Homeಅಂಕಣಗಳು’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

- Advertisement -
- Advertisement -

ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ ಸಮ್ಮೇಳನಗಳನ್ನು ಆಯೋಜಿಸುವುದು ನಿಜಕ್ಕೂ ಒಳ್ಳೆಯ ಸಂಗತಿ. ಇಂತಹ ಸಮ್ಮೇಳನ ಯಾವಾಗಲೋ ನಡೆಯಬೇಕಿತ್ತು. ತಡವಾದರೂ ಈಗ ನಡೆಯುತ್ತಿರುವುದು ಸಂತೋಷದ ಸಂಗತಿಯೇ ಸರಿ. ನನ್ನ ಮಂತ್ರಿಮಂಡಲದಲ್ಲಿ ಬೇರೆಬೇರೆ ರಾಜ್ಯಗಳಿಗೆ ಸೇರಿದ ಅನೇಕ ಮಂತ್ರಿಗಳಿದ್ದಾರೆ. ಅವರನ್ನು ಹೀಗಳೆಯುವುದು ನನ್ನ ಉದ್ದೇಶವಲ್ಲ, ಅವರು ದೆಹಲಿಯಿಂದ ತಮ್ಮ ರಾಜ್ಯಕ್ಕೆ, ತಮ್ಮ ರಾಜ್ಯದಿಂದ ದೆಹಲಿಗೆ ಓಡಾಡುತ್ತಲೇ ಇರುತ್ತಾರೆ. ಅವರು ಕೆಲವು ಸಭೆಗಳನ್ನು ಅತ್ಯಂತ ನೀರಸವಾಗಿ ರೂಪಿಸುತ್ತಾರೆ. ಇಂತಹ ಸಭೆಗಳು ನಿರ್ವಿಕಾರವಾಗಿ ನಡೆದು ಮುಗಿದುಹೋಗುತ್ತವೆ. ಸಭೆಗಳನ್ನು ಹೇಗೆ ರಚನಾತ್ಮಕವಾಗಿ ರೂಪಿಸಬೇಕು ಎಂಬುದರ ಕುರಿತು ಇವರು ಯೋಚಿಸುವುದಿಲ್ಲ. ಇಂತಹ ಜನರು ಈಗ ಅಧಿಕ ಸಂಖ್ಯೆಯಲ್ಲಿದ್ದಾರೆ. ಸಮ್ಮೇಳನಗಳನ್ನು ರೂಪಿಸುವಾಗ ಎಚ್ಚರಿಕೆ ವಹಿಸುವುದು, ಅವು ಹೆಚ್ಚು ರಚನಾತ್ಮಕವಾಗಿರುವಂತೆ ನೋಡಿಕೊಳ್ಳುವುದು ಅಗತ್ಯವೆಂದು ನನಗೆ ತೋರುತ್ತದೆ. ಆದರೆ ಪ್ರಸ್ತುತ ಈ ಸಮ್ಮೇಳನವು ನಿಜಕ್ಕೂ ಒಳ್ಳೆಯ ಆಶಯಗಳಿಂದಲೇ ಆಯೋಜನೆಗೊಂಡಿದೆ.

ನನಗೆ ಆಶ್ಚರ್ಯವಾಗುವ ಒಂದು ಸಂಗತಿ ಏನೆಂದರೆ, ಆದಿವಾಸಿಗಳ ಕುರಿತು ಮಾತನಾಡುವಾಗ, ನಾವೆಲ್ಲ ಒಂದೇ ಬಗೆಯ ಪೂರ್ವಾಗ್ರಹಗಳಿಂದ ಯೋಚಿಸುತ್ತಿರುತ್ತೇವೆ. ನನಗೆ ಅನ್ನಿಸುವ ಮಟ್ಟಿಗೆ, ನಾವೆಲ್ಲ ಬುಡಕಟ್ಟು ಜನರೇ ಆಗಿದ್ದೇವೆ. ನಾವು ದೆಹಲಿಯಲ್ಲಿಯೇ ವಾಸವಾಗಿರಲಿ, ಮದ್ರಾಸ್‌ನಲ್ಲಿರಲಿ, ಬಾಂಬೆ ಅಥವಾ ಕಲ್ಕತ್ತಾ ಇಲ್ಲವೆ ಗುಡ್ಡಗಾಡಲ್ಲಿರಲಿ, ಬಯಲುಸೀಮೆಯಲ್ಲೇ ಇರಲಿ ನಾವೆಲ್ಲ ಬುಡಕಟ್ಟುಗಳೇ ಆಗಿದ್ದೇವೆ. ಗುಡ್ಡಗಾಡು ಜನರನ್ನು ಆದಿಮ ಜನಾಂಗಗಳೆಂದು, ನಮ್ಮನ್ನು ನಾವು ಅತ್ಯಂತ ಮುಂದುವರಿದ ನಾಗರಿಕ ಪ್ರಜೆಗಳೆಂದು ಕರೆದುಕೊಳ್ಳುವುದು ನನ್ನ ಪ್ರಕಾರ ಸರಿಯಾದ ಕ್ರಮವಲ್ಲ. ಆದಿವಾಸಿಗಳ ಮತ್ತು ನಮ್ಮ ನಡುವೆ ಗುರುತಿಸಬಹುದಾದ ಕೆಲವು ವ್ಯತ್ಯಾಸಗಳಿರಬಹುದು. ಉದಾಹರಣೆಗೆ ಪಂಜಾಬಿನ ಜನತೆಗೂ ಮದ್ರಾಸಿನ ಜನತೆಗೂ ಭಿನ್ನತೆಗಳಿವೆ ನಿಜ. ಗುಡ್ಡಗಾಡುಗಳಲ್ಲಿ ಬದುಕುವ ಸಮುದಾಯಗಳಿಗೂ ಮತ್ತು ಬಯಲುಸೀಮೆಯಲ್ಲಿ ಬದುಕುವ ಸಮುದಾಯಗಳಿಗೂ ಬದುಕುವ ರೀತಿಗಳಲ್ಲಿ ಅನೇಕ ವ್ಯತ್ಯಾಸಗಳಿವೆ. ಆಯಾ ಜನಸಮುದಾಯಗಳು ವಾಸಿಸುವ ಪ್ರದೇಶ ಮತ್ತು ಅಲ್ಲಿನ ಹವಾಮಾನಗಳಿಗೆ ತಕ್ಕಂತೆ ಅಲ್ಲಿನ ಸಮುದಾಯಗಳ ಆಹಾರವ್ಯವಸ್ಥೆ, ಉಡುಗೆತೊಡುಗೆ ಮತ್ತು ಜೀವನವಿಧಾನಗಳಲ್ಲಿ ಅನೇಕ ವ್ಯತ್ಯಾಸಗಳು ಇದ್ದೇ ಇರುತ್ತವೆ.

ಬೋನಿಲಿ ಖೋಂಗಮೆನ್

ಈ ತರಹದ ವ್ಯತ್ಯಾಸಗಳು ಅನಿವಾರ್‍ಯ ಮತ್ತು ಸಹಜವೂ ಹೌದು. ಉದಾಹರಣೆಗೆ ಚೀನಿಯರನ್ನು ಇಲ್ಲವೆ ಜಪಾನದವರನ್ನು ತೆಗೆದುಕೊಳ್ಳಿ. ನಮಗೂ ಚೀನಿಯರಿಗೂ ಅನೇಕ ವಿಧಗಳಲ್ಲಿ ಸಾಮ್ಯತೆಗಳಿವೆ. ಯುರೋಪಿನ ಕೆಲವು ಸಮುದಾಯಗಳಿಗಿಂತ ನಾವು ಜಪಾನದವರ ಜೊತೆ ಕೆಲವು ಸಂಗತಿಗಳಲ್ಲಿ ಸಾಮ್ಯತೆಗಳನ್ನು ಹೊಂದಿದ್ದೇವೆ. ಇನ್ನೊಂದೆಡೆ, ಭಾಷೆಯ ವಿಷಯದಲ್ಲಿ ನಮಗೂ ಯುರೋಪಿನ ಭಾಷೆಗಳಿಗೂ ಹಲವು ರೀತಿಯಲ್ಲಿ ಹೋಲಿಕೆಗಳಿವೆ. ಈ ಕಾರಣದಿಂದಾಗಿ ಬಿsನ್ನತೆಗಳು ಮತ್ತು ವೈವಿಧ್ಯತೆಗಳು ಸರ್ವೇಸಾಮಾನ್ಯವಾದವುಗಳು. ಆದರೆ ನಾನು ಖಚಿತವಾಗಿ ಹೇಳುವುದೇನೆಂದರೆ, ಬುಡಕಟ್ಟು ಜನರಿಗೂ, ಬುಡಕಟ್ಟೇತರ ಜನರಿಗೂ ಭಿನ್ನತೆಗಳನ್ನು ಗುರುತಿಸುವ ಕ್ರಮವೇ ತಪ್ಪಿನದು. ಸಂವಿಧಾನದಲ್ಲಿ ಪರಿಶಿಷ್ಟ ಜಾತಿಪದದ ಶಬ್ದಶಃ ಅರ್ಥ ವಿವರಣೆಯನ್ನೇ ತೆಗೆದುಕೊಳ್ಳಿ. ನಿಮಗೆಲ್ಲ ತಿಳಿದಂತೆ ಆ ಪದ ಇನ್ನೂ ಬಹುತೇಕ ಖಚಿತ ಅರ್ಥ ವಿವರಣೆಯನ್ನು ಬಯಸುತ್ತದೆ. ಒಂದು ಜಾತಿಯು ಪರಿಶಿಷ್ಟವೇ ಅಥವಾ ಅಲ್ಲವೇ ಎಂಬುದನ್ನು ಸರ್ಕಾರ ಆನಂತರ ಆಡಳಿತಾತ್ಮಕವಾಗಿ ತೀರ್ಮಾನಿಸಿತು. ಆದರೆ ಸಮುದಾಯಗಳ ಮಧ್ಯೆ ಇಷ್ಟು ನಿಖರವಾಗಿ ಒಂದು ಗೆರೆ ಎಳೆಯುವುದು ಅಷ್ಟು ಸುಲಭವಲ್ಲ. ಸಮುದಾಯಗಳನ್ನು ಹೀಗೆ ವಿಂಗಡಿಸುವ ಈ ಬಗೆಯ ವರ್ಗೀಕರಣಗಳನ್ನು ನಿರಾಕರಿಸುವುದು ನಮ್ಮ ಸದ್ಯದ ಗುರಿಯಾಗಿರಬೇಕು. ಹರಿಜನರು, ದುರ್ಬಲ ವರ್ಗಗಳು, ಪರಿಶಿಷ್ಟರು, ಬುಡಕಟ್ಟುಗಳು ಎಂದು ಸಮುದಾಯಗಳನ್ನು ವರ್ಗೀಕರಿಸಿದರೆ ಸೈದ್ಧಾಂತಿಕವಾಗಿ ಅದನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ. ಅಲ್ಲದೆ ಈ ವರ್ಗೀಕರಣ ನಮ್ಮ ದೇಶದ ಬೃಹತ್ ಜನಸ್ತೋಮದ ವರ್ತಮಾನದ ಬದುಕಲ್ಲಿ ಬಿರುಕುಗಳನ್ನು ಮೂಡಿಸುತ್ತದೆ. ಆಯಾ ಸಮುದಾಯಗಳ ಜೀವನವಿಧಾನ ಮತ್ತು ರೂಢಿ ಸಂಪ್ರದಾಯಗಳಲ್ಲಿ ಕಾಣುವ ವೈವಿಧ್ಯತೆಗಳಿಗೆ ಅನುಗುಣವಾಗಿ ಸಮುದಾಯಗಳ ಮಧ್ಯೆ ಭಿನ್ನತೆಗಳು ರೂಪಗೊಂಡಿರುತ್ತವೆ. ಆದರೆ ‘ಇಂತಿಂಥವರು ಪರಿಶಿಷ್ಟ ಜಾತಿಯವರು’ ಎಂದು ಪ್ರತ್ಯೇಕಿಸುವ ವಿಧಾನ ಮಾತ್ರ ಬದಲಾಗಬೇಕು.

ಕಾಕಾ ಕಾಲೇಲ್ಕರ್ ಅಧ್ಯಕ್ಷತೆಯಲ್ಲಿ ಬ್ಯಾಕ್‌ವರ್ಡ್ ಕ್ಯಾಸ್ಟ್ ಕಮೀಶನ್‌ನನ್ನು ರಚಿಸಲಾಗಿದೆ. ಹಲವು ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿಗಳ ಸಮುದಾಯಗಳು ಹಿಂದುಳಿದಿವೆ. ನಿಜಕ್ಕೂ ಕೆಲವು ಸಮುದಾಯಗಳು ಶತಮಾನಗಳಿಂದ ತುಂಬಾ ಹಿಂದುಳಿದಿವೆ. ಹಿಂದುಳಿದ ಎಲ್ಲ ವರ್ಗಗಳಿಗೆ ಸಹಾಯ ಮಾಡುವುದು ಸರ್ಕಾರದ ಇಂದಿನ ಬಹುಮುಖ್ಯ ಕರ್ತವ್ಯವಾಗಿದೆ. ಭಾರತದಲ್ಲಿ ಬೆರಳೆಣಿಕೆಯ ಜನ ಮಾತ್ರ ಇಂದು ಅತಿ ಶ್ರೀಮಂತರಿದ್ದಾರೆ. ಈ ಶ್ರೀಮಂತ ವರ್ಗ ಸಹಜವಾಗಿಯೇ ಇತರ ಸಮುದಾಯಗಳಿಗಿಂತ ಭಿನ್ನವಾಗಿದೆ.

ಕಾರಣ, ಶ್ರೀಮಂತ ವರ್ಗದವರಿಗೆ ಶತಮಾನಗಳಿಂದ, ಶಿಕ್ಷಣ ಪಡೆಯಲು ಮತ್ತು ಮುಂದುವರಿದ ಜೀವನವಿಧಾನ ರೂಪಿಸಿಕೊಳ್ಳಲು ಅನೇಕ ಅವಕಾಶಗಳು ಒದಗಿಬಂದಿವೆ. ಅದಕ್ಕಾಗಿ ಆ ಹಣವಂತರ ವರ್ಗವು ಭಾರತದ ಅತಿ ಮುಂದುವರಿದ ಜನವರ್ಗವಾಗಿದೆ. ಈ ವರ್ಗ ಸಹಜವಾಗಿ ಬೇರೆಯವರಿಗಿಂತ, ವ್ಯಕ್ತಿಗತ ನೆಲೆಯಲ್ಲೂ ಮುಂದುವರಿಯುವ ಅವಕಾಶಗಳನ್ನು ಪಡೆದುಕೊಂಡಿದೆ. ಆದರೆ ಕೆಲವೇ ಜನ ಮಾತ್ರ ಶ್ರೀಮಂತರಾಗಿ ಮುಂದುವರಿಯುವುದು ಶೋಷಿತ ಸಮುದಾಯಗಳಿಗೆ ಒಳಿತಾದಂತಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನನ್ನು ತಾನು ರೂಪಿಸಿಕೊಳ್ಳಲು ಅವಕಾಶಗಳು ಸಿಗುವಂತಾಗಬೇಕು. ಭಾರತದಲ್ಲಿನ ಎಲ್ಲ ದುರ್ಬಲ ವರ್ಗಗಳು ಅಭಿವೃದ್ಧಿ ಹೊಂದಬೇಕು. ಕೇವಲ ಆ ವರ್ಗ ಇಲ್ಲವೆ ಈ ವರ್ಗ ಮಾತ್ರವಲ್ಲ. ಬರಿ ಕೆಲವು ಗುಂಪುಗಳು ಮಾತ್ರ ಮುಂದುವರಿದರೆ ದೇಶ ಮುಂದುವರಿದಂತೆ ಆಗುವುದಿಲ್ಲ. ಹಾಗೇನಾದರೂ ಆದಲ್ಲಿ ಶಿಕ್ಷಣದ ಮತ್ತು ನಿರುದ್ಯೋಗದ ಸಮಸ್ಯೆಗಳು ವ್ಯಾಪಕವಾಗಿ ಬೆಳೆದು ನಿಲ್ಲುತ್ತವೆ. ನಾವೀಗ ಮೂಲಭೂತ ಶಿಕ್ಷಣದ ಬಗ್ಗೆ ಮಾತನಾಡುತ್ತಿದ್ದೇವೆ. ಇಷ್ಟರಲ್ಲೇ ಈ ಕುರಿತು ನಿರ್ಣಯಗಳನ್ನು ನಾವು ತೆಗೆದುಕೊಳ್ಳಲಿದ್ದೇವೆ. ನಿಜಕ್ಕೂ ನಮ್ಮ ದೇಶದಲ್ಲಿ ಶಿಕ್ಷಣದ ಮಹತ್ವವನ್ನು ಕುರಿತು ಯೋಚಿಸುವ ಮತ್ತು ಜನರನ್ನು ಕಲಿಯುವಂತೆ ಪ್ರೇರೇಪಿಸುವ ಕೆಲಸವನ್ನು ನಾವು ಈ ಹಿಂದೆ ಮಾಡಿಲ್ಲ.

ನಮ್ಮ ಈ ನಿರ್ಲಕ್ಷ್ಯದ ಸದ್ಯದ ಪರಿಣಾಮಗಳು ದೇಶದ, ನಾಡಿನ ಹಿಂದುಳಿದ ಜನರನ್ನು ಹೇಗೆ ಅಜ್ಞಾತದಲ್ಲಿಟ್ಟಿವೆಯೋ ಅದೇ ರೀತಿ ಆದಿವಾಸಿಗಳನ್ನೂ ಕತ್ತಲಲ್ಲಿಟ್ಟಿವೆ. ನಾನು ಇನ್ನೊಂದು ಮಹತ್ವದ ಸಂಗತಿಯ ಕಡೆಗೆ ನಿಮ್ಮ ಗಮನ ಸೆಳೆಯಲಿಚ್ಛಿಸುತ್ತೇನೆ. ನಗರದಲ್ಲಿ ವಾಸಿಸುತ್ತಿರುವ ನಾವು, ಆದಿವಾಸಿಗಳೆಂದು ಕರೆಸಿಕೊಳ್ಳುವ ಜನಕ್ಕಿಂತ ಉನ್ನತ ರೀತಿಯಲ್ಲಿ ಬದುಕುತ್ತಿದ್ದೇವೆ ಎಂಬ ನಂಬಿಕೆಗಳನ್ನು ಬಿಟ್ಟುಕೊಡಬೇಕಿದೆ. ಈ ಬಗೆಯ ಹುಸಿ ಪ್ರತಿಷ್ಠೆ ಮತ್ತು ಅಹಂಗಳು ನಮ್ಮಿಂದ ತೊಲಗಬೇಕಿದೆ. ಕೆಲವು ಬುಡಕಟ್ಟು ಜನ ಅತ್ಯಂತ ಮುಂದುವರಿದ ಬದುಕನ್ನು ಬದುಕುತ್ತಿದ್ದಾರೆ. ನಾನೇ ಸ್ವತಃ ಗಮನಿಸಿದಂತೆ, ಜಾತಿನಿಷ್ಟ ಸಮಾಜದಲ್ಲಿನ ಜನರಿಗಿಂತ ಆದಿವಾಸಿಗಳು ಕೆಲವೆಡೆ ಒಳ್ಳೆಯ ಶಿಕ್ಷಣ ಪಡೆದು ಶಿಸ್ತಿನ ಸಾಮುದಾಯಿಕ ಜೀವನ ನಡೆಸುತ್ತಿದ್ದಾರೆ.

ಇಂಡಿಯಾದಲ್ಲಿ ಬದುಕುತ್ತಿರುವ ನಾವೆಲ್ಲ ಜಾಗತಿಕ ಆರ್ಥಿಕ ವ್ಯವಸ್ಥೆ ಅಥವಾ ’ಮಾರುಕಟ್ಟೆಯ ಆರ್ಥಿಕ ನೀತಿ’ ಎಂದು ನಾವೇನು ಕರೆಯುತ್ತೇವೆಯೋ ಅದರಿಂದ ಬಹಳ ಕಠೋರ ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಈ ಆರ್ಥಿಕ ನೀತಿಯಲ್ಲಿ ನಾವು ಯಶಸ್ಸನ್ನು ಕಾಣಬೇಕೆಂದರೆ ನಮಗೆ ಕೆಲವು ಅರ್ಹತೆಗಳು ಬೇಕೇಬೇಕು. ವಿಪರ್‍ಯಾಸವೆಂದರೆ, ಬಲವಿದ್ದವನು ಮಾತ್ರ ಬದುಕಬಲ್ಲ ಎಂಬ ಧೋರಣೆಯೇ ಮಾರುಕಟ್ಟೆ ನೀತಿಯ ಹಿಂದೆ ಕೆಲಸ ಮಾಡುತ್ತಿದೆ. ಆದರೆ ಈ ಮಾರುಕಟ್ಟೆ ಆರ್ಥಿಕತೆಯ ವಲಯದಿಂದ ಈ ಆದಿವಾಸಿ ಪ್ರದೇಶಗಳು ದೂರದಲ್ಲಿವೆ. ಇವತ್ತಿನ ನಮ್ಮ ಬಹುಮುಖ್ಯ ಕರ್ತವ್ಯವೇನೆಂದರೆ, ಸಂವಿಧಾನವೇ ಹೇಳುವಂತೆ, ಮಾರುಕಟ್ಟೆಯ ಆರ್ಥಿಕ ನೀತಿಯ ಆಕ್ರಮಣದಿಂದ ಈ ಆದಿವಾಸಿ ಪ್ರದೇಶಗಳನ್ನು ರಕ್ಷಿಸಬೇಕಿದೆ. ಆದಿವಾಸಿಗಳ ಭೂಮಿಗಳನ್ನು ಆಕ್ರಮಿಸಿಕೊಂಡು, ಅವರನ್ನು ಒಕ್ಕಲೆಬ್ಬಿಸುವ ಶ್ರೀಮಂತ ವರ್ತಕರನ್ನು ನಾವು ನಿಯಂತ್ರಿಸಬೇಕಿದೆ. ಬುಡಕಟ್ಟು ಜನರ ಉತ್ಪಾದನಾ ಚಟುವಟಿಕೆಗಳನ್ನು ಹಾಳು ಮಾಡುವ ಮೇಲ್ವರ್ಗಗಳ ಹುನ್ನಾರಗಳನ್ನು ನಾವು ಸಹಿಸುವುದಿಲ್ಲ. ಆದಿವಾಸಿಗಳು ಶಾಂತಿ, ನೆಮ್ಮದಿಯಿಂದ ಬದುಕಬೇಕೆಂಬುದೇ ನಮ್ಮ ಆಶಯ.

ಇಂಡಿಯಾದ ಹೊರಗೆ, ಬೇರೆ ದೇಶಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳನ್ನು ನೀವು ನೋಡಿ, ಎರಡು ಬಹುಮುಖ್ಯ ಸಂಗತಿಗಳು ಅಲ್ಲಿನ ಆದಿವಾಸಿಗಳನ್ನು ಇನ್ನಿಲ್ಲದಂತೆ ನೋಯಿಸಿವೆ. ಒಂದು, ಅಲ್ಲಿನ ಸರ್ಕಾರಗಳು ಮಾರುಕಟ್ಟೆ ನೀತಿಯನ್ನು ಯಥಾವತ್ತಾಗಿ ಆದಿವಾಸಿ ಪ್ರದೇಶಗಳಿಗೆ ಅನ್ವಯಿಸಿವೆ. ಮತ್ತು ಎರಡನೆಯದು, ಜಿನ್ ಮೊದಲಾದ ಮಾದಕ ಪೇಯಗಳನ್ನು ಯುರೋಪಿನಿಂದ ನೇರವಾಗಿ ಈ ಅನುಸೂಚಿತ ಪ್ರದೇಶಗಳಿಗೆ ಪರಿಚಯಿಸಿರುವುದು. ಈ ಎರಡು ಸಂಗತಿಗಳು ಅವರ ಪಾರಂಪರಿಕ ಗುಡಿಕೈಗಾರಿಕೆಗಳನ್ನು ಮತ್ತು ಕಲೆಗಳನ್ನು ಶಾಶ್ವತವಾಗಿ ನಾಶಗೊಳಿಸಿವೆ. ಅವರು ತಮ್ಮ ಸಹಜ ಸುಂದರ ಜೀವನವಿಧಾನವನ್ನು ಬಿಟ್ಟುಕೊಟ್ಟು, ಅತ್ಯಂತ ವಿಪತ್ಕಾರಿಯಾದ ಯುರೋಪಿನ ನಾಗರಿಕ ಬದುಕನ್ನು ರೂಢಿಸಿಕೊಳ್ಳತೊಡಗಿದ್ದಾರೆ. ಹಲವು ಸಲ ನನಗೆ ಅನ್ನಿಸುತ್ತದೆ, ಭಾರತದ ನಾಗರಿಕ ಸಮಾಜ ಸಹ ಇಲ್ಲಿನ ಆದಿವಾಸಿಗಳನ್ನು ಇದೇ ಬಗೆಯಲ್ಲಿ ನಾಶ ಮಾಡಿಬಿಡಬಲ್ಲದು. ಈ ಕಾರಣದಿಂದ ನಾವು ಈ ಬಗೆಯ ಕೃತ್ಯಗಳಿಗೆ ನಿರ್ಬಂಧ ಹಾಕಲೇಬೇಕಿದೆ.

ಒಂದಂತೂ ಸ್ಪಷ್ಟ, ಆದಿವಾಸಿಗಳು ಅಭಿವೃದ್ಧಿ ಹೊಂದಲೇಬೇಕು. ಯಾರೂ ಇವರನ್ನು ವಸ್ತುಸಂಗ್ರಹಾಲಯದ ಅಪರೂಪದ ವಸ್ತುಗಳಿದ್ದಂತೆ ಇರಬೇಕು ಎಂದು ಬಯಸುವುದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಆದಿವಾಸಿಗಳು ಅವರದೇ ಹಾದಿಯಲ್ಲಿ ಅವರ ಇಚ್ಛೆಗೆ ಅನುಗುಣವಾಗಿ ಅಭಿವೃದ್ಧಿ ಹೊಂದಬೇಕು. ಒತ್ತಾಯಪೂರ್ವಕವಾಗಿ ನಾವು ಹೊರಗಿನ ಸಂಗತಿಗಳನ್ನು ಅವರ ಮೇಲೆ ಹೇರಿದರೆ ಅವರು ಅದನ್ನು ಒಪ್ಪಿಕೊಳ್ಳಲಾರರು. ಯಾವುದೇ ವ್ಯಕ್ತಿ ತನ್ನ ಪರಿಸರ, ಪರಂಪರೆ ಮತ್ತು ಆಚರಣೆಗಳ ಆಚೆ ಇದ್ದು ಬದುಕಲಾರ. ನಾವು ಹೇಗೆ ಈ ಆದಿವಾಸಿಗಳನ್ನು ಎರಡು ಅತಿಗಳ ಮೂಲಕ ತಲುಪಲು ಯತ್ನಿಸುತ್ತಿದ್ದೇವೆ ಗೊತ್ತೇ? ಅವರನ್ನು ತಲುಪುವ ಈ ಎರಡೂ ಕ್ರಮಗಳು ಅತಿರೇಕದವೇ ಆಗಿವೆ. ಮೊದಲನೆಯದು ’ಮ್ಯೂಸಿಯಂ ಕ್ರಮ’, ಮಾನವಶಾಸ್ತ್ರಜ್ಞರ ಚರ್ಚೆಗಳಿಗಾಗಿ, ಆಸಕ್ತಿ ಹುಟ್ಟಿಸುವ ಅಧ್ಯಯನಕ್ಕೆ ಮ್ಯೂಸಿಯಂ ಮಾದರಿಗಳ ತರಹ ಆದಿವಾಸಿಗಳನ್ನು ಉಳಿಸಿಕೊಳ್ಳಬೇಕು, ಆದಿವಾಸಿಗಳ ಜೀವನ ಕ್ರಮಗಳನ್ನು ಈ ಕಾರಣಕ್ಕಾಗಿ ರಕ್ಷಿಸಬೇಕು ಎನ್ನುತ್ತಾರೆ. ಎರಡನೆಯದು ’ಮುಕ್ತದ್ವಾರ’ ನೀತಿಯ ಕ್ರಮ. ನಾವು ಇವರನ್ನು ತಲುಪಲು ಯೋಚಿಸಿರುವ ಈ ಎರಡನೇ ಕ್ರಮ ಅತ್ಯಂತ ಅಪಾಯಕಾರಿಯಾದದ್ದು. ಈ ’ಮುಕ್ತದ್ವಾರ’ ನೀತಿ ಆದಿವಾಸಿಗಳನ್ನು ಆರ್ಥಿಕವಾಗಿ ಭಿಕರ ಶೋಷಣೆಗೆ ಈಡು ಮಾಡುತ್ತದೆ. ಇದರಿಂದಾಗಿ ಹೊರಗಿನ ಎಲ್ಲ ಬಗೆಯ ಶೋಷಣೆಯ ಆಯಾಮಗಳು ಆದಿವಾಸಿ ಪ್ರದೇಶಗಳಿಗೆ ಪ್ರವೇಶ ಪಡೆಯುತ್ತವೆ. ಅಲ್ಲದೆ ಆದಿವಾಸಿಗಳನ್ನು ಅವರ ನೆಲೆಗಳಿಂದಲೇ ಒಕ್ಕಲೆಬ್ಬಿಸುವ ಅಪಾಯ ಸಹಜವಾಗಿಯೇ ಇದರಿಂದ ಸಂಭವಿಸಿಬಿಡುತ್ತದೆ. ಆದ್ದರಿಂದ ಆದಿವಾಸಿಗಳನ್ನು ತಲುಪಲು ಪರಿಕಲ್ಪಿಸಲಾಗಿರುವ ಈ ಎರಡೂ ಮಾರ್ಗಗಳು ಅಪಾಯವನ್ನುಂಟು ಮಾಡುತ್ತವೆ. ಅದಕ್ಕಾಗಿ ಒಂದು ಸುವರ್ಣ ಮಧ್ಯಮ ಸೂತ್ರವನ್ನು ನಾವು ಅನುಸರಿಸಬೇಕಿದೆ. ಈ ಸುವರ್ಣ ಮಧ್ಯಮ ಸೂತ್ರದಲ್ಲಿ ಹೇರಿಕೆಯ ಸಂಗತಿಗಳಿರಬಾರದು. ಹಾಗಾದರೆ ಮಾತ್ರ ಇದು ಯಶಸ್ವಿಯಾಗಬಲ್ಲದು. ಈ ಸುವರ್ಣ ಮಧ್ಯಮ ನೀತಿಯನ್ನು ಆದಿವಾಸಿಗಳ ಜನರ ಮೂಲಕವೇ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕಿದೆ. ಇದು ಮೊದಲ ಹಂತ, ಅಂದರೆ ಅವರ ಜನರನ್ನೇ ಯೋಜನೆಗಳನ್ನು ಅನುಷ್ಠಾನಗೊಳಿಸಲು ತರಬೇತಿಗೊಳಿಸುವುದು. ಹೀಗೆ ತರಬೇತಿಗೊಂಡ ಆದಿವಾಸಿ ಜನರು ತಮ್ಮವರನ್ನು ಪರಿಣಾಮಕಾರಿಯಾಗಿ ತಲುಪಬಲ್ಲರು. ಹೊರಗಿನಿಂದ ಬಂದ ಜನರು ಆದಿವಾಸಿಗಳಿಗಾಗಿ ಕೆಲಸ ಮಾಡುವುದಕ್ಕಿಂತ, ಆದಿವಾಸಿಗಳೇ ತಮ್ಮ ಜನರ ಅಭಿವೃದ್ಧಿಗೆ ತೊಡಗಿಸಿಕೊಳ್ಳುವಂತಾಗುವುದು ಹೆಚ್ಚು ಪರಿಣಾಮಕಾರಿ ಎಂದು ನನಗನ್ನಿಸುತ್ತಿದೆ. ಈ ಆದಿವಾಸಿ ಜನ ನಿಜಕ್ಕೂ ಉನ್ನತ ಹಂತಕ್ಕೆ ಬರಬೇಕಿದೆ. ಆದರೆ ಅಭಿವೃದ್ಧಿಯ ಯಾವ ಮಾನದಂಡಗಳಿಂದ ಭಾರತದ ಉಳಿದ ಜನಾಂಗಗಳನ್ನು ಮೇಲೆತ್ತಲು ಬಯಸುತ್ತೇವೋ ಅವೇ ಮಾನದಂಡಗಳು ಆದಿವಾಸಿಗಳಿಗೂ ಅನ್ವಯವಾಗಕೂಡದು. ಅವೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆದಿವಾಸಿ ಸಮುದಾಯಗಳ ಅಭಿವೃದ್ಧಿಗೆ ಬಳಸುವಂತಾಗಬಾರದು. ದೇಶದಲ್ಲಿನ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ನಾವು ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಬೇಕು. ಇಂತಹ ಅಭಿವೃದ್ಧಿ ನೀತಿಯು ನಮ್ಮ ದೇಶದ ಸಮುದಾಯಗಳನ್ನು ಸಬಲೀಕರಿಸಲು ನೆರವಾಗಬಲ್ಲದು. ಇದರ ಜೊತೆಗೆ ಸಮುದಾಯಗಳ ಅಭಿವೃದ್ಧಿ ಹಂತಹಂತವಾಗಿ ಆಗಬೇಕು. ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಒತ್ತಾಯದ ಮತ್ತು ಹೇರಿಕೆಯ ಸಂಗತಿಗಳು ಇರಬಾರದು. ಒಟ್ಟಾರೆ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಜನ ಸ್ವತಃ ತರಬೇತಿಗೊಳ್ಳುತ್ತ, ಇತರರನ್ನೂ ಅಭಿವೃದ್ಧಿಯ ಫಲಗಳನ್ನು ಪಡೆಯಲು ತರಬೇತಿಗೊಳಿಸುವಂತಾಗಬೇಕು. ಇಂತಹ ಕ್ರಮಗಳಿಂದ ಅಭಿವೃದ್ಧಿ ಯೋಜನೆಗಳು ತೀವ್ರವಾಗಿ ಅನುಷ್ಠಾನಗೊಳ್ಳುವುದಿಲ್ಲ ನಿಜ. ಆದರೆ ಅವರದೇ ವ್ಯಕ್ತಿಯನ್ನು ತರಬೇತಿಗೊಳಿಸುವುದರ ಮೂಲಕ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದು. ಯಾವುದೇ ವೃತ್ತಿಯನ್ನು ತೆಗೆದುಕೊಳ್ಳಿ. ಇಂಜಿನಿಯರ್, ಡಾಕ್ಟರ್, ಇವರನ್ನು ರೂಪಿಸಲು ತರಬೇತಿ ಅತ್ಯಗತ್ಯ. ತರಬೇತಿ ದೀರ್ಘಕಾಲ ಹಿಡಿಯುತ್ತದೆ. ಈ ರೀತಿಯ ಶಿಸ್ತುಬದ್ಧ ನೆಲೆಯಿಂದ ಹೊರಡುವುದೇ ಒಳ್ಳೆಯದು.

(1954ರ ಡಿಸೆಂಬರ್ 4 ರಂದು ದೆಹಲಿಯಲ್ಲಿ ನಡೆದ ಆದಿವಾಸಿ ಸಮ್ಮೇಳನದಲ್ಲಿ ಮಾಡಿದ ಉದ್ಘಾಟನಾ ಭಾಷಣ)

(Source: Jawaharlal Nehru’s Speeches, Volume Three, March 1953 – August 1957, Publications Division, Ministry of Information and Broadcasting, Government of India, 1958)

ಕೊನೆ ಟಿಪ್ಪಣಿ

1. ಶ್ರೀಮತಿ ಖೋಂಗಮೆನ್ ಅವರ ಪೂರ್ಣ ಹೆಸರು ಬೋನಿಲಿ ಖೋಂಗಮೆನ್. 1952ರಲ್ಲಿ ಅಸ್ಸಾಮಿನ ಸ್ವಾಯತ್ತ ಜಿಲ್ಲೆಯಿಂದ ಭಾರತದ ಸಂಸತ್ತಿಗೆ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಕೆಳಮನೆಗೆ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದ ಶ್ರೀಮತಿ ಖೋಂಗಮೆನ್ ಅಸ್ಸಾಮ್ ವಿಧಾನ ಸಭೆಯ ಉಪಸಭಾಪತಿಯಾಗಿಯೂ ಕಾರ್ಯನಿರ್ವಹಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸ್ಪರ್ಧಿಸುವ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಡೆದಿದ್ಯಾ ಅಕ್ರಮ?

0
ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯಾ? ಹೌದು ಈಗೊಂದು ಆರೋಪವನ್ನು ಸ್ಪರ್ಧೆಯ ಆಕಾಂಕ್ಷಿಗಳಾಗಿದ್ದ ಹಲವು ಅಭ್ಯರ್ಥಿಗಳು ಮಾಡಿದ್ದಾರೆ. ವಾರಾಣಾಸಿಯಲ್ಲಿ ಚುನಾವಣಾಧಿಕಾರಿಗಳು ಮತ್ತು ಬಿಜೆಪಿ-ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿದ್ದ...