Homeಮುಖಪುಟವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ: ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸಿಗುವುದೇ ಸುಪ್ರೀಂ ಪರಿಹಾರ?

ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ: ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸಿಗುವುದೇ ಸುಪ್ರೀಂ ಪರಿಹಾರ?

- Advertisement -
- Advertisement -

ಯುಎಪಿಎ ಅಡಿಯಲ್ಲಿ ದೀರ್ಘಕಾಲದ ಜೈಲುವಾಸದ ಹಿನ್ನೆಲೆ, ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್‌ನ ಎರಡು ನ್ಯಾಯಪೀಠಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ, ವಿಚಾರವನ್ನು ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ ಎಂದು ವರದಿಯಾಗಿದೆ.

ಮೇ 22, 2026 ರಂದು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ. ಬಿ ವರಾಳೆ ಅವರಿದ್ದ ದ್ವಿಸದಸ್ಯ ಪೀಠವು ಈ ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ.

2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜನವರಿ 2026ರಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಸದ್ಯ ಪೀಠವು ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು. ಆದರೆ, ಮೇ 18, 2026 ರಂದು ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಮತ್ತೊಂದು ಪೀಠವು “ಯುಎಪಿಎ ಪ್ರಕರಣಗಳಲ್ಲೂ ಜಾಮೀನು ನಿಯಮ, ಜೈಲು ಅಪವಾದ” ಎಂದು ಹೇಳಿ, ಹಿಂದಿನ ತೀರ್ಪಿನ ಬಗ್ಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿತ್ತು.

ಸಮಾನ ಬಲದ (Co-ordinate Bench) ಒಂದು ಪೀಠವು ಮತ್ತೊಂದು ಪೀಠದ ತೀರ್ಪನ್ನು ಹೀಗೆ ಟೀಕಿಸುವುದು ನ್ಯಾಯಾಂಗ ಶಿಸ್ತಿಗೆ ವಿರುದ್ಧ ಎಂದು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ಪೀಠ ಅಭಿಪ್ರಾಯಪಟ್ಟಿದೆ.

ಯುಎಪಿಎನಂತಹ ಕಠಿಣ ಕಾನೂನುಗಳ ಅಡಿಯಲ್ಲಿ, ಕೇವಲ ವಿಚಾರಣೆ ವಿಳಂಬವಾಗಿದೆ ಮತ್ತು ದೀರ್ಘಕಾಲ ಜೈಲಿನಲ್ಲಿದ್ದಾರೆ ಎಂಬ ಕಾರಣಕ್ಕೆ ಜಾಮೀನು ನೀಡಬಹುದೇ? ಎಂಬ ಕಾನೂನಾತ್ಮಕ ಪ್ರಶ್ನೆಯನ್ನು ಬಗೆಹರಿಸಲು ಈ ಪ್ರಕರಣವನ್ನು ಈಗ ವಿಸ್ತೃತ ಪೀಠಕ್ಕೆ ಒಪ್ಪಿಸಲಾಗಿದೆ.

ಮಧ್ಯಂತರ ಜಾಮೀನು ಮಂಜೂರು: ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಶಿಫಾರಸು ಮಾಡುವ ಸಂದರ್ಭದಲ್ಲೇ, ಗಲಭೆ ಪ್ರಕರಣದ ಆರೋಪಿಗಳಾದ ಅಬ್ದುಲ್ ಖಾಲಿದ್ ಸೈಫಿ ಮತ್ತು ತಸ್ಲೀಮ್ ಅಹ್ಮದ್ ಅವರಿಗೆ ಸುಪ್ರೀಂ ಕೋರ್ಟ್ 6 ತಿಂಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಇಬ್ಬರೂ ಆರೋಪಿಗಳು ಮಾಧ್ಯಮಗಳೊಂದಿಗೆ ಮಾತನಾಡುವಂತಿಲ್ಲ ಮತ್ತು ಪ್ರಕರಣದ ಕುರಿತು ಯಾವುದೇ ಹೇಳಿಕೆ ನೀಡಬಾರದು ಎಂಬ ಕಠಿಣ ಶರತ್ತುಗಳನ್ನು ವಿಧಿಸಲಾಗಿದೆ. 

ಉಮರ್ ಖಾಲಿದ್‌ಗೆ ನಿಯಮಿತ (ಖಾಯಂ) ಜಾಮೀನು ದೊರೆತಿಲ್ಲ. ಆದರೆ, ಮೇ 22, 2026 ರಂದು ದೆಹಲಿ ಹೈಕೋರ್ಟ್ ಅವರ ತಾಯಿಯ ಶಸ್ತ್ರಚಿಕಿತ್ಸೆಯ ಹಿನ್ನೆಲೆಯಲ್ಲಿ ಮಾನವೀಯತೆಯ ಆಧಾರದ ಮೇಲೆ ಅವರಿಗೆ 3 ದಿನಗಳ ಅವಧಿಗೆ ಮಧ್ಯಂತರ (ತಾತ್ಕಾಲಿಕ) ಜಾಮೀನು ಮಂಜೂರು ಮಾಡಿದೆ. 

ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ಮಧು ಜೈನ್ ಅವರಿದ್ದ ದ್ವಿಸದಸ್ಯ ಪೀಠವು ಉಮರ್ ಖಾಲಿದ್‌ಗೆ ಜೂನ್ 1 ರಿಂದ ಜೂನ್ 3, 2026 ರವರೆಗೆ ಮಾತ್ರ ತಾತ್ಕಾಲಿಕವಾಗಿ ಬಿಡುಗಡೆ ಹೊಂದಲು ಅನುಮತಿ ನೀಡಿದೆ.

ತಮ್ಮ ತಾಯಿಯ ವೈದ್ಯಕೀಯ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಆರೈಕೆ ಮಾಡಲು ಮತ್ತು ಮೃತ ಚಿಕ್ಕಪ್ಪನ ಶ್ರಾದ್ಧದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಲು ಉಮರ್ ಖಾಲಿದ್ 15 ದಿನಗಳ ಮಧ್ಯಂತರ ಜಾಮೀನು ಕೋರಿದ್ದರು.

ಜಾಮೀನಿನ 3 ದಿನಗಳ ಅವಧಿಯಲ್ಲಿ ಖಾಲಿದ್ ಕೇವಲ ಒಂದು ಮೊಬೈಲ್ ಫೋನ್ ಬಳಸಬೇಕು ಮತ್ತು ತನಿಖಾಧಿಕಾರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಮಾಧ್ಯಮಗಳೊಂದಿಗೆ ಮಾತನಾಡುವಂತಿಲ್ಲ ಎಂದು ಕಠಿಣ ಶರತ್ತುಗಳನ್ನು ವಿಧಿಸಲಾಗಿದೆ.

ಮತ್ತೆ ಮುನ್ನೆಲೆಗೆ ಬಂದ ಖಾಲಿದ್, ಇಮಾಮ್ ಪ್ರಕರಣ

ಜನವರಿ 5, 2026 ರಂದು ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು.

ಇವರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ನಿಜವೆಂದು ತೋರುವುದರಿಂದ, ಯುಎಪಿಎ ಕಾಯ್ದೆಯ ಅಡಿಯಲ್ಲಿ ಸುದೀರ್ಘ ಜೈಲುವಾಸದ ಕಾರಣ ನೀಡಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿತ್ತು. ಅಷ್ಟೇ ಅಲ್ಲದೆ, ಮುಂದಿನ ಒಂದು ವರ್ಷದವರೆಗೆ ಅವರು ಮತ್ತೆ ಜಾಮೀನು ಅರ್ಜಿ ಸಲ್ಲಿಸದಂತೆ ನಿರ್ಬಂಧ ಹೇರಿತ್ತು. 

ಮೇ 18, 2026 ರಂದು ಮತ್ತೊಂದು ಪ್ರಕರಣದ (ಸೈಯದ್ ಇಫ್ತಿಕಾರ್ ಅಂದ್ರಾವಿ ಕೇಸ್) ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರ ಪೀಠವು ಜನವರಿ ತಿಂಗಳ ತೀರ್ಪಿನ ಬಗ್ಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿತು.

2021ರ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ವಿಸ್ತೃತ ಪೀಠ ನೀಡಿರುವ ‘ಕೆ.ಎ. ನಜೀಬ್ ತೀರ್ಪನ್ನು’ ಜನವರಿ ತಿಂಗಳ ಆದೇಶದಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಈ ಪೀಠ ಆಕ್ಷೇಪಿಸಿತ್ತು.

‘ಕೆ.ಎ ನಜೀಬ್ ತೀರ್ಪಿನ’ ಪ್ರಕಾರ, ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ ಸಹ, ಸುದೀರ್ಘ ಕಾಲ ವಿಚಾರಣೆ ನಡೆಯದೆ ಜೈಲಿನಲ್ಲಿ ಇಟ್ಟಿರುವುದು ಸಂವಿಧಾನದ 21ನೇ ವಿಧಿಯ (ವೈಯಕ್ತಿಕ ಸ್ವಾತಂತ್ರ್ಯ) ಉಲ್ಲಂಘನೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಜಾಮೀನು ನೀಡುವುದು ನಿಯಮವೇ ಹೊರತು ಜೈಲು ವಿನಾಯಿತಿಯಲ್ಲ ಎಂದು ನಾಗರತ್ನ ಅವರ ಪೀಠ ಪ್ರತಿಪಾದಿಸಿತ್ತು.

ಸುಪ್ರೀಂ ಕೋರ್ಟ್‌ನ ಎರಡು ಸಮಾನ ಪೀಠಗಳ (Two-judge Coordinate Benches) ನಡುವೆ ತೀರ್ಪಿನ ಅರ್ಥವಿವರಣೆಯಲ್ಲಿ ಗೊಂದಲ ಮತ್ತು ಭಿನ್ನಾಭಿಪ್ರಾಯ ಮೂಡಿದ್ದರಿಂದ, ದೆಹಲಿ ಪೊಲೀಸರು ಈ ವಿಷಯವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವಂತೆ ಮನವಿ ಮಾಡಿದ್ದರು.

“ಒಂದೇ ಶಕ್ತಿಯ ಪೀಠವು ಮತ್ತೊಂದು ಸಮಾನ ಪೀಠದ ತೀರ್ಪನ್ನು ಭಾಷೆಯ ಮೂಲಕ ದುರ್ಬಲಗೊಳಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ. ಬಿ ವರಾಳೆ ಅವರಿದ್ದ ದ್ವಿಸದಸ್ಯ ಪೀಠವು, ಈ ವಿಷಯದಲ್ಲಿ ಕಾನೂನಿನ ಸ್ಪಷ್ಟತೆ ಅತ್ಯಗತ್ಯ ಎಂದು ಹೇಳಿದೆ.

ಹೀಗಾಗಿ, ಯುಎಪಿಎ ಕಾಯ್ದೆಯ ಸೆಕ್ಷನ್ 43D(5) ಮತ್ತು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸುದೀರ್ಘ ಜೈಲುವಾಸದ ಆಧಾರದ ಮೇಲೆ ಜಾಮೀನು ನೀಡುವುದರ ಕುರಿತು ಅಂತಿಮ ಹಾಗೂ ಅಧಿಕೃತ ತೀರ್ಪು ನೀಡಲು ಮುಖ್ಯ ನ್ಯಾಯಮೂರ್ತಿಗಳು (ಸಿಜೆಐ) ಸೂಕ್ತವಾದ ವಿಸ್ತೃತ ಪೀಠವನ್ನು ರಚಿಸಬೇಕು ಎಂದು ಪ್ರಕರಣವನ್ನು ವರ್ಗಾಯಿಸಲಾಗಿದೆ.

ದೆಹಲಿ ಪೊಲೀಸರು ದಾಖಲಿಸಿರುವ ‘ಪಿತೂರಿ’ ಪ್ರಕರಣವು ಮುಖ್ಯವಾಗಿ ಒಂದು ವಿಷಯದ ಮೇಲೆ ನಿಂತಿದೆ. ಅದೇನೆಂದರೆ, ಸಿಎಎ ಕಾಯ್ದೆಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದಾಗ, ಆರೋಪಿತ ಹೋರಾಟಗಾರರು ವಾಟ್ಸಾಪ್ ಗ್ರೂಪ್‌ಗಳಲ್ಲಿದ್ದರು ಮತ್ತು ಅದರಲ್ಲಿ ಭಾಗವಹಿಸಿದ್ದರು ಎಂಬುದಾಗಿದೆ.

ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಹಲವು ಬಾರಿ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ನ್ಯಾಯಾಲಯಗಳು ಇವುಗಳನ್ನು ಪದೇ ಪದೇ ಮುಂದೂಡಿವೆ ಮತ್ತು ತಿರಸ್ಕರಿಸಿವೆ. ಜಗತ್ತಿನಾದ್ಯಂತ ಇರುವ ಮಾನವ ಹಕ್ಕುಗಳ ಹೋರಾಟಗಾರರು ಇದನ್ನು ‘ನ್ಯಾಯದ ಅಪಹಾಸ್ಯ’ ಎಂದು ತೀವ್ರವಾಗಿ ಖಂಡಿಸಿದ್ದಾರೆ.

ಫೆಬ್ರವರಿ 2020ರಲ್ಲಿ ನಡೆದ ಮತ್ತು 50ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಹಿಂಸಾಚಾರದ ತನಿಖೆಯಲ್ಲಿ ದೆಹಲಿ ಪೊಲೀಸರ ಪಕ್ಷಪಾತದ ಪಾತ್ರದ ಬಗ್ಗೆ ಪ್ರಶ್ನೆಗಳು ಮುಂದುವರಿದಿವೆ. ಪೊಲೀಸರು ಆರೋಪಿಗಳ ಚಟುವಟಿಕೆಗಳನ್ನು “ಸರ್ಕಾರವನ್ನು ಬದಲಾಯಿಸುವ ಕಾರ್ಯಾಚರಣೆ” ಎಂದು ಕರೆದಿದ್ದಾರೆ. ಅಲ್ಲದೆ, ಈ ಕಾಯ್ದೆಯ ವಿರುದ್ಧದ ಅವರ ಹೋರಾಟವು “ಶಾಂತಿಯುತ ಪ್ರತಿಭಟನೆಯ ಹೆಸರಿನಲ್ಲಿ ಮರೆಮಾಚಲ್ಪಟ್ಟ ತೀವ್ರಗಾಮಿ ಪ್ರಚೋದನೆ” ಎಂದು ಪೊಲೀಸರು ಆರೋಪಿಸಿದ್ದಾರೆ.

ಒಟ್ಟಿನಲ್ಲಿ, ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠದ ಇತ್ತೀಚಿನ ಪರಾಮರ್ಶೆ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಈಗ ವಿಸ್ತೃತ ಪೀಠಕ್ಕೆ ರವಾನೆಯಾಗಿರುವ ವಿಚಾರದ ತೀರ್ಪು ಕೇವಲ ಖಾಲಿದ್, ಶಾರ್ಜೀಲ್ ಪ್ರಕರಣಕ್ಕೆ ಅನ್ವಯಿಸುವುದಿಲ್ಲ. ಇಂತಹ ಎಲ್ಲಾ ಪ್ರಕರಣಗಳಿಗೂ ಅನ್ವಯಿಸಲಿದೆ. ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ ವಿಚಾರದಲ್ಲಿ ವಿಸ್ತೃತ ಪೀಠ, ಸಂವಿಧಾನ 21ನೇ ವಿಧಿಯಡಿ ರಕ್ಷಿಸಲ್ಪಟ್ಟ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿದರೆ ಖಾಲಿದ್ ಮತ್ತು ಶಾರ್ಜೀಲ್ ನಿರಾಳರಾಗುವ ಸಾಧ್ಯತೆ. ಒಂದು ವೇಳೆ ಯುಎಪಿಎಯ ಕಠಿಣ ನಿಯಮಗಳನ್ನು ಎತ್ತಿ ಹಿಡಿದರೆ ಮತ್ತೆ ನ್ಯಾಯ ಮರೀಚಿಕೆಯಾಗಬಹುದು.

ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ ವಿಚಾರದಲ್ಲಿ ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠವೇ ಅಂತಿಮ ಪರಿಹಾರ ನೀಡಬೇಕಿದೆ.




 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...

ಜಿಲ್ಲಾ ನ್ಯಾಯಾಧೀಶೆ ತಬಸ್ಸುಮ್ ಖಾನ್‌ಗೆ ಬಲಪಂಥೀಯರಿಂದ ಬೆದರಿಕೆ : ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್

ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ತಮ್ಮ ಕರ್ತವ್ಯ ನಿರ್ವಹಣೆಯ ಕಾರಣಕ್ಕಾಗಿ ಬೆದರಿಕೆ ಮತ್ತು ನಿಂದನೆಗೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಕೈಗೊಂಡಿರುವ...

ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತದ ಬಗ್ಗೆ ಸಿಜೆಐಗೆ ಪ್ರತಿಪಕ್ಷಗಳಿಂದ ಪತ್ರ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಆರೋಪ

ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಪಕ್ಷಪಾತ ಧೋರಣೆ ತಳೆದಿದೆ ಎಂದು ಆರೋಪಿಸಿ, 24 ವಿರೋಧ ಪಕ್ಷಗಳ ನಾಯಕರು ಹಾಗೂ ಒಬ್ಬರು ಸ್ವತಂತ್ರ...

ಬೆಂಗಳೂರು| ಕೆ.ಆರ್. ವೃತ್ತದ ಬಳಿ ಬಿಎಂಟಿಸಿ ಬಸ್‌ಗಳ ನಡುವೆ ಅಪಘಾತ; ಹಲವರಿಗೆ ಗಾಯ

ಇಂದು ಬೆಳಿಗ್ಗೆ ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಜನನಿಬಿಡ ಕೆ.ಆರ್. ವೃತ್ತ ಜಂಕ್ಷನ್ ಬಳಿ ಎರಡು ಬಿಎಂಟಿಸಿ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡರು. ಡಿಕ್ಕಿಯ ಪರಿಣಾಮ ಬಸ್ಸಿನೊಳಗೆ ಹಲವಾರು ಪ್ರಯಾಣಿಕರು...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...

ಸೂರತ್ ಧ್ವಂಸ ಕಾರ್ಯಾಚರಣೆ ಸಂಪೂರ್ಣ ‘ಕಾನೂನುಬಾಹಿರ’: 100 ನಿರಾಶ್ರಿತ ಕುಟುಂಬಗಳ ಪುನರ್ವಸತಿಗೆ ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಗುಜರಾತ್‌ನ ಸೂರತ್‌ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಕರೆದಿದೆ. ಮೇ 30 ರಂದು ನಡೆದ ಈ "ಅನಧಿಕೃತ"...

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...