ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.
ಪ್ರತಿಭಟನಾಕಾರರಿಗೆ ಬೆಂಬಲ ನೀಡುತ್ತಿದ್ದ ಸ್ವಯಂಸೇವಕರನ್ನು ಬಂಧಿಸಲಾಗುತ್ತಿದೆ ಮತ್ತು ವಶಕ್ಕೆ ಪಡೆಯಲಾಗುತ್ತಿದೆ ಎಂದು ವರದಿಗಳನ್ನು ಉಲ್ಲೇಖಿಸಿರುವ ಅವರು, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ನೂರಾರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಹಾಗೂ ದೆಹಲಿಯಲ್ಲಿ ಇನ್ನೂ ನೂರಾರು ಜನರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಪ್ರತಿಭಟನಾಕಾರರ ವಿರುದ್ಧದ ಎಲ್ಲಾ ಎಫ್‌ಐಆರ್‌ಗಳನ್ನು ತಕ್ಷಣವೇ ಹಿಂಪಡೆಯಬೇಕು, ಬಂಧಿತ ವಿದ್ಯಾರ್ಥಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು (ಒಪ್ಪಂದದ ಪ್ರಕಾರ) ದೆಹಲಿ ಪೋಲೀಸರು, ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಪೋಲೀಸರು ಭವಿಷ್ಯದಲ್ಲಿ ಯಾವುದೇ ಎಫ್‌ಐಆರ್ ದಾಖಲಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಈ ಬೇಡಿಕೆಗಳನ್ನು ಈಡೇರಿಸದಿದ್ದರೆ CJP ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಮುಂದುವರಿದು, ಕೇಸ್ ಅಥವಾ ಕಾನೂನು ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿದ್ದ ಲಿಖಿತ ಒಪ್ಪಂದದ ಪ್ರತಿಯನ್ನು ಮತ್ತು ಭಾರತ ಸರ್ಕಾರದ ಮುಂದಿನ ಕಾಲಮಿತಿಯನ್ನು ನಾಳೆಯೊಳಗೆ ನಮಗೆ ಹಂಚಿಕೊಳ್ಳಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
‘ಲಾಠಿಚಾರ್ಜ್ ಮಾಡಲು ಸಾಧ್ಯವಿಲ್ಲ’ ಎಂದ ಸುಪ್ರೀಂ ಕೋರ್ಟ್
ಇನ್ನೊಂದೆಡೆ, ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಸ್ವಯಂ-ರೂಪಿತ ಶಿಸ್ತು ಅತ್ಯಗತ್ಯ ಎಂದು ಸೋಮವಾರದಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಕೇವಲ ಪ್ರತಿಭಟನೆ ಅಥವಾ ಚಳವಳಿ ನಡೆಯುತ್ತಿದೆ ಎಂಬ ಮಾತ್ರಕ್ಕೆ ಪೋಲೀಸ್ (ದೌರ್ಜನ್ಯ) ಹಿಂಸಾಚಾರಕ್ಕೆ ಆಸ್ಪದವಿಲ್ಲ ಎಂದು ಸ್ಪಷ್ಟಪಡಿಸಿದೆ.
ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ನೀಟ್ (NEET) ಪ್ರತಿಭಟನಾಕಾರರ ಮೇಲೆ ಪೋಲೀಸರು ನಡೆಸಿದ ದೌರ್ಜನ್ಯವನ್ನು ಪ್ರಶ್ನಿಸಿ ರಾಜ್ಯಸಭಾ ಸಂಸದ ಮನೋಜ್ ಝಾ ಸಲ್ಲಿಸಿದ್ದ ಅರ್ಜಿ ಸೇರಿದಂತೆ ಹಲವು ಅರ್ಜಿಗಳ ವಿಚಾರಣೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ನೇತೃತ್ವದ ತ್ರಿಸದಸ್ಯ ಪೀಠ ನಡೆಸಿತು.
“ಪ್ರತಿಭಟನೆ ನಡೆಸುವುದು, ಶಾಂತಿಯುತ ಪ್ರತಿಭಟನೆ ಮತ್ತು ಕಾನೂನುಬದ್ಧ ಚಳವಳಿ ಮಾಡುವುದು ಸಂವಿಧಾನ ನಮಗೆ ನೀಡಿರುವ ಮೂಲಭೂತ ಹಕ್ಕು. ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿರುವಾಗ, ಕೇವಲ ಚಳವಳಿ ನಡೆಯುತ್ತಿದೆ ಎಂಬ ಕಾರಣಕ್ಕೆ ಪೋಲೀಸರು ಅತಿಯಾದ ಬಲಪ್ರಯೋಗ ಅಥವಾ ದೌರ್ಜನ್ಯ ನಡೆಸಲು ಸಾಧ್ಯವಿಲ್ಲ” ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದ್ದಾರೆ.


