ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ ಹಣವನ್ನು ಹಿಂತಿರುಗಿಸಿದ್ದಾರೆ ಎಂಬ ಸತ್ಯವನ್ನು ಕೇಂದ್ರ ಸರ್ಕಾರವೇ ಮಂಗಳವಾರ ಲೋಕಸಭೆಯಲ್ಲಿ ಒಪ್ಪಿಕೊಂಡಿದೆ.
ತಮ್ಮದೇ ಅಧಿಕಾರ ವ್ಯಾಪ್ತಿಯ ತೋಟಗಾರಿಕಾ ಯೋಜನೆಯನ್ನು ಬಳಸಿಕೊಂಡು ಸೌತೆಕಾಯಿ ಕೃಷಿಗಾಗಿ ಸಚಿವರು ₹99 ಲಕ್ಷ ಸಬ್ಸಿಡಿ ಗಿಟ್ಟಿಸಿಕೊಂಡಿದ್ದನ್ನು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ತನಿಖಾ ವರದಿ ಬಯಲಿಗೆಳೆದಿತ್ತು. ವರದಿ ಪ್ರಕಟವಾಗಿ ಸರಿಯಾಗಿ ಒಂದು ತಿಂಗಳ ನಂತರ, ಚೌಧರಿ ಅವರು ಹಣ ವಾಪಸ್ ಮಾಡುವ ನಾಟಕವಾಡಿದ್ದಾರೆ.
ತೃಣಮೂಲ ಕಾಂಗ್ರೆಸ್ (TMC) ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದ ಕೃಷಿ ಇಲಾಖೆಯ ಇನ್ನೊಬ್ಬ ರಾಜ್ಯ ಸಚಿವ ರಾಮ್‌ನಾಥ್ ಠಾಕೂರ್, ಭಾಗೀರಥ್ ಚೌಧರಿ ಅವರು ಸಬ್ಸಿಡಿ ಮೊತ್ತವನ್ನು ಸಂಬಂಧಪಟ್ಟ ಬ್ಯಾಂಕ್‌ಗೆ ವಾಪಸ್ ಮಾಡಿದ್ದಾರೆ. ಆ ಹಣವನ್ನು ರಾಷ್ಟ್ರೀಯ ತೋಟಗಾರಿಕಾ ಮಂಡಳಿಗೆ (NHB) ಜಮಾ ಮಾಡುವಂತೆ ಬ್ಯಾಂಕ್‌ಗೆ ಸೂಚಿಸಲಾಗಿದೆ ಎಂದಿದ್ದಾರೆ.
ಸಚಿವರು ಮಾತ್ರವಲ್ಲ, ರಾಜಸ್ಥಾನದ ಜಾಲೋರ್‌ನ ಬಿಜೆಪಿ ಸಂಸದ ಲುಂಬಾರಾಮ್ ಚೌಧರಿ ಕೂಡ ಕಳೆದ ಐದು ವರ್ಷಗಳಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಈ ಯೋಜನೆಗಳಡಿ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಕೇಂದ್ರ ಸರ್ಕಾರದ ಹಿರಿಯ ಐಎಎಸ್ ಅಧಿಕಾರಿ ಹಾಗೂ ಪಶುಸಂಗೋಪನಾ ಕಾರ್ಯದರ್ಶಿ ನರೇಶ್ ಪಾಲ್ ಗಂಗ್ವಾರ್ ಕುಟುಂಬದ ಮೂವರು ಸದಸ್ಯರು ಕಳೆದ 5 ವರ್ಷಗಳಲ್ಲಿ ಬರೋಬ್ಬರಿ ₹1.16 ಕೋಟಿ ಸಬ್ಸಿಡಿ ಬಾಚಿಕೊಂಡಿದ್ದಾರೆ.
ಆಯ್ದ ತರಕಾರಿ ಮತ್ತು ಹೂವುಗಳ “ವಾಣಿಜ್ಯ ಕೃಷಿ”ಯನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸುವ ಈ ಯೋಜನೆಯು ತೋಟಗಾರಿಕೆ ಸಮಗ್ರ ಅಭಿವೃದ್ಧಿ ಮಿಷನ್ (MIDH) ಅಡಿಯಲ್ಲಿ ಬರುತ್ತದೆ. ಇದನ್ನು 2014-15 ರಲ್ಲಿ ಪ್ರಾರಂಭಿಸಲಾಯಿತು. ಇದು ಚೌಧರಿ ಅವರ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಿಂದ ನಿರ್ವಹಿಸಲ್ಪಡುತ್ತದೆ.
ಕ್ಯಾಪ್ಸಿಕಂ, ಸೌತೆಕಾಯಿ, ಟೊಮೆಟೊ ಮತ್ತು ಗುಲಾಬಿ, ಆಂಥೂರಿಯಂ, ಆರ್ಕಿಡ್ ಸೇರಿದಂತೆ ಎಂಟು ಬಗೆಯ ಹೂವುಗಳ ಕೃಷಿ ಯೋಜನೆಗೆ ಗರಿಷ್ಠ ಶೇ. 50 ರಷ್ಟು ಅಥವಾ ಪ್ರತಿ ಕುಟುಂಬಕ್ಕೆ ಗರಿಷ್ಠ 1 ಕೋಟಿ ರೂಪಾಯಿವರೆಗೆ ಸಬ್ಸಿಡಿ ನೀಡಲಾಗುತ್ತದೆ.
ಸಾಮಾನ್ಯ ರೈತರು ಸಣ್ಣ ಸಬ್ಸಿಡಿಗಾಗಿ, ಸಾಲಕ್ಕಾಗಿ ಬ್ಯಾಂಕ್‌ಗಳ ಮೆಟ್ಟಿಲೇರಿ ಕಣ್ಣೀರು ಹಾಕುತ್ತಿರುವಾಗ, ಅಧಿಕಾರದ ಚುಕ್ಕಾಣಿ ಹಿಡಿದ ಜನಪ್ರತಿನಿಧಿಗಳು ಮತ್ತು ಉನ್ನತಾಧಿಕಾರಿಗಳು ಕೋಟಿ ಕೋಟಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಿರುವುದು ಇಂದಿನ ಆಡಳಿತ ವ್ಯವಸ್ಥೆಯ ದುರಂತಕ್ಕೆ ಸಾಕ್ಷಿ.
ರಾಜಕಾರಣಿಗಳು ಅಥವಾ ಅವರ ಕುಟುಂಬದವರು ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಿದಾಗ ಅಧಿಕಾರ ದುರುಪಯೋಗ ತಡೆಯಲು ಅಥವಾ ಹಿತಾಸಕ್ತಿ ತಡೆಯಲು ನಿಯಮಗಳಿವೆಯೇ ಎಂದು ಅಭಿಷೇಕ್ ಬ್ಯಾನರ್ಜಿ ಸದನದಲ್ಲಿ ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ ಸರ್ಕಾರ, ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಈಗಿನ ಮಾರ್ಗದರ್ಶಿ ಸೂತ್ರಗಳಲ್ಲಿ ಜನಪ್ರತಿನಿಧಿಗಳು ಅಥವಾ ಅವರ ಕುಟುಂಬದ ಸದಸ್ಯರು ಸಬ್ಸಿಡಿಗೆ ಅರ್ಜಿ ಸಲ್ಲಿಸುವುದನ್ನು ತಡೆಯುವ ಅಥವಾ ಹಿತಾಸಕ್ತಿ ಸಂಘರ್ಷದ ಕುರಿತು ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ ಎಂದು ಉಡಾಫೆಯಾಗಿ ಹೇಳಿದೆ. ಅಂದರೆ, ಸಚಿವರು ಮತ್ತು ಸಂಸದರು ಜನಸಾಮಾನ್ಯರ ತೆರಿಗೆ ಹಣವನ್ನು ತಮ್ಮ ಕಿಸೆಗೆ ಹಾಕಿಕೊಳ್ಳಲು ಲೂಟಿ ಬಾಗಿಲು ತೆರೆದೇ ಇದೆ ಎಂಬುದನ್ನು ಸರ್ಕಾರ ಒಪ್ಪಿಕೊಂಡಂತಾಗಿದೆ.
ಸಾರ್ವಜನಿಕರ ಆಕ್ರೋಶಕ್ಕೆ ಹೆದರಿ ಹಣ ವಾಪಸ್ ನೀಡಿದ ತಕ್ಷಣ ಸಚಿವರ ಅಧಿಕಾರ ದುರುಪಯೋಗದ ಅಪರಾಧ ಇಲ್ಲದಂತಾಗುತ್ತದೆಯೇ? ಸಾಮಾನ್ಯ ರೈತನಾಗಿದ್ದರೆ ಸರ್ಕಾರ ಇದೇ ರೀತಿ ಸುಮ್ಮನಿರುತ್ತಿತ್ತೇ? ಎನ್ನುವ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿವೆ.


