Homeಮುಖಪುಟ9/11 ದಾಳಿಗೆ 25 ವರ್ಷ: 'ಭಯೋತ್ಪಾದನೆ ವಿರುದ್ಧದ ಯುದ್ಧ' ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

- Advertisement -
- Advertisement -

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ ‘ಭಯೋತ್ಪಾದನೆ ವಿರುದ್ಧದ ಜಾಗತಿಕ ಯುದ್ಧ’ (GWOT) ಹಾದುಬಂದ ಹಾದಿಯನ್ನು ಹಿಂತಿರುಗಿ ನೋಡಿದಾಗ, ಅನೇಕ ಜಾಗತಿಕ ವಿರೋಧಾಭಾಸಗಳು, ರಾಜಕೀಯ ವೈಪರೀತ್ಯಗಳು ಹಾಗೂ ದುರಂತಮಯ ಸತ್ಯಗಳು ಬಯಲಾಗುತ್ತವೆ.

2001ರ ಸೆಪ್ಟೆಂಬರ್ 11ರಂದು ದಾಳಿ ನಡೆದಾಗ ಇಡೀ ಜಗತ್ತು ಅಮೆರಿಕದ ಪರವಾಗಿ ಒಂದಾಗಿ ನಿಂತಿತ್ತು. ಆ ದಾಳಿಯನ್ನು ಕೇವಲ ಅಮೆರಿಕ ಮೇಲಿನ ದಾಳಿ ಎಂದು ನೋಡದೆ, ಒಂದು ಆಧುನಿಕ ಮತ್ತು ಮುಕ್ತ ಸಮಾಜದ ಮೌಲ್ಯಗಳ ಮೇಲಾದ ಭೀಕರ ಆಕ್ರಮಣ ಎಂದೇ ವಿಶ್ಲೇಷಿಸಲಾಗಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) 1368ನೇ ನಿರ್ಣಯ, ತನ್ನ ಇತಿಹಾಸದಲ್ಲೇ ಮೊದಲ ಬಾರಿ ‘ಆರ್ಟಿಕಲ್ 5’ ಅನ್ನು ಜಾರಿಗೆ ತಂದ ನ್ಯಾಟೋ (NATO) ಒಕ್ಕೂಟ, ಹಾಗೂ ಪ್ರಪಂಚದಾದ್ಯಂತ ವ್ಯಕ್ತವಾದ ಅಪ್ರತಿಮ ಬೆಂಬಲ—ಇವೆಲ್ಲವೂ ಅಮೆರಿಕಕ್ಕೆ ಜಾಗತಿಕ ಮಟ್ಟದಲ್ಲಿ ಬೆಂಬಲ ಮತ್ತು ಅನುಕಂಪವನ್ನು ತಂದುಕೊಟ್ಟಿದ್ದವು.

ಅಂದು ಅಮೆರಿಕ ಮುನ್ನಡೆಸಿದ ಈ ‘ಉಗ್ರ ನಿಗ್ರಹ ಸಮರ’ವು ಕೇವಲ ಒಂದು ದೇಶದ ಯುದ್ಧವಾಗಿರಲಿಲ್ಲ, ಬದಲಿಗೆ, ಜಿಹಾದಿ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದ ಮಧ್ಯಕಾಲೀನ ಧಾರ್ಮಿಕ ಚೌಕಟ್ಟಿನ ವಿರುದ್ಧದ ಜಾಗತಿಕ ಹೋರಾಟವಾಗಿತ್ತು. ದಾಳಿಯ ರೂವಾರಿ ಅಲ್-ಖೈದಾ, ಅದರ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಹಾಗೂ ಅವರಿಗೆ ಆಶ್ರಯ ನೀಡಿದ್ದ ಕಾಬೂಲ್‌ನ ತಾಲಿಬಾನ್ ಆಡಳಿತವನ್ನು ಅಮೆರಿಕ ನೇತೃತ್ವದ ಒಕ್ಕೂಟವು ಕಟ್ಟುನಿಟ್ಟಾಗಿ ಬೇಟೆಯಾಡಲು ತೊಡಗಿತು.

ಸುಮಾರು 3,000 ಜನರ ಮಾರಣಹೋಮಕ್ಕೆ ಕಾರಣವಾಗಿದ್ದ ಆ ದಾಳಿಯ ನಂತರ, ಅಮೆರಿಕದ ನೆಲದಲ್ಲಿ ಅಲ್-ಖೈದಾ ಮತ್ತೊಮ್ಮೆ ಯಾವುದೇ ಬೃಹತ್ ದಾಳಿ ನಡೆಸಲು ಸಾಧ್ಯವಾಗಲಿಲ್ಲ ಎಂಬುದು ಎಷ್ಟು ಸತ್ಯವೋ, ಅದೇ ರೀತಿ ಅಂತಹ ದಾಳಿಗಳನ್ನು ತಡೆಯಲೆಂದೇ ಸ್ಥಾಪಿಸಲಾದ ‘ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯೂರಿಟಿ’ (DHS) ಇಲಾಖೆಯು ಇಷ್ಟು ವರ್ಷಗಳಲ್ಲಿ ಮಾಡಿದ್ದೇನು ಎಂಬುದು ಈಗ ಎದ್ದಿರುವ ಅತಿದೊಡ್ಡ ಪ್ರಶ್ನೆಯಾಗಿದೆ.

ವಿದೇಶಿ ಉಗ್ರರನ್ನು ತಡೆಯಲು ಜನ್ಮತಳೆದ ಈ ಇಲಾಖೆ, ಇಂದು ಅಮೆರಿಕದ ಒಳಗಡೆಯೇ ತನ್ನದೇ ನಾಗರಿಕರ ವಿರುದ್ಧ ಅಸ್ತ್ರವಾಗಿ ಬಳಕೆಯಾಗುತ್ತಿರುವುದು ಮತ್ತು ಇಲಾಖೆಯನ್ನೇ ವಿಸರ್ಜಿಸಬೇಕು ಎಂಬ ಕೂಗು ಸ್ವತಃ ಅದರ ಮಾಜಿ ಸಚಿವರಿಂದಲೇ ಕೇಳಿಬರುತ್ತಿರುವುದು ಈ ಕಾಲು ಶತಮಾನದ ಅತಿ ದೊಡ್ಡ ವೈಪರೀತ್ಯವಾಗಿದೆ.

2001ರ ಸೆಪ್ಟೆಂಬರ್ 11ರ ದಾಳಿಯ ಮಾರನೇ ದಿನವೇ ಆಗಿನ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಅವರು ತಮ್ಮ ಗೃಹ ಭದ್ರತಾ ಪಡೆಯ ಅಧಿಕಾರಿಗಳ ಸಭೆ ಕರೆದು, “ಇನ್ನೊಮ್ಮೆ ಇಂತಹ ದುರಂತ ನಡೆಯಬಾರದು” (Never Again) ಎಂಬ ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಅದಕ್ಕೂ ಮುನ್ನ ಅಮೆರಿಕದಲ್ಲಿ ‘ಭಯೋತ್ಪಾದನೆ’ ಎಂದರೆ ವಿದೇಶಿ ನೆಲದಲ್ಲಿ ನಡೆಯುವ ಘಟನೆಗಳಾಗಿದ್ದವು. ಆದರೆ 9/11 ದಾಳಿಯು ಅಮೆರಿಕನ್ನರ ಸ್ವಂತ ನೆಲದ ಭದ್ರತೆಯ ಅರಿವನ್ನು ಸಂಪೂರ್ಣವಾಗಿ ಬದಲಾಯಿಸಿತು.

ಇದರ ಪರಿಣಾಮವಾಗಿ 2002ರಲ್ಲಿ 22 ವಿವಿಧ ಸರ್ಕಾರಿ ಸಂಸ್ಥೆಗಳನ್ನು ಒಟ್ಟುಗೂಡಿಸಿ, ಎರಡನೇ ಮಹಾಯುದ್ಧದ ನಂತರದ ಅತಿ ದೊಡ್ಡ ಸರ್ಕಾರಿ ಪುನಾರಚನೆಯಾಗಿ DHS ಜನ್ಮತಾಳಿತು. ಕರಾವಳಿ ಕಾವಲು ಪಡೆ, ಗಡಿ ಭದ್ರತೆ, ವಲಸೆ ವಿಭಾಗ ಮತ್ತು ಟಿಎಸ್‌ಎ (TSA) ಮುಂತಾದ ಭಿನ್ನ ಸಂಸ್ಕೃತಿಯ ಸಂಸ್ಥೆಗಳನ್ನು ಬಲವಂತವಾಗಿ ಒಂದೇ ಸೂರಿನಡಿ ತರಲಾಯಿತಾದರೂ, ಈ ಇಲಾಖೆ ಎಂದು ಸಹ ಶಿಸ್ತು ಮತ್ತು ಸ್ಪಷ್ಟ ಗುರಿಯನ್ನು ಹೊಂದಲು ಸಾಧ್ಯವಾಗಲಿಲ್ಲ.

DHS ಸ್ಥಾಪನೆಯ ಮೂಲ ಉದ್ದೇಶವೇ ವಿದೇಶಗಳಿಂದ ಬರುವ ಬೆದರಿಕೆಗಳನ್ನು ಗಡಿಯಲ್ಲಿಯೇ ತಡೆಯುವುದಾಗಿತ್ತು. ಆದರೆ, ಆರಂಭಿಕ ಮೂರು ಪ್ರಮುಖ ತಪ್ಪು ನಿರ್ಧಾರಗಳು ಈ ಸಂಸ್ಥೆಯನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದವು. ಮೊದಲನೆಯದಾಗಿ, 9/11 ದಾಳಿಯ ಮಾಹಿತಿಯನ್ನು ಕನೆಕ್ಟ್ ಮಾಡಲು ವಿಫಲವಾಗಿದ್ದ ಎಫ್‌ಬಿಐ (FBI) ಮತ್ತು ಸಿಐಎ (CIA) ಸಂಸ್ಥೆಗಳನ್ನು ಈ ಇಲಾಖೆಯಿಂದ ಹೊರಗಿಡಲಾಯಿತು.

ಎರಡನೆಯದಾಗಿ, ಈ ಹೊಸ ಇಲಾಖೆಗೆ ಭಯೋತ್ಪಾದನೆ ವಿರುದ್ಧ ತನಿಖೆ ನಡೆಸುವ ನೈಜ ಅಪರಾಧ ತನಿಖಾ ಅಧಿಕಾರವನ್ನೇ ನೀಡಲಿಲ್ಲ; ಅದು ಹೆಚ್ಚಾಗಿ ಎಫ್‌ಬಿಐ ವಶದಲ್ಲೇ ಉಳಿಯಿತು. ಮೂರನೆಯದಾಗಿ, ತೀವ್ರ ರಾಜಕೀಯ ಸೂಕ್ಷ್ಮತೆಯ ವಲಸೆ ಮತ್ತು ಗಡಿ ಭದ್ರತೆಯ ಜವಾಬ್ದಾರಿಯನ್ನು, ಪ್ರಕೃತಿ ವಿಕೋಪ ನಿರ್ವಹಣೆಯ ‘ಫೀಮಾ’ (FEMA) ಮತ್ತು ವಿಮಾನ ನಿಲ್ದಾಣ ಭದ್ರತೆಯಂತಹ ವಿಷಯಗಳ ಜೊತೆಗೆ ಒಂದೇ ಚೀಲಕ್ಕೆ ತುರುಕಲಾಯಿತು.

ಇದರ ಪರಿಣಾಮವಾಗಿ, ಕಳೆದ 25 ವರ್ಷಗಳಲ್ಲಿ ಅಮೆರಿಕದಲ್ಲಾದ ಆಂತರಿಕ ಬದಲಾವಣೆಗಳು ತೀರಾ ಆತಂಕಕಾರಿಯಾಗಿವೆ. ಇಂದು ದೇಶದ ಒಟ್ಟು ಫೆಡರಲ್ ಕಾನೂನು ಜಾರಿ ಅಧಿಕಾರಿಗಳಲ್ಲಿ ಶೇಕಡಾ 55 ರಿಂದ 60 ರಷ್ಟು ಜನರು DHS ಅಡಿಯಲ್ಲೇ ಇದ್ದಾರೆ. ಈ ಇಲಾಖೆಯ ಬಜೆಟ್ ಎಷ್ಟು ಬೃಹತ್ ಪ್ರಮಾಣದಲ್ಲಿದೆಯೆಂದರೆ, ಪ್ರಪಂಚದ ನಾಲ್ಕು ಬಲಶಾಲಿ ದೇಶಗಳನ್ನು ಹೊರತುಪಡಿಸಿ ಉಳಿದ ಹೆಚ್ಚಿನ ದೇಶಗಳ ಸೇನಾ ಬಜೆಟ್‌ಗಿಂತಲೂ ಇದು ದೊಡ್ಡದಾಗಿದೆ. ಆದರೆ, ಅಲ್-ಖೈದಾ ಅಥವಾ ಐಸಿಸ್ ಪ್ರಭಾವ ತಗ್ಗಿದ ನಂತರ, ಇತ್ತೀಚಿನ ದಶಕದಲ್ಲಿ ಅಮೆರಿಕಕ್ಕೆ ಎದುರಾಗಿರುವ ಪ್ರಮುಖ ಬೆದರಿಕೆ ಎಂದರೆ ಅವರದೇ ದೇಶದ ಆಂತರಿಕ ಉಗ್ರವಾದ ಹಾಗೂ ‘ಶ್ವೇತವರ್ಣೀಯ ಶ್ರೇಷ್ಠತಾವಾದಿ’ (White Supremacist) ಬಂದೂಕುಧಾರಿಗಳು. ಆದರೆ ಈ ಆಂತರಿಕ ಉಗ್ರರ ವಿರುದ್ಧ ಹೋರಾಡಲು DHS ಬಳಿ ಸೂಕ್ತ ತನಿಖಾ ವ್ಯವಸ್ಥೆಯೇ ಇಲ್ಲ.

ಅದೇ ಸಮಯದಲ್ಲಿ, ರಾಜಕೀಯ ಲಾಭಕ್ಕಾಗಿ ಮತ್ತು ಆಂತರಿಕವಾಗಿ ಪ್ರತಿಭಟಿಸುವ ಸ್ವದೇಶಿ ನಾಗರಿಕರೆ ವಿರುದ್ಧವೇ ಈ ಇಲಾಖೆಯನ್ನು ಬಳಸುವುದು ಹೆಚ್ಚಾಯಿತು. ಡೊನಾಲ್ಡ್ ಟ್ರಂಪ್ ಅವರ ಆಡಳಿತಾವಧಿಯಲ್ಲಿ ಪೋರ್ಟ್‌ಲ್ಯಾಂಡ್, ಚಿಕಾಗೋ, ಲಾಸ್ ಏಂಜಲೀಸ್‌ನಂತಹ ನಗರಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ಮತ್ತು ವೋಟರ್ ಫ್ರಾಡ್ ತನಿಖೆಯ ನೆಪದಲ್ಲಿ ICE ಮತ್ತು ಗಡಿ ಭದ್ರತಾ ಸಿಬ್ಬಂದಿಯನ್ನು ವ್ಯಾಪಕವಾಗಿ ನಿಯೋಜಿಸಲಾಯಿತು. ಇದೇ ಕಾರಣಕ್ಕೆ ಇಂದು ಅಮೆರಿಕದ ಅರ್ಧದಷ್ಟು ಜನಸಂಖ್ಯೆಯು ವಿದೇಶಿ ಭಯೋತ್ಪಾದಕರಿಗಿಂತ ಹೆಚ್ಚಾಗಿ ತಮ್ಮದೇ ದೇಶದ ICE ಮತ್ತು DHS ಸಂಸ್ಥೆಗಳಿಗೆ ಭಯಪಡುವ ವಾತಾವರಣ ನಿರ್ಮಾಣವಾಗಿದೆ. CBP ಸಂಸ್ಥೆಯ ಅಧಿಕಾರಿಗಳ ಪೈಕಿ ಸರಾಸರಿ ಪ್ರತಿ 36 ಗಂಟೆಗೆ ಒಬ್ಬ ಅಧಿಕಾರಿಯಂತೆ ಭ್ರಷ್ಟಾಚಾರ ಮತ್ತು ಅಪರಾಧ ಕೃತ್ಯಗಳಿಗಾಗಿ ಬಂಧನಕ್ಕೊಳಗಾಗುತ್ತಿರುವುದು ಇಲಾಖೆಯ ಒಳಗಿನ ಅಧೋಗತಿಯನ್ನು ತೋರಿಸುತ್ತದೆ.

ಈ ಎಲ್ಲಾ ಕಾರಣಗಳಿಂದಾಗಿ, ಬರಾಕ್ ಒಬಾಮ ಅವರ ಆಡಳಿತಾವಧಿಯಲ್ಲಿ DHS ಕಾರ್ಯದರ್ಶಿಯಾಗಿ (ಸಚಿವರಾಗಿ) ಸೇವೆ ಸಲ್ಲಿಸಿದ್ದ ಜೆಹ್ ಜಾನ್ಸನ್ ಅವರೇ ಈಗ, “ನಾನು ಸಚಿವನಾಗಿದ್ದ ಸಂಸ್ಥೆಯನ್ನು ವಿಸರ್ಜಿಸಿ, ಸಂಪೂರ್ಣವಾಗಿ ಪುನಾರಚನೆ ಮಾಡಬೇಕು” ಎಂದು ಬಹಿರಂಗವಾಗಿ ಪ್ರತಿಪಾದಿಸುತ್ತಿದ್ದಾರೆ. ರಾಜಕೀಯವಾಗಿ ತೀವ್ರ ವಿವಾದಾಸ್ಪದವಾಗಿರುವ ವಲಸೆ ವಿಷಯವು ಇಡೀ ಇಲಾಖೆಯ ಪ್ರಾಥಮಿಕ ಉದ್ದೇಶವನ್ನೇ ನುಂಗಿಹಾಕಿದೆ ಎಂದು ಬೇಸರ ವ್ಯಕ್ತಪಡಿಸುವ ಅವರು, ಸಾರ್ವಜನಿಕವಾಗಿ ‘DHS’ ಎಂದು ಬರೆದಿರುವ ಟೋಪಿ ಅಥವಾ ಬ್ಯಾಗ್ ಧರಿಸಲು ಈಗ ಮುಜುಗರಪಡುತ್ತಿದ್ದಾರೆ. FBI, ICE, TSA ಎಲ್ಲವನ್ನೂ ಒಟ್ಟುಗೂಡಿಸಿ ಒಂದು ‘ಸಾರ್ವಜನಿಕ ಭದ್ರತಾ ಇಲಾಖೆ’ ಮಾಡಬೇಕು ಮತ್ತು ‘ಫೀಮಾ’ ಸ್ವತಂತ್ರ ಸಂಸ್ಥೆಯಾಗಬೇಕು ಎಂಬುದು ಅವರ ಸಲಹೆಯಾಗಿದೆ.

ಅಮೆರಿಕದ ಆಂತರಿಕ ಸ್ಥಿತಿಗತಿಯಲ್ಲೂ ತೀವ್ರ ಬದಲಾವಣೆಗಳಾದವು. 2001ರ ದಾಳಿಯ ತಕ್ಷಣ ತಾತ್ಕಾಲಿಕ ಎಂಬಂತೆ ತರಲಾದ ‘ಪೇಟ್ರಿಯಾಟ್ ಆಕ್ಟ್’ ಶಾಸನವು 2020ರಲ್ಲಿ ಅಧಿಕೃತವಾಗಿ ಅಂತ್ಯಗೊಂಡರೂ, ಪ್ರಜೆಗಳ ಖಾಸಗಿತನವನ್ನು ಕಸಿಯುವ ಅದರ ಕಠಿಣ ನಿಯಮಗಳನ್ನು ಶಾಶ್ವತ ಕಾನೂನುಗಳಾಗಿ ಬದಲಾಯಿಸಲಾಯಿತು. 2002ರಲ್ಲಿ ರಚನೆಯಾದ ‘ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆ’ ಮತ್ತು 2003ರಲ್ಲಿ ಸ್ಥಾಪನೆಯಾದ ‘ಇಮಿಗ್ರೇಷನ್ ಆಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್’ (ICE) ಸಂಸ್ಥೆಗಳು ಇಂದು ವಲಸಿಗರಿಗಷ್ಟೇ ಅಲ್ಲದೆ, ಅಮೆರಿಕದ ಮೂಲ ನಾಗರಿಕರಿಗೂ ಭೀತಿ ಹುಟ್ಟಿಸುವಷ್ಟು ಶಕ್ತಿಶಾಲಿಯಾಗಿ ಬೆಳೆದುನಿಂತಿವೆ.

2001ರ ದಾಳಿಯ ನಂತರ ಅಮೆರಿಕ ‘ಅಂತ್ಯವಿಲ್ಲದ ಯುದ್ಧ’ (Forever War) ಎಂಬ ಪರಿಕಲ್ಪನೆಯನ್ನು ಸಾಂಸ್ಥಿಕಗೊಳಿಸಿತು. 2001ರಲ್ಲಿ ಅಮೆರಿಕನ್ ಕಾಂಗ್ರೆಸ್ ನೀಡಿದ ‘ಸೇನಾಪಡೆ ಬಳಕೆಯ ಅಧಿಕಾರ’ವನ್ನು (AUMF) ಬಳಸಿಕೊಂಡು ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಮಿಲಿಟರಿ ಕಾರ್ಯಾಚರಣೆ ನಡೆಸುವ ಅನಿಯಂತ್ರಿತ ಅಧಿಕಾರವನ್ನು ಅಧ್ಯಕ್ಷರ ಕೈಗೆ ನೀಡಲಾಯಿತು. 2021 ಮತ್ತು 2023ರ ನಡುವೆ ಅಮೆರಿಕವು ಕೌಂಟರ್-ಟೆರರಿಸಂ ಹೆಸರಿನಲ್ಲಿ ಬರೋಬ್ಬರಿ 78 ದೇಶಗಳಲ್ಲಿ ಸೈನಿಕ ಕಾರ್ಯಾಚರಣೆಗಳನ್ನು ನಡೆಸಿದೆ.

ಇಂತಹ ಸುದೀರ್ಘ ಯುದ್ಧಗಳನ್ನು ಜೀವಂತವಾಗಿಡಲು ಆಂತರಿಕ ಹಾಗೂ ಬಾಹ್ಯ ‘ಶತ್ರುಗಳನ್ನು’ ಸೃಷ್ಟಿಸುವುದು ಆಡಳಿತಶಾಹಿಗೆ ಅನಿವಾರ್ಯವಾಯಿತು. Pew Research Center ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, 2001ರಲ್ಲಿ ಶೇ. 25ರಷ್ಟಿದ್ದ ‘ಇಸ್ಲಾಂ ಹಿಂಸೆಯನ್ನು ಪ್ರಚೋದಿಸುತ್ತದೆ’ ಎಂಬ ಅಮೆರಿಕನ್ನರ ಅಭಿಪ್ರಾಯ, ಪ್ರಸಕ್ತ ವರ್ಷದಲ್ಲಿ ಶೇ. 51ಕ್ಕೆ ಏರಿಕೆಯಾಗಿದೆ. ಶೇ. 43ರಷ್ಟು ಜನರು ಮುಸ್ಲಿಮರ ದೇಶಭಕ್ತಿಯನ್ನೇ ಸಂಶಯದಿಂದ ನೋಡುತ್ತಿದ್ದಾರೆ.

ವಿಶ್ವದ ರಾಜಕೀಯ ಮೇಲಾಟಗಳು, ಅಧಿಕಾರದ ದಾಹ ಮತ್ತು ಸೈದ್ಧಾಂತಿಕ ದ್ವೇಷಗಳು ಕೊನೆಗೆ ತಲುಪುವುದು ಅಮಾಯಕರ ಮಾರಣಹೋಮಕ್ಕೇ ಎಂಬುದನ್ನು ಈ ಕಾಲು ಶತಮಾನ ತೋರಿಸಿಕೊಟಿದೆ. ಶಕ್ತಿಶಾಲಿ ದೇಶಗಳ ಆಡಳಿತಾತ್ಮಕ ಅಹಂ ಮತ್ತು ಉಗ್ರವಾದದ ರಕ್ತದಾಹಿ ಮನಸ್ಥಿತಿಗಳೆರಡೂ ಮುಖಾಮುಖಿಯಾದಾಗ ಬಲಿಪಶುಗಳಾಗುವುದು ಸದಾ ಸಾಮಾನ್ಯ ಪ್ರಜೆಗಳೇ.

ಅಮೆರಿಕ ಕೈಗೊಂಡ ‘ಭಯೋತ್ಪಾದನೆ ವಿರುದ್ಧದ ಜಾಗತಿಕ ಯುದ್ಧ’ ಮತ್ತು ತಂದಿತ್ತ ‘ಅಂತ್ಯವಿಲ್ಲದ ಯುದ್ಧಗಳು’ ಜಗತ್ತಿಗೆ ನೀಡಿದ್ದೇನು? ಪ್ರತಿಯಾಗಿ ಉಂಟಾದದ್ದು ಮತ್ತಷ್ಟು ಸಾವು, ಲಕ್ಷಾಂತರ ಜನರ ಸ್ಥಳಾಂತರ ಮತ್ತು ಇಡೀ ಮಧ್ಯಪ್ರಾಚ್ಯದ ಸರ್ವನಾಶ. ಹಿಂಸೆಯನ್ನು ಮತ್ತೊಂದು ಹಿಂಸೆಯಿಂದ, ದ್ವೇಷವನ್ನು ಮತ್ತೊಂದು ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಈ ಕಾಲು ಶತಮಾನದ ರಕ್ತಸಿಕ್ತ ಇತಿಹಾಸವೇ ಸಾಕ್ಷಿ

ಈ 25ನೇ ವರ್ಷದ ನೆನಪಿನ ನೆಪದಲ್ಲಾದರೂ ಜಗತ್ತಿನಾದ್ಯಂತ ಮಾನವ ಹಕ್ಕುಗಳು, ನಾಗರಿಕ ಸ್ವಾತಂತ್ರ್ಯ ಮತ್ತು ‘ಎಲ್ಲರಿಗೂ ನ್ಯಾಯ’ ಎಂಬ ಮೂಲಭೂತ ತತ್ವಗಳು ಹೇಗೆ ಹತೋಟಿಗೆ ಸಿಗದಂತೆ ಕುಸಿದುಬಿದ್ದವು ಎಂಬುದನ್ನು ಮರುಪರಿಶೀಲಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

‘ಈ ಪ್ರಕ್ರಿಯೆಯೇ ಶಿಕ್ಷೆಯಾಗಿದೆ’: ಉಮರ್ ಖಾಲಿದ್ ದೀರ್ಘ ಜೈಲುವಾಸದ ಬಗ್ಗೆ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ ತೀವ್ರ ಟೀಕೆ

ನವದೆಹಲಿ: ಮಾನವ ಹಕ್ಕುಗಳ ಕಾರ್ಯಕರ್ತ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ದೀರ್ಘಕಾಲದ ವಿಚಾರಣಾಪೂರ್ವ ಬಂಧನ, ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳ ವರ್ಷಗಳ ಜೈಲುವಾಸ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ...

‘ದೇಶವಿರೋಧಿ ಮನಸ್ಥಿತಿಯಲ್ಲ’: ಜಿ.ಎನ್. ಸಾಯಿಬಾಬಾ ಸ್ಮರಣೆ ಪ್ರಕರಣದಲ್ಲಿ ‘ಟಿಸ್’ ಮಾಜಿ ವಿದ್ಯಾರ್ಥಿಗೆ ಜಾಮೀನು!

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿ.ಎನ್. ಸಾಯಿಬಾಬಾ ಅವರ ಸ್ಮರಣಾರ್ಥ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಕ್ಯಾಂಪಸ್‌ನಲ್ಲಿ ನಡೆದ ಅನುಮತಿರಹಿತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ವಿದ್ಯಾರ್ಥಿ...

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...

ಹನೂರು ಶೂಟೌಟ್ ಪ್ರಕರಣ: ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು.!

ಕಾವೇರಿ ವನ್ಯಜೀವಿ ಅಭಯಾರಣ್ಯದ ಹನೂರು ವ್ಯಾಪ್ತಿಯಲ್ಲಿ ಮೂವರು ಮೃತಪಟ್ಟಿದ್ದ ವಿವಾದಾತ್ಮಕ ಗುಂಡಿನ ದಾಳಿ ಪ್ರಕರಣಕ್ಕೆ ಇದೀಗ ಕಾನೂನು ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮೂವರು ಅರಣ್ಯ ಸಿಬ್ಬಂದಿಗೆ ಕೊಳ್ಳೇಗಾಲದ ಮೊದಲ ಹೆಚ್ಚುವರಿ...

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...