Homeಕರ್ನಾಟಕಹೊಸವರ್ಷ: ಭರವಸೆ ಮತ್ತು ಆತಂಕ

ಹೊಸವರ್ಷ: ಭರವಸೆ ಮತ್ತು ಆತಂಕ

- Advertisement -
- Advertisement -

2023ನೇ ಇಸವಿಯ ಮುಖ್ಯ ಘಟನೆಯೆಂದರೆ, ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದು ಮತ್ತು ರಾಜಕೀಯವಾಗಿ ದಕ್ಷಿಣ ಭಾರತವು ಅಡಳಿತದಲ್ಲಿ ಬಿಜೆಪಿ ಮುಕ್ತವಾಗಿದ್ದು. ಈ ಫಲಿತಾಂಶವು ಇಡೀ ಭಾರತದ ರಾಜಕಾರಣದ ದಿಕ್ಕನ್ನು ನಿರೂಪಿಸಬಹುದು ಎಂದು ಆಶಿಸಲಾಗಿತ್ತು. ಆದರೆ ಛತ್ತೀಸಗಢ, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಬಿಜೆಪಿಯ ಗೆಲುವು, ಕೌಬೆಲ್ಟ್ ಎನ್ನಲಾಗುವ ಉತ್ತರ ಭಾರತದ ಆಲೋಚನಾ ಕ್ರಮವು ಬೇರೆಯೇ ಇದೆ ಎಂಬುದನ್ನು ಸೂಚಿಸಿತು. ದಕ್ಷಿಣ ಭಾರತದಲ್ಲಿ ರಾಜಕೀಯವಾಗಿ ಬಿಜೆಪಿ ಸೋತರೂ, ಅದರ ಮತಗಳಿಕೆ ಕಡಿಮೆಯಾಗಿಲ್ಲ; ಸಮಾಜದಲ್ಲಿ ಸಂಘಪರಿವಾರವು ಬಿತ್ತಿದ ಆಲೋಚನೆಗಳು ಪ್ರಭಾವಶಾಲಿಯಾಗಿವೆ.

ಈ ಮಿತಿಗಳಲ್ಲೂ 2023ನೇ ವರ್ಷದಲ್ಲಿ ನಡೆದ ಐದು ರಾಜ್ಯಗಳ ಚುನಾವಣೆಗಳು, ಉತ್ತರ-ದಕ್ಷಿಣಗಳಲ್ಲಿರುವ ಒಂದು ವ್ಯತ್ಯಾಸವನ್ನು ಸೂಚಿಸಿವೆ. ಅದೆಂದರೆ ಹಾರ್ದಿಕವಾದ ಸಾಮಾಜಿಕ ಸಂಬಂಧ ಮತ್ತು ಆರ್ಥಿಕ ಏಳಿಗೆಯ ಪ್ರಶ್ನೆಗಳಿಗಿಂತ ‘ಧಾರ್ಮಿಕ’ ಎನ್ನಲಾಗುವ ವಿಷಯಗಳಿಗೆ ಉತ್ತರದ ನೆಲದಲ್ಲಿ ಹೆಚ್ಚು ನೀರುಗೊಬ್ಬರಗಳಿವೆ ಎನ್ನುವುದು. ಈ ತರ್ಕದ ಮುಂದುವರಿಕೆ ಎಂಬಂತೆ, ಈಗ ಅಯೋಧ್ಯೆಯಲ್ಲಿ ರಾಮಮಂದಿರವು, ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆಯಾಗುತ್ತಿದೆ. ಇದರ ಬೆನ್ನಲ್ಲೇ 2024ನೇ ಇಸವಿಯ ಮಹಾಚುನಾವಣೆ ಬರುತ್ತಿದೆ. ಗೃಹಮಂತ್ರಿಯವರು ಪೌರತ್ವ ಕಾಯಿದೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ. 2025ಕ್ಕೆ ಆರೆಸ್ಸೆಸ್ ಹುಟ್ಟಿ ಶತಮಾನವನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ 2024ರ ಚುನಾವಣೆಯ ರಾಜಕೀಯ ಸೋಲು-ಗೆಲುವುಗಳು ನಿರ್ಣಾಯಕವಾಗಲಿವೆ. 2024ರ ಚುನಾವಣೆಯಲ್ಲಿ ಒಂದೊಮ್ಮೆ ಬಿಜೆಪಿ ವಿಜಯ ಸಾಧಿಸಿದರೆ, ಭಾರತದ ಬೀದಿಗಳಲ್ಲಿ ಈಗಿರುವ ಹಿಂಸೆ ಮತ್ತಷ್ಟು ಸಾಮಾನ್ಯ ವಿದ್ಯಮಾನವಾಗಬಹುದು. ಕ್ರೈಸ್ತ ಮುಸ್ಲಿಂ ಬೌದ್ಧ ಧಾರ್ಮಿಕ ಸಮುದಾಯಗಳು ಹೊಸಹೊಸ ಬಿಕ್ಕಟ್ಟಿಗೆ ಸಿಲುಕಬಹುದು. ಕೂಡುಬಾಳಿನ ರಚನೆ ಹಾಗೂ ಬಹುಸಾಂಸ್ಕೃತಿಕ ಲೋಕಗಳು ಅಳಿವಿಗೆ ಸರಿಯಬಹುದು. ಶೂದ್ರ ದಲಿತ ಸಮುದಾಯಗಳ ಪಳಗಿಸುವಿಕೆಯು ಅರ್ಥಾತ್ ಬ್ರಾಹ್ಮಣವಾದಿ ಸಂಸ್ಕೃತಿಯ ಹೇರಿಕೆ ಹೆಚ್ಚಾಗಬಹುದು. ಮುಖ್ಯವಾಗಿ ಭಾರತದ ಸಂವಿಧಾನವು ಅಸ್ತಿತ್ವದ ಪ್ರಶ್ನೆಯನ್ನು ಎದುರಿಸಲಿರುವುದು. ಮಾರುಕಟ್ಟೆ ಆರ್ಥಿಕತೆಯು ಮತ್ತಷ್ಟು ಗರಿಗೆದರಬಹುದು.

ವಿಶೇಷವೆಂದರೆ, ಮತೀಯವಾದಿ ರಾಜಕಾರಣವು ಕೇವಲ ಚುನಾವಣಾ ಗೆಲುವೊಂದರಿಂದಲೇ ತನಗೆ ಬೇಕಾದ ಪಲ್ಲಟಗಳನ್ನು ಆಗು ಮಾಡುವುದಿಲ್ಲ. ಚುನಾವಣಾ ವಿಜಯ ಮತ್ತು ರಾಜ್ಯಾಧಿಕಾರಗಳು ಈ ಕೆಲಸಕ್ಕೆ ಬೇಕಾದ ಬಲವನ್ನು ಅದಕ್ಕೆ ನೀಡುತ್ತ ಬಂದಿವೆ ನಿಜ. ಆದರೆ ಇದರ ಜತೆಗೆ ಅದು ತನ್ನ ಸಿದ್ಧಾಂತವನ್ನು ಜನರ ದೈನಿಕ ಬಾಳಿನಲ್ಲಿ ಬೇರೂರಿಸಲು, ಅದನ್ನು ಅವರ ಸಾಮಾನ್ಯ ಜ್ಞಾನವನ್ನಾಗಿ ಮಾಡಲು ಯತ್ನಿಸುತ್ತದೆ. ಅರ್ಥಾತ್ ತನ್ನ ರಾಜಕಾರಣಕ್ಕೆ ಜನಸಮ್ಮತಿಯನ್ನು ಉತ್ಪಾದಿಸುತ್ತದೆ. ಚುನಾವಣೆಗಳಲ್ಲಿ ಗೆಲ್ಲಲಿ ಸೋಲಲಿ, ಸೈದ್ಧಾಂತಿಕವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಈ ದಿಸೆಯಲ್ಲಿ ಅದು ಒಂದು ಶತಮಾನದಿಂದ ದುಡಿಯುತ್ತ ಬಂದಿದೆ.

ಸಂಘಪರಿವಾರವು ತನ್ನ ರಾಜಕಾರಣಕ್ಕೆ ಭಾವನಾತ್ಮಕ ನೆಲೆಯಲ್ಲಿ ಸಂಸ್ಕೃತಿಯನ್ನು ಒಂದು ಮುಖ್ಯ ಅಸ್ತ್ರವನ್ನಾಗಿ ಮಾಡಿಕೊಂಡು ಬಂದಿದೆ. ಇದನ್ನು ಸಾಂಸ್ಕೃತಿಕ ರಾಜಕಾರಣ ಎನ್ನುವುದಾದರೆ, ಇದು ಅನ್ಯೀಕರಣ (ಅದರಿಂಗ್), ದುರುಳೀಕರಣ (ಡೆಮೊನೈಜಿಂಗ್), ಆಕ್ರಮಣ, ಅಳಿಸುವಿಕೆ (ಎರೇಸಿಂಗ್), ಬದಲಿಸುವಿಕೆ (ರಿಪ್ಲೇಸಿಂಗ್), ಮರುನಾಮಕರಣ (ರಿನೇಮಿಂಗ್) ಮುಂತಾದ ಆಯಾಮಗಳಲ್ಲಿ ಜಾರಿಯಾಗುತ್ತ ಬಂದಿದೆ. ಕೆಲವೇ ವರ್ಷಗಳ ಹಿಂದೆ ಅದು ಆರಂಭಿಸಿದ ಗಾಂಧಿ ನೆಹರು ಅವರನ್ನು ಕುರಿತ ತಪ್ಪು ಕಥನಗಳು ಮತ್ತು ಪೂರ್ವಗ್ರಹಗಳು ಹೊಸತಲೆಮಾರಿನಲ್ಲಿ ಬೇರೂರಿಸಿದೆ; ರಾಹುಲ್ ಗಾಂಧಿಯನ್ನು ದಡ್ಡನೆಂದು ಬಿಂಬಿಸಿದೆ. ಅಂಬೇಡ್ಕರ್ ಅವರು 1940ರ ದಶಕದ ಮುಸ್ಲಿಂಲೀಗ್ ರಾಜಕಾರಣವನ್ನು ಕುರಿತು ಆಡಿರುವ ಸಾಂದರ್ಭಿಕ ಟೀಕೆಗಳನ್ನು ಇಟ್ಟುಕೊಂಡು, ಸಂಘ ಪರಿವಾರ ಮುಸ್ಲಿಮರ ಮತ್ತು ದಲಿತರ ನಡುವಣ ಬಿರುಕಿಗೆ ಯತ್ನಿಸಿದೆ. ಮುಸ್ಲಿಮರನ್ನು ಮತ್ತು ಇಸ್ಲಾಮನ್ನು ಈ ನಾಡಿಗೆ ಹೊರತಾದ ಸಂಗತಿಗಳೆಂಬ ಗ್ರಹಿಕೆಯನ್ನು ನೆಲೆಗೊಳಿಸಿದೆ. ವೈಚಾರಿಕ ಚಿಂತಕರನ್ನು ಪೀಡೆಗಳೆಂದು ನಿರೂಪಿಸಿದೆ. 2024ರ ನಂತರ ಅದಕ್ಕೆ ರಾಜಕೀಯ ಗೆಲುವು ಸಿಕ್ಕರೆ, ಅದರ ದ್ವೇಷದ ರಾಜಕಾರಣದಲ್ಲಿ ಹೊಸಹೊಸ ಉಪಾಯಗಳು ಹುಟ್ಟಬಹುದು. ನಿರ್ದಿಷ್ಟ ವ್ಯಕ್ತಿ, ತತ್ವಸಿದ್ಧಾಂತ, ಸಮುದಾಯ, ಭಾಷೆ, ಸಂಸ್ಕೃತಿ, ಧರ್ಮವನ್ನು ದ್ವೇಷಿಸುವ ಮೂಲಕವೇ ರೂಪುಗೊಳ್ಳುವ ಅದರ ಸಾಂಸ್ಕೃತಿಕ ರಾಜಕಾರಣವು ಕೇವಲ ಭಾವನೆ ಆಲೋಚನೆಗಳ ಮಟ್ಟದಲ್ಲಿ ಉಳಿಯುವುದಿಲ್ಲ. ಅದು ಸಂಬಂಧಪಟ್ಟ ವ್ಯಕ್ತಿ, ಸಿದ್ಧಾಂತ, ಸಮುದಾಯಗಳ ಆರ್ಥಿಕತೆ ಮತ್ತು ರಾಜಕೀಯ ಪ್ರಾತಿನಿಧ್ಯವನ್ನು ಶಿಥಿಲಗೊಳಿಸುವುದು.

ಇದನ್ನೂ ಓದಿ: ಶ್ರೀರಾಮಚಂದ್ರ ಯಾರೊಬ್ಬರ ಸ್ವತ್ತಲ್ಲ; ಬಿಜೆಪಿಯವರು ಭ್ರಮೆಯಲ್ಲಿದ್ದಾರೆ: ಕಾಂಗ್ರೆಸ್

ಸಂಘಪರಿವಾರದ ಸ್ಮೃತಿನಾಶದ ತಂತ್ರಗಾರಿಕೆಯನ್ನು ಬಾಬಾಬುಡನಗಿರಿ ಪ್ರಕರಣದಲ್ಲಿ ಗಮನಿಸಬಹುದು. ಹಿಂದೆ ತರೀಕೆರೆ ಚಿಕ್ಕಮಗಳೂರು ಕಡೂರು ಸೀಮೆಯಲ್ಲಿ, ಪ್ರವಾಸಿಗರಿಗೆ ಸಮೀಪದ ಪ್ರೇಕ್ಷಣೀಯ ಜಾಗಗಳ ಮಾಹಿತಿ ಕೊಡಲು ಬರೆಯಿಸಿದ ಫಲಕಗಳಲ್ಲಿ ಬಾಬಾಬುಡನಗಿರಿಯ ಹೆಸರು ಇರುತ್ತಿತ್ತು. ಈ ಸೂಫಿತಾಣವನ್ನು ದತ್ತಪೀಠವೆಂದು ಪ್ರತಿಪಾದಿಸುವ ಚಳವಳಿಯ ಭಾಗವಾಗಿ ಬಾಬಾಬುಡನಗರಿಯ ಹೆಸರಿನ ಅಳಿಸುವಿಕೆ ಶುರುವಾಯಿತು. ಸರ್ಕಾರಿ ದಾಖಲೆಗಳಲ್ಲಿ, ಮೈಲಿಕಲ್ಲುಗಳಲ್ಲಿ, ಪ್ರವಾಸಿ ಇಲಾಖೆಯ ಸೂಚನಾಫಲಕಗಳಲ್ಲಿ ಇದ್ದ ಬಾಬಾಬುಡನಗಿರಿ ಹೆಸರನ್ನು ತೆಗೆಯುತ್ತ ಬರೆಯಲಾಯಿತು. ಪತ್ರಕರ್ತರಿಗೆ ವರದಿ ಮಾಡುವಾಗ ಬಾಬಾಬುಡನಗಿರಿ ಶಬ್ದವನ್ನು ಬಳಸದಂತೆ ತಾಕೀತು ಮಾಡಲಾಯಿತು. ಇದೇ ಪ್ರಕ್ರಿಯೆಯಲ್ಲಿ ಮುಸ್ಲಿಮ್ ರಾಜರ/ಸಂತರ ಹೆಸರಲ್ಲಿರುವ ಊರು, ರಸ್ತೆ, ರೈಲು, ರೈಲ್ವೆನಿಲ್ದಾಣ ಹೆಸರುಗಳ ಬದಲಾವಣೆ ದೇಶಾದ್ಯಂತ ನಡೆದವು. ‘ಬಾಬಾಬುಡನ್ ಸಂತನು ಮಲೆನಾಡಿಗೆ ಅರಬಸ್ಥಾನದಿಂದ ಕಾಫಿಯನ್ನು ತಂದು ಪರಿಚಯಿಸಿದನು. ಟಿಪ್ಪು ಕರ್ನಾಟಕಕ್ಕೆ ಚೀನಾದಿಂದ ರೇಷ್ಮೆಯನ್ನು ತಂದು ಪರಿಚಯಿಸಿದನು ಎಂಬ ಸಂಗತಿಗಳನ್ನು ಪಠ್ಯದಿಂದ ತೆಗೆದುಹಾಕಲಾಯಿತು. ಪರಂಪರಾಗತ ಹೆಸರನ್ನು ಅಳಿಸುವಿಕೆ, ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ಕಟ್ಟುವಿಕೆ, ಹೆಸರು ಬದಲಾವಣೆ ಕೆಲಸಗಳು ಅಲ್ಲಿಗೆ ನಿಲ್ಲುವುದಿಲ್ಲ. ಅವಕ್ಕೆ ಸಂಬಂಧಿಸಿದ ಸಮುದಾಯ ಮತ್ತು ವ್ಯಕ್ತಿಗಳ ದುರುಳೀಕರಣಕ್ಕೆ ಕರೆದೊಯ್ಯುತ್ತವೆ. ಜರ್ಮನಿಯಲ್ಲಿ ಫ್ಯಾಸಿಸ್ಟರು ಯಹೂದಿಗಳಿಗೆ ಸೇರಿದ ಗುರುತುಗಳನ್ನು ಹೀಗೆಯೇ ಅನ್ಯೀಕರಿಸಿದರು. ಬಳಿಕ ಅವರ ಸಂಹಾರ ಮಾಡಿದರು.

ದ್ವೇಷ ಭಾಷಣಗಳು, ವಾಣಿಜ್ಯ ನಿಷೇಧ, ಆಹಾರ ನಿಷೇಧ, ಉಡುಪಿನ ನಿರ್ಬಂಧಗಳು ಜನಾಂಗ ಹತ್ಯೆಗೆ ಕರೆದೊಯ್ಯುವಾಗ, ನಾಡಿನ ಸಾಮುದಾಯಿಕ ವಿವೇಕ ಹೇಗೆ ವರ್ತಿಸುತ್ತದೆ ಎಂಬುದೇ ಪ್ರಶ್ನೆ. ಅದು ಮೌನಸಮ್ಮತಿ ನೀಡಬಹುದು. ಇಲ್ಲವೇ ತನ್ನೊಳಗಿದ್ದ ವಿವೇಕವನ್ನು ಮತ್ತು ಕೂಡುಬಾಳಿನ ತತ್ವವನ್ನು ಜಾಗೃತಗೊಳಿಸಬಹುದು. ಈ ಜಾಗರಣದಲ್ಲಿ ದೇಶವನ್ನು ಬಹುತ್ವದ ನೆಲೆಯಲ್ಲಿ ಕಟ್ಟುವ ವಿವೇಕದ ಪರಂಪರೆಯು ನೆರವಿಗೆ ಬರಬಹುದು. ಪ್ರತಿಯಾದ ಪರ್ಯಾಯಗಳ ಹುಡುಕಾಟಕ್ಕೆ ಪ್ರೇರಿಸಬಹುದು. ಆದರೆ ಈ ಸಾಮುದಾಯಿಕ ವಿವೇಕವು ಜಾಗೃತಗೊಳ್ಳದಿದ್ದರೆ, ಹಲವು ಧರ್ಮ ಭಾಷೆ ಸಮುದಾಯಗಳು, ಅವಕ್ಕೆ ಸಂಬಂಧಿಸಿದ ಚರಿತ್ರೆಗಳನ್ನು ಕುರಿತು ಹೊರಗಿಡುವ, ಅನ್ಯಗೊಳಿಸುವ, ದ್ವೇಷಿಸುವ ಮತ್ತು ಅಳಿಸಿಹಾಕುವ ಪ್ರಕ್ರಿಯೆ ನ್ಯಾಯಬದ್ಧತೆ ಪಡೆದುಬಿಡುತ್ತದೆ.

ಈ ಹಿನ್ನೆಲೆಯಲ್ಲಿ ಭಾರತದ ಸಾಮುದಾಯಿಕ ವಿವೇಕವನ್ನು, ಕೂಡಿಬಾಳುವ ತತ್ವಕ್ಕೆ ಪೂರಕವಾಗಿ ಪ್ರಭಾವಿಸುವ, ಜೀವಂತವಾಗಿಡುವ ಕೆಲಸದ ಸವಾಲು 2024ರ ನಂತರ ವರ್ಷಗಳಲ್ಲಿ ತೀವ್ರವಾಗಲಿದ್ದು ಅದನ್ನು ಮೆಟ್ಟಿನಿಂತು ಸಾಕಾರಗೊಳಿಸಬೇಕಿದೆ. ಇದು ಈ ದೇಶದ ಸಾಮುದಾಯಿಕ ವಿವೇಕವು ಹೂಡಲಿರುವ ಹೊಸ ಸ್ವಾತಂತ್ರ್ಯ ಹೋರಾಟವೇ ಎಂದು ಪರಿಗಣಿಸಬೇಕಿದೆ. ಯಾಕೆಂದರೆ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ವಿರೋಧಿಸಿ ಒಗ್ಗೂಡುತ್ತಿರುವ ವಿರೋಧಪಕ್ಷಗಳು, ಕೇವಲ ರಾಜಕೀಯ ಗೆಲುವನ್ನು ತರಬಲ್ಲವು. ಸೈದ್ಧಾಂತಿಕ ಗೆಲುವನ್ನಲ್ಲ. ಕಾರಣ, ಅದರೊಳಗಿರುವ ಅನೇಕರು ಮತೀಯವಾದದ ಜತೆಗೆ ಹಿಂದೆ ಸರಸವಾಡಿದವರು. ಮುಂದೆ ಅವಕಾಶ ಸಿಕ್ಕರೆ ಕೈಜೋಡಿಸಬಲ್ಲವರು.

ಕುವೆಂಪು ತಮ್ಮದೊಂದು ಪದ್ಯದಲ್ಲಿ ಹೊಸದೇಶ ಕಟ್ಟುವ ಪರಿಕಲ್ಪನೆಯನ್ನು ಮಂಡಿಸುತ್ತ ‘ನಾನಳಿವೆ, ನೀನಳಿವೆ, ನಮ್ಮೆಲುವುಗಳ ಮೇಲೆ ಮೂಡುವುದು ನವಭಾರತದ ಲೀಲೆ’ ಎಂದರು. ಇದೇ ಕಾಲಘಟ್ಟದಲ್ಲಿ ಬರೆದ ‘ನರಬಲಿ’ ಕವನದಲ್ಲಿ ಬೇಂದ್ರೆಯವರು ಕಾಳಿಯ ಬಾಯಲ್ಲಿ ‘ಗಂಡುಸಾದರೆ ನನ್ನ ಬಲಿಗೊಡುವೆಯೇನು?’ ಎಂಬ ಪ್ರಶ್ನೆಯನ್ನು ಅವಳನ್ನು ಪೂಜಿಸುವ ನರನಿಗೆ ಹೊರಡಿಸಿದರು. ಗುಲಾಮಗಿರಿಯಿಂದ ಬಿಡಿಸಿಕೊಂಡು ಹೊಸ ದೇಶವೊಂದನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಅಳಿವು-ಉಳಿವುಗಳ ಆಯಾಮಗಳು ಯಾವಾಗಲೂ ಜತೆಯಲ್ಲಿರುತ್ತವೆ. ಪರ್ಯಾಯ ಧರ್ಮ ಇಲ್ಲವೇ ಸಮಾಜ ರಾಜಕಾರಣ ಕಟ್ಟಲೆತ್ನಿಸಿದ ಬುದ್ಧ, ಶರಣರು, ಅಂಬೇಡ್ಕರ್, ಪೆರಿಯಾರ್ ಎಲ್ಲರೂ ತಮ್ಮ ಎದುರಿಗಿದ್ದ ಕೆಲವು ಕೆಡುಕುಗಳನ್ನು ಗುರುತಿಸಿದರು. ಅವು ಅಳಿಯಬೇಕೆಂದು ಬಯಸಿದರು. ಪ್ರಶ್ನೆಯೆಂದರೆ ಹಲವು ಧರ್ಮ ಪ್ರಾಂತ್ಯ ಭಾಷೆ ಸಂಸ್ಕೃತಿಗಳಿರುವ ನಾಡಿನಲ್ಲಿ ಯಾವುದನ್ನು ಉಳಿಸಿಕೊಂಡು ಯಾವುದನ್ನು ಕಳೆಯಲಾಯಿತು ಎಂಬುದರ ಮೇಲೆ, ಒಂದು ನಾಡು ಭವಿಷ್ಯದಲ್ಲಿ ರೂಪುಗೊಳ್ಳುವ ಚಹರೆಯ ರೂಪುರೇಶೆಗಳು ಸಿದ್ಧಗೊಳ್ಳುತ್ತವೆ. ನಾವು ಕಟ್ಟುವ ಧಾರ್ಮಿಕ ಕಟ್ಟಡಗಳು, ಗುಡ್ಡೆಹಾಕಿಕೊಂಡಿರುವ ಸಂಪತ್ತು, ಪಡೆದಿರುವ ರಾಜಕೀಯ ಗೆಲುವುಗಳು, ಯಾವೆಲ್ಲ ಸಂಗತಿಗಳನ್ನು ಬಲಿತೆಗೆದುಕೊಂಡಿವೆ ಎಂಬ ವಿದ್ಯಮಾನಗಳು ಆತ್ಮಾವಲೋಕನವನ್ನು ಹುಟ್ಟಿಸದೆ ಹೋದರೆ, ದೇಶವು ಮುರಿದ ಮನೆಯಾಗುವುದು.

ಈ ಅಭದ್ರತೆಯ ಹಿನ್ನೆಲೆಯಲ್ಲಿ ಭಾರತದ ರೈತರು ಎರಡು ವರ್ಷಗಳ ಹಿಂದೆ ನಡೆಸಿ ಪಡೆದ ಗೆಲುವು ನೆನಪಾಗುತ್ತಿದೆ. ದಲಿತರು ಮುಸ್ಲಿಮರು ಕರ್ನಾಟಕದಲ್ಲಿ ಎಚ್ಚರಿಕೆಯಲ್ಲಿ ಮತದಾನ ಮಾಡುವ ಮೂಲಕ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಿದ ಪರಿ ನೆನಪಾಗುತ್ತಿದೆ; ಗುಜರಾತಿನ ಕೋಮುದಂಗೆಗಳಲ್ಲಿ ತಲೆಗೆ ಕೇಸರಿವಸ್ತ್ರ ಬಿಗಿದು, ಕೈಯಲ್ಲಿ ರಾಡು ಹಿಡಿದು ಕೇಕೆ ಹಾಕುತ್ತಿದ್ದ ಚಮ್ಮಾರ ತರುಣನು, ತನಗೆ ಕೊಲ್ಲಬೇಡಿ ಎಂಬಂತೆ ದೈನ್ಯದಿಂದ ಕೈಮುಗಿಯುತ್ತಿದ್ದ ಮುಸ್ಲಿಂ ವ್ಯಕ್ತಿಯೂ ಕೂಡಿಕೊಂಡು, ಕೇರಳದಲ್ಲಿ ಹೊಸ ಚಪ್ಪಲಿ ಅಂಗಡಿಯನ್ನು ಉದ್ಘಾಟನೆ ಮಾಡಿದ ಘಟನೆ ನೆನಪಾಗುತ್ತಿವೆ. ಇಂತಹ ಘಟನೆಗಳು ಸಣ್ಣವೆಂದು ತೋರುತ್ತವೆ. ಆದರೆ ಮುಂದಿನ ಕಷ್ಟಕರವಾದ ಹಾದಿಯಲ್ಲಿ ಮುಖ್ಯವಾದ ಹೆಜ್ಜೆಗಳಾಗಬಲ್ಲವು. ಯಾಕೆಂದರೆ, ರಾಜಕೀಯ ಜಯಾಪಜಯಗಳ ಆಚೆ ದೈನಿಕದಲ್ಲಿ ನೆಮ್ಮದಿಯ ಬದುಕನ್ನು ಕಟ್ಟುವ ಸಾಧ್ಯತೆಗಳನ್ನು ಇವು ಒಳಗೊಂಡಿವೆ. ಭಾರತವು ಹೀಗೆ ಕಟ್ಟುವ ಮತ್ತು ಕೆಡಹುವ ಎರಡೂ ಸಾಧ್ಯತೆಗಳಲ್ಲಿ ಯಾವಕಡೆಗೆ ವಾಲಿಕೊಳ್ಳುವುದೋ ಎಂಬ ಆತಂಕ ಮತ್ತು ಭರವಸೆಗಳು ಒಟ್ಟಿಗೆ 2024ನೇ ಹೊಸ ವರುಷವು ಮೂಡಿಸಿದೆ.

ಪ್ರೊ. ರಹಮತ್ ತರೀಕೆರೆ

ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು- ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...