ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ ತೀವ್ರ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ರಾಜ್ಯಾದ್ಯಂತ ‘ಮ್ಯಾಪಿಂಗ್ ಇಲ್ಲದಿರುವುದು’ ಹಾಗೂ ‘ತಾಂತ್ರಿಕ ದೋಷಗಳು’ ಎಂಬ ನೆಪವೊಡ್ಡಿ ಆಯೋಗವು ಬರೋಬ್ಬರಿ 43.81 ಲಕ್ಷಕ್ಕೂ ಹೆಚ್ಚು ನೋಟಿಸ್ಗಳನ್ನು ಸಿದ್ಧಪಡಿಸಿದೆಯಾದರೂ, ಇದರಲ್ಲಿ ತಲುಪಿರುವುದು ಕೇವಲ 24.97 ಲಕ್ಷ ಜನರಿಗೆ ಮಾತ್ರ. ಇನ್ನುಳಿದ ಬರೋಬ್ಬರಿ 18.84 ಲಕ್ಷ ನೋಟಿಸ್ಗಳು ಇನ್ನೂ ಮತದಾರರಿಗೆ ತಲುಪಿಯೇ ಇಲ್ಲ.
ಬೊಮ್ಮನಹಳ್ಳಿ (AC-175) ವಿಧಾನಸಭಾ ಕ್ಷೇತ್ರದ ಮತದಾರರೊಬ್ಬರು ತಮ್ಮ ಅಳಲು ತೋಡಿಕೊಳ್ಳುತ್ತಾ, “ನನ್ನ ಹೆಸರಿನಲ್ಲಾದ ಸಣ್ಣ ಸ್ಪೆಲ್ಲಿಂಗ್ ತಪ್ಪಿಗೆ ನೋಟಿಸ್ ಪಟ್ಟಿಯಲ್ಲಿ ಹೆಸರು ಬಂದು 12 ದಿನಗಳಾಗಿವೆ, ಆದರೆ ಬಿಎಲ್ಒ ಇದುವರೆಗೆ ಭೌತಿಕ ನೋಟಿಸ್ ನೀಡೇ ಇಲ್ಲ. ಆನ್ಲೈನ್ನಲ್ಲಿರುವ ನೋಟಿಸ್ ಪಟ್ಟಿಯಲ್ಲಂತೂ ವಿಚಾರಣೆಯ ದಿನಾಂಕ ಅಥವಾ ಸಮಯದ ಮಾಹಿತಿಯೇ ಇಲ್ಲ, ಸಂಪೂರ್ಣ ಗೊಂದಲಮಯವಾಗಿದೆ. ಆನ್ಲೈನ್ನಲ್ಲೇ ದಾಖಲೆ ಸಲ್ಲಿಸಲು ಅಥವಾ ವಿಚಾರಣೆಗೆ ಅವಕಾಶ ನೀಡಿದರೆ ನಮಗೂ ಸಹಾಯವಾಗುತ್ತದೆ” ಎಂದು ಆಯೋಗದ ಕ್ರಮವನ್ನು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ನಾಗರಿಕರು ಆಯೋಗದ ಬೇಜವಾಬ್ದಾರಿಯನ್ನು ಬಯಲಿಗೆಳೆಯುತ್ತಾ, “ಹಿಂದಿನ SIRನಲ್ಲಿ ಮ್ಯಾಪ್ ಆಗಿಲ್ಲ ಎಂಬ ಕಾರಣಕ್ಕೆ ನನ್ನ ಹೆಸರು ನೋಟಿಸ್ ಪಟ್ಟಿಯಲ್ಲಿದೆ, ಆದರೆ ನನ್ನ ಬಿಎಲ್ಒ ಕಡೆಯಿಂದ ನನಗೆ ಯಾವುದೇ ಕರೆ ಬಂದಿಲ್ಲ. ನಾನು ಮಾಡುವ ಕರೆಗಳನ್ನೂ ಸ್ವೀಕರಿಸುತ್ತಿಲ್ಲ. ವಾಟ್ಸಾಪ್ ಸಂದೇಶಗಳಿಗೂ ಯಾವುದೇ ಉತ್ತರವಿಲ್ಲ. ಅವರನ್ನು ಖುದ್ದಾಗಿ ಎಲ್ಲಿ ಭೇಟಿಯಾಗಬೇಕೆಂದೇ ತಿಳಿಯುತ್ತಿಲ್ಲ” ಎಂದು ಆಯೋಗದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೆಡೆ 18.84 ಲಕ್ಷ ಮತದಾರರಿಗೆ ತಮಗೆ ನೋಟಿಸ್ ಜಾರಿಯಾಗಿದೆ ಎನ್ನುವ ಕನಿಷ್ಠ ಮಾಹಿತಿಯೂ ಇಲ್ಲದೆ ಅತಂತ್ರದಲ್ಲಿದ್ದಾರೆ, ಇನ್ನೊಂದೆಡೆ ನೋಟಿಸ್ ತಲುಪಿರುವ 24.97 ಲಕ್ಷ ಜನರ ಪೈಕಿ ಇದುವರೆಗೆ ನಡೆದಿರುವುದು ಕೇವಲ 7.03 ಲಕ್ಷ (ಶೇ. 28.18) ವಿಚಾರಣೆಗಳು ಮಾತ್ರ! ಅಂದರೆ, ಸಿದ್ಧಪಡಿಸಿದ ಒಟ್ಟು ನೋಟಿಸ್ಗಳ ಪೈಕಿ ಶೇಕಡಾ 80 ಕ್ಕೂ ಹೆಚ್ಚು ಪ್ರಕರಣಗಳು ಇಂದಿಗೂ ತೂಗುಯ್ಯಾಲೆಯಲ್ಲೇ ಉಳಿದುಕೊಂಡಿವೆ.
ಇಲ್ಲಿ ಅತ್ಯಂತ ಆತಂಕಕಾರಿ ಮತ್ತು ಗಂಭೀರವಾದ ಪ್ರಶ್ನೆಯೆಂದರೆ, ಆಯೋಗವು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಅಲ್ಪ ಕಾಲಮಿತಿಯೊಳಗೆ ಈ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ, ಇನ್ನು ನೋಟಿಸ್ಗಳೇ ತಲುಪದ 18.84 ಲಕ್ಷ ನಾಗರಿಕರ ಪರಿಸ್ಥಿತಿ ಏನು? ಬಿಎಲ್ಒಗಳು ಮನೆ ಬಾಗಿಲಿಗೆ ಬಂದು ನೋಟಿಸ್ ನೀಡದಿದ್ದರೆ ಅಥವಾ ಮಾಹಿತಿ ನೀಡದಿದ್ದರೆ, ದಿನಬೆಳಗಾಗುವುದರೊಳಗೆ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಮಾಯವಾಗಿರುವುದನ್ನು ನೋಡಿ ಸಾರ್ವಜನಿಕರು ಆಘಾತಕ್ಕೊಳಗಾಗಬೇಕೇ? ಆಯೋಗದ ಈ ತಾಂತ್ರಿಕ ವಿಫಲತೆ ಹಾಗೂ ವಿತರಣೆಯ ವಿಳಂಬಕ್ಕೆ ಸಾಮಾನ್ಯ ಮತದಾರರನ್ನು ಬಲಿಪಶು ಮಾಡುವುದು ಎಷ್ಟರ ಮಟ್ಟಿಗೆ ಸರಿ?


