ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ ನಡೆದ ಮಹಿಳೆಯರ ಶಾಟ್‌ಪುಟ್ ಎಫ್57 ಸ್ಪರ್ಧೆಯಲ್ಲಿ ಅವರು ಚಿನ್ನ ಗೆದ್ದಿದ್ದಾರೆ.
40 ವರ್ಷ ವಯಸ್ಸಿನ ಶರ್ಮಿಳಾ ಸಿಡಬ್ಲ್ಯೂಜಿನಲ್ಲಿ ಪ್ಯಾರಾ-ಅಥ್ಲೆಟಿಕ್ಸ್ ಪದಕಕ್ಕಾಗಿ ಭಾರತದ 20 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿದ್ದಾರೆ. ಆ ಮೂಲಕ 9.81 ಮೀಟರ್ ದೂರ ಎಸೆದು ಈ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.
ವಿವಾದಾತ್ಮಕ ಸಂದರ್ಭಗಳ ನಡುವೆ ಭಾರತೀಯರ ಪ್ರತಿಭಟನೆಯ ನಂತರ ಭಾರತದ ಶಿಲ್ಪಾ ಶೈಲಾ ಅವರಿಗೆ ಕಂಚಿನ ಪದಕ ನೀಡಲಾಯಿತು. ಶೈಲಾ 7.26 ಮೀಟರ್ ವೈಯಕ್ತಿಕ ಅತ್ಯುತ್ತಮ ಪ್ರಯತ್ನ ಮಾಡಿದ್ದರು.
ನೈಜೀರಿಯಾದ ಯುಚಾರಿಯಾ ಇಯಾಜಿ ಅವರನ್ನು ಆರಂಭದಲ್ಲಿ ಕಂಚಿನ ಪದಕ ಸ್ಥಾನದಲ್ಲಿ ಇರಿಸಲಾಗಿತ್ತು. ಆದರೆ, ಭಾರತದ ಪ್ರತಿಭಟನೆ ಮತ್ತು ಅಧಿಕೃತ ಪರಿಶೀಲನೆಯ ನಂತರ, ಅವರ ಏಕೈಕ ಮಾನ್ಯ ಅಂಕವನ್ನು ಫೌಲ್ ಎಂದು ನಿರ್ಣಯಿಸಲಾಯಿತು.
ಇದರಿಂದಾಗಿ ಶೈಲಾ ಅವರನ್ನು ಆರಂಭಿಕ ನಾಲ್ಕನೇ ಸ್ಥಾನದಿಂದ ಕಂಚಿಗೆ ಬಡ್ತಿ ನೀಡಲಾಯಿತು. ಆದರೆ, ನೈಜೀರಿಯಾ ಕೂಡ ಇದಕ್ಕೆ ಪ್ರತಿಯಾಗಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ಸೋಮವಾರ ರಾತ್ರಿ ನಡೆದ ಶರ್ಮಿಳಾ ಅವರ ಪ್ರದರ್ಶನವು, ಫಲಿತಾಂಶಕ್ಕೆ ಮಾತ್ರ ಸೀಮಿತವಾಗಿರದೆ, ಅವರು ಜೀವನದಲ್ಲಿ ಇಲ್ಲಿಯವರೆಗೆ ಬರಲು ತೆಗೆದುಕೊಂಡ ಸಂಕಲ್ಪಕ್ಕೂ ಒಂದು ಉದಾಹರಣೆಯಾಗಿದೆ.
ಹರಿಯಾಣದ ಚಿತ್ರೋಲಿಯವರಾದ ಶರ್ಮಿಳಾ ಅವರ ಎಡಗಾಲು ಎರಡು ವರ್ಷ ವಯಸ್ಸಿನಲ್ಲಿ ಪೋಲಿಯೊದಿಂದ ದುರ್ಬಲವಾಗಿತ್ತು.
ಭಾರತೀಯ ಕ್ರೀಡಾ ಪ್ರಾಧಿಕಾರ ಹಂಚಿಕೊಂಡ ಪ್ರೊಫೈಲ್ ಪ್ರಕಾರ, ಶರ್ಮಿಳಾ ಅವರಿಗೆ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ವಿವಾಹವಾಯಿತು. ಕುಟುಂಬದ ಬೆಂಬಲದೊಂದಿಗೆ ಜೀವನವನ್ನು ಕಟ್ಟಿಕೊಳ್ಳುವ ಮೊದಲೇ ಅವರು ಕಷ್ಟದ ದಾಂಪತ್ಯದಲ್ಲಿ ಸಿಲುಕಿಕೊಂಡರು. ಗಂಡನಿಂದ ಬೇರ್ಪಟ್ಟ ಬಳಿಕ ಅವರು ಅಂತಿಮವಾಗಿ ರೇವಾರಿಯ ಉದ್ಯಮಿ ಅಜಿತ್ ಸಿಂಗ್ ಅವರನ್ನು ಮರು ವಿವಾಹವಾದರು, ಈಗ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
2020 ರಲ್ಲಿ ಶರ್ಮಿಳಾ ಪ್ಯಾರಾ ಅಥ್ಲೆಟಿಕ್ಸ್ ವೃತ್ತಿಜೀವನವನ್ನು ಪ್ರಾರಂಭಿಸಲು ಪ್ರೋತ್ಸಾಹಿಸಿದವರು ಅಜಿತ್.
ತರಬೇತುದಾರ ಟೆಕ್ ಚಂದ್ ಅವರ ಮಾರ್ಗದರ್ಶನದಲ್ಲಿ ಒಂದು ವರ್ಷದೊಳಗೆ ಅವರು ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದರು. ಅಂದಿನಿಂದ ಶಾಟ್ ಪುಟ್ ಮತ್ತು ಡಿಸ್ಕಸ್ ಥ್ರೋ (ಎಫ್57) ಸ್ಪರ್ಧೆಗಳಲ್ಲಿ ಭಾರತದ ಪ್ರಮುಖ ಪ್ಯಾರಾ ಥ್ರೋವರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ಈ ವರ್ಷ ಫಝಾ ಇಂಟರ್ನ್ಯಾಷನಲ್ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಶರ್ಮಿಳಾ ಚಿನ್ನದ ಪದಕ ಗೆದ್ದರು. ಅವರು 2022 ರ ಬರ್ಮಿಂಗ್ಹ್ಯಾಮ್ ಕ್ರೀಡಾಕೂಟದಲ್ಲಿಯೂ ಭಾಗವಹಿಸಿ ನಾಲ್ಕನೇ ಸ್ಥಾನ ಪಡೆದರು.


