ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ.
ಮತದಾರರ ಪಟ್ಟಿಯಲ್ಲಿನ ಹೆಸರು, ವಿಳಾಸ ಅಥವಾ ಹಿಂದಿನ ದಾಖಲೆಗಳಿಗೆ ಸಂಬಂಧಿಸಿದ ವ್ಯತ್ಯಾಸ ಕಂಡುಬಂದರೆ ಸಾಮಾನ್ಯ ಮತದಾರರು ನೋಟಿಸ್‌ಗೆ ಸ್ಪಂದಿಸಿ ಅಗತ್ಯ ದಾಖಲೆಗಳೊಂದಿಗೆ ಚುನಾವಣಾಧಿಕಾರಿಗಳ ಮುಂದೆ ಹಾಜರಾಗಬೇಕಾದ ಪರಿಸ್ಥಿತಿ ಎದುರಾಗುತ್ತಿರುವಾಗಲೇ ಕೆಲವು ಗಣ್ಯರ ಪ್ರಕರಣಗಳಲ್ಲಿ ಅವರು ಕಚೇರಿಗೆ ಹಾಜರಾಗುವ ಅಗತ್ಯವಿಲ್ಲದೆ ಅಧಿಕಾರಿಗಳೇ ಪರಿಶೀಲನೆ ನಡೆಸಿರುವುದು ಚರ್ಚೆಗೆ ಕಾರಣವಾಗಿದೆ.
ಇದು ಕೇವಲ ‘ವಿಐಪಿಗಳಿಗೆ ವಿಶೇಷ ಸೌಲಭ್ಯ’ ನೀಡಲಾಗಿದೆಯೇ ಎಂಬ ಪ್ರಶ್ನೆಯಲ್ಲ. ಒಂದೇ ಚುನಾವಣಾ ಪ್ರಕ್ರಿಯೆಯಲ್ಲಿ ಸಾಮಾನ್ಯ ಮತದಾರ ಮತ್ತು ಪ್ರಭಾವಿ ವ್ಯಕ್ತಿಯ ಅನುಭವ ಏಕೆ ವಿಭಿನ್ನವಾಗಬೇಕು? ಎಂಬ ಪ್ರಶ್ನೆಯೂ ಇದರ ಹಿಂದಿದೆ.
ಒಂದೇ SIR, ವಿಭಿನ್ನ ಅನುಭವವೇ?
ನಟ ಶಿವರಾಜ್‌ಕುಮಾರ್ ಅವರ ಹೆಸರು ಕೂಡ SIR ಸಂದರ್ಭದಲ್ಲಿ ಹಿಂದಿನ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್‌ಗೆ ಸಂಬಂಧಿಸಿದ ಪರಿಶೀಲನೆಗೆ ಒಳಪಟ್ಟಿತ್ತು. ಆದರೆ ಇತರ ಸಾಮಾನ್ಯ ಮತದಾರರಂತೆ ಅವರನ್ನು ದಾಖಲೆಗಳೊಂದಿಗೆ ಕಚೇರಿಗೆ ಹಾಜರಾಗುವಂತೆ ಮಾಡದೆ, ಅಧಿಕಾರಿಗಳೇ ಅವರ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇದೇ ವೇಳೆ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಹಾಗೂ ಝೆರೋಧಾ ಸಂಸ್ಥಾಪಕರಾದ ನಿಖಿಲ್ ಕಾಮತ್ ಮತ್ತು ನಿತಿನ್ ಕಾಮತ್ ಸೇರಿದಂತೆ ಹಲವು ಪ್ರಮುಖರ ಹೆಸರುಗಳು SIR ಪರಿಶೀಲನೆಯಲ್ಲಿ ಕಾಣಿಸಿಕೊಂಡಿವೆ. ನಿಲೇಕಣಿ ಕುಟುಂಬದ ದಾಖಲೆಗಳು 2002ರ ಹಿಂದಿನ SIR ದಾಖಲೆಗಳೊಂದಿಗೆ ‘ಮ್ಯಾಪ್’ ಆಗದಿರುವುದು ಹಾಗೂ ಕಾಮತ್ ಸಹೋದರರ ಪ್ರಕರಣದಲ್ಲಿ ಪೋಷಕರ ಹೆಸರಿನ ವ್ಯತ್ಯಾಸ ಸೇರಿದಂತೆ ವಿವಿಧ ಅಸಂಗತತೆಗಳು ವರದಿಯಾಗಿವೆ.
ಚುನಾವಣಾ ಅಧಿಕಾರಿಗಳ ಪ್ರಕಾರ ಕೆಲವು ಗಣ್ಯ ವ್ಯಕ್ತಿಗಳ ಪ್ರಕರಣಗಳಲ್ಲಿ ಅವರು ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗದಂತೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ವ್ಯವಸ್ಥೆ ಇದೆ. ಆದರೆ ಅದರಿಂದ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ. ಅದೇ ರೀತಿಯ ಅನುಕೂಲ ನಿಜವಾಗಿಯೂ ಅಗತ್ಯವಿರುವ ಸಾಮಾನ್ಯ ಮತದಾರನಿಗೂ ಸಿಗುತ್ತಿದೆಯೇ?
ಸಾಮಾನ್ಯ ಮತದಾರನಿಗೆ SIR ಎಂದರೆ ಏನು?
SIR ಸಂದರ್ಭದಲ್ಲಿ ಹೆಸರು ಅಥವಾ ಇತರ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದರೆ, ಅನೇಕ ಸಾಮಾನ್ಯ ಮತದಾರರು BLO, ERO ಅಥವಾ AERO ಅಧಿಕಾರಿಗಳನ್ನು ಸಂಪರ್ಕಿಸಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತಿದೆ. ಒಂದು ಸಣ್ಣ ಹೆಸರಿನ ವ್ಯತ್ಯಾಸವೂ ನೋಟಿಸ್‌ಗೆ ಕಾರಣವಾಗಬಹುದು.
ದಕ್ಷಿಣ ಕನ್ನಡದ ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಹಳೆಯ ಮತದಾರರ ಪಟ್ಟಿಯೊಂದಿಗೆ ಹೆಸರು ಹೊಂದಿಕೆಯಾಗದ ಕಾರಣ ಸುಮಾರು ಶೇ.10ರಷ್ಟು ಮತದಾರರಿಗೆ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ. ರಾಜ್ಯಾದ್ಯಂತ 43.81 ಲಕ್ಷಕ್ಕೂ ಹೆಚ್ಚು ನೋಟಿಸ್‌ಗಳು ಹೊರಡಿಸಿರುವ ಮಾಹಿತಿಯೂ ವರದಿಯಾಗಿದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಮತದಾರನಿಗೆ ಸಮಸ್ಯೆ ಕೇವಲ ದಾಖಲೆ ಸಂಗ್ರಹಿಸುವುದಲ್ಲ. ಕಚೇರಿಗೆ ಹೋಗಬೇಕು. ಸರತಿಯಲ್ಲಿ ನಿಲ್ಲಬೇಕು. ದಾಖಲೆಗಳ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ ಮತ್ತೆ ಹೋಗಬೇಕಾಗಬಹುದು. ಕೆಲವರಿಗೆ ಕೆಲಸಕ್ಕೆ ರಜೆ ಹಾಕಬೇಕು. ದಿನಗೂಲಿ ಕಾರ್ಮಿಕನಿಗೆ ಒಂದು ದಿನದ ಕೆಲಸ ತಪ್ಪಿದರೆ ಅದು ಕುಟುಂಬದ ಆದಾಯದ ನಷ್ಟ. ವಯೋವೃದ್ಧರಿಗೆ ಪ್ರಯಾಣವೇ ದೊಡ್ಡ ಸಮಸ್ಯೆ. ಅನಾರೋಗ್ಯ ಪೀಡಿತರು ಅಥವಾ ವಿಕಲಚೇತನರಿಗೆ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗುವುದು ಇನ್ನಷ್ಟು ಕಷ್ಟ.
ಹೀಗಾಗಿ SIR ಒಂದು ಆಡಳಿತಾತ್ಮಕ ಪರಿಶೀಲನಾ ಪ್ರಕ್ರಿಯೆಯಾಗಿದ್ದರೂ, ಅದರ ಹೊರೆ ಎಲ್ಲರ ಮೇಲೂ ಒಂದೇ ರೀತಿಯಲ್ಲಿ ಬೀಳುವುದಿಲ್ಲ.
‘ಒಂದು ಮತ’ ಎಂದರೆ ಒಂದೇ ಮೌಲ್ಯವಲ್ಲವೇ?
ಪ್ರಜಾಪ್ರಭುತ್ವದ ಮೂಲತತ್ವ ಸರಳವಾಗಿದೆ — ಮತದಾರನ ಸಾಮಾಜಿಕ ಸ್ಥಾನ, ಆಸ್ತಿ, ಉದ್ಯೋಗ ಅಥವಾ ಪ್ರಭಾವದ ಆಧಾರದ ಮೇಲೆ ಒಂದು ಮತದ ಮೌಲ್ಯ ಬದಲಾಗುವುದಿಲ್ಲ. ಸಿನಿಮಾ ನಟನ ಮತವೂ ಒಂದು ಮತ. ಉದ್ಯಮಿಯ ಮತವೂ ಒಂದು ಮತ. ದಿನಗೂಲಿ ಕಾರ್ಮಿಕನ ಮತವೂ ಒಂದು ಮತ. ವಯೋವೃದ್ಧ ರೈತನ ಮತವೂ ಒಂದು ಮತ. ಹೀಗಿರುವಾಗ ಮತದಾರರ ಪಟ್ಟಿಯಲ್ಲಿನ ತಮ್ಮ ಹೆಸರನ್ನು ಉಳಿಸಿಕೊಳ್ಳಲು ನಡೆಯುವ ಪ್ರಕ್ರಿಯೆಯೂ ಸಾಧ್ಯವಾದಷ್ಟು ಸಮಾನವಾಗಿ ಪ್ರವೇಶಿಸಬಹುದಾದಂತಿರಬೇಕು ಎಂಬ ನಿರೀಕ್ಷೆ ಸಹಜ. ಗಣ್ಯ ವ್ಯಕ್ತಿಯೊಬ್ಬರಿಗೆ ಕಚೇರಿಗೆ ಬರಲು ವಿನಾಯಿತಿ ನೀಡುವುದಕ್ಕೆ ಆಡಳಿತಾತ್ಮಕ ಕಾರಣವಿರಬಹುದು. ಆದರೆ ಅದೇ ವೇಳೆ ಕಚೇರಿಗೆ ಬರಲು ನಿಜವಾಗಿಯೂ ಸಾಧ್ಯವಾಗದ ಸಾಮಾನ್ಯ ನಾಗರಿಕನಿಗೆ ಆ ವ್ಯವಸ್ಥೆ ತಲುಪದಿದ್ದರೆ, ನಿಯಮ ಒಂದೇ ಇದ್ದರೂ ಅದರ ಪರಿಣಾಮದಲ್ಲಿ ಅಸಮಾನತೆ ಮೂಡುತ್ತದೆ.
ಹೋರಾಟಗಳ ಬಳಿಕ ಸಿಕ್ಕ ಸೌಲಭ್ಯ;
ಈ ಚರ್ಚೆಯ ನಡುವೆಯೇ, ವಯೋವೃದ್ಧರು, ವಿಕಲಚೇತನರು, ಅನಾರೋಗ್ಯ ಪೀಡಿತರು ಹಾಗೂ ವಿದೇಶದಲ್ಲಿರುವ ಮತದಾರರ ಪರವಾಗಿ ಅವರ ವಯಸ್ಕ ಕುಟುಂಬ ಸದಸ್ಯರು ERO ಅಥವಾ AERO ಮುಂದೆ ಹಾಜರಾಗಿ SIR ನೋಟಿಸ್‌ಗೆ ಸಂಬಂಧಿಸಿದ ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆದರೆ, ಈ ಸೌಲಭ್ಯ ಸಾಮಾನ್ಯ ಮತದಾರರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದವರು, ಸಂಘಟನೆಗಳು ಮತ್ತು ನಾಗರಿಕರ ಒತ್ತಡದ ಪರಿಣಾಮವಾಗಿ ದೊರೆತದ್ದಾಗಿದೆ. SIR ಪ್ರಕ್ರಿಯೆಯಲ್ಲಿ ವಯೋವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ಕಚೇರಿಗೆ ಬರಲು ಸಾಧ್ಯವಾಗದವರ ಸಂಕಷ್ಟವನ್ನು ಹಲವು ಹಂತಗಳಲ್ಲಿ ಪ್ರಶ್ನಿಸಲಾಗಿತ್ತು. ಅದರ ಪರಿಣಾಮವಾಗಿ, ಕನಿಷ್ಠ ಈ ವರ್ಗದ ಮತದಾರರಿಗೆ ಪ್ರಕ್ರಿಯೆಯನ್ನು ಸ್ವಲ್ಪ ಸುಲಭಗೊಳಿಸುವ ಅವಕಾಶ ಇದೀಗ ದೊರೆತಿದೆ.
ಹೀಗಾಗಿ ಚುನಾವಣಾ ಆಯೋಗದ ಮುಂದಿರುವ ನಿಜವಾದ ಸವಾಲು SIRನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಷ್ಟೇ ಅಲ್ಲ; ಅದನ್ನು ಶ್ರೀಮಂತ-ಬಡವ, ವಿಐಪಿ-ಸಾಮಾನ್ಯ ಎಂಬ ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬ ಮತದಾರನಿಗೂ ಸಮಾನವಾಗಿ ಸುಲಭವಾಗಿಸುವುದು. ಪ್ರಜಾಪ್ರಭುತ್ವದಲ್ಲಿ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಂದು ಹೆಸರೂ ಸಮಾನ. ಹಾಗೆಯೇ ಆ ಹೆಸರನ್ನು ಉಳಿಸಿಕೊಳ್ಳಲು ನಡೆಯುವ ಪರಿಶೀಲನೆಯಲ್ಲೂ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಗೌರವ, ಸಮಾನ ಮಾಹಿತಿ ಮತ್ತು ಸಾಧ್ಯವಾದಷ್ಟು ಸಮಾನ ಸೌಲಭ್ಯ ಸಿಗಬೇಕಿದೆ.


