Homeಅಂಕಣಗಳುಧಾವಂತದಲ್ಲಿ ಓದಿಸಿಕೊಳ್ಳುವ ಗಂಗಪ್ಪ ತಳವಾರ್ ಅವರ ’ಧಾವತಿ’

ಧಾವಂತದಲ್ಲಿ ಓದಿಸಿಕೊಳ್ಳುವ ಗಂಗಪ್ಪ ತಳವಾರ್ ಅವರ ’ಧಾವತಿ’

- Advertisement -
- Advertisement -

ಗಂಗಪ್ಪ ತಳವಾರ್ ಅವರ ಚೊಚ್ಚಲ ಕಾದಂಬರಿ ’ಧಾವತಿ’ ಕೋಲಾರ ಸೀಮೆಯ ಭಾಷೆಯ ಬನಿಯಲ್ಲಿ ಕನ್ನಡದ ವಿವೇಕಕ್ಕೆ ದಕ್ಕಬಹುದಾದ ತಳಪ್ರಜ್ಞೆಯನ್ನು ಕಸಿ ಮಾಡುವಲ್ಲಿ ಯಶಸ್ವಿಯಾಗಿದೆ. ಅಕ್ಕನ ವಚನದೊಂದಿಗೆ ತೆರೆದುಕೊಳ್ಳುವ ಕಥನ, ಅಕ್ಕನ ಹುಡುಕಾಟದ ಧಾವತಿಯನ್ನು ಉದ್ದಕ್ಕೂ ಹೊತ್ತು ಕ್ರಮಿಸುತ್ತದೆ.

ಇಡೀ ಕಾದಂಬರಿಯನ್ನು ಚಂದ್ರಿ ಮತ್ತು ದುಗ್ಯಮ್ಮ ಪಾತ್ರಗಳು ಆವರಿಸಿಕೊಂಡಿವೆ. ಕತೆಯ ಕೇಂದ್ರಬಿಂದು ಚಂದ್ರಿ. ಅವಳ ಜೀವನದ ಕಕ್ಕುಲಾತಿ, ಬದುಕು ಕಟ್ಟಿಕೊಳ್ಳಲು ಪರದಾಡುವ ಪರಿ, ಅಕ್ಕ ಚೆನ್ನಮಲ್ಲಿಕಾರ್ಜುನನನ್ನು ಹುಡುಕಿ ಹೊರಟ ದಾರಿಯಂತೆಯೇ ಇದೆ. ಸ್ಮಶಾನದಿಂದ ಪ್ರಾರಂಭವಾಗುವ ಕತೆ ಸ್ಮಶಾನದೊಂದಿಗೇ ಅಂತ್ಯವಾಗುತ್ತದೆ. ಈ ಸ್ಮಶಾನ ಯಾತ್ರೆ ಲೇಖಕರ ಸಾಮಾಜಿಕ ದೃಷ್ಟಿಕೋನದ ಸೂಚಕವಾಗಿದೆ. ಇಲ್ಲಿ ಸಾವು, ದುರಂತ ಬದುಕಿನ ಸುಖಾಂತ್ಯವೆನಿಸುವುದು ವಿಪರ್ಯಾಸ. ಚಂದ್ರಿ ಚಿಕ್ಕಂದಿನಿಂದಲೂ ಪ್ರೀತಿಗೆ ಹಾತೊರೆಯುವ ಬಗೆ ಎಲ್ಲಾ ಹೆಣ್ಣುಗಳದ್ದೇ ಆಗಿದೆ. ದುಗ್ಯಮ್ಮನ ನಡವಳಿಕೆ, ಒರಟುತನ, ಆಗಾಗ ಬೆಂಡು ಬತ್ತಾಸುಗಳ ಜೊತೆಗೆ ಬಂದುಹೋಗುವ ಅಪ್ಪನ ಮೇಲಿನ ಅಕ್ಕರೆ, ಚಂದ್ರಿಯ ಕಣ್ಣಂಚಲ್ಲಿ ತುಂಬಿ ತುಳುಕುವ ಪ್ರೀತಿಯ ಹಂಬಲ ಎದ್ದುಕಾಣುತ್ತದೆ. ದಲಿತ ಕೇರಿಯ ಚಿತ್ರಣದೊಂದಿಗೆ ಅಲ್ಲಿನ ದಾರುಣ ಸ್ಥಿತಿಯನ್ನು ಕಣ್ಣಿಗೆಕಾಣುವಂತೆ ಕಟ್ಟಿಕೊಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.

ಮೇಲ್ನೋಟಕ್ಕೆ ಚಂದ್ರಿ ಆರ್ಥಿಕ ಕಾರಣದಿಂದಾಗಿ ಶಾಲೆಯಿಂದ ಹೊರಗುಳಿದಂತೆ ಕಂಡರೂ, ಭಾರತೀಯ ಜಾತಿ ಪ್ರಣೀತ ಸಾಮಾಜಿಕ ವ್ಯವಸ್ಥೆ ದಲಿತರ ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯುವಂತೆ ನೋಡಿಕೊಳ್ಳುವ ಬೇರೇ ಕಾರಣವನ್ನೇ ಹೊಂದಿದೆ. ಭೇದಭಾವ ತೋರುವ, ಹೀಯಾಳಿಸುವ ಜಾಗಕ್ಕಿಂತ, ಯಾವ ಭೇದವೂ ಇರದ ಕಾಡು ಮತ್ತು ಅಲ್ಲಿ ಸಿಗುವ ನೆಮ್ಮದಿಗಾಗಿ ಗೊಡ್ಡೆಮ್ಮೆಗಳ ಮೇಯಿಸುವುದೇ ಲೇಸು ಎನಿಸುವುದು ತಳಸಮುದಾಯದ ಕೊನೆಯಲ್ಲಿರುವವರಿಗೆ ಇಲ್ಲಿ ಸಹಜ. ಜೀವನಕ್ಕಾಗಿ ಹೆಕ್ಕುವ ಸಗಣಿ, ಅವ್ವನ ಬೈಗುಳಗಳಿಂದ ತಪ್ಪಿಸಿಕೊಳ್ಳಲು ಕೂಡ ಇದ್ದ ಕಾರಣವಾಗಿತ್ತು ಕುರುಚಲು ಕಾಡು ಸೇರುವುದು. ಎಮ್ಮೆ ಮೇಯಿಸುವಲ್ಲಿ ಸಿಕ್ಕ ಗೆಳತಿ ಗೆಳೆಯರು; ಅಲ್ಲಿ ಆಡುತ್ತಿದ್ದ ಆಟಗಳು; ತಿನ್ನೋಕೆ ಸಿಗುತ್ತಿದ್ದ ನಾನಾ ಥರದ ಹಣ್ಣುಗಳು, ಕಬ್ಬು, ಚೇಪೆಕಾಯಿ, ಏಡಿ, ಚಂದ್ರಿಯ ಅಚ್ಚುಮೆಚ್ಚಾಗಿದ್ದವು. ಕೇರಿಗೂ ಹಟ್ಟಿಗೂ ಇದ್ದ ಜಿಯೊಗ್ರಾಫಿಕಲ್ ದೂರ ಕಡಿಮೆಯಾದರೂ, ಸಾಮಾಜಿಕ ಅಂತರ ದೊಡ್ಡದಿತ್ತು. ಸಗಣಿ ಹೆಕ್ಕೋದು, ಎಮ್ಮೆ ಮೇಯ್ಸೋದು, ಹೂ ಬಿಡ್ಸೋದು, ಹೊಲದ ಕೆಲ್ಸ, ಕಲ್ಲು ಹೊಡಿಯೋದು ಹೀಗೆ ಬದುಕಿನ ಸಂದರ್ಭಗಳಿಗೆ ತಕ್ಕನಾದ ಕೆಲಸಗಳನ್ನ ಮಾಡಿಕೊಂಡು ಬರುವ ಚಂದ್ರಿ, ಕೇರಿಯಲ್ಲಿ ಇದ್ದ ಬೇರೆ ಹುಡುಗಿಯರಿಂತ ಸ್ವಲ್ಪ ನಾಜೂಕು ಸ್ವಭಾವದವಳೇ ಅನ್ನಿಸುತ್ತದೆ. ತನ್ನ ಬೇರೆ ಗೆಳತಿಯರ ಧೈರ್ಯ, ಸಾಹಸ ಪರಿಚಯಿಸುವಾಗಿನ ಮಾತುಗಳಿಂದ ಹಾಗೆನಿಸುತ್ತದೆ.

ಅವ್ವನ ಬಿಗಿ ಬಂದೋಬಸ್ತಿನಲ್ಲಿ ಬೆಳೆವ ಚಂದ್ರಿಗೆ ಸಾಧುವಿನಂತಿದ್ದ ಅಪ್ಪ ಎಂದರೆ ಎಲ್ಲಿಲ್ಲದ ಪ್ರೀತಿ. ಆದರೆ ತಾಯಿಗೆ ಎಲ್ಲಿಲ್ಲದ ಇರುಸು-ಮುರುಸು. ಗಾರೆ ಕೆಲಸ ಮಾಡಿಕೊಂಡು ತನ್ನ ಪಾಡಿಗೆ ತಾನಿದ್ದ ಕದಿರೆಪ್ಪ, ಬಿಡುವಿದ್ದಾಗಲೆಲ್ಲ ಆಧ್ಯಾತ್ಮ ಜೀವಿ. ಕೈವಾರ ತಾತಯ್ಯನ ಭಕ್ತ. ಗಾರೆಕೆಲಸ ಮಾಡುವಾಗಲೇ ಕಟ್ಟಡದ ಮೇಲಿಂದ ಬಿದ್ದು ಪ್ರಾಣ ಬಿಡುವ ಅಪ್ಪನ ಸಾವಿನಿಂದ ಜರ್ಜರಿತಳಾದ ಚಂದ್ರಿ ಮತ್ತೆ ಜೀವನದ ಹದಕ್ಕಾಗಿ ಬೇಯುತ್ತಾಳೆ; ಬೇಯಲೇಬೇಕು ಬೇರೆ ದಾರಿ ಇಲ್ಲ. ದುಗ್ಯಮ್ಮನ ವರ್ತನೆ, ಅವಳ ಬೇಜವಾಬ್ದಾರಿತನ ಕೋಪ ತರಿಸಿದರೂ ಭಯ ತುಸು ಹೆಚ್ಚೇ ಇದ್ದ ಕಾರಣ ಏನೂ ಮಾತಾಡದೆ ದುಡಿಯಲು ಮುಂದಾಗುವ ಚಂದ್ರಿ ಶ್ರಮಿಕ ಹೆಣ್ಣುಗಳ ಪ್ರತಿನಿಧಿಯಾಗಿ ಕಾಣುತ್ತಾಳೆ.

ಗಂಗಪ್ಪ ತಳವಾರ್

ಗಂಗಪ್ಪನವರ ದಲಿತ ಪ್ರಜ್ಞೆಯನ್ನು ಸೂಕ್ಷ್ಮವಾಗಿ ಗಮನಿಸಲು ಓದುಗರಿಗೆ ಒಂದು ಸಿದ್ಧತೆ ಬೇಕಾಗುತ್ತದೆ. ಚಂದ್ರಿಯ ಅಪ್ಪ ಮತ್ತು ಮಾವ ಹೆಂಗರುಳ ಗಂಡಸರು. ಜಾತಿ ಅಪಮಾನದಿಂದ ದುಗ್ಯಮ್ಮ ಗಂಡು ಪ್ರಜ್ಞೆಯನ್ನು ಬೆಳೆಳಿಸಿಕೊಳ್ಳುವುದು ವಿಶೇಷವಾಗಿದೆ. ಹಾಗೆ ನೋಡಿದರೆ ’ಧಾವತಿ’ಯಲ್ಲಿ ಮಹಿಳಾ ದೃಷ್ಟಿಕೋನ ಮತ್ತು ದಲಿತ ದೃಷ್ಟಿಕೋನಗಳ ಸಮ್ಮಿಳಿತ ಮಾದರಿ ಒಂದಕ್ಕೊಂದು ಬೆಸೆದುಕೊಂಡಿರುವುದು ಕಾಣುತ್ತದೆ. ಇಲ್ಲಿ ಲೈಂಗಿಕತೆಯನ್ನು ವಿವರಿಸುವ ವಿಧಾನ ಬೇರೆ ಜಾತಿಯ ಲೇಖಕರಿಗಿಂತ ಭಿನ್ನವಾಗಿದೆ. ಯಾವುದೇ ಕಾಮೋದ್ರೇಕದ ಭಾಷೆಯನ್ನು ಬಳಸದೆ, ಸಹಜ ಮತ್ತು ನೈಸರ್ಗಿಕವಾಗಿ ಹೆಣೆದಿರುವ ವಿಧಾನ ಘನತೆಯುಕ್ತವಾಗಿದೆ. ಚಂದ್ರಿ ಮೈನೆರೆದಾಗ, ಅವಳೊಳಗೆ ವಯೋಸಹಜ ಆಕರ್ಷಣೆಗಳಾದಾಗ ವಿವರಿಸಿರುವ ವಿಧಾನ ವಿಶೇಷವಾಗಿದೆ. ಊರಿನ ಜಾತ್ರೆ, ಕತ್ತಲೆ, ಕೂಡಿಟ್ಟ ಹಣ ಕಳೆದುಕೊಂಡು ಪಡುವ ಸಂಕಟ, ಮನಸ್ಸಿಗೆ ಹಿಡಿಸಿದ ಸರ ಒಂದನ್ನು ಕದಿಯಲು ಮಾಡುವ ಧೈರ್ಯ, ಸಿಕ್ಕಿಬಿದ್ದಾಗ ಆದ ಅವಮಾನ, ಅವ್ವನ ಲೈಂಗಿಕ ಸಂಬಂಧ, ನೆರೆಹೊರೆಯವರ ಕರುಣೆ, ಪ್ರೀತಿ, ಭಯ ಎಲ್ಲವೂ ಎಲ್ಲಾ ಹಳ್ಳಿ, ನಗರಗಳಲ್ಲಿ ವಾಸಿಸುವ ಕೇರಿಯ ಜನರ ಸಾಮಾನ್ಯ ಬದುಕಿನ ಬಿಂಬವೇನೋ ಎಂಬಂತಿದೆ. ಇವುಗಳ ವಿಶ್ಲೇಷಣೆಯೂ ಕಣ್ಣಿಗೆ ಕಟ್ಟಿದಹಾಗಿದೆ.

ಚಂದ್ರಿ ತನ್ನ ಮಗಳನ್ನು ಗಂಡನ ಮನೆಯಲ್ಲೇ ಬಿಟ್ಟು ಬರುವುದು, ಅವಳು ಮತ್ತೊಬ್ಬಳು ಚಂದ್ರಿಯಾಗದಿರಲಿ ಎಂಬ ಆತಂಕದಿಂದಲೇ ಅನ್ನಿಸುತ್ತದೆ. ಮತ್ತು ದ್ರಾವಿಡ ಹೆಣ್ಣು ಮಕ್ಕಳಿಗೆ ತಾಳಿಗಿಂತ ಸ್ವಾಭಿಮಾನವೇ ಮುಖ್ಯ ಎಂಬುದನ್ನು ಕಾದಂಬರಿಕಾರರು ಸೂಕ್ಷ್ಮವಾಗಿ ಸೂಚಿಸಿದ್ದಾರೆ.

ದುರಂತಗಳಲ್ಲೇ ತಿರುವು ಪಡೆದು, ದುರಂತಗಳಲ್ಲೇ ಅಂತ್ಯಗೊಳ್ಳುವ ಹಲವಾರು ಚಂದ್ರಿಯರು ನಮ್ಮ ನಡುವೆಯೇ ಇದ್ದಾರೆ ಎಂಬುದನ್ನು ಕಾದಂಬರಿ ಪ್ರತಿ ಓದಿನಲ್ಲೂ ಎಚ್ಚರಿಸುತ್ತದೆ. ಮೇಲ್ನೋಟಕ್ಕೆ ’ಚಂದ್ರಿ’ ಎಂಬ ಹೆಣ್ಣೊಬ್ಬಳು ಲೈಂಗಿಕ ಅತ್ಯಾಚಾರಕ್ಕೆ ಬಲಿಯಾದಳು ಅನ್ನಿಸಿದರೂ, ಇಡೀ ಕಾದಂಬರಿ ಈ ಗಂಡು ಸಮಾಜದ ಅದರಲ್ಲೂ “ಮೇಲ್ಜಾತಿಯ ಗಂಡಸರ” ನಗ್ನತೆಯನ್ನು ತೋರುತ್ತದೆ.

ಇದನ್ನೂ ಓದಿ: ಮಂಪರು: ಸ್ತ್ರೀಸಂವೇದನೆ ಹಾಗೂ ಮೈಮನಗಳ ಉಭಯ ಸಂಕಟ

ಗೌಣ್ಣೋರ ಪ್ರಭಾಕರ, ಗಂಡ, ಮೈದುನ, ಲಾರಿ ಡ್ರೈವರ್ ಹೀಗೆ ನಂಬಿದ ಪ್ರತಿ ಗಂಡಸು ಅವಳನ್ನ ಬಳಸಿಕೊಳ್ಳುವ ವಿಕೃತತೆ ಕೇವಲ ಕಾಲ್ಪನಿಕವಲ್ಲ. ಲೈಂಗಿಕತೆ ಎಂಬುದು ಶ್ಲೀಲ-ಅಶ್ಲೀಲಕ್ಕಿಂತ ನಂಬಿಕೆಯ, ಒಪ್ಪಿಗೆಯ ಮೇಲೆ ನಿಂತಿರುತ್ತದೆ. ಇಲ್ಲಿ ಚಂದ್ರಿ ನಂಬಿದ ಅಷ್ಟೂ ಗಂಡಸರು ನಂಬಿಕೆಗೆ ಅನರ್ಹರು ಎಂಬುದು ಸಾಬೀತಾಗುತ್ತದೆ. ಇದು ಈ ವಿಕೃತ ಸಮಾಜದ ನೈಜ ಮುಖ. ಇಲ್ಲಿ ನಾಚಿಕೆ ಪಡಬೇಕಾದದ್ದು ಹೆಣ್ಣನ್ನು ವಸ್ತುವಿನ ಹಾಗೆ ಬಳಸಿಕೊಳ್ಳುವ ಗಂಡಸರು.

ಮುಗ್ಧೆಯಾಗಿದ್ದ ಚಂದ್ರಿಯ ಬದುಕನ್ನು ಅತಂತ್ರಗೊಳಿಸುವಲ್ಲಿ ಗಂಡಸರ ಪಾತ್ರ ದೊಡ್ಡದಿದೆ. ಸಾಯುವ ಮುಂಚೆ ತನ್ನ ಇಡೀ ಬದುಕಿನ ಪುಟಗಳನ್ನು ನೆನಪಿಸಿಕೊಳ್ಳುವ ಚಂದ್ರಿ, ಕೊನೆಗೆ ಅವ್ವನ ಮಡಿಲಲ್ಲೇ ಪ್ರಾಣ ಬಿಡುವುದು ದುರಂತದ ಅಂತ್ಯವೆನಿಸಬಹುದು. ಕತೆಗಾರರು ಚಂದ್ರಿಯ ಬದುಕನ್ನು ಹಸನುಗೊಳಿಸಬಹುದಿತ್ತು ಎಂದುಕೊಂಡರೆ ಅದು ಹಿಪೋಕ್ರಸಿಯಾಗಿಬಿಡುತ್ತದೆಯೇ ಎಂಬ ಪ್ರಶ್ನೆ ಏಳುತ್ತದೆ. ಬದುಕುಗಳೇ ಹೀಗರುವಾಗ ನಮ್ಮ ಕಲ್ಪನೆಗಳಲ್ಲಿ ಮಾತ್ರ ಹಸನುಗೊಳಿಸುವುದು ಎಲ್ಲಿಯ ನ್ಯಾಯ?

ಕಾದಂಬರಿಯ ಭಾಷೆ, ಕಟ್ಟಿರುವ ಬಗೆ ಸರಾಗವಾಗಿ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ. ಹೆಣ್ಣಿನ ಆಂತರ್ಯದ ಕಣ್ಣಿನ ಭಾಷೆಯಾಗುವುದು ಒಮ್ಮೊಮ್ಮೆ ಹೆಂಗಸರಿಗೇ ಕಷ್ಟವಾಗುವಾಗ ಗಂಗಪ್ಪನವರು ಅವಳ ಒಳಗುದಿಯನ್ನು ಸಲೀಸಾಗಿ ನಮ್ಮ ಮುಂದಿಟ್ಟಿರುವ ದಿಟ್ಟತನಕ್ಕೆ ಶರಣನೆನ್ನಲೇಬೇಕು.

’ತಮಟೆ ಪುಸ್ತಕ’ದ ಮೊದಲ ಪ್ರಕಟಣೆಯಾದ ’ಧಾವತಿ’ ಹಲವು ಬಗೆಯ ಚರ್ಚೆಗಳನ್ನು ಬಿಡುಗಡೆಯಾದಾಗಿನಿಂದಲೂ ಎಬ್ಬಿಸುತ್ತಿರುವುದು ಗಂಗಪ್ಪನವರು ಈ ಕಾದಂಬರಿಯನ್ನು ದಿಟ್ಟವಾಗಿ ಕಟ್ಟಿಕೊಟ್ಟಿರುವುದಕ್ಕೆ ಸಾಕ್ಷಿಯಾಗಿದೆ.

ಅಶ್ವಿನಿ ಆರ್ ಆರ್

ಅಶ್ವಿನಿ ಆರ್ ಆರ್
ಕನ್ನಡ ಉಪನ್ಯಾಸಕಿ ಮತ್ತು ಸಾಮಾಜಿಕ ಕಾರ್ಯಕರ್ತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...