Homeಮುಖಪುಟಮಣಿಪುರ ಹಿಂಸಾಚಾರಕ್ಕೆ ಒಂದು ವರ್ಷ: ನೆಮ್ಮದಿಯ ಬದುಕಿಗಾಗಿ ಇನ್ನೂ ಹೆಣಗಾಡುತ್ತಿರುವ ಜನರು

ಮಣಿಪುರ ಹಿಂಸಾಚಾರಕ್ಕೆ ಒಂದು ವರ್ಷ: ನೆಮ್ಮದಿಯ ಬದುಕಿಗಾಗಿ ಇನ್ನೂ ಹೆಣಗಾಡುತ್ತಿರುವ ಜನರು

- Advertisement -
- Advertisement -

ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭಗೊಂಡು ಇಂದಿಗೆ (ಮೇ 3, 2024) ಒಂದು ವರ್ಷ ಪೂರ್ಣಗೊಂಡಿದೆ. ಭಾರತದ ಈಶಾನ್ಯದಲ್ಲಿರುವ ಪ್ರಶಾಂತವಾದ ಬೆಟ್ಟ ಗುಡ್ಡಗಳಾವೃತ ಪುಟ್ಟ ರಾಜ್ಯದ ಮೇ 3, 2023ರಿಂದ ಹಿಂಸಾಚಾರದ ಸುಳಿಯಲ್ಲಿ ಸಿಲುಕಿ ಹೆಣಗಾಡುತ್ತಿದೆ. ರಾಜ್ಯದ ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ನೂರಾರು ಜನರು ಕೊಲ್ಲಲ್ಪಟ್ಟಿದ್ದಾರೆ. ಹಲವಾರು ಮಂದಿ ಇನ್ನೂ ಕಾಣೆಯಾಗಿದ್ದಾರೆ. ಒಂದು ವರ್ಷದ ಹಿಂಸಾಚಾರ ಜನರು ತಮ್ಮ ವ್ಯವಹಾರ, ಮನೆ, ಆಸ್ತಿ ಮತ್ತು ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವಂತೆ ಮಾಡಿದೆ. ರಾಜ್ಯ ಈ ಹಿಂದಿನಂತೆ ಶಾಂತಿಯುತ ಸಹಜ ಸ್ಥಿತಿಗೆ ಮರಳುವ ಲಕ್ಷಣ ಇನ್ನೂ ಕಾಣುತ್ತಿಲ್ಲ.

ದಾಖಲೆಗಳ ಪ್ರಕಾರ, ಒಂದು ವರ್ಷದ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ದೌರ್ಜನ್ಯದ ವರದಿಗಳು ಅತ್ಯಂತ ಭೀಕರವಾಗಿದೆ. ಹಿಂಸಾಚಾರದಿಂದ ರಾಜ್ಯ ಎರಡು ಭಾಗಗಳಾಗಿದ್ದು, ಭೂಮಿ ಮತ್ತು ಇತರ ಸೌಲಭ್ಯಗಳು ಮೈತೇಯಿ ಮತ್ತು ಕುಕಿ ಎಂಬ ಎರಡು ಸಮುದಾಯಗಳ ನಡುವೆ ಧಾರ್ಮಿಕ ಮತ್ತು ಜನಾಂಗೀಯ ರೇಖೆಗಳಲ್ಲಿ ವಿಂಗಡಣೆಯಾಗಿದೆ.

ಮಣಿಪುರದ ಒಟ್ಟು ಜನ ಸಂಖ್ಯೆಯ ಶೇ. 53ರಷ್ಟು ಇರುವ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಪಟ್ಟಿಗೆ ಸೇರಿಸಲು ಕಳೆದ ವರ್ಷ ಮಾರ್ಚ್‌ನಲ್ಲಿ ಹೈಕೋರ್ಟ್ ನೀಡಿದ ಆದೇಶದಿಂದ ಹಿಂಸಾಚಾರ ಭುಗಿಲೆದ್ಧಿತ್ತು.

ಆರಂಭದಲ್ಲಿ ಶಾಂತಿಯುತ ಪ್ರತಿಭಟನೆಗಳು ನಡೆದರೂ, ಬಳಿಕ ಅದು ಹಿಂಸಾಚಾರಕ್ಕೆ ತಿರುಗಿತು. ಸಿಎಂ ಬಿರೇನ್ ಸಿಂಗ್ ಅವರು ಏಪ್ರಿಲ್ 27 ರಂದು ಚುರಾಚಂದ್‌ಪುರಕ್ಕೆ ಭೇಟಿ ನೀಡುವ ಒಂದು ದಿನದ ಮೊದಲು, ಅವರು ಉದ್ಘಾಟಿಸಲು ಹೊರಟಿದ್ದ ಜಿಮ್‌ಗೆ ಬೆಂಕಿ ಹಚ್ಚಲಾಯಿತು. ಪರಿಣಾಮ ರಾಜ್ಯದ ವಿವಿದೆಡೆ ಕರ್ಫ್ಯೂ ವಿಧಿಸಲಾಯಿತು ಮತ್ತು ಇಂಟರ್ನೆಟ್ ಸ್ಥಗಿತಗೊಳಿಸಲಾಯಿತು. ಮಣಿಪುರದ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ (ಎಟಿಎಸ್‌ಯುಎಂ) ಆಯೋಜಿಸಿದ ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆಯ ನಂತರ ಉದ್ವಿಗ್ನತೆ ಉಲ್ಬಣಗೊಂಡಿತು. ಈ ಮೆರವಣಿಗೆಯಲ್ಲಿ ಸುಮಾರು 60,000 ಜನರು ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ.

ಹಿಂಸಾಚಾರ ಉಲ್ಬಣಗೊಂಡಾಗ, ಅದು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಿತು. ಮಣಿಪುರ ಅಕ್ಷರಶಃ ಯುದ್ಧ ಭೂಮಿಯಾಗಿ ಮಾರ್ಪಟ್ಟಿತು. ಮೈತೇಯಿ ಮತ್ತು ಕುಕಿ-ಝೋ ಬುಡಕಟ್ಟುಗಳ ನಡುವಿನ ಬಿರುಕು ಮತ್ತಷ್ಟು ಆಳವಾಯಿತು. ಹಿಂಸಾಚಾರ ಇಂಫಾಲ್ ಮತ್ತು ಚುರಾಚಂದ್‌ಪುರದಿಂದ ಇಂಫಾಲ್ ಕಣಿವೆಯ ಹೊರ ಪ್ರದೇಶಗಳಿಗೂ ಹಬ್ಬಿತು. ಎರಡೂ ಕಡೆಯವರು ತೀವ್ರವಾದ ಗುಂಡಿನ ಚಕಮಕಿ ಮತ್ತು ಹೊಂಚುದಾಳಿಗಳನ್ನು ಪ್ರಾರಂಭಿಸಿದರು.

ಮೈತೇಯಿ ಮತ್ತು ಕುಕಿ ಝೋ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಪ್ರಸ್ತುತ ಒಂದು ವರ್ಷ ತುಂಬಿದೆ. ಎರಡೂ ಸಮುದಾಯಗಳು ಜನಾಂಗೀಯ ರೇಖೆಗಳ ಮೇಲೆ ವಿಭಜಿಸಲ್ಪಟ್ಟಿವೆ. ಒಂದು ಸಮುದಾಯದ ಜನರು ಮತ್ತೊಂದು ಸಮುದಾಯದವರು ಇರುವ ಪ್ರದೇಶಗಳಿಗೆ ತೆರಳದಂತಹ ಪರಿಸ್ಥಿತಿಯಿದೆ. ಅನೇಕ ಪ್ರದೇಶಗಳನ್ನು ಸೂಕ್ಷ್ಮ ವಲಯಗಳು ಎಂದು ಗುರುತಿಸಿ ಸೇನಾ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಮಣಿಪುರ ಹಿಂಸಾಚಾರಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆ ದೆಹಲಿ, ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕುಕಿ ಮತ್ತು ಮೈತೇಯಿ ಎರಡೂ ಸಮುದಾಯಗಳ ಜನರು ವಿಶೇಷ ಸಭೆ, ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ.

ಪ್ರಸ್ತುತ ಸುಮಾರು 50 ಸಾವಿರ ಆಂತರಿಕವಾಗಿ ಸ್ಥಳಾಂತರಗೊಂಡ ಜನರು ಇನ್ನೂ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಕನಿಷ್ಠ 13,247 ಕಟ್ಟಡಗಳನ್ನು ನಾಶಪಡಿಸಲಾಗಿದೆ ಅಥವಾ ನಾಶವಾಗಿವೆ. ಕಳೆದ 12 ತಿಂಗಳಲ್ಲಿ ಅಧಿಕೃತವಾಗಿ ಸುಮಾರು 28 ಜನರು ಕಾಣೆಯಾಗಿದ್ದಾರೆ, ಅಪಹರಣಕ್ಕೊಳಗಾಗಿದ್ದಾರೆ ಅಥವಾ ಕೊಲೆಯಾಗಿದ್ದಾರೆಂದು ಭಾವಿಸಲಾಗಿದೆ. ಪ್ರಸ್ತುತ ದೊಡ್ಡ ಮಟ್ಟದ ಸಂಘರ್ಷ ನಿಂತಿದೆ. ಆದರೆ, ರಾಜ್ಯದ ವಿವಿದೆಡೆ ಆಗಾಗ ಗಲಾಟೆಗಳು ವರದಿಯಾಗುತ್ತಿರುತ್ತವೆ.

12 ತಿಂಗಳ ಹಿಂಸಾಚಾರದಿಂದ ಸಾರಿಗೆ ಮತ್ತು ಸಂವಹನ ಸೇವೆಗಳಿಗೆ ಅಡಚಣೆಯಾಗಿದೆ. ವ್ಯಾಪಾರ, ಶಾಲಾ- ಕಾಲೇಜುಗಳು ಮತ್ತು ಇತರ ಸಂಸ್ಥೆಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ. ಮಣಿಪುರದ ಆರ್ಥಿಕತೆಯ ಮುಖ್ಯ ಆಧಾರವೆಂದು ಪರಿಗಣಿಸಲಾದ ಕೃಷಿ ವಲಯದ ಮೇಲೂ ಪರಿಣಾಮ ಬೀರಿದೆ.

ಒಂದು ವರ್ಷದಲ್ಲಿ ನೂರಾರು ಅಪರಾಧ ಪ್ರಕರಣಗಳು ಬೆಳಕಿಗೆ ಬಂದಿವೆ. ಅವುಗಳಲ್ಲಿ ಹಲವು ಪ್ರಕರಣಗಳನ್ನು ಇನ್ನೂ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ 27 ಹಿಂಸಾಚಾರದ ಪ್ರಕರಣಗಳನ್ನು ರಾಜ್ಯ ಪೊಲೀಸರಿಂದ ಸಿಬಿಐಗೆ ವಹಿಸಲಾಗಿದೆ.

ಅವುಗಳಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಘಟನೆಯೂ ಸೇರಿದೆ. ಕಳೆದ ಜುಲೈನಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ಮೈತೇಯಿ ಗುಂಪೊಂದು ಭತ್ತದ ಗದ್ದೆಯಲ್ಲಿ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿತ್ತು. ಅದರ ವಿಡಿಯೋ ವೈರಲ್ ಆಗಿತ್ತು. ಬಳಿಕ, ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಮೇ 4 ರಂದು ಜನಾಂಗೀಯ ಘರ್ಷಣೆಗಳು ಭುಗಿಲೆದ್ದ ಬೆನ್ನಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮಣಿಪುರದಲ್ಲಿ ಶಾಂತಿ ಸ್ಥಾಪಿಸುವುದು, ಒಡೆದು ಹೋದ ಎರಡು ಸಮುದಾಯಗಳನ್ನು ಒಗ್ಗೂಡಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ನಾಗರಿಕರ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವವರೆಗೆ ಅಲ್ಲಿ ಶಾಂತಿ ನೆಲಸುವುದಿಲ್ಲ ಎಂದು ವರದಿಗಳು ಅಭಿಪ್ರಾಯಪಟ್ಟಿವೆ.

ಸಂಘರ್ಷದ ಸಂದರ್ಭದಲ್ಲಿ ಭದ್ರತಾ ಸಂಸ್ಥೆಗಳು ಸುಮಾರು 2 ಸಾವಿರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಅಂದಾಜಿಸಿದ್ದಾರೆ. ಇನ್ನೂ 4 ಸಾವಿರ ನಾಗರಿಕರ ಕೈಯಲ್ಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಅಸ್ಸಾಂ ರೈಫಲ್ಸ್ ಅಧಿಕಾರಿಯೊಬ್ಬರು ಸಂಘರ್ಷಕ್ಕೆ “ರಾಜಕೀಯ ಪರಿಹಾರ” ದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಆದರೆ “ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯು ಉದ್ವಿಗ್ನತೆಯನ್ನು ಉಂಟು ಮಾಡುತ್ತಿದೆ. ಇದು ಕಾನೂನು ಮತ್ತು ಸುವ್ಯವಸ್ಥೆಗೆ ಅಡಚಣೆಯಾಗಿದೆ ಎಂದು ಇಂಡಿಯನ್ ಎಕ್ಸ್‌ ಪ್ರೆಸ್ ವರದಿ ಹೇಳಿದೆ.

ಎರಡೂ ಸಮುದಾಯಗಳ ನಡುವಿನ ಸಂದಾನ ಮಾತುಗಳು ನಡೆದಿಲ್ಲ. ಕೇಂದ್ರ ಸರ್ಕಾರವೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಮುದಾಯಗಳು ಆಗ್ರಹಿಸಿವೆ. ಆದರೆ, ಹಿಂಸಾಚಾರ ಪ್ರಾರಂಭಗೊಂಡು ವರ್ಷ ತುಂಬಿದರೂ ಪ್ರಧಾನಿ ಮೋದಿ ಮಣಿಪುರದ ಕಡೆ ತಲೆ ಹಾಕಿಲ್ಲ. ಹಿಂಸಾಚಾರದ ಬಗ್ಗೆ ಮಾತೆತ್ತಿಲ್ಲ.

ಮಣಿಪುರ ವಿಧಾನಸಭೆಯ 10 ಕುಕಿ-ಝೋಮಿ ಶಾಸಕರ ಜೊತೆಗೆ ಕುಕಿ-ಝೋಮಿ ಗುಂಪುಗಳು, ಕಳೆದ ವರ್ಷದ ಮೇ ತಿಂಗಳಿನಿಂದ ತಮಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಮಾಡುವುದು ಮಾತ್ರ ಸ್ವೀಕಾರಾರ್ಹ ಪರಿಹಾರ ಎಂದು ಹೇಳಿಕೊಳ್ಳುತ್ತಿದ್ದಾರೆ.

“ನಾವು ಒಂದೇ ಆಡಳಿತದಲ್ಲಿ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ಚೆನ್ನಾಗಿ ತಿಳಿದಿರುವ ಕೇಂದ್ರವು ನಮ್ಮ ಸಮಸ್ಯೆಯನ್ನು ಪರಿಹರಿಸಬೇಕು. ಯಾವುದೇ ರಾಜಿ ಸಾಧ್ಯವಿಲ್ಲ. ಮಣಿಪುರ ಸರ್ಕಾರವು ಅದರ ಬಗ್ಗೆ ಏನನ್ನೂ ಮಾಡುವುದಿಲ್ಲ ಎಂಬುದು ನಮಗೆ ಸ್ಪಷ್ಟವಾಗಿದೆ. ನಾವು ನಮ್ಮ ಭೂಮಿ ರಕ್ಷಿಸಲು ಕೇಂದ್ರ ಸರ್ಕಾರದೊಂದಿಗೆ ನಮ್ಮ ರಾಜಕೀಯ ಬೇಡಿಕೆಯನ್ನು ಒತ್ತಾಯಿಸುವುದನ್ನು ಮುಂದುವರಿಸುತ್ತೇವೆ” ಎಂದು ಚುರಚಂದಪುರ ಮೂಲದ ಕುಕಿ-ಜೋಮಿ ಸಮುದಾತದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯ ಕಾರ್ಯದರ್ಶಿ ಮುವಾನ್ ಟಾಂಬಿಂಗ್ ಹೇಳಿದ್ದಾರೆ.

ಮತ್ತೊಂದೆಡೆ ಮೈತೇಯಿ ಸಮುದಾಯದ ಪರ ಸಂಘಟನೆ COCOMI ನ ವಕ್ತಾರರಾದ ಖುರೈಜಮ್ ಅಥೌಬಾ, ಕೇಂದ್ರವು ಕುಕಿ-ಝೋಮಿ ಬಂಡುಕೋರರ ಗುಂಪುಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅವರೊಂದಿಗೆ ಕದನ ವಿರಾಮದ ಮಾತುಕತೆಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಒಂದು ವರ್ಷದ ಹಿಂಸಾಚಾರದ ಬಳಿಕವೂ ರಾಜ್ಯ ಯಥಾ ಸ್ಥಿತಿಗೆ ಮರಳುವ ಲಕ್ಷಣ ಕಾಣುತ್ತಿಲ್ಲ. ಇದರಲ್ಲಿ ಜನರ ನಡುವಿನ ಸಂಘರ್ಷಕ್ಕಿಂತ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಉಕ್ರೇನ್-ರಷ್ಯಾ, ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಯುದ್ಧ ನಿಲ್ಲಿಸುವ ಸಾಮಾರ್ಥ್ಯವಿದೆ ಎನ್ನುವ ಪ್ರಧಾನಿ, ನಮ್ಮದೇ ದೇಶದ ರಾಜ್ಯ ಹಿಂಸಾಚಾರದಿಂದ ನಲುಗಿದರೂ ಭೇಟಿ ನೀಡದಿರುವುದು ವಿಪರ್ಯಾಸವೇ ಸರಿ. ರಾಜಕೀಯ ಡೊಂಬರಾಟದ ನಡುವೆ ಅಮಾಯಕ ಜನರು ನೆಮ್ಮದಿಯ ಬದುಕಿನ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದ್ದಾರೆ.

ಇದನ್ನೂ ಓದಿ : ಬಿಜೆಪಿಯ ನವ ಭಾರತದಲ್ಲಿ ಧರ್ಮವನ್ನು ಆಯುಧವನ್ನಾಗಿಸಲಾಗಿದೆ: ಪರಕಾಲ ಪ್ರಭಾಕರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...