Homeನ್ಯಾಯ ಪಥಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

- Advertisement -
- Advertisement -

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ ಚುನಾವಣೆಯನ್ನೂ ನಡೆಸಿತು. ಈಗ ಬಿಹಾರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಹಾಗಾಗಿ, ಬಿಹಾರದ ಎಸ್‌ಐಆರ್ ವಿಷಯ ಸದ್ಯಕ್ಕೆ ತಣ್ಣಗಾಗಿದೆ.

ಆದರೆ, ಮತದಾರರ ಪಟ್ಟಿಯಿಂದ ಹೊರ ಹಾಕಲ್ಪಟ್ಟವರು ತಮ್ಮ ಅಮೂಲ್ಯ ಮತಹಕ್ಕು ಕಳೆದುಕೊಂಡಾಗಿದೆ. ಅದು ವಾಪಸ್ ಬರುವ ಸಾಧ್ಯತೆ ಕಾಣುತ್ತಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ಸುದೀರ್ಘ ವಿಚಾರಣೆ ನಡೆದಿದೆ. ಹಲವು ಮಧ್ಯಂತರ ಆದೇಶಗಳನ್ನೂ ಸರ್ವೋಚ್ಚ ನ್ಯಾಯಾಲಯ ನೀಡಿದೆ. ಎಸ್‌ಐಆರ್ ಪ್ರಕ್ರಿಯೆಯ ಸಾಂವಿಧಾನಿಕತೆ ಮತ್ತು ಕಾನೂನುಬದ್ಧತೆಯ ಬಗ್ಗೆ ಅಂತಿಮ ತೀರ್ಪನ್ನು ಇನ್ನೂ ಪ್ರಕಟಿಸಬೇಕಿದೆ.

ಎರಡನೇ ಹಂತದಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಛತ್ತೀಸ್‌ಗಢ, ಗೋವಾ ಸೇರಿದಂತೆ 9 ರಾಜ್ಯಗಳು ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಪುದುಚೇರಿ ಸೇರಿದಂತೆ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಕೈಗೊಳ್ಳಲಾಗಿದೆ.

ಈ ನಡುವೆ ಅಸ್ಸಾಂನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಬದಲಾಗಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಆರ್) ಮಾತ್ರ ನಡೆಸಲಾಗಿದೆ.

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅತ್ಯಂತ ಕಟ್ಟುನಿಟ್ಟಾದ ಮತ್ತು ಆಳವಾದ ತಪಾಸಣಾ ಪ್ರಕ್ರಿಯೆಯಾಗಿದೆ. ಇದರಲ್ಲಿ ಅಧಿಕಾರಿಗಳೇ (ಬಿಎಲ್‌ಒ ಬೂತ್ ಮಟ್ಟದ ಅಧಿಕಾರಿ) ಕಡ್ಡಾಯವಾಗಿ ಪ್ರತಿ ಮನೆಗೆ ಭೇಟಿ ನೀಡುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯ ದಾಖಲೆಗಳನ್ನು ಸ್ಥಳದಲ್ಲೇ ಪರಿಶೀಲಿಸುತ್ತಾರೆ. ಸತ್ತವರ ಹೆಸರುಗಳನ್ನು ತೆಗೆದುಹಾಕುವುದು, ವಲಸೆ ಹೋದವರನ್ನು ಪತ್ತೆ ಮಾಡುವುದು ಮತ್ತು ನಕಲಿ ಮತದಾರರನ್ನು ಸಂಪೂರ್ಣವಾಗಿ ಪಟ್ಟಿಯಿಂದ ಹೊರಹಾಕುವುದು ಇದರ ಮುಖ್ಯ ಗುರಿ.

ವಿಶೇಷ ಪರಿಷ್ಕರಣೆ (ಎಸ್‌ಆರ್) ಮತದಾರರ ಪಟ್ಟಿಯನ್ನು ಅಪ್‌ಡೇಟ್ ಮಾಡಲು ಅನುಸರಿಸುವ ಸಾಮಾನ್ಯ ಮತ್ತು ನಿಯಮಿತ ಪ್ರಕ್ರಿಯೆಯಾಗಿದೆ. ಇದರಲ್ಲಿ ಚುನಾವಣಾ ನೋಂದಣಿ ಅಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸುತ್ತಾರೆ. ಹೊಸದಾಗಿ ಹೆಸರು ಸೇರಿಸಲು ತಿದ್ದುಪಡಿ ಮಾಡಲು ಮತ್ತು ತೆಗೆದು ಹಾಕಲು ಮತದಾರರೇ ಮುಂದೆ ಬಂದು ಅರ್ಜಿ ಸಲ್ಲಿಸಬೇಕು (ಫಾರ್ಮ್ 6, 7 ಅಥವಾ 8 ರ ಮೂಲಕ). ಇದು ಹೆಚ್ಚಾಗಿ ಆನ್‌ಲೈನ್ ಅಥವಾ ಕಚೇರಿ ಕೇಂದ್ರಿತವಾಗಿರುತ್ತದೆ. ಅಧಿಕಾರಿಗಳು ಪ್ರತಿ ಮನೆಗೆ ಹೋಗುವುದು ಕಡ್ಡಾಯವಲ್ಲ. ವಯಸ್ಸಾದವರು, ವಿಳಾಸ ಬದಲಿಸಿದವರು ಅಥವಾ ಹೆಸರು ಬಿಟ್ಟುಹೋದವರು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡುವುದು ಇದರ ಮುಖ್ಯ ಗುರಿ.


ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಎಸ್‌ಐಆರ್ ಬಳಿಕ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿಯ ಅನುಸಾರ ಈಗಾಗಲೇ ಮತದಾನ ನಡೆದಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಮಾತ್ರ ಏಪ್ರಿಲ್ 23ರಂದು ಮೊದಲ ಹಂತ ಮತ್ತು ಏಪ್ರಿಲ್ 29ರಂದು ಎರಡನೇ ಹಂತದ ಮತದಾನ ನಡೆದಿದೆ. (ಗಮನಿಸಿ-ಈ ಮಾಹಿತಿಯನ್ನು ಈ ಬರಹ ಬರೆಯುವ ಸಂದರ್ಭ (ಏ.26) ಅನುಸರಿಸಿ ಉಲ್ಲೇಖಿಸಲಾಗಿದೆ. ನೀವು ಓದುವ ಸಂದರ್ಭಕ್ಕೆ ಬದಲಾವಣೆಗಳು ಆಗಬಹುದು)

ಎರಡನೇ ಹಂತದಲ್ಲಿ ಎಸ್‌ಐಆರ್ ನಡೆದಿರುವ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದಲ್ಲಿ ಭಾರೀ ದೊಡ್ಡ ಗೊಂದಲದ ವಾತಾವರಣ ಉಂಟಾಗಿದೆ. ಜನರು ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಲು ದಾಖಲೆಗಳನ್ನು ಹಿಡಿದು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಎಸ್‌ಐಆರ್ ಸಂಪೂರ್ಣ ಸಂಕೀರ್ಣ ವಿಷಯವಾಗಿ ಮಾರ್ಪಟ್ಟಿದೆ. ಸುಪ್ರೀಂಕೋರ್ಟ್ ಕದವೂ ತಟ್ಟಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವತಃ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿ ದೇಶದ ಗಮನ ಸೆಳೆದಿದ್ದಾರೆ.

ಪಶ್ಚಿಮ ಬಂಗಾಳದ ಎಸ್‌ಐಆರ್ ಟೈಮ್‌ಲೈನ್

ಪಶ್ಚಿಮ ಬಂಗಾಳದ ಎಸ್‌ಐಆರ್ ಪ್ರಕ್ರಿಯೆ ಘೋಷಣೆಯಾಗಿದ್ದು, 2025ರ ಆಗಸ್ಟ್-ಸೆಪ್ಟೆಂಬರ್‌ನಲ್ಲಿ, ನಂತರ ಅಕ್ಟೋಬರ್ 28 ರಿಂದ ನವೆಂಬರ್ 3, 2025ರವರೆಗೆ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ತರಬೇತಿ ಮತ್ತು ಅಗತ್ಯ ಫಾರಂಗಳ ಮುದ್ರಣ ಕಾರ್ಯ ನಡೆಯಿತು.

ನವೆಂಬರ್ 4ರಿಂದ ಡಿಸೆಂಬರ್ 11, 2025ರ ನಡುವೆ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಭೌತಿಕವಾಗಿ ಪರಿಶೀಲಿಸಿದರು. ಈ ಹಂತದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಆಧಾರ್ ಕಾರ್ಡ್ ಅನ್ನು ಹೆಚ್ಚುವರಿ ದಾಖಲೆಯಾಗಿ ಬಳಸಲಾಯಿತು.

ಡಿಸೆಂಬರ್ 16, 2025ರಂದು ಚುನಾವಣಾ ಆಯೋಗ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ವೇಳೆ ಸುಮಾರು 63 ಲಕ್ಷ ಹೆಸರುಗಳನ್ನು ಕೈಬಿಡಲಾಗಿತ್ತು. ಡಿಸೆಂಬರ್ 16, 2025ರಿಂದ ಜನವರಿ 15, 2026ರವರೆಗೆ ಹೆಸರುಗಳನ್ನು ತೆಗೆದುಹಾಕಿರುವುದರ ವಿರುದ್ಧ ದೂರು ಸಲ್ಲಿಸಲು ಮತ್ತು ಹೊಸದಾಗಿ ಸೇರ್ಪಡೆಗೊಳ್ಳಲು ಜನರಿಗೆ ಅವಕಾಶ ನೀಡಲಾಯಿತು. ಆಕ್ಷೇಪಣೆಗಳ ಪರಿಶೀಲನಾ ಅವಧಿಯ ನಂತರ, ಫೆಬ್ರವರಿ 28, 2026ರಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಈ ಹಂತದಲ್ಲಿ ಸುಮಾರು 91 ಲಕ್ಷ ಹೆಸರುಗಳನ್ನು ಅಂತಿಮವಾಗಿ ಪಟ್ಟಿಯಿಂದ ತೆಗೆದುಹಾಕಲಾಗಿತ್ತು.

ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಬರೋಬ್ಬರಿ 91 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟ ನಿರ್ಧಾರದ ವಿರುದ್ಧ ಪಶ್ಚಿಮ ಬಂಗಾಳದ ಮೂರು ಗುಂಪುಗಳು ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಎಸ್‌ಐಆರ್ ಪ್ರಕ್ರಿಯೆಯನ್ನೇ ಬಲವಾಗಿ ವಿರೋಧಿಸಿ, ಇದು ಮತದಾರರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವ ಪ್ರಯತ್ನ ಎಂದು ಸುಪ್ರೀಂಕೋರ್ಟ್‌ನಲ್ಲಿ ವಾದಿಸಿತು.

ಕೆಲವು ಪ್ರಮುಖ ಎನ್‌ಜಿಒಗಳು ಮತ್ತು ಸಾಮಾಜಿಕ ಕಾರ್ಯಕರ್ತರು, ಯಾವುದೇ ಸರಿಯಾದ ಮುನ್ಸೂಚನೆ ನೀಡದೆ ಲಕ್ಷಾಂತರ ಜನರ ಸಾಂವಿಧಾನಿಕ ಹಕ್ಕನ್ನು (ಮತದಾನದ ಹಕ್ಕು) ಕಿತ್ತುಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದರು. ತಮ್ಮ ಹೆಸರುಗಳು ಅನ್ಯಾಯವಾಗಿ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ನೂರಾರು ಸಾಮಾನ್ಯ ನಾಗರಿಕರು ಕೂಡ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿದರು.

ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್, ಪಶ್ಚಿಮ ಬಂಗಾಳದ ಎಸ್‌ಐಆರ್ ಪ್ರಕ್ರಿಯೆಯ ಮೇಲೆ ನಿಗಾ ಇಡಲು ಮತ್ತು ಜನರ ದೂರುಗಳನ್ನು ಆಲಿಸಲು ವಿಶೇಷ ನ್ಯಾಯಮಂಡಳಿಗಳನ್ನು ಸ್ಥಾಪಿಸುವಂತೆ ಆದೇಶಿಸಿತು. ಇದಕ್ಕಾಗಿ ಪಕ್ಕದ ರಾಜ್ಯಗಳಾದ ಜಾರ್ಖಂಡ್ ಮತ್ತು ಒಡಿಶಾದಿಂದ ಸುಮಾರು 200 ನ್ಯಾಯಾಂಗ ಅಧಿಕಾರಿಗಳನ್ನು ಕರೆಸಲಾಯಿತು. ತಪ್ಪಾಗಿ ಹೆಸರು ಕೈಬಿಡಲಾಗಿದೆ ಎಂದು ಭಾವಿಸುವವರಿಗೆ ತಮ್ಮ ದಾಖಲೆಗಳನ್ನು ಸಲ್ಲಿಸಿ ಮತ್ತೆ ಹೆಸರನ್ನು ಸೇರಿಸಲು ನ್ಯಾಯಾಲಯ ಅವಕಾಶ ನೀಡಿತು.

ಸುಪ್ರೀಂಕೋರ್ಟ್ ಆದೇಶದ ಬಳಿಕ, ಅಂತಿಮ ಪಟ್ಟಿಯಿಂದ ಹೊರಗುಳಿದಿದ್ದರೂ, ನ್ಯಾಯಮಂಡಳಿಯಲ್ಲಿ ಗೆದ್ದ ಮತದಾರರಿಗಾಗಿ ವಿಶೇಷ ಪೂರಕ ಪಟ್ಟಿಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿತು. ಮಾರ್ಚ್ 27, 2026ರಂದು ಎರಡನೇ ಪೂರಕ ಪಟ್ಟಿ ಬಿಡುಗಡೆಯಾಯಿತು. ಚುನಾವಣೆಯ ಮೊದಲ ಹಂತಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗ, ಅಂದರೆ, ಏಪ್ರಿಲ್ 22, 2026ರಂದು ನ್ಯಾಯಮಂಡಳಿಯಿಂದ ಅನುಮೋದನೆ ಪಡೆದವರ ಹೆಸರಿರುವ ಮತ್ತೊಂದು ಪಟ್ಟಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿತು. ಏಪ್ರಿಲ್ 22ರ ವೇಳೆಗೆ ಚುನಾವಣಾ ಆಯೋಗದ ಪೋರ್ಟಲ್‌ನಲ್ಲಿ ಸುಮಾರು 15ಕ್ಕೂ ಹೆಚ್ಚು ಪೂರಕ ಪಟ್ಟಿಗಳು ಲಭ್ಯವಿತ್ತು.

ಮತದಾರರ ಪಟ್ಟಿಯಿಂದ ಎಷ್ಟು ಹೆಸರುಗಳನ್ನು ಕೈಬಿಡಲಾಗಿದೆ?

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ಗಿಂತ ಮೊದಲು ಮತದಾರರ ಸಂಖ್ಯೆ 7.66 ಕೋಟಿ ಇತ್ತು. ಎಸ್‌ಐಆರ್‌ನಲ್ಲಿ ಮೃತಪಟ್ಟವರು, ಸ್ಥಳಾಂತರಗೊಂಡವರು ಮತ್ತು ಒಂದಕ್ಕಿಂತ ಹೆಚ್ಚು ಬಾರಿ ದಾಖಲಾದವರು (ನಕಲಿ) ಎಂಬ ಕಾರಣಗಳನ್ನು ನೀಡಿ ಬರೋಬ್ಬರಿ 91 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ಪರಿಣಾಮ ಮತದಾರರ ಸಂಖ್ಯೆ 6.75 ಕೋಟಿಗೆ ಇಳಿಕೆಯಾಗಿತ್ತು.

ಎಸ್‌ಐಆರ್ ಬಳಿಕ ಡಿಸೆಂಬರ್ 16, 2025ರಂದು ಚುನಾವಣಾ ಆಯೋಗ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಸುಮಾರು 58 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿತ್ತು. ಫೆಬ್ರವರಿ 28, 2026ರಂದು ಚುನಾವಣಾ ಆಯೋಗ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಿತ್ತು. ಕರಡು ಪಟ್ಟಿಯ ನಂತರ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಈ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈ ವೇಳೆಗೆ ರಾಜ್ಯದ ಒಟ್ಟು ಮತದಾರರ ಸಂಖ್ಯೆ ಸುಮಾರು 7.08 ಕೋಟಿ ಇತ್ತು. ಆದರೆ, ಸುಮಾರು 60 ಲಕ್ಷ ಹೆಸರುಗಳು ಇನ್ನೂ ’ಪರಿಶೀಲನೆಯಲ್ಲಿ’ ಇದ್ದವು.

ಅಂತಿಮ ಪಟ್ಟಿಯ ನಂತರವೂ ’ಪರಿಶೀಲನೆಯಲ್ಲಿದ್ದ’ ಹೆಸರುಗಳನ್ನು ಹಂತಹಂತವಾಗಿ ಇತ್ಯರ್ಥಪಡಿಸಿ ಪೂರಕ ಪಟ್ಟಿಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟಿನಲ್ಲಿ 2026 ಏಪ್ರಿಲ್ 22ರ ವೇಳೆಗೆ ಸುಮಾರು 27 ಲಕ್ಷಕ್ಕೂ ಹೆಚ್ಚು ಮತದಾರರು ಅಂತಿಮ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ವರದಿಗಳು ಹೇಳಿವೆ. ಏಪ್ರಿಲ್ 13ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಪಟ್ಟಿಯಿಂದ ಹೊರಗುಳಿದಿರುವ ಈ 27 ಲಕ್ಷ ಜನರಿಗೆ 2026ರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶವಿಲ್ಲ.

ಈ ಮತದಾರರು ತಮ್ಮ ತಾರ್ಕಿಕ ವ್ಯತ್ಯಾಸಗಳು (Logical Discrepancy) ಅಥವಾ ದಾಖಲೆಗಳ ಕೊರತೆಯನ್ನು ನಿಗದಿತ ಕಾಲಮಿತಿಯೊಳಗೆ ಸರಿಪಡಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ಪರಿಗಣಿಸಲಾಗಿದೆ.

ಪಟ್ಟಿಯಿಂದ ಹೊರಗಿಟ್ಟ 27 ಲಕ್ಷ ಜನರಲ್ಲಿ ಹೆಚ್ಚಿನವರು ಎಎಸ್‌ಡಿಡಿ (ಗೈರುಹಾಜರಿ ಸ್ಥಳಾಂತರ, ಮೃತಪಟ್ಟವರು ಮತ್ತು ನಕಲಿ) ವರ್ಗದಡಿ ಬರುತ್ತಾರೆ ಎಂದು ಚುನಾವಣಾ ಆಯೋಗ ವಾದಿಸಿದೆ. ಆದರೆ, ದಾಖಲೆಗಳಿದ್ದರೂ ತಾಂತ್ರಿಕ ಕಾರಣಕ್ಕೆ ಹೆಸರು ಕಳೆದುಕೊಂಡಿದ್ದೇವೆ ಎಂದು ಲಕ್ಷಾಂತರ ಜನರು ಹೇಳಿದ್ದಾರೆ.

ಏನಿದು ತಾರ್ಕಿಕ ವ್ಯತ್ಯಾಸಗಳು (logical Discrepancy)?

ತಾರ್ಕಿಕ ವ್ಯತ್ಯಾಸಗಳು ಎಂದರೆ ಮತದಾರರ ಪಟ್ಟಿಯಲ್ಲಿರುವ ದತ್ತಾಂಶಗಳಲ್ಲಿ ಕಂಡುಬರುವ ತರ್ಕಬದ್ಧವಲ್ಲದ ತಪ್ಪುಗಳು ಅಥವಾ ವಿರೋಧಾಭಾಸಗಳು. ಸರಳವಾಗಿ ಹೇಳುವುದಾದರೆ, ಒಬ್ಬ ಮತದಾರನ ಮಾಹಿತಿಯು ತಾಂತ್ರಿಕವಾಗಿ ಅಥವಾ ಪ್ರಾಯೋಗಿಕವಾಗಿ ಅಸಾಧ್ಯವೆಂಬಂತೆ ಇರುವುದನ್ನು ಇದು ಸೂಚಿಸುತ್ತದೆ.

ಮತದಾರರ ಪಟ್ಟಿಯಲ್ಲಿ ಈ ಕೆಳಗಿನ ತಪ್ಪುಗಳನ್ನು ಚುನಾವಣಾ ಆಯೋಗ’ ತಾರ್ಕಿಕ ವ್ಯತ್ಯಾಸಗಳು’ ಎಂದು ಹೇಳಿದೆ.

1 . ಮತದಾರನ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇರುವುದು ಅಥವಾ ಅತಿಯಾದ ವಯಸ್ಸು (ಉದಾಹರಣೆಗೆ 150 ವರ್ಷಕ್ಕಿಂತ ಹೆಚ್ಚು) ಎಂದು ದಾಖಲಾಗಿರುವುದು.

2. ಫೋಟೋ ಪುರುಷನದ್ದಾಗಿದ್ದು, ಲಿಂಗದ ಕಾಲಂನಲ್ಲಿ ಮಹಿಳೆ ಎಂದು ನಮೂದಾಗಿರುವುದು ಅಥವಾ ತದ್ವಿರುದ್ದ ಇರುವುದು.

3. ಗುರುತಿನ ಚೀಟಿಯಲ್ಲಿ ಫೋಟೋ ಇಲ್ಲದಿರುವುದು ಅಥವಾ ಫೋಟೋ ಗುರುತಿಸಲು ಸಾಧ್ಯವಾಗದಷ್ಟು ಅಸ್ಪಷ್ಟವಾಗಿರುವುದು.

4. ತಂದೆ/ಪತಿಯ ಹೆಸರಿನಲ್ಲಿ ತರ್ಕಬದ್ಧವಲ್ಲದ ಮಾಹಿತಿಯಿರುವುದು (ಉದಾಹರಣೆಗೆ ತಂದೆಗಿಂತ ಮಗನ ವಯಸ್ಸು ಹೆಚ್ಚಿರುವುದು).

5. ಒಬ್ಬನೇ ವ್ಯಕ್ತಿಯ ಹೆಸರು ಒಂದೇ ಬೂತ್‌ನಲ್ಲಿ ಅಥವಾ ಬೇರೆ ಬೇರೆ ಬೂತ್‌ಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಇರುವುದು.

ಇದನ್ನು ಪರಿಹರಿಸುವುದು ಹೇಗೆ?

ಚುನಾವಣಾ ಆಯೋಗವು ತಾರ್ಕಿಕ ವ್ಯತ್ಯಾಸಗಳು ಸರಿಪಡಿಸಲು ಈ ಕೆಳಗಿನ ಪ್ರಕ್ರಿಯೆಗಳನ್ನು ಅನುಸರಿಸುವುದಾಗಿ ಹೇಳಿದೆ.

1. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಅಂತಹ ಮತದಾರರ ಮನೆಗೆ ಖುದ್ದಾಗಿ ಭೇಟಿ ನೀಡಿ ಅವರ ಮೂಲ ದಾಖಲೆಗಳನ್ನು ಪರಿಶೀಲಿಸುತ್ತಾರೆ.

2. ಮತದಾರರು ತನ್ನ ವಯಸ್ಸು, ವಿಳಾಸ ಮತ್ತು ಫೋಟೋಗೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು (ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಜನನ ಪ್ರಮಾಣಪತ್ರ) ನೀಡಬೇಕು.

3. ಮಾಹಿತಿಯಲ್ಲಿ ತಿದ್ದುಪಡಿ ಇದ್ದರೆ ಮತದಾರರು ‘ಫಾರ್ಮ್-8’ ಅನ್ನು ಭರ್ತಿ ಮಾಡಿ ಸರಿಪಡಿಸಿಕೊಳ್ಳಬೇಕು. ಇದನ್ನು ಆನ್‌ಲೈನ್ (Voter Helpline App) ಅಥವಾ ಆಫ್‌ಲೈನ್ ಮೂಲಕ ಮಾಡಬಹುದು.

4. ತಾಂತ್ರಿಕವಾಗಿ ಸಾಫ್ಟ್‌ವೇರ್ ಬಳಸಿ ಎರಡು ಕಡೆ ಇರುವ ಹೆಸರುಗಳನ್ನು ಪತ್ತೆ ಹಚ್ಚಲಾಗುತ್ತದೆ. ಅಂತಹ ಸಂದರ್ಭದಲ್ಲಿ ಮತದಾರನಿಗೆ ನೋಟಿಸ್ ನೀಡಿ, ಅವನು ಎಲ್ಲಿ ವಾಸವಿದ್ದಾನೋ ಅಲ್ಲಿ ಮಾತ್ರ ಹೆಸರನ್ನು ಉಳಿಸಿ, ಉಳಿದ ಕಡೆ ಅಳಿಸಲಾಗುತ್ತದೆ.

ಪಶ್ಚಿಮ ಬಂಗಾಳದಲ್ಲಿ ಈ ಪ್ರಕ್ರಿಯೆ ಸರಿಯಾಗಿ ನಡೆದಿದೆಯೇ?

ಪಶ್ಚಿಮ ಬಂಗಾಳದಲ್ಲಿ ಸುಮಾರು 27 ಲಕ್ಷಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇಂತಹ ‘ತಾರ್ಕಿಕ ವ್ಯತ್ಯಾಸ’ ಕಂಡುಬಂದಿದೆ ಎಂದು ಗುರುತಿಸಲಾಗಿತ್ತು. ಇದನ್ನು ಸರಿಪಡಿಸಲು ಸುಪ್ರೀಂಕೋರ್ಟ್ ಈ ಕೆಳಗಿನಂತೆ ಸೂಚಿಸಿತ್ತು:


ತಾರ್ಕಿಕ ವ್ಯತ್ಯಾಸಗಳ ಪಟ್ಟಿಯಲ್ಲಿರುವ ಮತದಾರರ ಹೆಸರುಗಳನ್ನು ಗ್ರಾಮ ಪಂಚಾಯತ್ ಮತ್ತು ಬ್ಲಾಕ್ ಕಚೇರಿಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ನೆರವಾಗಲು ಜಾರ್ಖಂಡ್ ಮತ್ತು ಒಡಿಶಾದ ನ್ಯಾಯಾಧೀಶರನ್ನು ಸುಪ್ರೀಂಕೋರ್ಟ್ ನಿಯೋಜಿಸಿದೆ. ಪಟ್ಟಿಯಿಂದ ಹೆಸರು ಕೈಬಿಟ್ಟವರಿಗೆ ವಿಚಾರಣೆ ಬಾಕಿ ಇರುವಾಗಲೇ ಮತದಾನ ಮಾಡಲು ಅನುಮತಿ ನೀಡಬೇಕು ಎಂಬ ಮನವಿಯನ್ನು ಮಾತ್ರ ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

ತಾರ್ಕಿಕ ವ್ಯತ್ಯಾಸ ಮತ್ತು ಜನರ ವಿರೋಧ

ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿರುವ ಅಕ್ರಮಗಳನ್ನು ಪತ್ತೆಹಚ್ಚಲು ಕೇಂದ್ರೀಕೃತ ‘ಅಲ್ಗಾರಿದಮ್’ ಬಳಸಿದೆ. ಇದು ಒಂದೇ ರೀತಿಯ ಹೆಸರು, ವಯಸ್ಸು ಅಥವಾ ವಿಳಾಸ ಹೊಂದಿರುವ “ಸಂದೇಹಾಸ್ಪದ” ಮತದಾರರನ್ನು ಗುರುತಿಸುತ್ತದೆ ಎನ್ನಲಾಗಿದೆ. ಆದರೆ, ಈ ಮಾನದಂಡವನ್ನು ಕೇವಲ ಪಶ್ಚಿಮ ಬಂಗಾಳದಲ್ಲಿ ಮಾತ್ರ ಅನ್ವಯಿಸಲಾಗಿದ್ದು, ಇತರ ರಾಜ್ಯಗಳಲ್ಲಿ ಇದು ಕಂಡುಬಂದಿಲ್ಲ ಎಂಬ ವಿರೋಧ ವ್ಯಕ್ತವಾಗಿದೆ.

ಸುಮಾರು 1.36 ಕೋಟಿ ಮತದಾರರನ್ನು ಈ ಪಟ್ಟಿಯಲ್ಲಿ ಗುರುತಿಸಲಾಗಿತ್ತು, ಅದರಲ್ಲಿ 27.10 ಲಕ್ಷ ಮತದಾರರ ಹೆಸರುಗಳನ್ನು ಅಂತಿಮವಾಗಿ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಚುನಾವಣಾ ಆಯೋಗವು ಬಳಸುತ್ತಿರುವ ಅಲ್ಗಾರಿದಮ್ ದೋಷಪೂರಿತವಾಗಿದೆ ಮತ್ತು ಇದು ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಜನರು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪಟ್ಟಿಯಿಂದ ತೆಗೆದುಹಾಕಲಾದ ಮತದಾರರ ಸಂಖ್ಯೆ ಚುನಾವಣಾ ಫಲಿತಾಂಶದ ಮೇಲೆ ದೊಡ್ಡ ಪ್ರಭಾವ ಬೀರಬಹುದು ಎಂದು ಸ್ವತಃ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರೇ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ನಕಲಿ ಮತದಾರರನ್ನು ಮತ್ತು ಅಕ್ರಮ ವಲಸಿಗರನ್ನು ತೆಗೆದುಹಾಕಲು ವೈಜ್ಞಾನಿಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ವಾದ ಮುಂದಿಟ್ಟಿದೆ.

ಚುನಾವಣಾ ಆಯೋಗ ಬಳಸಿದ ತಾರ್ಕಿಕ ವ್ಯತ್ಯಾಸ ಮಾನದಂಡಕ್ಕೆ ಮುಖ್ಯವಾಗಿ ವಿರೋಧ ಪಕ್ಷಗಳು ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಏಕೆಂದರೆ, ಚುನಾವಣಾ ಆಯೋಗವು ಯಾವ ಆಧಾರದ ಮೇಲೆ ‘ತಾರ್ಕಿಕ ವ್ಯತ್ಯಾಸ’ಗಳನ್ನು ಗುರುತಿಸುತ್ತಿದೆ ಎಂಬ ಸ್ಪಷ್ಟ ಮಾಹಿತಿಯನ್ನು ಆಯೋಗ ನೀಡಿಲ್ಲ. ಇದು ಕೇವಲ ಸಾಫ್ಟ್‌ವೇರ್ ಆಧಾರಿತ ಪ್ರಕ್ರಿಯೆಯಾಗಿದ್ದು, ಜನರ ಭೌತಿಕ ಅಸ್ತಿತ್ವವನ್ನು ಪರಿಗಣಿಸದೆ ಕೇವಲ ಡೇಟಾ ಹೊಂದಾಣಿಕೆಯಾಗದ ಕಾರಣಕ್ಕೆ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂಬ ಆರೋಪವಿದೆ.

ಈ ಹೊಸ ಪರಿಶೀಲನಾ ಕ್ರಮವನ್ನು ಕೇವಲ ಪಶ್ಚಿಮ ಬಂಗಾಳದಲ್ಲಿ ಮಾತ್ರ ಜಾರಿಗೊಳಿಸಲಾಗಿದೆ. ದೇಶದ ಇತರ ಯಾವುದೇ ರಾಜ್ಯಗಳಲ್ಲಿ ಇಂತಹ “ವಿಶೇಷ ಪರಿಷ್ಕರಣೆ” ನಡೆಸದಿರುವುದು ರಾಜಕೀಯಪ್ರೇರಿತ ಎಂಬ ಸಂಶಯಕ್ಕೆ ಕಾರಣವಾಗಿದೆ. ಸುಮಾರು 27 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಏಕಾಏಕಿ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದು ಒಟ್ಟು ಮತದಾರರ ದೊಡ್ಡ ಭಾಗವಾಗಿದ್ದು, ಚುನಾವಣಾ ಫಲಿತಾಂಶವನ್ನು ಬುಡಮೇಲು ಮಾಡುವ ಸಾಧ್ಯತೆಯಿದೆ ಎಂದು ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಗಮನಾರ್ಹವಾಗಿ, ದಶಕಗಳಿಂದ ಮತದಾನ ಮಾಡುತ್ತಿರುವ ಜನರನ್ನು ಯಾವುದೇ ಮುನ್ಸೂಚನೆ ಅಥವಾ ವೈಯಕ್ತಿಕ ವಿಚಾರಣೆ ನಡೆಸದೆ ಪಟ್ಟಿಯಿಂದ ಹೊರಹಾಕಲಾಗಿದೆ ಎಂಬ ಗಂಭೀರ ದೂರುಗಳಿವೆ.

ಮತದಾನ ಮಾಡುವುದು ಒಬ್ಬ ನಾಗರಿಕನ ಮೂಲಭೂತ ಪ್ರಜಾಪ್ರಭುತ್ವದ ಹಕ್ಕು. ತಾಂತ್ರಿಕ ಕಾರಣಗಳನ್ನು ನೀಡಿ ಈ ಹಕ್ಕನ್ನು ಕಸಿದುಕೊಳ್ಳುವುದು ಸಂವಿಧಾನಬಾಹಿರ ಎಂಬುವುದು ಹೋರಾಟಗಾರರ ವಾದ. ಕೊಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರು ಸಹ ಈ ಪ್ರಕ್ರಿಯೆಯಲ್ಲಿನ ಗೊಂದಲಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಟಿಎಂಸಿ ಸೇರಿದಂತೆ ಸಂಸತ್ತಿನ ವಿಪಕ್ಷಗಳು ಈ ಪ್ರಕ್ರಿಯೆಯ ಮೂಲಕ ನಿರ್ದಿಷ್ಟ ಸಮುದಾಯಗಳ (ಅಲ್ಪಸಂಖ್ಯಾತರು ಮತ್ತು ದಲಿತರು) ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ, ಇದು ಆಡಳಿತಾರೂಢ ಬಿಜೆಪಿಗೆ ಲಾಭ ನೀಡುವ ತಂತ್ರ ಎಂದು ಆರೋಪಿಸಿವೆ.

ಚುನಾವಣಾ ಆಯೋಗದ ತಾರ್ಕಿಕ ವ್ಯತ್ಯಾಸಕ್ಕೆ ಬಲಿಯಾದ ಜನಸಾಮಾನ್ಯರು

ಚುನಾವಣಾ ಆಯೋಗ ಹೊಸದಾಗಿ ಪರಿಚಯಿಸಿದ ತಾರ್ಕಿಕ ವ್ಯತ್ಯಾಸಗಳು ಎಂಬ ಪರಿಶೀಲನಾ ಕ್ರಮವೇ ಸರಿಯಾಗಿಲ್ಲ ಎಂಬುವುದು ಟಿಎಂಸಿ ಸೇರಿದಂತೆ ರಾಜಕೀಯ ಪಕ್ಷಗಳು ಮತ್ತು ಜನಸಾಮಾನ್ಯರ ವಾದವಾಗಿದೆ. ಏಕೆಂದರೆ, ಇದರಿಂದ ಎಲ್ಲಾ ದಾಖಲೆಗಳು ಇರುವವರೂ ಕೂಡ ಸಣ್ಣ ತಾಂತ್ರಿಕ ತಪ್ಪಿಗೆ ತಮ್ಮ ಅಮೂಲ್ಯ ಮತದಾನದ ಹಕ್ಕು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಹಲವು ಉದಾಹರಣೆಗಳು ನೀಡಬಹುದು.

ಏಪ್ರಿಲ್ 22ರಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ಮಾಡಿರುವ ವರದಿಯಲ್ಲಿ ಈ ತಾರ್ಕಿಕ ವ್ಯತ್ಯಾಸದ ನೆಪದಲ್ಲಿ ಜನರ ಮತದಾನದ ಹಕ್ಕನ್ನು ಕಿತ್ತುಕೊಂಡಿರುವ ಬಗ್ಗೆ ಕೆಲವೊಂದು ಉದಾಹರಣೆಗಳನ್ನು ನೀಡಲಾಗಿದೆ.

ಉದಾಹರಣೆ 1 : ಬೆಹಲಾ ಪಶ್ಚಿಮ ಕ್ಷೇತ್ರ ಮತದಾರರಾದ 55 ವರ್ಷದ ಸುಕ್ಲಾ ಹಝ್ರಾ
ಸುಕ್ಲಾ ಹಝ್ರಾ ಮತ್ತು ಪೋಷಕರ ನಡುವಿನ ವಯಸ್ಸಿನ ಅಂತರ 50 ವರ್ಷಗಳಿಗಿಂತ ಹೆಚ್ಚಿದೆ ಎಂಬ ತಾರ್ಕಿಕ ವ್ಯತ್ಯಾಸವನ್ನು ಚುನಾವಣಾ ಆಯೋಗ ಮುಂದಿಟ್ಟಿದೆ.

ಆದರೆ, ಎಸ್‌ಐಆರ್ ಸಮಯದಲ್ಲಿ ತಾನು ತನ್ನ ಹೆಸರನ್ನು ಹೊಂದಿರುವ 2002ರ ಮತದಾರರ ಪಟ್ಟಿಯನ್ನು ಅಧಿಕಾರಿಗಳಿಗೆ ಸಲ್ಲಿಸಿದ್ದೇನೆ. ವಿಚಾರಣೆ ವೇಳೆ, ಡಿಸೆಂಬರ್ 2028 ರವರೆಗೆ ಮಾನ್ಯವಾಗಿರುವ ಪಾಸ್‌ಪೋರ್ಟ್‌ನ ಪ್ರತಿಯನ್ನೂ ನೀಡಿದ್ದೇನೆ ಎಂದು ಸುಕ್ಲಾ ಹಝ್ರಾ ಹೇಳಿದ್ದಾರೆ.

ವರದಿಯ ಪ್ರಕಾರ, ಹಝ್ರಾ ಅವರು ಸುಮಾರು ಐದು ವರ್ಷಗಳ ಹಿಂದೆ ತಮ್ಮ ವೋಟರ್ ಐಡಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ್ದರು. ಏಕೆಂದರೆ ಆಗಸ್ಟ್ 2007ರಲ್ಲಿ ನೀಡಲಾಗಿದ್ದ ಹಳೆಯ ಐಡಿಯಲ್ಲಿ ಅವರ ಹೆಸರನ್ನು ’ಶುಕ್ಲಾ’ ಎಂದು ತಪ್ಪಾಗಿ ನಮೂದಿಸಲಾಗಿತ್ತು. ಆದರೆ, ಮಾರ್ಚ್ 2020ರಲ್ಲಿ ಅವರು ಪಡೆದ ಹೊಸ ಗುರುತಿನ ಚೀಟಿಯಲ್ಲಿ ಹೆಸರಿನ ಕಾಗುಣಿತ ಸರಿಯಾಗಿದ್ದರೂ, ಅವರ ಜನ್ಮ ದಿನಾಂಕ ತಪ್ಪಾಗಿ ನಮೂದಿಸಲ್ಪಟ್ಟಿತ್ತು. ಅವರ ನಿಜವಾದ ಜನ್ಮ ವರ್ಷ 1970ರ ಬದಲಿಗೆ, ಹೊಸ ಐಡಿಯಲ್ಲಿ ಜನವರಿ 1, 1994 ಎಂದು ನಮೂದಾಗಿತ್ತು.

“ಇದರಿಂದಾಗಿ ಸಹಜವಾಗಿಯೇ ನನ್ನ ತಂದೆಯ ವಯಸ್ಸು ನನಗಿಂತ 50 ವರ್ಷಗಳಷ್ಟು ಹೆಚ್ಚಾಯಿತು. ಇದು ಅವರ (ಚುನಾವಣಾ ಆಯೋಗದ) ತಪ್ಪು, ಆದರೆ ಇದನ್ನು ಸರಿಪಡಿಸಲು ನಾನು ಅಲೆದಾಡುತ್ತಲೇ ಇದ್ದೇನೆ… ಈ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ನೋಟಿಸ್ ಬಂದಾಗ, ನನ್ನ ಬಳಿಯಿದ್ದ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇನೆ. ಹೊಸ ಮತ್ತು ಹಳೆಯ ವೋಟರ್ ಐಡಿಗಳು, ಸರಿಯಾದ ಜನ್ಮ ದಿನಾಂಕವಿರುವ ನನ್ನ ಪಾಸ್‌ಪೋರ್ಟ್ ಮತ್ತು 2002ರ ಮತದಾರರ ಪಟ್ಟಿ, ರಕ್ಷಣಾ ಸಚಿವಾಲಯದ ನಿವೃತ್ತ ಉದ್ಯೋಗಿಯಾಗಿರುವ ನನ್ನ ಪತಿಯ ಪಿಪಿಒ (ಪಿಂಚಣಿ ಪಾವತಿ ಆದೇಶ) ಹಾಗೂ 1993ರಲ್ಲಿ ನಡೆದ ನನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೂಡ ನಾನು ಒದಗಿಸಿದ್ದೇನೆ” ಎನ್ನುತ್ತಾರೆ ಹಝ್ರಾ.

“ನಾನು 1993ರಲ್ಲೇ ಮದುವೆಯಾಗಿರುವಾಗ, 1994ರಲ್ಲಿ ಜನಿಸಲು ಹೇಗೆ ಸಾಧ್ಯ? ಎಂಬುವುದು ಹಝ್ರಾ ಅವರ ಪ್ರಶ್ನೆಯಾಗಿದೆ. ಇದಕ್ಕೆ ಚುನಾವಣಾ ಆಯೋಗವೇ ಉತ್ತರ ಕೊಡಬೇಕಾಗಿದೆ.


ಉದಾಹರಣೆ 2 : ಬಿಷ್ಣುಪುರ ಕ್ಷೇತ್ರದ 36 ವರ್ಷದ ಮನುಯರಾ ಬೀಬಿ
ಮನುಯರಾ ಅವರ ತಂದೆಯನ್ನು ಇತರ ಆರು ಜನರು ತಮ್ಮ ತಂದೆ ಎಂದು ಗುರುತಿಸಿರುವುದು ತಾರ್ಕಿಕ ವ್ಯತ್ಯಾಸ ಎಂದು ಚುನಾವಣಾ ಆಯೋಗ ಹೇಳಿದೆ.

ಮನುಯರಾ ಅವರು ಎಸ್‌ಐಆರ್ ವೇಳೆ 2002ರ ಮತದಾರರ ಪಟ್ಟಿಯನ್ನು ಸಲ್ಲಿಸಿದ್ದಾರೆಂದು ಹೇಳುತ್ತಾರೆ, ಅದರಲ್ಲಿ ಅವರ ಇಬ್ಬರು ಪೋಷಕರ (ತಂದೆ, ತಾಯಿ) ಹೆಸರುಗಳಿವೆ ಎಂದಿದ್ದಾರೆ.

“2002ರ ಮತದಾರರ ಪಟ್ಟಿಯಲ್ಲಿದ್ದ ನನ್ನ ಸೀರಿಯಲ್ ನಂಬರ್ ಪ್ರಕಾರ ನನ್ನ ತಂದೆಯ ವಿವರಗಳನ್ನು ಎಸ್‌ಐಆರ್ ಫಾರ್ಮ್‌ನಲ್ಲಿ ಭರ್ತಿ ಮಾಡಿದ್ದೇನೆ. ಆದರೂ ವಿಚಾರಣೆಗೆ ಹಾಜರಾಗಲು ನನಗೆ ನೋಟಿಸ್ ಬಂದಿತ್ತು. ವಿಚಾರಣೆ ವೇಳೆ ಇತರ ಆರು ಜನರು ನನ್ನ ತಂದೆಯನ್ನು ತಮ್ಮ ಪೋಷಕರೆಂದು ಹೆಸರಿಸಿದ್ದಾರೆ ಎಂದು ತಿಳಿಸಲಾಯಿತು. ಆದ್ದರಿಂದ, ನಾನು 2002ರ ಮತದಾರರ ಪಟ್ಟಿಯನ್ನು ಮತ್ತೆ ಸಲ್ಲಿಸಿದೆ, ಜೊತೆಗೆ ನನ್ನ ಆಧಾರ್ ಕಾರ್ಡ್ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ರಾಜ್ಯ ಸರ್ಕಾರದ ಯೋಜನೆಯಡಿಯಲ್ಲಿ ನೀಡಲಾದ ಗುರುತಿನ ಚೀಟಿಯನ್ನು ಕೂಡ ಸಲ್ಲಿಸಿದೆ” ಎಂದು ಮನುಯರಾ ಹೇಳುತ್ತಾರೆ.

“ವಿಚಾರಣೆಯ ಸಮಯದಲ್ಲಿ ನಾನು ನನ್ನ ಪೋಷಕರ ಹೆಸರಿರುವ 2002ರ ಮತದಾರರ ಪಟ್ಟಿ ಮತ್ತು ನನ್ನ ಒಡಹುಟ್ಟಿದವರ ದಾಖಲೆಗಳನ್ನು ನೀಡಿದ್ದೇನೆ. ಈ ವೇಳೆ ಅಧಿಕಾರಿಗಳು ಏನನ್ನೂ ಹೇಳಿಲ್ಲ, ಕೇವಲ ದಾಖಲೆಗಳನ್ನು ಪಡೆದುಕೊಂಡಿದ್ದರು. ನಾವು ಒಟ್ಟು ಆರು ಜನ ಒಡಹುಟ್ಟಿದವರು, ಅದಕ್ಕೇನಂತೆ?” ಎಂದು ಮನುಯರಾ ಪ್ರಶ್ನಿಸಿದ್ದಾರೆ.

ಉದಾಹರಣೆ 3 : ಬೆಹಲಾ ಪುರ್ಬಾ ಕ್ಷೇತ್ರದ 39 ವರ್ಷದ ಸುವರ್ಣ ಮೊಂಡಲ್
ಇವರ ತಾರ್ಕಿಕ ವ್ಯತ್ಯಾಸ ಏನೆಂದೇ ಗೊತ್ತಿಲ್ಲ, ಆದರೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗಿದೆ ಎಂದು ವರದಿ ಹೇಳಿದೆ.

ಎಸ್‌ಐಆರ್ ವೇಳೆ 2002ರ ಮತದಾರರ ಪಟ್ಟಿಯನ್ನು ಸಲ್ಲಿಸಿದ್ದೇನೆ, ಜೊತೆಗೆ ನನ್ನ ಪೋಷಕರು ಮತ್ತು ಅಜ್ಜಿಯರ ಹೆಸರುಗಳು, ನನ್ನ ಜನನ ಪ್ರಮಾಣಪತ್ರ, 10ನೇ ತರಗತಿಯ ಪ್ರವೇಶ ಪತ್ರ ಮತ್ತು ಅಂಕಪಟ್ಟಿ ನೀಡಿದ್ದೇನೆ ಎಂದು ಸುವರ್ಣ ಹೇಳುತ್ತಾರೆ.

“ಎಸ್‌ಐಆರ್ ನಂತರ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಆದರೆ, ಏಪ್ರಿಲ್ 7ರಂದು ಪ್ರಕಟಿಸಿದ ಪೂರಕ ಪಟ್ಟಿಯಲ್ಲಿ ಹೆಸರು ತೆಗೆದು ಹಾಕಿರುವುದು ಕಂಡು ಬಂದಿದೆ. ವಿಚಾರಣೆಗೆ ನೋಟಿಸ್ ಬಂದಾಗ, ಹೆಚ್ಚುವರಿ ದಾಖಲೆಗಳನ್ನು ಒದಗಿಸಿದ್ದೇನೆ ಸುವರ್ಣ ತಿಳಿಸಿದ್ದಾರೆ.

ಒಂಟಿ ಪೋಷಕರಾದ ಸುವರ್ಣ ಅವರು ಹೆಸರು ತೆಗೆದುಹಾಕಿರುವುದರ ವಿರುದ್ಧ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅವರು ಎಲ್ಲಾ ನ್ಯಾಯಮಂಡಳಿಗಳು ಇರುವ ಕೋಲ್ಕತ್ತಾ ಬಳಿಯ ಜೋಕಾದಲ್ಲಿರುವ ಸಂಸ್ಥೆಗೆ ಭೇಟಿ ನೀಡಿದ್ದಾರೆ. ಆದರೆ, ಅವರ ಪ್ರಕರಣದ ಕುರಿತು ಇದುವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ.

“ನನ್ನ ಹೆತ್ತವರು, ಅಜ್ಜಿಯರು, ಚಿಕ್ಕಪ್ಪ ಮತ್ತು ಚಿಕ್ಕಮ್ಮ ಎಲ್ಲರೂ 2002ರ ಪಟ್ಟಿಯಲ್ಲಿದ್ದರು. ನನ್ನ ಬಳಿ ನನ್ನದೇ ಆದ ಮಾಧ್ಯಮಿಕ ಪ್ರವೇಶ ಪತ್ರ ಮತ್ತು ಅಂಕಪಟ್ಟಿ ಇದೆ, ಜೊತೆಗೆ ನನ್ನ ತಂದೆಯ ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆಯ ಕಾರ್ಡ್ ಕೂಡ ಇದೆ. ಅದರಲ್ಲಿ ನನ್ನ ಪೋಷಕರು, ನನ್ನ ಒಡಹುಟ್ಟಿದವರು ಮತ್ತು ನನ್ನ ಹೆಸರು ಇದೆ” ಎಂದು ಸುವರ್ಣ ಹೇಳುತ್ತಾರೆ.

“ಇಷ್ಟೆಲ್ಲಾ ಓಡಾಟದ ನಡುವೆಯೂ, 20 ವರ್ಷ ತುಂಬಿದ ತನ್ನ ಮಗನಿಗೆ ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಲು ನನಗೆ ಸಾಧ್ಯವಾಗಿಲ್ಲ. ನನ್ನ ಹೆಸರನ್ನು ತೆಗೆದು ಹಾಕಿರುವಾಗ ಅವನದ್ದು ಹೇಗೆ ಸೇರ್ಪಡೆ ಮಾಡಿಕೊಳ್ಳುವುದು ಎಂದು ಯೋಚಿಸಿದೆ. ನಾನೊಬ್ಬಳು ನಾಗರಿಕಳು, ತೆರಿಗೆಗಳನ್ನು ಪಾವತಿಸುತ್ತೇನೆ. ಅಗತ್ಯವಿದ್ದರೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುತ್ತೇನೆ” ಎಂದು ಸುವರ್ಣ ಹೇಳಿದ್ದಾರೆ.

ಮೇಲ್ಗಡೆ ವಿವರಿಸಿರುವ ಮೂರು ಉದಾಹರಣೆಗಳು ತಾರ್ಕಿಕ ವ್ಯತ್ಯಾಸಗಳ ಹೆಸರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದಾಗಿದೆ. ಇನ್ನು ತಾರ್ಕಿಕ ವ್ಯತ್ಯಾಸಗಳ ಕಾರಣ ನೀಡದೆಯೂ ಎಲ್ಲಾ ದಾಖಲೆಗಳಿರುವ ಹಲವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ಆರೋಪಗಳಿಗೆ. ಯಾವುದೇ ಕಾರಣಗಳನ್ನು ನೀಡದೆ ಹೆಸರು ತೆಗೆದು ಹಾಕಿರುವವರಲ್ಲಿ ದೇಶಕ್ಕಾಗಿ ಕೆಲಸ ಮಾಡಿದ ಯೋಧನಿಂದ ಹಿಡಿದು ತೀರ್ಪು ನೀಡಿದ ಹೈಕೋರ್ಟ್ ನ್ಯಾಯಾಧೀಶರವರೆಗೆ ಲಕ್ಷಾಂತರ ಜನರು ಒಳಗೊಂಡಿದ್ದಾರೆ. ಇವರೆಲ್ಲರಿಗೂ ದಿಕ್ಕು ತೋಚದಂತಾಗಿದೆ. ಇದಕ್ಕೆ ಕೆಲವು ಉದಾಹರಣೆಗಳನ್ನು ಕೊಡುವುದಾದರೆ..

ತಾರ್ಕಿಕ ವ್ಯತ್ಯಾಸಗಳ ಕಾರಣ ನೀಡದೆಯೂ ಎಲ್ಲಾ ದಾಖಲೆಗಳಿರುವ ಹಲವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿರುವುದಕ್ಕೆ ಉದಾಹರಣೆಗಳು

ಉದಾ 1 : ವಿಂಗ್ ಕಮಾಂಡರ್ ಶಮೀಮ್ ಅಖ್ತರ್

ಒಮ್ಮೆ ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿದ್ದ, ಭಾರತೀಯ ವಾಯುಪಡೆಯ (ಐಎಎಫ್) ಪದಕ ವಿಜೇತ ನಿವೃತ್ತ ವಿಂಗ್ ಕಮಾಂಡರ್ ಎಂ.ಡಿ ಶಮೀಮ್ ಅಖ್ತರ್ ಅವರ ಹೆಸರನ್ನು ಯಾವುದೇ ಪೂರ್ವಭಾವಿ ವಿಚಾರಣೆ ಇಲ್ಲದೆ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.

enewsroom.in ವರದಿಯ ಪ್ರಕಾರ, ಡಿಸೆಂಬರ್ 15, 2006ರಂದು ಭಾರತೀಯ ವಾಯುಪಡೆಗೆ ನಿಯೋಜನೆಗೊಂಡ ಅಖ್ತರ್ ಅವರು, 17 ವರ್ಷಗಳ ಕಾಲ ದೇಶಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. ತಾಂಬರಂ ವಾಯುಪಡೆ ನಿಲ್ದಾಣದಲ್ಲಿ ಸುಮಾರು 2,000 ವಾಯುಸೈನಿಕರಿಗೆ ತರಬೇತಿ ನೀಡುವುದರಿಂದ ಹಿಡಿದು, ಚಂಡೀಗಢ ಮತ್ತು ಅಲಹಾಬಾದ್‌ನಲ್ಲಿ ಆಡಳಿತಾತ್ಮಕ ನಾಯಕತ್ವದ ಹುದ್ದೆಗಳವರೆಗೆ ದೇಶದಾದ್ಯಂತ ಪ್ರಮುಖ ಪಾತ್ರಗಳನ್ನು ಅವರು ನಿರ್ವಹಿಸಿದ್ದಾರೆ. ಅವರು ರಾಯಲ್ ಥಾಯ್ ಏರ್ ಫೋರ್ಸ್ ಜೊತೆಗಿನ ’ಯುವ ಅಧಿಕಾರಿಗಳ ವಿನಿಮಯ ಕಾರ್ಯಕ್ರಮ’ದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ದಕ್ಷಿಣ ವಾಯು ಕಮಾಂಡ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ, 2018ರ ಕೇರಳದ ಭೀಕರ ಪ್ರವಾಹದ ಸಮಯದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಸಂಯೋಜಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು. ಕೌಟುಂಬಿಕ ಕಾರಣಗಳಿಂದಾಗಿ ಜುಲೈ 2022ರಲ್ಲಿ ಸ್ವಯಂ ನಿವೃತ್ತಿ (ವಿಆರ್‌ಎಸ್) ಪಡೆದ ನಂತರ, ಅಖ್ತರ್ ಅವರು ಸಶಸ್ತ್ರ ಪಡೆಗಳಿಗೆ ಸೇರಲು ಬಯಸುವ ಯುವಕರಿಗೆ ಮಾರ್ಗದರ್ಶನ ನೀಡುವಲ್ಲಿ ಮತ್ತು ಹಿಂದುಳಿದ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಅಖ್ತರ್ ಅವರ ಪ್ರಕಾರ, ಎಸ್‌ಐಆರ್ ಸಂದರ್ಭದಲ್ಲಿ ಅವರ ಹೆಸರನ್ನು ’ಪರಿಶೀಲನೆಯಲ್ಲಿ (under adjudication) ಇರಿಸಲಾಗಿತ್ತು. ಆದರೆ, ಅವರನ್ನು ವಿಚಾರಣೆಗೆ ಕರೆಯುವ ಮೊದಲೇ, 2026ರ ಮಾರ್ಚ್ 28 ರಂದು ಬಿಡುಗಡೆಯಾದ ಎರಡನೇ ಪೂರಕ ಪಟ್ಟಿಯಲ್ಲಿ ಅವರ ಹೆಸರನ್ನು ತೆಗೆದುಹಾಕಲಾಗಿತ್ತು.

“ಚುನಾವಣಾ ಆಯೋಗ ನೀಡಿದ ಎಲ್ಲಾ ಸೂಚನೆಗಳನ್ನು ಪಾಲಿಸಿದ್ದು, ಪ್ರತಿ ಹಂತದಲ್ಲೂ ಬಿಎಲ್‌ಒ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ನನ್ನ ಹೆಸರು ಅಂತಿಮ ಪಟ್ಟಿಯಲ್ಲಿದ್ದ ಕಾರಣ, ನಾನು ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿರಲಿಲ್ಲ. ಆದರೆ ಮಾರ್ಚ್ 23ರ ಮೊದಲ ಪೂರಕ ಪಟ್ಟಿಯಲ್ಲಿ, ನನ್ನ ಹೆಸರನ್ನು ’ಪರಿಶೀಲನೆಯಲ್ಲಿದೆ’ ಎಂದು ಗುರುತಿಸಲಾಗಿತ್ತು. ನಾನು ನನ್ನ ಬಿಎಲ್‌ಒ ಮೊಂಡಲ್ ಅವರನ್ನು ಸಂಪರ್ಕಿಸಿದಾಗ, ಅವರು ಪಾಲಿಸಬೇಕಾದ ಯಾವುದೇ ವಿಧಾನದ ಬಗ್ಗೆ ನನಗೆ ತಿಳಿಸಲಿಲ್ಲ ಮತ್ತು ಹೆಸರು ತಾನಾಗಿಯೇ ಮರುಸ್ಥಾಪನೆಯಾಗುತ್ತದೆ ಎಂದು ಭರವಸೆ ನೀಡಿದ್ದರು. ನಂತರ ಮಾರ್ಚ್ 28ರಂದು ಎರಡನೇ ಪಟ್ಟಿಯಲ್ಲಿ ನನ್ನ ಹೆಸರನ್ನು ತೆಗೆದುಹಾಕಿದಾಗ, ವಕೀಲರನ್ನು ನೇಮಿಸಿಕೊಂಡು ಟ್ರಿಬ್ಯೂನಲ್ ಅನ್ನು ಸಂಪರ್ಕಿಸುವಂತೆ ಬಿಎಲ್‌ಒ ಹೇಳಿದರು” ಎಂದು ಅಖ್ತರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣವನ್ನು ಇನ್ನಷ್ಟು ಗೊಂದಲಮಯವಾಗಿಸುವ ಅಂಶವೆಂದರೆ, ಅಖ್ತರ್ ಅವರ ಹೆಸರು 2002ರ ಮತದಾರರ ಪಟ್ಟಿಯಲ್ಲಿದೆ. ಅವರ ಕುಟುಂಬ ಸದಸ್ಯರ ಹೆಸರುಗಳು ಪಟ್ಟಿಯಲ್ಲಿ ಮುಂದುವರಿದಿವೆ. ಯಾವುದೇ ಔಪಚಾರಿಕ ವಿಚಾರಣೆ ಅಥವಾ ಸ್ಪಷ್ಟೀಕರಣಕ್ಕೆ ಅವಕಾಶವನ್ನು ಒದಗಿಸಲಾಗಿಲ್ಲ.

ಈ ಪ್ರಕರಣವು ಸಿವಿಲ್ ಸೊಸೈಟಿಯ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಯ ಮುಸ್ಲಿಂ ಗುರುತಿನ ಕಾರಣಕ್ಕಾಗಿಯೇ ಅವರ ಹೆಸರನ್ನು ಕೈಬಿಡಲಾಗಿದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಜನರ ಹಕ್ಕುಗಳ ಹೋರಾಟಗಾರ ಅಥರ್ ಫಿರ್ದೌಸಿ ಪ್ರತಿಕ್ರಿಯಿಸಿ, “ಉತ್ತಮ ಸೇವಾ ದಾಖಲೆ ಹೊಂದಿರುವ ಒಬ್ಬ ಗೌರವಾನ್ವಿತ ಅಧಿಕಾರಿಗೆ ಕನಿಷ್ಠ ಅವಕಾಶವನ್ನೂ ನೀಡದಿದ್ದಾಗ, ಇಂತಹ ಪ್ರಶ್ನೆಗಳು ಉದ್ಭವಿಸುವುದು ಸಹಜ” ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಆಲ್ಟ್ ನ್ಯೂಸ್ ಪ್ರಕಟಿಸಿದ “Bengal SIR: The Wall ECI Built Around Electoral Data and How We Broke Through It” ಎಂಬ ವರದಿಯಲ್ಲಿ ದೊಡ್ಡ ಮಟ್ಟದ ವ್ಯತ್ಯಾಸಗಳನ್ನು ಎತ್ತಿ ತೋರಿಸಿದೆ. ಈ ವರದಿಯು, ಬಿಜೆಪಿ ಪಕ್ಷವನ್ನು ಬೆಂಬಲಿಸುವ ಸಾಧ್ಯತೆ ಕಡಿಮೆ ಇರುವ ಸಮುದಾಯಗಳ ಮತದಾರರನ್ನು ಗುರಿಯಾಗಿಸಿಕೊಂಡು ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಅಥವಾ ಅನುಮಾನಾಸ್ಪದ ಪಟ್ಟಿಯಲ್ಲಿ ಇರಿಸಲಾಗಿದೆ ಎಂದು ಪ್ರತಿಪಾದಿಸಿದೆ.

enewsroom.in ವರದಿಯ ಪ್ರಕಾರ, ವಿವಾದಾತ್ಮಕ ಎಸ್‌ಐಆರ್ ಪ್ರಕ್ರಿಯೆಗೆ ಕೇವಲ ವಿಂಗ್ ಕಮಾಂಡರ್ ಶಮೀಮ್ ಅಖ್ತರ್ ಅವರು ಮಾತ್ರ ಬಲಿಯಾಗಿಲ್ಲ. ಈ ಪಟ್ಟಿಯು ಸಾಕಷ್ಟು ಉದ್ದವಿದೆ.

ಅಕೌಂಟೆಂಟ್ ಜನರಲ್ ವೆಸ್ಟ್ ಬೆಂಗಾಲ್ (ಎಜಿಡಬ್ಲ್ಯೂಬಿ) ಗೆಜೆಟೆಡ್ ಅಧಿಕಾರಿ ರೇಷ್ಮಾ ಶಿರೀನ್ ಇಕ್ಬಾಲ್ ಅವರ ಹೆಸರನ್ನು ಸಹ ಇದೇ ರೀತಿಯಲ್ಲಿ ತೆಗೆದುಹಾಕಲಾಗಿದೆ. ಕೊಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಶಾಹಿದುಲ್ಲಾ ಮುನ್ಷಿ ಅವರ ಹೆಸರನ್ನೂ ಸಹ ಮತದಾರರ ಪಟ್ಟಿಯಿಂದ ಕೈಬಿಡಲಾಗಿದ್ದು, ಈ ಅನುಭವವು ಕೇವಲ ಅವಮಾನಕರ ಮಾತ್ರವಲ್ಲದೆ, ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು ಎಂಬ ಬಗ್ಗೆ ಗೊಂದಲ ಉಂಟುಮಾಡಿದೆ ಎಂದು ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಭಾರತದ ಸಂವಿಧಾನದ ಚಿತ್ರಕಾರ ನಂದಲಾಲ್ ಬೋಸ್ ಅವರ ಮೊಮ್ಮಗ ಮತ್ತು ಮೊಮ್ಮಗಳ ಹೆಸರನ್ನೂ ಸಹ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ.

ಉದಾ 2 : ಎಜಿಡಬ್ಲ್ಯೂಬಿ ರೇಷ್ಮಾ ಶಿರೀನ್ ಇಕ್ಬಾಲ್

ರೇಷ್ಮಾ ಶಿರೀನ್ ಇಕ್ಬಾಲ್ ಅವರು ಕೇಂದ್ರ ಸರ್ಕಾರದಲ್ಲಿ ಮೂರು ದಶಕಗಳ ಸುದೀರ್ಘ ವೃತ್ತಿ ಜೀವನವನ್ನು ಹೊಂದಿದ್ದಾರೆ. ಪಶ್ಚಿಮ ಬಂಗಾಳದ ಅಕೌಂಟೆಂಟ್ ಜನರಲ್ (ಎಜಿಡಬ್ಲ್ಯೂಬಿ) ಕಚೇರಿಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿರುವ ಅವರು, ಕಳೆದ 30 ವರ್ಷಗಳಲ್ಲಿ ಮೈಕ್ರೋ ಅಬ್ಸರ್ವರ್, ಪ್ರಿಸೈಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ, ಮಹಿಳಾ ಬೂತ್‌ಗಳ ಮೇಲ್ವಿಚಾರಣೆ ನಡೆಸಿದ್ದಾರೆ ಮತ್ತು ಹಲವಾರು ಸಂದರ್ಭಗಳಲ್ಲಿ ಚುನಾವಣೆಗಳನ್ನು ನಡೆಸಲು ಸಹಾಯ ಮಾಡಿದ್ದಾರೆ. ಅವರು ಮಾನ್ಯವಾದ ಪಾಸ್‌ಪೋರ್ಟ್ ಹೊಂದಿದ್ದಾರೆ ಮತ್ತು ಹಲವು ಬಾರಿ ವಿದೇಶ ಪ್ರವಾಸವನ್ನೂ ಮಾಡಿದ್ದಾರೆ. ಆದರೂ, ಮಾರ್ಚ್ 28ರಂದು ಚುನಾವಣಾ ಆಯೋಗವು ಎರಡನೇ ಪೂರಕ ಪಟ್ಟಿಯನ್ನು ಪ್ರಕಟಿಸಿದಾಗ, ಅವರ ಹೆಸರನ್ನು ತೆಗೆದುಹಾಕಿರುವುದು ಕಂಡುಬಂದಿದೆ ಎಂದು enewsroom.in ವರದಿ ಮಾಡಿದೆ.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಶಿರೀನ್ ಇಕ್ಬಾಲ್ ಅವರ ಪ್ರಕರಣವು ಬಹಳ ಕುತೂಹಲಕಾರಿಯಾಗಿದೆ. ಏಕೆಂದರೆ, ಫೆಬ್ರವರಿ 28ರಂದು ಪಶ್ಚಿಮ ಬಂಗಾಳದ ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದಾಗ, ಅದರಲ್ಲಿ ಅವರ ಹೆಸರಿತ್ತು. ಮಾರ್ಚ್ 23ರಂದು ಬಿಡುಗಡೆಯಾದ ಮೊದಲ ಪೂರಕ ಪಟ್ಟಿಯಲ್ಲಿ, ಅವರ ಹೆಸರನ್ನು ’ಪರಿಶೀಲನೆಯಲ್ಲಿದೆ’ ಎಂದು ತೋರಿಸಲಾಗಿತ್ತು. ಆದರೆ, ಎರಡನೇ ಪೂರಕ ಪಟ್ಟಿಯಲ್ಲಿ ಅವರ ಹೆಸರೇ ಕಾಣೆಯಾಗಿತ್ತು ಎಂದು ವರದಿ ಹೇಳಿದೆ.

“ಯಾವಾಗ ನನ್ನ ಹೆಸರು ’ಪರಿಶೀಲನೆಯಲ್ಲಿದೆ’ ಎಂಬ ವಿಭಾಗದಲ್ಲಿ ಕಾಣಿಸಿಕೊಂಡಿತೋ, ಆಗ ನನ್ನ ತಂದೆಯ ಹೆಸರಿನಲ್ಲಿ ವ್ಯತ್ಯಾಸವಿದೆ ಎಂದು ನನಗೆ ತಿಳಿಸಲಾಯಿತು. ಆದರೆ ಅದು ನಿಜವಲ್ಲ. ನನ್ನ ತಂದೆ ಜಲೀಲ್ ಅಹ್ಮದ್ ಅವರು ಡಬ್ಲ್ಯೂಬಿಸಿಎಸ್ ಅಧಿಕಾರಿಯಾಗಿದ್ದು, ಅವರ ಹೆಸರು ಎಲ್ಲಾ ದಾಖಲೆಗಳಲ್ಲೂ ಒಂದೇ ರೀತಿಯಲ್ಲಿ ನಮೂದಾಗಿದೆ. ನನಗೆ ಸ್ವಂತ ಫ್ಲಾಟ್ ಇದೆ ಮತ್ತು ನೋಂದಾಯಿತ ಭೂ ದಾಖಲೆ ಪತ್ರವೂ ನನ್ನ ಬಳಿ ಇದೆ” ಎಂದು ರೇಷ್ಮಾ ತಿಳಿಸಿದ್ದಾರೆ. ತಾವು 2001ರಿಂದಲೂ ಪಾಸ್‌ಪೋರ್ಟ್ ಹೊಂದಿದ್ದು, ಅಗತ್ಯವಿರುವ ಬಹುತೇಕ ಎಲ್ಲಾ ದಾಖಲೆಗಳನ್ನು ಹೊಂದಿರುವುದಾಗಿ ಅವರು ವಿವರಿಸಿದ್ದಾರೆ.

“ಇಂದು, ನಾನು ಎಲ್ಲಿಗೆ ಹೋಗಬೇಕು ಅಥವಾ ಯಾರನ್ನು ಸಂಪರ್ಕಿಸಬೇಕು ಎಂಬುದು ತಿಳಿಯುತ್ತಿಲ್ಲ. ನಾನು ಬಿಎಲ್‌ಒ ಅವರನ್ನು ಸಂಪರ್ಕಿಸಿದಾಗ, ಅವರು ತಮಗೆ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ, ನಮೂನೆ 6 ಅನ್ನು ಭರ್ತಿ ಮಾಡುವಂತೆ ಸಲಹೆ ನೀಡಿದ್ದಾರೆ. ಆದರೆ, ಹೊಸ ಮತದಾರರಿಗಾಗಿ ಇರುವ ನಮೂನೆ 6 ಅನ್ನು ನಾನೇಕೆ ಭರ್ತಿ ಮಾಡಬೇಕು? ಯಾವುದಾದರೂ ಕಾರಣದಿಂದ ಅದು ಅಂಗೀಕಾರವಾಗದಿದ್ದರೆ, ನನ್ನ ಮತದಾನದ ಹಕ್ಕು ಶಾಶ್ವತವಾಗಿ ಇಲ್ಲದಂತಾಗಬಹುದು” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಉದಾ 3 : ಅಜ್ಮಿರಾ ಬೇಗಂ

ರೇಷ್ಮಾ ಅವರಂತೆಯೇ, ಶ್ಯಾಮ್‌ಪುರದ (AC 179) ಮತದಾರ ಶೇಖ್ ರೆಝೌಲ್ ಹಕ್ ಅವರ ಪತ್ನಿ ಅಜ್ಮಿರಾ ಬೇಗಂ ಕೂಡ ಪಾಸ್‌ಪೋರ್ಟ್ ಹೊಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಮತದಾರರ ಪಟ್ಟಿಯಿಂದ 61 ವರ್ಷದವರಾದ ಅಜ್ಮೀರಾ ಅವರ ಹೆಸರನ್ನು ಅಳಿಸಲಾಗಿದೆ ಎಂದು ವರದಿ ತಿಳಿಸಿದೆ.

ಅಜ್ಮೀರಾ ಅವರ ಮಗ ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ)ಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಶೇಖ್ ಅಶಾದ್ ಉಲ್ ರೆಹಮಾನ್, “ನನ್ನ ತಾಯಿ ತಮ್ಮ ಜೀವನದುದ್ದಕ್ಕೂ ವಿವಿಧ ಚುನಾವಣೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಬಾರಿ ಮತ ಚಲಾಯಿಸಿದ್ದಾರೆ. ನನ್ನ ಕಿರಿಯ ಸಹೋದರ NET-JRF 2025ರಲ್ಲಿ 45ನೇ ರ್‍ಯಾಂಕ್ ಗಳಿಸಿದ್ದಾರೆ ಮತ್ತು ಪುಣೆಯ ಎನ್‌ಸಿಎಲ್‌ನಿಂದ ಪಿಎಚ್‌ಡಿ ಪದವಿ ಪಡೆಯುತ್ತಿದ್ದಾರೆ. ಇನ್ನೊಬ್ಬ ಸಹೋದರ ಬಿಟೆಕ್ ಮುಗಿಸಿದ ನಂತರ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.


“ನನ್ನ ತಾಯಿ ನಮಗೋಸ್ಕರ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಬಾಂಗ್ಲಾದೇಶ ರಚನೆಯಾಗುವ ಮೊದಲೇ ಜನಿಸಿರುವ ಅವರು ಬಾಂಗ್ಲಾದೇಶಿ ಎಂಬ ಆರೋಪದಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಲು ನಾವು ಬಿಡುವುದಿಲ್ಲ. ಅಗತ್ಯವಿದ್ದರೆ, ಅವರಿಗಾಗಿ ಮತ್ತು ಮತದಾನದ ಹಕ್ಕನ್ನು ಕಸಿದುಕೊಂಡಿರುವ ನಿಜವಾದ ಮತದಾರರಿಗಾಗಿ ಬೀದಿಗಿಳಿಯಲು ನಾವು ಹಿಂಜರಿಯುವುದಿಲ್ಲ ಎಂದಿದ್ದಾರೆ.

ಉದಾ 4 : ಅರಣ್ಯ ಮತ್ತು ರೊದ್ದೂರ್ ಮಿತ್ರ

ಇತ್ತೀಚೆಗೆ ಲಂಡನ್‌ನಲ್ಲಿ ಪ್ರದರ್ಶನ ನೀಡಿದ ಖ್ಯಾತ ಕಲಾವಿದ ಅಭಿಜಿತ್ ಮಿತ್ರ ಕೂಡ ಎಸ್‌ಐಆರ್‌ನಿಂದ ಚಿಂತಾಕ್ರಾಂತರಾಗಿದ್ದಾರೆ. ಅವರ ಇಬ್ಬರು ಪುತ್ರರಾದ ಅರಣ್ಯ ಮತ್ತು ರೊದ್ದೂರ್ ಮಿತ್ರ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ವರದಿಯಾಗಿದೆ.

ಅರಣ್ಯ ಕೋಲ್ಕತ್ತಾದ ಸೇಂಟ್ ಜೇಮ್ಸ್ ಶಾಲೆಯಲ್ಲಿ ಅಧ್ಯಯನ ಮಾಡಿ, ಬಿಟ್ಸ್‌ನಿಂದ ಬಿಟೆಕ್ ಮುಗಿಸಿದರು ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಎಂಟೆಕ್ ಪದವಿ ಪಡೆದರು. 34 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅವರು, ಪ್ರಸ್ತುತ ಯುಕೆಯಲ್ಲಿ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ರೊದ್ದೂರ್ ಸೇಂಟ್ ಜೇಮ್ಸ್‌ನಲ್ಲಿ ಅಧ್ಯಯನ ಮಾಡಿ, ನಂತರ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ.

“ಫೆಬ್ರವರಿ 28ರ ಅಂತಿಮ ಪಟ್ಟಿಯಲ್ಲಿ, ನನ್ನ ಇಬ್ಬರು ಪುತ್ರರು ಮತ್ತು ನನ್ನ ಹೆಸರಿನ ಮುಂದೆ ’ಪರಿಶೀಲನೆಯಲ್ಲಿದೆ’ ಎಂದು ಗುರುತಿಸಲಾಗಿತ್ತು. ನನ್ನ ತಂದೆ ಮತ್ತು ನನ್ನ ನಡುವಿನ ವಯಸ್ಸಿನ ವ್ಯತ್ಯಾಸ ಕೇವಲ 15 ವರ್ಷಗಳು ಎಂದು ನನಗೆ ತಿಳಿಸಲಾಯಿತು. ಆದರೆ ದಾಖಲೆಗಳ ಪ್ರಕಾರ, ಆ ವ್ಯತ್ಯಾಸ 42 ವರ್ಷಗಳು. ವಿಚಾರಣೆಯ ಸಂದರ್ಭದಲ್ಲಿ ನಾನು ಈ ವಿಷಯವನ್ನು ಪ್ರಸ್ತಾಪಿಸಿದಾಗ, ಇದು ಎಐ ತಂತ್ರಜ್ಞಾನದ ದೋಷ ಎಂದು ಅಧಿಕಾರಿಗಳು ಒಪ್ಪಿಕೊಂಡರು. ಇತ್ತೀಚಿನ ಪಟ್ಟಿಯಲ್ಲಿ ನನ್ನ ಹೆಸರು ಸೇರ್ಪಡೆಯಾಗಿದೆ, ಆದರೆ ನನ್ನ ಇಬ್ಬರು ಪುತ್ರರ ಹೆಸರುಗಳನ್ನು ಮಾತ್ರ ಕೈಬಿಡಲಾಗಿದೆ” ಎಂದು ಅಭಿಜಿತ್ ತಿಳಿಸಿರುವುದಾಗಿ eNewsroom ವರದಿ ಮಾಡಿದೆ.

ತಮ್ಮ ಕುಟುಂಬಕ್ಕೂ ಕೋಲ್ಕತ್ತಾ ನಗರಕ್ಕೂ ಇರುವ ದೀರ್ಘಕಾಲದ ಸಂಬಂಧದ ಬಗ್ಗೆ ಮಾತನಾಡುತ್ತಾ ಅಭಿಜಿತ್ ಮಿತ್ರ ಹೀಗೆ ಹೇಳಿದ್ದಾರೆ. “ಈ ಸ್ಥಳದೊಂದಿಗೆ ನಮಗಿರುವ ನಂಟು ಎಷ್ಟು ಹಳೆಯದು ಎಂಬುದು ನಿಮಗೆ ತಿಳಿದಿದೆಯೇ? ಇದು 400 ವರ್ಷಗಳಿಗಿಂತಲೂ ಹಿಂದಿನದು. ನನ್ನ ಪುತ್ರರು ಕೋಲ್ಕತ್ತಾದಲ್ಲಿ ಓದಿದ್ದು ಮಾತ್ರವಲ್ಲದೆ, ದರ್ಜಿ ಪಾರಾದಲ್ಲಿ ನನ್ನ ಪೂರ್ವಜರ ಹೆಸರಿನಲ್ಲಿ ನೀಲ್ ಮಿತ್ರಾ ಎಂಬ ಬೀದಿಯೇ ಇದೆ. ನಾವು ಅಲ್ಲಿ ಕಳೆದ 350 ವರ್ಷಗಳಿಂದ ದುರ್ಗಾ ಪೂಜೆಯನ್ನು ಆಯೋಜಿಸುತ್ತಿದ್ದೇವೆ.’”

“ವಾಸ್ತವವಾಗಿ ಭಾರತದಲ್ಲಿ, ವಿಶೇಷವಾಗಿ ಬಂಗಾಳದಲ್ಲಿ ಮುಸ್ಲಿಂ ಮತದಾರರನ್ನು ಹೊರಹಾಕಲು ಎಸ್‌ಐಆರ್ ನಡೆಸಲಾಗುತ್ತಿದೆ. ಯುದ್ಧದ ಸಮಯದಲ್ಲಿ ಸಂಭವಿಸುವಂತೆ ಇಲ್ಲಿ ಹಿಂದೂಗಳು ಅಪ್ರಸ್ತುತ ಹಾನಿಗೆ ಒಳಗಾಗುತ್ತಿದ್ದಾರೆ. ಬ್ಯಾನರ್ಜಿಗಳು, ಚಟರ್ಜಿಗಳು ಮತ್ತು ಮಿತ್ರಾಗಳು ಈ ಹಾನಿಯ ಭಾಗವಾಗಿದ್ದಾರೆ” ಎಂದು ಅಭಿಜಿತ್ ಮಿತ್ರ ಹೇಳಿದ್ದಾರೆ. “ಅಷ್ಟೇ ಅಲ್ಲದೆ, ಚುನಾವಣಾ ಆಯೋಗದ ಪ್ರಕಾರ, ನನ್ನ ಇಬ್ಬರು ಪುತ್ರರು ಬಾಂಗ್ಲಾದೇಶಿಗಳು ಅಥವಾ ರೋಹಿಂಗ್ಯಾಗಳು” ಎಂದು ಅವರು ತಿಳಿಸಿದ್ದಾರೆ.

ಉದಾ 5 : ಕೊಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಶಾಹಿದುಲ್ಲಾ ಮುನ್ಶಿ

ಪಶ್ಚಿಮ ಬಂಗಾಳ ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಹೊರ ಹಾಕಲ್ಪಟ್ಟ ಪ್ರಮುಖ ವ್ಯಕ್ತಿಗಳಲ್ಲಿ ಕೊಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಸಾಹಿದುಲ್ಲಾ ಮುನ್ಶಿ ಕೂಡ ಒಬ್ಬರು.

ಪ್ರಸ್ತುತ ಪಶ್ಚಿಮ ಬಂಗಾಳದ ಔಕಾಫ್ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮುನ್ಶಿ, ಈಗ ಮೇಲ್ಮನವಿ ನ್ಯಾಯಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಲು ಕಾಯುತ್ತಿದ್ದಾರೆ ಎಂದು indianexpress.com ವರದಿ ಮಾಡಿದೆ.

ಮಾರ್ಚ್ 23ರಂದು ಚುನಾವಣಾ ಆಯೋಗ ಮೊದಲ ಪೂರಕ ಮತದಾರರ ಪಟ್ಟಿಯನ್ನು ಪ್ರಕಟಿಸಿತ್ತು. ಸುಪ್ರೀಂಕೋರ್ಟ್ ನಿರ್ದೇಶನಗಳ ಪ್ರಕಾರ ನ್ಯಾಯಾಂಗ ಅಧಿಕಾರಿಗಳಿಂದ ಪ್ರಕರಣಗಳನ್ನು ತೀರ್ಮಾನಿಸಲ್ಪಟ್ಟ ಮತದಾರರ ಹೆಸರುಗಳು ಈ ಪಟ್ಟಿಯಲ್ಲಿವೆ.

ಮಾಜಿ ನ್ಯಾಯಾಧೀಶರ ಪತ್ನಿ ಸಹಾನಾ ಮತ್ತು ಹಿರಿಯ ಮಗ ಇಫ್ತಿಕಾರ್ ಅವರ ಹೆಸರುಗಳು ಇನ್ನೂ ಪರಿಶೀಲನೆಯಲ್ಲಿವೆ (under adjudication), ಆದರೆ ಅವರ ಕಿರಿಯ ಮಗ ಇಬ್ತಿಹಾಝ್ ಹೊಸ ಮತದಾರರಾಗಿ ಅರ್ಜಿ ಸಲ್ಲಿಸಿದ್ದಾರೆ. “ಇಲ್ಲಿಯವರೆಗೆ, ಕೇವಲ ನನ್ನ ಹೆಸರನ್ನು ಮಾತ್ರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ನನ್ನ ಪತ್ನಿ ಮತ್ತು ಹಿರಿಯ ಮಗನ ಹೆಸರುಗಳು ಇನ್ನೂ ಪರಿಶೀಲನಾ ಪಟ್ಟಿಯಲ್ಲಿವೆ. ಇದು ಅತ್ಯಂತ ಅವಮಾನಕರ ಮತ್ತು ನೋವಿನ ಸಂಗತಿ ಬಹಳಷ್ಟು ಕಿರುಕುಳ ನೀಡಲಾಗುತ್ತಿದೆ. ದುರದೃಷ್ಟಕರ ಸಂಗತಿಯೆಂದರೆ, ಅವರು ದಾಖಲೆಗಳನ್ನು ಪಡೆದುಕೊಂಡು ಅವುಗಳನ್ನು ಅಪ್‌ಲೋಡ್ ಮಾಡುವುದಾಗಿ ತಿಳಿಸಿದರು, ಆದರೆ ಯಾವುದೇ ರಶೀದಿಯನ್ನು ನೀಡಿಲ್ಲ ಎಂದು ಮಾಜಿ ನ್ಯಾಯಮೂರ್ತಿ ಮುನ್ಶಿ ’ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸಿದ್ದಾರೆ.

ಉದಾ 6 : ಸಂವಿಧಾನದ ಚಿತ್ರಕಾರ ನಂದಲಾಲ್ ಬೋಸ್ ಕುಟುಂಬ

ಭಾರತದ ಸಂವಿಧಾನಕ್ಕೆ ಚಿತ್ರಕಲೆ ಮತ್ತು ವಿನ್ಯಾಸದ ಮೂಲಕ ಜೀವ ತುಂಬಿದ ಖ್ಯಾತ ಕಲಾವಿದ ನಂದಲಾಲ್ ಬೋಸ್ ಅವರ ಕುಟುಂಬಸ್ಥರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಪಶ್ಚಿಮ ಬಂಗಾಳದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ನಂದಲಾಲ್ ಬೋಸ್ ಅವರ ಮೊಮ್ಮಗ, 88 ವರ್ಷದ ಸುಪ್ರಬುದ್ಧ ಸೇನ್ ಮತ್ತು ಅವರ ಪತ್ನಿ (ಮೊಮ್ಮಗಳಂತೆಯೇ ಇರುವ ಮೊಮ್ಮಗನ ಪತ್ನಿ) ದೀಪಾ ಸೇನ್ (82) ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು ಎಂದು ವರದಿಯಾಗಿದೆ.

ಇವರು ಶಾಂತಿನಿಕೇತನದ ಬೋಲ್ಪುರ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮತದಾರರು. 1996 ರಿಂದಲೂ ಇಲ್ಲಿನ ಖಾಯಂ ನಿವಾಸಿಗಳಾಗಿದ್ದಾರೆ.

ಸುಪ್ರಬುದ್ಧ ಸೇನ್ ಅವರು ತಮ್ಮ ಪಾಸ್‌ಪೋರ್ಟ್ ಮತ್ತು 1954ರ ಮೆಟ್ರಿಕ್ಯುಲೇಶನ್ ಪ್ರಮಾಣಪತ್ರದಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದರು. ಆದರೂ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು.

ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಂವಿಧಾನ ವಿನ್ಯಾಸಗೊಳಿಸಿದ ವ್ಯಕ್ತಿಯ ಕುಟುಂಬಕ್ಕೇ ಮತದಾನದ ಹಕ್ಕು ನಿರಾಕರಿಸಲ್ಪಟ್ಟಿರುವುದು ಆಘಾತಕಾರಿ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.

ಸುಪ್ರೀಂಕೋರ್ಟ್ ನಿರ್ದೇಶನದಂತೆ ಈ ಪ್ರಕರಣವು ಮೇಲ್ಮನವಿ ನ್ಯಾಯಮಂಡಳಿಗೆ ಹೋಯಿತು. ನ್ಯಾಯಮಂಡಳಿಯು ಚುನಾವಣಾ ಆಯೋಗಕ್ಕೆ ಕೂಡಲೇ ಇವರ ಹೆಸರುಗಳನ್ನು ಮತದಾರರ ಪಟ್ಟಿಗೆ ಮರುಸೇರ್ಪಡೆ ಮಾಡುವಂತೆ ಆದೇಶ ನೀಡಿತ್ತು.

ಅಂತಿಮವಾಗಿ ಅಧಿಕಾರಿಗಳು ಇವರ ಹೆಸರುಗಳನ್ನು ಮತದಾರರ ಪಟ್ಟಿಗೆ ಮರು ಸೇರ್ಪಡೆಗೊಳಿಸಿದ್ದಾರೆ. ಈ ಘಟನೆಯು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ದೋಷಗಳು ಮತ್ತು ಸಾಮಾನ್ಯ ನಾಗರಿಕರು ಎದುರಿಸುತ್ತಿರುವ ತೊಂದರೆಗಳನ್ನು ಎತ್ತಿ ತೋರಿಸಿದೆ.

ಒಟ್ಟಿನಲ್ಲಿ ಮೇಲಿನ ಉದಾಹರಣೆಗಳು ಎಲ್ಲಾ ರೀತಿಯಲ್ಲೂ ಪಶ್ಚಿಮ ಬಂಗಾಳದ ಎಸ್‌ಐಆರ್ ಯಾವ ರೀತಿ ಮತದಾರರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂಬುವುದನ್ನು ನಮಗೆ ಮನದಟ್ಟು ಮಾಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಫಲವತ್ತಾದ ಕೃಷಿ ಭೂಮಿ ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ. ಇಂತಹ ಪರಿಸರ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು...

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

"ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ". ಇದು ಸರ್ಕಾರ ಮನೆ ಧ್ವಂಸ...

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....