನ್ನೊಂದು ಮನಸೆಳೆಯುವ ಅಂಶವೆಂದರೆ, ಹೆಣ್ಣಾಗಿ ಲೋಕ ನಿಯತಿಯನ್ನು ಕಾಣಬಲ್ಲೆನೇ ಎಂಬ ಸಶೋಧ. ಇಲ್ಲಿ ಬುದ್ಧ, ನದಿ, ಮಾಗಿ, ಮಿಥಿಲೆ ಎಲ್ಲವೂ ಆ ಶೋಧನೆಗಳೇ ಕವಿ ನಿರ್ಲಿಂಗಿಯಾಗುವ ಬಗೆಗಣ್ಣಿನೆಚ್ಚರದಲ್ಲಿ ಆಕಾಶ ಮುಟ್ಟಿನ ಬಟ್ಟೆ ಹಿಂಡಿದಂತೆ ಕಾಣಲು ಸಾಧ್ಯ. ಈ ಹಿನ್ನೆಲೆಯಲ್ಲಿ, ಮಿಥಿಲೆಯ ಮಾವಿನ ಮರ’ ಮಹತ್ವದ ಕವಿತೆ. ಕವಿ ಸು.ರಂ. ಎಕ್ಕುಂಡಿಯವರ ಕವಿತೆಯಲ್ಲಿ ಸೀತೆ,

’ಎಂದಾದರೊಂದು ದಿನ ನಾನು ಮಿಥಿಲೆಗೆ
ಹೋಗಿ
ಜನಕರಾಜನ ಹೊಲದ ಮಣ್ಣ ತರುವೆ’


ಎಂದು ಕನಸುತ್ತಾಳೆ. ಎಂದೂ ಮಿಥಿಲೆಗೆ ಮರಳಲಾರದವಳಾಗಿ. ಕನ್ನಡದ ಓದುಗರ ಒದ್ದೆಗಣ್ಣಿನ ನೆನಪು ಅವಳು. ಆದರೆ ಇಲ್ಲಿ ಅವಳು, ಲೋಕದೆಲ್ಲ ಹುಡುಗಿಯರ ಪ್ರತಿನಿಧಿ. “ಮಿಥಿಲೆಯ ಹುಡುಗಿಗೆ ಲೋಕದೆಲ್ಲರಿಗಿಂತ ಮಿಗಿಲು ದುಃಖ” ಎನ್ನುವ ಕವಿತೆ, ಮೌನವಾಗಿ ಮರದೊಂದಿಗೆ ಮಾತಾಡುವವಳನ್ನು ಪರಿಚಯಿಸುತ್ತದೆ. ಅಂಥವಳನ್ನು ಅರ್ಧರಾತ್ರಿಯಲ್ಲಿ ಕಡಿದು ಚೆಲ್ಲಿದರು. ಹೌದು ಯಾಕೆ? ತಪ್ಪು-ಒಪ್ಪುಗಳನ್ನು ಅಳೆವ ಅಳೆತಗೋಲು ಯಾವುದು? ಬಿಕ್ಕಿದರೂ ಬೆಂಕಿ ಬೀಳುವ ದಾರುಣತೆಯನ್ನು ಕವಿತೆ ಕಾಣಿಸುತ್ತದೆ.

ಹಿಂಸೆಯು ಸಹಜವಾದ, ಪ್ರೀತಿಯು ಅಸಹಜವಾದ ಸಮಾಜವಿದು. ದ್ವೇಷ ಅಕಾರಣವಾಗುವ, ಪ್ರೀತಿಯು ಸ್ವಾರ್ಥ ಕಾರಣದಿಂದ ಮಾತ್ರ ಸಂಭವಿಸವ ಸ್ಥಿತಿಯಿದು. ಪ್ರೀತಿಯು ಮನುಷ್ಯ ಚೈತನ್ಯದ ವಿಸ್ತಾರವಾಗಬೇಕಿತ್ತು ಆದರೆ, ಎಳೆಯರ ಬದುಕಿನಿಂದ ಪ್ರೀತಿಸುವ ಹಕ್ಕನ್ನೇ ಕಸಿದುಕೊಳ್ಳಲಾಗಿದೆ. ಆ ಕಸಿಯುವಿಕೆಗೆ ನ್ಯಾಯ, ನೀತಿ, ಧರ್ಮಗಳ ಕಾರಣ ಬೇರೆ.

ನೀನು, ಲಾಲ್‌ಬಾಗಿನಲ್ಲಿ ಕೂತು
ನೇವರಿಸಿದ್ದ ಗರಿಕೆ
ಎದೆಯಾಳದವರೆಗೆ ಬೇರುಬಿಟ್ಟಿದೆ
ಗರ್ಭದ ತಳ ಮುಟ್ಟಿಬಿಡಬಹುದೆಂಬ ಭಯ
ಕಣ್ಣೀರ ಬೆಂಕಿಯಿಂದ ಬೇರುಸುಟ್ಟೆ


ಪ್ರೀತಿಸುವುದೇ ಭೀತವಾದ ವ್ಯವಸ್ಥೆಯ ದಾರುಣತೆಯನ್ನು ಮನಸ್ಸಿಗೆ ಮುಟ್ಟಿಸುತ್ತ, ಪ್ರೀತಿಸುವುದು ಮಾನವ ಬಾಳಿನ ಸಂತಸದ ಫಲಿತ ಎನ್ನುವ ಎಚ್ಚರವನ್ನು ಮೂಡಿಸುವ ಮಾನವೀಯ ಬದ್ಧತೆಯಿದು. ನವೋದಯ ಸಾಹಿತ್ಯವು ದಾಂಪತ್ಯ ಸೌಖ್ಯದ ರಸ ರುಚಿಗಳನ್ನು ಊಡಿದಂತೆ, ಇಂದಿನ ಕಾವ್ಯವು ಪ್ರೀತಿಯ ರೂಪ-ರಸ-ಗಂಧಗಳ ಸ್ಪರ್ಶವನ್ನು ಊಡಬೇಕು ಎಂದು ನೆನಪಿಸುವ ಕವಿತೆಗಳಿವು. ಒಳಗೂ ರಣ, ಹೊರಗು ರಣದ ಬೇಗೆಯಲ್ಲೂ ಮಾವಿನ ಮರ ಕನಸು ಕಾಣುತ್ತದೆ. “ಪ್ರೀತಿ ಹುಟ್ಟಿದ ಗಳಿಗೆಯಲ್ಲಿ, ಲೋಕದೆಲ್ಲ ಕೆಡುಕುಗಳು ಅನಾಮತ್ತು ಆವಿಯಾಗುತ್ತವೆ” ಎಂದು ಜೀವಪ್ರೀತಿಯ ಜೀವದೇಳ್ಗೆಯ ಕನಸಿನ ಈ ಮಾವಿನ ಮರದ ಗಮಲು ಹರಡಲಿ.

’ಮಿಥಿಲೆಯ ಮಾವಿನ ಮರ’
ನೆಲ್ಲುಕುಂಟೆ ವೆಂಕಟೇಶ್
ಆಕೃತಿ ಪ್ರಕಾಶನ, ಬೆಲೆ: 195/-
ಪುಸ್ತಕಗಳಿಗಾಗಿ store.naanugauri.comಗೆ ಭೇಟಿ ನೀಡಿ
ಸಂಪರ್ಕಿಸಿ: 9845435790

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧರ್ಮದ ಕಾರಣಕ್ಕೆ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಗೆ ಹಲವು ಬಾರಿ ಇರಿತ: ಅಮೆರಿಕದ ಮಾಲ್‌ನಲ್ಲಿ ಕೃತ್ಯ

ಅಮೆರಿಕದ ಉತಾಹ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಇರಿತದ ಆರೋಪ ಹೊರಿಸಲಾಗಿದೆ. ಹೈದರಾಬಾದ್‌ ನಗರದ ಟೋಲಿಚೌಕಿಯ ನಿವಾಸಿ ಸೈಯದ್ ಸೊಹೈಲ್ ಉದ್ದೀನ್, ಉತಾಹ್‌ನ ಸಾಲ್ಟ್ ಲೇಕ್ ಕೌಂಟಿಯ...

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...