Homeಅಂಕಣಗಳುಅರಿವಿನ ಉರಿಯಲ್ಲೇ ಮುಳುಗೇಳುವ ಕವಿತೆಗಳು; ರಾಮಪ್ಪ ಕೋಟಿಹಾಳರ ’ಜಿರಾಫೆ ಕತ್ತಿನ ಅವ್ವ' ಕವನ ಸಂಕಲನದ ವಿಮರ್ಶೆ

ಅರಿವಿನ ಉರಿಯಲ್ಲೇ ಮುಳುಗೇಳುವ ಕವಿತೆಗಳು; ರಾಮಪ್ಪ ಕೋಟಿಹಾಳರ ’ಜಿರಾಫೆ ಕತ್ತಿನ ಅವ್ವ’ ಕವನ ಸಂಕಲನದ ವಿಮರ್ಶೆ

- Advertisement -
- Advertisement -

ರಾಮಪ್ಪ ಕೋಟಿಹಾಳರ ’ಜಿರಾಫೆ ಕತ್ತಿನ ಅವ್ವ’ ಕವನಸಂಕಲನ ತನ್ನದೇ ರೀತಿಯಲ್ಲಿ ಗಮನ ಸೆಳೆಯುತ್ತದೆ. ರಾಮಪ್ಪ ಹೈದರಾಬಾದ್ ಕರ್ನಾಟಕದ ಹಡಗಲಿ ಭಾಗದವರು. ’ಕೆರ ಹೊತ್ತ ಬಸವ’ ಎಂಬ ಮೊದಲನೇ ಸಂಕಲನ ಪ್ರಕಟವಾಗಿ, ಅದರ ಪರಿಣಾಮವಾದ ಹಿಂಸೆಯನ್ನು ಎದುರಿಸಿ, ಹದಿನೇಳು ವರ್ಷಗಳ ದೀರ್ಘ ಮೌನದ ನಂತರ ಎರಡನೇ ಸಂಕಲನವನ್ನು ರಚಿಸಿದ್ದಾರೆ. ಮಾತನಾಡುವಾಗ ಮೌನವನ್ನೇ ಹುಡುಕುತ್ತಿರುವಂತೆ ಕಾಣುವ, ಮಾತಿನ ನಡುನಡುವೆಯೇ ಹುಸಿನಗು ತೋರುವ ಹಿಂಜರಿಕೆಯ ಸ್ವಭಾವದ ರಾಮಪ್ಪನವರ ಕವಿತೆಗಳು ನಮಗೆ ಬೆಚ್ಚಿಬೀಳಿಸುವ ಲೋಕವೊಂದನ್ನು ಅನಾವರಣಗೊಳಿಸುತ್ತವೆ. ಅಸ್ಪೃಶ್ಯತೆ ಆಚರಣೆಯ ಮಾನಸಿಕ ಮತ್ತು ದೈಹಿಕ ಕ್ರೌರ್ಯ, ಊಳಿಗಮಾನ್ಯ ವ್ಯವಸ್ಥೆಯೊಂದಿಗಿನ ಸಂಘರ್ಷ, ಬೆವರ ನಂಬಿದ ಬದುಕು, ನೀಗದ ಹಸಿವು ಮತ್ತು ಅಸಹಾಯಕತೆ ಈ ಸಂಕಲನದ ಕವಿತೆಗಳ ಮುಖ್ಯ ವಸ್ತುಗಳು. ಪ್ರೇಮ ಮತ್ತು ಕೌಟುಂಬಿಕ ಸಂಬಂಧಗಳ ವಿಷಯಗಳೂ ಇವಕ್ಕೆ ಜೊತೆಯಾಗುತ್ತವೆ. ಹಸಿವು, ಅಸ್ಪೃಶ್ಯತೆ ಮತ್ತು ಶ್ರಮ ಒಂದಕ್ಕೊಂದು ಹೆಣೆದುಕೊಂಡಿವೆ. ಪ್ರೇಮ ಕವಿತೆಗಳು ಈ ಸಂಕಲನದಲ್ಲಿ ಸಂಖ್ಯೆಯಲ್ಲಿ ಹೆಚ್ಚಿರುವಂತೆ ಕಂಡರೂ ಒಂದಲ್ಲಾ ಒಂದು ರೀತಿಯಲ್ಲಿ ಜಾತಿವ್ಯವಸ್ಥೆಯ ವಿಷವರ್ತುಲಕ್ಕೆ ಸಿಕ್ಕಿ, ಸಂಬಂಧಗಳು ಆತಂಕದಲ್ಲಿ ಕೊನೆಗೊಳ್ಳುತ್ತವೆ. ಅಸಹಾಯಕತೆ ಮತ್ತು ವಿಷಾದ ಇಲ್ಲಿನ ಕವಿತೆಗಳನ್ನು ಆವರಿಸಿರುವ ಮುಖ್ಯ ಭಾವಗಳು.

ಹಸಿವಿನ ರೂಪಕಗಳು ಓದುಗರ ಎದೆಯನ್ನು ನಾಟಿ ಆರ್ದ್ರಗೊಳಿಸಿ ಅವರ ಗಂಟಲು ಕಟ್ಟುವ ಮುನ್ನವೇ ಅಂಥ ಸಂದಿಗ್ಧಗಳನ್ನ ಅಪಹಾಸ್ಯಗೊಳಿಸಿ ಸಾಗುವ ಗುಣ ಇಲ್ಲಿಯ ಕವನಗಳಲ್ಲಿದೆ. ಇದು ಕಾವ್ಯ ಹದಗೆಡದಂತೆ ಕಾಪಿಟ್ಟುಕೊಳ್ಳುವ ಕಲಾತ್ಮಕತೆಯೂ ಹೌದು, ಸಂವೇದನೆಗಳನ್ನು ಕಳೆದುಕೊಂಡ ಜಡಗಟ್ಟಿದ ಸಮಾಜದ ಎದುರು ನಿತ್ರಾಣದ ನಿಟ್ಟುಸಿರೂ ಹೌದು. ಹಸಿವಿನ ದುರಂತವನ್ನು ಕೇವಲ ಗೋಳಾಗಿಸದೆ ಕಲೆಯಾಗಿ ನಿಲ್ಲಿಸುವ ಪರಿಯನ್ನು ಈ ಸಾಲುಗಳಲ್ಲಿ ಕಾಣಬಹುದು: ’ಆನೆಯಂತಹ ಅವ್ವ/ ಕೋಲಿನಂತಾಗಿ ಹುಂಚಿ ಚಿಗುರು ತಿನ್ನುತ್ತಿರಲು/ ಹಿಂದಿನ ಜನ್ಮದಲ್ಲಿ ಜಿರಾಫೆ ಆಗಿದ್ದಾಳೇನೋ ಎನಿಸುತ್ತಿತ್ತು’ (ಜಿರಾಫೆ….). ಇಲ್ಲಿ ಚಿತ್ರಿತವಾದ ಪಾತ್ರಗಳು ತಮ್ಮ ದುರಂತಗಳಿಗೆ ಅಸಹಾಯಕ ನಗುವನ್ನೇ ಉತ್ತರವಾಗಿಸಿಕೊಂಡಿವೆ. ಈ ಸಾಲುಗಳನ್ನು ನೋಡಿ: ’ಮೈ ಕೈ ಮುಳ್ಳುಗಳಾಗಿ/ ತುತ್ತು ಅನ್ನ ದಕ್ಕದಿದ್ದಾಗ ಅಪ್ಪ/ ನಾವು ಹಸಿವಿಗೆ ಹುಲ್ಲು ತಿನ್ನುವಂತಿದ್ದರೆ/ ಚೆನ್ನಾಗಿರುತ್ತಿತ್ತೆಂದು ನಗುತ್ತಿದ್ದ’ (ಮಣ್ಣ ಪರಿಮಳ). ನಿರೂಪಕನ ಹಾಸ್ಯ ಮತ್ತು ಹುಸಿನಗು ಕೂಡ ಕರುಳು ಕಿವುಚುವ ಸಂಕಟವನ್ನು ತೋರುತ್ತಾ ಸಮಾಜದ ಕ್ರೌರ್ಯಕ್ಕೆ ಕನ್ನಡಿ ಹಿಡಿಯಬಲ್ಲದು. ಉದಾಹರಣೆಗೆ: ’ಅಪ್ಪ ದಣಿಗಳ/ ಕಾಲು ಹಿಡಿದು/ ಪಾವು ಕಾಳು ತಂದ ದಿನ/ ನಕ್ಷತ್ರಗಳು ಕಳಾಹೀನವಾಗಿ/ ಗ್ರಹ ತಾರೆಗಳು ನಿಲ್ಲದೆ ಓಡಿದವು’ (ಮಣ್ಣ ಪರಿಮಳ). ತನ್ನ ನೋವುಗಳೆಲ್ಲವೂ ತಿಳಿದಾವು ಎಂಬ ನಂಬಿಕೆ, ತಿಳಿಯದೆ ಹೋದಾವು ಎಂಬ ಆತಂಕ ಸಂಘರ್ಷದಲ್ಲಿದ್ದಂತಿದೆ.

ಹುಸಿನಗು ಮತ್ತು ಅಸಹಾಯಕತೆಯ ಗುಣ ಈ ಸಂಕಲನದಲ್ಲಿ ಹೆಚ್ಚು ಪ್ರಾತಿನಿಧಿಕವಾಗಿರುವುದರಿಂದ ’ಜಿರಾಫೆ ಕತ್ತಿನ ಅವ್ವ’ ಎಂಬ ಸಂಕಲನದ ಶೀರ್ಷಿಕೆ ಅರ್ಥಪೂರ್ಣವಾಗಿದೆ. ಜೀವ ಪೋಷಣೆಯ ಪಾತ್ರಧಾರಿಯಾದ ಅವ್ವನದೇ ಇಲ್ಲಿ ಜಿರಾಫೆಯ ಕತ್ತಾಗಿದೆ. ಇದು ಕುಟುಂಬವನ್ನೇ ಎದುರಿಗಿರಿಸಿರುವ ಹಸಿವಿನ ಯುದ್ಧವನ್ನು ನೀಗಲು ಅವ್ವ ಅಥವಾ ಅಪ್ಪನೊಳಗಿನ ತಾಯ್ತನ ಹೆಣಗಾಡುತ್ತಿರುವುದನ್ನು (ಉಪ್ಪುನೀರು) ಚಿತ್ರಿಸುತ್ತಿದೆ. ಆದಿವಾಸಿ ಸಂಸ್ಕೃತಿಗಳಲ್ಲಿ ಅವ್ವ ಎಂಬುದು ಸಮುದಾಯಿಕ ದೈವವೂ ಹೌದು. ಆ ದಿಕ್ಕಿನಲ್ಲಿ ನೋಡಿದರೆ, ಇದು ಶೋಷಿತ ಸಮುದಾಯಗಳ ಹಸಿವಿನ ಚರಿತ್ರೆಯ ಕಾವ್ಯವೂ ಆದೀತು. ’ಹಸಿವಿನ ಚರಿತ್ರೆ/ ಹೊಟ್ಟೆಯಲ್ಲಿ ಕುದಿಯುವಾಗ/ ಬೆಳ್ಳಿ ಬಂಗಾರವ ಬಳ್ಳದಲ್ಲಿ/ ಅಳೆಯುವುದನ್ನು ಮೇಷ್ಟ್ರು ಹೇಳುತ್ತಿದ್ದರು’ (ಮಣ್ಣ ಪರಿಮಳ)- ಈ ಸಾಲುಗಳಲ್ಲಿರುವುದು ಒಂದು ಚಾರಿತ್ರಿಕ ವ್ಯಂಗ್ಯ. ಇಲ್ಲಿ ಬಂದಿರುವ ಹಸಿವು ಬರೀ ವ್ಯಕ್ತಿಗತ ಅನುಭವವೇನಲ್ಲ. ಮುಂದೆ ಇದೇ ಕವನದಲ್ಲಿ ಬರುವ ’ದಣಿಗಳ ರಾಗಿ ಹೊಲದಲ್ಲಿ/ ಮಾಗಿ ಮಾಡುವಾಗ ಸತ್ತ ಅಜ್ಜ/ ಅಪ್ಪನ ಬೆವರಲಿ ಮರುಹುಟ್ಟು ಪಡೆಯುತ್ತಿದ್ದ’ ಎಂಬ ಸಾಲುಗಳು ಈ ಹಸಿವಿನ ಮತ್ತು ಅದಕ್ಕಾಗಿ ಹರಿದ ಬೆವರಿನ ಚರಿತ್ರೆಯನ್ನು ಪುಷ್ಟೀಕರಿಸುತ್ತವೆ. ಹಸಿವು ಈ ಸಂಕಲನದ ಬಹುತೇಕ ಕವನಗಳಲ್ಲಿ ಸ್ಥಾಯಿಭಾವವಾಗಿ ನಿಂತಿದೆ. ’ಹಸಿವಧ್ಯಾನ’ ಕವಿತೆಯಂತೂ, ಹಸಿವಿನ ಆರ್ತನಾದಗಳ ಆತ್ಯಂತಿಕ ನೆಲೆಯನ್ನು ಅನುಭವಿಸಿದವ ಮಾತ್ರ ಹೀಗೆ ಬರೆಯಬಲ್ಲ ಅನ್ನಿಸಿಬಿಡುತ್ತೆ. ಹಸಿವಿನ ಯುದ್ಧದಲ್ಲಿ ಹೋರಾಡುತ್ತಲೇಯಿರುವ ಸುತ್ತಣ ಜನರನ್ನು ಕಂಡೂಕಾಣದಂತಿದ್ದು, ಕವಿತೆಗಳಲ್ಲಿ ಮಾತ್ರ ಇದನ್ನು ಅಚ್ಚರಿಯೆಂಬಂತೆ ಕರುಣೆಯಲ್ಲಿ ಆಸ್ವಾದಿಸುವುದರ ಬಗ್ಗೆ ಈ ಓದು ನಮ್ಮಲ್ಲೊಂದು ಪಾಪಪ್ರಜ್ಞೆಯನ್ನು ಹುಟ್ಟಿಸುತ್ತದೆ. ’ಉಪ್ಪು ಹೊತ್ತ ಕಡಲು/ ಹಸಿವು ಹೊತ್ತ ಒಡಲು/ ತುಂಬಾ ವಿಶಾಲ’ (ಮಣ್ಣ ಪರಿಮಳ) ಎನ್ನುವ ಸಾಲುಗಳು ಕೇವಲ ವ್ಯಕ್ತಿಯೊಬ್ಬನ ವೈಯಕ್ತಿಕ ಹಸಿವಿನ ಅನುಭವದ ನೆಲೆಯಲ್ಲಿ ಹುಟ್ಟುವಂಥವಲ್ಲ. ’ಒಡಲುಗೊಂಡವ ಹಸಿವ ಒಡಲುಗೊಂಡವ ಹುಸಿವ ನೀನೊಮ್ಮೆ ಒಡಲುಗೊಂಡು’ ನೋಡ ಎಂದು ವಚನಕಾರ ದಾಸಿಮಯ್ಯ ದೇವರಿಗೆ ಹಾಕುವ ಸವಾಲನ್ನ ಈ ಸಾಲುಗಳು ರಿಂಗಣಿಸುತ್ತಿವೆ. ಜೀವಸಂಕುಲಕ್ಕೆ ಅರ್ಥವಾಗುವ ಮೊದಲ ಮತ್ತು ಅತಿ ಪ್ರಾಥಮಿಕ ಸಂವೇದನೆಯೇ ಹಸಿವು. ಹಾಗಾಗಿ, ಇವು ಎಲ್ಲ ಸಂವೇದನಾಶೀಲ ಓದುಗರನ್ನ ತಟ್ಟುವ ರಚನೆಗಳು. ಹಸಿವಿನ ಉರಿ ಮತ್ತು ಸಂಕಟವನ್ನು ಹಾಡಿಕೊಳ್ಳುವ ಇಲ್ಲಿಯ ಕವನಗಳ ತೀವ್ರತೆಯನ್ನು ಕಂಡರೆ ಅವುಗಳ ವಿಮರ್ಶೆ ಮಾಡುವುದೇ ಅಸೂಕ್ಷ್ಮವೆನಿಸಿಬಿಡುತ್ತದೆ. ವಿಮರ್ಶೆಗೆ ವಿನಾಯಿತಿ ಬೇಕೆಂದಲ್ಲ. ಹಾಗೆ ನೋಡಿದರೆ ಇಲ್ಲಿ ಹಸಿವನ್ನು ಹಾಡುವ ರಚನೆಗಳೇ ಸಶಕ್ತವಾದ ಕಾವ್ಯವಾಗಿ ನಿಂತಿವೆ.

ರಾಮಪ್ಪ ಕೋಟಿಹಾಳ

ಶ್ರಮದ ಬದುಕಿನ ಸಶಕ್ತ ಅಭಿವ್ಯಕ್ತಿಯಾಗಿ ಮೊದಲ ಕವನವಿದೆ (ಆ ಕೈಗಳು). ’ಮಲದ ಗುಂಡಿಗೆ ಬಿದ್ದು/ ಪ್ರತಿದಿನ ಪ್ರಾಣ ಬಿಡುವ/ ಚರಂಡಿ ಚನಿವಾರಗಳಲ್ಲಿ ಮನೆ ಮಾಡಿ/ ತಮ್ಮದೇ ತೊಗಲು ಸುಲಿದು/ ಕೆರ ಮಾಡಿಕೊಟ್ಟು ಪಾದ ಕಾಪಾಡುವ… ಸ್ಮಶಾನ ಹೊತ್ತು ತಿರುಗುವ ಕತ್ತಲ ಹಕ್ಕಿಗಳ’ (…ಕತ್ತಲ ಹಕ್ಕಿಗಳು) ಬೆವರ ಬವಣೆಯ ಚಿತ್ರಣ ಅದರ ಎಲ್ಲ ದುರಂತದ ಆಯಾಮಗಳೊಂದಿಗೆ ಮೂಡಿದೆ. ಹೊಸ ಬದುಕಿಗಾಗಿ ಪಟ್ಟಣದತ್ತ ನಡೆಯುವ ಇವರು ಅಲ್ಲಿ ಕಾಣುವುದು (ಶಹರದ ನಡಿಗೆ) ಅನಾಥಪ್ರಜ್ಞೆಯ ನರಕವನ್ನೇ. ಶ್ರಮ ಸಂಸ್ಕೃತಿಯ ಭಾಗವಾದ ಬೆವರು ಮತ್ತು ಮೇಲ್ಜಾತಿ ಸಂಸ್ಕೃತಿಯ ಪಾವಿತ್ರ್ಯ/ಅಪಾವಿತ್ರ್ಯದ ಹೆಸರಿನ ಹಿಂಸೆಗೆ ಪ್ರತಿಕ್ರಿಯೆಯಾದ ಕಣ್ಣೀರು- ಎರಡಕ್ಕೂ ಒಂದರಿಂದ ಇನ್ನೊಂದಕ್ಕೆ ಬಿಡುಗಡೆಯೇ ಇಲ್ಲವೇ ಎಂಬ ಪ್ರಶ್ನೆಯನ್ನು (ಉಪ್ಪು ನೀರು) ಇಲ್ಲಿಯ ಕವಿತೆಗಳ ಓದು ಹುಟ್ಟಿಸುತ್ತದೆ.

ಜಾತಿವ್ಯವಸ್ಥೆಯ ಕ್ರೌರ್ಯ ಹಲವಾರು ರೂಪಗಳಲ್ಲಿ ಎದ್ದು ಕಾಣುತ್ತದೆ. ’ನೆತ್ತರು ಸೂತಕ’ ಎಂಬ ಕವನ ಈ ಕ್ರೌರ್ಯದ ಅತಿರೇಕಕ್ಕೊಂದು ನಿದರ್ಶನ. ’ಒಬ್ಬಂಟಿ ಹುಡುಗಿ/ ಊರ ಮುಂದಿನ ವನವಾದಳು/ ವನ ಹೊಕ್ಕು ಬಂದವರೆಲ್ಲ ಒಡೆಯರಾದರು’ (ನೆತ್ತರು ಸೂತಕ). ಇಲ್ಲಿ ಕೇರಿಯ ಹುಡುಗಿ ಮೈನೆರೆಯುವುದೂ ಕೂಡ ಸೂತಕದ ಕಥೆಯಾಗುತ್ತದೆ. ಜಾತಿಗ್ರಸ್ತ ಮನಸುಗಳ ಕ್ರೌರ್ಯ ಮತ್ತು ಆ ಸಂಕಥನದ ಮೂಲಕ ನಡೆವ ದಬ್ಬಾಳಿಕೆಯನ್ನು ಸೆರೆಹಿಡಿದ ಕವನಗಳು ಯಶಸ್ವಿಯಾಗಿವೆ. ’ನೀವು ನಮ್ಮನ್ನು ನೋಡಿ ನಗುತ್ತೀರಿ/ ಎದೆ ನಡುಗುವ ಹಾಗೆ/ ಆ ನಗುವಿಗೆ ಮಾತ್ರ ಸಾಧ್ಯ/ ನಗಿಸಿ ಅಳಿಸುವ ಕಲೆ (…) ನಿನ್ನ ಒಳ್ಳೆತನ/ ನನ್ನ ಮಗಳ ಸೆರಗಿನ ಋಣವಾಗದಿರಲಿ’ (ಕಾಲದ ಕಟಕಟೆ). ಎಲ್ಲರಿಗೂ ಬೇಕಾದ ದುಡಿವ ಕೈಗಳನ್ನ ಪ್ರಕೃತಿಯೊಂದಿಗೆ ಸಮೀಕರಿಸಿ ಉಳ್ಳವರ ಮತ್ತು ಅವರ ನಿಯಂತ್ರಣದಲ್ಲಿರುವ ವ್ಯವಸ್ಥೆಯ ದುಷ್ಟತನವನ್ನು ’ಮರದ ನಡಿಗೆ’ ಕವಿತೆ ಬಿಚ್ಚಿಟ್ಟಿದೆ. ಶೋಷಿತರ ಸಾಮುದಾಯಿಕ ದೈನೇಸಿ ಸ್ಥಿತಿಯನ್ನು, ಅದು ತರುವ ಮಾನಸಿಕ ಹಿಂಸೆಯನ್ನು ಕೆಲ ಕವನಗಳು ಕಾಣಿಸುತ್ತವೆ. ನಿದರ್ಶನವಾಗಿ ಮುಂದಿನ ಸಾಲುಗಳನ್ನು ನೋಡಬಹುದು. ’ಸ್ಮಶಾನ ಹೊತ್ತು ತಿರುಗುವ ಕತ್ತಲ ಹಕ್ಕಿಗಳು(…) ಅರಿವಿನ ಉರಿಯಲ್ಲೇ ಮುಳುಗೇಳುತ್ತವೆ/ ಅವಮಾನದ ಕಣಿವೆಯಲ್ಲಿ ಮನೆ ಮಾಡಿವೆ’ (ಕತ್ತಲ ಹಕ್ಕಿಗಳು). ಅರಿವಿನ ಉರಿಯಲ್ಲಿ ಬೆಂದು ಬೆಳೆದ ತನ್ನ ಕಾವ್ಯದ ವಿಚಾರಕ್ಕಾಗಿ ಹಿಂದೊಮ್ಮೆ ದೈಹಿಕ ಹಲ್ಲೆಗೂ ಒಳಗಾಗಿದ್ದ ಕವಿ ರಾಮಪ್ಪನವರ ದುಗುಡವೂ ಇಲ್ಲಿದೆ (ಗುಂಡಿಗೆನಾದ). ಮೇಲುಕೀಳಿನ ಭೀಕರತೆಯನ್ನು ಊರು ಕೇರಿಯ ದಾರಿಗಳು ಕೂಡ ಅನುಕ್ರಮವಾಗಿ ಉಸಿರಾಡುತ್ತಿರುವುದು (ದಾರಿಗಳು) ಇಲ್ಲಿ ದಾಖಲಾಗುವ ಭೀಕರ ವಾಸ್ತವ. ಜಾತಿಯ ವಿಷಬೀಜವನ್ನು ಉಂಡು ಕಾನನವಾಗಿ ಬೆಳೆದಿರುವ ಇಂಥ ಸಂವೇದನಾರಹಿತ ಸಮಾಜದಲ್ಲಿ ಪ್ರೇಮವೆಂಬ ಭಾವ ಕೂಡ ಮರಣ ವಾರ್ತೆಯಂತೆ ಕೇಳಿಸುತ್ತದೆ. ಭೋದಿಯ ಪರಿಮಳ, ಮೂರು ಹೂವು, ದಾರಿಗಳು, ಜಾತಿಯ ರೋಗಾಣು- ಈ ಕವನಗಳು ಇದನ್ನು ವ್ಯಕ್ತಪಡಿಸಿವೆ. ಪ್ರೇಮ ಕವಿತೆಗಳೂ ಕೂಡ ಸಾಮಾಜಿಕ ಅಡೆತಡೆಗಳನ್ನು ಮೀರಿ ನಿಲ್ಲಲಾರದ ಹಿಂಸೆ ಆತಂಕಗಳನ್ನು ಚಿತ್ರಿಸಿವೆ. ಅಲ್ಲಲ್ಲಿ ಪ್ರೇಮಿಗಳಿಬ್ಬರ ನಡುವಿನ ವಿನಿಮಯವಿದ್ದರೂ ಜಾತಿಯ ಗೋಡೆ ಅದನ್ನು ಭಗ್ನಗೊಳಿಸಿದೆ (ಮೂರು ಹೂವು). ’ಧಾತು ಬೀಜವಾಗಬಲ್ಲುದೇ ಹೊರತು ಹೊಲೆಯಲ್ಲ’ ಎನ್ನುತ್ತಾ ಅಸ್ಪೃಶ್ಯತೆಗೆ ತೋರುವ ಪ್ರತಿರೋಧ ಈ ಕಾವ್ಯಕ್ಕೆ ಶಕ್ತಿ ತಂದಿದೆ.

ಇದನ್ನೂ ಓದಿ: ಧಾವಂತದಲ್ಲಿ ಓದಿಸಿಕೊಳ್ಳುವ ಗಂಗಪ್ಪ ತಳವಾರ್ ಅವರ ’ಧಾವತಿ’

ನೊಂದವರ ನೋವುಗಳನ್ನೆಲ್ಲ ಮೈದುಂಬಿಕೊಂಡ ಜಂಬಣ್ಣ ಅಮರಚಿಂತರ ಮತ್ತು ರಂಜಾನ್ ದರ್ಗಾರವರ ಕಾವ್ಯ ’ವಿಶ್ವ ಹೃದಯದ ಗಾಯಗಳಲ್ಲಿ ನಾನಿದ್ದೇನೆ’ ಎಂಬ ಮಾತುಗಳಲ್ಲಿ ತಮ್ಮ ನೆಲೆಯನ್ನು ಗುರುತಿಸಿಕೊಳ್ಳುತ್ತವೆ ಎಂದು ರಹಮತ್ ತರೀಕೆರೆ ವಿಶ್ಲೇಷಿಸುತ್ತಾರೆ. ನನ್ನ ಗುಂಡಿಗೆಗೆ ದೊಡ್ಡದೊಂದು ಗಾಯವಾಗಿದೆ ಎನ್ನುವ ರಾಮಪ್ಪನವರದೂ ಒಂದು ರೀತಿಯ ಗಾಯಗಳ ಕಾವ್ಯವೇ. ಇವರ ಕಾವ್ಯದ ನೆಲೆ ’ಕತ್ತಲ ಹಕ್ಕಿಗಳು… ಅವಮಾನದ ಕಣಿವೆಯಲ್ಲಿ ಮನೆ ಮಾಡಿವೆ’ ಎಂಬ ಸಾಲುಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅಮರಚಿಂತರ ಕವಿತೆಗಳನ್ನು ಅತಿಯಾಗಿ ಆವರಿಸಿಕೊಂಡಿರುವ ಗಾಢ ವಿಷಾದ ದುಃಖ ನೋವು, ಅವರ ಕವಿತೆಗಳಲ್ಲಿ ಸಿಗಬಹುದಾದ ಬೆಳಕನ್ನು ಮಬ್ಬುಗೊಳಿಸದಿರಲಿ ಎಂಬರ್ಥದಲ್ಲಿ ತರೀಕೆರೆ ಹೇಳುತ್ತಾರೆ. ರಾಮಪ್ಪನವರ ಕಾವ್ಯಕ್ಕೂ ಇಂಥ ಸೂಕ್ಷ್ಮ ಎಚ್ಚರದ ಅಗತ್ಯವಿದೆ ಎಂದು ನನಗನಿಸುತ್ತದೆ. ವೈಯಕ್ತಿಕ ಮತ್ತು ಕೌಟುಂಬಿಕ ಬದುಕಿನ ಕಷ್ಟಕೋಟಲೆಗಳು ಕವಿಯ ಲೋಕಗ್ರಹಿಕೆಯ ಸತ್ವವಾಗಿವೆ; ಇನ್ನೊಂದು ರೀತಿಯಲ್ಲಿ ಮಿತಿಯಾಗಿಯೂ ಪರಿಣಮಿಸಿವೆ.

’ರಕ್ತ ಚಂದ್ರ’ ಕವಿತೆಯಲ್ಲಿ ನಿರೂಪಕನ ವೈಯಕ್ತಿಕ ಬದುಕಿನ ಸ್ಥಿತ್ಯಂತರದ ಸುಳಿವಿದೆ. ವೈಯಕ್ತಿಕ ಮತ್ತು ಸಾಮಾಜಿಕವೆಂಬುದು ಒಂದಕ್ಕೊಂದು ಹೆಣೆದುಕೊಂಡಿರುವುದರಿಂದ, ಅದು ಸಮಾಜದ ಸ್ಥಿತ್ಯಂತರವೂ ಆಗಿರಬಹುದು. ಹೀಗೆ ಓದಿದಾಗ, ಹಸಿವು ಅಸ್ಪೃಶ್ಯತೆ ಮತ್ತು ಜಾತಿಯ ವಿಷದಿಂದ ಈ ನಾಡು ತನ್ನನ್ನು ತಾನೇ ನಾಶಗೊಳಿಸಿಕೊಳ್ಳುವುದರ ಅಂಚಿನಲ್ಲಿ ಎಚ್ಚರವಾಗುತ್ತಿರುವ ದೃಶ್ಯವನ್ನು ಕಟ್ಟಿಕೊಡುತ್ತದೆ. ದುಃಸ್ವಪ್ನವಾಗಿ ಕಾಡಿದ ಕೇಡುಗಾಲ ಮರೆಯಾಗಿ ಬರಲಿರುವ ಹೊಸ ಕಾಲದ ಆಶಾಭಾವವಾಗಿ ಇದು ಕಾಣುತ್ತದೆ. ಈ ಕವಿತೆಗಳು ದಟ್ಟವಾದ ಅನುಭವಗಳು ಮತ್ತು ಅಭಿವ್ಯಕ್ತಿಯ ಕಲಾತ್ಮಕತೆಯಿಂದ ಮೂಡಿವೆ. ಬದುಕಿನ ತಲ್ಲಣ ಮತ್ತು ಕ್ರೌರ್ಯಗಳನ್ನ ದಾಟಿಕೊಳ್ಳಲು ರಾಮಪ್ಪನವರು ಕಾವ್ಯವನ್ನೇ ಆಸರೆಯಾಗಿಸಿಕೊಂಡಂತಿದೆ. ಲಂಕೇಶರ ಮಾತಿನಲ್ಲಿ ಹೇಳುವುದಾದರೆ ಬದುಕಿಗೆ ಕತ್ತು ಕೊಟ್ಟ ಮತ್ತು ಬದುಕಿನಿಂದ ತಲ್ಲಣಗೊಂಡ ಅನುಭವಗಳನ್ನು ಈ ಕವಿತೆಗಳು ನೀಡುತ್ತವೆ ಮತ್ತು ನಿಜವಾದ ಜೀವಂತಿಕೆಯಿಂದ ಕೂಡಿವೆ.

ಚಿತ್ತದ ಹುತ್ತ, ಬತ್ತ ಬಾನವಾಗಿ- ಓದುಗನಲ್ಲಿ ಗಾಢವಾದ ಕಲ್ಪನಾಶೀಲತೆಯನ್ನು ಮತ್ತು ಒಂದಿಷ್ಟು ಅಮೂರ್ತ ಚಿಂತನೆಯನ್ನು ಬೇಡುವ ಉತ್ತಮ ರಚನೆಗಳು. ಮರದ ನಡಿಗೆ, ಹಸಿವ ಧ್ಯಾನ, ಇರುವೆ ಪಾದ- ಕವಿತೆಗಳಲ್ಲಿ ತೀವ್ರ ಸಂವೇದನೆಯಿಂದ ಕೂಡಿದ ಕಲೆಯೊಂದು ಅರಳಿದೆ.

ಕತ್ತಲೂರಿನ ಜನ, ಬಿಂದು- ಇಂಥ ಕೆಲವು ಕವನಗಳಲ್ಲಿ ಅನುಭವಗಳು ಪ್ರತಿಮೆಗಳ ಮೂಲಕ ಸಾವಯವ ಸಮಗ್ರತೆಯಲ್ಲಿ ಮೈದಾಳಲು ವಿಫಲವಾದಂತಿವೆ. ಜೀವ ಕೊಡಬಹುದಾದ ಪ್ರತಿಮೆಗಳು ಅಥವಾ ಅನುಭವದ ಸಂವಹನಕ್ಕೆ ತೀರಾ ಅಗತ್ಯವಾದ ಕೊಂಡಿಗಳು ಎಲ್ಲೋ ಗೈರಾಗಿವೆ. ಕಟುವಾಸ್ತವದ ಅನುಭವಗಳನ್ನು ಸಾಗಿಸಲು ಕಾವ್ಯದ ಕಟ್ಟುಪಾಡುಗಳೂ ಅಡ್ಡಿಯಾಗಿರಬಹುದೇನೋ. “ಚರಿತ್ರೆ ಪಾಯದ ನಿಯಮ ಮೀರಿ ಹಾಡುವಂತಿಲ್ಲ ಒಡಲ ಹಾಡು” (ತೂಗುದೀಪ) ಎನ್ನುವ ಕವಿಯ ದೂರಿನಲ್ಲಿ ಕಾವ್ಯವೆಂಬ ಮಾಧ್ಯಮದ ಕುರಿತ ಈ ಅಸಮಾಧಾನ ಕಾಣುತ್ತದೆ. ಅಷ್ಟೇನೂ ಹೊಸತನ ಮತ್ತು ಮಹತ್ವಾಕಾಂಕ್ಷೆ ಇಲ್ಲದ ಸಾಧಾರಣವೆನಿಸುವ ಪದ್ಯಗಳೂ ಕೆಲವಿವೆ.

ಈ ಕೃತಿಯಲ್ಲಿ ಸಾಮಾಜಿಕ ವಿಷಮತೆಯಿಂದ ಉಂಟಾದ ಸಂಕಟಗಳ ಆರ್ತನಾದ ಮತ್ತು ಅಸಹಾಯಕತೆ ಓದುಗನ ಎದೆಯಲ್ಲಿ ತಲ್ಲಣವನ್ನುಂಟುಮಾಡುತ್ತದೆ. ಅದೇ ಹೊತ್ತಲ್ಲಿ ಈ ವಿಕ್ಷಿಪ್ತ ಸಾಮಾಜಿಕತೆಯನ್ನು ದಾಟಿಕೊಳ್ಳಲು ಬೇಕಾದ ದಾರಿಗಳನ್ನು ಕೃತಿ ಕಾಣಿಸುತ್ತದೆಯೇ? ಯಾವ ಸಾಂಸ್ಕೃತಿಕ ನಂಬಿಕೆಗಳನ್ನು, ಮೌಲ್ಯಗಳನ್ನು ಆಸರೆಯಾಗಿ ನೀಡುತ್ತದೆ? ಈ ಪ್ರಶ್ನೆಗಳು ಹುಟ್ಟುತ್ತವೆ. ’ತೊಗಲಿಗೂ ಹೊಲೆಯೇ..’ ಎಂಬ ಕವಿತೆ ಈ ದೃಷ್ಟಿಯಲ್ಲಿ ಅತ್ಯಂತ ಮುಖ್ಯವಾಗಿ ನಿಲ್ಲುತ್ತದೆ. ’ನನ್ನೆದೆಯೇ ದೇವಾಲಯವೆಂದುಕೊಂಡಾಗೆಲ್ಲ ಹೃದಯ ನ್ಯಾಯಸ್ಥಾನದಲ್ಲಿ ಕುಂತು ಪ್ರೀತಿಸ್ನೇಹವನ್ನು ಹಂಚುತ್ತಿರುತ್ತದೆ’ (ತೊಗಲಿಗೂ ಹೊಲೆಯೇ) ಎಂಬಲ್ಲಿ ಸುಸ್ಥಿರ ಬದುಕಿಗೆ ಬೇಕಾದ ಸಾಂಸ್ಕೃತಿಕ ಮೌಲ್ಯ ಮತ್ತು ಆಶಯಗಳು ಒಂದಷ್ಟು ಸಿಗುತ್ತವೆ. ದುಸ್ಥಿತಿಗಳನ್ನು ಮೀರಿನಿಂತು ಪೊರೆಕಳಚಿ ಹಾರುವ ಕಂಬಳಿ ಹುಳುವಿನ ಆಶಯವನ್ನು (ಚಿತ್ತದ ಹುತ್ತ) ಶೋಷಿತರಲ್ಲಿ ಈ ಕವನಗಳು ನಿರೀಕ್ಷಿಸುತ್ತಿರಬಹುದು. ಇವುಗಳ ಹೊರತಾಗಿ, ಹೊಸ ಚೈತನ್ಯ ತೋರುವ ಮತ್ತು ಆಶಯದ ಕವನಗಳು ಕಡಿಮೆಯಿವೆ. ಮುಂದಿನ ಹಾದಿಯಲ್ಲಿ ಕಾಣಬಹುದೇನೋ. ಹೀಗಾಗಿ, ಕವಿ ತನ್ನ ಸಾಂಸ್ಕೃತಿಕ ಬಿತ್ತಿಯಲ್ಲಿ ಸಾಗಿ ತಲುಪಬಹುದಾದ ಮುಂದಿನ ದಾರಿಯ ಕಲ್ಪನೆ ವಿಮರ್ಶೆಗೆ ಪೂರ್ಣವಾಗಿ ನಿಲುಕುವಂತಿಲ್ಲ.

ಇಲ್ಲಿಯ ಕೆಲವು ಕವನಗಳು ಸುಮಾರು ಒಂದೆರಡು ದಶಕಗಳಷ್ಟು ಹಿಂದಿನ ಬದುಕಿನ ಚಿತ್ರಣವನ್ನು ಸೆರೆಹಿಡಿದಿವೆ ಎನಿಸುತ್ತದೆ. ಆಗ ಲೋಹಿಯಾ, ಜೆ.ಪಿಯವರ ಸಮಾಜವಾದದಿಂದ ಪ್ರಭಾವಿತರಾದ ವಚನಸಾಹಿತ್ಯದ ಒಲವುಳ್ಳವರು ಆ ಭಾಗದ ರಾಜಕೀಯ ನೇತಾರರಾಗಿದ್ದರು. ಆದರೆ, ಅವರ ಆ ಕಾಲದ ಸಮಾಜವಾದಿ ರಾಜಕೀಯದ ಸಂಕಥನಗಳು ಮತ್ತು ಸರಿಸುಮಾರು ಅದೇ ಕಾಲದ ಅವರದೇ ಪ್ರದೇಶದ ರಾಮಪ್ಪನವರ ಕವಿತೆಗಳಲ್ಲಿ ಕಾಣುವ ಸಾಮಾಜಿಕ ವಾಸ್ತವಗಳ ನಡುವಿನ ಬಿರುಕು ತುಂಬಾ ಆಳವಾಗಿದೆ. ಒಂದು ಕಾಲದ ಸಮಾಜದ ರಾಜಕೀಯ ಪರಿಭಾಷೆ ಮತ್ತು ಆ ಕಾಲದ ವ್ಯಕ್ತಿಯೊಬ್ಬನ ಎದೆಯ ಭಾಷೆ ಒಂದಾಗಿ ಕೂಡುವುದು ಕಷ್ಟವಾದರೂ, ಅವುಗಳ ಕೂಡಿಕೆಯ ಆದರ್ಶ ಸ್ಥಿತಿಗೆ ಹಂಬಲಿಸಲೇಬೇಕಿದೆ. ಸಮಕಾಲೀನ ದಲಿತ ಬಂಡಾಯೋತ್ತರ ಕಾವ್ಯದಲ್ಲಿ ಕಾಣುವ ಆಧುನಿಕ ಅಭಿವೃದ್ಧಿ ಮಾದರಿಗಳ ಮತ್ತು ಜಾಗತೀಕರಣದ ಬಗೆಗಿನ ಸ್ಪಂದನೆ ಇಲ್ಲಿ ಗೈರಾಗಿದೆ. ಆದರೆ, ಸಮಕಾಲೀನತೆ ಯಾರ ದೃಷ್ಟಿಯಲ್ಲಿ ಎಂಬ ಪ್ರಶ್ನೆ ಬರುತ್ತದೆ. ಯಾಕೆಂದರೆ, ದಲಿತ ಬಂಡಾಯ ಲೇಖಕರಲ್ಲೂ, ಅವರ ಬದುಕು ನಿಂತಿರುವ ಭಿನ್ನ ನೆಲೆಗಳನ್ನಾಧರಿಸಿ ಕಾಡುವ ಆದ್ಯತೆಗಳು ಕಾಣುವ ಸತ್ಯಗಳು ಭಿನ್ನವಾಗಿರುತ್ತವೆ. ಒಟ್ಟಾರೆ, ಮಾನವೀಯ ತುಡಿತಗಳನ್ನು ಹುಟ್ಟಿಸಬಲ್ಲಂತಹ ಅಮೂಲ್ಯ ಮತ್ತು ಸತ್ವಯುತ ರಚನೆಗಳು ಈ ಕೃತಿಯಲ್ಲಿವೆ. ಈ ಕೃತಿಯನ್ನು ಗುರುತಿಸಿ 2022ನೇ ಸಾಲಿನ ಚಿ. ಶ್ರೀನಿವಾಸರಾಜು ಕಾವ್ಯ ಪುರಸ್ಕಾರವನ್ನು ನೀಡಿ ಪ್ರಕಟಿಸಿರುವ ಸಂಗಾತದ ಗೆಳೆಯ ಟಿ.ಎಸ್.ಗೊರವರಗೆ ಮತ್ತು ಕವಿ ರಾಮಪ್ಪಗೆ ಇಬ್ಬರಿಗೂ ಅಭಿನಂದನೆಗಳು.

ಜಿರಾಫೆ ಕತ್ತಿನ ಅವ್ವ
ಕವನ ಸಂಕಲನ
ಲೇಖಕರು: ರಾಮಪ್ಪ ಕೋಟಿಹಾಳ
ಬೆಲೆ: ರೂ 90/-
ಪ್ರಕಾಶನ: ಸಂಗಾತ ಪುಸ್ತಕ

ಡಾ. ಸಿ. ಬಿ. ಐನಳ್ಳಿ

ಡಾ. ಸಿ. ಬಿ. ಐನಳ್ಳಿ
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...