ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲೇ ತೊಡಗಿಸಿಕೊಂಡಿರುವ ಬಿಎಲ್ಒ (BLO) ಒಬ್ಬರಿಗೇ ಚುನಾವಣಾ ಆಯೋಗವು ನೋಟಿಸ್ ಜಾರಿ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಅಲಂಗಾರು ನಿವಾಸಿ, ಬಿಎಲ್ಒ ಆಗಿ ಸೇವೆ ಸಲ್ಲಿಸುತ್ತಿರುವ ವಿದ್ಯಾ ಎಂಬವರಿಗೆ ಚುನಾವನಾ ಆಯೋಗ ನೋಟಿಸ್ ನೀಡಿದ್ದು, ರಾಜ್ಯದಲ್ಲಿ ನಡೆಯುತ್ತಿರುವ SIR ಕುರಿತಾಗಿ ಆತಂಗಳು ವ್ಯಕ್ತವಾಗಿದೆ.
ಮತದಾರರ ಪಟ್ಟಿ ನವೀಕರಣ ಸಂದರ್ಭದಲ್ಲಿ ಕಂಡುಬಂದ ‘ಜಾತಿ ಉಪನಾಮ’ದ (Caste Surname) ಗೊಂದಲವನ್ನು ನೆಪವಾಗಿಟ್ಟುಕೊಂಡು ಚುನಾವಣಾ ನೋಂದಣಾಧಿಕಾರಿಗಳು ಈ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ನೋಟಿಸ್ನಲ್ಲಿ ನೀಡಲಾಗಿದ್ದ ಸೂಚನೆಯಂತೆ ಸೆಪ್ಟೆಂಬರ್ 8 ರಂದೇ ವಿದ್ಯಾ ಅವರು ಮೂಡುಬಿದಿರೆ ತಾಲೂಕು ಕಚೇರಿಗೆ ಖುದ್ದು ತೆರಳಿ ಅಧಿಕಾರಿಗಳ ಮುಂದೆ ಹಾಜರಾಗಿ ಸ್ಪಷ್ಟನೆ ಹಾಗೂ ಸೂಕ್ತ ದಾಖಲೆಗಳನ್ನು ಸಲ್ಲಿಸಿದ್ದಾರೆ.
‘ತಮ್ಮ ಗಂಡನ ಜಾತಿಯ ಉಪನಾಮ ಹಾಗೂ ತಂದೆಯ ಕಡೆಯ ಜಾತಿಯ ಉಪನಾಮ ಬೇರೆ ಬೇರೆಯಾಗಿರುವ ಕಾರಣಕ್ಕೆ ತಾಂತ್ರಿಕ ದೋಷ ಎದ್ದು ಕಾಣುತ್ತಿದ್ದು, ಇದೇ ಕಾರಣಕ್ಕೆ ಆಯೋಗದಿಂದ ನೋಟಿಸ್ ಬಂದಿರುವ ಸಾಧ್ಯತೆಯಿದೆ’ ಎಂದು ಅವರು ತಿಳಿಸಿದ್ದಾರೆ. ನೋಟಿಸ್ಗೆ ಪೂರಕ ಉತ್ತರವಾಗಿ ತಮ್ಮ ಎಸ್ಎಸ್ಎಲ್ಸಿ ಅಂಕಪಟ್ಟಿ ಹಾಗೂ ಜಾತಿ-ಆದಾಯ ಪ್ರಮಾಣಪತ್ರಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ರಾಜ್ಯಾದ್ಯಂತ ಸಾಮಾನ್ಯ ಸಾರ್ವಜನಿಕರು, ಹಿರಿಯ ನಾಗರಿಕರು ಹಾಗೂ ಅನಿವಾಸಿ ಕನ್ನಡಿಗರು ನೋಟಿಸ್ಗಳ ಸುಳಿಯಲ್ಲಿ ಸಿಲುಕಿ ವಿಚಾರಣೆಗೆ ಅಲೆಯುತ್ತಿರುವ ಬೆನ್ನಲ್ಲೇ, ಸ್ವತಃ ಮತದಾರರ ಮನೆಬಾಗಿಲಿಗೆ ಹೋಗಿ ಮಾಹಿತಿ ಸಂಗ್ರಹಿಸುವ ಬಿಎಲ್ಒ ಕೂಡ ಈ ಅಸ್ಪಷ್ಟ ಮಾನದಂಡಗಳ ಕಿರುಕುಳದಿಂದ ತಪ್ಪಿಸಿಕೊಂಡಿಲ್ಲ ಎಂಬುದು ಆತಂಕಕಾರಿ ಸಂಗತಿಯಾಗಿದೆ. ತಾಂತ್ರಿಕ ಮ್ಯಾಪಿಂಗ್ ಮತ್ತು ಉಪನಾಮಗಳಂತಹ ಸೂಕ್ಷ್ಮ ವಿಚಾರಗಳನ್ನು ತಾರ್ಕಿಕವಾಗಿ ಪರಿಶೀಲಿಸದೆ ಯಾಂತ್ರಿಕವಾಗಿ ನೋಟಿಸ್ ನೀಡುತ್ತಿರುವ ಆಯೋಗದ ವೈಖರಿಯ ಬಗ್ಗೆ ಈಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.


