Homeಕರ್ನಾಟಕಸಾಂಸ್ಕೃತಿಕ ರಾಜಕಾರಣದ ಸವಾಲುಗಳು

ಸಾಂಸ್ಕೃತಿಕ ರಾಜಕಾರಣದ ಸವಾಲುಗಳು

- Advertisement -
- Advertisement -

ಸಂಗಾತಿಗಳೇ,

ಸಾಂಸ್ಕೃತಿಕ ರಾಜಕಾರಣದ ಸವಾಲುಗಳ ಬಗ್ಗೆ ಚಿಂತನೆ ಮಾಡುವಾಗ, ನನಗೆ ಯಾವಾಗಲೂ ಕರ್ನಾಟಕದ ಕರಾವಳಿಯಲ್ಲಿ ಆದ ಪಲ್ಲಟಗಳು ಒಂದು ರೂಪಕದ ಹಾಗೆ ಕಾಣುತ್ತವೆ. ಅಲ್ಲಿರುವಷ್ಟು ಭಾಷೆಗಳು ಸಮುದಾಯಗಳು ಜನಪದ ಆಚರಣೆಗಳು ಆಹಾರಪದ್ಧತಿಗಳು ಕರ್ನಾಟಕದ ಬೇರೆಡೆಯಿಲ್ಲ. ಭಾರತದ ಆತ್ಮದಂತಿರುವ ಬಹುತ್ವ ಸಂಸ್ಕೃತಿಗೆ ಅತ್ಯುತ್ತಮ ನಿದರ್ಶನಗಳು ಅಲ್ಲಿದ್ದವು. ಒಂದು ಕಾಲಕ್ಕೆ ಇಲ್ಲಿಂದ ಕಮ್ಯುನಿಸ್ಟರು ಆರಿಸಿಬರುತ್ತಿದ್ದರು. ಅಲ್ಲಿ ಬ್ಯಾಂಕ್ ಉದ್ಯೋಗಿಗಳ ಸಂಘಟನೆ, ಬೀಡಿ ಕಾರ್ಮಿಕರ ಸಂಘಟನೆ ಬಲವಾಗಿದ್ದವು. ಕಾರ್ನಾಡ್ ಸದಾಶಿವರಾಯ, ಕಮಲಾದೇವಿಯಂತಹ ಸಮಾಜ ಸುಧಾರಕರು, ನಿರಂಜನ ಕಾರಂತರಂತಹ ನಾಸ್ತಿಕವಾದಿ ಲೇಖಕರು, ಕುದ್ಮಲ್ ರಂಗರಾಯರಂತಹ ಸಮಾಜ ಸುಧಾರಕರು ಬಂದ ಪ್ರದೇಶವಿದು. ಇಲ್ಲಿನ ಸಂಸ್ಕೃತಿಯಲ್ಲಿ ಹಿಂದುಮುಸ್ಲಿಂ ಸಾಮರಸ್ಯದ ಅಪೂರ್ವ ಕುರುಹುಗಳಿವೆ. ಬಪ್ಪನಾಡು ಗುಡಿಯನ್ನು ಕಟ್ಟಿದ್ದು ಬಪ್ಪಬ್ಯಾರಿ. ಕಾರ್ಪೊರೇಶನ್ ಬ್ಯಾಂಕ್ ಕಟ್ಟಿದ್ದು ಒಬ್ಬ ಮುಸ್ಲಿಮರು. ಮೀನುಗಾರಿಕೆಯಲ್ಲಿ ಮೊಗವೀರರು ಮತ್ತು ಬ್ಯಾರಿಗಳ ಬಿಡಿಸಲಾಗದ ಬಂಧವಿತ್ತು.

ಇಂತಹ ಪ್ರದೇಶವು ಹೇಗೆ ಕೋಮುವಾದದ ಪ್ರಯೋಗಶಾಲೆಯಾಯಿತು? ಇಲ್ಲಿ ನಡೆಯುವಷ್ಟು ಕೋಮುಸಂಘರ್ಷಗಳು ಮಾನವ ಹಕ್ಕಿನ ಉಲ್ಲಂಘನೆಗಳು ನಾಡಿನ ಬೇರೆಡೆಯಿಲ್ಲ. ಬಹುತ್ವವಿರುವ ಪ್ರದೇಶದಲ್ಲಿ ಏಕರೂಪೀ ಸಿದ್ಧಾಂತವು ಆಳವಾಗಿ ಬೇರೂರಿತು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಸೋತರೂ ಅಲ್ಲಿಂದ ಹೆಚ್ಚು ಶಾಸಕರು ಬಂದಿದ್ದಾರೆ. ಇಷ್ಟಾಗಿಯೂ ಚುನಾವಣಾ ರಾಜಕಾರಣದ ಸೋಲುಗೆಲುವಿನಾಚೆ, ಅಲ್ಲಿ ಸಂಘಪರಿವಾರವು ಸಮಾಜವನ್ನು ನಿಯಂತ್ರಿಸುತ್ತಿದೆ. ಇದಕ್ಕೆ ಕಾರಣವಾಗಿದ್ದು ಕೇವಲ ಅದರ ಚುನಾವಣಾ ರಾಜಕಾರಣವಲ್ಲ. ಧರ್ಮ ಸಂಸ್ಕೃತಿ ಪರಂಪರೆ ಎಂಬ ಆಕರ್ಷಕ ಭಾವನಾತ್ಮಕ ಸಂಗತಿಗಳನ್ನು ಅದು ಇಟ್ಟುಕೊಂಡು ಮಾಡಿದ ಸಾಂಸ್ಕೃತಿಕ ರಾಜಕಾರಣ. ಕೆಳಜಾತಿಗಳ ವಶೀಕರಣ. ಹಿಂದು ಮುಸ್ಲಿಮ್ ಕ್ರೈಸ್ತರ ನಡುವಿದ್ದ ಸಹಜ ಸಂಬಂಧಗಳ ಛಿದ್ರೀಕರಣ.

ಒಂದು ಕಾಲಕ್ಕೆ ಕೂಲಿ ಹುಡುಕಿಕೊಂಡು ಘಟ್ಟದ ಮೇಲೆ ಹೋಗುತ್ತಿದ್ದ ಕರಾವಳಿಯ ಜನ, ಈಗ ಕೂಲಿಕಾರ್ಮಿಕರನ್ನು ಹೊರಗಡೆಯಿಂದ ಕರೆಸಿಕೊಳ್ಳುತ್ತಿದ್ದಾರೆ. ಇಲ್ಲಿನ ಬಹುತೇಕ ಕಾರ್ಮಿಕರು ಬಿಜಾಪುರದವರು. ಆದಿಲಶಾಹಿ ಆಳ್ವಿಕೆಯ ಕಾಲದಿಂದ ಪ್ರಾರಂಭವಾಗಿ ಈಗಿನವರೆಗೂ ಅಪೂರ್ವವಾದ ಮತೀಯಸಾಮರಸ್ಯದ ಪರಂಪರೆಯನ್ನು ಒಳಗೊಂಡಿರುವ ಬಿಜಾಪುರವು ಆರ್ಥಿಕವಾಗಿ ಬಡವಾಗಿದೆ. ಮಾರುಕಟ್ಟೆ ಆರ್ಥಿಕತೆಯಲ್ಲಿ ಕರಾವಳಿ ಸಿರಿವಂತವಾಗಿದೆ. ಒಂದೆಡೆ ವ್ಯಾಪಾರಿ ಸಂಸ್ಕೃತಿಯಿಂದ ಸಿರಿಯನ್ನು ಪಡೆದಿರುವ ಆದರೆ ಮನುಷ್ಯ ಸಂಬಂಧಗಳು ಕರಾಳವಾಗಿರುವ ಪ್ರದೇಶವಾಗಿದೆ. ಇನ್ನೊಂದೆಡೆ ಕೃಷಿಪ್ರಧಾನವಾದ ಸಾಮರಸ್ಯದ ಬದುಕಿರುವ ಆದರೆ ಬಡತನ ವಲಸೆಗಳಿರುವ ಪ್ರದೇಶ. ನಮ್ಮೆದುರು ವಿಚಿತ್ರವಾದ ಕಷ್ಟಕರವಾದ ಎರಡು ಮಾದರಿಗಳಿವೆ. ನಮ್ಮ ಆಯ್ಕೆ ಯಾವುದು?

ಕರಾವಳಿಯ ಬೆಳವಣಿಗೆಗಳನ್ನು ಅಧ್ಯಯನ ಮಾಡಿರುವ ವಿದ್ವಾಂಸರು ನಿರೂಪಿಸಿರುವ ಪ್ರಕಾರ, ದೇವರಾಜ ಅರಸು ಅವರ ಭೂಸುಧಾರಣೆಯಲ್ಲಿ ಕರಾವಳಿಯ ಉಳುವ ಕೆಳಜಾತಿಗಳು ಭೂಮಿಯನ್ನು ಪಡೆದುಕೊಂಡವು. ಮುಂಬೈ ಸಂಪರ್ಕವೂ ಹಣದ ಹೊಳೆಯನ್ನು ಹರಿಸಿತು. ಮಧ್ಯಮವರ್ಗ ಮೇಲೇರುತ್ತಲೇ, ಅದನ್ನು ಬ್ರಾಹ್ಮಣೀಕರಣ ಮತ್ತು ಮತೀಕರಣದ ಸಾಂಸ್ಕೃತಿಕ ಲೋಕವು ಆವರಿಸಿಕೊಂಡಿತು. ಇದರ ಫಲವಾಗಿ ದೈವಗಳು ದೇವರಾಗಿ ತೇರು ರಥೋತ್ಸವವಾಗಿ ಗುಡಿಗಳು ದೇವಸ್ಥಾನಗಳಾಗಿ ಜಾತ್ರೆಗಳು ಉತ್ಸವಗಳಾದವು. ಬ್ರಾಹ್ಮಣೀಕರಣಗೊಂಡ ಕೆಳಜಾತಿ ಶೂದ್ರರು ಮತೀಕರಣಗೊಳ್ಳುವುದು ಸುಲಭ. ಅವರಿಗೆ ಮುಸ್ಲಿಮರ ಶತ್ರುತ್ವವನ್ನು ಕಟ್ಟಿಕೊಡಲಾಯಿತು. ಇದೇ ಕಾಲಕ್ಕೆ ಎಡಪಂಥೀಯ ಚಳವಳಿಗಳಿಗೆ ರಾಜಕಾರಣ ಹಿನ್ನಡೆ ಅನುಭವಿಸಿತು. ಕ್ರೈಸ್ತ ಮುಸ್ಲಿಂ ಹಿಂದುಗಳ ಪಾರಂಪರಿಕ ಸಂಬಂಧ ಶಿಥಿಲವಾಯಿತು. ಈ ಸಾಮಾಜಿಕ ರಾಜಕೀಯ ಆರ್ಥಿಕ ಸ್ಥಿತ್ಯಂತರ ಹೊತ್ತಲ್ಲಿ ಅವರನ್ನು ಪ್ರಗತಿಪರ ಸಾಂಸ್ಕೃತಿಕ ಚಳವಳಿಗಳಿಗೆ ಬದಲಾಗಿ ಬಲಪಂಥೀಯ ಸಾಂಸ್ಕೃತಿಕ ಚಳವಳಿಗಳು ಆವರಿಸಿಕೊಂಡವು.

ಬಲಪಂಥೀಯ ಸಿದ್ಧಾಂತಗಳು ಯಾವತ್ತೂ ಸಾಂಸ್ಕೃತಿಕ ರಾಜಕಾರಣದ ಮಹತ್ವವನ್ನು ಅರಿತಿವೆ. ಎಂತಲೇ ಬಿಜೆಪಿ ಸರ್ಕಾರಗಳಲ್ಲಿ ಯಾವಾಗಲೂ ಸಂಸ್ಕೃತಿ ಖಾತೆ ಮತ್ತು ಶಿಕ್ಷಣ ಖಾತೆಯನ್ನು ಆರೆಸ್ಸೆಸ್ ಕೇಡರುಗಳಿಂದ ಬಂದವರಿಗೆ ಕೊಡಲಾಗುತ್ತದೆ. ಸಂಸ್ಕೃತಿ ರಾಜಕಾರಣ ಮಾಡುವುದಕ್ಕೆ ಅವು ಆಯಕಟ್ಟಿನ ಇಲಾಖೆಗಳೆಂದು ಬಲಪಂಥೀಯ ರಾಜಕಾರಣಕ್ಕೆ ಚೆನ್ನಾಗಿ ತಿಳಿದಿದೆ. ಭಾರತದ ಬಲಪಂಥೀಯ ರಾಜಕಾರಣದ ಆಶಯ ಸ್ಪಷ್ಟವಾಗಿದೆ. ಅದೆಂದರೆ- ಬಹುಸಂಖ್ಯಾತ ಕೆಳಜಾತಿಯ ಶೂದ್ರರಿಗೆ ದಲಿತರಿಗೆ ಮುಸ್ಲಿಂ ಕ್ರೈಸ್ತರು ಕಮ್ಯುನಿಸ್ಟರು ಹಗೆಗಳೆಂಬ ನೆರೆಟಿವ್ ಕಟ್ಟಿಕೊಡುವುದು; ಮಹಿಳೆಯರನ್ನು ಮನೆಗೆ ಸೀಮಿತಗೊಳಿಸುವುದು; ಊಳಿಗಮಾನ್ಯ ವ್ಯವಸ್ಥೆ ಮತ್ತು ಬಂಡವಾಳವಾದವನ್ನು ಬೆಂಬಲಿಸುವುದು; ಬ್ರಾಹ್ಮಣಶಾಹಿ ಯಜಮಾನಿಕೆಯನ್ನು ಹೇರುವುದು; ವಿಚಾರವಾದವನ್ನು ರಾಕ್ಷಸೀಕರಿಸುವುದು; ರಾಜಕೀಯ ಅಧಿಕಾರವನ್ನು ಪಡೆದು ತನ್ನ ಪರಿಕಲ್ಪನೆಯ ದೇಶವನ್ನು ರೂಪಿಸುವುದು.

ಬಲಪಂಥೀಯ ಸಂಘಟನೆಗಳ ಹುಟ್ಟಿನಲ್ಲೇ ಈ ಸಾಂಸ್ಕೃತಿಕ ರಾಜಕಾರಣವಿದೆ. 20ನೇ ಶತಮಾನದ ಮೊದಲ ದಶಕಗಳಲ್ಲಿ, ಶಾಹು ಮಹಾರಾಜರು ಕೊಲ್ಹಾಪುರದಲ್ಲಿ ಸವರ್ಣೀಯರಿಂದ ಅಧಿಕಾರ ಕಿತ್ತುಕೊಂಡು ಶೂದ್ರರಿಗೆ ದಲಿತರಿಗೆ ಮುಸ್ಲಿಮರಿಗೆ ಹಂಚಿದರು. ಈ ಕಾಲಘಟ್ಟದಲ್ಲಿ ತನ್ನನ್ನು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಂಡ ರಾಷ್ಟ್ರೀಯ ಸ್ವಯಂಸೇವಕಸಂಘ ಆರಂಭವಾಯಿತು. ಮಂಡಲ್ ವರದಿಯ ಪ್ರಕಾರ ಓಬಿಸಿಗಳಿಗೆ ಮೀಸಲಾತಿ ಕಲ್ಪಿಸಿದೊಡನೆ ರಾಮಜನ್ಮಭೂಮಿ ಪ್ರಕರಣವನ್ನು ಎತ್ತಿಕೊಳ್ಳಲಾಯಿತು. ಸಾವರ್ಕರ್-ಅದ್ವಾನಿ ವೈಯಕ್ತಿಕವಾಗಿ ನಾಸ್ತಿಕರಾಗಿದ್ದರೂ, ಧರ್ಮದ ಹೆಸರಲ್ಲಿ ರಾಜಕಾರಣ ಮಾಡಿದರು. ಬಲಪಂಥೀಯ ಸಿದ್ಧಾಂತವು ಭಾರತದಲ್ಲಿ ಹರಡಲು ಅದಕ್ಕಿರುವ ಸಾಂಸ್ಕೃತಿಕ ರಾಜಕಾರಣದ ವಿವಿಧ ಆಯಾಮಗಳು ಕೆಲಸ ಮಾಡಿವೆ. ಅದರ ಸಿದ್ಧಾಂತವನ್ನು ಸಾಕಾರಗೊಳಿಸಲು ಒಂದು ರಾಜಕೀಯ ಪಕ್ಷವಿದೆ. ಕೇಡರುಗಳಿವೆ. ಸಮಾಜದ ವಿವಿಧ ವರ್ಗ ಸಮುದಾಯಗಳನ್ನು ಪಳಗಿಸಲು ವಿವಿಧ ಸಂಘಟನೆಗಳಿವೆ. ಮುಖ್ಯವಾಗಿ ಜನಾಭಿಪ್ರಾಯ ರೂಪಿಸುವ ಮಾಧ್ಯಮವನ್ನು ಅದು ಕೈವಶ ಮಾಡಿಕೊಂಡಿದೆ. ಹೀಗಾಗಿ ಭಾರತದಲ್ಲಿ ಮೇಲ್ಜಾತಿ ಮೇಲ್ವರ್ಗಗಳ ಹಿತಾಸಕ್ತಿ ಕಾಯುವ, ಅಲ್ಪಸಂಖ್ಯಾತವಾದ ಮತ್ತು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾದ, ಬಹುಸಂಖ್ಯಾತ ಕೆಳವರ್ಗಗಳ ಹಿತಾಸಕ್ತಿಗೆ ವಿರುದ್ಧವಾದ ಬಲಪಂಥೀಯ ರಾಜಕಾರಣವು, ಧರ್ಮ ಸಂಸ್ಕೃತಿ ಪರಂಪರೆ ಹೆಸರಲ್ಲಿ ಯಶವನ್ನು ಸಾಧಿಸಲು ಸಾಧ್ಯವಾಯಿತು.

ಸಾಂಸ್ಕೃತಿಕ ಚಳವಳಿ ಎಂದರೆ, ಧರ್ಮ ನಂಬಿಕೆ ಆಚರಣೆ ಭಾಷೆ ಸಾಹಿತ್ಯ ಸಂಗೀತ ಸಿನಿಮಾ ರಂಗಭೂಮಿ ಇತ್ಯಾದಿ (ಯಾವುದನ್ನು ಕಮ್ಯುನಿಸ್ಟರು ಸೂಪರ್ ಸ್ಟ್ರಕ್ಚರ್ ಎನ್ನುವರೊ ಅದು) ಜನರ ಅಭಿಪ್ರಾಯ ರೂಪಿಸುವ ವಿಷಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದು ಜನರ ಆಲೋಚನಾಕ್ರಮವನ್ನು ಬದಲಿಸುವ ಶಕ್ತಿಯುಳ್ಳದ್ದು. ಜನರ ಆರ್ಥಿಕ ಸ್ಥಿತಿ ಬದಲಾದರೂ ಆಲೋಚನಾ ಕ್ರಮ ಬದಲಾಗದೆ ಉಳಿದಿರಬಹುದು; ಅದಕ್ಕೆ ಅದನ್ನು ಸಾಂಸ್ಕೃತಿಕ ರಾಜಕಾರಣದ ಮೂಲಕ ಬದಲಿಸಬೇಕು. ಜೀವಪರ ಸಂವಿಧಾನವಾದಿ ಚಿಂತನೆಯ ಬೇರನ್ನು ತಳೆಸಬೇಕು.

ಆದರೆ ಎಡಪಂಥೀಯ ಚಳವಳಿಗಳು ಸಾಂಸ್ಕೃತಿಕ ರಾಜಕಾರಣ ಮಾಡುವುದರಲ್ಲಿ ಹಿಂದೆ ಬಿದ್ದವು. ಎಡವಾದ ಸಮಾಜವಾದ ಬುದ್ಧಿಜೀವಿಗಳು ಎಂಬ ಶಬ್ದಗಳು ಈಗ ರಾಕ್ಷಸೀಕರಣಗೊಂಡಿವೆ ಕೂಡ. ಈ ಹಿನ್ನೆಲೆಯಲ್ಲಿ ವಿಚಾರವಾದಿಗಳ ಹತ್ಯೆ ನಡೆಯಿತು. ಇದು ಪ್ರಗತಿಪರ ಚಳವಳಿಗಳ ಹಿಂದಿರುವ ವಿಚಾರವಾದದ ಸಮಸ್ಯೆಯನ್ನು ಮರುಪರಿಶೀಲನೆ ಮಾಡುವ ಸಮಯವೂ ಆಗಿದೆ. ವಿಚಾರವಾದಿಗಳೆಂದರೆ ದೇವರು ಧರ್ಮಗಳನ್ನು ಅವರು ಒಪ್ಪುವುದಿಲ್ಲ. ಹಬ್ಬ ಪರಂಪರೆ ಸಂಸ್ಕೃತಿಗೆ ವಿರೋಧಿಗಳು ಎಂಬ ಪುಕಾರನ್ನು ವ್ಯಾಪಕವಾಗಿ ಹರಡಲಾಗಿದೆ. ವಿಚಾರವಾದಕ್ಕೆ ಅನೇಕ ಸಲ ಯಾವುದು ಬೇಡ ಎಂಬುದರ ನಿರಾಕರಣೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಯಾವುದು ಬೇಕು ಎಂದು ಹೇಳುವುದಕ್ಕೆ ಅದಕ್ಕೆ ಸಮಯವೇ ಇರುವುದಿಲ್ಲ.

1992ರ ಬಳಿಕ ಹುಟ್ಟಿದ ಆತಂಕ ಅಸಹಾಯಕತೆಗಳು ಪ್ರತಿರೋಧಕ್ಕೆ ಎಡಚಳವಳಿಗಳನ್ನು ಸೀಮಿತಗೊಳಿಸಿದವು. ಎದುರಾಳಿ ಆಟವನ್ನು ಆಟದ ನಿಯಮವನ್ನು ನಿರ್ಧರಿಸುವುದು, ಅದರ ಚೌಕಟ್ಟಿನಲ್ಲಿ ಅವು ಆಡುವುದು. ಆಟವನ್ನೇ ಬದಲಿಸುವ ಅಥವಾ ಆಟದ ನಿಯಮವನ್ನು ತಾವು ಮಾಡುವ ಅವಕಾಶವನ್ನು ಅವು ಕಳೆದುಕೊಂಡವು. ಮೋದಿ ಸರ್ಕಾರವು ಸಂವಿಧಾನದ ಎರಡು ಪರಿಕಲ್ಪನೆ ಕಿತ್ತುಹಾಕಿದರೆ, ಅದು ತಪ್ಪು ಎಂದು ಬೊಬ್ಬೆ ಹೊಡೆಯುವುದರಲ್ಲೇ ನಮ್ಮ ಶಕ್ತಿ ವ್ಯಯವಾಗುತ್ತದೆ. ಪ್ರಗತಿಪರ ಚಳವಳಿಗಳ ಆಯುಷ್ಯವೆಲ್ಲ ಪರ್ಯಾಯ ಮಂಡನೆಯಲ್ಲಿ ಅಲ್ಲ, ಬಲಪಂಥೀಯ ಸಾಂಸ್ಕೃತಿಕ ರಾಜಕಾರಣಕ್ಕೆ ಉತ್ತರಿಸುವುದರಲ್ಲಿ ಕಳೆದುಹೋಗುವಂತಾಗಿದೆ.

ಭಾರತದ ಎಡಪಕ್ಷಗಳಿಗೆ ಸಾಂಸ್ಕೃತಿಕ ಅರಿವಿದೆ. ಪ್ರಜ್ಞೆಯಿದೆ. ಆದರೆ ಚುನಾವಣಾ ರಾಜಕಾರಣದಲ್ಲಿ ಗುದ್ದಾಡುವ ಬಲವಿಲ್ಲ. ಚುನಾವಣಾ ರಾಜಕಾರಣದಲ್ಲಿ ಬಲವುಳ್ಳ ಸೆಂಟ್ರಿಸ್ಟ್ ಪಕ್ಷಗಳಿಗೆ ಸಾಂಸ್ಕೃತಿಕ ರಾಜಕಾರಣದ ಪ್ರಜ್ಞೆ ಮತ್ತು ಅರಿವು ಕಡಿಮೆಯಿದೆ. ಈಗ ಕರ್ನಾಟಕದಲ್ಲಿ ಫ್ಯಾಸಿಸಂ ಎದುರಿಸುವ ಬಿಕ್ಕಟ್ಟಿನಲ್ಲಿ ಪ್ರಗತಿಪರ ಚಳವಳಿಗಳು ಬೇರೆ ಹಾದಿಯಿಲ್ಲದೆ ಕಾಂಗ್ರೆಸ್ಸನ್ನು ಬೆಂಬಲಿಸುವ ಸನ್ನಿವೇಶ ಉಂಟಾಗಿದೆ. ಆದರೆ ಕಾಂಗ್ರೆಸ್ಸಿಗೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಅರಿವು, ಪ್ರಜ್ಞೆ ಕಡಿಮೆಯಿದೆ. ಅದಕ್ಕೆ ಅದರದ್ದೇ ಆದ ಗಾಂಧಿ ನೆಹರೂ ಅವರ ಅಪೂರ್ವ ಪರಂಪರೆಯ ಅರಿವಿಲ್ಲದಂತಾಗಿದೆ. ಇದೊಂದು ನಮ್ಮ ನಡುವಿನ ಇಕ್ಕಟ್ಟಾಗಿದೆ.

ಇದನ್ನೂ ಓದಿ: ಪ್ರಭುತ್ವಕ್ಕೆ ಕಲಾವಿದರ ಆತ್ಮಸಾಕ್ಷಿಯ ಮಹತ್ವ ಅರ್ಥವಾಗಿಲ್ಲ!

ಆದರೆ ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಸಮಾನತಾವಾದಿಗಳಿಗೆ ಇರುವಷ್ಟು ಸರಕು ದ್ವೇಷದ ರಾಜಕಾರಣದವರಿಗೆ ಇಲ್ಲ. ಜನಪದ ಸಂಸ್ಕೃತಿಯ ಶಸ್ತ್ರಾಗಾರದಲ್ಲಿ ಸಂವಿಧಾನದ ಮೌಲ್ಯಗಳ ಸಹನೆ ಸ್ವಾತಂತ್ರ್ಯ ಬಹುತ್ವ ಭಾತೃತ್ವಗಳ ದೊಡ್ಡ ಸಂಗ್ರಹವಿದೆ. ಆದರೆ ಅದನ್ನು ಅನುಸಂಧಾನ ಮಾಡುವುದಕ್ಕೆ ಬೇಕಾದ ಹೊಸಹೊಸ ಹಾದಿಗಳನ್ನು ಕಂಡುಕೊಳ್ಳುವುದು ನಮ್ಮೆದುರಿಗಿರುವ ಸವಾಲಾಗಿದೆ. ನಮ್ಮ ಸ್ಥಿತಿ ’ಸಮುದ್ರದಂತಹ ನೆಂಟಸ್ತನ ಉಪ್ಪಿಗೆ ಬಡತನ’ದ ತರಹ ಆಗಿದೆ. ನಾವು ನಮ್ಮ ಪರಂಪರೆಯ ಮೂಲಕ ಕೋಮುವಾದವನ್ನು ಎದುರಿಸಲು ಸಾಧ್ಯವಿದೆ. ಸಾವಿರ ವರ್ಷಗಳ ಹಿಂದೆ ’ಕಸವವರೆಂಬುದು ನೆರೆ ಸೈರಿಸಲಾರ್ಪೊಡೆ ಪರಧರ್ಮಮುಂ ಪರವಿಚಾರಮುಮಂ’ ಎಂದು ಹೇಳಿದ ಕವಿರಾಜಮಾರ್ಗವು, ಸಂವಿಧಾನದ ಮೌಲ್ಯವನ್ನು ಬಿಂಬಿಸುತ್ತಿದೆ. ನಮ್ಮ ಶರಣರು ಸಾಮಾಜಿಕ ಆರ್ಥಿಕ ರಾಜಕೀಯ ಚಳವಳಿ ಮಾಡಿದರು. ಇದಕ್ಕಾಗಿ ಅವರು ಕಾವ್ಯದ ಭಾಷೆಯನ್ನು ಬಳಸಿದರು. ’ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪ ನಮ್ಮವನು. ಕುವೆಂಪು ಲಂಕೇಶ್ ತೇಜಸ್ವಿ ಮಹಾದೇವ ಶರೀಫ ಸಿದ್ಧಾರೂಢ ಎಲ್ಲರೂ ತಮ್ಮತಮ್ಮ ಕಾಲದ ಬಲಪಂಥೀಯತೆಯನ್ನು ನಿರಾಕರಿಸಿದವರು. ಕುವೆಂಪು ತಮ್ಮ ಸುಪ್ರಸಿದ್ಧ ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ ಎಂಬ ಭಾಷಣದಲ್ಲಿ ನಮ್ಮ ಪರಂಪರೆಯನ್ನು ಹಿರಿಯರ ಒಡವೆಗೆ ಹೋಲಿಸುವರು. ಅದನ್ನು ನಾವು ಕರಗಿಸಿ ಹೊಸ ಆಭರಣ ಮಾಡಿಕೊಳ್ಳಬೇಕು ಎಂದು ಮಾರ್ಮಿಕವಾಗಿ ಹೇಳಿದರು. ಶಿವರಾಮ ಕಾರಂತರು ನಾಸ್ತಿಕರಾಗಿದ್ದರು. ಆದರೆ ಬರೆಹ ನಾಟಕ ಸಂಗೀತ ಸಿನಿಮಾ ಯಕ್ಷಗಾನಗಳ ಮೂಲಕ ತಮ್ಮ ಜೀವನದೃಷ್ಟಿಯನ್ನು ಮುಂದಿಟ್ಟರು. ಎಮರ್ಜೆನ್ಸಿಯ ಕಾಲದಲ್ಲಿ ಕರ್ನಾಟಕದಲ್ಲಿ ಪ್ರಜಾಪ್ರಭುತ್ವವಾದಿ ಶಕ್ತಿಗಳು ಪ್ರತಿರೋಧ ತೋರಿದವು. ಆ ಹೊತ್ತಲ್ಲಿ ಪ್ರಕಟವಾದ ಕವನ ಸಂಕಲನವು ಕುಮಾರವ್ಯಾಸನ ‘ಅರಸು ರಾಕ್ಷಸ ಮಂತ್ರಿ ಮೊರೆವ ಹುಲಿ ಪರಿವಾರ ಹದ್ದಿನ ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು’ ಪದ್ಯವನ್ನು ಬಳಸಿಕೊಂಡಿತು. ಸ್ವಾತಂತ್ರ್ಯಪೂರ್ವದಲ್ಲಿ ಕಂಪನಿ ನಾಟಕಗಳು ಅಸ್ಪೃಶ್ಯತೆ ನಿವಾರಣೆ, ಬ್ರಿಟಿಷರ ವಿರುದ್ಧದ ಚಳವಳಿ, ಹಿಂದು ಮುಸ್ಲಿಂ ಸಾಮರಸ್ಯದ ಆಶಯಗಳನ್ನು ಕಲೆಯಲ್ಲಿ ಹೊಮ್ಮಿಸಿದವು. ನಮ್ಮ ಒಬ್ಬ ಸಂಸದರು ಪಂಕ್ಚರ್ ಹಾಕುವವರನ್ನು ಗೇಲಿ ಮಾಡಿದರು. ಆದರೆ ನವಲಗುಂದದ ವಲ್ಲೆಪ್ಪನವರು ಹಾಡುವ ಹಾಡೊಂದು, ಹೇಗೆ ನಮ್ಮ ದೈನಿಕ ಬದುಕನ್ನು ನಿರ್ವಹಿಸಲು ಹಲವು ಕುಶಲತೆಗಳಿಂದ ಸರಕು ಸೇವೆಗಳು ಉತ್ಪನ್ನವಾಗುತ್ತವೆ ಎಂಬುದನ್ನು ಅದ್ಭುತವಾಗಿ ವಿವರಿಸುತ್ತದೆ. ನಮ್ಮ ಪರಂಪರೆಯಲ್ಲಿ ಇರುವ ಅತ್ಯುತ್ತಮವಾದುದನ್ನು ಹಾಗೆ ಎತ್ತಿಕೊಡಬಹುದು. ಸೃಜನಶೀಲ ಪ್ರತಿಭೆಯುಳ್ಳವರು, ಅವನ್ನು ಹೊಸಕಾಲಕ್ಕೆ ತಕ್ಕಂತೆ ಮರುಹುಟ್ಟಿಸಿ ಕೊಡಬಹುದು. ಅವುಗಳ ಪ್ರೇರಣೆಯಿಂದ ಹೊಸತನ್ನೇ ಸೃಷ್ಟಿಸಬಹುದು.

ನನಗೆ ಅನಿಸುತ್ತದೆ ನಮ್ಮ ಕನ್ನಡದ, ಭಾರತದ ಮತ್ತು ಜಗತ್ತಿನ ಅತ್ಯಂತ ಶ್ರೇಷ್ಠ ಚಿಂತನೆಗಳ ಸಣ್ಣಸಣ್ಣ ಆಂಥಾಲಜಿಗಳನ್ನು ಪ್ರಕಟಿಸಿ ಯುವ ಸಮುದಾಯಕ್ಕೆ ಕೊಡಬೇಕು; ಕುವೆಂಪು ಅವರ ವಿಚಾರಕ್ರಾಂತಿಗೆ ಆಹ್ವಾನ, ದೇವನೂರರ ಸಂವಿಧಾನ ಕುರಿತ ಬರೆಹ, ಲಂಕೇಶರ ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ, ತೇಜಸ್ವಿಯವರ ಜಾತಿವಿನಾಶ ಕುರಿತ ಬರೆಹಗಳ ಒಂದು ಪುಸ್ತಿಕೆ ಮಾಡಬಹುದು. ಬಸವಣ್ಣ ಅಕ್ಕ ಅಲ್ಲಮ ಕುವೆಂಪು ಜಿಎಸ್.ಎಸ್. ಕಣವಿ ಅವರ ಜೀವಪರ ಕವನಗಳ ಸಂಕಲನ ತರಬಹುದು. ಜೋತಿಬಾ ಫುಲೆ, ಕುದ್ಮಲ್ ರಂಗರಾವ್, ನಾರಾಯಣಗುರು ಮೊದಲಾದವರ ಜೀವನ ಚರಿತ್ರೆಗಳನ್ನು ಪ್ರಕಟಿಸಬಹುದು. ಶಿಕ್ಷಕರು ಪತ್ರಕರ್ತರು ವಕೀಲರು ಸೇರಿಸಿ ನಮ್ಮ ಸಮಾಜವನ್ನು ಸಂವೇದನಾಶೀಲಗೊಳಿಸುವ ಕಮ್ಮಟಗಳನ್ನು ಮಾಡಬಹುದು. ಜಗತ್ತಿನ ಶ್ರೇಷ್ಠ ಸಿನಿಮಾ ತೋರಿಸುವ ಮತ್ತು ಚರ್ಚಿಸುವ ಫಿಲ್ಮ್ ಸೊಸೈಟಿಗಳನ್ನು ಆರಂಭಿಸಬಹುದು. ಜನಪದ ಕಲಾವಿದರಲ್ಲಿ ಬೇಕಾದಷ್ಟು ಜನಪರ ಹಾಡಿಕೆ ಮಾಡುವ ಗಾಯಕರಿದ್ದಾರೆ; ಅವರಿಂದ ಹಾಡಿಸಬಹುದು. ನಮ್ಮ ಕನ್ನಡ ರಂಗಭೂಮಿ ಸಿಜಿಕೆ ಬಸವಲಿಂಗಯ್ಯ ಅವರು ಮಾಡಿರುವ ನಾಟಕಗಳನ್ನು ಪ್ರದರ್ಶಿಸಬಹುದು. ತಿಂತಿಣಿ ಕೊಡೇಕಲ್ ಸಾವಳಿಗೆ ಇಂಚಗೇರಿ ಪರಂಪರೆಗಳನ್ನು ಪರಿಚಯಿಸುವ ಪುಸ್ತಿಕೆ ತರಬಹುದು. ಪುಸ್ತಕಗಳ ಜತೆ ವಿಡಿಯೊ ಮಾಡಬಹುದು.

ಸಾವಳಗಿ ಕೊಡೇಕಲ್ ಗುರುಪೀರಾ ಖಾದ್ರಿ, ಶಿಶುನಾಳ ಸಿದ್ಧಾರೂಢ ತಿಂತಿಣಿ ಮೊದಲಾದ ಪರಂಪರೆಗಳ ಬಗ್ಗೆ ಚಳವಳಿಗಳಲ್ಲಿ ಅರಿವನ್ನು ಬೆಳೆಸಬೇಕಿದೆ. ಕರ್ನಾಟಕದಲ್ಲಿ ಸಿದ್ಧಾರೂಢರ ಹುಬ್ಬಳ್ಳಿ ಮಠ, ಪಂಡಿತ ತಾರಾನಾಥರ ‘ಪ್ರೇಮಾಯತನ’ ಆಶ್ರಮ, ಇಂಡಿ ತಾಲೂಕಿನ ಇಂಚಗೇರಿ ಆಶ್ರಮಗಳು ಮಾಡಿದ ಪ್ರಯೋಗಗಳು ಅಪೂರ್ವವಾಗಿವೆ. ಇವೆಲ್ಲ ಸಾಮಾಜಿಕ ಆರ್ಥಿಕ ರಾಜಕೀಯ ಹೋರಾಟಗಳಲ್ಲಿ ಭಾಗವಹಿಸಿದ ಮಠಗಳು. ಆದರೆ ಇಲ್ಲಿ ನಾಟಕ ಸಂಗೀತ ತತ್ವಪದ ಹಾಡಿಕೆ ಎಲ್ಲವೂ ಇತ್ತು. ಗಾಂಧಿಯವರು ಪಂಡಿತ ತಾರಾನಾಥರ ನಾಟಕ ‘ಕಬೀರ್’ ನೋಡುವುದಕ್ಕೆ ತಮ್ಮ ಸಂಜೆ ಪ್ರಾರ್ಥನೆಯನ್ನು ಬಿಟ್ಟುಕೊಟ್ಟು ಬಂದಿದ್ದರು. ಸಾಮಾನ್ಯವಾಗಿ ಚಳವಳಿಗಳ ಜತೆ ಮಾತು ಮತ್ತು ಅಕ್ಷರದ ಸಂಬಂಧ ಕೂಡಲೇ ಏರ್ಪಡುತ್ತದೆ. ಆದರೆ ಅಭಿನಯದ ಸಂಗೀತದ ಚಿತ್ರದ ಸಿನಿಮಾದ ರಂಗಭೂಮಿಯ ಭಾಷೆಗಳ ಜತೆ ರಾಜಕೀಯ ಸಾಮಾಜಿಕ ಆರ್ಥಿಕ ಚಳವಳಿಗಳ ಭಾಷೆ ಹೆಚ್ಚು ಬೆರೆಯಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬೇರೆಬೇರೆ ಸಂಘಟನೆ ರಾಜಕೀಯ ಪಕ್ಷಗಳು ಚದುರಿಹೋಗಿದ್ದು ಅವು ಒಗ್ಗೂಡಬೇಕಿದೆ. ಮತೀಯ ಶಕ್ತಿಗಳ ಏಕೀಕರಣ ಆಗಿದ್ದಾಗಲೂ ದಾಯಾದಿ ಕಲಹದಲ್ಲಿ ಎಡಪಕ್ಷಗಳು ಮುಳುಗಿರುವ ದಾರುಣ ವಾಸ್ತವ ನಮ್ಮೆದುರು ಇದೆ.

ನಮ್ಮ ಚಳವಳಿಗಳು ನಮ್ಮ ಚರಿತ್ರೆ ಪರಂಪರೆಗಳಿಂದ ಅರಿವನ್ನು ಪಡೆದುಕೊಳ್ಳಬೇಕಿದೆ. ಅರಿವಿನಿಂದ ರಾಜಕೀಯ ಪ್ರಜ್ಞೆಯನ್ನೂ ತಂತ್ರಗಾರಿಕೆಯನ್ನು ರೂಪಿಸಬೇಕಿದೆ. ಜೀವವಿರೋಧಿ ಸಿದ್ಧಾಂತಗಳು ಸಾಂಸ್ಕೃತಿಕ ರಾಜಕಾರಣದ ತಂತ್ರಗಾರಿಕೆಯನ್ನು ಇಷ್ಟು ಶಕ್ತವಾಗಿ ಬಳಸುವುದು ಸಾಧ್ಯವಿರುವಾಗ, ಜೀವಪರ ಚಳವಳಿಗಳಿಗೆ ಸಂವಿಧಾನವಾದಿಗಳಿಗೆ ಯಾಕೆ ಸಾಧ್ಯವಿಲ್ಲ? ಕರ್ನಾಟಕದ ರೈತಚಳವಳಿಯು ಮೂಲತಃ ಆರ್ಥಿಕ ಬೇಡಿಕೆಯುಳ್ಳದ್ದು. ಆದರೆ ಅದರ ಮೊದಲ ತಲೆಮಾರಿನ ನಾಯಕತ್ವಕ್ಕೆ ಸಾಹಿತ್ಯ ರಂಗಭೂಮಿ ಕಲೆಗಳ ಜತೆ ಆಪ್ತ ಒಡನಾಟಾವಿತ್ತು. ಇದರ ಜತೆಗೆ ಅದಕ್ಕೆ ಅಂತಾರಾಷ್ಟ್ರೀಯ ಆರ್ಥಿಕ ರಾಜಕೀಯ ಪ್ರಜ್ಞೆಯನ್ನು ನಂಜುಂಡಸ್ವಾಮಿಯವರು ಜೋಡಿಸಿದರು. ಆದರೆ ಈಗ ಚಳವಳಿಗೆ ಎಲ್ಲೋ ಸಾಂಸ್ಕೃತಿಕ ಆಯಾಮ ಕ್ಷೀಣಗೊಂಡಿದೆ ಅನಿಸುತ್ತದೆ. ಕುವೆಂಪು ಬಸವಣ್ಣ ಎಲ್ಲ ಆಧುನಿಕ ಚಳವಳಿಗಳಿಗೂ ಸಾಂಸ್ಕೃತಿಕ ರಾಜಕಾರಣಕ್ಕೆ ಒದಗುವ ಮದ್ದುಗಳು. ಕುವೆಂಪು ಸಾಹಿತ್ಯವು ಭಾಷಾ ರೈತ ಏಕೀಕರಣ ಜಾತಿವಿನಾಶ ರಾಷ್ಟ್ರೀಯ ಚಳವಳಿಗಳಿಗೆ ಬೇಕಾದ ಪ್ರೇರಣೆಯನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ.

ಈಚೆಗೆ ಒಕ್ಕೂಟ ಸರ್ಕಾರವು ಸೆಕ್ಯುಲರಿಸಂ ಸೋಶಿಯಲಿಸಂ ಪದಗಳಿಲ್ಲದ ಪೀಠಿಕೆಯನ್ನು ಸಂಸದರಿಗೆ ಹಂಚಿದೆ. ಇದು ಸಂವಿಧಾನ ಕಿತ್ತುಹಾಕುವುದಕ್ಕೆ ಬರೆದಿರುವ ಮುನ್ನುಡಿಯಾಗಿದೆ. ಯುದ್ಧ ಘೋಷಣೆಯಾಗಿಲ್ಲ; ಆದರೆ ಮನೆಯೊಳಗೆ ಬಂದಿದೆ. ಈ ಹೊತ್ತಿನಲ್ಲಿ ಭಾರತದ ರಾಜಕೀಯ ಸಾಮಾಜಿಕ ಆರ್ಥಿಕ ಚಳವಳಿಗಳು, ಸಾಂಸ್ಕೃತಿಕ ಚಳವಳಿಗಳೂ ಆಗಬೇಕಿದೆ. ಇವು ಒಟ್ಟುಗೂಡಿ ಭಾರತದ ನೆಮ್ಮದಿಯ ಘನತೆಯ ಸಮೃದ್ಧ ಸಮಾನತೆಯ ಭಾರತದ ಪರಿಕಲ್ಪನೆಯನ್ನು ಮುಂದಿಡಬೇಕಿದೆ. ಇದು ಚುನಾವಣೆ ಎದುರು ಮಾಡುವ ಶಸ್ತ್ರಾಭ್ಯಾಸವಾಗದೆ ನಿರಂತರ ನಡೆಯುವ ಪ್ರಕ್ರಿಯೆ ಆಗಿರಬೇಕಿದೆ. ಸಂವಿಧಾನದ ಮೌಲ್ಯರಕ್ಷಣೆಗೆ ಡೆಮಾಕ್ರಸಿಯ ರಕ್ಷಣೆಗೆ ಭಾರತದ ಬಹುತ್ವದ ರಕ್ಷಣೆಗೆ ಇದು ಅಗತ್ಯವಾಗಿದೆ. ನಮಸ್ಕಾರ.

(ದಿನಾಂಕ 22.9.2023ರಂದು, ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ, ಅಖಿಲ ಭಾರತ ಅನುಭವ ಮಂಟಪದ ಸಮಾವೇಶದಲ್ಲಿ ಮಾಡಿದ ಉಪನ್ಯಾಸದ ಬರೆಹರೂಪ)

ಪ್ರೊ. ರಹಮತ್ ತರೀಕೆರೆ

ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು- ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...