Homeಮುಖಪುಟಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

- Advertisement -
- Advertisement -

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿದ್ದು, 6.6 ಕೋಟಿಗೂ ಹೆಚ್ಚು ನೋಂದಣಿಗಳನ್ನು ನಿರ್ವಹಿಸಿದೆ. ಕೇವಲ 2026ರ ಒಂದೇ ವರ್ಷದಲ್ಲೇ 12 ಪರೀಕ್ಷೆಗಳನ್ನು ನಡೆಸಿ 65 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ನೋಂದಣಿಯನ್ನು ಕೈಗೆತ್ತಿಕೊಂಡಿದೆ.

ಪಾರದರ್ಶಕ ಮತ್ತು ನ್ಯಾಯಸಮ್ಮತ ಪರೀಕ್ಷೆಗಳನ್ನು ನಡೆಸಿ ಅರ್ಹ ವಿದ್ಯಾರ್ಥಿಗಳನ್ನು ಅತ್ಯುತ್ತಮ ಸಂಸ್ಥೆಗಳಿಗೆ ತಲುಪಿಸುವುದೇ ತನ್ನ ಮೂಲ ಗುರಿ ಎಂದು ಎನ್‌ಟಿಎ ಹೇಳಿಕೊಳ್ಳುತ್ತದೆ. ಆದರೆ, ಮಾಹಿತಿ ಹಕ್ಕು ಕಾಯ್ದೆ, ಸಂಸತ್ತಿನ ಅಧಿಕೃತ ವರದಿಗಳು ಮತ್ತು ಸಂಸದೀಯ ಕಾಯಂ ಸಮಿತಿಗಳ ಸಂಶೋಧನೆಗಳು ತೆರೆದಿಡುವ ಸತ್ಯವೇ ಬೇರೆಯಾಗಿದೆ. ಹಳಹಿಡಿದ ಆಡಳಿತ ವ್ಯವಸ್ಥೆ, ಕಾಗದದಲ್ಲಷ್ಟೇ ಉಳಿದ ನಿಯಮಗಳು, ಖಾಲಿ ಹುದ್ದೆಗಳು ಮತ್ತು ಸಂಸತ್ತಿಗೆ ನೀಡುವ ಮಾಹಿತಿಗೂ ಆರ್‌ಟಿಐ ಮೂಲಕ ಸಿಗುವ ಉತ್ತರಕ್ಕೂ ಇರುವ ಅಂತರವನ್ನು ಈ ದಾಖಲೆಗಳು ಸ್ಪಷ್ಟವಾಗಿ ಬಯಲುಮಾಡುತ್ತಿವೆ.

ಈ ಬೃಹತ್ ಸಂಸ್ಥೆಯ ಸರ್ವೋಚ್ಚ ಆಡಳಿತ ಮಂಡಳಿಯಾದ ‘ಗವರ್ನಿಂಗ್ ಬಾಡಿ’ಯ ಕಾರ್ಯವೈಖರಿಯೇ ಸಂಸ್ಥೆಯ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಆರ್‌ಟಿಐ ನೀಡಿದ ಮಾಹಿತಿಯ ಪ್ರಕಾರ, 2024ರ ಜನವರಿಯಿಂದ 2026ರ ಜೂನ್‌ವರೆಗಿನ 30 ತಿಂಗಳ ಸುದೀರ್ಘ ಅವಧಿಯಲ್ಲಿ ಈ ಆಡಳಿತ ಮಂಡಳಿ ಸಭೆ ಸೇರಿದ್ದು ಕೇವಲ ಎರಡೇ ಎರಡು ಬಾರಿ. ಲಕ್ಷಾಂತರ ಯುವಕರ ಭವಿಷ್ಯವನ್ನು ಬೀದಿಗೆ ತಳ್ಳಿದ ನೀಟ್ (NEET-UG) ಪರೀಕ್ಷೆ ರದ್ದಾದ ನಂತರ ಮತ್ತು ದೇಶಾದ್ಯಂತ ವಿದ್ಯಾರ್ಥಿ ಪ್ರತಿಭಟನೆಗಳು ಭುಗಿಲೆದ್ದು ಶಿಕ್ಷಣ ಸಚಿವರೇ ರಾಜೀನಾಮೆ ನೀಡುವಂತ ವಾತಾವರಣ ಸೃಷ್ಟಿಯಾದಾಗಲೂ ಈ ಆಡಳಿತ ಮಂಡಳಿ ಒಂದೇ ಒಂದು ಅತ್ಯಂತ ತುರ್ತು ಸಭೆಯನ್ನೂ ನಡೆಸಲಿಲ್ಲ. ಅದಕ್ಕಿಂತಲೂ ಮಿಗಿಲಾಗಿ, ಈ ಸಭೆಗಳಲ್ಲಿ ಏನು ಚರ್ಚಿಸಲಾಯಿತು ಎನ್ನುವ ಸಭೆಯ ನಡಾವಳಿಗಳನ್ನು (Minutes) ಕೇಳಿದರೆ, ಇದು ಪರೀಕ್ಷೆಯ ಗೌಪ್ಯತೆಗೆ ಧಕ್ಕೆ ತರುತ್ತದೆ ಎಂಬ ನೆಪವೊಡ್ಡಿ ಆರ್‌ಟಿಐ ಅಡಿಯಲ್ಲಿ ಮಾಹಿತಿ ನೀಡಲು ಎನ್‌ಟಿಎ ಸಂಪೂರ್ಣವಾಗಿ ನಿರಾಕರಿಸಿದೆ.

ಪರೀಕ್ಷಾ ಅಕ್ರಮ ಮತ್ತು ಪೇಪರ್ ಸೋರಿಕೆಗಳನ್ನು ತಡೆಯಲು ಸರ್ಕಾರ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ-2024’ ಅನ್ನು ಜಾರಿಗೆ ತಂದಿದ್ದರೂ, ಅದರ ಅನುಷ್ಠಾನದಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಆರ್‌ಟಿಐ ಮೂಲಕ ಕೇಳಲಾದ ಪ್ರಶ್ನೆಗಳಿಗೆ, ಅಕ್ರಮ ಪ್ರಕರಣಗಳ ಬಗ್ಗೆ ತಾನು ವಿವರವಾದ ದಾಖಲೆಗಳನ್ನೇ ನಿರ್ವಹಿಸುತ್ತಿಲ್ಲ ಎಂದು ಎನ್‌ಟಿಎ ಉತ್ತರಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಾಗ ಕಡ್ಡಾಯವಾಗಿ ಭರ್ತಿ ಮಾಡಬೇಕಾದ ದಾಖಲೆಗಳನ್ನು ಹಸ್ತಾಂತರಿಸಲು ತನಿಖೆಯ ನೆಪ ಹೇಳಿ ನಿರಾಕರಿಸಲಾಗಿದೆ. ಸರ್ಕಾರ ಈಗ ಅಕ್ರಮ ಎಸಗುವವರಿಗೆ 10 ಕೋಟಿ ರೂಪಾಯಿ ದಂಡ ಮತ್ತು 10 ವರ್ಷಗಳ ಜೈಲು ಶಿಕ್ಷೆಯಂತಹ ಕಠಿಣ ಕಾನೂನು ತಂದಿರಬಹುದು, ಆದರೆ ಅಕ್ರಮಗಳನ್ನು ತಡೆಯಬೇಕಾದ ಮತ್ತು ದಾಖಲಿಸಬೇಕಾದ ಸಂಸ್ಥೆಯೇ ಮಾಹಿತಿಯನ್ನು ಮುಚ್ಚಿಡುತ್ತಿರುವಾಗ ಈ ಕಠಿಣ ಕಾನೂನುಗಳು ಕೇವಲ ಕಾಗದದ ಮೇಲಷ್ಟೇ ಉಳಿಯುತ್ತವೆ.

ಎನ್‌ಟಿಎ ಆರ್‌ಟಿಐಗೆ ನೀಡುವ ಮಾಹಿತಿಗೂ ಸಂಸತ್ತಿನ ದಾಖಲೆಗಳಿಗೂ ಅಂತರವಿರುವುದು ಮತ್ತೊಂದು ಆತಂಕಕಾರಿ ಸಂಗತಿಯಾಗಿದೆ. 2024 ರಿಂದ 2026ರ ನಡುವೆ ರದ್ದುಗೊಂಡ ಅಥವಾ ಮುಂದೂಡಲ್ಪಟ್ಟ ಪರೀಕ್ಷೆಗಳ ಪಟ್ಟಿ ಕೇಳಿದಾಗ ಎನ್‌ಟಿಎ ನೀಡಿದ್ದು ಕೇವಲ ಎರಡು ಪರೀಕ್ಷೆಗಳ ಹೆಸರು ಮಾತ್ರ. ಆದರೆ ಸಂಸದೀಯ ಕಾಯಂ ಸಮಿತಿಯ ವರದಿಯ ಪ್ರಕಾರ, 2024ರಲ್ಲಿ ಎನ್‌ಟಿಎ ನಡೆಸಿದ 14 ಪ್ರಮುಖ ಪರೀಕ್ಷೆಗಳಲ್ಲಿ ಯುಜಿಸಿ-ನೆಟ್, ಸಿಎಸ್ಐಆರ್-ನೆಟ್, ನೀಟ್-ಪಿಜಿ ಮುಂದೂಡಲ್ಪಟ್ಟಿದ್ದವು, ನೀಟ್-ಯುಜಿ ಪೇಪರ್ ಸೋರಿಕೆಯಾಗಿತ್ತು ಮತ್ತು ಸಿಯುಇಟಿ ಪರೀಕ್ಷೆಯ ಫಲಿತಾಂಶಗಳು ಅಸಹಜವಾಗಿ ವಿಳಂಬವಾಗಿದ್ದವು. ಅಲ್ಲದೆ, ಜೆಇಇ ಮೇನ್ 2025ರ ಪರೀಕ್ಷೆಯ ಅಂತಿಮ ಕೀಲಿಕೈನಲ್ಲಿ ಸಾಲು ಸಾಲು ತಪ್ಪುಗಳಿದ್ದುದರಿಂದ 12 ಪ್ರಶ್ನೆಗಳನ್ನೇ ಹಿಂಪಡೆಯಲಾಗಿತ್ತು. ಹೀಗೆ ಸಂಸತ್ತಿನ ಮುಂದೆ ಬಯಲಾದ ವೈಫಲ್ಯಗಳನ್ನು ಆರ್‌ಟಿಐ ಉತ್ತರಗಳಲ್ಲಿ ಮುಚ್ಚಿಡುವ ಪ್ರಯತ್ನವನ್ನು ಎನ್‌ಟಿಎ ಮಾಡಿದೆ.

ಶಿಕ್ಷಣ ಕ್ಷೇತ್ರವನ್ನು ‘ಪರೀಕ್ಷಾ ಮಾಫಿಯಾ’ದಿಂದ ಮುಕ್ತಗೊಳಿಸುತ್ತೇವೆ ಎಂದು ಅಂದಿನ ಶಿಕ್ಷಣ ಸಚಿವರು ನೀಡಿದ್ದ ಭರವಸೆಗಳು ಸಹ ಅನುಷ್ಠಾನಕ್ಕೆ ಬಂದಿಲ್ಲ. ಪೇಪರ್ ಸೋರಿಕೆ ಮತ್ತು ಅಕ್ರಮಗಳಲ್ಲಿ ಭಾಗಿಯಾಗಿ ಕಪ್ಪುಪಟ್ಟಿಗೆ ಸೇರಿದ ಖಾಸಗಿ ಕಂಪನಿಗಳು ಮತ್ತೆ ಬೇರೆ ಹೆಸರುಗಳಲ್ಲಿ ಗುತ್ತಿಗೆ ಪಡೆಯುವುದನ್ನು ತಡೆಯಲು ದೇಶಾದ್ಯಂತ ಒಂದೇ ‘ಏಕೀಕೃತ ಕಪ್ಪುಪಟ್ಟಿ’ (Blacklist) ತಯಾರಿಸಬೇಕೆಂದು ಸಂಸದೀಯ ಸಮಿತಿ ಶಿಫಾರಸು ಮಾಡಿತ್ತು. ಆದರೆ 2026ರ ಜೂನ್ ವರೆಗೂ ಅಂತಹ ಯಾವುದೇ ಕಪ್ಪುಪಟ್ಟಿಯನ್ನು ಶಿಕ್ಷಣ ಸಚಿವಾಲಯ ತಯಾರಿಸಿಯೇ ಇಲ್ಲ ಎಂಬುದು ಆರ್‌ಟಿಐನಿಂದ ತಿಳಿದುಬಂದಿದೆ. ಹಾಗೆಯೇ ಎನ್‌ಟಿಎ ಪ್ರತಿವರ್ಷ ಸಂಸತ್ತಿಗೆ ತನ್ನ ಪೂರ್ಣಪ್ರಮಾಣದ ‘ವಾರ್ಷಿಕ ವರದಿ’ ಸಲ್ಲಿಸಬೇಕೆಂಬ ಆದೇಶವಿದ್ದರೂ, ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ವರದಿ ಲಭ್ಯವಿಲ್ಲ.

ಇನ್ನೊಂದೆಡೆ, ಅಕ್ರಮಗಳ ಹಿನ್ನೆಲೆಯಲ್ಲಿ 47 ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿರುವುದಾಗಿ ಸರ್ಕಾರ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಆದರೆ ಆಂತರಿಕವಾಗಿ ಸಂಸ್ಥೆಯಲ್ಲಿ ಕೆಲಸ ಮಾಡಲು ಆಡಳಿತಾತ್ಮಕ ಸಾಮರ್ಥ್ಯವೇ ಇಲ್ಲದಿರುವುದು ದೊಡ್ಡ ದುರಂತ. ಎನ್‌ಟಿಎಗೆ ಅನುಮೋದನೆಯಾಗಿರುವ ಒಟ್ಟು ಖಾಯಂ ಹುದ್ದೆಗಳ ಸಂಖ್ಯೆ ಕೇವಲ 39, ಇದರಲ್ಲಿ ಶೇಕಡಾ 38ರಷ್ಟು ಹುದ್ದೆಗಳು ಖಾಲಿಯಿವೆ. ಇಡೀ ಪರೀಕ್ಷಾ ವ್ಯವಸ್ಥೆಯನ್ನು ಉಸ್ತುವಾರಿ ನೋಡಿಕೊಳ್ಳಬೇಕಾದ 13 ಹಿರಿಯ ನಿದೇಶಕರ (Director) ಹುದ್ದೆಗಳಲ್ಲಿ 9 ಹುದ್ದೆಗಳು ಖಾಲಿಯಿದ್ದು, ಕೇವಲ 4 ನಿರ್ದೇಶಕರಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ ಶೇಕಡಾ 70ರಷ್ಟು ಹಿರಿಯ ಹುದ್ದೆಗಳು ಖಾಲಿಯಿದ್ದರೂ, ಕೋಟ್ಯಂತರ ಮಕ್ಕಳ ಭವಿಷ್ಯವನ್ನು ತತ್ಕಾಲಿಕ ನೌಕರರ ಹೆಗಲಿಗೆ ಹಾಕಿ ಸಂಸ್ಥೆ ನಡೆಸಲಾಗುತ್ತಿದೆ.

ವಿಪರ್ಯಾಸವೆಂದರೆ, ಕೆಲಸ ಮಾಡಲು ನೌಕರರಿಲ್ಲದೆ ಒದ್ದಾಡುತ್ತಿರುವ ಎನ್‌ಟಿಎ ಬಳಿ ಹಣಕ್ಕೇನೂ ಕೊರತೆಯಿಲ್ಲ. ಕಳೆದ ಐದು ವರ್ಷಗಳಲ್ಲಿ (2019 ರಿಂದ 2024) ಎನ್‌ಟಿಎ ತಾನು ಖರ್ಚು ಮಾಡಿದ್ದಕ್ಕಿಂತ ಬರೋಬ್ಬರಿ 520 ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡಿ ಲಾಭದಲ್ಲಿದೆ. ವಿದ್ಯಾರ್ಥಿಗಳಿಂದ ಸಾವಿರಾರು ಕೋಟಿ ರೂಪಾಯಿ ಅರ್ಜಿ ಶುಲ್ಕ ಸಂಗ್ರಹಿಸುವ ಈ ಸಂಸ್ಥೆಯು, ಆ ಹೆಚ್ಚುವರಿ ಹಣವನ್ನು ಸ್ವಂತ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಅಥವಾ ಖಾಯಂ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಬಳಸದೆ ಬ್ಯಾಂಕ್‌ನಲ್ಲಿ ಬಡ್ಡಿ ಕಾಯುತ್ತಾ ಕುಳಿತಿದೆ.

ಈಗ ನೀಟ್-2026ರ ಹೊಸ ಪೇಪರ್ ಸೋರಿಕೆಯ ದುರಂತದ ನಂತರ ಪ್ರಧಾನಿಯವರು ನಂದನ್ ನಿಲೇಕಣಿ ನೇತೃತ್ವದಲ್ಲಿ ಎನ್‌ಟಿಎ ಸುಧಾರಣೆಗೆ ಮತ್ತೊಂದು ಹೊಸ ತಜ್ಞರ ಸಮಿತಿಯನ್ನು ಘೋಷಿಸಿದ್ದಾರೆ. ಆದರೆ, ಕೇವಲ ಎರಡು ವರ್ಷಗಳ ಹಿಂದಷ್ಟೇ (2024ರಲ್ಲಿ) ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್ ನೇತೃತ್ವದಲ್ಲೂ ಇದೇ ರೀತಿಯ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ ನೀಡಿರುವ ಶಿಫಾರಸುಗಳ ಪೈಕಿ ಎಷ್ಟು ಜಾರಿಯಾಗಿವೆ, ಎಷ್ಟು ಬಾಕಿಯಿವೆ ಎನ್ನುವುದಕ್ಕೆ ಉತ್ತರವೇ ಇಲ್ಲ. ಹಳೆಯ ಸಮಿತಿಯ ವರದಿಗಳನ್ನೇ ಅನುಷ್ಠಾನಗೊಳಿಸದೆ, ಹೊಸ ಹೊಸ ಸಮಿತಿಗಳನ್ನು ರಚಿಸುವುದು ಕೇವಲ ಕಾಲಹರಣದ ತಂತ್ರವೇ ಎಂಬ ಪ್ರಶ್ನೆ ಮೂಡುತ್ತದೆ.

ಶಿಕ್ಷಣ ಸಚಿವರ ರಾಜೀನಾಮೆ, ಕಠಿಣ ಕಾನೂನುಗಳ ಜಾರಿ, ಹೊಸ ತನಿಖಾ ಸಮಿತಿಗಳ ರಚನೆ ಇವೆಲ್ಲವೂ ಕೇವಲ ಮೇಲ್ನೋಟದ ತಾತ್ಕಾಲಿಕ ಉಪಶಮನಗಳಷ್ಟೇ. ಅಪರೂಪಕ್ಕೊಮ್ಮೆ ಸಭೆ ಸೇರುವ ಆಡಳಿತ ಮಂಡಳಿ, ಆರ್‌ಟಿಐನಿಂದ ಸತ್ಯ ಮರೆಮಾಚುವ ರಹಸ್ಯ ಧೋರಣೆ, ಖಾಲಿಯಿರುವ ಉನ್ನತ ಹುದ್ದೆಗಳು ಹಾಗೂ ಕೋಟ್ಯಂತರ ರೂಪಾಯಿ ನಿಧಿ ಇದ್ದರೂ ಮೂಲಸೌಕರ್ಯ ಅಭಿವೃದ್ಧಿಪಡಿಸದ ವೈಫಲ್ಯ – ಇವು ಎನ್‌ಟಿಎ ಎನ್ನುವ ಸಂಸ್ಥೆಯ ರೋಗಗ್ರಸ್ಥ ವ್ಯವಸ್ಥೆಯಾಗಿದೆ. ಈ ಸಾಂಸ್ಥಿಕ ಲೋಪಗಳನ್ನು ತಳಮಟ್ಟದಿಂದ ಸರಿಪಡಿಸದಿದ್ದರೆ, ಕೇವಲ ಕಾನೂನುಗಳನ್ನು ಕಠಿಣಗೊಳಿಸುವುದರಿಂದಾಗಲಿ ಅಥವಾ ಹೊಸ ಸಮಿತಿಗಳನ್ನು ಮಾಡುವುದರಿಂದಾಗಲಿ ಮುಂದಿನ ದಿನಗಳಲ್ಲಿ ಮತ್ತೆ ಮತ್ತೆ ಪೇಪರ್ ಸೋರಿಕೆಯಾಗುವುದನ್ನು ಮತ್ತು ಯುವಜನರ ಭವಿಷ್ಯ ಹಾಳಾಗುವುದನ್ನು ತಡೆಯಲು ಸಾಧ್ಯವಿಲ್ಲ.

Inputs: The Quint

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...