ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ ಮೀನಿನ ಪ್ರಸಾದ ಸೇವಿಸಿದ್ದಾರೆ. ಕೌಶಿಕಿ ಅಮಾವಾಸ್ಯೆಯ ಸಂದರ್ಭದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮ ಇದೀಗ ರಾಜಕೀಯವಾಗಿಯೂ ಗಮನ ಸೆಳೆದಿದೆ.
ಸೆಪ್ಟೆಂಬರ್ 10ರಂದು ಗುರುವಾರ ಸಂಜೆ ಕಾಳಿಘಾಟ್ ದೇವಸ್ಥಾನಕ್ಕೆ ತೆರಳಿದ ಸುವೇಂದು ಅಧಿಕಾರಿ, ಕಾಳಿ ದೇವಿಗೆ ಪೂಜೆ ಸಲ್ಲಿಸಿ ಆರತಿ ನೆರವೇರಿಸಿದರು. ಬಳಿಕ ದೇವಸ್ಥಾನದಲ್ಲಿ ನೀಡಲಾದ ಭೋಗದ ಪ್ರಸಾದವನ್ನು ಸೇವಿಸಿದರು. ವರದಿಗಳ ಪ್ರಕಾರ, ಅವರ ಪ್ರಸಾದದಲ್ಲಿ ಮೀನಿನ ತಲೆ, ಹುರಿದ ಮೀನು ಮತ್ತು ಬಾಸಂತಿ ಪುಲಾವ್ ಇದ್ದವು. ಕೆಲವು ವರದಿಗಳು ಭೋಗದಲ್ಲಿ ವಿವಿಧ ಬಗೆಯ ಮೀನುಗಳ ಜೊತೆಗೆ ಪಾಂಚಭಾಜಿ, ಶುಕ್ತೋ, ಬೇಳೆ, ತರಕಾರಿ, ಪನೀರ್ ಹಾಗೂ ಮೇಕೆ ಮಾಂಸವೂ ಇದ್ದುದಾಗಿ ಉಲ್ಲೇಖಿಸಿವೆ.
ಮೀನಿನ ಪ್ರಸಾದ ಸ್ವೀಕರಿಸಿದ ಬಳಿಕ ಬಾಗೇಶ್ವರ್ ಧಾಮದ ಪೀಠಾಧೀಶ್ವರ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಇತ್ತೀಚಿನ ಹೇಳಿಕೆಗಳ ಕುರಿತು ಸುವೇಂದು ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.
ಒಬ್ಬ ಸಂತ ಅಥವಾ ಧಾರ್ಮಿಕ ವ್ಯಕ್ತಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ, ಅದನ್ನು ಒಪ್ಪಿಕೊಳ್ಳಬೇಕೇ ಅಥವಾ ಬೇಡವೇ ಎಂಬುದು ಪ್ರತಿಯೊಬ್ಬರ ವೈಯಕ್ತಿಕ ವಿಚಾರ ಎಂದು ಅವರು ಹೇಳಿದ್ದಾರೆ. ತಾನು ಮಹಾಷ್ಟಮಿ ದಿನ ಹಾಗೂ ಕಾರ್ತಿಕ ಮಾಸದಲ್ಲಿ ಸಾತ್ವಿಕ ಆಹಾರ ಸೇವಿಸುತ್ತೇನೆ ಎಂದಿರುವ ಅವರು, ಬಂಗಾಳಿಯಾಗಿರುವುದರಿಂದ ದೇವಿಗೆ ಅರ್ಪಿಸುವ ಮೀನಿನ ಪ್ರಸಾದವನ್ನೂ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ. ಮೇಕೆ ಬಲಿ ನೀಡಿದ ನಂತರದ ಪ್ರಸಾದವನ್ನೂ ಸ್ವೀಕರಿಸುವುದಾಗಿ ಅವರು ತಿಳಿಸಿದ್ದಾರೆ.
ಕಾಳಿಘಾಟ್‌ನಲ್ಲಿ ತಮಗೆ ನೀಡಲಾದ ಪ್ರಸಾದದಲ್ಲಿ ಮೀನಿನ ತಲೆ, ಹುರಿದ ಮೀನು ಮತ್ತು ಬಾಸಂತಿ ಪುಲಾವ್ ಇದ್ದವು. ದೇವಿಗೆ ಅದೇ ದಿನ ಅರ್ಪಿಸಲಾಗಿದ್ದ ಆಹಾರವನ್ನೇ ದೇವಸ್ಥಾನದ ಅರ್ಚಕರು ತಮಗೆ ನೀಡಿದರು ಎಂದು ಸುವೇಂದು ಅಧಿಕಾರಿ ತಿಳಿಸಿದ್ದಾರೆ
ಬಾಗೇಶ್ವರ್ ಬಾಬಾ ಹೇಳಿಕೆಯಿಂದ ಶುರುವಾದ ವಿವಾದ!
ದುರ್ಗಾ ಪೂಜೆ ಸಂದರ್ಭದಲ್ಲಿ ಬಂಗಾಳಿಗಳು ಮೀನು ಮತ್ತು ಮಾಂಸ ಸೇವಿಸಬಾರದು ಎಂದು ಬಾಗೇಶ್ವರ್ ಬಾಬಾ ಎಂದೇ ಕರೆಯಲ್ಪಡುವ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಮನವಿಯಿಂದ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಾಗೂ ಸಾಂಸ್ಕೃತಿಕ ಚರ್ಚೆ ತೀವ್ರಗೊಂಡಿತ್ತು. ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ಬಂಗಾಳದ ಆಹಾರ ಮತ್ತು ಧಾರ್ಮಿಕ ಆಚರಣೆಗಳನ್ನು ಹೊರಗಿನಿಂದ ಯಾರೂ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಬಿಜೆಪಿ ನಾಯಕ ದಿಲೀಪ್ ಘೋಷ್ ಸೇರಿದಂತೆ ಪಕ್ಷದ ಇತರ ನಾಯಕರೂ ಬಂಗಾಳದ ಸ್ಥಳೀಯ ಸಂಪ್ರದಾಯಗಳನ್ನು ಉಲ್ಲೇಖಿಸಿ, ಶಾಸ್ತ್ರಿ ಅವರ ಅಭಿಪ್ರಾಯದಿಂದ ಅಂತರ ಕಾಯ್ದುಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್‌ನಲ್ಲಿ ಮೀನಿನ ಪ್ರಸಾದವನ್ನು ಸ್ವೀಕರಿಸಿರುವುದು ರಾಜಕೀಯವಾಗಿ ಹೆಚ್ಚಿನ ಗಮನ ಸೆಳೆದಿದೆ. ಬಂಗಾಳದ ಧಾರ್ಮಿಕ ಆಚರಣೆಗಳಲ್ಲಿ ಮೀನು ಸೇರಿದಂತೆ ವಿವಿಧ ಆಹಾರ ಪದ್ಧತಿಗಳಿಗೆ ಇರುವ ಸ್ಥಾನವನ್ನು ಈ ಘಟನೆ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ತಂದಿದೆ.


