ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಎದ್ದಿರುವ ವಿವಾದಕ್ಕೆ ಇದೀಗ ದೆಹಲಿ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿ ಸ್ಪಷ್ಟನೆ ನೀಡಿದ್ದು, ರಾಜೇಂದರ್ ನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಗೆ ಸೇರಲು ರಾಘವ್ ಚಾಧಾ ಅವರು ಆಗಸ್ಟ್ 26 ರಂದು ‘ಫಾರ್ಮ್ 6’ ಮೂಲಕ ಅರ್ಜಿ ಸಲ್ಲಿಸಿದ್ದರು. ನಿಯಮಾನುಸಾರ ಏಳು ದಿನಗಳ ಕಡ್ಡಾಯ ನೋಟಿಸ್ ಅವಧಿ ಮುಕ್ತಾಯಗೊಂಡ ನಂತರ ಸೆಪ್ಟೆಂಬರ್ 2 ರಂದು ನಿಯಮಾನುಸಾರ ಅವರ ಅರ್ಜಿಯನ್ನು ಅಂಗೀಕರಿಸಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಆದರೆ, ಆಗಸ್ಟ್ 31 ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಅಂತಿಮ ಪಟ್ಟಿ ನವೆಂಬರ್ 4 ರಂದು ಪ್ರಕಟಗೊಳ್ಳಬೇಕಿದೆ. ಹೀಗಿರುವಾಗ, ಕರಡು ಪಟ್ಟಿ ಪ್ರಕಟವಾದ ಮೇಲೆಯೂ ಮತ್ತು ಅಂತಿಮ ಪಟ್ಟಿ ಬರುವುದಕ್ಕಿಂತ ಮುಂಚೆಯೇ ರಾಘವ್ ಚಡ್ಡಾ ಅವರ ಹೆಸರು ದೆಹಲಿಯ ಪಟ್ಟಿಯಲ್ಲಿ ಹೇಗೆ ಕಾಣಿಸಿಕೊಂಡಿತು ಎಂಬ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯಾದ್ಯಂತ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆಯೇ, ಪಂಜಾಬ್ ಪಟ್ಟಿಯಿಂದ ಹೆಸರು ರದ್ದಾದ ಬೆನ್ನಲ್ಲೇ ಚಡ್ಡಾ ಅವರನ್ನು ಹಿಂಬಾಗಿಲ ಮೂಲಕ ದೆಹಲಿ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ (AAP) ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದೆ.
ಈ ವಿವಾದದ ಸಂದರ್ಭವನ್ನು ಗಮನಿಸಿದರೆ ಗೊಂದಲ ಇನ್ನಷ್ಟು ಹೆಚ್ಚಾಗುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರಣಕ್ಕೆ ದೆಹಲಿಯ ಮತದಾರರ ಪಟ್ಟಿಯನ್ನು ಜೂನ್ 16 ರಿಂದ ಆಗಸ್ಟ್ 31 ರವರೆಗೆ ಫ್ರೀಜ್ ಮಾಡಲಾಗಿತ್ತು. ಆಗಸ್ಟ್ 31 ರಂದು ಪ್ರಕಟವಾದ ಕರಡು ಪಟ್ಟಿಯಲ್ಲಿ ರಾಘವ್ ಚಡ್ಡಾ ಅವರ ಹೆಸರು ಇರಲಿಲ್ಲ. ಇತ್ತ ಆಗಸ್ಟ್ 13 ರಂದು ಪ್ರಕಟವಾದ ಪಂಜಾಬ್‌ನ ಕರಡು ಪಟ್ಟಿಯಲ್ಲೂ ಅವರ ಹೆಸರು ಇರಲಿಲ್ಲ. ಪಂಜಾಬ್ ಆಯೋಗದ ದಾಖಲೆಯಲ್ಲಿ ಅವರ ಹೆಸರಿನ ಮುಂದೆ “ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ” (Permanently Shifted) ಎಂದು ನಮೂದಿಸಲಾಗಿತ್ತು.
ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ, ಯಾವುದೇ ವ್ಯಕ್ತಿ ರಾಜ್ಯಸಭಾ ಸಂಸದರಾಗಿ ಮುಂದುವರಿಯಲು ದೇಶದ ಯಾವುದಾದರೂ ಒಂದು ಸಂಸದೀಯ ಕ್ಷೇತ್ರದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿರುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಪಟ್ಟಿಗೆ ಅವರ ಹೆಸರು ದಿಢೀರ್ ಸೇರ್ಪಡೆಯಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ದೆಹಲಿ ಸಿಇಒ ಕಚೇರಿ ನೀಡಿದ ಮಾಹಿತಿಯಂತೆ, ರಾಜೇಂದರ್ ನಗರ ಕ್ಷೇತ್ರದ ಮತದಾರರಾಗಲು ಚಡ್ಡಾ ಸಲ್ಲಿಸಿದ್ದ ‘ಫಾರ್ಮ್ 6’ ಅರ್ಜಿಯನ್ನು (ಸಂಖ್ಯೆ: U05039D6N2608261200000) ಪರಿಶೀಲಿಸಿ, ಮತದಾರರ ನೋಂದಣಾಧಿಕಾರಿಗಳು (ERO) ಅನುಮೋದಿಸಿದ್ದಾರೆ.

ದೆಹಲಿಯ ರಾಜೇಂದರ್ ನಗರ ಕ್ಷೇತ್ರದ ಬೂತ್ ಸಂಖ್ಯೆ 46 ರ ಮತದಾರರ ಪಟ್ಟಿಯ ಕ್ರಮಾಂಕ 747 ರಲ್ಲಿ ರಾಘವ್ ಚಾಧಾ ಅವರ ಹೆಸರು ದಾಖಲಾಗಿದೆ. ಆಗಸ್ಟ್ 31 ರಂದು ಪ್ರಕಟವಾದ ಅದೇ ಬೂತ್‌ನ ಕರಡು ಪಟ್ಟಿಯಲ್ಲಿ ಕೊನೆಯ ಕ್ರಮಾಂಕ 746 ಆಗಿತ್ತು. ಆ ಸಮಯದಲ್ಲಿ ಚಟ್ಟಾ ಹೆಸರು ಪಟ್ಟಿಯಲ್ಲಿ ಇರಲಿಲ್ಲ. ಆನ್‌ಲೈನ್ ಡೇಟಾಬೇಸ್‌ನಲ್ಲಿ ‘ಫಾರ್ಮ್ 6’ ಅನುಮೋದನೆಗೊಂಡ ತಕ್ಷಣವೇ ಹೆಸರು ಕರಡು ಪಟ್ಟಿಯ ಕೊನೆಯ ಸಂಖ್ಯೆಯ ಮುಂದುವರಿದ ಭಾಗವಾಗಿ ತಕ್ಷಣವೇ ಸಿಸ್ಟಮ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಎಸ್‌ಐಆರ್ ಮಾರ್ಗದರ್ಶಿ ಸೂತ್ರಗಳ ಪ್ರಕಾರವೂ ಹೊಸದಾಗಿ ಸೇರ್ಪಡೆಯಾಗುವ ಹೆಸರುಗಳಿಗೆ ಕೊನೆಯ ಸರಣಿ ಸಂಖ್ಯೆಯ ನಂತರದ ಸಂಖ್ಯೆಯನ್ನು ನೀಡಲಾಗುತ್ತದೆ, ಹೀಗಾಗಿ ಇದು ಸಿಸ್ಟಮ್‌ನಲ್ಲಿ ತಕ್ಷಣವೇ ಗೋಚರಿಸುತ್ತಿದೆ ಹೊರತು ಕರಡು ಪಟ್ಟಿಯಲ್ಲಿ ಇರಲಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಆದರೆ, ಚುನಾವಣಾ ಆಯೋಗದ ಈ ಸ್ಪಷ್ಟನೆಯನ್ನು ಆಮ್ ಆದ್ಮಿ ಪಾರ್ಟಿ ತಳ್ಳಿಹಾಕಿದೆ. ಕೇಂದ್ರ ಸರ್ಕಾರದ ರಾಜಕೀಯ ಒತ್ತಡಕ್ಕೆ ಮಣಿದು ಆಯೋಗ ಈ ಕೆಲಸ ಮಾಡಿದೆ ಎಂದು ಆರೋಪಿಸಿರುವ ಎಎಪಿ ಮಾಧ್ಯಮ ಉಸ್ತುವಾರಿ ಅನುರಾಗ್ ಧಂಡಾ, ಚಡ್ಡಾ ಅವರು ಸಲ್ಲಿಸಿರುವ ಫಾರ್ಮ್ 6 ಅರ್ಜಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ಎಎಪಿ ಮತ್ತು ಚುನಾವಣಾ ಆಯೋಗದ ನಡುವೆ ಈ ವಿಷಯವು ಮತ್ತೊಂದು ಸಂಘರ್ಷಕ್ಕೆ ಕಾರಣವಾಗಿದ್ದು, ಎಲ್ಲರ ಕಣ್ಣುಗಳು ಇದೀಗ ನವೆಂಬರ್ 4 ರಂದು ಪ್ರಕಟವಾಗಲಿರುವ ದೆಹಲಿಯ ಅಂತಿಮ ಮತದಾರರ ಪಟ್ಟಿಯ ಮೇಲಿದೆ.


