Homeಮುಖಪುಟಪ್ರಭುತ್ವಕ್ಕೆ ಕಲಾವಿದರ ಆತ್ಮಸಾಕ್ಷಿಯ ಮಹತ್ವ ಅರ್ಥವಾಗಿಲ್ಲ!

ಪ್ರಭುತ್ವಕ್ಕೆ ಕಲಾವಿದರ ಆತ್ಮಸಾಕ್ಷಿಯ ಮಹತ್ವ ಅರ್ಥವಾಗಿಲ್ಲ!

- Advertisement -
- Advertisement -

1964ರಲ್ಲಿ ಜೀನ್ ಪಾಲ್ ಸಾರ್ತ್ರೆಯವರು ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು. ಪ್ರಶಸ್ತಿ ನೀಡುವ ಸ್ವೀಡಿಶ್ ಅಕಾಡಮಿಯ ಅಥವಾ ಅವರು ಪ್ರಜೆಯಾಗಿದ್ದ ಫ್ರಾನ್ಸ್ ಸರಕಾರದ ಯಾವುದೇ ಅಧಿಕೃತ ದಾಖಲೆಗಳು ಅದಕ್ಕಾಗಿ ಯಾವತ್ತೂ ಅವರನ್ನು ದೂರಲಿಲ್ಲ. ಬರಹಗಾರರು ಮತ್ತು ಕಲಾವಿದರು ಜನತೆಯ ಆತ್ಮಸಾಕ್ಷಿಯಂತೆ ಕಾರ್ಯಾಚರಿಸುತ್ತಾರೆ ಮತ್ತು ಪ್ರಭುತ್ವವನ್ನು ಪ್ರಶ್ನಿಸುವ ಧೈರ್ಯ ಹೊಂದಿರುತ್ತಾರೆ ಎಂದು ಅವುಗಳಿಗೆ ಅರ್ಥವಾಗಿತ್ತು.

“ಅವಾರ್ಡ್ ವಾಪಸಿ” ಅಂದರೆ, ಪ್ರಶಸ್ತಿ ಮರಳಿಸುವಿಕೆಯ ಕುರಿತ ಸಂಸದೀಯ ಸಮಿತಿಯ ವರದಿಯು ಕಲಾವಿದರ ಆತ್ಮಸಾಕ್ಷಿಯನ್ನು ಗುರುತಿಸುವುದಿಲ್ಲ ಎಂದು ಖ್ಯಾತ ಭಾಷಾ ವಿದ್ವಾಂಸರಾದ ಜಿ.ಎನ್. ದೇವಿಯವರು ವಾದಿಸುತ್ತಾರೆ.

*****

ವಿದ್ವಾಂಸರಾದ ಎಂ.ಎಂ. ಕಲಬುರ್ಗಿಯವರನ್ನು ಆಗಸ್ಟ್ 30,2015ರಂದು ಧಾರವಾಡದ ಅವರ ಮನೆಯಲ್ಲಿ ಹತ್ಯೆ ಮಾಡಲಾಯಿತು. ಈ ಹತ್ಯೆಯು ದೇಶವನ್ನೇ ಆಘಾತಗೊಳಿಸಿ, ದೇಶವ್ಯಾಪಿಯಾಗಿ ಬುದ್ಧಿಜೀವಿಗಳ ಪ್ರತಿಭಟನೆಯನ್ನು ಪ್ರೇರೇಪಿಸಿತು. ಅದು ಹೆಚ್ಚುತ್ತಿರುವ ಅಸಹಿಷ್ಣುತೆಯ ವಿರುದ್ಧದ ಪ್ರತಿಭಟನೆಯಾಗಿತ್ತು. ಸರಕಾರದ ಬೆಂಬಲಿಗರು ಅದನ್ನು ಸರಕಾರಿ ವಿರೋಧಿ ಪ್ರತಿಭಟನೆ ಎಂದು ತಪ್ಪು ತಿಳಿದುಕೊಂಡರು. ಅದನ್ನು “ಉತ್ಪಾದಿಸಿದ ಪ್ರತಿಭಟನೆ”, “ಸರಕಾರದ ವಿರುದ್ಧ ಅಸಮಾಧಾನ ಹರಡಲು ಕೈಗೊಂಡ ಕ್ರಮ”, “ಕಾಂಗ್ರೆಸ್ ಪ್ರಚೋದಿತ ಕ್ರಮ”, “ದೇಶಕ್ಕೇ ಅವಮಾನ” ಎಂದೆಲ್ಲಾ ವಿವಿಧ ರೀತಿಗಳಲ್ಲಿ ಬಣ್ಣಿಸಲಾಯಿತು. ತಾವು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಗಾಗಿ ಗಳಿಸಿದ ಪ್ರಶಸ್ತಿಗಳನ್ನು ಲೇಖಕರು, ನಾಟಕಕಾರರು, ಚಲನಚಿತ್ರ ಕಲಾವಿದರು ಯಾಕೆ ಮರಳಿಸುತ್ತಿದ್ದಾರೆ ಎಂಬುದನ್ನು ಅಧಿಕಾರಸ್ಥರಲ್ಲಿ ಯಾರೂ ಅರ್ಥಮಾಡಿಕೊಳ್ಳಲಿಲ್ಲ.

ಫೆಬ್ರವರಿ 2017ರಲ್ಲಿ ಬಿಜೆಪಿಯ ಓಂ ಬಿರ್ಲಾ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದನ್ನು ಕೇಳುತ್ತಾ, ಬಹಳಷ್ಟು ಮಂದಿ ಲೇಖಕರು ಮತ್ತು ಕಲಾವಿದರು 2015ರಿಂದೀಚೆಗೆ ಪ್ರಶಸ್ತಿಗಳನ್ನು ಮರಳಿಸಿದ್ದಾರೆ ಎಂಬ ಕುರಿತು ಸರಕಾರಕ್ಕೆ ಅರಿವಿದೆಯೇ? ಹಾಗಿದ್ದರೆ ಎಷ್ಟು ಮಂದಿ? ಮತ್ತು ಈ ಪ್ರಶಸ್ತಿಗಳನ್ನು ಮರಳಿ ಪಡೆಯುವಂತೆ ಸರಕಾರ ಮಾಡಿದ ಮನವಿಗೆ ಅವರು ಸ್ಪಂದಿಸಿದ್ದಾರೆಯೇ ಎಂದು ತಿಳಿಯಬಯಸಿದರು. ಆ ಸಮಯದಲ್ಲಿ ಸಂಸ್ಕೃತಿ ಸಚಿವರಾಗಿದ್ದವರು ಮಹೇಶ್ ಶರ್ಮಾ ಮತ್ತು ಸುಮಿತ್ರಾ ಮಹಾಜನ್ ಅವರು ಸ್ಪೀಕರ್ ಆಗಿದ್ದರು.

ಸಚಿವರ ಪ್ರತಿಕ್ರಿಯೆಯು ಬರಹಗಾರರ ಹೆಸರುಗಳ ಪಟ್ಟಿನ್ನು ಹೊಂದಿತ್ತು: ಹಿಂದಿಯಲ್ಲಿ ಉದಯಪ್ರಕಾಶ್, ಅಶೋಕ್ ವಾಜಪೇಯಿ, ಕೃಷ್ಣ ಸೋಬ್ತಿ, ಮಂಗಳೇಶ್ ದರ್ಬಾಲ್, ಕಾಶೀನಾಥ್ ಸಿಂಗ್, ರಾಜೇಶ್ ಜೋಶಿ; ಇಂಗ್ಲಿಷಿನಲ್ಲಿ ಜಿ.ಎನ್.ದೇವಿ, ನಯನತಾರಾ ಸೈಗಲ್, ಕೇಕಿ ದಾರೂವಾಲ; ಗುಜರಾತಿಯಲ್ಲಿ ಅನಿಲ್ ಜೋಶಿ, ಪಂಜಾಬಿಯಲ್ಲಿ ವಾರ್ಯಂ ಸಿಂಗ್ ಸಂಧು, ಸುರ್ಜಿತ್ ಪತಾರ್, ಜಸ್ವಿಂದರ್, ಗುರ್ಬಚನ್ ಭುಲ್ಲರ್, ಅತ್ಮಜಿತ್ ಸಿಂಗ್, ಬಲದೇವ್ ಸಿಂಗ್, ದರ್ಶನ್ ಬುಟ್ಟರ್, ಅಜ್ಮೇರ್ ಸಿಂಗ್ ಔಲಕ್, ಮೋಹನ್ ಭಂಡಾರಿ; ರಾಜಸ್ಥಾನಿಯಲ್ಲಿ ನಂದ್ ಬಾರಧ್ವಾಜ್, ಅಂಬಿಕಾ ದತ್; ಕನ್ನಡದಲ್ಲಿ ಕುಂ. ವೀರಭದ್ರಪ್ಪ, ರಹಮತ್ ತರೀಕೆರೆ, ದೇವನೂರ ಮಹಾದೇವ; ಕಾಶ್ಮೀರಿಯಲ್ಲಿ ಗುಲಾಂ ನಬಿ ಖಯಾಲ್, ಮರ್ಗೂಬ್ ಬನಿಹಾಲಿ; ಉರ್ದುವಿನಲ್ಲಿ ಮುನಾವರ್ ರಾಣಾ, ಖಲೀಲ್ ಮಮೂನ್; ಮಲಯಾಳಂನಲ್ಲಿ ಸಾರಾ ಜೊಸೆಫ್, ಅಸ್ಸಾಮಿಯಲ್ಲಿ ಹೋಮೆನ್ ಬೊರ್ಗೊಹೈನ್, ನಿರುಪಮಾ ಬೊರ್ಗೊಹೈನ್; ತೆಲುಗಿನಲ್ಲಿ ಕಾತ್ಯಾಯನಿ ವಿದ್ಮಹೆ ತಮ್ಮ ಅಕಾಡಮಿ ಪ್ರಶಸ್ತಿಗಳನ್ನು ಮರಳಿಸಿದ್ದರು. ಅನುವಾದ ಪ್ರಶಸ್ತಿಗಳನ್ನು ಹಿಂದಿಯಲ್ಲಿ ಚಮನ್‌ಲಾಲ್, ಕನ್ನಡದಲ್ಲಿ ಜಿ.ಎನ್. ರಂಗನಾಥ ರಾವ್, ಮರಾಠಿಯಲ್ಲಿ ಇಬ್ರಾಹಿಂ ಅಫ್ಘನ್ ಮತ್ತು ಯುವ ಪ್ರಶಸ್ತಿಗಳನ್ನು ಇಂಗ್ಲಿಷಿನಲ್ಲಿ ಅಮನ್ ಸೇಥಿ, ಪಂಜಾಬಿಯಲ್ಲಿ ಪರ್ಗತ್ ಸಿಂಗ್ ಸತೌಜ್, ಬಾಲ ಸಾಹಿತ್ಯ ಪುರಸ್ಕಾರವನ್ನು ತೆಲುಗಿನಲ್ಲಿ ಎಂ. ಭೂಪಾಲರೆಡ್ಡಿ ಮರಳಿಸಿದ್ದರು.

ಸಚಿವರು ಹೇಳಿದ್ದರು: “ಹೌದು ಮೇಡಂ… ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆಯುತ್ತಿದೆ ಮತ್ತು ಸಾಹಿತ್ಯ ಅಕಾಡೆಮಿಯು ಈ ವಿಷಯದ ಕುರಿತು ಮೌನ ತಾಳಿದೆ ಎಂದು ಈ ಲೇಖಕರು ಹೇಳಿಕೊಳ್ಳುತ್ತಿದ್ದಾರೆ.” ಅವರು ಮುಂದುವರಿದು, “ಅಕಾಡಮಿಯು 23.10.2015 ಮತ್ತು 17.12.2015ರಂದು ಕಾರ್ಯಕಾರಿ ಮಂಡಳಿಯ ವಿಶೇಷ ಸಭೆ ಕರೆದಿದೆ. ಅದರಲ್ಲಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ವಿನಂತಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: ಪ್ರಧಾನಿ ಏನು ಪರಮಾತ್ಮನಲ್ಲ: ಮೋದಿ ವಿರುದ್ಧ ಖರ್ಗೆ ಕಿಡಿ

ಮೊತ್ತಮೊದಲಾಗಿ, ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳನ್ನು ಸರಕಾರ ಕೊಡುತ್ತಿಲ್ಲ; ಬದಲಾಗಿ ಸಂಪೂರ್ಣವಾಗಿ ಲೇಖಕರೇ ನಡೆಸುವ ಲೇಖಕರ ಒಂದು ಸ್ವಾಯತ್ತ ಸಂಸ್ಥೆಯು ನೀಡುತ್ತಿದೆ ಎಂಬುದನ್ನು ಅವರು ಉಲ್ಲೇಖಿಸಲಿಲ್ಲ. ಅದಲ್ಲದೆ, ಪ್ರಶಸ್ತಿಗಳನ್ನು ಮರಳಿಸಿದ ಲೇಖಕರ ಪ್ರಕಾರ ಸಾಹಿತ್ಯ ಅಕಾಡಮಿಯು ಮೌನ ತಾಳಿರುವ “ಆ ವಿಷಯ” ಏನು ಎಂಬದನ್ನೂ ಅವರು ವಿವರಿಸಲು ಹೋಗಲಿಲ್ಲ. ಅವರು ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಮತ್ತು ಎಂ.ಎಂ. ಕಲಬುರ್ಗಿ ಅವರ ಹತ್ಯೆಗಳನ್ನೂ ಉಲ್ಲೇಖಿಸಲಿಲ್ಲ ಎಂಬ ಕುರಿತು ಯಾರೂ ಅಚ್ಚರಿಪಡಬೇಕಾಗಿಲ್ಲ. ಆರು ತಿಂಗಳುಗಳ ನಂತರ ಸೆಪ್ಟೆಂಬರ್ 5, 2017ರಂದು ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಅವರನ್ನು ಅವರ ಮನೆಯ ಮುಂದೆಯೇ ಹತ್ಯೆ ಮಾಡಲಾಯಿತು.

ರವೀಂದ್ರನಾಥ ಠಾಗೋರ್

ಹಲವು ಟಿವಿ ಚಾನೆಲ್‌ಗಳು ಲೇಖಕರನ್ನು ಲೇವಡಿ ಮಾಡಿದವು ಮತ್ತು ವರ್ಷಗಳ ಹಿಂದಿನ ಪುರಾತನ “ದೇಶದ್ರೋಹದ ಕಾನೂನು” ಹುಟ್ಟು ಹಾಕಿದ ಪದಗಳಾದ “ಸರಕಾರದ ವಿರುದ್ಧ ಅಸಮ್ಮತಿ ಮತ್ತು ಅಸಮಾಧಾನ” ವ್ಯಕ್ತಪಡಿಸಿದ ವ್ಯಕ್ತಿಗಳು ಎಂಬಂತೆ ಅವರನ್ನು ವರ್ಣಿಸಿದವು ಎಂಬ ಕುರಿಯೂ ಯಾರೂ ಆಘಾತಕ್ಕೆ ಒಳಗಾಗುವ ಅಗತ್ಯವಿಲ್ಲ. ಹೆಚ್ಚುಕಡಿಮೆ ಒಂದು ಶತಮಾನಕ್ಕೆ ಮೊದಲು ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡವನ್ನು ವಿರೋಧಿಸಿ ಭಾರತದ ಮಹಾನ್ ಆಧುನಿಕ ಸಾಹಿತಿಯಾದ ರವೀಂದ್ರನಾಥ ಠಾಗೋರ್ ಅವರು ತಮ್ಮ ಸಾಹಿತ್ಯ ಸೇವೆಯ ಕೊಡುಗೆಗಾಗಿ ಕೊಡಮಾಡಲಾಗಿದ್ದ, ಕಿಂಗ್ ಜಾರ್ಜ್ ಗೌರವ “ಸರ್ ರವೀಂದ್ರನಾಥ ಠಾಗೋರನ್ನು ಮರಳಿಸಿದ್ದರು. ವೈಸರಾಯ್‌ಗೆ ಬರೆದ ಪತ್ರದಲ್ಲಿ ಅವರು, “ಗೌರವದ ಪದಕಗಳು ನಮ್ಮ ನಾಚಿಕೆ ಮತ್ತು ಅವಮಾನವನ್ನು ಈ ಅಸಂಗತ ಸಂದರ್ಭದಲ್ಲಿ ಕಣ್ಣಿಗೆ ಕುಕ್ಕುವಂತೆ ಮಾಡುವ ಕಾಲ ಬಂದಿದೆ. ನಾನು ನನ್ನ ಮಟ್ಟಿಗೆ ಎಲ್ಲಾ ವಿಶೇಷ ಸ್ಥಾನಮಾನಗಳನ್ನು ತ್ಯಜಿಸಿ, ನನ್ನ ದೇಶದ ಜನರ ಜೊತೆಗೆ ನಿಲ್ಲಲು ಬಯಸುತ್ತೇನೆ. ತಥಾಕಥಿತವಾಗಿ ನಗಣ್ಯ ಎಂದು ಭಾವಿಸಲಾಗಿರುವ ಸಾಮಾನ್ಯ ಜನರು, ಮನುಷ್ಯರಿಗೆ ಸಹ್ಯವಲ್ಲದ ಅವಮಾನವನ್ನು ಅನುಭವಿಸುತ್ತಿದ್ದಾರೆ” ಎಂದಿದ್ದರು. ಅದು ಬ್ರಿಟಿಷರ ಆಡಳಿತವಾಗಿತ್ತು. ಆದರೂ ಅವರ ಕೃತ್ಯವನ್ನು ದೇಶದ್ರೋಹವೆಂದು ಕಾಣಲಾಗಿರಲಿಲ್ಲ.

ಹಲವಾರು ಬಿಜೆಪಿ ನಾಯಕರು ಪ್ರಶಸ್ತಿಗಳ ಮರಳಿಸುವಿಕೆಯನ್ನು, ದಿವಂಗತ ಅರುಣ್ ಜೇಟ್ಲಿ ಅವರು ಚಲಾವಣೆಗೆ ತಂದ ಪದವಾದ “ಉತ್ಪಾದಿತ ಪ್ರತಿಭಟನೆ” ಎಂದು ಹೇಳಿ ಲೇವಡಿ ಮಾಡಿದರು. ತಮ್ಮ ಪ್ರತಿಭಟನೆಗೆ “ಗುಪ್ತ ಉತ್ಪಾದಕರು” ಇಲ್ಲ ಎಂದು ಲೇಖಕರು ಮತ್ತೆಮತ್ತೆ ಪ್ರತಿಪಾದಿಸಿದರು. ಕವಿ ಕೇಕಿ ದಾರೂವಾಲ ಈ ಅಂಶವನ್ನು ಒತ್ತಿಹೇಳಲು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಿಗೆ ಪತ್ರ ಬರೆದು, “ನನಗೆ ಯಾವುದೇ ಪಕ್ಷನಿಷ್ಠೆ ಇಲ್ಲವೆಂದು ಸ್ಪಷ್ಟಪಡಿಸಲು ಬಯಸುತ್ತೇನೆ… ಇಂದು ಲೇಖಕರು ಎದುರಿಸಬೇಕಾದ ವಾತಾವರಣವು ಬಹಳ ಬರಡಾಗಿದೆ… ಮುಖಗಳನ್ನು ಕಪ್ಪು ಮಸಿಯಿಂದ ಬಳಿಯಲಾಗುತ್ತಿದೆ. ಎಂ.ಎಫ್. ಹುಸೇನ್ ಅವರಂಥ ಚಿತ್ರ ಕಲಾವಿದರು ಗಡಿಪಾರು ಅನುಭವಿಸಬೇಕಿದೆ. ತಸ್ಲೀಮಾ ನಸ್ರೀನ್ ಅವರಂಥ ಲೇಖಕರು ಎಡಪಂಥೀಯ ಆಡಳಿತದಲ್ಲಿ ಕೋಲ್ಕತಾ ತೊರೆಯಬೇಕಾಗಿದೆ. ಅವರು ಮುಸ್ಲಿಮರು ಎಂಬುದಕ್ಕೆ ’ಹೊರತಾಗಿಯೂ’ ಮುತ್ಸದ್ಧಿಗಳನ್ನು ಅವರ ’ರಾಷ್ಟ್ರೀಯವಾದಕ್ಕಾಗಿ’ ಹೊಗಳುವುದು ಮುಂದುವರಿಯಲಿದೆ. ಗುಂಪುಗಳು ಮಾಡುವ ಹತ್ಯೆಗಳನ್ನು ’ಆಕಸ್ಮಿಕಗಳು; ಎಂದು ಬಣ್ಣಿಸುವುದು ಮುಂದುವರಿಯಲಿದೆ” ಎಂದು ಹೇಳಿದ್ದಾರೆ.

ಜೀನ್ ಪಾಲ್ ಸಾರ್ತ್ರೆ

ಇದು ಹೆಚ್ಚುಕಡಿಮೆ ಪ್ರಶಸ್ತಿಗಳನ್ನು ಮರಳಿಸಿದ ಎಲ್ಲಾ ಲೇಖಕರ ಹೇಳಿಕೆಗಳಲ್ಲಿ ಕಂಡುಬರುವ ಆತಂಕವಾಗಿದೆ. ಈ ವಿಶಿಷ್ಟ ವಿದ್ಯಮಾನದಲ್ಲಿ ರಾಜಕೀಯ ನಿಷ್ಠೆಯ ಪ್ರಶ್ನೆ ಅನಗತ್ಯದ್ದಾಗುತ್ತದೆ. ಯಾವುದು ಇಲ್ಲಿ ಮುಖ್ಯವಾಗುತ್ತದೆಂದರೆ, ಸಾಮಾಜಿಕ ಜೀವನದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಕುರಿತು ಅವರೆಲ್ಲರೂ ನೀಡಿರುವ ಒತ್ತು ಮಾತ್ರ. ಸಾಹಿತ್ಯ ಅಕಾಡೆಮಿಗೆ ಕಳುಹಿಸಿದ ಹೇಳಿಕೆಯಲ್ಲಿ ನಾನು ಬರೆದಿದ್ದೆ: “ಸಾಹಿತಿಗಳು ಮತ್ತು ಚಿಂತಕರು ವಿವೇಕ, ಸಹೃದಯತೆ, ಮೌಲ್ಯಗಳು, ಸಹಿಷ್ಣುತೆ ಮತ್ತು ಪರಸ್ಪರ ಗೌರವಗಳ ರಕ್ಷಣೆಗೆ ಮುಂದೆ ಬಂದಿದ್ದಾರೆ… ಭಾರತವೆಂಬ ಮಹಾನ್ ಪರಿಕಲ್ಪನೆಯು ವೈವಿಧ್ಯತೆ, ಭಿನ್ನಮತಗಳ ಕುರಿತ ಆಳವಾದ ಸಹಿಷ್ಣುತೆಯ ಆಧಾರದ ಮೇಲೆ ನಿಂತಿದೆ. ಅದು ಮಹತ್ವದಲ್ಲಿ ಉಳಿದ ಎಲ್ಲವನ್ನೂ ಮೀರಿದೆ.”

1964ರಲ್ಲಿ ಜೀನ್ ಪಾಲ್ ಸಾರ್ತ್ರೆಯವರು ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು. ಪ್ರಶಸ್ತಿ ನೀಡುವ ಸ್ವೀಡಿಶ್ ಅಕಾಡೆಮಿಯ ಅಥವಾ ಅವರು ಪ್ರಜೆಯಾಗಿದ್ದ ಫ್ರಾನ್ಸ್ ಸರಕಾರದ ಯಾವುದೇ ಅಧಿಕೃತ ದಾಖಲೆಗಳು ಅದಕ್ಕಾಗಿ ಯಾವತ್ತೂ ಅವರನ್ನು ದೂರಲಿಲ್ಲ. ಬರಹಗಾರರು ಮತ್ತು ಕಲಾವಿದರು ಜನತೆಯ ಆತ್ಮಸಾಕ್ಷಿಯಂತೆ ಕಾರ್ಯಾಚರಿಸುತ್ತಾರೆ ಮತ್ತು ಪ್ರಭುತ್ವವನ್ನು ಪ್ರಶ್ನಿಸುವ ಧೈರ್ಯ ಹೊಂದಿರುತ್ತಾರೆ ಎಂದು ಅವುಗಳಿಗೆ ಅರ್ಥವಾಗಿತ್ತು.

ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಲಾದ ಸಂಸದೀಯ ಸಮಿತಿಯ ವರದಿಯು ಕಲಾವಿದರ ಆತ್ಮಸಾಕ್ಷಿಯ ಸ್ವಾಯತ್ತತೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಪ್ರಸ್ತುತ ಆಳುವ ಕೂಟದ ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ. ಸಮಿತಿಯ ಕನಿಷ್ಟ ಒಬ್ಬ ಸದಸ್ಯರಾದರೂ ತಮ್ಮ ಭಿನ್ನಮತವನ್ನು ದಾಖಲಿಸಿದ್ದಾರಲ್ಲ ಎಂದು ಸಂತೋಷಪಡಲು ನಮಗೆ ಕಾರಣಗಳಿವೆ. ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ಭವಿಷ್ಯದಲ್ಲಿ ಅನುಷ್ಠಾನಗೊಳಿಸಲಾದರೆ, ಭಾರತವು ಎಂದೆಂದಿಗೂ ಇನ್ನೊಬ್ಬ ಠಾಗೋರ್‌ರನ್ನು ಕಾಣುವ ಆಶಾವಾದ ಇಟ್ಟುಕೊಳ್ಳಲು ಸಾಧ್ಯವಿಲ್ಲ. ’ಪ್ರಭುತ್ವಕ್ಕೆ ನಿಷ್ಠೆ’ಯು ’ಆತ್ಮಸಾಕ್ಷಿಯ ಕರೆ’ಗಿಂತ ಮುನ್ನೆಲೆಗೆ ಬಂದರೆ, ಪ್ರಜಾಪ್ರಭುತ್ವ ಮತ್ತು ಚಿಂತನಾ ಸ್ವಾತಂತ್ರ್ಯಗಳ ಕಲ್ಪನೆಗಳು ಅಸ್ತಿತ್ವದಲ್ಲಿ ಉಳಿಯುವ ಯಾವುದೇ ಸಾಧ್ಯತೆಗಳು ಇರುವುದಿಲ್ಲ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಪ್ರೊ ಜಿ ಎನ್ ದೇವಿ

ಜಿ.ಎನ್. ದೇವಿ
ಲೇಖಕರು ಒಬೈದ್ ಸಿದ್ದೀಕಿ ಪೀಠದ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್, ಮರಾಠಿ ಮತ್ತು ಗುಜರಾತಿಯಲ್ಲಿ ಪ್ರಶಸ್ತಿ ವಿಜೇತ ಬರಹಗಾರರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ...